ಅಂಕಣ ಬರಹ

ಕಬ್ಬಿಗರ ಅಬ್ಬಿ12

 ಬಸರೀಕಟ್ಟೆ ಮತ್ತು ಬೂದಿಕಟ್ಟೆ

ನಡುವಿನ ಈ ವಿಸ್ಮಯ

ಆ ಇಬ್ಬರು ಆಗಲೇ ೨೭೦೦೦ ಅಡಿಗಳಷ್ಟು ಎತ್ತರ ಏರಿದ್ದರು. ಅದುವರೆಗೂ ಯಾರೂ ಏರದ ಎತ್ತರ ಅದು. ಹಿಮದ ಗಡ್ಡೆಗಳ ಇಳಿಜಾರು ಒಂದು ಕಡೆ, ದೂರ ದೂರದತ್ತ ಕಣ್ಣು ಹಾಯಿಸಿದರೆ ಕಾಣುವುದು ಬರೇ ಬಿಳಿ ಬಿಳೀ ಹಿಮ. ಅದರಡಿಯಲ್ಲಿ ಅದೆಷ್ಟು ಸಾಹಸೀ ದೇಹಗಳು ದಫನವಾಗಿವೆ ಎಂದು ಯೋಚಿಸಿ ಆತ ನಡುಗುತ್ತಾನೆ.

ಬದುಕೇ ಹಾಗೆ, ಕಾಣದ ಕಾಣ್ಕೆಗೆ ಹಂಬಲಿಸುತ್ತೆ. ಎತ್ತರೆತ್ತರ ಏರಲು, ಏನೋ ಹೊಸತು..ಹೊಸ ದಿಕ್ಕು, ಹೊಸ ಗಮ್ಯದತ್ತ ಗಮನ.

ಐದಡಿ ಎತ್ತರದ ಆ ಯುವಕ ಬರೇ ತನ್ನ ಹೊರೆ ಮಾತ್ರವಲ್ಲ, ತನಗೆ ಸಂಬಳ ಕೊಡುವ ಒಡೆಯನದ್ದೂ, ಪಾತ್ರೆ ಪಗಡಿ, ಆಹಾರ ಅಷ್ಟನ್ನೂ ಹೊತ್ತು ಇನ್ನೂ ಎತ್ತರಕ್ಕೆ, ಪರ್ವತದ ತುದಿಗೆ ಏರುವ ಕನಸು. ಇನ್ನೊಂದು ದಿನ ನಡೆದರೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಹತ್ತಿದ ಖ್ಯಾತಿ ಅವರಿಗೆ. ರಾತ್ರಿಯಿಡೀ ಗೌರೀ ಶಂಕರ ಶಿಖರದ ಕನಸು. ಬಾಲ್ಯದಲ್ಲಿ ಅಮ್ಮ ಕಂಡ ಕನಸಿನ ನೆನಪು.  ಹೌದು ! ಆತನ ಹೆಸರು ತೇನ್ ಸಿಂಗ್ ! 

ತೇನ್ ಸಿಂಗ್ ನೋರ್ಗೆ.

ವಾತಾವರಣ ವಿಪರೀತವಾದರೆ ಹತ್ತಲೂ ಕಷ್ಟ,ಇಳಿಯಲೂ ಕಷ್ಟ. ಆದರೆ ಆ ಬೆಳಗ್ಗೆ  ಆಕಾಶ ಶುಭ್ರವಾಗಿತ್ತು. ನೀಲಾಕಾಶ ಕೊಡುವ ಹುರುಪು ಜಗತ್ತಿನ ಇನ್ನಾವುದೂ ಕೊಡದು. ಶುದ್ಧವಾದ

