ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ

ಗಾಂಧಿ ವಿಶೇಷ

ಗಾಂಧೀಜಿಯವರ ‘ಹಿಂದ್

ಸ್ವರಾಜ್’ನ ಶತಮಾನೋತ್ತರ

ಪ್ರಸ್ತುತತೆ

“ಈ ಭೂಮಿ ಪ್ರತಿಯೊಬ್ಬ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ.  ಆದರೆ ಆತನ ಆಸೆಗಳನ್ನು ಪೂರೈಸುವಷ್ಟಲ್ಲ”

–           ಎಂ.ಕೆ. ಗಾಂಧೀ

ಗಾಂಧೀಜಿಯವರ ‘ಹಿಂದ್ ಸ್ವರಾಜ್’ಗೆ ನೂರಾ ಹನ್ನೊಂದು ವರ್ಷಗಳಾದರೂ ಅದರ ಪ್ರಸ್ತುತತೆ ಕುರಿತಂತೆ ಜಿಜ್ಞಾಸೆ ಇದೆ. ೧೯೦೮ ರಲ್ಲಿ ಬರೆದ “ಹಿಂದ್ ಸ್ವರಾಜ್” ಮೇಲ್ನೋಟಕ್ಕೆ ಸಣ್ಣ ಪುಸ್ತಕ. ಹಿಂದ್ ಸ್ವರಾಜ್ ಕೃತಿಯನ್ನು ಅಂದಿನ ಸಂದರ್ಭಕ್ಕನುಗುಣವಾಗಿ ವಿಶ್ಲೇಷಿಸಬೇಕೇ ಅಥವಾ ಇಂದಿನ ಸಂದರ್ಭದಲ್ಲೂ ಅದು ಸುಸಂಗತವೇ ಎಂಬ ಕುರಿತು ಜಿಜ್ಞಾಸೆ ಇದೆ. ಗಾಂಧೀಜಿ ಪುಸ್ತಕ ರಚನೆ ಮಾಡಿದ ಸಂದರ್ಭ ಹಾಗೂ ಇಂದಿನ ಸಂದರ್ಭಗಳು ಬೇರೆ ಬೇರೆಯಾದರೂ ವಾಸ್ತವವಾಗಿ ವಸ್ತುಸ್ಥಿತಿಯಲ್ಲಿರುವ ಸಾಮ್ಯತೆಯನ್ನು ಅಲ್ಲಗಳೆಯಲಾಗದು.

ಕಳೆದ ಹಲವಾರು ರಾಜಕೀಯ ಸಂದರ್ಭಗಳಲ್ಲಿ, ವಿಶ್ಲೇಷಣೆಗಳಲ್ಲಿ, ಸಾಮಾಜಿಕ ಚಳುವಳಿಗಳಲ್ಲಿ, ಜಾಗತೀಕರಣ ವಿರೋಧಿ ಚಳುವಳಿಗಳಲ್ಲಿ ಗಾಂಧೀಜಿಯವರ ಈ ಕೃತಿಯ ಉಲ್ಲೇಖ ಬರುತ್ತಿರುವುದನ್ನು ನಾವು ಗಮನಿಸಬೇಕು. ಇಲ್ಲಿ ಗಾಂಧೀ ಒಬ್ಬ ದಾರ್ಶನಿಕರಾಗಿ ಹೊರಹೊಮ್ಮುತ್ತಿರುವುದೂ ಅಷ್ಟೇ ಸತ್ಯ.

