ಅಂಕಣ ಬರಹ

ಜ್ಞಾನಪಾನ

ಭಕ್ತಿ ಜ್ಞಾನಗಳನ್ನು ಪ್ರೇರಿಸುವ ಕೃತಿ

ಕೃತಿಯ ಹೆಸರು : ಜ್ಞಾನಪಾನ
ಪ್ರಕಾಶಕರು : ಶ್ರೀ ಅಯ್ಯಪ್ಪ ಭಕ್ತ ಸಭಾ , ಚೆನ್ನೈ
ಪ್ರಕಟಣಾ ವರ್ಷ : ೨೦೨೦
ಪುಟಗಳು : ೩೨

ಹದಿನಾರನೆಯ ಶತಮಾನದಲ್ಲಿ ಭಾರತದಾದ್ಯಂತ ನಡೆದ ಭಕ್ತಿ ಚಳುವಳಿಯ ಸಂದರ್ಭದಲ್ಲಿ ಮಲೆಯಾಳ ಭಕ್ತಿ ಕಾವ್ಯ ರಚನೆ ಮಾಡಿದವರಲ್ಲಿ ಪ್ರಮುಖರು ಪೂಂದಾನಂ ನಂಬೂದಿರಿ. ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದಷ್ಟು ವ್ಯಾಪಕವಾದ ವಸ್ತು ವೈವಿಧ್ಯಗಳಿಲ್ಲದಿದ್ದರೂ ಮಲೆಯಾಳದಲ್ಲಿ ಪೂಂದಾನಂ, ಚೆರುಶ್ಶೇರಿ ನಂಬೂದಿರಿ, ತುಂಜತ್ತ್ ಎಳುತ್ತಚ್ಛನ್, ನಾರಾಯಣ ಭಟ್ಟಾತಿರಿಪ್ಪಾಡ್ ಮೊದಲಾದ ಭಕ್ತಿ ಕವಿಗಳು ಬಹಳಷ್ಟು ಜೀವನಮೌಲ್ಯಗಳುಳ್ಳ ದೈವಭಕ್ತಿ ಪ್ರೇರಕ ಕಾವ್ಯವನ್ನು ರಚಿಸಿದ್ದಾರೆ.

  ‘ಜ್ಞಾನಪಾನ'(ಪಾನ ಅಂದರೆ ಮಣ್ಣಿನಿಂದ ಮಾಡಿದ ಒಂದು ಅಲತೆಯ ಪಾತ್ರ) ಗುರುವಾಯೂರಪ್ಪನನ್ನು ಸಂಬೋಧಿಸಿ ಬರೆದ ಭಕ್ತಿ ಕಾವ್ಯ. ಮಹಾಕೃಷ್ಣ ಭಕ್ತರಾದ ಪೂಂದಾನಂ ತಮ್ಮ ಎಳೆಯ ಮಗುವಿನ ಅಕಾಲ ಮರಣದ ಸಹಿಸಲಾರದ  ದುಃಖವನ್ನು  ಈ ಕಾವ್ಯದ ಮೂಲಕ ಯೋಗವಿಶೇಷವಾಗಿ ಪರಿವರ್ತಿಸುತ್ತಾರೆ. ಮಲೆಯಾಳದ ಭಗವದ್ಗೀತೆಯೆಂದೇ ಪ್ರಾಮುಖ್ಯ ಪಡೆದ ಈ ಕಾವ್ಯದಲ್ಲಿ ಪಾನ ಎಂಬ ಹೆಸರಿನ ಛಂದಸ್ಸಿನಲ್ಲಿ ಬರೆದ ೩೬೫  ಸಾಲುಗಳಿವೆ. ಇದು ಒಂದು ದಾರ್ಶನಿಕ ಕಾವ್ಯ. ತನ್ನ ಸಾಹಿತ್ಯಕ ಗುಣ, ಸರಳ ಪದಪುಂಜಗಳು, ತಾತ್ವಿಕ ಶಕ್ತಿ ಹಾಗೂ ಆಳವಾದ ಭಕ್ತಿಯ ಗುಣಗಳನ್ನೂ ಈ ಕಾವ್ಯದಲ್ಲಿ ನಾವು ಕಾಣಬಹುದು. ಉದ್ದಕ್ಕೂ ವಿರುದ್ಧ ಪ್ರತಿಮೆಗಳನ್ನು ಬಳಸುವ ಮೂಲಕ ಕೃಷ್ಣನ  ಬ್ರಹ್ಮಾಂಡ   ಕೃತ್ಯಗಳನ್ನು ವ್ಯಯ ಕರ್ಮಜಾಲದಿಂದ ಮೇಲೆತ್ತುವ ಕೆಲಸವನ್ನು ಇಲ್ಲಿ ಕವಿ ಮಾಡಿದ್ದಾರೆ.

ಕವಿ ತನ್ನ ದುಃಖಾನುಭವವನ್ನು ಭಕ್ತಿಸೌಧದ ನಿರ್ಮಾಣಕ್ಕಾಗಿ ಬಳಸಿ ಎಲ್ಲರಿಗಾಗಿ ಅದನ್ನು ಸದಾಕಾಲವೂ ತೆರೆದಿಟ್ಟಿದ್ದಾರೆ.