ಹಿಮಗಡ್ಡೆ ಕರಗಿಸಿ,ಚಹಾ ಮಾಡಿ ಒಡೆಯ ಎಡ್ಮಂಡ್ ಹಿಲರಿಗೆ ಬ್ರೆಡ್ ಜತೆಗೆ ಕುಡಿಸಿ, ತಾನೂ ಸೇವಿಸಿ, ಪುನಃ ಒಂದೊಂದಾಗಿ ಹೆಜ್ಜೆಯಿಡುತ್ತಾ ಸಾಗಬೇಕು. ಆಕ್ಸೀಜನ್ ನ ಕೊರತೆಯಿಂದ ಅರ್ಧ ಹೆಜ್ಜೆಗೇ ಏದುಸಿರು ಬರುತ್ತೆ. ಮಧ್ಯಾಹ್ನದ ಹೊತ್ತಿಗೆ ಒಂದು ಎತ್ತರದ ಹಿಮದ ಕೋಡುಗಲ್ಲು ಶಿಖರದ ತುದಿಗೆ ಅಡ್ಡವಾಗಿ. ತೇನ್ ಸಿಂಗ್ ಕೊಡಲಿಯಿಂದ ಅದರಲ್ಲಿ ಮೆಟ್ಟಿಲು ಕಡಿಯುತ್ತಾನೆ. ಕೊನೆಯ ಒಂದಾಳೆತ್ತರದ ಏರು ಮೆಟ್ಟಿಲು ಕಡಿಯಲಾಗದಷ್ಟು ಕಡಿದಾಗಿತ್ತು . ತೇನ್ ಸಿಂಗ್, ತನ್ನ ಭುಜವನ್ನೇ ಮೆಟ್ಟಿಲಾಗಿಸಿ ನಿಲ್ಲುತ್ತಾನೆ. ಹಿಲರಿ ಹೆಗಲಿಗೆ ಪಾದ ಇಟ್ಟು ಮೇಲೆ ಹತ್ತಿ ಕೇಕೇ ಹಾಕುತ್ತಾನೆ. ತೇನ್ ಸಿಂಗ್ ನನ್ನು ಕೈ ಹಿಡಿದು ಮೇಲೆ ಹತ್ತಲು ಸಹಾಯ ಮಾಡುತ್ತಾನೆ. ಅದುವರೆಗೆ ಯಾರೂ ಮಾಡದ ಸಾಹಸ ಅವರಿಬ್ಬರೂ ಮಾಡಿದ್ದರು! ಅದು ತುದಿಯ ತುದಿ. ಜಗತ್ತಿನ ಸಹಸ್ರಾರ ಚಕ್ರ. ನಂಬಲಾಗದ ಸಾಧನೆಯ ಶಿಖರ ಏರಿದ ಕ್ಷಣವದು.

ತೇನ್ ಸಿಂಗ್ ನ ಮೊದಲ ಪ್ರಯತ್ನವೇ ಅದು?.

ಅಲ್ಲ. ಅದು ಆತನ ಹನ್ನೊಂದನೇ ಪ್ರಯತ್ನ. ಯಾಕೆ ಮನುಷ್ಯ ಹೀಗೇ ಸೋತು,ಪುನಃ ಸೋತು, ಮತ್ತೆ ಸೋತು,ಛಲ ಬಿಡದೆ ಪ್ರಯತ್ನ ಮಾಡುತ್ತಾನೆ?. ಬದುಕಲ್ಲಿ ಏನಿದೆ? ಬದುಕು ಎಂದರೆ ಏನು?.

ಆ ರಾಜಕುಮಾರರು ಇಬ್ಬರೂ ಹಲವು ದಿನಗಳ ಕಾಲ ಕಾದಿದರು, ಇಬ್ಬರೂ ಭರತ ಭೂಖಂಡ ಕಂಡ ಅತ್ಯಂತ ಶಕ್ತಿಶಾಲಿ, ನಿಪುಣ ಯೋಧರು.

ಮಲ್ಲ ಯುದ್ಧದಿಂದ ಹಿಡಿದು, ದೃಷ್ಟಿ ಯುದ್ಧದ ವರೆಗೆ. ದಿನಗಳು ತಿಂಗಳುಗಳು ಕಳೆದವು.

 ಯುದ್ಧ ಮುಗಿದಾಗ, ಬಾಹುಬಲಿ ಎಲ್ಲಾ ಯುದ್ಧದಲ್ಲೂ ಗೆದ್ದಿದ್ದ. ಅಣ್ಣ ಭರತ,ಸೋತಿದ್ದ. ಇನ್ನೇನು ಸಿಂಹಾಸನದಲ್ಲಿ ಕೂರಬೇಕು ಅನ್ನುವಾಗ,ಆತ ಕೊನೆಯದೊಂದು ಯುದ್ಧ ಮಾಡಿದ. ಆ ಯುದ್ಧ ತನ್ನೊಳಗಿನ ಯುದ್ದ. ಅದರಲ್ಲಿ ಆತ ಗೆದ್ದು, ತನ್ನ ರಾಜ ಪೋಷಾಕು,ಕಿರೀಟಗಳನ್ನು ಕಳಚಿ ರಾಜಮಹಲಿನಿಂದ ಗೋಮಟನಾಗಿ ಹೊರನಡೆದ. ಆತನನ್ನು ಗೋಮಟೇಶ್ವರ ಅಂತ ಕರೆದರು. ಆತ ಇಂದಿಗೂ ಲಕ್ಷ ಮನಸ್ಸುಗಳ ರಾಜ್ಯವನ್ನು ಆಳುತ್ತಾನೆ! ಯಾಕೆ ನಡೆದ ಹೀಗೆ?. ಬದುಕು ಎಂದರೆ ಹೀಗಾ?

