ಮೊಬೈಲಾಯಣ

ಕವಿತೆ

ಮೊಬೈಲಾಯಣ

ಪೂರ್ಣಿಮಾ ಸುರೇಶ್

Pain Sculpture by Darko Cvejic | Saatchi Art

ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟ
ಮೂಲೆ ಸೇರಿದ ಮೊಬೈಲ್
ಇಂದು ಅಚಾನಕ್ ಸಿಕ್ಕಿದೆ

ಗಾತ್ರದಲ್ಲಿ ಚಿಕ್ಕದು
ಅಡ್ಡಡ್ಡ ತರಚಿದ ಕವಚ
ಪರದೆ ದೃಷ್ಟಿ ಮಂದ
ಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟ
ಕಸವನ್ನೂ ತುಂಬಿಟ್ಟಿದ್ದೆ
ಬೇಕಾದಾಗ ನೆರವಾಗುವುದೆಂದು ನಂಬಿದ್ದೆ

ಕುತೂಹಲ ಆಶ್ಚರ್ಯಕರ
ಹಿಡಿಯಲ್ಲಿ ಬ್ರಹ್ಮಾಂಡಧರ

ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇ
ನನ್ನೊಡನೆ ಅನುಸಂಧಾನ ನಡೆಸಬಹುದೇ
ಬಿಚ್ಚದೆ ರೆಕ್ಕೆ ತೆಪ್ಪಗಿದೆ
ಚಾರ್ಜರ್ ಗೆ ಸಿಕ್ಕಿಸಿದೆ
ಧ್ಯಾನಬಿಂದು ಮಿನುಗುವಂತೆ
ಆಹಾ! ಕೆಂಪು ಚುಕ್ಕಿ

ಅತ್ತ ಸರಿದು ದಿಟ್ಟಿಸಿದೆ
ಈಡಾಗಿ ಸೂಕ್ಷ್ಮ ಸೆಳೆತಕ್ಕೆ

ಈಗ ತನ್ನನ್ನು ತಾನೇ
ತೆರೆದುಕೊಂಡಿತು ಕ್ಷಣಾರ್ಧದಲ್ಲಿ
ನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ-

ಜಾತ್ರೆಯಲ್ಲಿ ಕಳೆದುಹೋದ
ಹಸುಳೆ ಸಿಕ್ಕಂತೆ
ಆಪ್ತತೆಯಿಂದ ಅಪ್ಪಿ,
ಕೆನ್ನೆ ಸವರಿ ಸಂಭಾಷಿಸಿದೆ
ಮುಗುಳ್ನಗು,ಅರೆನಗು, ಚೂರುಮಾತು
ಹಳಹಳಿಕೆ ಪ್ರಶ್ನೆಗಳ ಖಜಾನೆ;
ಸ್ವಲ್ಪ ಹಾಡಿ ಬಿಟ್ಟ ಹಾಡು,
ಕಾವ್ಯ ಆಗದ ಪದಗಳ ತಂಡ,
ಕಥೆ, ಚುಟುಕು,ಲಹರಿ
ಪೆಚ್ಚುಮುಖ, ವಿಜಯದ ನಿಶಾನೆ
ರವಾನೆಯಾದ ದಾಖಲೆ

ಕಳಚಿ ಬಿದ್ದ ಕ್ಷಣಗಳು
ಪರಾಗಸ್ಪರ್ಶ ನಡೆಸಿವೆ
ಮೌನದ ಮೊಗ್ಗಿಗೆ ಸುಗಂಧವನು ಕೂಡಿಸಿದೆ

ನೀನೆಂಬ ಕಳಚಿಹೋದ ನಾನು
ಕಳಚಲಾಗದಂತೆ
ಎದುರಾದೆವು ನುಡಿಯಲಾಗದೆ
ಪರಿಸ್ಥಿತಿಗೆ ತುಡಿಯಲಾಗದೆ

ಈಗ ಗುಂಗಿನ ಸುರಿಮಳೆ
ಎಲ್ಲೆಲ್ಲೂ ಹೊಮ್ಮಿದಂತೆ ಜೀವಸೆಲೆ
ಎದೆ ಒದ್ದೆ
ಹರವಾಗಿ ಉತ್ತ ಗದ್ದೆ
ಕವನ ಪಲ್ಲವಿಸಿ
ಪರಿಮಳಿಸಿದ ಮುಹೂರ್ತ;

ಬದುಕಿಗೆ ದೊರಕಿದಂತೆ ಅರ್ಥ

********************************************************************************************************

Leave a Reply

Back To Top