ಗಾಂಧೀ ಬರೆಯಲೇಬೇಕೆಂದು ಬರೆದ ಪುಸ್ತಕಗಳ ಸಂಖ್ಯೆ ಬಹಳ ಕಡಿಮೆ.  ಗಾಂಧೀ ಬರೆದ  ಮೂರು ಪುಸ್ತಕಗಳಲ್ಲಿ ಅತೀ ಹೆಚ್ಚು ಗಮನ ಸೆಳೆಯುವುದು ‘ಹಿಂದ್ ಸ್ವರಾಜ್’. ಇನ್ನಿತರ ಪುಸ್ತಕಗಳೆಂದರೆ : ಅವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ಹಾಗೂ ‘ದಕ್ಷಿಣ ಆಫ್ರಿಕೆಯಲ್ಲಿ ಸತ್ಯಾಗ್ರಹ’.  ಹಿಂದ್ ಸ್ವರಾಜ್ ಗಾಂಧಿಯವರ ಮಹತ್ವದ ಕೃತಿ ಹೌದೋ ಅಲ್ಲವೋ ಎಂಬುದರ ಕುರಿತೂ ಸಾಕಷ್ಟು ಜಿಜ್ಞಾಸೆ ಇದೆ.  ಕೆಲ ಪಾಶ್ಚಾತ್ಯ ಚಿಂತಕರ ಪ್ರಕಾರ ಅದೊಂದು ಮಹತ್ವದ ಕೃತಿಯಲ್ಲ. ಈ ರೀತಿಯ ಆಪಾದನೆ ಮಾಡಿದವರಲ್ಲಿ ಭಾರತೀಯ ಚಿಂತಕರು ಇಲ್ಲವೆಂದಿಲ್ಲ.  ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹ ಇದರಿಂದ ಹೊರತಾಗಿಲ್ಲ.

ಗ್ರಂಥವನ್ನು ರಚಿಸಲೇಬೇಕೆಂಬ ಉದ್ದೇಶದಿಂದ ಮಹಾತ್ಮ ಗಾಂಧೀಜಿಯವರು ಪೂರ್ಣ ತೊಡಗಿಸಿಕೊಂಡು ಬರೆದ ಒಂದೇ ಒಂದು ಗ್ರಂಥವೆಂದರೆ ‘ಹಿಂದ್ ಸ್ವರಾಜ್’. ಇದು ಅವರು ಬರೆದ ಅತ್ಯಂತ ಚರ್ಚೆಗೊಳಗಾದ ಗ್ರಂಥ. ಲಂಡನ್ನಿನಿಂದ ಆಫ್ರಿಕಾಗೆ ಹಿಂದಿರುಗಿ ಬರುವಾಗ ಹಡಗಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹಗಲು ರಾತ್ರಿ ಕುಳಿತು ಇದನ್ನು ಬರೆದು ಮುಗಿಸಿದರು (೧೩ ರಿಂದ ೨೨ರ ನವ್ಹೆಂಬರ್ ೧೯೦೮). ಆದ ಕಾರಣ “ಹಿಂದ್ ಸ್ವರಾಜ್” ಅನ್ನು “ಸಮುದ್ರದ ಮೇಲಿನ ಸುವಾರ್ತೆ” ಎಂದು ಕರೆಯುವ ವಾಡಿಕೆಯು ಇದೆ.  ಇದನ್ನು ಬರೆಯುವಾಗ ಬಲಗೈಯಲ್ಲಿ ಬರೆದು ಕೈಸೋತಾಗ ಎಡಗೈಯಲ್ಲಿ ಅದನ್ನು ಗಾಂಧೀಜಿ ರಚಿಸಿರುವದು ವಿಶೇಷವೇ ಸರಿ. ಹಿಂದ್ ಸ್ವರಾಜ್ ಅನ್ನು ‘ರಾಷ್ಟೀಯ ಹೋರಾಟದ ಪ್ರಣಾಳಿಕೆ’, ‘ಬೈಬಲ್’, ‘ಗಾಂಧೀ ಚಿಂತನೆಯ ಹೆಮ್ಮರ’, ‘ಪಾಶ್ಚಿಮಾತ್ಯ ಆಧುನಿಕತೆಯ ಕಟು ವಿಮರ್ಶೆ’ ಎಂದೆಲ್ಲಾ ವ್ಯಾಖ್ಯಾನಿಸಲಾಗುತ್ತದೆ. ಇದನ್ನು ಹತ್ತು ದಿನಗಳಲ್ಲಿ ಬರೆದು ಮುಗಿಸಿದ್ದು ಒಂದು ದಾಖಲೆ ಎನ್ನಬಹುದು.  ಇದನ್ನು ಬರೆದಾಗ ಗಾಂಧೀಜಿಗೆ ೪೦ ವರ್ಷ. ತಾವೇ ಸಂಪಾದಕರಾಗಿದ್ದ ‘ಇಂಡಿಯನ್ ಒಪಿನಿಯನ್’ನಲ್ಲಿ ಕ್ರಮವಾಗಿ ಈ ಗ್ರಂಥದಲ್ಲಿ ಬಂದ ತಮ್ಮ ಅಭಿಪ್ರಾಯಗಳನ್ನು ಮೊದಲೇ ಪ್ರಕಟಿಸಿದರು. ಹಿಂಸೆಯಲ್ಲಿ ನಂಬಿಕೆ ಇದ್ದ ಭಾರತೀಯ ಕ್ರಾಂತಿವಾದಿಗಳಿಗೆ ಉತ್ತರವಾಗಿ ಈ ಗ್ರಂಥ ಬಂತು.  ಆ ಮೇಲೆ ಅವರೆಲ್ಲ ವಿಚಾರಗಳಿಗೆ ನಿಖರ ಗ್ರಂಥ ರೂಪ ಕೊಟ್ಟರು.

