ಕಥೆ
ಧೃಡ ಚಿತ್ತ
ವಾಣಿ ಸುರೇಶ್
ರಾತ್ರಿ ಎಲ್ಲಾ ಕೆಲಸ ಮುಗಿಸಿ ರೂಮಿಗೆ ಹೋದ ಹರಿಣಿ ಬಾಲ್ಕನಿಯಲ್ಲಿ ಆಕಾಶ ನೋಡುತ್ತಾ ಸುಮ್ಮನೆ ನಿಂತಳು.ಧಾತ್ರಿ ಹೇಳಿದ ಮಾತು ಇನ್ನೂ ಅವಳ ಕಿವಿಯಲ್ಲಿ ಗುಣಗುಣಿಸುತ್ತಿತ್ತು.ನನಗ್ಯಾಕೆ ಅವಳಂತೆ ಮನೆಯಲ್ಲಿ ಹೇಳಕ್ಕಾಗಲ್ಲ ಎಂದು ಯೋಚಿಸುತ್ತಿರುವಾಗ ಗಂಡ ವಿಜಯ್ ಬಂದು ಪಕ್ಕದಲ್ಲಿ ನಿಂತನು.” ಇನ್ನು ಕೂಡ ಆ ನೆಟ್ ಫ್ಲಿಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ಯಾ? ಈಗಿನ ಮಕ್ಕಳು ಗೊತ್ತಲ್ವಾ ಹರಿಣಿ? ನಾವು ನೆಟ್ ಫ್ಲಿಕ್ಸ್ ಸಬ್ಸ್ಕ್ರೈಬ್ ಮಾಡದಿದ್ರೆ ಅವ್ಳು ಯಾರದ್ದೋ ಅಕೌಂಟ್ ಶೇರ್ ಮಾಡಿ ತನಗೆ ಬೇಕಾದ್ದನ್ನು ನೋಡುತ್ತಾಳೆ.ಅವ್ರೆಲ್ಲಾ ಹಿಂದಿ ನಿಂದ ಆಡ್ಕೊಳ್ತಾರೆ ಆಮೇಲೆ! ಅದ್ರ ಬದ್ಲು ಟ್ಯೂಷನ್ ಆದ ಮೇಲೆ ಒಂದೇ ಗಂಟೆ ಸೀರೀಸ್ ನೋಡು ಅಂತ ಸ್ಟ್ರಿಕ್ಟ್ ಆಗಿ ಹೇಳೋಣ. ಅದೇನು ನೋಡ್ತಾಳೆ ಅಂತ ನಮ್ಗೂ ಕಣ್ಣಿಡಬಹುದು” ಅಂದಾಗ ಹರಿಣಿಗೂ ಸರಿಯೆನಿಸಿ ತಲೆಯಾಡಿಸಿದಳು. ” ನಿನ್ನ ಮಗರಾಯನಿಗೂ ಸ್ವಲ್ಪ ಬುದ್ದಿ ಹೇಳು! ಇನ್ನೂ ಎಳೇಮಗೂ ತರ ಆಡ್ತಾನೆ.ನಾನು ನಾಳೆ ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಂಗಳೂರಿಗೆ ಹೊರಡುತ್ತೇನೆ.ರವಿ ಬರ್ತಾನೆ ನಂಜೊತೆ.ನಾಡಿದ್ದು ಮದ್ವೆ ಊಟ ಮುಗಿಸಿಕೊಂಡು ಹೊರಟ್ರೆ ರಾತ್ರಿ ಇಲ್ಲಿ ತಲುಪ್ತೇವೆ.” ” ನಿನ್ನ ಮಗರಾಯ” ಎಂದು ಗಂಡ ಹೇಳಿದ್ದಕ್ಕೆ ಸಿಟ್ಟು ಬಂದರೂ ತಡೆದುಕೊಂಡು , ” ಸರಿ ಹಾಗೇ ಮಾಡಿ” ಅಂದಳು.
