ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ

ಲಹರಿ

ಪಾರ್ವತಿಯ ಖುಷಿ

ಪ್ರತೀ ಹೆಣ್ಣಿಗೂ ಸಿಗಲಿ

ಸ್ಮಿತಾ ಭಟ್

Mother & Daughter beautiful love sinary drawing || oil pastel colour  painting - YouTube

ತವರು ಎನ್ನುವದು ಮುಗಿಯಲಾರದ ಸೆಳೆತ ಮತ್ತದು ಹೆಣ್ಮಕ್ಕಳಿಗೆ ಮಾತ್ರ ಸೀಮಿತ.

ತಲೆ ತಲಾಂತರಗಳಿಂದಲೂ ತವರು ಮತ್ತು ಹೆಣ್ಣು ಸಯಾಮಿಯಂತೆ ಬದುಕುತ್ತ ಬಂದಿದ್ದಾರೆ.

ಹೆಣ್ಣಿನೊಳಗೆ ತವರಿನ ಸೆಳೆತ,ಪುಳಕ,ಅಪ್ಯಾಯ ಭಾವಗಳು ಶುರುವಾಗುವದೇ ಮದುವೆಯೆಂಬ ಬಂಧನದಲಿ,ಭಾವದಲಿ,ಸಿಲುಕಿ ತವರ ತೊರೆದು ಹೊರನಡೆದಾಗಲೇ.

ಅಲ್ಲಿಯವರೆಗೆ ಸುಪ್ತವಾಗಿದ್ದ ನಯ ನಾಜೂಕಿನ ಭಾವನೆಗಳೆಲ್ಲ ಕಟ್ಟೆಯೊಡೆದು ಹೃದಯವನ್ನು ತಲ್ಲಣಗೊಳಿಸಿಬಿಡುತ್ತವೆ.

ಎಂತಹ ಐಶಾರಾಮಿ ಗಂಡನಮನೆಯೇ ಸಿಗಲಿ

ತವರಿನಿಂದ ಬರುವ ಪುಟ್ಟ ಉಡುಗೊರೆಗಾಗಿ  ಹೆಣ್ಣು ಕಾತರದಿಂದ ಕಾಯುತ್ತಾಳೆ.

ತವರೂರಿನ ಹೆಸರು ಹೇಳಿ ಯಾರೇ ಬಂದರೂ ಮುಖದಭಾವಕ್ಕೆ ಬೇರೆಯದೇ ಕಳೆಗಟ್ಟುತ್ತದೆ.

“ನಿನ್ನ ತವರು ಮನೆಗೆ ಹೋಗಿದ್ದೆ ತಂಗೀ”

ನಿನ್ನ ಅಮ್ಮನಿಗೂ ಈತರದ್ದು ಎರಡು ಡಜನ್ ಬಳೆ ಕೊಟ್ಟು ಬಂದಿದ್ದೀನಿ, ಅನ್ನುವಾಗ ನನಗೂ ಅದೇ ಇರಲಿ ಎನ್ನುವ ಮಾತು ಅರಿವಿಲ್ಲದೆ ಬರುತ್ತದೆ.

ಅಲ್ಲಿಂದ ಬರುವ ಕೆಲಸದ ಆಳುಗಳೇ ಇರಲಿ, ನೆಂಟರೇ ಇರಲಿ, ಹಿಂದೊಂದು ತವರೂರಿನ ಹೆಸರು ಸೇರಿಕೊಂಡರೆ ವಿಶೇಷ ಅಕ್ಕರೆ,

ಹಾಗಂತ ಅದು ಬೇದ ಭಾವದ್ದಲ್ಲ. ರಕ್ತಗತವಾಗಿ ಬಂದದ್ದು.

 ದಾರಿಯಲ್ಲಿ ತವರೂರಿಗೆ ಹೊರಟ ಬಸ್ಸಿನ ಬೋರ್ಡ ಕಂಡರೂ ಸಾಕು ಆ ಬಸ್ಸಿನ ಮೇಲೆ ಡ್ರೈವರ್ ನ ಮೇಲೆ ಎಲ್ಲ ಪ್ರೀತಿ ಉಕ್ಕತ್ತದೆ.

