ಬೊಗಸೆ ತುಂಬ ಕನಸು”

ಪುಸ್ತಕ ಪರಿಚಯ

ಬೊಗಸೆ ತುಂಬ ಕನಸು

ಪ್ರಪಂಚದಲ್ಲಿ ಎರಡು ರೀತಿಯ ಸಾಧಕರಿರುತ್ತಾರೆ. ಒಬ್ಬರು ಇದ್ದ ಹಾದಿಯಲ್ಲಿ ಶ್ರದ್ಧೆಯಿಂದ ಸಾಗಿ ಗುರಿ ತಲುಪುವವರು. ಮತ್ತೊಬ್ಬರು ತಾವೇ ಹಾದಿ ನಿರ್ಮಿಸಿಕೊಂಡು ಗುರಿ ಕಂಡುಕೊಳ್ಳುವವರು. ಹೀಗೆ ಎರಡನೇ ಸಾಲಿನ ಮುಂದಾಳುವಿನ ಹಾಗೆ ನಿಂತು ಯಶ ಬದುಕಿನ ಗಾಥೆ ಬರೆದವರು ಡಾ.ಪ್ರಭಾಕರ ಶಿಶಿಲರು. ಅವರ ಆತ್ಮಕತೆ “ಬೊಗಸೆ ತುಂಬ ಕನಸು” ಓದಿದ ತಕ್ಷಣಕ್ಕೆ ನನಗೆ ಅನ್ನಿಸಿದ್ದು ಹೀಗೆ. ಬಹುಶ: ಈ ಕೃತಿಯನ್ನು ಓದುವ ಎಲ್ಲರಿಗೂ ಹೀಗೊಂದು ಭಾವ ಮೂಡಿಯೇ ಮೂಡುತ್ತದೆ. ಅರ್ಥಶಾಸ್ತ್ರದ ಅಧ್ಯಾಪಕರಾಗಿ. ವಿದ್ಯಾರ್ಥಿ ಜೀವನದ ಉದ್ದಕ್ಕೂ ಕಷ್ಟ ಕಾರ್ಪಣ್ಯಗಳನ್ನೆ ಹೊದ್ದುಕೊಂಡು ಆ ಹರಕು ಆಗಸದ ನಡುವೆಯೂ ಬೆಳ್ಳಿ ಚುಕ್ಕಿಗಳ ಹುಡುಕಿ ಹೆಕ್ಕಿ ತಮ್ಮ ಬದುಕಿಗೆ ಕೌದಿಯಾಗಿಸಿಕೊಂಡವರು.

