ಲಹರಿ
ಅವಳೇ ಕಾರಣ...
ಸ್ಮಿತಾ ಭಟ್
ಏನೇ ಹೇಳಿ ಮಕ್ಕಳನ್ನು ಸಂಭಾಳಿಸುವ ವಿಷಯದಲ್ಲಿ ತಾಯಿಗೇ ಹೆಚ್ಚಿನ ಪ್ರಶಸ್ತಿಗಳು ಸಲ್ಲಬೇಕು.ಎಲ್ಲದಕ್ಕೂ ಅಮ್ಮಾ ಎಂದೇ ಕೂಗುವ ಕಂದಮ್ಮಗಳನ್ನು ತೃಪ್ತಿ ಪಡಿಸುವುದು ಸುಲಭದ ವಿಷಯವಂತೂ ಅಲ್ಲ.
ಏಕ ಕಾಲದಲ್ಲಿ ನೂರು ಮಕ್ಕಳನ್ನು ಗಾಂಧಾರಿ ಹೇಗೆ ಸಂಭಾಳಿಸಿದಳೋ ಎಂದು, ಒಂದೇ ಮಗುವಿನ ತಾಯಿಯಾದ ನನಗೆ ಸದಾ ಕಾಡುವ ಸಂಗತಿ.
“ಅಯ್ಯೋ ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ”
ಈಗಿನ ಕಾಲದ ಮಕ್ಳೇ ಹಾಗೋ, ಪಾಲಕರೇ ಹಾಗೋ ಅನ್ನುವ, ಅವಕಾಶ ವಂಚಿತರಾಗದಂತೆ ಹಿರಿಯರಾಡುವ ಮಾತುಗಳು
ನೇರ ತಾಕುವುದು ತಾಯಿಯನ್ನೇ.
“ತಾಯಿಯಂತೆ ಕರು ನೂಲಿನಂತೆ ಸೀರೆ”ಎಂದು
ಗುಣಗಾನದಲ್ಲೋ,ಅವಹೇಳನದಲ್ಲೋ , ಅನಾವರಣ ವಾಗುವುದು ಒನ್ಸ್ ಅಗೇನ್ ತಾಯಿ.
ಗಂಡನ ಮನೆಯಲ್ಲಿ ಕೆಲಸ ಕಾರ್ಯ, ಅಡುಗೆ,
ಸೇವೆ,ಸಹಕಾರ, ಯಾವುದರಲ್ಲಿ ವ್ಯತ್ಯಾಸ ವಾದರೂ ಅಪ್ಪನ ಮನೇಲಿ ತಾಯಿ ಏನೂ ಕಲಿಸಿಲ್ವೆನೋ ಅಂತಲೇ ರಾಗ ತೆಗೆಯುವುದು.
ಒಟ್ಟಿನಲ್ಲಿ
ಕೆಟ್ಟದಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವಂತೆ ತಾಯಿ ಎನ್ನುವವಳು, ಮಕ್ಕಳ ವಿಷಯದಲ್ಲಿ ಚೌತಿ ಚಂದ್ರನ ನೋಡಿದವಳಂತೆ ಬದುಕುತ್ತಿರುತ್ತಾಳೆ.
ಈ ಕರೋನಾ ಕಾಲದ ಕಾರಣದಿಂದ ನಿರಂತರವಾಗಿ ಮಕ್ಕಳು ಮನೆಯಲ್ಲೇ ಕಳೆಯುವುದರಿಂದ ಸಂಭಾಳಿಸಿವುದಂತೂ ಅತೀವ ಕಷ್ಟದ ಕೆಲಸ. ಮತ್ತದು ತಾಯಂದಿರ ಹೆಗಲಮೇಲೆ ಸದಾ ಹೊರುವ ಹೊರೆಯಾಗಿದೆ.
