ಒಂದು ಜೀವನ ಸಾಲದು

( ಆತ್ಮ ಕಥೆ)

ಒಂದು ಜೀವನ ಸಾಲದು ( ಆತ್ಮ ಕಥೆ)
ಮೂಲ : ಕುಲದೀಪ್ ನಯ್ಯರ್
ಅನುವಾದ : ಆರ್. ಪೂರ್ಣಿಮಾ
ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್
ಪ್ರಕಟಣೆಯ ವರ್ಷ :೨೦೧೮
ಬೆಲೆ :ರೂ.೪೪೬
ಪುಟಗಳು : ೫೯೨

ಇದು ಪ್ರಸಿದ್ಧ ಪತ್ರಕರ್ತ ಕುಲದೀಪ ನಯ್ಯರ್ ಅವರ ಆತ್ಮಕಥೆಯ ಅನುವಾದ.  ಸಾಕಷ್ಟು ದೀರ್ಘವಾಗಿರುವ ಈ ಕೃತಿಸ್ವಾತಂತ್ರ್ಯೋತ್ತರ.      ಭಾರತದಲ್ಲಿ ಘಟಿಸಿದ ಅನೇಕ ದುಃಖಕರ ಘಟನೆಗಳನ್ನು ನಿರೂಪಿಸುತ್ತದೆ.  ಹಾಗೆಯೇ  ಸ್ವಾತಂತ್ರ್ಯ   ಪೂರ್ವದಲ್ಲಿ ದೇಶವನ್ನು ವಿಭಜನೆಯತ್ತ ಕೊಂಡೊಯ್ದ ರಾಜಕೀಯ ಸನ್ನಿವೇಶಗಳನ್ನು ಕುರಿತೂ ಹೇಳುತ್ತದೆ. ಸಾಮಾನ್ಯ ಆತ್ಮಕಥೆಯಲ್ಲಿರುವಂತೆ ಇಲ್ಲಿ ನಿರೂಪಕನ ಅಂತರಂಗದ ನೋಟವಿಲ್ಲ. ಇದು ಪೂರ್ತಿಯಾಗಿ ಬಹಿರಂಗದ ಘಟನೆಗಳ ಚಿತ್ರಣ.  ಚರಿತ್ರೆಯ ಘಟನೆಗಳನ್ನು ಆಧರಿಸಿದ್ದು. ಆದ್ದರಿಂದ ಇಂದು ಪ್ರತಿಯೊಬ್ಬ ಭಾರತೀಯನೂ ಓದಲೇ ಬೇಕಾದ ಅತ್ಯಂತ ಪ್ರಸ್ತುತವಾದ ಸಮಕಾಲೀನ ಚರಿತ್ರಕೋಶವಿದು.