ರಾಮೇಶ್ವರದ ಜಲಾಲುದ್ದೀನ್ ನ ಮಗ ಅಬ್ದುಲ್ ಕಲಾಂ, ಕಠಿಣ ಪರಿಶ್ರಮ ಮಾಡಿ, ಎಂಜಿನಿಯರ್ ಆಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದಾಗ, ಅಮ್ಮ ಕರೆದು ಹೇಳುತ್ತಾರೆ, “ಮಗನೇ, ನಿನಗೆ ಮದುವೆ ಮಾಡೋಣವೇ?”  ಕಲಾಂ,ಒಪ್ಪದೇ,ವಿಜ್ಞಾನ ಮತ್ತು ಸಂಶೋಧನೆಗೆ ಜೀವನವನ್ನು ಅರ್ಪಿಸುತ್ತಾರೆ. ಇದು ಬದುಕಿನ ಯಾವ ಆಯಾಮ?.

ಅದು ಎಪ್ರಿಲ್ ತಿಂಗಳು. ಕಾರ್ಗಿಲ್ ಶಿಖರಗಳ ತುದಿಯಲ್ಲಿ ಪಾಕಿಸ್ತಾನದ ಸೈನಿಕರು ಡೇರೆ ಹೊಡೆದು ಗನ್ ಹಿಡಿದು ನಿಂತ ಹೊತ್ತು, ಕರ್ನಾಟಕದ ವೀರ ಯೋಧ, ಮೇಜರ್ ಅಶೋಕ್, ಹುಟ್ಟೂರಿನಿಂದ ೩೦೦೦ ಕಿಲೋಮೀಟರ್ ದೂರ ತನ್ನ ಸೈನಿಕ ಟುಕಡಿಯ ಜತೆಗೆ ಅಂತಹ ಒಂದು ಶಿಖರವನ್ನು ಹತ್ತುವ ಸಾಹಸ ಮಾಡುತ್ತಾರೆ. ಸೇನೆಯಲ್ಲಿ ಒಂದು ನಿಯಮವಿದೆ. ತಂಡವನ್ನು ಮುನ್ನಡೆಸುವಾಗ, ನಾಯಕ ಮುಂಚೂಣಿಯಲ್ಲಿರಬೇಕು. ಹಾಗೆಯೇ ಮೇಜರ್ ಅಶೋಕ್ ಮುಂದೆ,ಸಿಪಾಯಿಗಳು ಹಿಂದೆ, ಶಿಖರದ ಕಲ್ಲು ಬಂಡೆಗಳನ್ನು ಏರುವಾಗ,ಪಾಕಿಸ್ತಾನದ ಸೈನಿಕರ ಕಣ್ಣು ತಪ್ಪಿಸಿ ಏರ ಬೇಕು. ಅದೂ ರಾತ್ರೆಯ ಕತ್ತಲಲ್ಲಿ. ನಾವೆಲ್ಲಾ, ಎ.ಸಿ. ರೂಂ ನಲ್ಲಿ ಬೆಚ್ಚಗೆ ನಿದ್ರಿಸುವಾಗ, ಅಶೋಕ್, ಕಲ್ಲುಗಳ ತರಚುಗಾಯದಿಂದ ಸೋರುವ ನೆತ್ತರು, ಲೆಕ್ಕಿಸದೆ ಎದೆಯೂರಿ, ಹಲ್ಲಿಯಂತೆ ಪರ್ವತದ ಎಲ್ಲೆಗೆ ಕಚ್ಚಿಹಿಡಿದ ಹಲ್ಲಿಯಂತೆ ಹತ್ತಿದರು. ಮೇಲೇರಿ, ಮುಖಕ್ಕೆ ಮುಖ ಕೊಟ್ಟ ಯುದ್ಧದಲ್ಲಿ ತನ್ನ ತಂಡದ ಹಲವು ಸೈನಿಕರನ್ನು ಕಳೆದು ಕೊಂಡರೂ ಧೈರ್ಯದಿಂದ ಕಾದಿ, ವೈರಿ ಸೈನಿಕರನ್ನು ಸದೆಬಡಿದು ಭಾರತದ ಪತಾಕೆಯನ್ನು ಹಾರಿಸುತ್ತಾರೆ.  ಬದುಕು ಹೀಗಿರಬೇಕು ಎಂಬ ವಜ್ರಕಠೋರ ಸಂಕಲ್ಪದ ಬದುಕು ಅದು. ದೇಶ ಮತ್ತು ದೇಶದ ಪ್ರಜೆಗಳಾದ ನಮ್ಮ ನಿಮ್ಮ ರಕ್ಷಣೆಗೋಸುಗ ತನ್ನ ಪ್ರಾಣ ತ್ಯಾಗ ಮಾಡುವ ಅತ್ಯಂತ ಕಠಿಣ ನಿರ್ಧಾರದ ಬದುಕು.

Outlook India Photo Gallery - Kargil

ಹಾಗಿದ್ದರೆ ಬದುಕಿನ ವ್ಯಾಖ್ಯೆ ಏನು?. ಬೇಂದ್ರೆ ಅವರು ಬದುಕು ಮಾಯೆಯ ಮಾಟ ಅಂತ ಹೀಗೆ ಬರೀತಾರೆ.

