ಡಿ.ಎಸ್.ರಾಮಸ್ವಾಮಿ
ಕವಿತೆಗಳು
ಗೆ;
ಕವಿತೆಯ ಮೊಳಕೆಯೊಡೆಸುತ್ತದೆ
ನಿನ್ನದೊಂದು ನಗು, ಸಣ್ಣ ಸಂದೇಶ
ಎಂದಂದು ನಿನ್ನನ್ನು ಮರುಳುಮಾಡುವುದಿಲ್ಲ;
ಜೊತೆಗಿರದೆಯೂ ಜೊತೆಗೇ ಇರುವಾಗ.
ನಟ್ಟ ನಡುವೆ ಎದ್ದು ಹೋಗುವ ಮಾತಿಗೆ
ಖಬರಿಲ್ಲ, ಅನ್ನುವುದಕ್ಕೆ ಪುರಾವೆ
ಯೊದಗಿಸಲಾರೆ, ಬದುಕ ದುರಿತದ ನಡುವೆ.
ಆಡದೇ ಉಳಿದ ಮಾತುಗಳು ಎದೆ ತುಂಬ
ಉಳಿದದ್ದಕ್ಕೆ ಸಾಕ್ಷಿ, ಕವಿತೆಯ ಸಾಲುಗಳಲ್ಲಿ ನೀನು,
ಪದೇ ಪದೇ ಇಣುಕುತ್ತೀಯ, ಮುಖಾಮುಖಿ-
ಯಾಗದೆಯೂ, ಒಳಗೇ ಉಳಿದ ಬೆಳಕು.
ಹಂಚಿಕೊಳ್ಳುವುದಕ್ಕೇನು ಉಳಿದಿದೆ ಎನ್ನುವುದೆಲ್ಲ
ಬರಿಯ ಒಣ ತರ್ಕದ ದೇಶಾವರಿ ಹೇಳಿಕೆ
ಇಬ್ಬರಿಗಲ್ಲದೇ ಮತ್ತಾರಿಗೂ ಗೊತ್ತಾಗಬಾರದ ಸತ್ಯ.
ಹೆಗಲಿಗೊರಗಿ, ಬೆರಳ ಹೆಣೆದು ಅನೂಹ್ಯ ಲೋಕಕ್ಕೆ
ಜಾರಿ, ಮನಸ್ಸಲ್ಲೇ ಕೂಡಿದ್ದು, ಮಿಥುನದುದ್ರೇಕಕ್ಕಿಂತ
ಮಿಗಿಲೆಂದು ಗೊತ್ತಾಗಿದ್ದು, ಲೌಕಿಕದ ಎಂಜಲ
ದಾಂಪತ್ಯದ ಗೆರೆ ದಾಟದ ನೈತಿಕದ ಗೆಲುವು.
ಭಾವವಿಲ್ಲದ ಕವಿತೆ ಬರಿಯ ಹೇಳಿಕೆಯಾಗುವುದು
ಲೋಕ ಸತ್ಯದ ಮಾತು. ನೀನು ನೆನಯುವ ಕೃಷ್ಣ
ನನ್ನ ಕಾಡುವ ರಾಧೆ, ಬರಿಯ ಪುರಾಣವೇನಲ್ಲ
ನಮ್ಮೊಳಗೇ ಉಳಿದ ಬಾಂಧವ್ಯದ ಸೂನು.
ಮುಗಿಲಂಚಿಗೆ ಹೆಣೆದ ಬಣ್ಣ ಬಣ್ಣದ ಕಮಾನು!!
———–
ಹೆಣ್ಣು ಮತ್ತು ಹಾಡು
ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇ
ಇವಳು ಜನಕನ ಮಗಳು ಜಾನಕಿ ಎಂದಿರಿ.
ಇವಳದಲ್ಲದ ತಪ್ಪಿಗೆ ಬೆಂಕಿಗೆ ಹಾಯುವಾಗಲು ತಡೆಯದವನನ್ನು ಪುರುಷೋತ್ತಮನೆಂದಿರಿ.
