ಮರೆವಿಗೆ ಇಲ್ಲಿದೆ ರಾಮಬಾಣ

          ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದ್ತಿನಿ.ಆದರೂ ಬೇಕೆಂದಾಗ ನೆನಪಿಗೆ ಬರುವುದೇ ಇಲ್ಲ. ಅದೂ ಪರೀಕ್ಷೆ ಸಮಯದಲ್ಲಂತೂ ಸರಿಯಾಗಿ ಕೈ ಕೊಡುತ್ತದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಎನ್ನುವುದು ಬಹಳಷ್ಟು ಪರೀಕ್ಷಾರ್ಥಿಗಳ ದೊಡ್ಡ ಸಮಸ್ಯೆ. ನನ್ನ ಮಕ್ಕಳು ಓದಲ್ಲ ಅಂತಿಲ್ಲ. ಎಲ್ಲವನ್ನೂ ಓದ್ತಾರೆ.ಆದರೆ ಅವರಿಗೆ ಜ್ಞಾಪಕ ಶಕ್ತಿದೇ ಸಮಸ್ಯೆ. ಪರೀಕ್ಷೆಯಲ್ಲಿ ಓದಿದ್ದು ಚೆನ್ನಾಗಿ ನೆನಪಿಗೆ ಬರಲಿಲ್ಲ ಅದಕ್ಕೆ ಅಂಕ ಕಡಿಮೆ ಬಂದಿದೆ ಎಂದು ಕಣ್ಣಿರಿಡುತ್ತಾರೆ ನಮಗೇನು ಮಾಡಬೇಕು ಅಂತ ಹೊಳಿತಿಲ್ಲ ಎನ್ನುವುದು ಹಲವು ಹೆತ್ತವರ ಗೋಳು. ಈ ಸಮಸ್ಯೆಗೆ ಅವರಿವರ ಜೊತೆ ಚರ್ಚಿಸಿ ಕೆಲ ಟಿಪ್ಸ್ ಸಿಕ್ಕರೂ ಅವು ಅಷ್ಟೊಂದು ಫಲ ನೀಡುತ್ತಿಲ್ಲ ಅನ್ನೋದು ಕೆಲವು ಪಾಲಕರ ಚಿಂತೆ. ಮರೆವು ಎನ್ನುವುದು ಒಂದು ರೋಗವೇ? ಇದಕ್ಕೆ ಮದ್ದು ಇಲ್ಲವೇ? ನನಗೆ ಜ್ಞಾಪಕ ಶಕ್ತಿ ಕಡಿಮೆ ಎಂಬ ಭ್ರಮೆ ತಲೆಯಲ್ಲಿ ಪ್ರ್ರಾರಂಭವಾದರೆ  ಅದನ್ನು ಹೋಗಲಾಡಿಸುವುದು ಕಷ್ಟ ಸಾಧ್ಯ.ಮರೆವು ಒಂದು ವರವೂ ಹೌದು. ಮರೆವು ಇರದಿದ್ದರೆ ಕಹಿ ಘಟನೆಗಳನ್ನು ದುಃಖದ ಸಂಗತಿಗಳನ್ನು ಮರೆಯಲು ಸಾಧ್ಯವಾಗದೇ ಬಾಳು ನಿತ್ಯ ನರಕವಾಗುತ್ತಿತ್ತು. ಪ್ರಮುಖ ವಿಷಯಗಳನ್ನು ಮರೆಯದೇ ನೆನಪಿÀಡಬೇಕೆ? ಹಾಗಾದರೆ ಇಲ್ಲಿದೆ ಅದಕ್ಕೆ ರಾಮಬಾಣ.