ತುಪ್ಪ ಬಡಿಸುವಾಗ ತವರ ಸುದ್ದಿ ಕೇಳಿದರೆ

ಎರಡ್ಹುಟ್ಟು ತುಪ್ಪ ಹೆಚ್ಚಿಗೆ ಬೀಳುವದು.

ಎಂದು ಛೇಡಿಸುವಿಕೆಯಾದರೂ ಸತ್ಯವೇ,

ಸ್ವಲ್ಪ ನಕ್ಕರೂ ,ಅಡುಗೆಯಲ್ಲಿ ವೀಶೇಷವಾದದನ್ನು ಸಜ್ಜು ಗೊಳಿಸುತ್ತಿದ್ದರೂ ಏನಿದು !!ಇಂದು ತವರಿಂದ ಏನಾದರೂ ವಿಶೇಷ ಸುದ್ದಿ ಇದೆಯಾ? ಯಾರಾದರೂ ಬರುತ್ತಿದ್ದಾರಾ? ಎಂದು ಕಾಲೆಳೆಯುವ ಪತಿರಾಯರಿಗೇನೂ ಕಡಿಮೆಯಿಲ್ಲ.

ಆದರೆ ತಕರಾರು ಅದರದ್ದಲ್ಲ.

ಇಷ್ಟೆಲ್ಲ ಬದುಕಿನ ಜೊತೆಗೇ ಅಂಟಿಕೊಂಡು ಬಂದಿರುವ ಭಾವವನ್ನು ಸಂಬಂಧವನ್ನು ಮದುವೆಯಾಗುತ್ತಿದ್ದಂತೆ ಬಿಡಲಾಗಲಿ ಆ ಭಾವದೊಳಗೆ ಬದಲಾವಣೆ ತಂದುಕೊಳ್ಳಲಾಗಲಿ ಸಾಧ್ಯವೇ!? ತವರು ಹೆಣ್ಣಿನ ಹಕ್ಕು ಮತ್ತು ಆಸ್ತೆಯ ವಿಷಯ.

ತವರಿನ ಬಗ್ಗೆ ಸ್ವಲ್ಪವೇ ಸ್ವಲ್ಪ ಮೂಗು ಮುರಿದರೂ ಆಗುವ ಯಾತನೆ ಹೇಳತೀರದ್ದು.

 ತವರು ನಗುತಿದ್ದರೆ,ಮನೆಯಾಕೆಯೂ  ನಗುತ್ತಿರುತ್ತಾಳೆ ಎನ್ನುವ ಅರಿವಿದ್ದೂ ಅಹಂಕಾರದಿಂದ ಅದೆಷ್ಟೋ ಗಂಡಸರು ಹೂಂಕರಿಸುವದನ್ನು ನೋಡಿದ್ದೇನೆ.

ಸುಕಾ ಸುಮ್ಮನೇ ತವರ ದೂರುವುದು.

ಅಪ್ಪ, ಅಮ್ಮ, ಅಣ್ಣ,ತಮ್ಮ ,ಯಾರೇ ಇದ್ದರೂ ಅವರಡೆಗೊಂದು ಅಸಡ್ಡೆಯ ಮಾತೊಗೆಯುವದು.

ಗೊತ್ತಿದೆ ಬಿಡೆ ನಿನ್ನ ತವರು ಎನ್ನುವ ಅನಾಧರ. ಈಗೇನು ನಿನ್ನ ತವರಿನ ದೊಡ್ಡಸ್ತಿಕೆ,ಒಂದು  ನಯಾ ಪೈಸಾ ತಗೊಳ್ದೆ ನಿನ್ನ ಮದುವೆ ಮಾಡ್ಕೊಂಡು ಬಂದಿದ್ದೀನಿ.

ಆಗ ಬಡತನವಿತ್ತು ಬಿಡು,ಈಗ

ಹಬ್ಬಕ್ಕೆ ಏನು ಕೊಟ್ರೋ!?