ಹಿಂದ್ ಸ್ವರಾಜ್ ಕೃತಿಯನ್ನು ಮೊದಲು ಗಾಂಧೀಜಿ ಗುಜರಾತಿ ಭಾಷೆಯಲ್ಲಿ ಬರೆದು ತಿದ್ದಿ ಪ್ರಕಟ ಮಾಡಿದರು. ಅದನ್ನು ಪ್ರಕಟಿಸುತ್ತಿದ್ದಂತೆಯೇ ಬ್ರಿಟೀಷ್ ಸಾಮ್ರಾಜ್ಯಶಾಹಿ, ಇದು ಪ್ರಭುತ್ವದ ವಿರುದ್ಧ ದಂಗೆಯನ್ನು ಪ್ರಚೋದಿಸುವ ಕೃತಿ ಎಂದು ತೀರ್ಮಾನ ಮಾಡಿ, ಪುಸ್ತಕವನ್ನು ನಿಷೇಧಿಸಿತ್ತು. ಗಾಂಧೀಜಿಗೆ ವಾಸ್ತವವಾಗಿ ಬ್ರಿಟೀಷರು ಯಾವ ಕಾರಣಕ್ಕಾಗಿ ಪುಸ್ತಕವನ್ನು ನಿಷೇಧಿಸಿದ್ದರು ಎಂದು ತಿಳಿದಿರಲಿಲ್ಲ. ಗಾಂಧಿ ಸ್ವತಃ ಈ ಪುಸ್ತಕವನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದರು. ಅವರು ತಮ್ಮ  ಜೀವಮಾನದಲ್ಲಿ ಭಾಷಾಂತರಿಸಿದ್ದು ಇದೊಂದು ಪುಸ್ತಕ ಮಾತ್ರ. 