ಉಣ್ಣಿಕೃಷ್ಣನ್ ಮನಸ್ಸಿಲ್ ಕಳಿಕ್ಕುಂಬೋಳ್ ಉಣ್ಣಿಗಳ್ ಮಟ್ಟು ವೇಣಮೋ ಮಕ್ಕಳಾಯ್’ (  ಬಾಲ ಕೃಷ್ಣನು ಮನದಿ ಆಟವಾಡುತ್ತಿರಲು/ ಎಳೆಯ ಮಕ್ಕಳು ನಮಗೆ ಬೇರೆ ಬೇಕೆ? (ಪುಟ ೨೬)ಎನ್ನುವ ಸಾಲುಗಳು ಕವಿಯ ದುಖದ ಅಗಾಧತೆಯನ್ನೂ ದೃಢವಾದ ಕೃಷ್ಣಭಕ್ತಿಯನ್ನೂ ಪ್ರಕಟಿಸುತ್ತವೆ.

ಈ ಭರತಖಂಡದ ಪುಣ್ಯ ಭೂಮಿಯಲ್ಲಿ ಜನ್ಮತಳೆದ  ನಾವು ಪುಣ್ಯವಂತರೆಂದೂ ಈ ಜನ್ಮವನ್ನು ನಾವು ಸತ್ಕಾರ್ಯಗಳಿಗಾಗಿ ವಿನಿಯೋಗಿಸ ಬೇಕೆಂದೂ ಪೂಂದಾನಂ ಇಲ್ಲಿ ಹೇಳುತ್ತಾರೆ. ಕೇವಲ ಲೌಕಿಕ ಸುಖ ಭೋಗಗಳಿಗಾಗಿ ಹೆಣಗಾಡುವುದು ನಮ್ಮ ಜೀವನದ ಧ್ಯೇಯವಾಗಬಾರದು. ದೇವರ ಸಹಸ್ರನಾಮಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಅಂತರಂಗದ ಭಕ್ತಿಯಿಂದ ನಿರಂತರವಾಗಿ ನಾಮಸ್ಮರಣೆ ಮಾಡುತ್ತ ಮೋಕ್ಷಪ್ರಾಪ್ತಿಗಾಗಿ ಪ್ರಯತ್ನಿಸುವುದೇ ನಮ್ಮ ಏಕಧ್ಯೇಯವಾಗಿರಬೆಕು ಎಂದೂ ಹೇಳುತ್ತಾರೆ.

   ‘ಜ್ಞಾನಪಾನ’ ಕೃತಿಯ ಭಾಷಾ ಸರಳವಾಗಿದ್ದರೂ ಅದು ಶ್ರಿಮದ್ಭಾಗವತ, ಭಜಗೋವಿಂದಂ,, ವಿವೇಕಚೂಡಾಮಣಿ ಮತ್ತು ನಾರಾಯಣೀಯಂ ಎಂಬ ಮಹತ್ವದ ಕೃತಿಗಳ ಎಲ್ಲ ಸತ್ವಗಳನ್ನು ಒಳಗೊಂಡಿದೆ.

ಪೂಂದಾನಂ ಅನ್ನುವುದು ಕವಿಯ ಹೆಸರಲ್ಲ.ಅದು ಅವರ ಮನೆತನದ ಹೆಸರು. ‘ಪೂಂದಾನಂ ಇಲ್ಲಂ’  ಇರುವುದು  ಈಗಿನ ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣದಿಂದ ೮ ಕಿ.ಮೀ.ದೂರದಲ್ಲಿ. ಕಾಸರಗೋಡಿನಲ್ಲಿರುವ ಹಿರಿಯ ಅನುವಾದಕರಾದ ಎ.ನರಸಿಂಹ ಭಟ್ ಕನ್ನಡಕ್ಕೆ ಮೂಲದ ಸೌಂದರ್ಯವನ್ನು ಮತ್ತು ಕಾವ್ಯಾತ್ಮಕತೆಯನ್ನು ಉಳಿಸಿಕೊಂಡು ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ಉದಾಹರಣೆಯಾಗಿ ಪೂಂದಾನಂ ಅವರು ಸಮಾಜದ ವಿವಿಧ ವರ್ಗಳ ಜನರನ್ನು ಚಿತ್ರಿಸುವ ಕೆಲವು ಸಾಲುಗಳ ಅನುವಾದ :

ಸ್ಥಾನಮಾನಕ್ಕಾಗಿ ಬೈದಾಡಿ ಬಡಿದಾಡಿ/  ಮಾನವೆಲ್ಲವ ಕಳೆದು ಬದುಕುವರು ಕೆಲವರು/

ಮದಮತ್ಸರಾದಿಗಳ ಮನದಲ್ಲಿ ಮುದ್ರಿಸುತ/ಮತಿಹೀನರಾಗಿ ಬದುಕುವರು ಕೆಲವೆಉ/ ಕಾಮಮೋಹಿತರಾಗಿ ಕಾಮಾಕ್ಷಿಯರ ಸೇರಿ/ಕಾಮಕೇಳಿಯಲಿ ಕಾಲ ಕಳೆಯುವರು ಕೆಲವೆರು/ದೇವಾಲಯಗಳಲ್ಲಿ ಸೇವೆಗಾಗಿಯೆ ಸೇರಿ/ ವೇಷಧಾರಿಗಳಂತೆ ಬದುಕುವರು ಕೆಲವರು..

    ಓದುಗರ ಅನುಕೂಲಕ್ಕಾಗಿ ಅನುವಾದಕರು ಮೂಲ ಕೃತಿಯ ಸಾಲುಗಳನ್ನು ಬಲ ಬದಿಯ ಪುಟಗಳಲ್ಲೂ ಅನುವಾದವನ್ನು ಎಡಬದಿಯ ಪುಟಗಳಲ್ಲೂ ನೀಡಿದ್ದಾರೆ.

***********************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top