ಅಲೆವ ನದಿ
ಅಲೆವ ನದಿ
ಗಜಲ್ ಗಳು
ಕವಿ :- ಕಿರಸೂರ ಗಿರಿಯಪ್ಪ
ಪ್ರಕಾಶನ :- ಸನ್ಮತಿ ಪ್ರಕಾಶನ ಬಾಗಲಕೋಟೆ
ಬೆಲೆ:- ೮೦
ಪುಟಗಳು :- ೫೮
ಗಜಲ್ ಎಂದಾಕ್ಷಣ ನೆನಪಿಗೆ ಬರುವುದು
ಪ್ರೇಮಿಗಳ ಸರಸ ಸಲ್ಲಾಪ ,ಮನದಾಳದ ಸುಕೋಮಲ ಭಾವನೆಗಳು, ಹೆಂಗಳೆಯರ ಪಿಸು ನುಡಿಗಳು , ಒಳಹೊಕ್ಕು ಹೊರ ನೋಡುವ ತೀಕ್ಷ್ಣಮತಿ ಸೂಕ್ಷ್ಮವಾದ ಭಾವನೆಗಳ ಪೂರಣ, ಗಜಲ್ನಸಾಮಾನ್ಯ ಲಕ್ಷಣಗಳು ಕಾಫಿಯಾ ,ರದೀಪ್,ಮತ್ಲಾ,
ಮಕ್ತಾ, ಕಾಣಬಹುದು ನೆರಳು-ಬೆಳಕಿನಾಟದಂತೆ ಇವುಗಳನ್ನು ಹೊಂದಾಣಿಕೆ ಮಾಡಿದರೆ ಮಾತ್ರ ಗಜಲ್ ಆಗಲ್ಲ ಸಹಜವಾಗಿ ಮೇಳೈಸಿಕೊಂಡು ಹೃದಯವನ್ನು ತಟ್ಟಿ ಬಡಿದೆಬ್ಬಿಸಬೇಕು. ಗಜಲ್ಗಳು ಮನಸೂರೆಗೊಂಡು ಒನ್ಸ್ ಮೋರ್ ಭಾವನೆಯನ್ನು ಹೊರ ಸೂಸಬೇಕು,ಅಂದಾಗ ಆ ಗಜಲ್ ನ ಶೇರ್ ಕೇಳಿದಾಕ್ಷಣ ವ್ಹಾ ! ಉತ್ಕಟವಾದ ಭಾವನೆ ಹೊರಹೊಮ್ಮಬೇಕು ಅದು ಗಜಲ ಶಕ್ತಿ.
ಬಾಗಲಕೋಟೆ ಜಿಲ್ಲೆಯ ಕಿರಸೂರು ಗಿರಿಯಪ್ಪನವರ ಗಜಲ್ ಸಂಕಲನ ಅಲೆವ ನದಿ ಒಳಗಿನ ಅಂತರಾತ್ಮವನ್ನು ಒಂದು ಸಾರಿ ನೋಡಿ ಬರೋಣ…
ಮೊದಲಿಗೆ ಪುಸ್ತಕದ ಬಗ್ಗೆ ಮಾತನಾಡುವುದಾದರೆ ಮುದ್ರಣ ಬಹಳ ಅಚ್ಚುಕಟ್ಟಾಗಿ ಮುಖಪುಟದ ಚಿತ್ರವು ಕೂಡ ಅಷ್ಟೇ ಸೊಗಸಾಗಿ ಮನ ಸೆಳೆಯುವಂತೆ ಮೂಡಿಬಂದಿದೆ, ಮುಖಪುಟ ತಯಾರಿಸಿದ ಕಲಾವಿದರಿಗೆ ನನ್ನದೊಂದು ನಮನ.