ಚಿಕ್ಕ ಮಕ್ಕಳಿಗೆ ಗದರಿಯಾದರೂ ಮಾತು ಕೇಳಿಸಬಹುದು. ಆದರೆ ದೊಡ್ಡ ಮಕ್ಕಳು ಹಾಗಲ್ಲ, ಅವರು ನಿರಂತರವಾಗಿ ಮನೆಯೊಳಗೇ ಇರುವದರಿಂದ ಡಿಪ್ರೆಶನ್ ಗೂ ಕೂಡಾ ಒಳಗಾಗುತ್ತಾರೆ.ಪ್ರಪಂಚಕ್ಕೆ ತರೆದು ಕೊಳ್ಳುವ ವಯಸ್ಸಾದ್ದರಿಂದ ಯಾವ ಸಮಯವನ್ನೂ ಅವರು ನಾಲ್ಕು ಗೋಡೆಯ ಮಧ್ಯೆ ಕಳೆಯಲು ಬಯಸುವುದಿಲ್ಲ.ಶಾಲೆ ಸ್ನೇಹಿತರು.ಆಟ ಓಟ ಪಾಠ ಎನ್ನುತ್ತ ಸ್ವಚ್ಛಂದವಾಗಿ ಬೆಳಯಲು ಬಯಸುತ್ತಾರೆ. ಅದು ಸರಿ ಕೂಡಾ.
ಆದರೆ ಈಗ ಅನಿವಾರ್ಯವಾಗಿ ಮನೆಯಲ್ಲೇ ನಿರಂತರವಾಗಿ ಕಾಲಕಳೆಯುಬೇಕಾಗಿದೆ ಆದ್ದರಿಂದ ಹಿರಿಯರ “ಬೇಡ””ಬೇಡ”, ಗಳೇ ಹೆಚ್ಚು ಕಿವಿಗೆ ತಾಕಿ ಎಲ್ಲದಕ್ಕೂ ತನ್ನ ಕಟ್ಟು ಪಾಡುಗಳಿಗೆ ಒಳಪಡಿಸುತ್ತಿದ್ದಾರೆ ಅನ್ನಿಸಲು ಶುರುವಾಗುತ್ತದೆ.ಅದೆಂತಹ ಪ್ರೀತಿಯೇ ಆದರೂ ಅವಡುಗಚ್ಚಿಕೊಂಡೇ ಇದ್ದರೆ ಉಸಿರುಗಟ್ಟುವುದು ನಿಜವಾದ್ದರಿಂದ
ಬಿಡುಗಡೆಯನ್ನು ಬಯಸುವ ವಯಸ್ಸೂ ಜೊತೆ ಸೇರಿ ಮುಗಿಬೀಳಲು ಶುರು ಮಾಡುತ್ತಾರೆ.
ಸ್ವಲ್ಪ ತಿದ್ದು ನೋಡುವಾ ಮಕ್ಕಳನ್ನು,
ಏನಿದು ಸಂಸ್ಕಾರವೇ ಇಲ್ದಾಂಗೆ ಆಡ್ತಾರೆ.
ನಿನ್ನ ಅತಿಯಾದ ಮುದ್ದೇ ಕಾರಣ ಇದ್ಕೆಲ್ಲ, ಎಂದು ಹೊರನಡೆಯುವ ಅಪ್ಪಂದಿರಿಗೆ ಅಮ್ಮಂದಿರ ಕಷ್ಟ ಎಂದೂ ಅರ್ಥವಾಗುವದಿಲ್ಲ.
ಅಯ್ಯೋ,, ಬಯ್ಸ್ಕೊ ಬೇಡ್ವೊ, ಅಪ್ಪನ ಹತ್ರ ಸ್ವಲ್ಪ ಹೇಳಿದ ಮಾತು ಕೇಳೋ ಎಂದು ಪಿಸು ದನಿಯಲ್ಲಿ ಅಲವತ್ತು ಕೊಳ್ಳುತ್ತಾಳೆ ಅಮ್ಮ.