‘ಹಿಂದ್ ಸ್ವರಾಜ್’ ಬರೆಯುವ ಸಂದರ್ಭದಲ್ಲಿ ಗಾಂಧೀಜಿಗೆ ಭಾರತದ ಕುರಿತು ಹೆಚ್ಚು ತಿಳುವಳಿಕೆ ಇರಲಿಲ್ಲ; ಆಳವಾದ ಅನುಭವಗಳಿರಲಿಲ್ಲ. ೧೯೦೮ರ ತನಕ ಅವರ ರಾಜಕೀಯ ಜೀವನ ಕೇಂದ್ರೀಕೃತವಾದದ್ದು ದಕ್ಷಿಣಾ ಆಫ್ರಿಕಾದಲ್ಲಿ. ಅದೇ ಸುಮಾರಿಗೆ ಭಾರತದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೋರಾಟಕ್ಕೂ ಒಂದು ನಿರ್ದಿಷ್ಟತೆ ಇರಲಿಲ್ಲ. ಅದು ಹಿಂಸೆಯನ್ನೇ ಪ್ರಧಾನವಾಗಿರಿಸಿ ವಸಾಹತುಶಾಹಿಯ ಆಧುನಿಕತೆಗೆ ಪ್ರತಿರೋಧವನ್ನೊಡ್ಡದೇ ನಡೆದ ಹೋರಾಟ ರಾಷ್ಟ್ರೀಯ ಹೋರಾಟಕ್ಕೆ ಹಿಂಸೆಯ ಚೌಕಟ್ಟನ್ನು ನೀಡುತ್ತಿರುವುದನ್ನು ಗಾಂಧೀಯವರು ಗಮನಿಸಿದ್ದರು. “ಹಿಂದ್ ಸ್ವರಾಜ್” ವಸಾಹತುಶಾಹಿ ವ್ಯವಸ್ಥೆಗೆ, ಕ್ರಾಂತಿಕಾರರಿಗೆ, ಹಿಂಸೆಗೆ, ಆಧುನಿಕತೆಗೆ, ಪಾಶ್ಚಾತ್ಯ ನಾಗರೀಕತೆಗೆ, ಹಾಗೂ ರಾಜಕೀಯ ಚೌಕಟ್ಟಿಗೆ ಒಂದು ಪ್ರತಿರೋಧವಾಗಿ, ಹುಟ್ಟಿಕೊಂಡಿತ್ತು.  ಗಾಂಧೀಜಿಯವರ ‘ಹಿಂದ್ ಸ್ವರಾಜ್’ ನಮ್ಮನ್ನೆಲ್ಲ ವೈಚಾರಿಕವಾಗಿ, ತಾರ್ಕಿಕವಾಗಿ ಚಿಂತನೆಗೆ ಒಳಪಡಿಸಿದ ಗ್ರಂಥ. ಆದಕಾರಣ ಗಾಂಧೀಜಿಯವರ ಈ ಕೃತಿಯನ್ನು ವಸಾಹತುಶಾಹಿ ಸಂದರ್ಭ ಹಾಗೂ ಜಾಗತೀಕರಣದ  ಪ್ರಸ್ತುತ ಸಂದರ್ಭಗಳೆರಡರಲ್ಲಿಯೂ ಇಟ್ಟು ನೋಡಬೇಕಾದದ್ದು ಇಂದಿನ ಅಗತ್ಯವಾಗಿದೆ.