ತ್ರೇತಾ ಯುಗದ ತಪ್ಪನ್ನು ದ್ವಾಪರಕ್ಕೂ ಮುಟ್ಟಿಸಿ
ಪಾಂಚಾಲದಲ್ಲಿ ಹುಟ್ಟಿದುದಕ್ಕೇ ಪಾಂಚಾಲಿ
ದೃಪದನ ಮಗಳಿಗೆ ದ್ರೌಪದಿಯ ಠಸ್ಸೆಯೊತ್ತಿದಿರಿ
ಯಾರ ಮೇಲೆ ಯಾರಿಗೂ ಹಕ್ಕೇ ಇಲ್ಲದಿದ್ದರೂ
ಜೂಜು ಕಟ್ಟೆಯ ಸ್ವತ್ತಾಗಿಸಿ ಲಿಲಾವಿಗಿಟ್ಟು
ದ್ವಾಪರದ ತಪ್ಪನ್ನು ಕಲಿಗಾಲಕ್ಕೂ ತಂದಿರಿಸಿದಿರಿ
ಸೀತೆಯನ್ನು ಗೆಲ್ಲುವ ಮೊದಲೇ ದಾಶರಥಿ ಕಲ್ಲಂತಾಗಿದ್ದ ಅಹಲ್ಯೆಯನ್ನು ಹೂವಾಗಿಸಿದ್ದನ್ನು
ಸ್ವತಃ ಮರೆತದ್ದಕ್ಕೇ ಇರಬೇಕು, ಕಿಡಿಗೇಡಿಯ ಸಣ್ಣ ಮಾತಿಗೇ ಮತ್ತೆ ಕಾಡಿಗಟ್ಟಿದ ಅವಿವೇಕ
ಹಾಡಂತೆ ಹಾಡುತ್ತಲೇ ಕುಶಲವರು ಗೆದ್ದದ್ದು.
ಉಟ್ಟ ಸೀರೆಗೆ ಕೈಯಿಟ್ಟವನನ್ನು ಸುಸ್ತಾಗಿಸಿದ್ದು
ಕಟ್ಟಿಕೊಂಡವರೇನಲ್ಲ, ಮಾತು ತಪ್ಪದ ಸಖನೇ,
ಮುಡಿ ಕಟ್ಟುವುದಿಲ್ಲ ತೊಡೆಮುರಿದ ಹೊರತೂ
ಎಂದವಳು ಅವಳೇನಲ್ಲ,ಯಾರದೋ ಶಪಥಕ್ಕೆ
ಪಗಡೆಯ ದಾಳವಾದದ್ದೂ ಆಕಸ್ಮಿಕವೇನಲ್ಲ,
ಯುಗ ಯುಗಗಳ ಆವರ್ತದಲ್ಲೂ ಮತ್ತೆ ವ್ಯಥೆ
ನೆಲವಲ್ಲದೇ ನೇಗಿಲ ಮೊನೆ ಸೀಳೀತೆ ಕಲ್ಲನ್ನು
ಬಂಡೆಗೆ ತಾಗಿದರೆ ಹಲದ ಹಲ್ಲೂ ಮುರಿದೀತು
ಅದಕ್ಕೇ ಯಾವತ್ತೂ ಮಿಗದ ಬೇಟೆಯ ನೆವಕ್ಕೆ
ಈ ಇವನ ಕೈಯ ಭರ್ಜಿ,ಈಟಿ, ತಲವಾರುಗಳು.
ಯಾವುವೂ ರಕ್ಷಣೆಗೆ ಸ್ವತಃ ನಿಲ್ಲುವುದಿಲ್ಲ
ರಕ್ತದ ಹನಿ ನೆಲಕ್ಕೆ ಬಿದ್ದರೆ ಮತ್ತೆ ಅಸುರ ಶಕ್ತಿ
ಎದ್ದೀತೆಂಬ ಎಚ್ಚರಿಕೆಯಲ್ಲೇ ನಾಲಿಗೆಯ ಹಾಸಿ
ಶಕ್ತಿ ರೂಪಿಣಿಯ ಕೈಯಲ್ಲಿ ಆಯುಧದ ಸಾಲು
ಬರಿಯ ತೋರಿಕೆಗಲ್ಲ, ಅತ್ಯಗತ್ಯದ ವೇಷ.
ತೊಡದೇ ಇದ್ದರೆ ಗೊತ್ತೇ ಆಗುವುದಿಲ್ಲ ಈ ಅವಿವೇಕಿಗಳಿಗೆ. ಇವಳು ತಾಯಿ, ಮಗಳು
ಅಕ್ಕ ತಂಗಿಯರ ಸಂಬಂಧದಲ್ಲಿ ಸೂಕ್ಷವಾಗಿ.
**************************************
ಇತ್ತೀಚೆಗೆ ಓದಿದ ಮಹತ್ವದ ಕವಿತೆಗಳಲ್ಲಿ ಇವು ನಿಸ್ಸಂದೇಹವಾಗಿ ಸೇರುತ್ತವೆ.
ಅಭಿನಂದನೆಗಳು. ❤️
ಮನವರಳಿತು