ನನ್ನದೇ ಮಗ ಒಂದಿನ “ಈ ಶಾಲೆ ಆದ್ರೂ ಯಾವಾಗ ಶುರುವಾಗುತ್ತೋ ಏನೋ” ನಿಮ್ಗಳ ಹತ್ರ ಬೈಸ್ಕೊಂಡು ಬೈಸ್ಕೊಂಡು ಸಾಕಾಯ್ತು ಅಂತ ಗೊಣಗುತ್ತಿದ್ದ.
ಹೌದು ಹೆಚ್ಚಿನ ಮಕ್ಕಳೊಳಗೆ ಇಂತಹದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ.
ಏಕತಾನತೆಯಿಂದ ಕಂಗಾಲಾಗಿದ್ದಾರೆ.
ಪಾಲಕರಿಗೆ ಮಕ್ಕಳು ಇಡೀದಿನ ಮೊಬೈಲ್ ನೊಳಗೇ ಇರುತ್ತಾರೆ ಎನ್ನುವುದು ದೊಡ್ಡ ಚಿಂತೆಯಾಗಿದೆ.ಷ್ಟ್ರಿಕ್ಟ್ ಆಗಿ ಮೊಬೈಲ್ ಕೊಡದೇ ಇರೋಣ ಅಂದ್ರೆ ಓನ್ ಲೈನ್ ಕ್ಲಾಸ್ ಗಳು, ಮಕ್ಕಳು ಏನು ಮಾಡ್ತಾರೆ ಅಂತ ಕಾಯುಬೇಕಾ?! ಕೆಲಸ ಮಾಡ್ಕೋಬೇಕಾ? ಅನ್ನುವ ಸಂದಿಗ್ಧ ಅಮ್ಮನದು, ಏಕೆಂದರೆ ಏನು ಮಾಡ್ತಿದ್ದಾರೆ ಮಕ್ಕಳು ಎಂದು ನೋಡೋಕಾಗಲ್ವಾ? ಎನ್ನುವ ಸಿದ್ಧ ಪ್ರಶ್ನೆಯೊಂದು ಇರುತ್ತಾದ್ದರಿಂದ.
ಹಲವು ತಾಯಂದಿರು ಅಕ್ಷರಶಃ ಕಂಗಾಲಾಗಿದ್ದಾರೆ. ತನ್ನೆಲ್ಲ ಚಟುವಟಿಕೆಗಳನ್ನು ಕಟ್ಟಿಟ್ಟು ಹತಾಶಳಾಗಿದ್ದಾಳೆ.
ಮೊನ್ನೆ ಗೆಳತಿಯೊಬ್ಬಳು ಸಿಕ್ಕಿದ್ದಳು
ಈ ವರ್ಷ ಏನ್ ಕಥೆನೋ ಏನೋ ಶೂನ್ಯ ಅವಧಿ ಎಂದು ಘೋಷಣೆಯನ್ನೂ ಮಾಡುತ್ತಿಲ್ಲ, ಶಾಲೆನೂ ಶುರು ಮಾಡುತ್ತಿಲ್ಲ,ಬರೀ ಅಂತೆ ಕಂತೆಗಳು.
ಈ ಓನ್ ಲೈನ್ ಕ್ಲಾಸ್ ಅನ್ನೋದು ಮಕ್ಕಳಿಗೆ ಮೊಬೈಲ್ ಹಿಡ್ಕೊಂಡು ಕೂತ್ಕೋಳೊಕೆ ಒಳ್ಳೆ ಕಾರಣ ಆಗ್ಬಿಟ್ಟಿದೆ ನೋಡು.
ಈ ಅತಂತ್ರ ಪರಿಸ್ಥಿತಿಯಲ್ಲಿ ನಮ್ಮ ಮನೆ ರಣರಂಗವಾಗಿದೆ ಕಣೇ.
ಮಗನಿಗೆ ನನ್ನ ಕಂಡರೇ ಅಗಲ್ಲ,ಕಾರಣ ನಾನು ಮೊಬೈಲ ಕೊಡಲ್ಲ.
