ಲೇಖನ
ಬದಲಾದ ಕಾಲಕ್ಕೆ ಹಳ್ಳಿಯ ಬದುಕು
ಸರಿತಾ ಮಧು
ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು.
ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು ವ್ಯಕ್ತಿಗಳು ಮಾತ್ರ ಈ ವ್ಯವಸ್ಥೆಯ ವಿರೋಧಿಸಿ ಹೊರನಡೆದಿರಬಹುದು.
ಶಾಲಾ ಶಿಕ್ಷಣದ ಜೊತೆ ಜೊತೆಗೆ ಹಿರಿಯರ ಮೂಲಕ ಅನೌಪಚಾರಿಕವಾಗಿ ಜೀವನ ಮೌಲ್ಯಗಳು ಒಟ್ಟುಗೂಡಿ ಮುಂದಿನ ಬದುಕಿಗೆ ಮೆರುಗು ತರುತ್ತಿದ್ದವು.ಹಳ್ಳಿಯ ಶಾಲೆಯಲ್ಲಿ ಕಲಿತ ನನ್ನನ್ನೂ ಒಳಗೊಂಡಂತೆ ಸಾವಿರಾರು ಕನಸುಗಳಿಗೆ ರೆಕ್ಕೆ ಹಚ್ಚಿದ್ದು ನಮ್ಮ ಹಳ್ಳಿಯೇ .
ಇಲ್ಲಿಗೆ ಸುಮಾರು ಐವತ್ತು – ಅರವತ್ತು ವರ್ಷಗಳ ಹಿಂದಿನ ಜೀವನ ಬಹಳ ಕಠಿಣವಾಗಿತ್ತು. ಹೀಗಂತ ನನ್ನ ಅಪ್ಪ ಲೆಕ್ಕವಿಲ್ಲದಷ್ಟು ಸಲ ನಮ್ಮ ಬಳಿ ಹೇಳಿದ್ದಾರೆ. ಅವರು ವಾಸಿಸುತ್ತಿದ್ದ ಮನೆಯಲ್ಲಿ ಕನಿಷ್ಟ ಮೂವತ್ತು ಮಂದಿ ಇರುತ್ತಿದ್ದರು. ಊಟವೆಂದರೆ ಅವರಿಗೆ ಮೂಲಭೂತ ಅವಶ್ಯಕತೆ ಆಗಿತ್ತು. ಕಾರಣ ಈಗಿನಷ್ಟು ಸುಖ ಸಮೃದ್ಧಿಯ ಭೋಜನವಿರುತ್ತಿರಲಿಲ್ಲ. ಅನ್ನದ ಊಟವೆಂದರೆ ಅದು ಹಬ್ಬ ಹರಿದಿನಗಳಿಗೆ ಮಾತ್ರವಂತೆ. ರಾತ್ರಿ ರೊಟ್ಟಿ ಊಟವಾದರೆ ಒಂದೆರಡು ರೊಟ್ಟಿಗಳನ್ನು ಪಲ್ಯದ ಸಮೇತ ಸುತ್ತಿ ಜೋಡಿಸಿಟ್ಟ ಜೋಳದ ಚೀಲಗಳ ನಡುವೆ ಬಚ್ಚಿಡುತ್ತಿದ್ದರಂತೆ.ಅದು ರಹಸ್ಯವಾಗಿ ಬೆಳಗಿನ ತಿಂಡಿಗಾಗಿ.ಶಾಲೆಗೆ ಹೋಗುವಾಗ ತಿನ್ನುವುದಕ್ಕಾಗಿ. ಕಾರಣ ಈಗಿನಂತೆ ಮಕ್ಕಳ ಕೈತಿಂಡಿ ಇರುತ್ತಿರಲಿಲ್ಲ. ಹಾಗಾಗಿಯೇ ಅವರು ಸದೃಢ ವಾಗಿದ್ದಿರಬೇಕು. ಬಟ್ಟೆಗಳೂ ಕೂಡ ಅತಿ ಕಡಿಮೆ . ಆದರೆ ನಮ್ಮ ಈಗಿನ ಬದುಕು ವಿಭಿನ್ನವಾದ ನೆಲೆ ಕಂಡುಕೊಂಡಿದೆ. ಎಲ್ಲವೂ ಕೈಗೆಟುಕುವ ಅಂತರದಲ್ಲೇ ಇವೆ . ಸಾವೂ ಕೂಡಾ ಅಲ್ಲವೇ?
ನಮ್ಮ ಹಿಂದಿನ ಹಳ್ಳಿ ಹಾಡು ಪಾಡು ಕಷ್ಟಕರ ವಾಗಿದ್ದಿರಬಹುದು. ಆದರೆ ಈಗಿನಂತೆ ಇರಲಿಲ್ಲ. ಎಲ್ಲವೂ ನಗರೀಕರಣದ ಪ್ರಭಾವ . ಅನುಕರಿಸಿದ್ದು ತುಸು ಹೆಚ್ಚೇ ಆಯಿತಲ್ಲವೇ?
