ಅನುವಾದಿತ ಕವಿತೆ
ಹಕ್ಕಿಯ ದುರಂತ
ವಿ.ಗಣೇಶ್
ಸಗ್ಗದ ಚೆಲುವಿನ ಹಕ್ಕಿಯು ಒಂದು
ಭಾನಂಗಳದಿಂದ ಧರೆಗಿಳಿದು
ಊರಿನ ಮನೆ ಮಂದಿರಗಳ ಮೇಲ್ಗಡೆ
ಹಾರುತಲಿದ್ದಿತು ನಲಿನಲಿದು.
ಚಿನ್ನದ ವರ್ಣದ ರನ್ನದ ರೆಕ್ಕೆಯ
ನೀಲಿಯ ಕಂಗಳ ಆ ಹಕ್ಕಿ
ಹಾರುತ ಬರುವುದ ನೋಡಿದ ಮಕ್ಕಳ
ಎದೆಯಲಿ ಆನಂವೆ ಉಕ್ಕಿ
ಹಕ್ಕಿಯು ಹಾರುತ ಸಾಗುವ ಜಾಡಲಿ
ತಾವೂ ಓಡುತ ಕೆಳಗಿಂದ
ಕೇಕೆಯ ಹಾಕುತ ನಲಿಯುತಲಿರಲು
ಜನ ಸೇರಿತು ಅಚ್ಚರಿಯಿಂದ
ಎಂಥ ಚೆಂದದ ಚೆಲುವಿನ ಹಕ್ಕಿ
ಏನದು ಚೆಂದ ಆ ಮೈ ಬಣ್ಣ!
ಕೈಗದು ಸಿಕ್ಕರೆ ಮಾರಲು ಆಗ
ಕೈತುಂಬ ಹಣ ಝಣ ಝಣ
ಮಾರುವುದೇತಕೆ ನಾವೇ ಹಿಡಿದು
ಕೊಂದೇ ತಿಂದರೆ ಬಹಳ ಮಜ
ಎನ್ನುತ ಬಾಯಲಿ ನೀರೂರಿಸುತಲಿ
ಹೇಳಿದ ಅಲ್ಲಿಯ ಹಿರಿಯಜ್ಜ
ಅಷ್ಟರೊಳಗಾಗಲೆ ಬಿಲ್ಲು ಬಾಣಗಳ
ಹಿಡಿದು ಬಂದೊಬ್ಬ ತಲೆ ತಿರುಕ
ಹಕ್ಕಿಯ ನೇರಕೆ ಗುರಿಯನು ಇಟ್ಟು
ಬಾಣವ ಬಿಟ್ಟನು ಆ ಕಟುಕ
ಯಾವ ಪಾಪವನು ಯಾರ ಶಾಪವನು
ಹೊತ್ತು ಬಂದಿತ್ತೋ ಆ ಹಕ್ಕಿ
ಬಾಣದ ಪೆಟ್ಟಿಗೆ ರಕ್ತವ ಕಾರುತ
ಕೆಳಗಡೆ ಬಿದ್ದಿತು ಮಣ್ಮುಕ್ಕಿ
ಚಿನ್ನದ ಬಣ್ಣದ ರನ್ನದ ರೆಕ್ಕೆಯ
ಸುಂದರ ಹಕ್ಕಿಯ ಗತಿ ನೋಡಿ
ನೆರೆದಿಹ ಮಕ್ಕಳು ಊರ ಕರುಣಾಳು
ಜನರು ಮರುಗಿದರು ಒಗ್ಗೂಡಿ
ಬಾಣದ ರಭಸದ ಪೆಟ್ಟಿಗೆ ಹಕ್ಕಿಯು
ಪುಟ್ಟ ಹೊಟ್ಟೆ ಮಾಂಸವು ಸಿಡಿದು
ರಕ್ತವು ಚೆಲ್ಲಿ ಮಣ್ಣುಗೂಡಿರಲು
‘ತಿನ್ನಲು ಬಾರದು ಇದು’ ಎಂದು
ಕೊಂದಿಹ ಕಟುಕ ಸತ್ತ ಹಕ್ಕಿಯನು
ಎತ್ತಿ ಗಿರಗಿರನೆ ತಿರುಗಿಸುತ
ದೂರಕೆ ಎಸೆಯಲು ಅದು ಅಲ್ಲಿನ ಹೊಳೆ
ಸೇರಿತು ಮೌನವ ಸಾರುತ್ತ
ಹೊಳೆಯನು ಅಪ್ಪಿದ ಹಕ್ಕಿಯ ಆತ್ಮವು
ಹೊಳೆಯ ಕಿವಿಗಳಲಿ ದುಃಖದಲಿ
ಮಾನವ ಕ್ರೌರ್ಯದ ಪರಿಯನು ವರ್ಣಿಸಿ
ಹೇಳುತ ಆ ಹೊಳೆ ಜೊತೆಯಲ್ಲಿ
ಸಾಗುತಿರಲು ಆ ಹೊಳೆ ದೇವಿಯು
ಅಪ್ಪಿ ಅದನು ಸಂತೈಸಿತ್ತು
ಚೈತ್ರದ ಅಂದಿನ ಆಗಸ ಮೊಗದಲಿ
ಕೆಂಬಣ್ಣದ ತೆರೆ ಮೂಡಿತ್ತು.
************************************************************
ಮೂಲ; In London Town By Mary E.Colridge