ಎಲ್ಕದಕ್ಕೂ ಸಿರ್ ಅಂತ ಸಿಡಿದು ಬೀಳ್ತಾನೆ.ಅವರಪ್ಪ ನೀನೇ ಮೊಬೈಲ್ ಕೊಟ್ಟು ಕೊಟ್ಟು ಹಾಳ್ಮಾಡಿದ್ದೀಯಾ ಅಂತ ನನ್ನೇ ಅಂತಾರೆ. ಕೊಡದೇ ಹೋದ್ರೆ ಸೂರೇ ಕಿತ್ತು ಹೋಗುವಂತೆ ಆಡ್ತಾನೆ.
ಸಲೀಸಾಗಿ ಸಿಕ್ಕೋದು ಅಮ್ಮಂದೇ ಮೊಬೈಲ್ ಅಲ್ವಾ ಮಕ್ಕಳಿಗೆ. ನಾವೇನೂ ಮೊಬೈಲ್ ಹಿಡ್ಕೊಂಡೇ ಓಡಾಡೋಕೆ ಆಗುತ್ತಾ! ಕೆಲಸದ ಗಡಿಬಿಡಿಯಲ್ಲಿ ಎಲ್ಲೋ ಒಂದ್ಕಡೆ ಇಟ್ಟು ಬಿಡ್ತೀವಿ.ಅದ್ಯಾವ್ದೋ ಗ್ಯಾಪಲಿ ಎತ್ಕೊಂಡ್ಬಿಡ್ತಾರೆ.
ಬೈಸ್ಕೊಳೋದು ಮಾತ್ರ ನಾವೇ.
ಏನೇನೋ ನಡಿತಿದೆ ಮಾರಾಯ್ತಿ ಮನೆಲಿ, ನಡೆದಿದ್ದೆಲ್ಲ ಹೇಳೋಕಾಗುತ್ತಾ ಹೇಳು ಎಂದು ಪಿಸುಗುಟ್ಟಿದಳು.
ನೀನೇ ಸರಿಯಾಗಿ ಕಲಿಸಿಲ್ಲ ಚಿಕ್ಕಂದಿನಿಂದ. ಅದ್ಕೆ ಹೀಗಾಡ್ತಾರೆ ಮಕ್ಕಳು, ಅನ್ನುವಲ್ಲಿಗೆ ಕೊನೆಯ ಮೊಳೆಯ ಸುತ್ತಿಗೆ ಪೆಟ್ಟು ನಮಗೇ ನೋಡು, ಎನ್ನುತ್ತ ಜೊತೆಗಿದ್ದ ಬರೋಬ್ಬರಿ ಮೂರು ಘಂಟೆ ಮಕ್ಕಳನ್ನು ಸಂಭಾಳಿಸುವ ಬಗ್ಗೆಯೇ ಅಲವತ್ತು ಕೊಂಡಳೆಂದರೆ, ಅವಳು ಸಂಪೂರ್ಣ ಕಂಗಾಲಾಗಿದ್ದು ನಿಚ್ಚಳವಾಗಿ ಗೋಚರಿಸುತ್ತಿತ್ತು.
ಒಂದು ಮನೆಯಲ್ಲಿ ಏನೇ ಸಂಭವಿಸಿದರೂ ಕಷ್ಟ,ಸುಖ ನೋವು ನಲಿವು. ಮಕ್ಕಳ ನಡೆ ನುಡಿ ಪ್ರತಿಯೊಂದಕ್ಕೂ ಅವಳೇ ಕಾರಣವಾಗುತ್ತಾಳೆ.
ಎನ್ನುವುದು ಅಕ್ಷರಶಃ ಸತ್ಯ.
ಚಿಕ್ಕವರಿದ್ದಾಗ ಹೆಣ್ಣಿಗೆ ಸ್ವಲ್ಪವೂ ಬಾದಿಸದ ವಿಷಯ ಮದುವೆಯಾಗಿ ಬಲಗಾಲಿಟ್ಟು ಹೊಸ್ತಿಲೊಳಗೆ ಹೊಕ್ಕ ದಿನದಿಂದ
ಒಳಿತು, ಕೆಡುಕು,ಆಗು,ಹೋಗುಗಳೆಲ್ಲ ಅವಳ ಕಾಲ್ಗುಣದಮೇಲೆ ನಿರ್ಧಾವಾಗತೊಡಗುತ್ತವೆ.
ಮಕ್ಕಳು ಹುಟ್ಟುತ್ತಿದ್ದಂತೆ ಅದು ದುಪ್ಪಟ್ಟಾಗಿ ಸಂಪೂರ್ಣ ಧರಾಶಾಹಿ ಯಾಗಿ ಬಿಡುತ್ತಾಳವಳು,
ಆರೋಗ್ಯ, ಆಟ ಪಾಟ, ಗಾಯ, ಗಲಾಟೆ,ಎಲ್ಲದಕ್ಕೂ ಅವಳಲ್ಲಿ ಉಪಸ್ಥಿತಳಿರಬೇಕು.ಮತ್ತವಳೇ ಅದರ ಜವಾಬ್ದಾರಿ ಹೊರಬೇಕು,of course
ಅಮ್ಮನಾದವಳು ಇದೆಲ್ಲವನ್ನೂ ನಿಭಾಯಿಸಲೇ ಬೇಕು. ಅದು ಅವಳ ಜನ್ಮ ಸಿದ್ಧ ಹಕ್ಕು ಮತ್ತು ಅವಕಾಶ.
ಆದರೆ ಮಕ್ಕಳ ಹೊಟ್ಟೆನೋವಿಗೂ,ಬಿದ್ದು ತರಚಿಕೊಂಡದ್ದಕ್ಕೂ, ತಾಯಿಯನ್ನೇ ಕಾರಣವಾಗಿಸಿ ಬೈಯುವುದರ ಬಗ್ಗೆ ತಕರಾರಿದೆ.
ಆದರೂ ಅವಳು
“ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ”
ಎನ್ನುವ ಜಾನಪದ ನುಡಿಗಟ್ಟಿನಂತೆ
ಎದೆಗವಚಿಕೊಂಡೇ ಪೊರೆಯುತ್ತಾಳೆ.
ತಾಯಿತಂತೆ ಸಲಹುವ ಅಪ್ಪಂದಿರೂ ಇದ್ದಾರೆ
ಆದರೆ ತೀರಾ ವಿರಳ.
ಅವರ ಕಷ್ಟಗಳೂ ತೇಟ್ ಅಮ್ಮನಂತೆ ಬಿಡಿ.
ಅಮ್ಮನಿಗಾದರೆ ದೈವದತ್ತ ವರವಾದರೂ ಇರುತ್ತದೆ.ಆದರೆ ಇಲ್ಲಿ ಅಪ್ಪನಾದವನ ಪಜೀತಿ ನಿಜಕ್ಕೂ ಶೋಚನೀಯವೇ..
ಇನ್ನು ದಾರ್ಶನಿಕರು,
ಮನೆ ಮನೆಯಲ್ಲ, ಗೃಹಿಣಿಯೇ ನಿಜವಾದ ಮನೆ, ‘ ನ ಗೃಹಂ ಗೃಹಮಿತ್ಯಾಹು ಗೃಹಿಣೀ ಗೃಹ ಮುಚ್ಯತೇ”ಎಂದಿದ್ದಾರೆ
ಹೆಣ್ಣಿಲ್ಲದೇ ಒಂದು ಮನೆ ರೂಪಗೊಳ್ಳಲು ಸಾಧ್ಯವೇ ಇಲ್ಲ. ಹೆಣ್ಣನ್ನು ಮಹಾಲಕ್ಷ್ಮಿ ಎಂದು ಮಡಿಲು ತುಂಬಿ ಮನೆ ಮನಗಳ ಒಳಗೆ ಬರಮಾಡಿಕೊಳ್ಳುತ್ತೇವೆ.ಒಳ್ಳೆಯ ಮನಸಿನಿಂದ ಸದಾ ಅವಳ ಪೊರೆಯ ಬೇಕು ಎನ್ನುತ್ತಾರೆ.
