ಖಾಸಗಿ ಬಸ್ ಪಯಣ
ಜಿ.ಹರೀಶ್ ಬೇದ್ರೆ
ಇದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಓದಿದ ಮೇಲಾದರೂ ಗಮನಿಸಿ, ನಾನು ಹೇಳಿದ್ದು ನಿಜವೆನಿಸಿ ನೀವು ನಗದಿದ್ದರೆ ಹೇಳಿ. ಅಂಥಹ ವಿಚಾರ ಏನೂ ಅಂತೀರಾ, ಅದೇ ಬಸ್ಸಗಳು ಹಾಗೂ ಅದರಲ್ಲಿನ ಸಂಚಾರ. ಅದರಲ್ಲಿ ಸಿಗುವ ವಿವಿಧ ರೀತಿಯ ಅನುಭವಗಳು.
ನೋಡಿ ಸರ್ಕಾರಿ ಬಸ್ಸುಗಳು ತುಂಬಾ ಗೌರವಸ್ಥ ಹೆಣ್ಣಿನಂತೆ ನಿಲ್ದಾಣಕ್ಕೆ ಬಂದು ಊರಿಂದ ಊರಿಗೆ ಹೋದರೆ, ಖಾಸಗಿ ಬಸ್ಸುಗಳು ಆಗ ತಾನೇ ಪ್ರಾಯಕ್ಕೆ ಬಂದ ಹುಡುಗಿ ಎಲ್ಲರೂ ತನ್ನನೇ ನೋಡಲೆಂದು ವೈಯರ ಮಾಡುವಂತೆ, ನಿಲ್ದಾಣಕ್ಕೆ ಬರುವಾಗ ಅತೀ ವೇಗವಾಗಿ ಬರುತ್ತಾ, ಜೋರಾಗಿ ಹಾರನ್ ಮಾಡುತ್ತಾ, ಪ್ರತಿಯೊಬ್ಬರೂ ಗಮನಿಸುವಂತೆ ಬರುತ್ತವೆ. ನಾವೇನಾದರೂ ಅವು ಒಳಬಂದ ವೇಗವನ್ನು ಗಮನಿಸಿ, ಹೋಗಬೇಕಾದ ಸ್ಥಳಕ್ಕೆ ಬೇಗ ಸೇರುತ್ತೇವೆ ಅಂದುಕೊಂಡರೆ, ಅದು ನಮ್ಮ ಭ್ರಮೆ ಮಾತ್ರ. ನಂತರ ತಾನು ಸಾಗುವ ಮಾರ್ಗವಾಗಿ ಬರುವವರನ್ನು ಹತ್ತಿಸಿಕೊಂಡು, ಬಸ್ಸ್ ನಿಲ್ದಾಣದಿಂದ ಊರ ಹೊರಗಿನವರೆಗೂ ಹೊಸದಾಗಿ ಮದುವೆಯಾದ ಹುಡುಗಿ ಮದುವೆಯಾದ ನಂತರ ಮೊದಲಬಾರಿ ತವರು ಮನೆಗೆ ಬಂದು ಹೊರಹೊರಟಾಗ ಹೇಗೆ ನಿಧಾನವಾಗಿ ಹೆಜ್ಜೆ ಹಾಕುತ್ತಾ, ದಾರಿಯಲ್ಲಿ ಸಿಕ್ಕ ಪರಿಚಯದವರಿಗೆ ಮಾತನಾಡಿಸುತ್ತ ಸಾಗಿದಂತೆ, ಪ್ರಯಾಣಿಕರು ಕೈತೋರಿಸಿದ ಜಾಗದಲ್ಲೆಲ್ಲಾ ನಿಲ್ಲಿಸಿ, ಅವರನ್ನು ಹತ್ತಿಸಿಕೊಂಡು ಸಾಗುತ್ತವೆ. ತಾನು ಸಾಗುವ ಮಾರ್ಗ ಮಧ್ಯದಲ್ಲಿ ಸಿಗುವ ಊರುಗಳಲ್ಲಿ ಇಳಿಯುವ ಜನರನ್ನು ಇಳಿಸಿ, ಬರುವವರನ್ನು ಹತ್ತಿಸಿಕೊಂಡು ಮುಂದೆ ಸಾಗುತ್ತವೆ. ನಿಜ ಹೇಳಬೇಕೆಂದರೆ, ತಮ್ಮ ಗಮ್ಯವನ್ನು ತಲುಪುವ ಹೊತ್ತಿಗೆ ಬಸ್ಸಿನೊಳಗೆ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಪ್ರಯಾಣಿಕರು ತುಂಬಿರುತ್ತಾರೆ. ಆಗ ತಾನೇತಾನಾಗಿ ಬಸ್ಸಿನ ವೇಗವೂ ಕಡಿಮೆಯಾಗಿರುತ್ತದೆ. ಇದನ್ನು ನೋಡಿದಾಗ ತುಂಬಿದ ಬಸುರಿ ಹೆಜ್ಜೆ ಹಾಕಲು ಸಾಧ್ಯವಾಗದೆ ನಿಧಾನವಾಗಿ ನಡೆದಂತೆ ಅನಿಸುತ್ತದೆ.