ಅವರ ಆತ್ಮಕತೆಯ ಪುಟದಲ್ಲಿ ಲೇಖಕನ ಮಾತು ಆರಂಭವಾಗುವುದೇ ಹೀಗೆ “ತುಂಬಾ ಅಂದ್ರೆ ತುಂಬಾ ಬಡತನದಿಂದ ಬಂದ ನನಗೆ ಕನಸು ಕಾಣಲು ಕಲಿಸಿದ್ದು ನನ್ನ ತಾಯಿಯ ತಾಯಿ ಬರ್ಗುಳ ಕಾವೇರಮ್ಮ” ಈ ಒಂದು ಸಾಲು ಪ್ರಭಾಕರ ಈ ಪುಸ್ತಕದ ಬಹುತೇಕ ಪುಟಗಳನ್ನು ತನ್ನದಾಗಿಸಿಕೊಂಡಿದೆ. ಸಣ್ಣ ವಯಸ್ಸಿನಲಿ ಬಿಟ್ಟು ಹೋದ ಅಪ್ಪ. ಮತ್ಯಾರೊ ಅಪರಿಚಿತನ ಜೊತೆಗೆ ಶುರುವಾಗುವ ಅಮ್ಮನ ಬದುಕು. ಯಾವ ದೂಷಣೆಯೂ ಇಲ್ಲದೆ ಚಿಕ್ಕಪ್ಪನನ್ನೆ ಒಪ್ಪಿಕೊಳ್ಳುವ ಮುಗ್ಧ ಪುಟ್ಟ ಬಾಲಕ ಬದುಕಿನ ಬಹುತೇಕ ದಿನಗಳವರೆಗೆ ಅನಾಥ ಪ್ರಜ್ಞೆಯಲ್ಲಿಯೇ ಬಳಲುತ್ತಾನೆ. ದಿನಕ್ಕೊಂದು ಊರು ಬದಲಾಯಿಸುವ ಅವರುಗಳ ಜೊತೆ ಹೋಗಲಾಗದೆ ಅಜ್ಜಿ,ಮಾವಂದಿರ ಮನೆಯಲ್ಲಿ ಉಳಿದು ಅಸಹಾಯಕ ಸ್ಥಿತಿ ಎದುರಾದಾಗಲೆಲ್ಲ ಯಾರೊಂದಿಗೂ ಹಂಚಿಕೊಳ್ಳಲಾಗದ ಸಂಕಟದಲ್ಲಿ ಮನೆಯಲಿದ್ದ “ಕೊಂಡಪ್ಪ” ಎತ್ತಿನ ಕುತ್ತಿಗೆಗೆ ಜೋತು ಬಿದ್ದು ಮೌನದಲ್ಲಿ ರೋಧಿಸುವ ಜೀವ ಓದುವ ಹುಚ್ಚಿನ ಸಲುವಾಗಿ ವಯೋಸಹಜ ಭಾವನೆಗಳನ್ನು, ಕಾಮನೆಗಳನ್ನು ಹತ್ತಿಕ್ಕುತ್ತಲೇ ಹೋಗುತ್ತದೆ. ಫೀಸು ಮತ್ತು ಹೊಟ್ಟೆ ಪಾಡಿನ ಸಲುವಾಗಿ, ಬಾಣಸಿಗನಾಗುವ, ಆಳದ ಬಾವಿ ಇಳಿದು ಬಕೆಟ್ಟು ತಂಬಿಗೆ ತೆಗೆದುಕೊಡುವ ಕೆಲಸಗಳಿಗೆ ತನ್ನನ್ನು ತಾನು ಅಣಿಯಾಗಿಸಿಕೊಳ್ಳುವ ಶಿಶಿಲರು ಎಲ್ಲಿಯೂ ಕೂಡ ತಮ್ಮ ಅಂದಿನ ಪರಿಸ್ಥಿತಿಗಾಗಿ ಮರುಗುವುದಿಲ್ಲ. ಮತ್ತೊಬ್ಬರ ಕನಿಕರ ನಿರೀಕ್ಷಿಸುವುದಿಲ್ಲ. ಬದುಕನ್ನು ಬಂದಂತೆ ಎದುರಿಸುತ್ತ ಹೋಗುತ್ತಾರೆ. ತಮ್ಮ ಬಗ್ಗೆ ಕಿಂಚಿತ್ತು ಕಾಳಜಿಯನ್ನು ಮಾಡದಿರುವ ಅಪ್ಪ ಅಮ್ಮನ ಬಗ್ಗೆಯು ಅವರಿಗೆ ತಕರಾರುಗಳಿಲ್ಲ. ಆದರೆ ತಮ್ಮ ಸಲುವಾಗಿ ಒದ್ದಾಡುವ ತಮ್ಮ ಮಾವಂದಿರ ಕುರಿತಾಗಿ ಅವರಿಗೆ ಅಪಾರ ಗೌರವವಿದೆ. ಅವರ ಕಷ್ಟದ ನಡುವೆಯು ತಮಗೆ ಬೆಂಬಲವಾಗಿ ನಿಲ್ಲುವ ಅವರ ಕುರಿತು ವಿಶೇಷ ಅಕ್ಕರೆ ಇದೆ. ಅಲ್ಲದೆ ಅವರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಕೆಲಸಕ್ಕೆ ಸೇರಿ ಒಂದು ವರ್ಷ ಓದನ್ನು ಮೊಟಕುಗೊಳಿಸಿ ತದನಂತರ ಮತ್ತದೆ ದಾರಿಗೆ ಮರಳಿದ ಪ್ರಸ್ತಾಪವು ನಮ್ಮನ್ನು ಶಿಶಿಲರೆಡೆಗೆ ಅಚ್ಚರಿಯಿಂದ ನೋಡುವಂತೆ ಮಾಡುತ್ತದೆ. ಓದಿನ ಹಸಿವು, ಹೊಟ್ಟೆಯ ಹಸಿವು. ಚಿಂತನೆಯ ಹಸಿವು, ಸಾಮಾಜಿಕ ಕಳಕಳಿಗಳ ಹಸಿವು. ಅವರನ್ನು ಮತ್ತೆ ಮತ್ತೆ ಒರೆಗೆ ಹಚ್ಚುತ್ತ ಹೋಗುತ್ತದೆ. ಬಂಗಾರದ ಪದಕ ಸಿಕ್ಕ ಮೇಲೆಯೂ ಕೆಲಸ ಸಿಗದೆ ಕೇವಲ ಒಂದು ವರ್ಷಕ್ಕಷ್ಟೆ ತಾತ್ಕಾಲಿಕ ಬೋಧಕರಾಗಿ ಸೇರಿಕೊಳ್ಳುವ ಶಿಶಿಲರು ಸಿಕ್ಕ ಕೆಲಸಕ್ಕೆ ಕಿಂಚಿತ್ತು ಧಕ್ಕೆ ತರದೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುತ್ತಾರೆ. ಜೀವನದ ಪ್ರತಿಯೊಂದು ಘಟನೆಗಳನ್ನು ಹೆಕ್ಕಿ ಹೆಕ್ಕಿ ಸವಿವರವಾಗಿ ಓದುಗನ ಮುಂದಿರಿಸುತ್ತಾರೆ. ಕೆಲವೊಂದು ಸಂಗತಿಗಳನ್ನು ರಸವತ್ತಾಗಿ ಓದುಗರ ಮುಂದಿಡುತ್ತಾರೆ. ಅವುಗಳನ್ನು ಬಿಡಿ ಬಿಡಿಯಾಗಿ ಓದಿದರೆ ಲಲಿತ ಪ್ರಬಂಧದ ಹಾಗೆ  ಆವರಿಸಿಕೊಳ್ಳುತ್ತವೆ. “ಅತೀಂದ್ರಿಯದ ಅಮಲಿನಲ್ಲಿ” ಎನ್ನುವಲ್ಲಿ ನಿರುದ್ಯೋಗಿ ಲೇಖಕರು ಕೆಲಸ ಹುಡುಕಿ ಹೋಗಿ ಪಡುವ ಪರಿಪಾಡಲನ್ನು ಓದಿಯೇ ಅರಿಯಬೇಕು. ಅತ್ಯಂತ ವಿನೋದದ ಭಾಷೆಯ ಬಹಳಷ್ಟು ಸಂಗತಿಗಳು ಈ ಪುಸ್ತಕದಲ್ಲಿ ಮತ್ತೆ ಮತ್ತೆ ಬರುತ್ತವೆ. ಹೀಗಾಗಿ  ಪುಸ್ತಕದ ಮೊದಲನೆ ಪುಟದಲ್ಲಿ ವಿಷಾದ, ವಿನೋದ ವಿಚಾರಗಳ ತ್ರಿವೇಣಿ ಸಂಗಮ ಎಂದ ಮಾತು ಅಕ್ಷರಶ: ಸತ್ಯ ಎನ್ನಿಸುತ್ತದೆ.ಚಿಕ್ಕಂದಿನಲ್ಲಿ ಅಧ್ಯಾತ್ಮದ ಆಸಕ್ತಿ ಹೊಂದಿ ನಂತರದಲ್ಲಿ ಪ್ರಗತಿಪರ ಚಿಂತನೆಗಳ ಮೈಗೂಡಿಸಿಕೊಂಡು ನಂಬಿದ ಸಿದ್ದಾಂತದಂತೆ ಅಂತರಧರ್ಮಿಯ ವಿವಾಹವಾದವರು ಶಿಶಿಲರು.