ಇದೊಂದು ನಿತ್ಯ ಅಲೆದಾಟ ಕಲ್ಮಶಗಳನ್ನು
ತೊಳೆದು ನಿತ್ಯ ಪರಿಸರ ಮಾತೆಯು ತನ್ನೊಡಲಲ್ಲಿ ತುಂಬಿಕೊಳ್ಳುವಳು ದಾಹವನ್ನು ನೀಗಿಸಿ ,ಜಾತಿ- ಮತ-ಪಂತ ಭೇದಗಳನ್ನು ಮರೆತು ಸ್ವಚ್ಛಂದವಾಗಿ ಹರಿಯುವ ಮಾತೆ , ನಿರ್ಗುಣ ,ನಿರಾಕಾರ,ಅಲೆವ ನದಿ ಪುಸ್ತಕದ ಒಳ ಹೂರಣವನ್ನು ತಿಳಿಯೋಣ ಈ ಪುಸ್ತಕದ ಟೈಟಲ್ ಕೂಡ ಬಹಳ ಚಂದವಿದೆ.
ಗಜಲ್ ಗಳೆಂದರೆ ಪ್ರೇಮಿಗಳ ವಿರಹ, ಪ್ರೇಮಿಗಳ ಉತ್ಕಟ ಭಾವನೆ, ಸರಸ-ವಿರಸ ಸಮರಸ, ಪ್ರೀತಿಯ ಉತ್ತುಂಗದ ಸ್ಥಿತಿ, ನಿರಾಸೆ, ಕಾಮನೆಗಳು, ಕುಡುಕರ ಮಾತುಗಳು, ಹೆಂಗಳೆಯರ ಮನದಾಳದ ಪಿಸು ಮಾತುಗಳು, ಬದುಕಿನ ಮಧುಪಾತ್ರೆ, ಮೊದಮೊದಲು ಒಂದೇ ಗುಂಪಿಗೆ ಗಜಲ್ ಸೇರಿಕೊಂಡಿತ್ತು ಆದರೆ ಕಾಲ ಬದಲಾದಂತೆ ಅದರ ವಿಸ್ತಾರವು ಕೂಡ ಬದಲಾಗಿದೆ ಹೇಗೆ ?
ತನ್ನ ವಿಸ್ತಾರದ ಹರಿವನ್ನು ಗಜಲ್ ಲೋಕವು ಬಹು ವಿಸ್ತಾರವಾಗಿ ಹರಡಿಕೊಂಡಿದೆ ಜಗದ ಜಂಜಡ ಗಳಿಗೆ ಮಿಡಿಯುವ ಮನ, ಸದ್ಯದ ಆಗು ಹೋಗುಗಳಿಗೆ ಸ್ಪಂದಿಸುವ ಗಜಲ್, ರಾಜಕೀಯ,ಆರ್ಥಿಕ ಸ್ಥಿತಿ, ಮಹಿಳಾ ಪರ ಹೋರಾಟ ಧ್ವನಿ,ದಬ್ಬಾಳಿಕೆ, ದೌರ್ಜನ್ಯ, ಶೋಷಣೆ, ಗಡಿಯಾಚೆಯು ಪ್ರೀತಿಯ ಹಂಚುವಿಕೆಯ ಹುಡುಕಾಟವನ್ನು ಬಹುತೇಕ ಗಜಲ್ ಕವಿಗಳಲ್ಲಿ ಈಗೀಗ ನೋಡಬಹುದು ಇದು ಒಳ್ಳೆಯ ಬೆಳವಣಿಗೆ.
*ಬತ್ತಿದ ಬಾವಿದಂಡ್ಯಾಗ*
*ಬತ್ತಿದ ಬಾವಿದಂಡ್ಯಾಗ ಗುಬ್ಬಚ್ಚಿಗಳ ಪಾದ ನಲುಗ್ಯಾದೊ |
*ಬ್ಯಾಸಗಿ ಹೊಡೆತಕ್ಕೆ ಇರುವೆಗಳ ಪಾದ
ನಲುಗ್ಯಾದೊ |
ಈ ಮತ್ಲಾ ಗಮನಿಸಿದಾಗ ಈಗ ಗುಬ್ಬಚ್ಚಿ ಕಣ್ಮರೆಯಾಗಿ ಪರಿಸರದಲ್ಲಿ ಅವುಗಳ ಕಲರವ ಇಲ್ಲದೆ ಮನುಜ ಮೂಕವಾಗಿದ್ದಾನೆ .ಮಳೆವಿಲ್ಲದೆ ಸಣ್ಣ ಜೀವಿ ಇರುವೆ ಕೂಡಾ ಬಹಳ ತೊಂದರೆಯಲ್ಲಿ ಇವೆ ಎನ್ನುವ ಅವರ ಪರಿಸರ ಕಾಳಜಿಯ ಪ್ರಸ್ತುತ ಮನುಜ ದುರಾಸೆಯನ್ನು ಈ ಮತ್ಲಾದಲ್ಲಿ ಗಮನ ಸೆಳೆಯುತ್ತದೆ.