ಕರೆಯುವಲ್ಲಿ, ಕೇಳುವಲ್ಲಿ,ಹೇಳುವಲ್ಲಿ,

ಕೊಂಚ ವ್ಯತ್ಯಾಸ ವಾದರೂ,

ಕೃಷ್ಣ ಕದ್ದನೆಂದ ಶ್ಯಮಂತಕಮಣಿಯಂತೆ

ಅಪವಾದ ಹೆಗಲೇರುತ್ತದೆ.

ಹೇಗೆ ತೊರೆಯುವದು ಹೇಳಿ ತವರಿನ ಸೆಳೆತವ.

ನೋವುಂಡು ನಗುವ ಮೂರ್ತಿಯನ್ನು ಮಾಡಿದ ಒಲವ.

ಅಲ್ಲಿ ಮುಗಿಯದ ನಗುವಿದೆ, ಆಗಾದ ನೆನಪಿದೆ,ಅಪ್ಯಾಯ ಭಾವವಿದೆ,

ತೀರದ ಬಂಧವಿದೆ.

ನಿನಗೆ ನನಗಿಂತ ತವರೇ ಹೆಚ್ಚು ಎಂದು ಮೂದಲುಸುವಿಕೆಗಾದರೂ  ಒಂದು ಅರ್ಥ ಬೇಡವೇ? ಇಲ್ಲಿ ಹೆಚ್ಚು ಕಡಿಮೆ ಏನಿದೆ!?

 ಜತನವಾಗಿ ಸಾಕಿದ ಪ್ರೀತಿಯನ್ನು ,ಜೀವವನ್ನೇ ಎರಡು ಭಾಗ ಮಾಡಿಕೊಟ್ಟ ವೇದನೆಯಲ್ಲಿ ಕೈ ಹಿಡುದು ಇನ್ನೊಂದು ಕೈಗೆ ಕೊಡುವಾಗ ಅಸಹಾಯಕ ತಂದೆ  ಕಣ್ಣೊಳಗೆ ಉಕ್ಕಿದ ಭಾವಕ್ಕೆ ವಿವರಣೆ ಕೊಡಲು ಸಾಧ್ಯವೇ?

ತುಟಿ ಕಚ್ಚಿ ತಡೆದ ಅಮ್ಮನ ಕಣ್ಣ ಹನಿಗೆ ಋಣದ ಮಾತಾಡಲು ಸಾಧ್ಯವೇ?

ಕೊಟ್ಟ ಹೆಣ್ಣು ಕುಲದ ಹೊರಗೆ ಎನ್ನುವುದಕ್ಕೆ ವಿವರಣೆ ಏನು ಕೊಟ್ಟು ಸಮರ್ಥಿಸುತ್ತಾರೋ ಅರಿಯೆ. ಆದರೆ ಎಂದಿಗೂ ಸಮ್ಮತವಲ್ಲದ ವಿಷಯ ಇದು ಹೆಣ್ಮನಸಿಗೆ.

ಹಾಗೆ ನೋಡಿದರೆ ಗಂಡು ಕೂಡಾ ಹೆಣ್ಣು ಕೊಟ್ಟ ಮನೆಗೆ ಸದಾ ಋಣಿಯಾಗಿರಬೇಕು.

ತವರಬಗ್ಗೆ ಸದಾ ತಕರಾರೆತ್ತುವ ಗಂಡನಮನೆಯಲ್ಲಿ ಹೆಣ್ಣು ತುಟಿ ಕಚ್ಚಿ ನಗುತ್ತಿರುತ್ತಾಳಷ್ಟೇ.

ಗಂಡ ತನ್ನ ತವರನ್ನು ಗೌರವಿಸಲಿ.

ಪ್ರೀತಿಸಲಿ,ಎನ್ನುವದು ಹೆಣ್ಣಿನ ಸಹಜ ಬಯಕೆ,

ಗಂಡನಾದವ ಹೆಂಡತಿ ತನ್ನ ಮನೆಯವರನ್ನೆಲ್ಲ ಪ್ರೀತಿ ಆದರಗಳಿಂದ ಕಾಣಲಿ ಎಂದು  ಬಯಸುತ್ತಾನೋ  ಹಾಗೇ,

 ತನ್ನ ಅಕ್ಕ ತಂಗಿಯರು ತವರನ್ನು ಪ್ರೀತಿಸುವದರ ಬಗ್ಗೆ ಖುಷಿ ಪಡುವವ, ತನ್ನ ಹೆಂಡತಿ ತವರನ್ನು ಪ್ರೀತಿಸತೊಡಗಿದರೆ ಸಿಡಿದೇಳುವ ವರ್ತನೆಗೆ ಅರ್ಥವುಂಟೇ!?