ಸುಮಾರು ೨೯ ಅನುಕ್ರಮಣಿಕೆಯಲ್ಲಿ ಲೇಖಕರ ಬದುಕಿನ ಒಂದೊಂದೆ ಮಜಲುಗಳನ್ನು ಎಳೆಎಳೆಯಾಗಿ ಹೆಕ್ಕಿ ಇಡುವ ಈ ಪುಸ್ತಕ ಸುದೀರ್ಘ ೬೮೮ ಪುಟಗಳನ್ನು ಹೊಂದಿದೆ. ಮೈಸೂರಿನ ರಾಜ್ ಪ್ರಕಾಶನ ಇದನ್ನು ಹೊರತಂದಿದೆ

ಬೆಲೆ :೬೫೦ ರೂ

ತಮ್ಮ ಪುಟ್ಟ ಊರಿನ ಹೆಸರನ್ನು ತಮ್ಮ ಹೆಸರಿನೊಂದಿಗೆ ಬೆಸೆದುಕೊಂಡು, ಆ ಮೂಲಕ ತನ್ನ ಪಾಡಿಗೆ ತಾನು ಇದ್ದ ಊರನ್ನು ನಾಡಿನ ಉದ್ದಗಲಕ್ಕು ಪರಿಚಯಿಸಿದವರು. ಯಕ್ಷಗಾನ, ತಾಳಮದ್ದಲೆ,ಸಾಹಿತ್ಯ ಹತ್ತಾರು ಪ್ರಕಾರಗಳು, ಸಾಮಾಜಿಕ ಚಟುವಟಿಕೆಗಳು ಶಿಶಿಲರ ಅಗಾಧ ಜ್ಞಾನವನ್ನು, ಅಪರಿಮಿತ ಶ್ರಮವನ್ನು, ಅವರಿಗೆ ಬದುಕಿನ ಕುರಿತಾಗಿ ಇರುವ ಜೀವನೋತ್ಸಾಹವನ್ನು ಪರಿಚಯ ಮಮಮಾಡಿಸುವ ಕೃತಿ

***********************************

ದೀಪ್ತಿ ಭದ್ರಾವತಿ

One thought on “ಬೊಗಸೆ ತುಂಬ ಕನಸು”

  1. ಡಾ ಶಿಶಿಲರು ನನ್ನ ಗುರುಗಳು ಎನ್ನುವುದು ನನಗೆ ಹೆಮ್ಮೆಯ ವಿಷಯ.ಎಷ್ಟೋ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಹವ್ಯಾಸವನ್ನು ಹುಟ್ಟು ಹಾಕಿದವರು. ಚೆಂದದ ಪುಸ್ತಕ ಪರಿಚಯ ದೀಪ್ತಿ.ಇಬ್ಬರಿಗೂ ಅಭಿನಂದನೆಗಳು

Leave a Reply

Back To Top