*ಅಳುವ ಮೋಡದ ಕಣ್ಣಿಗೆ*
*ಅಳುವ ಮೋಡದ ಕಣ್ಣಿಗೆ ನೆಲದ ಬಾಯಿ ಕಂಡಾಗ ಎಂಥಾ ಚಂದ |*
*ಕೊರಗೊ ರೆಂಬೆಯ ಒಡಲಿಗೆ ಮಣ್ಣ ನಗು ಸಿಕ್ಕಾಗ ಎಂಥಾ ಚಂದ |*
ನಾಡಿನಲ್ಲಿ ಮಳೆ ಬೆಳೆ ಎಲ್ಲಾ ಕಾಲಕ್ಕೆ ತಕ್ಕಂತೆ ಸರಿಯಾಗಿ ಆದರೆ ಬಹಳ ಚಂದ ,ಸಾಯುವ ಜೀವಕ್ಕೆ ಹಿಡಿ ಆಶ್ರಯ ಸಿಕ್ಕರೆ ಎಷ್ಟೋ ಆ ಮನ ಸಂತಸ ಗೊಳ್ಳುತ್ತದೆ ಅಲ್ಲವೆ ಕಲ್ಪನೆಯನ್ನು ಕವಿ ನಿತ್ಯ ಪರಿಚರ ಮೂಲಕ ಹೇಳಿದ್ದಾರೆ.ವ್ಹಾ.!
*ಕಂಬನಿಯ ಪಾತ್ರೆ*
*ಅವಳು ರಾತ್ರಿಯ ಬೆದೆಗೆ ನಲುಗಿ ಕನಸುಗಳ ಕಣ್ಣೀರು ಸುರಿದಳು |*
*ನನ್ನ ಹೃದಯದ ಪದ ಮಧು ಶಾಲೆಯ ಜೋಗುಳವಾಗಿ ತೇಲುತ್ತಿತ್ತು |*
ಕವಿ ಅವಳು ರಾತ್ರಿ ಬೆದರಿ ,ಕನಸುಗಳು ಕಮರಿ ನಯನಗಳು ಒದ್ದೆಯಾದವು ಆ ನೋವಿಗೆ ಹೃದಯ ವೀಣೆ ಜೋಗುಳವಾಗಿ ಹಾಡುತ್ತಿತ್ತು ಬಹಳ ಸುಂದರವಾದ ವರ್ಣನೆ ಸಹಜವಾಗಿ ಮೂಡಿ ಬಂದಿದೆ.
*ಖುತುಮಾನಗಳಿಗೊಂದು ಪತ್ರ*
*ಇಬ್ಬನಿಯ ಹಿಗ್ಗಿನಲಿ ತೇಲುವ ಕರುಳ ಕುಟುಕಿನ ಜೋಳದ ಕುಡಿ ನಾನು*
*ಮುಸುಕದಿರಿ ಸಂತತಿಯ ಬೀಜ ನೆಲದ ತೇವ ಹಿಡಿದಾಡಿಸುವ ಕಾಲ*
ಪ್ರತಿ ಅಣುರೇಣು ಕೂಡಾ ಸಂತೋಷದಲ್ಲಿ ತೇಲುವ ಸಮಯದಲ್ಲಿ ಸ್ವಲ್ಪವಾದರೂ ಆಶೆಯ ಭಾವನೆಗಳನ್ನು ಹೊಂದಿರುತ್ತದೆ, ಜೀವ ಸಂತತಿಯ ಹಾಳು ಮಾಡದಿರಿ ನೆಲದ ಋಣವ ತೀರಿಸಲು ಬಿಡಿ ಎಂದ ಆರ್ಥಾನಾದ ಭಾವ ಬಹುತೇಕ ಇವರ ಗಜಲ್ ಗಳಲ್ಲಿ ಕಾಣಬಹುದು .
*ಕತ್ತಲಿನಾಚೆ*
*ಪ್ರೀತಿ ಗೆಲ್ಲದ ಪದಗಳು ಎಷ್ಟು ಹಾಡಿದರೇನು ! ಬೆಳಕಿನಾಚೆ*
*ಎದೆಗೆ ನಾಟದ ಧರ್ಮಗಳ ಎಷ್ಟು ಹುಡುಕಿದರೇನು ಕತ್ತಲಿನಾಚೆ*
ಹೃದಯಗಳ ಭಾಷೆಯನ್ನು ಅರಿತು ಪ್ರೀತಿಯಿಂದ ಜಗವ ಗೆಲ್ಲಬೇಕು ಆ ಪದಗಳು ಪ್ರೀತಿಯಿಲ್ಲದ ಮೇಲೆ ಹೇಗೆ ಹುಟ್ಟುತ್ತವೆ ಎಂಥಾ ಮಾತು ಈ ಸಾಲು ನಾಡಿನ ಹಿರಿಯ ಕವಿಯಾದ ಡಾ | ಜಿ.ಎಸ್.ಶಿವರುದ್ರಪ್ಪ ಕವಿತೆ ನೆನಪಿಗೆ ಬಂತು.
ಎದೆಯಲ್ಲಿ ಪ್ರೀತಿಯನ್ನು ನಾಟದ ಧರ್ಮ ಇದ್ದರೆಷ್ಟೊ ಬಿಟ್ಟರೆಷ್ಟೊ !
*ಪ್ರೀತಿ ಬಟ್ಟಲು*
*ಫಲವತ್ತಾದ ಪೈರನು ಬೆಳೆದ ರಾಶಿಯಾದ ಕೈಗಳು*
*ಹುತ್ತದ ಬಳ್ಳಿಯಲ್ಲಿ ಒಡಲ ಸವಿಗಾಗಿ ತಡಕಾಡಿದವು*
ರೈತ ತನ್ನ ನೆಲದವ್ವನ್ನು ಪ್ರೀತಿಯಿಂದ ಬೆಳೆಗಳನ್ನು ಬೆಳೆದು ಜಗಕ್ಕೆ ಅನ್ನವನ್ನು ನೀಡಿದ ಕೈಗಳು ಇಂದು ಆಧುನಿಕ ಕಾಲದ ವಿಷಪೂರಿತ ಕ್ರಿಮಿನಾಶಕಗಳ ಹಾವಳಿ,ನೀರಿಲ್ಲದೆ ಒಣ ಭೂಮಿಯಲ್ಲಿ ನಾಳೆಯ ಕಾಳಿಗಾಗಿ ಪರಿತಪಿಸುವ ಕಾಲ ಬಂದಿದೆ.
*ಕುರಿ ಕಾಯುವ ನನ್ನೊಳಗ*
*ನೇಗಿಲ ಹೂಡೋ ನನ್ನೊಳಗೆ ನೀನು ಹದವಾದ ಮಣ್ಣಿನ್ಹಂಗ*
*ನೆಲಕ್ಕುರುಳೋ ಎಲೆಗಳ ದನಿಯಲಿ ಹೊಸ ಚಿಗುರಿನ ನೆಲೆಯ್ಹಂಗ*
ಈ ಷೇರ್ ಗಮನಿಸಿದಾಗ ನೇಗಿಲಯೊಳಗೆ ಅಡಗಿದೆ ಕರ್ಮವೆಂಬ ಕುವೆಂಪು ನೆನಪಿಗೆ ಬರುತ್ತದೆ.ಬದುಕಿನ ಬಹು ಪಾಲು ನಾವು ಮಣ್ಣಿನೊಂದಿಗೆ ಕಲಿಯಬೇಕು ಅವಳು ಹದಭರಿತವಾದ ಮಣ್ಣು ಎಂಬ ಹೋಲಿಕೆ ಸಹಜವಾಗಿದೆ.ಹೊಸ ಬೆಳಕಿನಲಿ ಜೀವನದಲಿ ನೆಲಕ್ಕೆ ಎಲೆಗಳು ಉರುಳಿ ಮರಳಿ ನೆಲದ ಋಣವನ್ನು ತೀರಿಸಬೇಕು,ಮತ್ತೆ ಹುಟ್ಟುವ ವಸಂತ ಚಿಗುರಿನ ನೆಲೆಯ್ಹಂಗ ಬಹಳ ಮಾರ್ಮಿಕವಾದ ಸಾಲುಗಳು.
