ಮಣ್ಣಿನ ಕಣ್ಣು

ವರ್ತಮಾನದ ರಾಜಕೀಯ,ಸಾಮಾಜಿಕ, ಆಗುಹೋಗುಗಳ ಬಗೆಗಿನ ಬರಹಗಳು

Govt Finally Releases Data: 11,379 Farmers Committed Suicide In 2016,  What's The Priority Now?

ರೈತರ ಆತ್ಮಹತ್ಯೆ:

ತಡೆಯಬಲ್ಲಂತಹ ಒಂದಷ್ಟು ಯೋಜನೆಗಳ ಬಗ್ಗೆ!

India may become farmer suicide capital: Agri Adviser | Deccan Herald

         ರೈತನ ಆತ್ಮಹತ್ಯೆ ಎನ್ನುವುದು ಈಗೀಗ ಮಾಮೂಲಿಯಾದ ಸುದ್ದಿಯಾಗಿಬಿಟ್ಟಿದೆ ಪ್ರತಿ ವರ್ಷವೂ ಒಂದೋ ಬರಗಾಲ ಎದುರಾಗುತ್ತದೆ, ಇಲ್ಲ ಅತಿವೃಷ್ಠಿಯ ಭೂತ ಬಂದೆರಗುತ್ತದೆ. ಬೆಳೆನಷ್ಟವಾಗಿ ಬೀದಿಗೆ ಬೀಳುವ ರೈತ ವಿಧಿಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.. ವಿರೋಧಪಕ್ಷಗಳು ಆಡಳಿತ ಪಕ್ಷದವರ ವೈಫಲ್ಯದ ಬಗ್ಗೆ ಹೇಳಿಕೆ ನೀಡಿ, ತೀರಾ ಮನಸ್ಸು ಬಂದರೆ  ಸದರಿ ರೈತನ ಮನೆಗೆ ಟಿ.ವಿ.ಕ್ಯಾಮೆರಾದೊಂದಿಗೆ ಬೇಟಿ ನೀಡಿ ಒಂದಿಪ್ಪತ್ತು ಸಾವಿರದ ಚೆಕ್ ನೀಡಿ ಮುಂದಿನ ಚುನಾವಣೆಗೆ ಒಂದಿಷ್ಟು ಮತಗಳು ನಿಕ್ಕಿಯಾದವೆಂದು ಸಂಭ್ರಮಿಸುತ್ತಾರೆ.  ಸರಕಾರವೂ ಒಂದಿಷ್ಟು ಪರಿಹಾರ ಘೋಷಿಸಿ ತನಿಖೆಗೆ ಒಂದು ಸಮಿತಿ ನೇಮಿಸಿ ಮುಂದಿನ ವರ್ಷ ಇಂತಹ ಆತ್ಮಹತ್ಯೆಗಳು ನಡೆಯದಂತೆ ನೋಡಿಕೊಳ್ಳುವುದು ತಮ್ಮ  ಉದ್ದೇಶವೆಂದೆ ಘೋಷಿಸಿ ಮತ್ತೆ ಮಲಗುತ್ತವೆ.