ಅದೇನೆ ಹೊಂದಾಣಿಕೆಯ ಕೊರತೆ ಇದ್ದರೂ ತವರಿನೆಡೆಗಿನ ಹೆಣ್ಮನಸಿನ ಭಾವ ಅರಿತ ಗಂಡಸಿನೊಳಗೆ ಹೆಚ್ಚು ಯಶಸ್ಸಿದೆ.

ಅದೆಷ್ಟೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಾ ಗಂಡ ತನ್ನ ತವರನ್ನು ಪ್ರೀತಿಸುತ್ತಾನೆಂದರೆ, ಹೆಂಡತಿ ಗಂಡನ ಮನೆ ಕುರಿತು ತಕರಾರು ಎತ್ತುವದೇ ಇಲ್ಲ.

ಎಲ್ಲಿ ತವರಿಗೆ ಬೆಲೆ ಇದೆಯೋ ಅಲ್ಲೇ ತನ್ನ ಅಸ್ತಿತ್ವ ಎನ್ನುವದನ್ನು ಅವಳು ಎಂದೋ ನಿರ್ಧರಿಸಿದ್ದಾಳೆ.

ಅದು ಪ್ರಕೃತಿ ಮಾತೆ ಪಾರ್ವತಿದೇವಿಯಿಂದಲೇ ಒಲಿದು ಬಂದ ಬಳುವಳಿ ಹೆಣ್ಣಿಗೆ.

 ಪರಮ ಅಹಂಕಾರಿ,ಕಠೋರ ಸ್ವರೂಪಿ ದಕ್ಷ ,

ಶಿವನನ್ನು ಅವಮಾನಿಸಿದ ನಿದರ್ಶನಗಳಿಗೆ ಲೆಕ್ಕವೇ ಇಲ್ಲ,

ಆದರೆ ಶಿವ, ಅರ್ಧಾಂಗಿನಿಯಾದ ಸತಿಯ ತವರಿನ ಗೌರವದ ಬಗ್ಗೇಯೇ ಸದಾ ಯೋಚಿಸುತ್ತಿದ್ದ.ಮತ್ತಿ ಕಾಪಾಡುತ್ತಿದ್ದ.

ಸಕಲ ಅವಮಾನಗಳನ್ನು ಸತಿಗಾಗಿ ಸಹಿಸಿದ.

ಮನಸು ಮಾಡಿದರೆ ಪರಶಿವನಿಗೆ ದಕ್ಷನ ಅಹಂಕಾರ ಮುರಿಯುವುದು ಕ್ಷಣದ ಕೆಲಸವಾಗಿತ್ತು,

ಅಪಾರವಾಗಿ ತಂದೆಯನ್ನು ಪ್ರೀತಿಸುವ ಸತಿಗೆ ಎಲ್ಲಿಯೂ ನೋವಾಗಬಾರದೆಂದು,ಅವಳ ಭಾವಕ್ಕೆ ಧಕ್ಕೆಯಾಗಬಾರದೆಂದು ನೊಂದ, ಬೆಂದ,ಪರಿತಪಿಸಿದ.

ತಂದೆಯ ತಪ್ಪುಗಳು ಸತಿಗೆ ಅರಿವಾಗಲೆಂದು ವರುಷಗಳೇ ಕಾದ.

ಕೊನೆಗೆ ತವರನ್ನೇ ತೊರೆಯಲು ನಿರ್ಧಸಿದ ಸತಿಯ ಕುರಿತು ಹೇಳುತ್ತಾನೆ.

ಹೆಣ್ಮಕ್ಕಳಿಗೆ ತವರು ಎಂದರೆ ದೇಹದ ಉಸಿರು. ಅದನ್ನು ನೀನು ತೊರೆದು ಬದುಕಲಾಗದು.

