ಕಾದಂಬರಿ ಕುರಿತು
ಪಾಕ ಕ್ರಾಂತಿ
ಪೂರ್ಣಚಂದ್ರ ತೇಜಸ್ವಿ
ದಿವಂಗತ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೀಳ್ಗತೆ *ಪಾಕ್ ಕ್ರಾಂತಿ* ಓದಲು ಸುರುವು ಮಾಡುವದಕ್ಕೂ ಮೊದಲು ನನಗೆ ಅನ್ನಿಸಿದ್ದು ಕ್ರಾಂತಿಯ ಬಗೆಗೆ ಬರೆದಿರುವ ಲೇಖನವಿರಬಹುದು, ಬಹುಶಃ ಪಾಕಿಸ್ತಾನದ ಯಾವುದೋ ಕ್ರಾಂತಿಯದು ಎಂದು. ಆದರೆ ಒಂದೆರಡು ವಾಕ್ಯ ಓದಿದಾಗ ಇದು ಪಾಕ್ ಕ್ರಾಂತಿಯಲ್ಲ ಪಾಕ ಕ್ರಾಂತಿ ಅಂದರೆ ಪಾಕಶಾಸ್ತ್ರದ, ಅಡುಗೆಯಲ್ಲಿ ಮಾಡಿದ ಕ್ರಾಂತಿಯ ಬರಹ ಅಂತ.
ನಾಲ್ಕೇ ಜನ ಕಥೆಯಲ್ಲಿ ಬರುತ್ತಾರೆ, ಅದರಲ್ಲಿ ಹೆಂಡತಿ ತವರಿಗೆ ಹೋದಾಗ ಅಡುಗೆಯಲ್ಲಿ ಕ್ರಾಂತಿ ಮಾಡಲು ಹೊರಟ ಮಹಾಶಯರದು ಮುಖ್ಯ ಪಾತ್ರ.
ಅರವತ್ನಾಲ್ಕು ಕಲೆಗಳಲ್ಲಿ ಪಾಕಶಾಸ್ತ್ರ ಕೂಡ ಒಂದು ಕಲೆ. ಹೆಣ್ಣುಮಕ್ಕಳು ಅಡುಗೆ ಮನೆಯಲ್ಲಿ ಏನೋ ಮಾಡಿಕೊಂಡಿರುತ್ತಾರೆ ಅಂತ ಉದಾಸೀನ ತಳೆಯುವ ವಿದ್ಯೆ ಇದಲ್ಲವೆಂದು ಈ ಲೇಖನ ಓದಿದ ಮೇಲೆ ಗೊತ್ತಾಗುತ್ತದೆ. ಪುರಾಣದಲ್ಲಿ ಬರುವ ನಳ ಮಹಾರಾಜ, ಭೀಮಸೇನ ಅಡುಗೆಯಲ್ಲಿ ಪ್ರವೀಣರಾಗಿದ್ದರು. ಈ ವಿದ್ಯೆ ಗಂಡಸರಿಗೆ ಒಲಿಯುವದಿಲ್ಲ ಅಂತೆನೂ ಇಲ್ಲ.
ಪಾಕಶಾಸ್ತ್ರದಲ್ಲಿ ಏನೂ ಗೊತ್ತಿಲ್ಲದವನ ಹೆಂಡತಿ ಊರಿಗೆ ಹೋದಳು. ಹೋಗುವಾಗ ಎಲ್ಲ ತಿಳಿಸಿಕೊಟ್ಟು. ಹೆಂಡತಿ ಇಲ್ಲದಿದ್ದರೆ ಗಂಡಸು ಉಪವಾಸ ಸಾಯ್ತಾನೇನು ಅನ್ನುವ ಮನೋಭಾವದ ವ್ಯಕ್ತಿ ಅಡುಗೆ ಮಾಡುವಾಗ ಪಡಬಾರದ ಕಷ್ಟ ಎದುರಿಸುವದು ಒಳ್ಳೆಯ ಹಾಸ್ಯಮಯವಾಗಿದೆ.
‘ಹೀಗೆಯೇ ಮಾಡಬೇಕು ಅನ್ನುವ ಕಾಯ್ದೆ ಯಾತಕ್ಕೆ?’ ಈ ಸಂಪ್ರದಾಯ ನಿಷ್ಠಯೇ ನಮ್ಮ ದೇಶ ಮುಂದುವರೆಯದಿರುವುದಕ್ಕೆ ಮುಖ್ಯ ಕಾರಣ ಅನ್ನಿಸಿ ಹೊಸ ಕ್ರಾಂತಿಕಾರಕ ಆಲೋಚನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ ನಾಯಕ.