ಪ್ರತಿ ವರ್ಷ ಇಂತಹ ರಾಜಕೀಯ ಕೃಪಾಪೋಷಿತ ನಾಟಕಗಳು ನಡೆಯುತ್ತಲೇ ಇರುತ್ತವೆ. ನಾವೂ ಕೂಡ ಯಾವುದೋ ನಾಟಕದ ಪ್ರೇಕ್ಷಕರಂತೆ ನೋಡುತ್ತ ಕೂರುತ್ತೇವೆ. ತೊಂಭತ್ತರ ದಶಕದವರೆಗೂ ರೈತರ ಆತ್ಮಹತ್ಯೆಗಳು ವಿರಳವಾಗಿದ್ದವು. ಆದರೆ ಜಾಗತೀಕರಣದ ನಂತರ ನಮ್ಮ ಪ್ರಗತಿಯ ಹಾದಿಯನ್ನು ಬದಲಾಯಿಸಿಕೊಂಡ ನಾವು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟೆವು. ಇದರ ಪರಿಣಾಮವಾಗಿ ಮೊದಲು ಶೇಕಡಾ 72ರಷ್ಷಟಿದ್ದ ನಮ್ಮ ಕೃಷಿ ಆದಾಯ ಇದೀಗ ಕೇವಲ ಶೇಕಡಾ 12ಕ್ಕೆ ಇಳಿಯುವಂತಾಗಿದೆ. ಕೈಗಾರಿಕೆಗಳಿಗೆ ನೀಡುವ ಯಾವ ಸೌಲಭ್ಯವೂ ಕೃಷಿ ಕ್ಷೇತ್ರಕ್ಕೆ ದೊರೆಯದಂತಾಗಿ ಈ ಕ್ಷೇತ್ರ ಸೊರಗತೊಡಗಿದೆ. ಸಮಯಕ್ಕೆ ಸರಿಯಾಗಿಬರದ ಮಳೆ, ಒಮ್ಮೆಲೆ ಬಂದೆರಗುವ ಅತಿವೃಷ್ಠಿ, ದೊರೆಯದ ಬ್ಯಾಂಕುಗಳ ಸಾಲ, ಉತ್ತಮ ಗುಣಮಟ್ಟದ ಬೀಜ ಗೊಬ್ಬರಗಳ ಕೊರತೆ, ಬೆಳೆದ ಬೆಳೆಗೆ ದೊರೆಯದ ನ್ಯಾಯಯುತ ಮಾರುಕಟ್ಟೆ ಬೆಲೆಗಳು ರೈತನನ್ನು ಅಸಹಾಯಕತೆಯಿಂದ ಹತಾಶೆಗೆ ದೂಡಿ ಅವನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿವೆ. ಇವೆಲ್ಲವುಗಳ ಅರಿವಿದ್ದೂ ಸರಕಾರಗಳು ರೈತರ ಬಗ್ಗೆ ಕಾಳಜಿ ತೋರದೆ ದಪ್ಪ ಚರ್ಮವನ್ನು ಬೆಳೆಸಿಕೊಂಡು ಅವನನ್ನು ಮತ್ತಷ್ಟು ಹತಾಶೆಗೆ ದೂಡುತ್ತಿವೆ.