“ಬದುಕು ಮಾಯೆಯ ಮಾಟ

ಮಾತು ನೊರೆ-ತೆರೆಯಾಟ

ಜೀವ ಮೌನದ ತುಂಬ ಗುಂಬ ಮುನ್ನೀರು

ಕರುಣೋದಯದ ಕೂಡ

ಅರುಣೋದಯವು ಇರಲು

ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು”

ಕವಯಿತ್ರಿ ವಿಜಯಲಕ್ಷ್ಮಿ ಅವರ ಕವಿತೆ ಬದುಕಿನ ಇಂತಹ ಗಹನ ವಿಷಯದತ್ತ ತೆರೆಯುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತೆ.

***    ***   ****

 ಬದುಕು ಕಲೆ

ಬದುಕೇ ಒಂದು ಪಾಠ.

ಬದುಕುವುದೇ ಒಂದು ಕಲೆ.

ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು

ಓದಿ ಕಲಿಯುವ ಕಲೆಯೇ…. ಬದುಕು?

ನಡೆದರೆ ಓಡುವುದ…

ಓಡಿದರೆ ಜಿಗಿಯುವುದ…

ಜಿಗಿದರೆ ಹಾರುವುದ… ಕಲಿಸುವುದು ಬದುಕು

ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು

ಜಡತ್ವಕ್ಕೆ ಕ್ರಿಯಾಶೀಲತೆ….

ಕ್ರಿಯಾಶೀಲತೆಗೆ ದಿಶೆ…..

ದಿಶೆಗೆ ಗುರಿಯತ್ತ…

ಸಾಗಿಸುವುದು ಬದುಕು.

ಬದುಕುತ್ತಾ ಹೋದಂತೆ ಬದುಕುವುದ ಕಳಿಸುವುದು ಬದುಕು

ತೊಡರುಗಳಲ್ಲಿ ಚೇತರಿಕೆ..

ಏರುಪೇರುಗಳಲ್ಲಿ ಎಚ್ಚರಿಕೆ..

ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು

ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು

ದೇಹಕ್ಕೆ ಕರ್ಮದ ಬೆಲೆ..

ಮೋಹಕ್ಕೆ ಭಕ್ತಿಯ ಅಲೆ..

ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು

ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು 

ಮೌನದಲಿ ಅಡಗಿದ ಪ್ರೀತಿಯ ಸದ್ದು

‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು

ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು

ಬದುಕುತ್ತಾ ಹೋದಂತೆ ಬದುಕು ವುದ ಕಲಿಸುವುದು ಬದುಕು .

ಜನ-ಜನದಲಿ ಜನಾರ್ಧನನ,

ಕಣ-ಕಣದಲಿ ಮುಕ್ಕಣ್ಣನ,

ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು

ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು.

ಓದಿ ಕಲಿಯುವ ಕಲೆಯೇ..ಬದುಕು?

**     ***     ***

ನಿತ್ಯಸತ್ಯದ ಪಾಠವೇ ಬದುಕು ಎನ್ನುವಾಗ, ಕ್ಷಣಕ್ಷಣಗಳೂ ಅನುಭವ ಮೇಷ್ಟ್ರಾಗಿ, ಕಲಿಸುತ್ತವೆ. ಬದುಕುವುದು ಕಲೆ ಎನ್ನುವಾಗ, ಮನುಷ್ಯನ ಕ್ರಿಯೇಟಿವಿಟಿ ಮತ್ತು ರಾಚನಿಕ ಸೌಂದರ್ಯದತ್ತ ಮನಸ್ಸು ಕೇಂದ್ರಿಸುತ್ತೆ.

‘ಬದುಕುತ್ತಾ ಹೋದಂತೆ ಬದುಕ ಕಲಿಸುವುದು ಬದುಕು’ ! ಬದುಕು ಅನುಭವವೂ ಹೌದು, ಆ ಅನುಭವ ಭವಿಷ್ಯದ ದಾರಿದೀಪವೂ ಹೌದು.ವರ್ತಮಾನದಲ್ಲಿ ನಿಂತಾಗ, ಭೂತಕಾಲದ ಬದುಕು ಜ್ಞಾನ, ಭವಿಷ್ಯಕಾಲಕ್ಕೆ ಅದೇ ದಿಗ್ದರ್ಶಕ.

ವಿಜಯಲಕ್ಷ್ಮಿ ಅವರ ಈ ಕವಿತೆ ಒಂದು ತತ್ವ ಪದದಂತಹ ಕವಿತೆ. ತತ್ವಶಾಸ್ತ್ರದ ಬಿಂದುಗಳನ್ನು ಒಂದೊಂದಾಗಿ ಅಳುವ ಮಗುವಿನ ನಾಲಿಗೆಗೆ ಹಚ್ಚುವ ಜೇನಿನಂತೆ ಹೇಳ್ತಾ ಹೋಗುತ್ತಾರೆ.  ಓದಿ ಕಲಿಯುವ ಕಲೆಯೇ ಬದುಕು? ಎಂಬುದು ಪ್ರಶ್ನೆ ಅಂತ ಅನಿಸುವುದಿಲ್ಲ. ಅದು ಕವಯಿತ್ರಿಯ ಧೃಡವಾದ ನುಡಿ.

“ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ? “

“ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡುವುದಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿನಿಂದ ಬೆಳೆಯುವುದಕ್ಕಾಗಿ.”

( ಶಿವರಾಮ ಕಾರಂತ)

ಹೀಗೆ, ಬದುಕಿನ ಬಗ್ಗೆ ಶಿವರಾಮ ಕಾರಂತರು ಹೇಳುವ ಮಾತೂ ಈ ಕವಿತೆಯ ಆಶಯಕ್ಕೆ ಪೂರಕ.

“ನಡೆದರೆ ಓಡುವುದ…

ಓಡಿದರೆ ಜಿಗಿಯುವುದ…

ಜಿಗಿದರೆ ಹಾರುವುದ… ಕಲಿಸುವುದು ಬದುಕು

ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು “

ನಡೆ, ಓಡು, ಜಿಗಿ, ಹಾರು, ಇವುಗಳೆಲ್ಲ ಕ್ರೊನೊಲಾಜಿಕಲ್ ಕ್ರಿಯೆಗಳು. ಒಂದರ ಕಲಿಕೆ ನಂತರದ್ದಕ್ಕೆ ಆವಶ್ಯಕ. ಮೊದಲ ಪ್ಯಾರಾದ ಬದುಕು ಕಲಿಸುವ ಬದುಕು ಎಂಬ ಕಲಿಕೆಯ ನಿರಂತರತೆಯನ್ನು ಇಲ್ಲಿ ಉದಾಹರಣೆ ಕೊಟ್ಟು ಪಾಠ ಮಾಡಿದ್ದಾರೆ, ಕವಯಿತ್ರಿ ಟೀಚರ್.

 ಗೋಪಾಲಕೃಷ್ಣ ಅಡಿಗರು ತಮ್ಮ ‘ಯಾವ ಮೋಹನ ಮುರಳಿ ಕರೆಯಿತೋ’ ಕವಿತೆಯ ಪ್ರಸಿದ್ಧ ಸಾಲುಗಳಿವು

” ವಿವಶವಾಯಿತು ಪ್ರಾಣ;

ಹಾ ಪರವಶವು ನಿನ್ನೀ ಚೇತನ;

ಇರುವುದೆಲ್ಲವ ಬಿಟ್ಟು

ಇರದುದರೆಡೆಗೆ ತುಡಿವುದೆ ಜೀವನ?”

ಮನುಷ್ಯ ಪ್ರಜ್ಞೆಗೆ a exploration ಅನ್ನುವುದು ಮೂಲಸ್ವಭಾವ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’  ಅನ್ನುವಾಗ ಬದುಕಿನ ದಿಶೆ ನಿರ್ಧರಿಸುವ ಚಾಲಕಶಕ್ತಿಯನ್ನು ಅವರು ದರ್ಶಿಸುತ್ತಾರೆ.

ಪುನಃ ಕವಿತೆಗೆ ಬರೋಣ.

” ಜಡತ್ವಕ್ಕೆ ಕ್ರಿಯಾಶೀಲತೆ….

ಕ್ರಿಯಾಶೀಲತೆಗೆ ದಿಶೆ…..

ದಿಶೆಗೆ ಗುರಿಯತ್ತ…

ಸಾಗಿಸುವುದು ಬದುಕು”.

ದಿಶೆ ಮತ್ತು ಗುರಿಯನ್ನೂ ದಾರಿಯಲ್ಲಿ ತಂದಿರಿಸುವಾಗ, ಅನುಭವದ ಜತೆಗೇ ವ್ಯವಸ್ಥಿತ ಚಿಂತನೆ ಮತ್ತು ಪ್ಲಾನಿಂಗ್, ಭವಿಷ್ಯದತ್ತ ಮನಸ್ಸಿನ ಪ್ರೊಜೆಕ್ಷನ್ ಗಳ ಜತೆಯಾಟ ಕಾಣುತ್ತೇವೆ. ಮನುಷ್ಯನ ಯುನಿಕ್ ಸಾಮರ್ಥ್ಯ ಇದು.