ಸಿಯಾಲ್ ಕೋಟ್‌ನಲ್ಲಿ ಜನಿಸಿದ ಕುಲದೀಪ ನಯ್ಯರ್ ಮೊದಲು ವಕೀಲರಾಗ ಬಯಸಿದ್ದು,  ದೇಶವಿಭಜನೆಯ ನಂತರ ಭಾರತಕ್ಕೆ ಬಂದ ಬಗೆ, ದಾರಿಯುದ್ದಕ್ಕೂ ಧರ್ಮಾಂಧರಿಂದಾದ ನರಮೇಧವನ್ನು ಕಂಡದ್ದು, ಮುಂದೆ ತಾನು ಶಾಂತಿಗಾಗಿ ಶ್ರಮಿಸಬೇಕೆಂದು ನಿರ್ಧರಿಸಿದ್ದು, ಸಿಯಾಲ್ ಕೋಟನ್ನು ಬಿಟ್ಟು ಬಂದಾಗ ತಾನೊಂದು ವೈರಿ ದೇಶವನ್ನು ಬಿಟ್ಟು ಬರುತ್ತಿದ್ದೇನೆ ಎಂದು ಸ್ವಲ್ಪವೂ ಅನ್ನಿಸದಿದ್ದದ್ದು, ದೆಹಲಿಯಲ್ಲಿ ಒಂದು ಉರ್ದು  ಪತ್ರಿಕೆಯಲ್ಲಿ ವರದಿಗಾರರಾಗಿ ಸೇರಿದ್ದು,  ಗಾಂಧೀಜಿಯವರ ಹತ್ಯೆಯ ಕರಾಳ ಘಟನೆಯಿಂದ ಆಘಾತಗೊಂಡದ್ದು, ಇಂಡಿಯನ್ ಎಕ್ಸ್ ಪ್ರೆಸ್   ಪತ್ರಿಕೆಗೆ ಸೇರಿಕೊಂಡದ್ದು, ಲಾಲ್ ಬಹಾದ್ದೂರ ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದು,  ಪಾಕಿಸ್ಥಾನದೊಂದಿಗೆ ಶಾಂತಿ ಒಪ್ಪಂದಕ್ಕಾಗಿ ಶಾಸ್ತ್ರಿಯ    ವರೊಂದಿಗೆ ರಷ್ಯಾದ ತಾಷ್ಕೆಂಟಿಗೆ ಹೋಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ವಿರೋಧಿಸಿದ್ದು, ಸದಾ ವಾಕ್ ಸ್ವಾತöತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯಗಳಿ ಗಾಗಿ ಹೋರಾಡಿದ್ದು, ಗಾಂಧಿವಾದಿಯಾಗಿ ರೈತರು, ದಲಿತರು , ಸ್ತ್ರೀಯರು ಮತ್ತು ಸಮಾಜದ ದಮನಿತ ವರ್ಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದ್ದು- ಹೀಗೆ ತಮ್ಮ ವೈಯಕ್ತಿಕ ಬದುಕಿನೊಂದಿಗೆ ಬೆಸೆದುಕೊಂಡಿದ್ದ ನೂರಾರು ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳನ್ನು ಇಲ್ಲಿ ನಿರೂಪಿಸುತ್ತಾರೆ.

ಆರ್.ಪೂರ್ಣಿಮಾ ಅವರ ಅನುವಾದದ ಭಾಷೆ ಸುಂದರವೂ ಸುಲಲಿತವೂ ಆಗಿದೆ. ಬಹಳ ದೀರ್ಘವಾದ ಒಂದು ಕಥನವಾದರೂ ಅನುವಾದಕಿ ಎಲ್ಲೂ ತಾಳ್ಮೆ ಕಳೆದುಕೊಳ್ಳದೆ ಏಕಪ್ರಕಾರದ ಸಮತೋಲನವನ್ನು ಕಾಯ್ದುಕೊಂಡದ್ದು ಅವರ ಅಪಾರ ಪರಿಶ್ರಮ-ಪ್ರತಿಭೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುದ್ರಣದ ಗುಣಮಟ್ಟ, ರಕ್ಷಾಪುಟ, ಬಳಸಿದ ಕಾಗದ-ಹೀಗೆ ಎಲ್ಲ ದೃಷ್ಟಿಯಿಂದಲೂ ಪುಸ್ತಕದ ಬಾಹ್ಯ ನೋಟ ನೋಡುಗರ ಗಮನ ಸೆಳೆಯುತ್ತದೆ.

*******************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

One thought on “

  1. ತಮತಮಗೆ ಬೇಕಾದಂತೆ ಚರಿತ್ರೆ, ಇತಿಹಾಸ ಬರೆಯುವ, ಬದಲಾಯಿಸುವ ಈ ದಿನಗಳಲಿ, ಪ್ರಾಮಾಣಿಕವಾಗಿ ಇದ್ದದ್ದನ್ನು ಇದ್ದ ಹಾಗೆ ದಾಖಲಿಸುವ ಕೃತಿಗಳು ಬರುತ್ತಿರಬೇಕು, ಅನುವಾದಕರಿಗೆ ಅಭಿನಂದನೆಗಳು, ತಮಗೆ ವಂದನೆಗಳು

Leave a Reply

Back To Top