     ಪ್ರತಿವರ್ಷ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಆದ್ದರಿಂದ ಇಂತಹದೊಂದು ಸಮಸ್ಯೆಗೆ ಸರಕಾರ ಒಂದು ಶಾಶ್ವತವಾದ ನೀತಿಯೊಂದನ್ನು ಅಳವಡಿಸಿಕೊಂಡು ಮುಂದುವರೆದರೆ ಮಾತ್ರ ಭವಿಷ್ಯದಲ್ಲಿ ರೈತನ ಆತ್ನಹತ್ಯೆಗಳನ್ನು ತಡೆಯಬಹುದು ಜೊತೆಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ಸರಕಾರವೊಂದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ  ಒಂದಿಷ್ಟು ಸಲಹೆ ಸೂಚನೆಯನ್ನು ಈ ಲೇಖನದ ಮೂಲಕ ನೀಡಲು ಪ್ರಯತ್ನಸಿದ್ದೇನೆ.

Maharashtra: 300 cases of farmers' suicides recorded in November;  Marathwada worst-affected

ಬೆಳೆ ವಿಮೆ ಯೋಜನೆ:

     ಈಗಿರುವ ಬೆಳೆ ವಿಮಾ ಯೋಜನೆ ಯಾವುದೇ ವೈಜ್ಞಾನಿಕ ಮಾನದಂಡವನ್ನೂ ಹೊಂದಿಲ್ಲ  ಮತ್ತು ಇಂತಹ ವಿಮೆಯ ಬಗ್ಗೆ ರೈತರಿಗೂ ಸಂಪೂರ್ಣ ಅರಿವಿಲ್ಲ.  ಆದ್ದರಿಂದ ಬೆಳೆಯುವ ಬೆಳೆಯ ಆಧಾರದಲ್ಲಿ  ಇಡೀ ರಾಜ್ಯವನ್ನು ಒಂದಷ್ಟು ವಿಭಾಗಗಳಾಗಿ ವಿಂಗಡಿಸಬೇಕು. ಆಯಾ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆಯ ಬಗ್ಗೆ ತಜ್ಞರು ಅದ್ಯಯನ ಮಾಡಿ  ಒಂದು ಏಕರೆಯಲ್ಲಿ ಆ ಬೆಳೆ ಬೆಳೆಯಲು  ತಗುಲಬಹುದಾದ ಅಂದಾಜು ವೆಚ್ಚವನ್ನು  ಮತ್ತು ಬರಬಹುದಾದ ಆದಾಯದ ಪ್ರಮಾಣವನ್ನು  ನಿಗದಿ ಪಡಿಸಬೇಕು. ತದನಂತರ ಒಂದು ಏಕರೆಗೆ ಇಷ್ಟು ಎಂದು ವಿಮಾಕಂತನ್ನು ನಿಗದಿಪಡಿಸಬೇಕು. ಹೀಗೆ ನಿಗದಿಪಡಿಸುವ ಮೊತ್ತ ರೈತನಿಗೆ ಹೊರೆಯಾಗುವಂತಿರಬಾರದು. ಆಯಾ ಪಂಚಾಯಿತಿ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರಸಂಘ(ಸೊಸೈಟಿ)ಗಳಲ್ಲಿ ಗ್ರಾಮಲೆಕ್ಕಿಗರ ಮೇಲುಸ್ತುವಾರಿಯಲ್ಲಿ  ರೈತರು ವಿಮಾ ಕಂತು ಪಾವತಿ ಮಾಡುವ ಮತ್ತು ಹಾಗೆ ಕಂತು ಪಾವತಿ ಮಾಡಿದ 24 ಗಂಟೆಗಳ ಒಳಗೆ ಕೃಷಿಬಾಂಡ್ ನೀಡುವ ವ್ಯವಸ್ಥೆ ಮಾಡಬೇಕು. ಸಣ್ಣ ರೈತರಿಗೆ ಈ ವಿಮಾ ಮೊತ್ತವನ್ನು ಕಟ್ಟುವುದು ಹೊರೆಯಾಗುವುದರಿಂದ ಗುರುತಿಸಿದ ಸಣ್ಣ ರೈತರ ವಿಮಾ ಮೊತ್ತವನ್ನು ಸರಕಾರದ ಕೃಷಿ ಇಲಾಖೆಯೇ ಭರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರತಿ ಬಜೆಟ್ಟಿನಲ್ಲೂ ಸದರಿ ಇಲಾಖೆಗೆ ಇಂತಿಷ್ಟೆಂದು ಅನುದಾನ ಬಿಡುಗಡೆ ಮಾಡಬೇಕು.  ಇಂತಹ ಬೆಳೆ ವಿಮೆಯನ್ನು ಸರಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು.ಅಕಸ್ಮಾತ್ ಬೆಳೆ ನಾಶವಾದರೆ  ವಿಮೆಯ ಪರಿಹಾರ ಮೊತ್ತವನ್ನು ಮೊದಲೇ ಅಂದಾಜಿಸಿದರೀತಿಯಲ್ಲಿ  ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಬೇಕು. ಬೆಳೆನಷ್ಟದ ಬಗ್ಗೆ ಅಧಿಕೃತವಾಗಿ ಪ್ರಮಾಣ ಪತ್ರ ನೀಡುವುದಕ್ಕೆ  ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಜ್ಞರುಗಳ ಒಂದು ಸಮಿತಿ ಮಾಡಿ  ಗರಿಷ್ಠ ಮೂರುದಿನಗಳಲ್ಲಿ ಈ ವರದಿ ನೀಡುವ ಕಾನೂನು ಜಾರಿಗೊಳಿಸಬೇಕು. ಹೀಗೆ ವರದಿ ನೀಡಲು ವಿಫಲವಾದರೆ ಆ ಸಮಿತಿಗಳವರೆ ಪರಿಹಾರದ ಹಣವನ್ನು ನೀಡಬೇಕೆನ್ನುವ ಷರತ್ತನ್ನು ವಿದಿಸಬೇಕು. ಅಂತಹ ಸಮಿತಿಯಲ್ಲಿ ಸ್ಥಳೀಯ ಗ್ರಾಮಲೆಕ್ಕಿಗ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳ ಮುಖ್ಯಸ್ಥರು ಇರುವಂತೆ ನೋಡಿಕೊಂಡು ತಹಶೀಲ್ದಾರ್ ಇಂತಹ ಸಮಿತಿಯ ಅದ್ಯಕ್ಷರಾಗಿರುವಂತೆ ನಿಯಮ ರೂಪಿಸಬೇಕು.ಹೀಗೆ ಬೆಳೆ ನಷ್ಟದ ಪರಿಹಾರ ನೀಡಲು ಬೇಕಾದ ಮೊತ್ತವನ್ನು ವಿಮಾ ಕಂತುಗಳಿಂದ ಸಂಗ್ರಹಿಸುವುದರ ಜೊತೆಗೆ ಸರಕಾರವೂ ಆಯವ್ಯಯದಲ್ಲಿ ಸಾಕಷ್ಟು ಅನುದಾನ ಒದಗಿಸ ಬೇಕು.  ಅಗತ್ಯವೆನಿಸಿದರೆ ಕೃಷಿ ಇಲಾಖೆಯಲ್ಲಿಯೇ ಇದಕ್ಕೊಂದು ಪ್ರತ್ಯೇಕ ವಿಭಾಗವನ್ನು ರಚಿಸಿ, ಕೃಷಿಯಲ್ಲಿ ಪಧವೀದರರಾಗಿರುವವರನ್ನು ನೇಮಕ ಮಾಡಬಹುದು. ತನ್ಮೂಲಕ ಕೃಷಿ ಪಧವೀದರರಿಗೆ ಉದ್ಯೋಗಾವಕಾಶವನ್ನೂ ಒದಗಿಸಬಹುದಾಗಿದೆ. ಇಂತಹದೊಂದು ಬೆಳೆವಿಮಾ ಯೋಜನೆಯನ್ನು ಜಾರಿಗೆ ತಂದಲ್ಲಿ ಶೇಕಡಾ ತೊಂಭತ್ತೈದರಷ್ಟು ಆತ್ಮಹತ್ಯೆಗಳನ್ನು ನಿಲ್ಲಿಸಬಹುದಾಗಿದೆ. ಇಲ್ಲಿ ನಾನು ಪ್ರಸ್ತುತ ಪಡಿಸಿದ ಯೋಜನೆಯ ವಿವರಗಳಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳು ಇರಬಹುದಾರೂ ತಜ್ಞರುಗಳ ಸಮಿತಿಯೊಂದು ಇಂತಹ ಯೋಜನೆಯನ್ನು ಇನ್ನೂ ಸರಳೀಕರಿಸಿ ತಳಮಟ್ಟದಲ್ಲಿ ಜಾರಿಗೆ ತರಬಹುದಾಗಿದೆ.ಇದಕ್ಕಾಗಿ ಸರಕಾರ ಕೃಷಿಯನ್ನು ನಿಜವಾದ ಅರ್ಥದಲ್ಲಿ ಅದ್ಯಯನ ಮಾಡಿರುವ ವಿದ್ವಾಂಸರುಗಳನ್ನು, ವಿಮಾ ಕ್ಷೇತ್ರದಲ್ಲಿನ ಅನುಭವಿಗಳನ್ನು, ರೈತ ಮುಖಂಡರುಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಇಂತಹದೊಂದು ಬೆಳೆವಿಮೆಯ ಯೋಜನೆಯನ್ನು ರೂಪಿಸಿಕೊಡುವಂತೆ ಹೇಳಬಹುದಾಗಿದೆ. ಒಂದು ಪ್ರಜಾಸತ್ತಾತ್ಮಕ ಸರಕಾರಕ್ಕೆ ಇದೇನು ತೀರಾ ದೊಡ್ಡವಿಚಾರವಲ್ಲ, ನಿಜ. ಆದರೆ ನಮ್ಮ ಸರಕಾರಗಳನ್ನು ನೆಸುವ ರಾಜಕಾರಣಿಗಳಿಗೆ ಈ ಬಗ್ಗೆ ಇಚ್ಚಾಶಕ್ತಿ ಇರಬೇಕಾಗುತ್ತದೆ.