 ಅಟೋ ಸಜೇಷನ್

 ಸಾಮಾನ್ಯವಾಗಿ ಜ್ಞಾಪಕ ಶಕ್ತಿ ಎಲ್ಲರಲ್ಲೂ ಒಂದೇ ರೀತಿಯಲ್ಲಿರುತ್ತದೆ. ಇದನ್ನು ದಿನ ನಿತ್ಯ ಮೊಂಡಾದ ಚಾಕು ಹರಿತಗೊಳಿಸುವಂತೆ, ಪರಿಶ್ರಮದಿಂದ ವೃದ್ಧಿಸಿಕೊಳ್ಳುತ್ತಾರೆ. ಗೆಲುವು ಸಾಧಿಸುತ್ತಾರೆ. ಇನ್ನೂ ಕೆಲವರು ತಮ್ಮಲ್ಲಿ ಜ್ಞಾಪಕ ಶಕ್ತಿಯ ಪ್ರಮಾಣವೇ ಕಡಿಮೆ ಇದೆ ಎಂಬ ಭ್ರಮೆಗೆ ಜೋತು ಬಿದ್ದು ವಿಫಲರಾಗುತ್ತಾರೆ. ಕೆಲ ಜನರು ತೀರಾ ಅನಗತ್ಯವೆನಿಸುವ ವಿಷಯಗಳನ್ನು ಪ್ರಮುಖವೆಂದು ಭಾವಿಸಿ ಆ ಸಂಗತಿಗಳು ತಮ್ಮ ತಲೆಯಲ್ಲಿ ಉಳಿಯುವುದಿಲ್ಲ ಎಂದು ಚಿಂತಿಸುತ್ತಾರೆ. ನಿಜ ಹೇಳಬೇಕೆಂದರೆ ಚಿಕ್ಕ ಪುಟ್ಟ ವಿಷಯಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡುತ್ತಿಲ್ಲ ಎಂದು ಖುಷಿ ¥ಡಬೇಕು ನೀವು ಪುಸ್ತಕ ಪೆನ್ನು ಇತ್ಯಾದಿ . ದಿನ ನಿತ್ಯ ಇಡುವ ಜಾಗದಲ್ಲಿ ಇಡದೇ ಬೇರೆ ಜಾಗದಲ್ಲಿಟ್ಟು ಹುಡುಕುತ್ತ ಇತ್ತೀಚಿಗೆ ನನಗೆ ಮರೆವು ಹೆಚ್ಚಾಗ್ತಿದೆ ಎಂದು ಬೇಸರಿಸಿಕೊಂಡರೆ ಅದೊಂದು ರೀತಿಯ ಮೂರ್ಖತನವೇ ಅಲ್ಲವೇ? ಎಲ್ಲೋ ಇಟ್ಟು ಎಲ್ಲೋ ಹುಡುಕಿದರೆ ಸಿಗುವುದಾದರೂ ಹೇಗೆ? ನನಗೆ ಜ್ಞಾಪಕ ಶಕ್ತಿ ಕಡಿಮೆ ಮರೆವು ಜಾಸ್ತಿ ಎಂದು ಪದೇ ಪದೇ ಹೇಳಬೇಡಿ. ಈ ಸಂಗತಿ  ಮೆದುಳಲ್ಲಿ ಪ್ರತಿಷ್ಟಾಪಿಸಿದರೆ ಅಪಾಯಕಾರಿ. ನನಗೆ ಅದ್ಭುತ ಜ್ಞಾಪಕ ಶಕ್ತಿ ಇದೆ ಎಂದು ಅಟೋ ಸಜೆಷನ್ (ಸ್ವ ಸಲಹೆ) ಕೊಟ್ಟುಕೊಳ್ಳಿ ಪರಿಣಾಮವೂ ಅದ್ಭುತವಾಗಿರುತ್ತದೆ.