ಆಧುನಿಕತೆಯ ಸೋಗಿಗೆ ಮುಗ್ಧ ಜನರು ಗುರುತೇ ಸಿಗದಷ್ಟು ಬದಲಾದರು. ಕುಟುಂಬಗಳು ಒಡೆದವು ಹಾಗೆಯೇ ಭಾವನೆಗಳೂ. ಮೊದಲೆಲ್ಲ ಬೀದಿಯಲ್ಲಿ ಜಗಳಗಳು ಸಾಮಾನ್ಯವಾಗಿ ಇದ್ದವು. ಅಲ್ಲಿಗೆ ಮಾತು ನೇರವಾಗಿ ಮುಗಿಯುತ್ತಿದ್ದವು. ಆದರೆ ಈಗ ಮುಸುಕಿನೊಳಗಿನ ಗುದ್ದಾಟ. ಮಾತುಗಳಿಲ್ಲದ ಒಳಗೊಳಗಿನ ಕಿಚ್ಚುಗಳು, ಸಲ್ಲದ ಮಾತುಗಳು. ನಿಜಕ್ಕೂ ಹಳ್ಳಿಗಳು ಬದಲಾಗಬಾರದಿತ್ತು. ಸೌಕರ್ಯಗಳಿಗೆ ಮನಸೋತ ಮಂದಿ ನೆಮ್ಮದಿಯನ್ನು ಬಲಿನೀಡಿದ್ದಾರೆ.
ಹೊಲಗದ್ದೆಗಳು ಕ್ರಮೇಣ ತೋಟಗಳಾದವು. ಆಹಾರ ಬೆಳೆಗಳು ಮರೆಯಾಗಿ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಮೊದಲಾದರೆ ವಸ್ತುಗಳ ವಿನಿಮಯದ ಮೂಲಕವೇ ಜೀವನ ನಡೆಯುತ್ತಿತ್ತು. ಮನೆಯಲ್ಲಿ ಎಲ್ಲವೂ ಚೀಲದಲ್ಲಿ , ಹಗೇವು ಅಥವಾ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದವು. ಆದರೆ ಈಗ ಹಳ್ಳಿಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ಉದ್ದು, ಕಡಲೆ ಹೀಗೆ ಬೆಳೆಗಳೇ ಇಲ್ಲ.
ಮನೆಯಲ್ಲಿ ದನಕರುಗಳೂ ಇಲ್ಲ. ಸಾಕುವವರಿಲ್ಲದೇ ಎಲ್ಲವೂ ಮಾರಲ್ಪಟ್ಟವು. ಸ್ವಂತಿಕೆಯೂ ಬಿಕರಿಯಾಯಿತು ಈ ನಡುವೆ.
ಎತ್ತುಗಳಿಲ್ಲದ ಜಾಗಕ್ಕೆ ಟ್ರ್ಯಾಕ್ಟರ್ಗಳು, ಎತ್ತಿನ ಬಂಡಿಯ ಜಾಗಕ್ಕೆ ಕಾರುಗಳು ಮನೆಯನ್ನು ಸೇರಿದವು. ಎಲ್ಲವೂ ಬಹಳ ಬೇಗ ಬದಲಾಗಿ ಬಿಟ್ಟಿತು.
ಜೀವನ ಶೈಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಕರೆದೊಯ್ದಿತು. ಬಣ್ಣ ಬಣ್ಣದ ಬಟ್ಟೆಗಳಂತೆ ಹೊದಿಕೆ ಮಾತ್ರ ಬದಲಾಗಲಿಲ್ಲ ಮನುಷ್ಯನೇ ಬದಲಾವಣೆಗೆ ಒಳಪಟ್ಟನು. ಕಾರಣ ಬದಲಾವಣೆ ಜಗದ ನಿಯಮ , ಏನಂತೀರಿ?
ಆಹಾರ – ವಿಹಾರ , ಉಡುಗೆ- ತೊಡುಗೆ, ಮನೆ- ಸಂಸಾರ ಎಲ್ಲವೂ ಸಾರ್ವಜನಿಕವಾಗಿ ಪ್ರದರ್ಶನಗೊಂಡವು. ನಾಲ್ಕು ಗೋಡೆಗಳ ನಡುವಣ ಬದುಕು ನಾಲ್ಕು ದಿಕ್ಕುಗಳಲ್ಲಿ ಪ್ರಸಾರವಾಗಿದ್ದು ನಮ್ಮ ಸಾಧನೆಯೇ?
ಹಳ್ಳಿಗಳಾದ್ರೂ ಮೊದಲಿನಂತೆ ಇರಬೇಕಿತ್ತು ಅಂತ ನನಗೆ ತುಂಬಾ ಸಲ ಅನಿಸಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಅಮ್ಮನ ಅಡುಗೆಯ ವಿಷಯದಲ್ಲಿ ನಾನೂ ತುಂಬಾ ಮಿಸ್ ಮಾಡಿಕೊಳ್ಳಲು ಕಾರಣ ಇದೆ. ಅಮ್ಮ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ದಿನಗಳವು. ಎಷ್ಟು ರುಚಿಯಾಗಿರುತ್ತಿತ್ತು ಅಂದರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.ನಮ್ಮ ಮನೆಗೆ ಸದಾ ಬರುತ್ತಿದ್ದ ನನ್ನ ಅಪ್ಪನ ಸೋದರಮಾವ ಕೇವಲ ಸಾಂಬಾರನ್ನೇ ಸೊರ್ ಎಂದು ಕುಡಿದುಬಿಡುತ್ತಿದ್ದರು. ಇದಲ್ಲವೇ ಹಳ್ಳಿಯ ಊಟದ ಗಮ್ಮತ್ತು.