ಗೋಖಲೆಯವರು ೧೯೧೨ ರಲ್ಲಿ ದಕ್ಷಿಣ ಆಫ್ರೀಕಾಗೆ ಹೋಗಿದ್ದಾಗ ಈ ಕೃತಿಯ ಭಾಷಾಂತರವನ್ನು ನೋಡಿ, ಎಲ್ಲಾ ಆಪಕ್ವ ವಿಚಾರಗಳಿವೆ. ಇದು ಅವಸರದಲ್ಲಿ ಹೆಣೆದ ಕೃತಿ. ಹಿಂದೂಸ್ಥಾನದಲ್ಲಿ ಒಂದು ವರ್ಷಕಾಲ ಇದ್ದರೆ ಗಾಂಧೀಜಿ ತಾವೇ ಅದನ್ನು ಸುಟ್ಟು ಹಾಕಿಯಾರು ಎಂದಿದ್ದರು.  ಆ ಶ್ರೇಷ್ಠ ಗುರುವಿನ ವಚನ ನಿಜವಾಗಲಿಲ್ಲ. ಆದರೆ ೧೯೨೧ ರಲ್ಲಿ ಗಾಂಧೀಜಿಯವರು ಅದರ ಬಗ್ಗೆ ಬರೆಯುತ್ತ “ಈ ಪುಸ್ತಕವನ್ನು ಎಳೆಯ ಮಗುವಿಗೂ ಕೊಡಬಹುದು. ಅದು ದ್ವೇಷದ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಪ್ರೀತಿಯನ್ನು ಬೋಧಿಸುತ್ತದೆ.  ಹಿಂಸೆಗೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ.  ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ. ಎಷ್ಟೋ ಸಲ ಅಚ್ಚಾಗಿದೆ. ಈ ಪುಸ್ತಕ ಓದಬಯಸುವವರಿಗೆಲ್ಲ ಇದು ಓದಲು ಯೋಗ್ಯವೆಂದು ಸೂಚಿಸುತ್ತೇನೆ.  ಇದರಲ್ಲಿ ಒಂದು ಪದವನ್ನಾದರೂ ಬದಲಿಸಲಾರೆ.  ಒಂದೇ ಒಂದನ್ನು ಒಬ್ಬ ಗೆಳತಿಯ ತೃಪ್ತಿಗಾಗಿ ತೆಗೆದು ಹಾಕಿದ್ದೇನೆ.  ಈ ಗ್ರಂಥ ‘ಆಧುನಿಕ’ ನಾಗರಿಕತೆಯ ಮೇಲೆ ತೀವ್ರ ವಿಮರ್ಶೆ, ಖಂಡನೆ. ೧೯೦೮ ರಲ್ಲಿ ಬರೆದುದಾದರೂ ಅಂದಿಗಿಂತ ಇಂದು ನನಗೆ ಅದರಲ್ಲಿ ಹೆಚ್ಚು ನಂಬಿಕೆಯಾಗಿದೆ….. ಆದರೆ ಇದರಲ್ಲಿ ಹೇಳಿರುವ ಸ್ವರಾಜ್ಯವನ್ನು ನಾನಿವತ್ತು ಕೇಳುತ್ತಿಲ್ಲ.  ಹಿಂದೂಸ್ಥಾನ ಅದಕ್ಕೆ ಸಾಕಷ್ಟು ಮಾಗಿ ಬಂದಿಲ್ಲ.  ಹೀಗೆ ಹೇಳಿದರೆ ಅಧಿಕ ಪ್ರಸಂಗವೆನಿಸಿತೇನೋ; ನನ್ನ ಅಭಿಪ್ರಾಯವೇನೋ ಅದೇ. ಅದರಲ್ಲಿ ವರ್ಣಿಸಿರುವ ಸ್ವರಾಜ್ಯಕ್ಕಾಗಿ ವ್ಯಕ್ತಿಶಃ ನಾನು ಯತ್ನಿಸುತ್ತಿದ್ದೇನೆ. ನನ್ನ ಸಾಮೂಹಿಕ ಪ್ರಯತ್ನವೇನೋ ಭಾರತೀಯರ ಅಭಿಮತದಂತೆ ಶಾಸನ ಸಮ್ಮತ ಪ್ರಜಾತಂತ್ರಕ್ಕಾಗಿ ನಡೆದಿದೆ” ಎಂದಿದ್ದಾರೆ.  ೧೯೩೮ ರಲ್ಲಿ ಕೂಡ ಗಾಂಧೀಜಿ ಈ ಪುಸ್ತಕದಲ್ಲಿ ಏನೂ ಬದಲಿಸಲಿಲ್ಲ. ಅಲ್ಲಲ್ಲಿ ಭಾಷೆಯನ್ನು ಕೊಂಚ ತಿದ್ದಿದರು ಅಷ್ಟೇ.

