ಮನ -ಮಸಣದಲ್ಲಿ ಶಾಲೆ

ಕವಿತೆ

ಮನ -ಮಸಣದಲ್ಲಿ ಶಾಲೆ

ಕಾವ್ಯ ಎಸ್.

ಮನ- ಮಸಣ ಅಕ್ಷರಗಳ ವ್ಯತ್ಯಾಸದಲ್ಲಿ

ಹುಟ್ಟುವ ಹಳೆಯದಾದರೂ ಹೊಸ ನಂಟು

ಮಕ್ಕಳಿಲ್ಲದ ಶಾಲೆ ಮಸಣದ ಭಾಸ

ಮಸಣ ಕಾಯುವವನು

ಆಲಸಿ ಆಚಾರ್ಯ

ಮೌನಕ್ಕೂ ಮೌನ ಕಲಿಸುವ ನಿಶ್ಯಬ್ದತೆ

ನಿಗೂಢ ಶಬ್ದದೊಂದಿಗೆ ಆಗಾಗ್ಗೆ ಬಂದು

ಏನಾದರೂ ಅರ್ಥ ಕೊಟ್ಟು ಹೋಗ್ವ ತಂಗಾಳಿ

ಮನಕ್ಕೆ ಬಡಿದಿದ್ದ ಪೈಶಾಚಿಕತೆ ಶಾಲೆಯ

ತುಂಬೆಲ್ಲಾ ನಲಿದಾಡುತ್ತಿದೆ

ಮಕ್ಕಳ ಆರ್ಭಟಕ್ಕೆ ಗುಡುಗಿದರು ಅಲುಗದ ಶಾಲೆ

ಗುಂಡುಸೂಜಿ ನೆಲಅಪ್ಪಿದರು

ಕರಾಳ ಅಳುವು

ನೀರಿದ್ದರು ಜೀವ ಕಳೆದುಕೊಂಡು

ತೊಟ್ಟಿಕ್ಕುತ್ತಿರುವ ನೀರಕೊಳವೆಗಳು

ಬೋರ್ಡು , ಕಾರ್ಡು , ಬೆಂಚುಗಳ

ಮಾಲೀಕತ್ವ ವಹಿಸಿರುವ ಇಲಿರಾಯ

ತನ್ನದೆ ಕಾರುಬಾರು ನಡೆಸಿದ್ದಾನೆ

ಹೂ-ಗಿಡ , ತರಗೆಲೆಗಳು ಮಕ್ಕಳ

ಆರೈಕೆ ಅರಸಿ ಬರುವಿಕೆಗಾಗಿ ಬಾಗಿ

ಸ್ವಗತ ಕೋರುತ್ತ ಭೂತಬಂಗಲೆಯ

ಸೇವಕರಾಗಿ ನೇಮಕಗೊಂಡಿವೆ

ಆಟದ ಮೈದಾನಗಳು ಮಾನವ ಕೃತ್ಯಕ್ಕೆ

ರಣರಂಗದ ಅವಶೇಷವಾಗಿವೆ

ಇದ್ದಾಗ ತಿಳಿಯದ ಅರಿಯದ ಪ್ರೀತಿ

ಸ್ವಲ್ಪ ಸ್ವಲ್ಪವೇ ಅರಿವಿನ ಗುಳಿಗೆ ನುಂಗಿಸುತ್ತಿದೆ

ಕಾಡುವ ಪಾಪಪ್ರಜ್ಞೆಯಲ್ಲಿ ಮುಳುಗೇಳುವ ಅಜ್ಞಾತವಾಸ.

***********************************

Leave a Reply

Back To Top