ಆಸಕ್ತಿ ವಲಯ ಬದಲಿಸಿ

ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದರೆ ಯಾರು ಎಷ್ಟು ಶತಕ ಬಾರಿಸಿದರು? ಭಾರತ ಯಾವಾಗ ವಿಶ್ವ ಕಪ್ ಗೆದ್ದಿತು? ಯಾರು  ಬ್ಯಾಟಿಂಗ್  ದಾಖಲೆ ಸಾಧಿಸಿದ್ದಾರೆ ಎನ್ನುವ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸುತ್ತೀರಿ. ಒಂದು ವೇಳೆ ಸಿನಿಮಾದಲ್ಲಿ ಆಸಕ್ತಿ ಇದ್ದರೆ ಯಾವ ಸಿನಿಮಾದಲ್ಲಿ ಯಾರು ಹೀರೋ? ನಿರ್ದೇಶನ ಯಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತೀರಿ. ಸಂಗೀತದಲ್ಲಿ ಆಸಕ್ತಿ ಇದ್ದರೆ ಗೀತೆ ರಚನೆಕಾರರು ಯಾರು? ಹಾಡಿದವರು ಯಾರು? ಎನ್ನುವ ಪ್ರಶ್ನೆಗಳಿಗೆ ಅರೆ ಕ್ಷಣ ಯೋಚಿಸದೇ ಫಟಾ ಫಟ್ ಉತ್ತರಿಸಿ ಬಿಡುತ್ತಿರಿ. ಇಷ್ಟವಾದ ವಿಷಯಗಳನ್ನು ನೆನಪಿಡಲು ಕಷ್ಟವೆನಿಸುವುದಿಲ್ಲ. ಆದರೆ ಇಷ್ಟ ಇಲ್ಲದ ವಿಷಯ ಬಂದಾಗ ಮರೆವು ಜಾಸ್ತಿ ಇದೆ ಎನ್ನುವ ದೂರು ನೀಡುವ ನಿಮಗೆ ಇದೆಲ್ಲ ಉತ್ತರಿಸೋಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಭ್ರಮೆಯಲ್ಲಿರುವವರಿಗೆ ಹೆಚ್ಚಾಗಿ ಮೂಡುವುದಿಲ್ಲ. ಒಮ್ಮೆ ಪ್ರಶ್ನಿಸಿಕೊಂಡು ನೋಡಿ ಹೌದು ನನ್ನಲ್ಲಿ ಜ್ಞಾಪಕ ಶಕ್ತಿ ಅಗಾಧವಾಗಿದೆ. ಆದರೆ ನನ್ನ ಆಸಕ್ತಿ ವಲಯ ಬದಲಿಸಿದರೆ ನಾನು ಓದಿಗೆ ಸಂಬಂಧಿಸಿದ ಅಥವಾ ನನಗೆ ಬೇಕಾದ ವಿಷಯ ನೆನಪಿನಲ್ಲಿಟ್ಟುಕೊಳ್ಳಬಲ್ಲೆ ಎಂಬುದು ಸ್ಪಷ್ಟವಾಗುವುದು.

ಪುನರಾವಲೋಕನ

 ನೀವು ಓದಿದ ವಿಷಯಗಳನ್ನು ಮೇಲಿಂದ ಮೇಲೆ ಪುನರಾವಲೋಕನ ಮಾಡಿಕೊಳ್ಳುತ್ತಿರಬೇಕು  ಪುನರಾವರ್ತನೆಗೊಳ್ಳುವ ವಿಷಯಗಳನ್ನು ಮೆದುಳು ಅಷ್ಟು ಸಲೀಸಾಗಿ ಮರೆಯಲು ಸಾಧ್ಯವಿಲ್ಲ. ಪರೀಕ್ಷೆ ಬರೆಯುವಾಗ ಈ ವಿಷಯಗಳು ಖಂಡಿತ ನೆನಪಿಗೆ ಬರುವವು. ಒಮ್ಮೆ ಮನೆಯಲ್ಲಿ ಪ್ರಶ್ನೆ ಪತ್ರಿಕೆ ಬಿಡಿಸಿ ಪರೀಕ್ಷಿಸಿ ನೋಡಿ. ನಿಮಗೆ ಅಚ್ಚರಿ ಎನಿಸುತ್ತದೆ. ಪುನರಾವಲೋಕನ ಮನೋಬರಲವನ್ನು ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಅರಿಯದೇ ನೋಡದೇ ಯೋಚಿಸದೇ ಕಾರ್ಯ ಮಾಡಬಾರದು ಎಂದು ವಿಷ್ಣು ಶರ್ಮ ಹೆಳಿದ್ದಾನೆ. ಅಂತೆಯೇ ಓದಿದ ವಿಷಯಗಳನ್ನು ಅರ್ಥೈಸಿಕೊಂಡು ಪುನರಾವಲೋಕನ ಮಾಡಿಕೊಳ್ಳಿ.