ಹೆಣ್ಣು ಪ್ರೀತಿ, ಹೆಣ್ಣು ಸಹನಾ ಧರಿತ್ರಿ,
ಎಂದೆಲ್ಲ ಹೆಣ್ಣನ್ನು ಹೊಗಳುತ್ತಾರೆ
ಮತ್ತೆ ಹಲವರು ಹೇಳುತ್ತಾರೆ.
ಹೆಣ್ಣಿನಿಂದಲೇ ಮಹಾ ಮಹಾ ಯುದ್ಧಗಳು ನಡೆದವು.
ಹೆಣ್ಣಿನಿಂದ ಮಹಾಭಾರತವೇ ನಡೆಯಿತು.
ಹೆಣ್ಣಿಂದ ರಾವಣ ಸತ್ತ.
ರಾಮ ಕಾಡಿಗೆ ಹೋದ.
ದಶರಥ ಜೀವವನ್ನೇ ತೊರೆದ
ಅವಳು ಮಾಯೆ. ಅವಳು ಮೋಹನಾಂಗಿ,
ಅವಳು ಮೋಸ,ಎಂದು.
ಹೀಗೇ ಹಲವಾರು ರೀತಿಯಲ್ಲಿ ಆರಂಭದಿಂದ ಅಂತ್ಯದ ವರೆಗೂ ಲೋಕಕ್ಕೇ ಕಾರಣವಾಗಿ ನಿಲ್ಲುತ್ತಾಳೆ ಅವಳು.
ಎಲ್ಲದಕ್ಕೂ ಅವಳನ್ನು ಬೊಟ್ಟುಮಾಡಿ ಹಳಹಳಿಸುವವರಿಗೆ ಹೇಳಬೇಕಿದೆ.
ನಾರಿ ಪರರುಪಕಾರಿ ನಾರಿ ಸ್ವರ್ಗಕ್ಕೆ ದಾರಿ|
ನಾರಿ ಸಕಲರಿಗೆ ಹಿತಕಾರಿ|ಮುನಿದರೆ
ನಾರಿಯೇ ಮಾರಿ ಸರ್ವಜ್ಞ||
ಎಂದು.
ಮಕ್ಕಳ ಆರೈಕೆ,ಪಾಲನೆ, ಪೋಷಣೆಗಳಲ್ಲಿ ಕೇವಲ ಅವಳು ಮಾತ್ರ ಕಾರಣಳಾಗುವುದಿಲ್ಲ.ಮಕ್ಕಳನ್ನು ಸಂಭಾಳಿಸುವುದು ಅತ್ಯಂತ ಸೂಕ್ಷ್ಮ ಸಂವೇದಿ ವಿಚಾರ.ಅಲ್ಲಿ ಇಡೀ ಕುಟುಂಬ,ಕುಟುಂಬದ ವಾತಾವರಣವೇ ಮುಖ್ಯ ಕಾರಣವಾಗಿ
ನಿಲ್ಲುತ್ತದೆ.
ಆದರೆ ತಾಯಿಯಾದವಳು “ತಾಯಿಯಂತೆ ಮಗಳು ನೂಲಿನಂತೆ ಸೀರೆ” ಎನ್ನುವ ವಿಚಾರವನ್ನೂ ಮರೆಯಬಾರದು.
ಚನ್ನಾಗಿ ಬರೆದಿದ್ದೀರಿ… ಮಕ್ಕಳಿಗೆ ಉಪದೇಶ ಬೇಡ ಮಾದರಿ ಮತ್ತು ಪ್ರೀತಿ ಬೇಕು ಎನ್ನುವುದನ್ನು ಎಲ್ಲರೂ ತಿಳಿದಿರಬೇಕು.