ರೈತರಿಗೆ ನೀಡುವ ಬೆಳೆಸಾಲ

   ಇವತ್ತು ನಮ್ಮ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಖಾಸಗಿಯವರಿಂದ ಪಡೆದ ಸಾಲದ ಬಡ್ಡಿ ಕಟ್ಟಲಾಗದೆ ಹೋಗುವುದಗಿದೆ. ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಸರಕಾರವೇ ಮುಂದೆ ನಿಂತು ರೈತರ ಬೆಳೆವಿಮೆಯಿಂದ ಸಿಗಬಹುದಾದ ಪರಿಹಾರವನ್ನು ಅದು ನೀಡುವ ಸಾಲಕ್ಕೆ ಗ್ಯಾರಂಟಿಯಾಗಿ ನೀಡುವ ಪದ್ದತಿಯನ್ನು ಅಳವಡಿಸಿಕೊಂಡು ಈ ಬಗ್ಗೆ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಎಷ್ಟು ಸಾಲ ನೀಡಬೇಕು ಎನ್ನುವುದರ ಬಗ್ಗೆಯೂ ಬೆಳೆವಿಮೆ ಮಾಡುವಾಗ ಅಂದಾಜಿಸಿದ್ದ ವೆಚ್ಚದ ಆಧಾರದ ಮೇಲೆಯೇ ಬ್ಯಾಂಕುಗಳು ಸಾಲ ನೀಡುವುದನ್ನು ಕಡ್ಡಾಯಗೊಳಿಸಬೇಕು. ಹೀಗೆ ನೀಡುವ ಸಾಲಗಳು ಸದುಪಯೋಗವಾಗುವಂತೆ ರೈತರು ಖರೀಧಿಮಾಡುವ ಬೀಜ ಗೊಬ್ಬರಗಳನ್ನು ಪೂರೈಸುವವರಿಗೆ ಚೆಕ್ ರೂಪದಲ್ಲಿಯೇ ಬ್ಯಾಂಕಿನಿಂದ ಹಣ ಸಂದಾಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ರೈತರು ದೊರೆತ ಹಣವನ್ನು ಬೇರೆ ಉದ್ದೇಶಗಳಿಗೆ ವ್ಯಯಿಸುವುದು ತಪ್ಪಿದಂತಾಗುತ್ತದೆ.

   ಇವೆಲ್ಲವುಗಳಿಗೆ ಪೂರಕವಾಗುವಂತೆ ಪ್ರತಿ ಗ್ರಾಮದ ಕೃಷಿ ಸಹಕಾರ ಸಂಘಗಳಲ್ಲಿಯೂ ರೈತರ ಭೂಮಿ ಬೆಳೆ ಇತ್ಯಾದಿಗಳನ್ನು ಕಂಪ್ಯೂಟರಿಕರಣಗೊಳಿಸಬೇಕು. ಸ್ಥಳೀಯವಾಗಿ ಕಂಪ್ಯೂಟರ್ ಕಲಿತ ಯುವಕ ಯುವತಿಯರನ್ನು ಇದಕ್ಕೆ ನೇಮಕ ಮಾಡಿಕೊಳ್ಳುವುದರಿಂದ ರೈತರ ನಿರುದ್ಯೋಗ ನಿವಾರಣೆಯು ನಿವಾರಣೆಯಾದಂತಾಗುತ್ತದೆ.

With 15,000 Farmer Suicides Every Year, Agriculture Sector Needs Govt's  Focus

    ರೈತರ ಆತ್ಮಹತ್ಯೆ ತಪ್ಪಿಸಲು ನಾನು ಹೇಳಿದ ಮೇಲಿನ ಅಂಶಗಳಿಂದಲೇ ಸಾದ್ಯವಿಲ್ಲವಾದರೂ, ರೈತರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಂತೂ ಆಗುವುದರಲ್ಲಿ ಅನನುಮಾನವಿಲ್ಲ.  ನಮ್ಮ ರೈತ ಸಂಘಟನೆಗಳು ಇಂತಹ ಯೋಜನೆಗಳ ಬಗ್ಗೆ ಕರಡು ಪ್ರತಿಯೊಂದನ್ನು ರಚಿಸಿ ಸರಕಾರದ ಮುಂದಿಟ್ಟು ಅದನ್ನು ಅನುಷ್ಠಾನಗೊಳಿಸುವಂತೆ ಹೋರಾಡಬೇಕಿದೆ. ಈ ವಿಚಾರದಲ್ಲಿಯಾದರು ನಮ್ಮ ರೈತ ಮುಖಂಡರುಗಳು ತಮ್ಮ ಪ್ರತಿಷ್ಠೆಯನ್ನು ಮರೆತು ಒಂದಾಗಿ ಹೋರಾಡಬೇಕಾಗಿದೆ. ಇಲ್ಲದೇ ಹೋದರೆ ಭವಿಷ್ಯದಲ್ಲಿ ರೈತ ಹೋರಾಟಗಳೆಂದರೆ  ಜನರ ದೃಷ್ಠಿಯಲ್ಲಿ ಅಣಕು ಪ್ರದರ್ಶನಗಳಾಗಿ ಪರಿವರ್ತನೆಗಳಾಗಲಿವೆ. ಸರಕಾರಗಳು ಅಷ್ಟೆ ಅನ್ನ ನೀಡುವ ರೈತರನ್ನು ನಿರ್ಲಕ್ಷಿಸದೆ ಇಂತಹ ರೈತಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ  ಯೋಚಿಸಬೇಕಾಗಿದೆ.

*********

ಕುಸಮ

Leave a Reply

Back To Top