ಬದುಕು ಕಲಿಸುವ ಬದುಕಿನಲ್ಲಿ, ಸಮಯಪ್ರಜ್ಞೆಯಿಂದ ಬದುಕಿನ ಭವಿಷ್ಯದ ಪ್ರತೀ ಹೆಜ್ಜೆಯನ್ನೂ, ಭೂತಕಾಲದ ಹೆಜ್ಜೆಗಳು ಅನಾವರಣಗೊಳಿಸಿದ ಅರಿವಿನ ಮಾರ್ಗದರ್ಶನದಲ್ಲಿ ಇಡಬೇಕೆಂಬ ಈ ಸಾಲುಗಳನ್ನು ಗಮನಿಸಿ

” ತೊಡರುಗಳಲ್ಲಿ ಚೇತರಿಕೆ..

ಏರುಪೇರುಗಳಲ್ಲಿ ಎಚ್ಚರಿಕೆ..

ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು “

ಕ್ಷಣ ಕ್ಷಣವೂ ಅರಿವನ್ನು ಎಚ್ಚರದಲ್ಲಿ ಇರಿಸಬೇಕು ( being aware every moment) ಅಂತಲೂ ಭಾವವಿದೆ.

” ದೇಹಕ್ಕೆ ಕರ್ಮದ ಬೆಲೆ..

ಮೋಹಕ್ಕೆ ಭಕ್ತಿಯ ಅಲೆ..

ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ

ಚಿಮ್ಮಿಸುವುದು ಬದುಕು”

ಕರ್ಮ ಯೋಗದ ಪ್ರಕಾರ, ನಿಷ್ಕಾಮ ಕರ್ಮವೂ ಮೋಕ್ಷ ಸಾಧನ ಅನ್ನುತ್ತಾನೆ ಕೃಷ್ಣ. ಸಾಮಾನ್ಯವಾಗಿ ನೋಡಿದರೆ, ದೇಹ,ಕೆಲಸ ಮಾಡುತ್ತಾ ಕಲಿಯುತ್ತೆ. ಜಡತ್ವದಿಂದ ದೇಹ ಹೊರಬರಲು ಸದಾ ದೇಹವನ್ನು ಕ್ರಿಯಾಶೀಲ ವಾಗಿರಿಸುವುದು ಅಗತ್ಯ ಅನ್ನುವ ಧ್ವನಿ ಕವಿತೆಯದ್ದು. ಮೋಹಕ್ಕೆ ಭಕ್ತಿಯ ಅಲೆ ಅನ್ನುತ್ತಾ ಕವಯಿತ್ರಿ, .  ಮೋಹ ಒಂದು ದ್ರವದ ಹಾಗೆ. ಸ್ವತಂತ್ರವಾಗಿ ಬಿಟ್ಟರೆ ದಿಕ್ಕು ದೆಸೆಯಿಲ್ಲದೆ ಹರಿಯುತ್ತೆ. ಅನಿಯಂತ್ರಿತವಾಗಿ ಹರಿಯುತ್ತೆ. ಮೋಹವನ್ನು ಭಕ್ತಿಯಾಗಿ ಚಾನಲೈಸ್ ಮಾಡಿದರೆ ಅದು ಏಕಮುಖಿಯಾಗಿ ಪಾಠ ಕಲಿಸುತ್ತೆ ಅನ್ಸುತ್ತೆ.

“ಮೌನದಲಿ ಅಡಗಿದ ಪ್ರೀತಿಯ ಸದ್ದು

‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು

ಹಿತ್ತಲ ಗಿಡದಲ್ಲಿ ಅಡಗಿದ ಮದ್ದು

ಗುರುತಿಸುವುದ ಕಲಿಸುವುದು ಬದುಕು “

ಪ್ರೀತಿ, ಬದುಕಿನ ಪುಟಗಳಿಗೆ ಬಣ್ಣ ತುಂಬಿದರೆ,

 ಜಿದ್ದು, ಸೋಲಿನಿಂದ ಪುನಃ ಪ್ರಯತ್ನದತ್ತ ಗುರುವಾಗುತ್ತೆ. ಹಿತ್ತಲ ಗಿಡದಲ್ಲೂ ಮದ್ದು ಹುಡುಕುವ ಸಂಶೋಧನಾ ಮನೋಭಾವ ಬದುಕಿನ ಬಹುಮುಖ್ಯ ಮೇಷ್ಟ್ರು.

ತತ್ವ ಶಾಸ್ತ್ರ ಅಧ್ಯಾತ್ಮ ದಲ್ಲಿ ಕೊನೆಯಾಗುವ ಮುಂದಿನ ಸಾಲುಗಳನ್ನು ನೋಡಿ

” ಜನ-ಜನದಲಿ ಜನಾರ್ಧನನ,

ಕಣ-ಕಣದಲಿ ಮುಕ್ಕಣ್ಣನ,

ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು

ಎಂದು ಕಣ್ತೆರೆಸುವುದು ಬದುಕು”

ದೇಹ,ಬದುಕು ನಶ್ವರ, ಈಶ್ವರ ಜ್ಞಾನವೇ ಅಂತಿಮ ಎನ್ನುವ ದರ್ಶನವನ್ನು ಬದುಕು ಅನುಭೂತಿಯಾಗಿ ಅರ್ಹ ಸಾಧಕರಿಗೆ ಕಲಿಸುತ್ತೆ.