ಮದುವೆಯಾಗಿ ಐದು ವರ್ಷಗಳ ನಂತರ, ಜನರ ಕೊಂಕು ಮಾತುಗಳನ್ನು ಕೇಳಿ ಹೈರಾಣಾಗಿ ಹೋದವಳಿಗೆ, ಮಗ ಹುಟ್ಟಿದಾಗ ಆದ ಸಂಭ್ರಮ ಹೇಳತೀರದು! ಮಗನಿಗೆ ಐದು ವರ್ಷ ತುಂಬುವವರೆಗೆ ಕೆಲಸಕ್ಕೆ ಹೋಗದೆ ಅವನ ಆಟಪಾಠಗಳಲ್ಲಿ ಮಗ್ನಳಾಗಿ ತಾಯ್ತನದ ಸುಖ ಅನುಭವಿಸಿದ್ದಳು ಅವಳು.ಅಜ್ಜಿ, ತಾತ ,ಅಮ್ಮನ ಅತಿಯಾದ ಮುದ್ದಿನಿಂದಾಗಿ ಅವನು ಸೋಮಾರಿಯಾಗಿ ಬೆಳೆದಿದ್ದ.ಆರು ವರ್ಷದ ನಂತರ ಹುಟ್ಟಿದ ಮಗಳನ್ನು ಕೂಡ ಮುದ್ದಾಗಿ ಬೆಳೆಸಿದರೂ ಮಗನಷ್ಟಲ್ಲ.ಅದಕ್ಕೇನೇ ಆವಾಗಾವಾಗ ” ನಿನ್ನ ಮಗ” ಎಂದು ಗಂಡ ಹೇಳುವಾಗ ಸಿಟ್ಟು ಬರುವುದು ಹರಿಣಿಗೆ.
**”******
ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸ್ಟೇಜ್ ಪ್ರ್ಯಾಕ್ಟೀಸ್ ಮಾಡಿಸುತ್ತಿರುವಾಗ ಓಡೋಡಿ ಬಂದ ಆಯಾ ಹರಿಣಿ ಗೆ ಫೋನ್ ಕೊಟ್ಟು, “ನಾಲ್ಕೈದು ಸಲ ನಿಮ್ಮತ್ತೆ ಫೋನ್ ಮಾಡಿದ್ರಂತ ಗೀತಾ ಮೇಡಂ ನಿಮ್ಮತ್ತೆ ಜತೆ ಮಾತಾಡಿದ್ರಂತೆ. ಏನೋ ಅರ್ಜೆಂಟಂತೆ, ನೀವು ಈವಾಗ್ಲೇ ಫೋನ್ ಮಾಡ್ಬೇಕಂತೆ” ಅಂದಳು. ಹರಿಣಿಗೆ ಭಯದಿಂದ ಎದೆ ಧಸಕ್ಕೆಂದಿತು!! ಗಂಡ ಕೂಡ ಇಲ್ಲಿಲ್ಲವಲ್ಲ ಅಂದುಕೊಳ್ಳುತ್ತಾ ಫೋನ್ ಮಾಡಿದಾಗ , ಮಾತಾಡಿದ್ದು ಪಕ್ಕದ ಮನೆಯ ಸೋಮು ಅಂಕಲ್. ” ನಿನ್ನ ಮಾವನಿಗೆ ಆಗಾಗ ಆಗೋವಂತೆ ಶುಗರ್ ಜಾಸ್ತಿಯಾಗಿ ತಲೆಸುತ್ತು ಬರ್ತಿದೆ, ಜೊತೆಗೆ ವಿಪರೀತ ಸುಸ್ತು. ಗಾಬ್ರಿ ಮಾಡ್ಕೊಳ್ದೆ ಆರಾಮವಾಗಿ ಸ್ಕೂಟರ್ ನಲ್ಲಿ ಬಾಮ್ಮ ನೀನು. ನಾವಿದ್ದೀವಲ್ಲಾ ಇಲ್ಲಿ” ಅಂದಾಗ ಅವರ ಕಾಳಜಿಯ ಮಾತಿಗೆ ಹರಿಣಿಯ ಕಣ್ಣು ತುಂಬಿ ಬಂತು! ಮಾವನದೇ ವಯಸ್ಸಿನವರಾದರೂ ಆರೋಗ್ಯದ ಬಗ್ಗೆ ಎಷ್ಟು ಗಮನಕೊಡುತ್ತಾರೆ ಅವರು!! “ಅರ್ಧ ಗಂಟೆಯಲ್ಲಿ ಅಲ್ಲಿರ್ತೇನೆ ಅಂಕಲ್” ಎಂದು ಫೋನಿಟ್ಟಳು.