ಬಸ್ಸಿನ ಒಳಗೆ ಜಾಗವಿಲ್ಲವೆಂದು ಯಾರನ್ನೂ ಬಿಟ್ಟು ಹೋಗುವಂತಿಲ್ಲ. ಹಾಗೇನಾದರು ಮಾಡಿದರೆ ಡ್ರೈವರ್, ಕಂಡಕ್ಟರ್ ಜೊತೆಗೆ ಬಸ್ಸಿಗೂ ಕಲ್ಲಿನ ಏಟು ಬೀಳಬಹುದು.
ಅದಕ್ಕಾಗಿ ಕಂಡಕ್ಟರ್ ಯಾರನ್ನು ಬಿಟ್ಟು ಹೋಗುವ ಮನಸ್ಸು ಮಾಡುವುದಿಲ್ಲ. ಅಲ್ಲದೆ ತುಂಬಿದ ಬಸ್ಸಿನಲ್ಲಿ ಜಾಗ ಇರದಿದ್ದರೂ, ಮತ್ತೆ ಮತ್ತೆ ಪ್ರಯಾಣಿಕರನ್ನು ಒಳಗೆ ಹತ್ತಿಸಿಕೊಳ್ಳುವುದನ್ನು ನೋಡುವುದೇ ಚೆನ್ನ. ಅವನಿಗೆ ಗೊತ್ತಿರುತ್ತದೆ ಒಳಗಡೆ ಜಾಗವಿಲ್ಲವೆಂದೂ, ಹಾಗಿದ್ದೂ ಯಾರ್ರೀ ಅದೂ ಸ್ವಲ್ಪ ಒಳಗೆ ದಾಟಿ, ಪಾಪ ವಯಸ್ಸಾದ ಅಜ್ಜಿ ಜಾಗ ಬಿಡಿ, ಹೇ ಸಣ್ಣ ಮಕ್ಕಳು ಮಹಾರಾಯ ಹೆಚ್ಚುಕಮ್ಮಿಯಾದರೆ ಕಷ್ಟ ಒಳಗೆ ಕರೆದುಕೊಳ್ಳಿ ಮುಂತಾಗಿ ಹೇಳುತ್ತಾ ಇರದ ಜಾಗದೊಳಗೆ ಜಾಗ ಮಾಡುತ್ತಾನೆ.
ಬಸ್ಸು ಹೊರಟಾಗ ಪ್ರಯಾಣಿಕರು ಎಲ್ಲಿಬೇಕೊ, ಹೇಗೆ ಬೇಕೋ ಹಾಗೆ ಕುಳಿತಿರಬಹುದು. ಪ್ರಯಾಣ ಸಾಗಿದಂತೆ ಮೊದಲು ಎಲ್ಲಾ ಅಸನಗಳು ರಾತ್ರಿಯಾಗುತ್ತದೆ. ಆಗ ಹತ್ತುವ ಜನರು ತಮಗೆ ಸರಿ ಎನಿಸಿದ ಅಸನವನ್ನೋ, ಕಂಬಿಯನ್ನೋ ಹಿಡಿದು ನಿಲ್ಲುತ್ತಾರೆ. ಅದು ತಾತ್ಕಾಲಿಕ, ಬರಬರುತ್ತ ನಿಂತವರು ಹಿಂದೆಮುಂದೆ ಸರಿಯಬೇಕಾಗುತ್ತದೆ. ಆಗ ಕುಳಿತವರಿಗೂ ನಿಂತವರಿಗೂ ಜಗಳವಾಗುವ ಸಾಧ್ಯತೆ ಇರುತ್ತದೆ. ಕುಳಿತವರು ಸರಿಯಾಗಿ ನಿಲ್ಲಿ ಎಂದರೆ, ನಿಂತವರು ಹೇಗೆ ನಿಲ್ಲಬೇಕು ಬನ್ನಿ ತೋರಿಸಿ, ನಮ್ಮ ಕಷ್ಟ ನಿಮಗೇನು ಗೊತ್ತು ಎಂದೊ, ಮುಂತಾಗಿ ಮಾತುಗಳಾಗುತ್ತವೆ. ಕೆಲವೊಮ್ಮೆ ಕಿಡಿಗೇಡಿಗಳು ಬೇಕೆಂದೇ ತೊಂದರೆ ಮಾಡಿದಾಗ ಇರದ ಜಾಗದಲ್ಲಿ ನಿಂತು ಪರಸ್ಪರ ಜಗಳವಾಡುವುದು ಅರ್ಜುನ ಮತ್ತು ಬಬ್ರುವಾಹನರ ‘ಯಾರು ತಿಳಿಯರು ನನ್ನ ಭುಜಬಲದ ಪರಕ್ರಾಮ’ ನೆನಪಿಸುತ್ತದೆ. ಇನ್ನೇನು ಇಬ್ಬರೂ ಕೈ ಮೀಲಾಯಿಸುತ್ತಾರೆ ಎಂದು ನಾವು ಕದನ ಕುತೂಹಲಿಗಳಾಗಿ ಕಾಯುವಾಗ ಅವರಿವರ ಮಧ್ಯಸ್ಥಿಕೆಯಿಂದ ತಣ್ಣಗಾಗಿ ಬಿಡುತ್ತದೆ. ಜಗಳವಾಡಿದವರಿಗೂ ಇದೇ ಬೇಕಾಗಿರುತ್ತದೆ ಎಂದು ನನ್ನ ಅನುಮಾನ.
ಈ ಜಗಳ ಒಂದು ರೀತಿಯದಾದರೆ, ಹಿಂದೆ ಮುಂದೆ ನಿಂತ ಸ್ನೇಹಿತ, ಸ್ನೇಹಿತೆಯರು ಮಾತನಾಡಲು ಪರದಾಡುವುದು ನೋಡಲು ಬಹಳ ಖುಷಿಯಾಗುತ್ತದೆ. ಇದಕ್ಕಿಂತ ಯುವಕರು ತಮ್ಮ ತಮ್ಮ ಹುಡುಗ, ಹುಡುಗಿಯರನ್ನು ಕದ್ದು ನೋಡುವುದು ಒಂದೆಡೆಯಾದರೆ, ಪ್ರೇಮಿಗಳು ಒಂದೆಕಡೆ ಇದ್ದಾಗ ಸುತ್ತಲಿನ ಜನರನ್ನು ಮರೆತು ತಮ್ಮದೇ ಪ್ರಪಂಚದಲ್ಲಿರುವುದು, ಅಕಸ್ಮಾತ್ ಹಿಂದೆ ಮುಂದೆ ದೂರದಲ್ಲಿದ್ದರೆ ಪರಸ್ಪರ ನೋಡಲು, ಮಾತನಾಡಲು ಪಡುವ ಕಷ್ಟ ನೋಡಲು ಎರಡು ಕಣ್ಣು ಸಾಲದು.
ತುಂಬಿದ ಬಸ್ಸಿನಲ್ಲಿ ಸೆಕೆಯಾಗಿ ಕಿಟಕಿ ತೆರೆದು ಕುಳಿತಿರುವಾಗ, ಮುಂದಿನ ಅಸನಗಳಲ್ಲಿ ಕುಳಿತವರು ಬಸ್ಸು ಚಲಿಸುವಾಗ ಎಲೆ ಅಡಿಕೆ, ಗುಟುಕ, ತಂಬಾಕು ಹಾಕಿಕೊಂಡವರು.ಉಗಿದರಂತು, ಹಿಂದೆ ಕುಳಿತವರ ಸ್ಥಿತಿ ದೇವರಿಗೆ ಪ್ರೀತಿ. ಅದೂ ಅವರೇನಾದರೂ ಯಾವುದಾದರೂ ಕಾರ್ಯಕ್ರಮಕ್ಕೊ, ಮುಖ್ಯವಾದ ಕೆಲಸಕ್ಕೂ ತಯಾರಾಗಿ ಹೊರಟಿರಬೇಕು, ಜೊತೆಗೆ ಬೇರೆ ಬಟ್ಟೆಯು ಅವರ ಬಳಿ ಇರಬಾರದು, ಅವರ ಪರಿಸ್ಥಿತಿ ಹೇಗಿರಬಹುದು ಯೋಚಿಸಿ. ವಾಂತಿಯಾದರಂತೂ ಗಲೀಜಿನ ಜೊತೆ ಆ ಕಮಟು ವಾಸನೆ ಹೇಗಿರಬಹುದೆಂದು ನೀವೇ ಊಹಿಸಿಕೊಳ್ಳಿ. ಒಂದೊಮ್ಮೆ ವಾಂತಿ ಬಸ್ಸಿನ ಒಳಗಡೆಯೇ ಮಾಡಿಕೊಂಡರೂ, ಎಷ್ಟೇ ತುಂಬಿದ ಬಸ್ಸಾದರೂ ಜನ ಅಷ್ಟು ಜಾಗ ಬಿಟ್ಟು ನಿಲ್ಲುವುದನ್ನು ನೋಡಿದರೆ, ಆ ಹೊಂದಣಿಕೆ ಸೋಜಿಗವೆನಿಸುತ್ತದೆ.