ಮೊದಲ ಪ್ರಯತ್ನದಲ್ಲಿಯೇ ಮುಗ್ಗರಿಸುತ್ತಾರೆ. ಹಾಲು ಕಾಯಿಸುವುದು ಎಷ್ಷು ಸರಳ ಮತ್ತು ಸಣ್ಣ ಕೆಲಸ! ಅಂದುಕೊಂಡರೆ….. ಅದು ಉಕ್ಕಿ, ಎಲೆಕ್ಟ್ರಿಕಲ್ ಒಲೆ ಮೇಲೆ ಚೆಲ್ಲಿ, ಒಲೆ ಮತ್ತು ಪಾತ್ರೆ ಸುಟ್ಟು ಕರಕಲಾದಾಗ ಹಾಲು ಒಂದು ಅಪಾಯಕಾರಿ ವಸ್ತು ಅಂತ ನಿರ್ಧರಿಸಲಾಯಿತು. ‘ಹಾಲು ಹೆಂಗಸರನ್ನು ಒಲೆಯ ಬುಡಕ್ಕೆ ಬಂಧಿಸಿರುವ ಮೊದಲ ಸಂಕೋಲೆ’ ಇದರಲ್ಲಿ ಬದಲಾವಣೆ ತರುವ ಕ್ರಾಂತಿಯ ವಿಚಾರ ಇವರದು. ಇನ್ನು ಒಲೆ ರಿಪೇರಿಯಾಗದಿದ್ದರೆ ಶಾರ್ಟಸರ್ಕಿಟ್ ನಿಂದ ಹೆಂಡತಿಗೆ ಬೆಂಕಿ ತಗುಲಿದರೆ ವಧುದಹನದ ಕೇಸಾಗುವುದು ಖಂಡಿತ ಅನ್ನಿಸಿ ಅದರ ಸ್ವಚ್ಚತೆ ಮತ್ತು ರಿಪೇರಿಯಾಗುತ್ತದೆ. ಒಂದು ಹಾಲು ಕಾಯಿಸಲು ಇಷ್ಟಾದರೆ ಅಡುಗೆ ಮಾಡುವುದು ಹೇಗಿರಬೇಡ?
ಪ್ರೆಷರ್ ಕುಕರ್ ಗ್ಯಾಸ್ಕೆಟ್ ಮತ್ತು ಸೇಫ್ಟಿವಾಲ್ವ್ ಮಾರುವ ಹುಡುಗಿಗೆ ಕೂಡ ಗೊತ್ತಾಗಿ ಹೋಯಿತು, ಮನೆಯ ಯಜಮಾನಿ ಮನೆಯಲ್ಲಿ ಇಲ್ಲ ಅನ್ನುವುದು.
ರಬ್ಬರ್ ಸುಟ್ಟ ವಾಸನೆ ಅನ್ನಕ್ಕೆ ಬಂದು, ಸಾಕಿದ ನಾಯಿ ಆ ಅನ್ನವನ್ನು ತಿನ್ನುವುದು ಬಿಡಿ ಮೂಸಿ ನೋಡಲಿಲ್ಲ. ನಾಯಿಗೆ ಊಟ ಮಾಡಿಸಲೋಸುಗ ಒಣ ಮೀನು ತಂದು ಹುರಿದು ಕೊಟ್ಟರು. ಮೀನಿನ ವಾಸನೆಗೆ ಮನೆಯಲ್ಲ ಇರುವೆಗಳು. ನಾಯಿ ಅನ್ನ ತಿಂತೋ ಇಲ್ಲವೋ ಆದರೆ ಕರೆಂಟ ಇಲ್ಲದಾಗ ಕತ್ತಲಲ್ಲಿ ಸಾರಿನಲ್ಲಿ ಬಿದ್ದ ಇರುವೆಯ ಭಕ್ಷಣೆಯೂ ಇವರಿಂದ ಆಯಿತು. ಇನ್ನು ಇರುವೆ ಕೊಲ್ಲಲು ಸೀಮೆ ಎಣ್ಣೆ ಬೇಕು. ಅದನ್ನು ಕೊಳ್ಳಲು ರೇಶನ್ ಕಾರ್ಡ ಇಲ್ಲ. ಒಟ್ಟಿನಲ್ಲಿ *ಸನ್ಯಾಸಿಯ ಸಂಸಾರ* ಬೆಳಿತಾ ಹೋಯಿತು. ಇದೇನು ಮಹಾವಿದ್ಯೆ ಅನ್ನಿಸಿದ್ದು ಈಗ ಕುತ್ತಿಗೆಗೆ ಬಂತು. ಕೊನೆಗೆ ಡಿಸೇಲ್ ತಂದು ಇರುವೆ ಕೊಲ್ಲುವ ನಿರ್ಧಾರ.
