ಲೇಖನ
ಕಡಿವಾಣವೂ ಪ್ರೀತಿಯೇ!!!!!
ಮಾಲಾ ಅಕ್ಕಿಶೆಟ್ಟಿ
ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ ಕೊಟ್ಟಳು. ದಿನಾಲೂ ಶಾಲೆಯಿಂದ ಬಂದ ತಕ್ಷಣ ತನ್ನಲ್ಲಿರುವ ಪೆನ್ಸಿಲ್, ರಬ್ಬರ್, ಶಾರ್ಪನರ್ ಮತ್ತು ಕ್ರೆಯಾನ್ಸ್ ಗಳನ್ನು ತಪ್ಪದೇ ತನಗೆ ತೋರಿಸಬೇಕು, ಕಳೆದುಕೊಂಡು ಬಂದರೆ ಹೊಸ ವಸ್ತುಗಳನ್ನು ಕೊಡುವುದಿಲ್ಲವೆಂದು.ಈ ನಿಯಮವನ್ನು ತಲೆಯಲ್ಲಿ ಇಟ್ಟುಕೊಂಡ ಮಗಳು ದಿನಾಲೂ ತಪ್ಪದೆ ವಸ್ತುಗಳನ್ನು ತೋರಿಸತೊಡಗಿದಳು. ಕಳೆದುಕೊಂಡು ಅಥವಾ ಶಾಲೆಯಲ್ಲಿ ಎಲ್ಲೋ ಇಟ್ಟು ಮರೆತು ಬರುವ ಪದ್ಧತಿ ಕೊನೆಗೊಂಡಿತು.
ಈಗಿನ ಪಾಲಕರು ಮಕ್ಕಳಿಗೆ ಬೇಕೆಂದು ಎಲ್ಲವನ್ನೂ ಮಕ್ಕಳು ಕೇಳುವ ಮೊದಲೇ ಬಹುವಾಗಿ ತಂದು ಬಿಡುವ ಸಂಪ್ರದಾಯ ರೂಢಿಸಿಕೊಂಡು ಬಿಟ್ಟಿದ್ದಾರೆ. ವರ್ಷದುದ್ದಕ್ಕೂ ಒಂದು ಪೆನ್ಸಿಲ್, ಒಂದು ರಬ್ಬರ್, ಒಂದು ಶಾಪ್ ನರ್, ಒಂದು ಕ್ರೆಯಾನ್ ಬಾಕ್ಸ್ ಇದ್ದರೆ ಸಾಕು. ಆದರೆ ಪಾಲಕರು ಡಜನ್ಗಟ್ಟಲೆ ವಸ್ತುಗಳನ್ನು ತಂದಿಟ್ಟಿರುತ್ತಾರೆ. ಅವು ಎಲ್ಲಿಟ್ಟಿರುತ್ತಾರೆಂದು ಮಕ್ಕಳಿಗೂ ಗೊತ್ತು. ದಿನವೂ ಯಾವುದಾದರೂ ವಸ್ತುವನ್ನು ಕಳೆದುಕೊಂಡು ಬಂದು ಪಾಲಕರಿಗೆ ಹೇಳದೆಯೇ ಹೊಸದನ್ನು ಪ್ಯಾಕೆಟ್ ನಿಂದ ಒಡೆದು ಉಪಯೋಗಿಸಲು ಪ್ರಾರಂಭಿಸುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಡಜನ್ ಡಜನ್ ವಸ್ತುಗಳು ಮಾಯವಾಗಿರುತ್ತವೆ. ಮತ್ತೆ ಬೇಕು ಎಂದು ಹಟ ಹಿಡಿದಾಗ ಮಾತ್ರ, ಸಾಮಾನು ಖಾಲಿಯಾಗಿದೆ ಎಂಬ ಅರಿವು ಪಾಲಕರದ್ದಾಗುತ್ತದೆ. ಅಲ್ಲಿಯವರೆಗೂ ಎಷ್ಟಿತ್ತು?ಹೇಗೆ ಖಾಲಿಯಾಯಿತು? ಎಂಬುದು ಗೊತ್ತೇ ಆಗಿರುವುದಿಲ್ಲ.
ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಹಟ ಎನ್ನುವ ಶಬ್ದ ಎಂದೂ ಶಬ್ದಕೋಶದಲ್ಲಿ ಇರಲೇ ಇಲ್ಲ. ಪಾಲಕರು ಕೊಡಿಸಿದ ವಸ್ತುಗಳನ್ನು ಅವು ಇನ್ನೂ ಉಪಯೋಗಕ್ಕೆ ಬರಲ್ಲ ಎನ್ನುವವರಿಗೆ ಬಳಸಲಾಗುತ್ತಿತ್ತು. ಜೂನ್ ತಿಂಗಳಲ್ಲಿ ಸಾಮಾನುಗಳನ್ನು ಕೊಡಿಸಿದರೆ ಮುಗಿಯಿತು ಮುಂದೆ ಮುಂದಿನ ಜೂನ್ನಲ್ಲಿ ಶಾಲೆಯ ವಸ್ತುಗಳನ್ನು ಖರೀದಿಸಲಾಗುತ್ತಿತ್ತು. ಕಳೆದುಕೊಂಡು ಬಂದ ಉದಾಹರಣೆಗಳು ತುಂಬಾ ಕಡಿಮೆ. ಜೊತೆಗೆ ವೆರೈಟಿ,ವೆರೈಟಿ ಅಥವಾ ಪ್ರತಿದಿನಕ್ಕೆ ಹೊಸದನ್ನು ಉಪಯೋಗಿಸಬೇಕೆಂಬ ಹಟವೂ ಇರಲಿಲ್ಲ. ಮೇಲಾಗಿ ಆಗಿನ ಪಾಲಕರು ಎಷ್ಟು ಬೇಕೋ ಅಷ್ಟೇ ತಂದು ಮಕ್ಕಳಿಗೆ ಕೊಡುತ್ತಿದ್ದರು. ಡಜನ್ಗಟ್ಟಲೆ ತಂದ ರೂಢಿಯೇ ಇರಲಿಲ್ಲ. ವರ್ಷಕ್ಕೆ ಇಂತಿಷ್ಟೇ ಎಂಬ ಕಟ್ಟುನಿಟ್ಟು ಇದ್ದುದರಿಂದ ವಸ್ತುಗಳ ಉಪಯೋಗ ಮತ್ತು ರಕ್ಷಣೆ ಸರಿಯಾಗಿಯೇ ಆಗುತ್ತಿತ್ತು.
ಕಾಲ ಬದಲಾದಂತೆ ಪಾಲಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳು ಬೇಡಿದ್ದೆಲ್ಲವನ್ನು ಕೊಡಿಸುವುದು ತಮ್ಮ ಧರ್ಮ ಎಂದು ತಿಳಿದು, ಕೇಳಿದ್ದು ಕೇಳದೆ ಇದ್ದದ್ದನ್ನೆಲ್ಲ ಕೊಡಿಸುವುದನ್ನು ಪಾಲಕರು ಅನುಸರಿಸುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಕೊಡಿಸುವುದು ಉತ್ತಮ. ಜೊತೆಗೆ ಅದರ ಉಪಯೋಗ ಸರಿಯಾಗಿ ಆಗುತ್ತದೆಯೋ ಇಲ್ಲವೋ ಅನ್ನುವುದನ್ನು ಪರೀಕ್ಷಿಸುತ್ತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ದುಡ್ಡಿನ ಮಹತ್ವ ತಿಳಿಯುವಂತೆ ಮಾಡಬೇಕು.