ಇಷ್ಟೆಲ್ಲಾ ಅವಂತರಗಳ ಜೊತೆಗೆ, ನಿಲ್ಲಲೂ ಜಾಗವಿಲ್ಲದಿದ್ದರು ಜನ ಹತ್ತಿದಾಗ, ಕಂಕುಳಲ್ಲಿದ್ದ ಪುಟ್ಟ ಮಕ್ಕಳು ಕುಳಿತವರ ತೊಡೆ ಎರುತ್ತವೆ. ಅನ್ಯರೊಂದಿಗೆ ಮಗು ಕೂರದಿದ್ದಾಗ ಅನಿವಾರ್ಯವಾಗಿ ಕುಳಿತವರು ನಿಂತು ತಾಯಿ ಮತ್ತು ಮಗುವಿಗೆ ಜಾಗ ಬಿಟ್ಟುಕೊಡಬೇಕಾಗುತ್ತದೆ. ನಾವು ಪಯಣಿಸುವ ಸಮಯ ಶಾಲಾ ಕಾಲೇಜುಗಳ ಆರಂಭ ಅಥವಾ ಮುಕ್ತಾಯದ ವೇಳೆ ಆಗಿದ್ದರೆ, ಆ ಮಕ್ಕಳ ಹೆಣ ಭಾರದ ಚೀಲಗಳು ಕುಳಿತವರ ತೊಡೆಯನ್ನು ಅಲಂಕರಿಸುತ್ತವೆ.
ಈ ಎಲ್ಲಾ ಅವಾಂತರಗಳ ಜೊತೆ ಮುಂದೆ ಸಾಗಿದ ಬಸ್ಸು ನಿಗದಿತ ಊರಿನ ನಿಲ್ದಾಣ ತಲುಪಿದಾಗ, ಮಗುವನ್ನು ಹೆತ್ತ ತಾಯಿ ನಿಟ್ಟುಸಿರು ಬಿಟ್ಟಂತೆ ಬಿಟ್ಟು ನಿಂತು ತನ್ನ ಒಡಲನ್ನು ಖಾಲಿ ಮಾಡಿಕೊಳ್ಳುತ್ತದೆ.
ಅಷ್ಟು ಹೊತ್ತು ಬಸ್ಸಿನೊಳಗೆ ಇದ್ದ ಜನ ಇಳಿದು ತಮ್ಮ ಕಾಯಕದೆಡೆಗೆ ಹೆಜ್ಜೆ ಹಾಕಿದರೆ, ಅದೇ ಬಸ್ಸು ಹೊಸ ಪ್ರಯಾಣಿಕರನ್ನು ಹೊತ್ತು, ಹೊಸ ಅನುಭವ ನೀಡಲು ತನ್ನ ಮಾರ್ಗದಲ್ಲಿ ಸಾಗುತ್ತದೆ. ಇಂತಹ ಸುಂದರ ಅನುಭವ ಪಡೆಯಬೇಕೆಂದರೆ ನಾವು, ಖಾಸಗಿ ಬಸ್ಸುಗಳಲ್ಲಿ ಗ್ರಾಮಂತರ ಪ್ರದೇಶಗಳ ಕಡೆ ಹೋಗಬೇಕು. ……
Super description of travel in Khasagi bus
Super Sir
What a metaphor
ಸಹಜತೆ ತುಂಬಿಕೊಂಡ ಲಹರಿ ಓದಿದಾಗ ಕಾಲೆಜ್ ದಿನಗಳ ನೆನಪಾಗಿ ನಗು ಬಂತು
ನಿರುಪಣೆ ಸೊಗಸಾಗಿತ್ತು