ಹೀಗೆ ವಿಜಯಲಕ್ಷ್ಮಿ ಅವರ ಈ ತತ್ವಪದದಂತಹಾ ಕವಿತೆ ಹೇಳಬೇಕಾದ ತಾತ್ವಿಕ ತಳಹದಿಯನ್ನು ಕೊಟ್ಟು ಬದುಕನ್ನು ಬಂಗಾರವಾಗಿಸುವ ಆಲ್ಕೆಮಿ ಯ ಪಾಠ ಮಾಡುತ್ತಾರೆ.

ಅಷ್ಟೂ ಎಳೆಗಳನ್ನು ಪೋಣಿಸುವಾಗ, ಕೆಲವೊಂದು ಕಡೆ ಅರ್ಥವ್ಯತ್ಯಾಸವಾಗುವ ಸಾಧ್ಯತೆ ಈ ಕವಿತೆಯಲ್ಲಿ ಇದೆ.  ಸದ್ದು, ಜಿದ್ದು, ಮದ್ದು ಎಂಬಂತಹಾ ಪ್ರಾಸ ಪದಗಳು ಕಾವ್ಯಸ್ವರಸಂಯೋಜನೆಯಲ್ಲಿ ಅಷ್ಟಾಗಿ ಸಮರಸವಾಗಿ ಅನುರಣಿಸುವುದಿಲ್ಲವಾದರೂ, ಈ ಕವಿತೆಯ ತತ್ವಗಳ ಔತಣ, ಷಡ್ರಸೋಪೇತವಾಗಿಯೂ ಶ್ರೀಮಂತವೂ ಆಗಿದೆ.

**************************************************************

ಮಹಾದೇವ ಕಾನತ್ತಿಲ

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

4 thoughts on “

  1. ಮಹದೇವರೇ,ನೀವು ಬರೆಯುವ ಲೇಖನವಾಗಲೀ,ವಿಮರ್ಶೆಯಾಗಲೀ ಎಲ್ಲದರಲ್ಲೂ ಸಂಶೊಧನಾತ್ಮಕ ಅಂಶವನ್ನು ಕಂಡಿದ್ದೇನೆ.ತೆಗೆದುಕೊಂಡ ಕೆಲಸಕ್ಕೆ ನಿಮ್ಮನ್ನು ನೀವು ಸಂಪೂರ್ಣವಾಗಿ ಒಪ್ಪಿಸಿಕೊಂಡು ಬಿಡುತ್ತೀರಿ.ಅದಕ್ಕೆ ನ್ಯಾಯ ಒದಗಿಸುವ ನಿಮ್ಮ ತುಡಿತವೆಷ್ಟೆಂದರೆ ನಿಮಗೆ, ಲಘುಕೋನ,ವಿಶಾಲಕೋನ,ಸರಳಕೋನದ ಪರಿಭ್ರಮಣ ತೃಪ್ತಿ ನೀಡುವುದಿಲ್ಲ ,ಪೂರ್ತಿ ೩೬೦ ಡಿಗ್ರಿಗಳ ಪರಿಭ್ರಮಣ ಮಾಡಿ ,ಈ ಪರಿಭ್ರಮಣ ಮಾಡುವಾಗ ಪ್ರತಿ ಬಿಂದುವಿನಲ್ಲಿ ನಿಂತು ನೋಡಿ ಕೃತಿಗಿಳಿಸುತ್ತೀರಿ.ನಿಮ್ಮ ಈ ಪರಿಭ್ರಮಣ ನಾವು ಕಾಣದ ಅನೇಕ ಸಂಗತಿಗಳನ್ನು ನಮಗೆ ತೋರಿಸುತ್ತದೆ. ವಿಜಯ ಲಕ್ಷ್ಮಿಯವರ ಕವನ ಅರ್ಥಗರ್ಭಿತ.ನಿಮ್ಮ ವಿಶ್ಲೇಷಣೆಯ ನಂತರ ಮತ್ತೊಮ್ಮೆ ಓದಿದಾಗ ನನಗೂ ಅದರಲ್ಲಿಯ ಅನೇಕ ಗುಪ್ತ ಸಂದೇಶಗಳು ಗೋಚರವಾದವು.
    ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು.

    1. ಮೀರಾ ಅವರೇ.
      ಕವಿತೆ ಚಿಂತನೆಗೆ ಹಚ್ಚುವ ಪ್ರೇರಣೆ.
      ಅದು ನಡೆಸಿದ ಹಾಗೆ ಂಂಂಂಂಂಂಂಂಂಂಂಂಂಂಂಂಂ ಕ್ಯಾನುವಾಸ್ ಅನ್ನು ತೆರೆದರೆ,ಅದೇ ಬಣ್ಣ ತುಂಬುತ್ತೆ!