ನಿನ್ನ ಅಂತರಂಗದ ನೋವು ವೇದನೆ ನಾನು  ಸಹಿಸಲಾರೆ.

ಅಲ್ಲದೇ ಉಸಿರು ತೊರೆದು ಬಂದ ನಿನ್ನ

ದೇಹಕ್ಕೆ ಲಕ್ಷಣವಿರಲಾರದು.

ತಂದೆಯನ್ನು ತಿದ್ದುವ ಪ್ರಯತ್ನಮಾಡುವದಾಗಿ ವಚನವನ್ನೂ ಕೊಡುತ್ತಾನೆ.

ಇದೇ ಕಾರಣಕ್ಕಾಗಿ ಸತಿ ದೇಹತ್ಯಾಗವನ್ನೂ ಮಾಡುತ್ತಾಳೆ.

ಶಿವ ತನ್ನ ಬದುಕಿನುದ್ದಕ್ಕೂ ಅರ್ಧಾಂಗಿನಿಯ ಮುಖಾಂತರ ತವರು ಮತ್ತು ಹೆಣ್ಣಿನ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಲೇ ಬಂದಿದ್ದಾನೆ.

ಪರ್ವತ ರಾಜನ ಮಗಳು ಪಾರ್ವತಿಯಾಗಿ ಶಿವನ ವರಿಸಿದಮೇಲೂ ತನ್ನ ಹಿಂದಿನ ಜನ್ಮದ ತಂದೆ ತಾಯಿಯಿದ್ದಲ್ಲಿ ಹೋಗಿ ಶಿವನ ಕೋಪಕ್ಕೆ ಬಲಿಯಾದ ದಕ್ಷನ ತಲೆಗೆ ಮೊದಲಿನ ರೂಪ ನೀಡಲು ಶಿವನನ್ನು ಕೇಳಿಕೊಳ್ಳುತ್ತಾಳೆ.

ಆಗ ಶಿವ ಹೇಳುತ್ತಾನೆ.

ನೋಡಿದೆಯಾ ದೇವೀ..

 ಹೆಣ್ಮಕ್ಕಳ ಈ ಮನಸ್ಥಿತಿಯೇ ಸದಾ ತವರು ನಗುತ್ತಿರಲು ಸುಖವಾಗಿರಲು ಕಾರಣ. ಜಗತ್ತಿನ ಎಲ್ಲ ಹೆಣ್ಮಕ್ಕಳೂ ನಿನ್ನ ಗುಣವನ್ನೇ ಹೊಂದಲಿ ಎಂದು ವರ ನೀಡುತ್ತಾನೆ.

ಶಿವನ ಹಾರೈಕೆಯ ಪರಿಣಾಮವೋ ಏನೋ

ಪ್ರಕೃತಿಯ ಈ ಸ್ವರೂಪವೇ ಮುಂದುವರಿದು ಪ್ರತೀ ಹೆಣ್ಣು ಪಾರ್ವತಿಯೇ ಆಗಿದ್ದಾಳೆ.

ಆದರೆ ಸಹನಾಮೂರ್ತಿ ಶಿವ ಯಾವ ಗಂಡಸಿನೊಳಗೂ ಇಲ್ಲವೇನೋ!? ಅಕಸ್ಮಾತ್ ಇದ್ದರೆ ಆ ಹೆಣ್ಣು ಪಾರ್ವತಿದೇವಿ ಯಷ್ಟೇ ಖುಷಿಯಾಗಿ ಬದುಕುತ್ತಿದ್ದಾಳೆ ಎಂದೇ ಅರ್ಥ.

7 thoughts on “ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ

  1. ಖಂಡಿತ ಸಹನಾಮೂರ್ತಿ, ಕರುಣಾಕರ ಶಿವನ ಗುಣ ಇಂದಿನ ಸಮಾಜಕ್ಕೆ ಬಹು ಅಗತ್ಯವಿದೆ .ಅಗ ಎಲ್ಲಾ ಪರ್ವತಿಯರೇ …

Leave a Reply

Back To Top