*ನೆಲದ ಮಾತಾಗಿ ಉಳಿದವು*
*ಅಲೆಯ ಬಡಿತಗಳ ಅರಗಿಸಿ ಮುತ್ತುಗಳ ದನಿಯಾತು ಬೆವರು*
*ಹಜ್ಜೆಗಳ ಸವೆತ ಉಂಡ ರಸ್ತೆಗಳು ದೀಪಗಳ ನೆರಳಾಗಿ ಉಳಿದವು*
ಕಷ್ಟಕಾರ್ಪಣ್ಯಗಳನ್ನು ನುಂಗಿದ ಜೀವ ಮುಂದೊಂದು ದಿನ ಸಿಹಿಯಾದ ಸವಿಗಳಿಗೆ ಅನ್ನು ಸವಿಯಬಲ್ಲದು ಅದರಂತೆ ಇಟ್ಟ ಹೆಜ್ಜೆ ಹೋರಾಟದ ಬದುಕಿನಲ್ಲಿ ಕಳೆದು ಹೋದ ದಿನಗಳಲ್ಲಿ ಆ ರಸ್ತೆಗಳೇ ಮುಂದೆ ನಿನಗೆ ದಾರಿದೀಪವಾಗಿ ಬೆಳಗಬಲ್ಲ ವೆಂಬ ಶ್ರಮಿಕರ ದಮನಿತರ ನುಡಿ ಈ ಸಾಲಿನಲ್ಲಿ ಕಾಣಬಹುದು.
ಅವರ ಗಜಲ್ ಗಳನ್ನು ಗಮನಿಸುತ್ತಾ ಹೋದರೆ ಬಹುತೇಕ ಗಜಲ್ ಗಳು ತನ್ನ ಸುತ್ತಮುತ್ತಲಿನ ಅನುಭವಿಸಿದ ನೆಲಮೂಲದ ಅನುಭವಗಳ ಕಟ್ಟಿಕೊಟ್ಟ ಗಜಲ್ ಸಂಕಲನ ಎಂದು ಹೇಳಬಹುದು ಆದರೆ ಈ ಗಜಲ್ ಸಂಕಲನದಲ್ಲಿ 35 ಗಜಲ್ ಗಳು ಒಳಗೊಂಡಿವೆ. ಆದರೆ ಕವಿ ಏಕೋ ಒಂದೇ ಬಗೆಯ ಪ್ರಕಾರಕ್ಕೆ ಸೀಮಿತಗೊಂಡಂತೆ ಚೌಕಟ್ಟನ್ನು ಹಾಕಿಕೊಂಡಿದ್ದಾರೆ ಎಂದು ನನಗನಿಸುತ್ತದೆ.
ಇವರ 30 ಗಜಲ್ ಗಳು ಮುರದ್ದಪ್ ಗಜಲ್ ಗಳಾಗಿದ್ದು ,ಉಳಿದ 5 ಗಜಲ್ ಗಳು ಗೈರಮುರದ್ದಪ್, ಒಟ್ಟಾರೆಯಾಗಿ ಒಂದೇ ಪ್ರಕಾರದ ಗಜಲ್ ಪುಸ್ತಕ ಮಾಡಿದ್ದರೆ ಓದುಗರಿಗೆ ಇನ್ನೂ ಚೆನ್ನಾಗಿತ್ತೇನೋ ಓದಿದಾಗ ಅನಿಸಿದ ಭಾವನೆ.