ಶಾಲೆಯ ಸಮಯ ಮುಗಿದಿದ್ದರಿಂದ ಸೀದಾ ಮನೆಗೆ ಬಂದು , ಅತ್ತೆ ಮಾವನನ್ನು ಆಸ್ಪತ್ರೆಗೆ ಕರೆದೊಯ್ದಳು. ಇವರ ಕತೆ ಮೊದಲೇ ಗೊತ್ತಿದ್ದ ಡಾಕ್ಟರ್, ಹರಿಣಿಯ ಅತ್ತೆ ಮಾವನ ಮೇಲೆ ಹರಿಹಾಯ್ದರು.” ಪ್ರತಿ ತಿಂಗಳೂ ಈ ತರ ಸಮಸ್ಯೆ ತಗೊಂಡು ಬರ್ತೀರಲ್ವಾ ನೀವು?ಸ್ವಲ್ಪ ನಾದ್ರೂ ಆರೋಗ್ಯದ ಕಡೆಗೆ ಗಮನ ಕೊಡಬಾರ್ದಾ? ಇವತ್ತು ಅಡ್ಮಿಟ್ ಮಾಡ್ಬೇಕಾಗತ್ತೆ ಇವ್ರನ್ನು” ಅಂದಾಗ ಹರಿಣಿ ಚಿಂತಾಕ್ರಾಂತಳಾದಳು. ನಾಳೆ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆ ವಹಿಸಿರುವ ತನಗೆ ರಜೆ ಸಿಗುವುದು ಸಾಧ್ಯವೇ ಇಲ್ಲ. ಏನಾದರೂ ಉಪಾಯ ಮಾಡೋಣ ಅಂದುಕೊಳ್ಳುತ್ತಾ ಕೌಂಟರ್ ಕಡೆಗೆ ನಡೆದಳು.
ಮಾವನನ್ನು ರೂಮಿಗೆ ಕರೆದೊಯ್ದು ಟ್ರೀಟ್ಮೆಂಟ್ ಶುರು ಮಾಡಿದ ನಂತರ ಮಗನಿಗೆ ಫೋನ್ ಮಾಡಿ ” ತಾತನನ್ನು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದ್ದಾರೆ. ಸ್ವಲ್ಪ ಹೊತ್ತಲ್ಲಿ ನೀನು ಇಲ್ಲಿಗೆ ಬಾ.ಇವತ್ತು ರಾತ್ರಿ ನೀನು ತಾತನ ಜೊತೆಗಿರು” ಅಂದಳು. ಮಗ ಅಚ್ಚರಿಯಿಂದ ” ನಾನಾ? ” ಎಂದಾಗ , ” ಹೌದು ನೀನೇ. ನಂಗೆ ನಾಳೆ ಬೆಳಗ್ಗೆ ಆರು ಗಂಟೆಗೆ ಶಾಲೆಯಲ್ಲಿರ್ಬೇಕು.ರಾತ್ರಿ ಹೊತ್ತು ಅಜ್ಜಿ ಇಲ್ಲಿರೋದು ಸರಿಯಲ್ಲ. ಬೇಗ ಬಾ” ಅಂದಳು. ” ನೀನು ರಜೆ ಹಾಕಲ್ವಾ? ” ಎಂದು ಅಚ್ಚರಿಯಿಂದ ಕೇಳಿದ ಅತ್ತೆಗೆ ಶಾಂತವಾಗಿಯೇ ” ಈ ತರದ ಪರಿಸ್ಥಿತಿಯನ್ನು ನೀವಾಗೇ ತಂದುಕೊಂಡದ್ದಲ್ವಾ ಅತ್ತೆ? ನಾನು ಎಷ್ಟಂತ ರಜೆ ಹಾಕ್ಲಿ? ಮಕ್ಳು ಹೆಲ್ಪ್ ಮಾಡ್ತಾರೆ ” ಅಂದಳು. ತಪ್ಪು ತಮ್ಮದಿರುವಾಗ ಸೊಸೆಯ ಹತ್ತಿರ ಮಾತನಾಡಿದರೆ ಕಷ್ಟ ಎಂದು ಅವರೂ ಸುಮ್ಮನಾದರು. ಮಗನನ್ನು ಮಾವನ ಬಳಿ ಬಿಟ್ಟು ಅತ್ತೆಯ ಜೊತೆ ಹರಿಣಿ ಮನೆಗೆ ಹೋದಳು. ಟಿವಿ ನೋಡುತ್ತಾ ಕುಳಿತ ಮಗಳನ್ನು ಕರೆದು, “ನಾನು ನಾಳೆ ಶಾಲೆಗೆ ಹೋಗುತ್ತೇನೆ. ನೀನು ಕ್ಯಾಬ್ ಬುಕ್ ಮಾಡಿ ಅಜ್ಜಿಯ ಜೊತೆ ಆಸ್ಪತ್ರೆಗೆ ಹೋಗು” ಅಂದಳು.
” ನಾನಾ?” ಎಂದು ಪ್ರಶ್ನಿಸಿದ ಮಗಳಿಗೆ , ” ಹೌದು ನೀನೇ. ನಾಳೆ ಬೆಳಗ್ಗೆ ಬೇಗ ಎದ್ದು ಅಜ್ಜಿಗೆ ಅಡುಗೆಮನೆಯಲ್ಲಿ ಹೆಲ್ಪ್ ಮಾಡು” ಎಂದು ಹೇಳುತ್ತಾ ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ತಯಾರಿಗೆ ತೊಡಗಿದಳು.
*********
ಮಾರನೇ ದಿನ ಬೆಳಗ್ಗೆ ಶಾಲೆಗೆ ಹೊರಟ ಹರಿಣಿಗೆ ಈ ಸೂರ್ಯೋದಯ ಹೊಸತೆಂಬಂತೆ ಕಂಡಿತು.ಮಗನಿಗೆ ಫೋನ್ ಮಾಡಿದಾಗ ಮಾವ ಚೇತರಿಸುತ್ತಿದ್ದಾರೆಂದು ಕೇಳಿ ಇನ್ನಷ್ಟು ಸಮಾಧಾನವಾಯಿತು. ಶಾಲೆಯ ಕಾರ್ಯಕ್ರಮ ಸುಸೂತ್ರವಾಗಿ ನಡೆದು ಊಟಕ್ಕೆ ಕುಳಿತು, ಧಾತ್ರಿಗೆ ಮನೆಯ ಕತೆ ಹೇಳಿದಾಗ ಅವಳಿಗೆ ಅಚ್ಚರಿಯೋ ಅಚ್ಚರಿ!! ಅವಳು “ನಿಜಾನಾ ? ನಂಬಕ್ಕಾಗ್ತಿಲ್ಲ ನಂಗೆ!!!” ಎಂದು ಕೇಳಿದಾಗ ಹರಿಣಿ ನಗುತ್ತಾ “ಹೌದಮ್ಮಾ..ಜವಾಬ್ದಾರಿ ಯನ್ನು ನಾವಾಗೇ ವಹಿಸಿಕೊಡೋವರ್ಗೂ ಎಲ್ರೂ ಸುಮ್ನಿರ್ತಾರೆ. ಇದೊಂದು ಪಾಠ, ಕಲ್ತು ಕೋ ” ಅಂದಳು.
*************************************
Good right decision.
thank u