ಖ್ಯಾತ ಗಾಂಧೀ ಚಿಂತಕ ಆಂಟನಿ ಪರೇಲ್ ಪ್ರಕಾರ ಹಿಂದ್ ಸ್ವರಾಜ್ಯ ಗಾಂಧೀಯವರ ಮೂಲಭೂತ  ಹಾಗೂ ಮಹತ್ತರವಾದ ಕೃತಿ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಇದೊಂದು ಮಹತ್ವದ ಕೃತಿಯಾಯಿತಲ್ಲದೆ, ಹೋರಾಟಕ್ಕೆ ಹೊಸ ಆಯಾಮವನ್ನು ಹಾಗೂ ದೃಷ್ಟಿಕೋನವನ್ನು ನೀಡಿತ್ತು. ಬಹಳಷ್ಟು ಪಾಶ್ಚಾತ್ಯರಿಗೆ ಈ ಕೃತಿ ಒಂದು ಕಬ್ಬಿಣದ ಕಡಲೆ. ಭಾಷೆ ದೃಷ್ಟಿಯಲ್ಲಿ ಹಿಂದ್ ಸ್ವರಾಜ್‌ನ ಭಾಷೆ ಅತ್ಯಂತ ಸರಳವಾಗಿದ್ದರೂ, ಕೆಲವೊಮ್ಮೆ ‘ಸಂಪಾದಕ’ ಹಾಗೂ ‘ಓದುಗ’ನ ನಡುವೆ ಇರುವ ಗಲಿಬಿಲಿ ಇದಕ್ಕೆ ಕಾರಣ. ಕೆಲವೊಮ್ಮೆ ಸಂಪಾದಕ ಹಾಗೂ ಓದುಗನ್ಯಾರು ಎಂಬ ವ್ಯತ್ಯಾಸವೇ ಕಂಡು ಬರುವುದಿಲ್ಲ.

ಹಿಂದ್ ಸ್ವರಾಜ್‌ನಲ್ಲಿ ಇಪ್ಪತ್ತು ಅಧ್ಯಾಯಗಳಿವೆ. ಹಿಂದ್ ಸ್ವರಾಜ್ ಕೃತಿಯಲ್ಲಿ ಉಪಯೋಗಿಸುವ ತಂತ್ರ ಹೊಸದೇನಲ್ಲ. ಅಲ್ಲಿರುವ  ವಿಧಾನ ಮೂಲತಃ ಗ್ರೀಕ್ ದಾರ್ಶನಿಕ ಸಾಕ್ರಟೀಸ್ ಉಪಯೋಗಿಸಿದ ಸಂವಾದ ಅಥವಾ ಡಯಲೆಕ್ಟಿಕಲ್ ಮೇಥಡ್‌ನಿಂದ ಬಂದಿದೆ.  ಇದನ್ನು ಪ್ಲೇಟೋ ಅನುಸರಿಸಿದ್ದರು. ಇಲ್ಲಿ ಎರಡು ಪ್ರಮುಖ ಪಾತ್ರಧಾರಿಗಳನ್ನು ಗುರುತಿಸಬೇಕು. ‘ಓದುಗ’ ಹಾಗೂ ‘ಸಂಪಾದಕ’. ಈ ರೀತಿಯ ಪ್ರಯೋಗ ಗಾಂಧೀಜಿಯಲ್ಲಿ ಹೊಸದೇನಲ್ಲ. ಗಾಂಧೀ ಈ ತಂತ್ರವನ್ನು ಉಪಯೋಗಿಸಲು ಕಾರಣವಿದೆ. ಇದರ ಮುಖಾಂತರ ತಮ್ಮ ವಾದಗಳನ್ನು ಸಮರ್ಥವಾಗಿ ಮಂಡಿಸಬಹುದೆAಬ ತರ್ಕವನ್ನು ಗಾಂಧಿ ಈ ಸಂದರ್ಭದಲ್ಲಿ ಮುಂದಿಡುತ್ತಾರೆ.