ಇಗೀಗ ಡ್ರಗ್ಸ ಜಾಲದಲ್ಲಿ ಸಿಕ್ಕಿಕೊಂಡವರನ್ನ ನೋಡಿದರೆ ಇವರಿಗೆ ದುಡ್ಡು ಸಿಕ್ಕುವುದು ಎಷ್ಟು ಸಲೀಸು!!!ಮೈಯೊಳಗಿನ ರಕ್ತವನ್ನು ಬೆವರಿನಂತೆ ಸುರಿಸಿದರೂ ಬಡವನಿಗೆ ಎರಡು ಹೊತ್ತಿನ ಕೂಳು ದುರ್ಲಭ.ಇಂಥ ಬಡತನವನ್ನು ಉಂಡುಟ್ಟವರಿಗೆ,ಉತ್ತಮ ನೌಕರಿ, ತಮ್ಮದೊಂದು ಮನೆ,ಮಕ್ಕಳಿಗೆ ವಿದ್ಯಾಭ್ಯಾಸ ಕೊನೆಗೆ ಸಾಧ್ಯವಾದರೆ ಕಾರ್ ಒಂದು ಖರೀದಿ.ಇವಷ್ಟೇ ಕನಸುಗಳು.ಶ್ರೀಮಂತಿಕೆಯಲ್ಲೇ ಹುಟ್ಟಿದವರಿಗೆ, ಇಲ್ಲಾ ಇಗೀಗ ಶ್ರೀಮಂತ ಆದವರಿಗೆ ಅಥವಾ ತಾವಾಗಿಯೇ ದುಡ್ಡು ಗಳಿಸಿ ಪ್ರಾಥಮಿಕ ಹಂತದ ಎಲ್ಲಾ ಆಸೆಗಳು ಸಂಪೂರ್ಣಗೊಂಡವರಿಗೆ ದುಡ್ಡು ಕಷ್ಟವಲ್ಲ.ಇಂಥವರೇ ವ್ಯಸನಿಗಳಾಗುತ್ತಾರೆ.
ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿ ಎಂದುಕೊಂಡಿದ್ದಾರೆ ಕೊಡಿಸದಿದ್ದರೆ ಪ್ರೀತಿ ಇಲ್ಲ ಅಥವಾ ಕಡಿಮೆ ಎಂದು ಮಕ್ಕಳು ತಿಳಿದಾರು ಎಂಬ ಭಯದಲ್ಲೇ ಕೊಡಿಸುತ್ತಾರೆ. ಬೇಡಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿಯೇ? ಹಟ ಯಾವಾಗಲೂ ಗೆಲ್ಲಬೇಕೆ? ಇಲ್ಲ ಬೇಡಿದ್ದೆಲ್ಲವನ್ನೂ ಕೊಡಿಸದಿರುವುದು ಪ್ರೀತಿ ಎಂಬುದನ್ನು ಪಾಲಕರು ತೋರಿಸಬೇಕು.ಕಡಿವಾಣವೂ ಪ್ರೀತಿಯ ಸಂಕೇತ. ಯಾವ ವಸ್ತುವೂ ಜಗತ್ತಿನಲ್ಲಿ ಪುಗ್ಗಟ್ಟೇ ಸಿಗಲ್ಲವೆಂದು ತಿಳಿಹೇಳಬೇಕಾಗಿದೆ.ಹಣದ, ದುಡಿತದ ಮಹತ್ವವನ್ನು ಹೇಳಿಕೊಡಬೇಕು. ಬೇಕಾಬಿಟ್ಟಿ ವಸ್ತುಗಳನ್ನು ತೆಗೆದುಕೊಂಡು, ಒಂದು ದಿನವೂ ಉಪಯೋಗಿಸದೇ ಮತ್ತೆ ಹೊಸದು ಬೇಕೆನ್ನುವುದಕ್ಕೆ ಲಗಾಮ ಮತ್ತು ಹಟ ಒಳ್ಳೆಯದಲ್ಲವೆಂದು ತಿಳಿಹೇಳಬೇಕು.
***********************************************************
ತುಂಬಾ ಉತ್ತಮ ವಿಷಯವನ್ನು ವಿವರಿಸಿರುವಿರಿ… ಬಹುಶ್ಯ ಇಂದಿನ ಮಕ್ಕಳು ಹೆತ್ತವರನ್ನ ಕಲ್ಪವೃಕ್ಷ ಕಾಮಧೇನು ಗಳಂತೆ ಭಾವಿಸಿದ್ದಾರೆ…
ಕೆಲವು ಕಡೆ ಹೆತ್ತವರ ಪ್ರೀತಿ,ಇನ್ನು ಕೆಲವು ಕಡೆ ಮಕ್ಕಳ ಹಠವೇ ಇದಕ್ಕೆ ಕಾರಣ…ನಿಜಕ್ಕೂ ಪ್ರೀತಿಯ ಕಡಿವಾಣ ದ ಅತ್ಯಗತ್ಯವಿದೆ
ಧನ್ಯವಾದಗಳು