ಈಗೆಲ್ಲಿದೆ ನಮಗೆ ಒಲೆ ಹಚ್ಚಿ ಅಡುಗೆ ಮಾಡುವ ಸಮಯ ಗ್ಯಾಸ್ ಮೇಲೆ ಕುಕ್ಕರ್ ಸೀಟಿ ಒಡೆಸಿ , ರುಬ್ಬುವ ಯಂತ್ರದಲ್ಲಿ ನುಣ್ಣಗೆ ಮಾಡಿ ಜಠರಕ್ಕೆ ಕೆಲಸವನ್ನು ನೀಡದೇ ಬೊಜ್ಜು ಬರಿಸಿಕೊಂಡಿದ್ದು.
ಬರೆಯುತ್ತಾ ಹೋದರೆ ಹಳ್ಳಿಯ ಜೀವನದ ಸೊಗಸಿಗೆ ಪದಗಳೇ ಕಡಿಮೆ. ನನಗಂತೂ ಹೀಗೆ ಹಲವಾರು ಬಾರಿ ಅನಿಸಿದ್ದು ಹೋದವರೆಲ್ಲ ಪುಣ್ಯಮಾಡಿದ್ದಿರಬೇಕು. ಸಂಪೂರ್ಣ ಜೀವನವನ್ನು ಅನುಭವಿಸಿದ್ದಾರೆ. ಮೊದಲ ಹಳ್ಳಿಯ ಬದುಕು ಮತ್ತೊಮ್ಮೆ ಬಾರದೇ?
******************************
ಎರಡೆರಡು ಬಾರಿ ಓದಿ ನಮ್ಮ ಮನೆಯ ಹಳೆ ಜೀವನದ ಕ್ಷಣಗಳು ನೆನಪಾದವು. ನೆನಪಾದಾಗ ಏನೋ ಕಳೆದುಕೊಂಡ ಭಾವ..
ಆತ್ಮೀಯತೆಯ ಆಡಂಬರಕ್ಕಿಂತ ದೊಡ್ಡಾದು ಎಂಬ ವಾಸ್ತವ,
ಹಣಕಾಸಿಗೆ ಅಡಚಣೆ ಇದ್ದರು ಪರಿಶುದ್ಧ ಬದುಕಿಗಲ್ಲ ಎಂಬುದು,
ಮನೆಯಲ್ಲೇ ಸಿಗುತ್ತಿದ್ದ ಅನೌಪಚಾರಿಕ ಮೌಲ್ಯಗಳು,
ಹಬ್ಬಕ್ಕೇ ಸೀಮಿತವಾಗಿದ್ದ ಅನ್ನದೂಟ,
ಸಾವು ಕೂಡ ಕೈಗೆಟಕುವ ಅಂತರಕ್ಕೆ ಬಂದಿರುವುದು,
ನೆಮ್ಮದಿಯನ್ನು ಬಲಿ ಕೊಟ್ಟಿರುವುದು,
ಹೋದವರೇ ಪುಣ್ಯವಂತರು ಈ ಎಲ್ಲಾ ವಿಚಾರಗಳು ಎರಡು ತಲೆಮಾರನಿಂದ ಈ ಕ್ಷಣದ ತನಕ ನಮ್ಮ ಸಾಗಿದ ಬಂದ ಬದುಕಿನ ಜಾಡನ್ನು ಮನ ಮುಟ್ಟುವಂತೆ ಪರಿಚಯಿಸಿದೆ…
ತುಂಬಾ ಭಾವನಾತ್ಮಕವಾಗಿಯೂ ಇದೆ..
Thank you sir… This is our reality…
ಹೌದು ಸರಿತಾ
Yes…
ಹಾಯ್ ಸರಿತಾ ತುಂಬಾ ದಿನಗಳ ನಂತರ ಪೇಸ್ ಬುಕ್ ನಲ್ಲಿ ಭೇಟಿ…. ಅಷ್ಟರಲ್ಲಿ ನೀನು ಯುವ ಲೇಖಕಿಯೇ ಆಗಿರುವೆ… ಲೇಖನ ತುಂಬಾ ನೈಜವಾಗಿ ದೆ…. ನನ್ನ ಬಾಲ್ಯದ ಹಳ್ಳಿಯ ಜೀವನ ನೆನಪಿಸಿದೆ ನನಗೆ.,… ಧನ್ಯವಾದಗಳು….. ಶುಭವಾಗಲಿ
Good work ma’am
Thank you all