ಈ ಕೃತಿಯ ಮೂಲ ಆಶಯಗಳು ಸ್ವಾತಂತ್ರ್ಯ ಸ್ವಾತಂತ್ರೊ್ಯೋತ್ತರ ಭಾರತದ ಸ್ವರೂಪ, ಆಧುನಿಕ ನಾಗರಿಕತೆ-ಯಂತ್ರ ನಾಗರಿಕತೆಗಳ ತೀವ್ರ ವಿಮರ್ಶೆ ಮತ್ತು ಪ್ರಭುತ್ವದ ವಿರುದ್ಧ ನಡೆಯಬಹುದಾದ ಪ್ರಜಾಂದೋನಲಗಳ ಸ್ವರೂಪವನ್ನು ಕುರಿತದ್ದಾಗಿದ್ದವು.  ಹಿಂಸಾತ್ಮಕ ಮಾರ್ಗದಿಂದಾದರೂ ದೇಶವನ್ನು ಮುಕ್ತಗೊಳಿಸುವ ಕ್ರಾಂತಿಕಾರಿ ಹೋರಾಟಗಳ ಆಶಯಗಳಿಗೆ ಪರ್ಯಾಯವಾಗಿ ಅಹಿಂಸೆ, ಸತ್ಯಾಗ್ರಹ ಮತ್ತು ಆತ್ಮ ನಿಗ್ರಹದ ಮೂಲಕ ಗುರಿ ಸಾಧಿಸುವ ಉದ್ದೇಶ ಹಿಂದ್ ಸ್ವರಾಜ್‌ನ ಮೂಲ ಅಡಿಪಾಯ. “ಭಾರತೀಯ ಕ್ರಾಂತಿಕಾರಿಗಳಿಗೆ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಅದೇ ಪಂಥಿಗಳಿಗೆ ಉತ್ತರವಾಗಿ ಇದನ್ನು ಬರೆದೆ” ಎಂದು ಗಾಂಧೀಜಿಯವರೇ ಹೇಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. 

ಹಿಂದ್ ಸ್ವರಾಜ ಕೃತಿಯಲ್ಲಿ ಕಾಂಗ್ರೆಸ್ಸು ಮತ್ತು ಅದರ ಅಧಿಕಾರಿಗಳು, ಬಂಗಾಳ ವಿಭಜನೆ, ಅಶಾಂತಿ ಮತ್ತು ಅಸಂತೋಷ, ಸ್ವರಾಜ್ಯ ಎಂದರೇನು? ಅಂದಿನ ಇಂಗ್ಲೆಂಡಿನ ಸ್ಥಿತಿ, ನಾಗರಿಕತೆ, ಹಿಂದೂಸ್ಥಾನ ಪರಾಧೀನವಾದ ಬಗೆ. ಇಂದಿನ ಹಿಂದೂಸ್ಥಾನದ ಸ್ಥಿತಿ, ರೈಲು ಬಂದ ಬಗೆ, ಹಿಂದೂ ಮುಸಲ್ಮಾನರ ಸಂಬಂಧದ ಸ್ವರೂಪ, ವಕೀಲರ ಬಗ್ಗೆ, ವೈದ್ಯರ ಬಗ್ಗೆ, ಹಿಂದೂಸ್ಥಾನ ಹೇಗೆ ಸ್ವತಂತ್ರ  ವಾದೀತು ಎಂಬುದರ ಕುರಿತು, ಸತ್ಯಾಗ್ರಹ, ಶಿಕ್ಷಣ, ಯಂತ್ರ ಮತ್ತು ಕಾರ್ಖಾನೆ ಎಂಬೆಲ್ಲ ವಿಷಯಗಳ ಕುರಿತು ಪ್ರಶ್ನೋತ್ತರ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ.