      ನಿಮ್ಮ ಪ್ರೇರಣೆಗೆ ತುಂಬಾ ಧನ್ಯವಾದಗಳು

  2. ಅಡಿಗರ ಕವನ ’ಯಾವ ಮೋಹನ ಮುರಳಿ ಕರೆಯಿತು” ನಲ್ಲಿಯ ಅಂತಿಮ ಸಾಲುಗಳು “ಇರುವೆದೆಲ್ಲವ ಬಿಟ್ಟು ಇರುದದರೆಡೆಗೆ ತುಡಿವುದೆ ಜೀವನ” ಎನ್ನುವುದು ಎಷ್ಟು ಸರಿ ಅಲ್ಲವೇ ? ಮನುಷ್ಯ ಎಂದಿಗೂ ಇರುದದರೆಡೆಗೇ ಕಣ್ಣು ಹಾಯಿಸುತ್ತಾನೆ. ಎಟುಕಲಾರದ ಎತ್ತರಗಳಿಗೆ ಗುರಿ ಮಾಡುತ್ತಾನೆ. ಅದಕ್ಕೆ ಒಂದು ಮಾರ್ಗದರ್ಶನ ಮತ್ತೆ ದಿಶಾ ನಿರ್ದಶನವಿದ್ದರಂತೂ ಎತ್ತರಗಳನ್ನು ಮೆಟ್ಟಿ ನಿಲ್ಲುತ್ತಾನೆ. ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಂಡ ವಿಸ್ಮಯಗಳಿಗೂ ಈ ತುಡಿತವೇ ಕಾರಣವೆನ್ನ ಬಹುದು. ಎತ್ತರಕ್ಕೇರಿದ ಮೇಲೆ ಬರೀ ಬೀಗುವುದಷ್ಟೇ ಅಲ್ಲ. ಅದರ ಆನಂದವನ್ನೆಲ್ಲ ಮರೆತು ಮತ್ತೆ ನೆಲಕ್ಕೆ ಬಂದು ಎಂದಿನಂತೆ ಇರುವುದು ಸ್ವಲ್ಪ ಕಷ್ಟ. ಆ ಮನಃಸ್ಥಿತಿ ತಲುಪುವುದು ಬೆಟ್ಟ ಏರಿದಷ್ಟೇ ಕಷ್ಟ. ಈ ಎರಡೂಮುಖಗಳನ್ನು ಮಹದೇವರು ಸಮರ್ಥವಾಗಿ ತಮ್ಮ ಅಂಕಣದಲ್ಲಿ ನಮ್ ಮುಂದಿಟ್ಟಿದ್ದಾರೆ. ಕವಿತೆ ಹೇಳುವಂತೆ
    ’ಬದುಕುತ್ತಾ ಹೋದಂತೆ ಬದುವುದ ಕಲಿಸುತ್ತದೆ ಬದುಕ” ನಿಜ. ಬರೀ ಓದಿ ಪಾಸಾದವನು ನೌಕರಿಗೆ ಸೇರಿದರೆ ಬದುಕನ್ನು ಕಲಿತವನ್ನು ಅವನಿಗೆ ನೌಕರಿ ಕೊಡುತ್ತಾನೆ. ಪ್ರತಿ ನಾಲ್ಕು ಸಾಲಿನಲ್ಲೂ ಕವಿ ತಾವು ಆರಿಸಿಕೊಂಡ ವಿಷಯದ ಗ್ರೇಡೇಷನ್ ತೋರುತ್ತಾ ಹೋಗುತ್ತದೆ ಕವಿತೆ. ಇದೇ ಗ್ರೇಡೇಷನ್ ಕವನಕ್ಕೆ ಒಂದು ಲಯ ಕೊಡುತ್ತದೆ. ನಮ್ಮನ್ನು ಓದಿಸುತ್ತದೆ. ಗುನುಗುವಂತೆ ಮಾಡುತ್ತದೆ. ಅದು ಕವಿತೆಯ ವಿಶೇಷ ಮತ್ತು ಬಲ ಎನ್ನಬಹುದು.

    1. ರಮೇಶ್ ಬಾಬು ಅವರೇ, ನೀವು ಸ್ವತಃ ಕವಿಗಳು
      ಕವಿಯ ಮನಸ್ಸು ಹಸನಾದ ನೆಲ. ಪೈರು ಪಚ್ಚೆ ಬೆಳೆದಾಗ ಸುಂದರ

      ನಾನು ಬರೇ ನೋಟಕ ಅಷ್ಟೇ!

      ನಿಮ್ಮ ವಿವರವಾದ ಪ್ರತಿಕ್ರಿಯೆ ಅಂಕಣದೊಳಗೊಂದು ಅಂಕಣ ಮೂಡಿಸಿದೆ.
      ಧನ್ಯವಾದಗಳು

Leave a Reply

Back To Top