ಎರಡು ಪತ್ರಗಳು
ಪತ್ರ ಒಂದು
[6:27 pm, 18/10/2020] NAGRAJ HARAPANALLY: ಸಂಗಾತಿಯ ನೆನೆಯುತ್ತಾ….
ಹಿರಿಯ ಸಂಗಾತಿ ಮಧುಸೂದನ್ ಸರ್ ಗೆ ನಮಸ್ಕಾರಗಳು..
ಸಂಗಾತಿ ಕನ್ನಡ ವೆಬ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಾನು ಸಂಗಾತಿಯ ಭಾಗವಾದುದು ಈ ವರ್ಷದ ಮಾರ್ಚನಲ್ಲಿ. ಮಧುಸೂದನ್ ಸರ್ ನನ್ನ fb ಗೆಳೆಯರು.ಹಿರಿಯರು .ಆದರೆ ಕನ್ನಡ ವೆಬ್ ಮಾಡಿದ್ದು ಗೊತ್ತಿರಲಿಲ್ಲ. ನನ್ನ ಪತ್ರಿಕೆ ಕೆಲಸ ,ಪತ್ರಕರ್ತ ವೃತ್ತಿ ಕಾರಣವಾಗಿ .ಗೆಳೆಯ ಮೋಹನ್ ಗೌಡನ ಬರಹ ಸಂಗಾತಿಯಲ್ಲಿ ಪ್ರಕಟವಾಗಿತ್ತು. ಕುತೂಹಲದಿಂದ ಅವನ ಬರಹ ಓದಿದೆ. ವಿಳಾಸ ಹುಡುಕಿದೆ. ಮೋಹನ್ ನನಗೆ ಸಂಗಾತಿಯ ಪರಿಚಯಿಸಿದ. ಹಾಗೂ ಮಧುಸೂದನ್ ಸರ್ ನಂಬರ್ ಪಡೆದು ಕವಿತೆ ಕಳಿಸಲು ಪ್ರಾರಂಭಿಸಿದೆ. ನಂತರ ನಮ್ಮ ಸ್ನೇಹ ಗಾಢವಾಯಿತು.ಚರ್ಚೆಗಳಾದವು. ರಹಮತ್ ತರಿಕೆರೆ ಸರ್ ಅವರನ್ನು ಕರೆತಂದೆವು. ನಂತರ ” ದುರಿತಕಾಲದ ದನಿ ” ತಲುಪಿತು. ಅದನ್ನು ಓದಿದ ಮೇಲೆ ಕನ್ನಡದ ಸಾಂಸ್ಕೃತಿಕ ಲೋಕ ಮಧುಸೂದನ್ ಅವರಂತಹ ಆಗ್ನಿ ಕುಂಡದ ಕವಿಯನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿರುವುದು ತಿಳಿಯಿತು. ನಂತರ ನನ್ನ ಕಾಯಕ ನಾ ಮಾಡುತ್ತಲೇ…ಮಧುಸೂದನ್ ಸರ್ ಮತ್ತೂ ಹತ್ತಿರವಾದರು. ಮುಖಾಮುಖಿ ಅಂಕಣ ಪ್ರಾರಂಭಿಸಲು ಅವಕಾಶ ನೀಡಿದರು. ಕವಿಗಳ ಮನಸ್ಥಿತಿ, ಅವರ ಒಲವು ನಿಲುವು ನಿಷ್ಠುರತೆ ತಿಳಿಯಲು ಮುಖಾಮುಖಿ ಸಹಾಯವಾಯಿತು. ಇದರಿಂದ ಸಂಗಾತಿಗೆ ಕನ್ನಡ ಕಾವ್ಯಲೋಕದ ನಡೆ ಏನು ಎತ್ತ ಎಂದು ಅರಿಯಲು ಸಹಾಯ.ಮುಂದೆ ಸಾಹಿತ್ಯದ ವಿದ್ಯಾರ್ಥಿಗಳು ನಮ್ಮ ಕವಿಗಳ ರಾಜಕೀಯ ನಿಲುವು ಏನು? ಅವರಿಗೆ ದೇವರು ಧರ್ಮ ದೇಶ ಜನರ ಬಗ್ಗೆ ಏನು ನಿಲುವು ಇದ್ದವು ಎಂಬ ಸಂಗತಿ ಅಧ್ಯಯನ ಮಾಡಿದರೆ ಸಂಗಾತಿ ವೆಬ್ ಹುಡುಕಬೇಕು. ಇದು ನಮ್ಮ ಉದ್ದೇಶ. ಸಂಗಾತಿ ಸಂಪಾದಕರು ಈ ಸೂಕ್ಷ್ಮ ಅರಿತೇ ಈ ಅಂಕಣಕ್ಕೆ ಅವಕಾಶ ನೀಡಿದರು ಎಂಬುದು ನನ್ನ ಗ್ರಹಿಕೆ.ಸಂಗಾತಿ ನೂರಾರು ಹೊಸ ಲೇಖಕರಿಗೆ ವೇದಿಕೆಯಾಗಿದೆ. ಎಲ್ಲ ಪಂಥದವರು ಇದ್ದಾರೆ. ಜೀವವಿರೋಧಿ ನಿಲುವು ಬಿಟ್ಟು ಉಳಿದೆಲ್ಲಾ ಬರಹ ಇಲ್ಲಿ ಪ್ರಕಟವಾಗಿವೆ. ಆಗುತ್ತಿವೆ. ಅದೇ ಸಂಗಾತಿ ವೆಬ್ ಹೆಚ್ಚುಗಾರಿಕೆ. ಇದನ್ನು ವಿನಯದಿಂದ ಇಲ್ಲಿ ಸ್ಮರಿಸುವೆ.
