ಕವಿತೆ
ಬದುಕು- ಬವಣೆ
ಸಹನಾ ಪ್ರಸಾದ್
ಗಂಡ ಹೆಂಡಿರ ಸಂಬಂಧ
ಸಂಸಾರಕ್ಕೆ ಇದೇ ಮೆರಗು
ಉಫ಼್ಫ಼್ ಹೇಳಲಾಗದು ಅನುಬಂಧ
ಜತೆಗಿರುವರು ಸಾಯುವವರೆಗೂ
ಆದರೆ ಇರಲೇಬೇಕಿಲ್ಲ ಪ್ರೀತಿ
ವ್ಯಾವಹಾರಿಕವಾದರೂ ನಡೆದೀತು
ಇದ್ದರೆ ಸಮಾಜದ ಭೀತಿ
ಪ್ರೀತಿಯೂ ಗಿಲೀಟು
ಬತ್ತಿ ಹೋದ ಮೇಲೆ ಪ್ರೀತಿಯ ಚಿಲುಮೆ
ಜತೆಗಿರುವುದೂ ಅನಿವಾರ್ಯವಾದಾಗ
ಮುದುಡಿದ ಮನಸ್ಸುಗಳಿಗೆ ಎಲ್ಲಿದೆ ಒಲುಮೆ
ಕಿತ್ತೇ ಹೋಯಿತೇನೋ ಅನಿಸುತ್ತೆ ಹೃದಯದ ಭಾಗ
ನಮ್ಮ ಸಮಾಜದಲ್ಲಿ ಇಲ್ಲ ವಿಚ್ಚೇದನ
ಒಮ್ಮೆ ಜತೆಗೂಡಿದರೆ ಮುಗಿಯಿತು ಬದುಕು
ಒಳ್ಳೆ ಜನ ಸಿಗದಿದ್ದರೆ ಬದುಕೇ ವೇದನ
ಸಹಿಸಿಕೊಳ್ಳಬೇಕು ಖಾಲಿಯಾಗುವವರೆಗೂ ಸರಕು!
*************************