ಅಕ್ರೋನಿಮ್ಸ್ ಬಳಸಿ

ಹತ್ತು ಹಲವು ಅಂಶಗಳುಳ್ಳ ದೊಡ್ಡ ದೊಡ್ಡ ಉತ್ತರಗಳನ್ನು ನೆನಪಿನಲ್ಲಿಕೊಟ್ಟುಕೊಳ್ಳುವುದು ತುಂಬಾ ಕಷ್ಟ ಎನಿಸುವುದು ಸಹಜ. ಕಂಠ ಪಾಠ ಮಾಡುವ ಪದ್ದತಿ ಇಲ್ಲಿ ಉಪಯೋಗಕ್ಕೆ ಬಾರದು. ಶ್ಲೋಕಗಳು ಪದ್ಯಗಳು ಸುಭಾಷಿತಗಳನ್ನು ನೆನಪಿಡಲು ಮಾತ್ರ ಕಂಠ ಪಾಠ ಸೂಕ್ತ. ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ವಿಬ್ಗಾರ್ ಎಂದು ಅಕ್ಷರ ಮುದ್ರಿಕೆಯನ್ನು ಉಪಯೋಗಿಸುತ್ತಾರೆ.  ದೊಡ್ಡ ಉತ್ತರಗಳ ಅಂಶಗಳ ಮೊದಲ ಅಕ್ಷರಗಳನ್ನು ಒಟ್ಟುಗೂಡಿಸಿದರೆ ಅಕ್ಷರ ಮುದ್ರಿಕೆ (ಸಣ್ಣ ಪದಗಳು) ಅಬ್ರಿವೇಶನ್ಸ್ನಂತೆ  ಆಗುತ್ತದೆ. ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ವಾಕ್ಯವನ್ನು ರಚಿಸಿಕೊಳ್ಳಬಹುದು.ಅದೂ ಪರಿಣಾಮಾಕಾರಿ ಆಗಿರುತ್ತದೆ. .

ಬೇಡ ಒತ್ತಡ

ಕೇಳಿದ ಓದಿದ ನೋಡಿದ ವಿಷಯಗಳು ಮನದಲ್ಲಿ ಅಚ್ಚೊತ್ತಿದಮತೆ ಉಳಿಯಬೇಕೆಂದರೆ ಮನಸ್ಸು ಪ್ರಫುಲ್ಲವಾಗಿರಬೇಕು. ಒತ್ತಡದಿಂದ ಕೂಡಿದ್ದರೆ ಸಣ್ಣ ಸಂಗತಿಗಳನ್ನು ನೆನಪಿಲ್ಲಿಡಲು ಸಾಧ್ಯವಾಗುವುದಿಲ್ಲ. ಪ್ರಶಾಂತ ವಾತಾವರಣದಲ್ಲಿ ನಿಮ್ಮ ಓದು ಬರಹ ಸಾಗಲಿ. ದಿನ ನಿತ್ಯ ಕಲಿತ ಹೊಸ ಸಂಗತಿಗಳನ್ನು ಪುರ್ನಮನನ ಮಾಡಿಕೊಳ್ಳಿ. ಶ್ರೀರಂಗರು ಹೇಳಿದಂತೆ ಮಾನವರಿಗೆ ವಿಚಾರಕ್ಕಿಂತ ಆಚಾರದ ಮಹತ್ವವಿದೆ. ಬುದ್ಧಿಗಿಂತ ಶ್ರದ್ಧೆಗೆ ಮಹತ್ವವಿದೆ. ಹೀಗಾಗಿ ನೆನಪಿನ ಶಕ್ತಿಗೆ ಶ್ರದ್ಧೆ ಅತಿ ಮುಖ್ಯವಾದುದು.

