ಕವಿತೆ
ನೀವು-ನಾವು
ಸಿ.ಎಚ್.ಮಧುಕುಮಾರ
ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು
ನಿಮ್ಮನ್ನು ಕೇಳುವಂತಿಲ್ಲ;
ಏಕೆಂದರೆ ನೀವು ಸಿಟ್ಟುಗೊಳ್ಳುವಿರಿ.
ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು
ನೀವು ನಮ್ಮನ್ನು ಪದೇ ಪದೇ ಕೇಳಬಹುದು
ನಾವಾಗ ಶಾಂತವಾಗಿದ್ದರೆ
ನಿಮ್ಮ ಆತ್ಮಕ್ಕೆ ಸ್ವರ್ಗಸುಖ
ನಿಮ್ಮ ಮಾತಿಗೆ ಸಿಟ್ಟಾದರೆ
ತಟ್ಟನೇ
ದುರಹಂಕಾರಿಯ ಪಟ್ಟ ಹೊರಿಸುವಿರಿ.
ನೀವು ಸದಾ ಮುಂದೆ ನಡೆಯಲು ಬಯಸುವಿರಿ; ಅದಕ್ಕೂ ಮೊದಲು
ಹಿಂದೆ ನಾವಿರುವುದ ಖಚಿತ ಪಡಿಸಿಕೊಳ್ಳುವಿರಿ.
ನಿಮ್ಮೊಂದಿಗೆ ಹೆಜ್ಜೆ ಹಾಕುವ ಬಯಕೆಯಿದೆ,
ಅದು ಯಾವತ್ತೂ ಈಡೇರದ ಬಯಕೆಯೆಂದು ತಾವು ಆಗಾಗ್ಗೆ ಧೃಢಪಡಿಸಿರುವಿರಿ
ಆದರೂ ಪಟ್ಟು ಬಿಡದೆ ನಡೆಯುವೆವು ನಾವು!
*************************************************