ಸಂಗಾತಿ ವೆಬ್ ಕನ್ನಡ ಸಾಹಿತ್ಯ ಲೋಕದ ಬೆಳಕಾಗಲಿ.
———————————————-ನಾಗರಾಜಹರಪನಹಳ್ಳಿ
ಪತ್ರ-ಎರಡು
ಪ್ರೀತಿಯ ಕ.ಮ.ಮಧುಸೂದನ್ ಸರ್ ಅವರಿಗೆ ನಮಸ್ಕಾರ..
ಮೊದಲಿಗೆ ಯಶಸ್ವಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ನಮ್ಮೆಲ್ಲರ ಹೆಮ್ಮೆಯ “ಸಂಗಾತಿ” ಗೆ ಅದರ ಸಾರಥ್ಯ ವಹಿಸಿರುವ ಮಧುಸೂದನ್ ಸರ್ ಅವರಿಗೂ ಅಭಿನಂದನೆಗಳು.
ಗೆಳೆಯ ಮೋಹನ್ ಗೌಡ ಹೆಗ್ರೆ ಅವರ ಮೂಲಕ ಪರಿಚಯವಾದ ‘ಸಂಗಾತಿ’ ನಮ್ಮ ಮನಸು ಭಾವನೆಗಳ ಭಾಗವಾಗಿ ನಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯಾಯಿತು.ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ (ಪ್ರಜಾವಾಣಿ ಹೊರತು ಪಡಿಸಿ) ನಿಂತು ಹೋಗಿ ಕವಿತೆಗಳು ಪ್ರಕಟವಾಗುವುದೆಲ್ಲಿ ಎಂದು ಯೋಚಿಸುತ್ತಿರುವಾಗ ಓಯಾಸಿಸ್ ನಂತೆ ಬಂದು ನಮ್ಮೆಲ್ಲರ ಆವರಿಸಿಕೊಂಡು ನಮ್ಮ ಸಾಹಿತ್ಯದ ಅಂತರ್ಜಲ ಬತ್ತದಂತೆ ಜೀವಂತವಾಗಿರಿಸಿದ್ದು ನಮ್ಮ ಸಂಗಾತಿ ಎಂದರೆ ಅತಿಶಯೋಕ್ತಿಯಲ್ಲ.ಈ ಮೂಲಕ ಹಲವಾರು ಹೊಸ ಕವಿಗಳು ಉದಯವಾದರು.ಕನ್ನಡದ ಪ್ರಬುದ್ಧ ವಿಮರ್ಶಕರಾದ ರಹಮತ್ ತರಿಕೆರೆಯಂತವರು ಬರೆಯಲು ತೊಡಗಿ ನಮಗೆ ಇನ್ನಷ್ಟು ಸುಪರಿಚಿತವಾಯಿತು.ಆಮೇಲೆ ಮಧುಸೂದನ್ ಸರ್ ಅವರ ಅದ್ಭುತ ಕವಿತೆಗಳನ್ನು ಓದಿ ಪ್ರತಿಕ್ರಿಯಿಸುವ ಅವಕಾಶ ನನಗೆ ಸಿಕ್ಕಿತು. ಒಬ್ಬ ಸಂಪಾದಕರಾಗಿ ತಮ್ಮ ಕವಿತೆಗಳನ್ನು ಪ್ರಕಟಿಸಿ ವೈಭವೀಕರಿಸದೇ ಗ್ರೂಪ್‌ನಲ್ಲಿ ಓದುವ ಅವಕಾಶ ನೀಡಿದ್ದು ನಿಮ್ಮ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು.’ಸಂಗಾತಿ’ ಯನ್ನು ನಿರ್ವಹಿಸಿದ ರೀತಿ ನಿಜಕ್ಕೂ ಓದುಗರ ಮೆಚ್ಚುಗೆ ಪಡೆಯಿತು.
ಈ ಒಂದು ವರ್ಷದ ನೆನಪಿಗೆ ಪತ್ರಿಕೆಯ ಓದುಗರಿಗಾಗಿ ಕವನ,ಕಥಾ ಸ್ಪರ್ಧೆ ಮಾಡವಹುದೇನೋ..ವೈಶಿಷ್ಟ್ಯಪೂರ್ಣ ಚಿತ್ರ ಲೇಖನಗಳು,ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ವೈವಿಧ್ಯಗಳು,ವೈಜ್ಞಾನಿಕ,ವೈಚಾರಿಕ ಲೇಖನಗಳನ್ನು ಹಿರಿಯ ಲೇಖಕರಿಂದ ಆಹ್ವಾನಿಸಿ ಪತ್ರಿಕೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ನನ್ನ ಪ್ರೀತಿಯ ಸದಾಶಯ..’ಸಂಗಾತಿ’ಗೆ ಅಭಿನಂದನೆಗಳು
ಫಾಲ್ಗುಣ ಗೌಡ ಅಚವೆ