*ಗಜಲ್ ಗಳೆಂದರೆ ಹಾಡುಗಬ್ಬ* ಸುಲಭವಾಗಿ ಹಾಡಿ ಅವುಗಳು ನಮ್ಮ ಮನವನ್ನು ತನಿಸಿ ಮತ್ತೆ ಮತ್ತೆ ನಮ್ಮೊಳಗೆ ಧ್ಯಾನಿಸುವಂತೆ ಮಾಡಬೇಕು ಇವರ ಬಹುತೇಕ ಗಜಲ್ಗಳು ಹಾಡಲು ಬರುವುದಿಲ್ಲ ,ಆದರೆ ಭಾವನೆ ತೀವ್ರತೆ, ಅಭಿವ್ಯಕ್ತಿ ಉತ್ಪ್ರೇಕ್ಷೆ ಎಲ್ಲವನ್ನು ಸೇರಿಸಿ ಒಂದು ಕ್ಷಣ ನಮ್ಮೊಳಗೆ ಅವುಗಳನ್ನು ಚಿಂತಿಸುವ ಪ್ರಯತ್ನ ಮಾಡಿದ್ದಾರೆ.
ಇವರ ಗಜಲ್ಗಳು ಕಂಡಂತೆ ಕಾಫಿಯಾ ಮತ್ತು ರದೀಪ್ ಬಹಳ ಉದ್ದನೆಯ ಸಾಲುಗಳನ್ನು ಒಳಗೊಂಡಿವೆ , ರದೀಪ್ ಮತ್ತು ಕಾಫಿಯಾ ಕೇಳಿದ ತಕ್ಷಣ ವ್ಹಾ ಎನ್ನುವ ಉದ್ಗಾರ ನಮ್ಮೊಳಗೆ ಪ್ರಜ್ವಲಿಸಬೇಕು.ಆ ರೀತಿಯಲ್ಲಿ ಸಮ ಸಾಲುಗಳುಳ್ಳ ಸರಳ ಪದಗಳನ್ನು ಬಳಸಿದರೆ ಇನ್ನೂ ಚೆನ್ನಾಗಿರುತ್ತದೆಯೆಂದು ಹೇಳಬಹುದು.
ಕವಿಯು ಹೊಲ, ರೆಂಟೆ,ಕುಂಟೆ, ಮಣ್ಣು ,ಎಲೆ, ಬೀಜ, ಕಣ್ಣು, ಹೀಗೆ ಇತ್ಯಾದಿ ಪದಗಳ ಸುತ್ತಲೂ ಗಜಲ್ ಗಳು ಗಿರಕಿ ಹೊಡೆದುವೆಂಬ ಭಾವನೆ ವ್ಯಕ್ತವಾಗುತ್ತದೆ , ಹಲವು ಕಡೆ ಬಳಸಿದ ಪದಗಳೇ ಪದೇಪದೇ ಪುನರ್ ಬಳಕೆಯಾಗಿವೆ.ಇಂಥ ಕಡೆ ಸ್ವಲ್ಪ ಗಮನಿಸಬೇಕೆಂಬ ಗಜಲ್ ಓದುಗನಾಗಿ,ಗಜಲ್ ಕೇಳುಗನ ವಿನಂತಿ.
