ಕವಿತೆ
ರಚ್ಚೆ ಹಿಡಿದ ಮನ
ಸ್ವಭಾವ ಕೋಳಗುಂದ
ಮಳೆ ನಿಂತ ನೆಲದಲ್ಲಿ
ನಡೆಯುತ್ತಲೇ ಇದ್ದಳು
ಗುರುತು ಮಾಡಿ ಗುರಿಯೆಡೆಗೆ
ಹಸಿಟ್ಟಿಗೆ ಬಿಸಿ ನೀರು ಸುರುವಿ
ತಟ್ಟಿ ಬೆಳರ ಚಿತ್ರದ ಹಚ್ಚೆ
ಬೆಂದ ರೊಟ್ಟಿ ಹಸಿದ ಹೊಟ್ಟಗೆ
ಹರಗಿದ ಹೊಲಕ್ಕೆ ಬೀಜ ಬಿತ್ತಿ
ನೀರು ಹಾಯಿಸಿ ಕಳೆ ಕಿತ್ತು
ಕೊಯ್ಲಿಗೆ ಕಾದು ರಾಶಿ ಪೈರಾಗಿಸಿದ್ದ
ರಚ್ಚೆ ಹಿಡಿದ ಕೂಸು
ನೆಟಿಗೆ ತೆಗೆದು ನೀವಾಳಿಸಿ
ರಂಚು ಬೂದಿಯ ತಿಲಕದ ಕೈಚಳಕ
ಗುಡಿಯ ಗಂಟೆಯ ನಾದಕ್ಕೆ
ತಲೆದೂಗಿದ ಎಳೆ ಜೋಳದ ತೆನೆ
ನೊರೆ ಉಕ್ಕಿ ಕೆಚ್ಚಲ ತಂಬಿಗೆ ಸೋರಿತ್ತು
ಕೊಟ್ಟಗೆಯ ಕರು ಚಂಗನೆ ಎಗರಿ
ಅಂಗಳದ ರಂಗೋಲಿ ಗೋಮಮಯ
ಅಜ್ಜಿಗೆ ಕೈಲಾಸ ತೀರ್ಥ
ಕೋಲು ಕನ್ನಡಕದ ಅಜ್ಜ
ಊರುರು ಅಲೆದು ಊರು ಕಟ್ಟಿದ
ಮೊಮ್ಮೊಗನು ಮನೆಯೊಡೆದ
ತಲೆ ಬಾಗಿಲು ಸೀಳಿ
*****
ತುಂಬಾ ಚೆನ್ನಾಗಿದೆ. ವಾಸ್ತವದ ಅನಾವರಣ