ಸಮಕಾಲೀನ ಸಾಮಾಜಿಕ ಸಂದರ್ಭದಲ್ಲಿ ಗಾಂಧೀಜಿಯವರ ಈ ಚಿಂತನೆಯನ್ನು ಅಗತ್ಯವಾಗಿ ಅರ್ಥೈಸಬೇಕಾಗಿದೆ.  ಇಂದು ನಮ್ಮ ಕಣ್ಣೆದುರಿಗೆ ಹಲವಾರು ಹಿಂಸಾತ್ಮಕ ಚಳುವಳಿಗಳು ನಡೆಯುತ್ತಿವೆ. ಇವು ರಕ್ತ ಕ್ರಾಂತಿಯಿಂದಲೇ ಬದಲಾವಣೆ ಸಾಧ್ಯ ಎಂದು ಬಿಂಬಿಸುವುದರ ಮೂಲಕ ಹಿಂಸೆಯನ್ನೇ ಪ್ರಚೋದಿಸುತ್ತಿವೆ. ನಕ್ಸಲೀಯ ಚಳುವಳಿ, ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮುಂತಾದ ಉದಾಹರಣೆಗಳು ನಮ್ಮ ಮುಂದಿವೆ. ಇಂದು ಕೆಲವೇ ಜನರ ಹಿತಾಸಕ್ತಿ ಸಾರ್ವಜನಿಕ ಹಿತಾಸಕ್ತಿ ಎಂದು ಬಿಂಬಿತವಾಗುತ್ತಿವೆ.  ಪಟ್ಟಭದ್ರ ಹಿತಾಸಕ್ತಿಗಳು ಇಂದು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿವೆ. ಉನ್ನತ ಹಂತದ ರಾಜಕಾರಣಿಗಳಿಂದ ಹಿಡಿದು ಕೆಳ ಮಟ್ಟದ ನೌಕರರವರೆಗೆ ಭ್ರಷ್ಟಾಚಾರ ತನ್ನ ಕೆನ್ನಾಲಿಗೆ ಚಾಚಿದೆ. ಪರಿಸ್ಥಿತಿ ಹೀಗಿರುವಾಗ ನಿಜವಾದ ಶೋಷಿತರ ಧ್ವನಿಗೆ ಬೆಲೆ ಎಲ್ಲಿದೆ? ಇದಕ್ಕೆ ಪರಿಹಾರವೇನು? ಈ ಪಟ್ಟಭದ್ರ ಗುಂಪುಗಳ ವಿರುದ್ಧ ಹೋರಾಡಲು ಶೋಷಿತನಿಗೆ ಇರುವ ದಾರಿ ಯಾವುದು? ಎಂಬ ಪ್ರಶ್ನೆಗಳಿಗೆ ‘ಹಿಂದ್ ಸ್ವರಾಜ್’ನಿಂದ ಉತ್ತರ ಪಡೆಯಬಹುದು.

ಮಹಾತ್ಮಾ ಗಾಂಧೀಜಿ ಕಂಡ ಸ್ವತಂತ್ರ ಭವ್ಯ ಭಾರತದ ಕನಸಿನ ಕೂಸಾದ ಈ ಕೃತಿ ಜಾತಿ, ಜನಾಂಗ, ಧರ್ಮ, ಭಾಷೆ, ಉಡುಗೆ ತೊಡಿಗೆ, ಲಿಂಗಗಳ ಭೇದಭಾವ ತೊರೆದು ಎಲ್ಲರೂ ಸಮಾನರು ಎಂದು ಸಾರಿತು. ಈ ಕೃತಿಯಲ್ಲಿ ಅಡಕವಾಗಿರುವ ವಿಚಾರಧಾರೆಗಳನ್ನು ಇಂದೂ ನಾವು ಅಳವಡಿಸಿಕೊಂಡಲ್ಲಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬಲ್ಲದು. ಆಧುನಿಕ ನಾಗರಿಕತೆ ಸೃಷ್ಟಿಸಿದ ಹಲವಾರು ಸಮಸ್ಯೆಗಳಿಗೆ ಸಮಾಧಾನ ಈ ಕೃತಿಯಲ್ಲಿ ಧಾರಾಳವಾಗಿ ಲಭ್ಯವಿದೆ.ಅಂತಿಮವಾಗಿ ಗಾಂಧೀಜಿಯವರೇ ಹೇಳಿದ ಹಾಗೆ ಹಿಂದ್ ಸ್ವರಾಜ್ ದ್ವೇಷಕ್ಕೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ಇದಿರಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ. ಯಾಕೊ . . . . . ಗಾಂಧೀಜಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ.

***********************************

One thought on “ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ

  1. ನಿಜ ಸರ್… ಗಾಂಧೀಜಿ ವಿಚಾರದಾದೆ ಈಗ ಹೆಚ್ಚು ಪ್ರಸ್ತುತ.

Leave a Reply

Back To Top