ಹೀಗೆ ಇವರ ಗಜಲ್ ಸಂಕಲನವನ್ನು ಗಮನಿಸಿದಾಗ ಚಂದನೆಯ ಮುಖಪುಟ ಗಜಲ್ ಗಳಿಗೆ ತಕ್ಕ ಹಾಗೆ ಇರುವ ರೇಖಾ ಚಿತ್ರಗಳು. ಗಜಲ್ ನ ಮೂಲ ಆಶಯವನ್ನು ಕನ್ನಡೀಕರಿಸುವುದು ಬಹಳ ಕಷ್ಟದ ಕೆಲಸ ಆದರೂ ಕವಿವರ್ಯ ಬಹಳ ಜಾಣ್ಮೆಯಿಂದ ಜನಪದಿಯ ಶೈಲಿಯಲ್ಲಿ ಆಡುಮಾತಿನಲ್ಲಿ, ಇವರ ಗಜಲ್ ಕಟ್ಟುವಗಾರಿಕೆ ವಿಸ್ಮಯಗೊಳಿಸುತ್ತದೆ, ನಿತ್ಯ ಬದುಕಿನ ಪ್ರೀತಿಯ ಹುಡುಕಾಟ ನೆಲದ ಮೇಲಿರುವ ಅದಮ್ಯ ಪ್ರೀತಿ,ಕೆಲವು ಕಡೆಗೆ ಮತ್ಲಾ ಮಕ್ತಾ ಸೂಜಿಗಲ್ಲಿನಂತೆ ಗಮನ ಸೆಳೆದು ನಿಲ್ಲಿಸಿಬಿಡುತ್ತದೆ,
ಹಿರಿಯರು ಹೇಳಿದಂತೆ ಅನುಭಾವದಲ್ಲಿ ಅಮೃತವೂ ತುಂಬಿರುತ್ತದೆ ಹಾಗೆ ತತ್ವಪದಗಳಲ್ಲಿ,ವಚನಗಳ ಆಗಲಿ, ಸೂಫಿ ಸಾಹಿತ್ಯ,ಹೀಗೆ ಎಲ್ಲವೂ ಆ ಕಾಲಘಟ್ಟದ ನಡುವೆ ನಮ್ಮ ನೆಲವನ್ನು ಒಂದು ಕ್ಷಣ ಮಂತ್ರಮುಗ್ಧ -ರನ್ನಾಗಿ ಆಗಿನ ವ್ಯವಸ್ಥೆಯನ್ನು ಬಿಂಬಿಸುತ್ತದೆ, ಇವರು ಕೂಡ ತಮ್ಮ ಸುತ್ತಲಿನ ಪರಿಸರವನ್ನು ಬಿಂಬಿಸಿ ಗಜಲ್ ಮೂಲಕ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ ನಮ್ಮೆಲ್ಲರನ್ನು ಹೊಸ ಬಗೆಯ ಒಳನೋಟವನ್ನು ಇಣುಕಿ ಇಣುಕಿ ನೋಡುವಂತೆ ಈ ಪುಸ್ತಕವು ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪುಸ್ತಕ ಬಹಳ ಆಕರ್ಷಕವಾಗಿದೆ ಜೊತೆಗೆ ಬಳಸಿದ ಕಾಗದಗಳು ಮತ್ತು ಮುದ್ರಣವನ್ನು ಸುಂದರವಾಗಿ ಮಾಡಿದ್ದಾರೆ,ಅವರಿಗೂ ಪ್ರೀತಿಯ ಸಲಾಂ.
ಹೊಸ ಪುಸ್ತಕಗಳು ಬಂದಾಗಲೆಲ್ಲ ಆ ಪುಸ್ತಕವನ್ನು ಕೊಟ್ಟು ಓದಿನ ರುಚಿ ಹಚ್ಚುವ ಬೆನ್ನುಬಿದ್ದು ಅದರ ಬಗ್ಗೆ ಟಿಪ್ಪಣಿ ಬರೆಸುವ ಕಥೆಗಾರರಾದ ಅನಿಲ್ ಗುನ್ನಾಪೂರ ಅವರಿಗೆ ಪ್ರೀತಿ ಪೂರ್ವಕವಾದ ಧನ್ಯವಾದಗಳು.
ಪುಸ್ತಕದ ಹೆಸರಿನಲ್ಲಿಯೂ ಕೂಡ ವಿಸ್ಮಯ ಅಲೆವ ನದಿ* ಈ ಪುಸ್ತಕವನ್ನು ನೀವುಗಳು ಕೊಂಡು ಓದಿ ನಿಮಗೂ ಕೆಲವು ಬದುಕಿನ ಅಲೆದಾಟದ ಚಿತ್ರಣವು ದೊರಕುತ್ತದೆ ಎಂದು ಹೇಳಬಹುದು, ಸಾಹಿತ್ಯಲೋಕಕ್ಕೆ ಈ ರೀತಿಯ ಇನ್ನೂ ಹೆಚ್ಚಿನ ಪುಸ್ತಕಗಳು ವಿಭಿನ್ನವಾಗಿ ಕಿರಸೂರ ಗಿರಿಯಪ್ಪನವರಿಂದ ಬರಲಿ ಎಂದು ಶುಭ ಹಾರೈಸುತ್ತೇನೆ
****************************************
ಮುತ್ತು ಬಳ್ಳಾ ಕಮತಪುರ
super sir