ಸೀಮೆ ಎಣ್ಣೆಗಾಗಿ ಹೊರಗೆ ಹೋದಾಗ ಸ್ನೇಹಿನೊಬ್ಬ ಸಿಕ್ಕು ಮತ್ತೋರ್ವನನ್ನು ಪರಿಚಯಿಸುತ್ತಾನೆ. ಆಗುಂತಕ ತನ್ನ ಕೂಸಿಗೆ ಹೆಸರು ಸೂಚಿಸು ಅಂತ ಗಂಟುಬೀಳುತ್ತಾನೆ. ಈ ಭಾಗ ಮುಖ್ಯ ಕಥೆಗೆ ಎಳ್ಳಷ್ಟೂ ಹೊಂದಿಕೆಯಾಗದು.
ಅದೇ ಗೆಳೆಯನ ಸಲಹೆಯ ಮೇರೆಗೆ ಒಂದೇ ಸಲಕ್ಕೆ ಎಲ್ಲ ಅಡಿಗೆ ಕುಕರ್ ನಲ್ಲಿ ಮಾಡಬಹುದೆಂದು ಪ್ರಯೋಗಕ್ಕೆ ಅಣಿಯಾಗುತ್ತಾನೆ. ಅಡುಗೆ ಮಾಡುವುದು ಒಂದು ಕಲೆ ಅನ್ನುವ ಹೀರೋಗೆ ಗಣಿತದ ಲೆಕ್ಕಾಚಾರ ತಪ್ಪಿಹೋಯಿತು. ಅದೇ ವೇಳೆಗೆ ಒಬ್ಬ ಉಗ್ರನನ್ನು ಹುಡುಕುತ್ತಾ ಮನೆಯ ಮುಂದೆ ಪೋಲೀಸ್ ಅಧಿಕಾರಿ ಹಾಜರ್. ಕುಕರ್ ಸಿಡಿದ ಶಬ್ದ, ಬಾಂಬ್ ಇಲ್ಲವೆ ಗುಂಡು ಅಂತ ಭಾವಿಸಿ ಪೋಲಿಸ್ ಮನೆಯೊಳಗೆ ಬಂದು ರೆಡ್ ಆಕ್ಸೈಡ್ ನೆಲದ ಮೇಲೆ ಜಾರಿ ಬಿದ್ದ. ಪ್ಯಾಂಟಿಗೆ ಹತ್ತಿದ ಕೆಂಪು ಬಣ್ಣ ಬ್ಲೀಡಿಂಗ್ ಆಗಿ ತೋರಿತು. ಪೋಲಿಸರನ್ನು ಹೊರಗೆ ಹಾಕಲು ಹರಸಾಹಸ ಮಾಡಬೇಕಾಯಿತು. ಇದನ್ನೆಲ್ಲಾ ಓದುತ್ತಿರುವಾಗ ನಗು ನಿಯಂತ್ರಿಸಲು ಆಗುವುದಿಲ್ಲ.
ಅಡುಗೆ ಮಾಡುವುದು ಕಲೆ ಅಂತ ಒಬ್ಬ ಪುರುಷನ ಅಭಿಪ್ರಾಯವಿದ್ದರೆ ಅದು ಕರ್ತವ್ಯ, ಅಗತ್ಯತೆ ಅನ್ನುವಳು ಹೆಣ್ಣು. ಬೆಳೆಯುತ್ತಿರುವ ವಿಜ್ಞಾನ ಯುಗದಲ್ಲಿ ಅದು ವಿಜ್ಞಾನವಾಗಿ ಮಾರ್ಪಡುತ್ತಿದೆ. ಏನೇ ಆಗಲಿ ಅಡುಗೆ ಸಾಮಾನ್ಯ ವಿಜ್ಞಾನ, ಎಲ್ಲರಿಗೂ ತಿಳಿದಿರಬೇಕಾದುದು. ಪೇಟೆಯಲ್ಲಿ ತಿನಿಸುಗಳ ಮೇಲೆ ಪ್ರಯೋಗಿಸಿದ ಅದ್ಭುತ ಕಲೆಯನ್ನು ನೋಡಿಯೇ ಕೊಳ್ಳುವವರು ಜಾಸ್ತಿ. ಕಲೆ ಬಾಹ್ಯ ಸೌಂದರ್ಯ, ವಿಜ್ಞಾನ ಆಂತರ್ಯದ ರುಚಿ ಅಂತ ಹೊರಗಿನ ತಿನಿಸುಗಳನ್ನು ಸವಿದವರಿಗೆ ಗೊತ್ತು. ಅದಕ್ಕಾಗಿ ಪಾಕಕ್ರಾಂತಿಗೆ ಜಯವಾಗಲಿ.
ಏನೇ ಆಗಲಿ ಪೂರ್ಣಚಂದ್ರ ತೇಜಸ್ವಿಯಂತ ಒಬ್ಬ ಗಂಭೀರ ವಿಜ್ಞಾನಿ ಇಂತಹ ಹಾಸ್ಯಮಯ ಕಥೆ ಬರೆಯುತ್ತಾರೆ ಅನ್ನುವದನ್ನು ನಂಬುವುದು ಕಷ್ಟ.
********************************
ವಿನುತಾ ಹಂಚಿನಮನಿ
Super comments