ಏಕಾಗ್ರತೆ

ವಿವೇಕಾನಂದರು ನುಡಿವಂತೆ ಇಂದ್ರೀಯಗಳು ಪ್ರತಿಕ್ಷಣದಲ್ಲೂ ನಮ್ಮನ್ನು ಮೋಸಪಡಿಸುತ್ತಿರುತ್ತವೆ.ನಮ್ಮೆಲ್ಲ ಇಂದ್ರೀಯಗಳನ್ನು ನಿಗ್ರಹಗೊಳಿಸಿ ಒಂದೇ ಕಡೆ ಚಿತ್ತದ ಗಮನ ಹರಿಸುವುದೇ ಏಕಾಗ್ರತೆ. ಇಂದ್ರೀಯಗಳು ಯಾವಾಗಲೂ ಪರತಂತ್ರವಾಗಿವೆ. ಹೊರಗಣ ತಂತ್ರಗಳನ್ನು ಅವಲಂಬಿಸಿವೆ. ಹೀಗಾಗಿ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿರುವಾಗ ಅದರಾಚಿಗಿನ ವಿಷಯವನ್ನು ಎಂದಿಗೂ ಯೋಚಿಸಬಾರದು. ವರ್ತಮಾನದಲ್ಲಿ ಮಾತ್ರ ಚಿತ್ತ ಮುಳಗಿರಬೇಕು. ಅಡುಗೆಗೆ ಉಪ್ಪು ಹೇಗೋ ಹಾಗೆ ಜ್ಞಾಪಕ ಶಕ್ತಿಯ ವೃದ್ಧಿಗೆ ಏಕಾಗ್ರತೆ. ಏಕಾಗ್ರತೆ ಇಲ್ಲದೇ ಸಣ್ಣ ಸಂಗತಿಯನ್ನು ಮೆದುಳಿನಲ್ಲಿ ದಾಖಲಿಸಲಾಗುವುದಿಲ್ಲ. 

ಮನೆ ಮದ್ದು

ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವ ಮನೆ ಮದ್ದುಗಳನ್ನು ಬಳಸಿ. ಸರಿಯಾದ ಸಮಯಕ್ಕೆ  ಸಮತೋಲಿತ ಆಹಾರ, ನೀರಿನ ಸೇವನೆ ವ್ಯಾಯಾಮ ನಿದ್ದೆ ಮೆದುಳಿಗೆ ಕಸರತ್ತು ನೀಡುವ ಮೆಮರಿ ಗೇಮ್ಸ್ಗಳನ್ನು ಆಡಿ ಅವು ಮೆದುಳನ್ನು ಬಲಪಡಿಸುತ್ತವೆ ಅದರೊಂದಿಗೆ ಈ ಎಲ್ಲವೂ ಜ್ಞಾಪಕ ಶಕ್ತಿಗೆ ಪರೋಕ್ಷವಾಗಿ ಪುಷ್ಟಿ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜ್ಞಾನಿಗಳು ಮತ್ತು ಮಾನಸಿಕ ತಜ್ಞರು ಜ್ಞಾಪಕ ಶಕ್ತಿ ಹೆಚ್ಚಿಸಲು ಅನೇಕ ವಿಧಾನಗಳನ್ನು ಕಂಡು ಹಿಡಿದಿದ್ದಾರೆ. ಅವುಗಳನ್ನು ತಿಳಿದು ಅಳವಡಿಸಿಕೊಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರೆವಿಗೆ ಮದ್ದು ನೀಡುವ ಪುಸ್ತಕಗಳನ್ನು ಓದಿ. ಜ್ಞಾಪಕ ಸಕ್ತಿ ಹೆಚ್ಚಿಸಿಕೊಂಡು ಗೆಲುವಿನ ನಗೆ ಬೀರಿ.

**********

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

3 thoughts on “

  1. ಜಯಶ್ರೀ ಅವರೇ,
    ತುಂಬಾ ಚೆನ್ನಾಗಿ ಬರೆದಿದ್ದೀರಿ. ಎಲ್ಲರಿಗೂ ಉಪಯುಕ್ತ ಲೇಖನ.

Leave a Reply

Back To Top