ಮಿಗೆಯಗಲ ನಿಮ್ಮಗಲ

ಕವಿತೆ

ಮಿಗೆಯಗಲ ನಿಮ್ಮಗಲ

ನೂತನ ದೋಶೆಟ್ಟಿ

ನೂತನಾ ಕಾವ್ಯಗುಚ್ಛ

ದೇಹವನೆ ದೇಗುಲ ಮಾಡಿ
ಜಗ ಮುಗಿಲುಗಳಗಲ ನಿಂತ
ಕಾಣಲಾರದ ಕೂಡಲಸಂಗನ
ಕರಸ್ಥಲದಲ್ಲೆ ಕರೆಸಿ
ಭಕ್ತಿ ದಾಸೋಹವನೆಗೈದ
ಜಗದ ತಂದೆ

ಸಕಲ ಜೀವರಾತ್ಮವೂ ಪರಶಿವನ ನೆಲೆ
ಮೇಲು – ಕೀಳೆಂಬುದು ಇಳೆಯ ಕೊಳೆ
ಇದ ತೊಳೆವುದೇ ಶಿವ ಪಾದಪೂಜೆ
ಕೂಡುಂಡ ಅನ್ನವೇ ಕರಣಪ್ರಸಾದ
ಅರಿವ ಜ್ಯೋತಿ ಬೆಳಗಿಸಿದ
ಕ್ರಾಂತಿಕಾರಿ ಅಣ್ಣ

ದಯೆಯ ಬೀಜಮಂತ್ರವ ಪಠಿಸಿ
ಸುಳ್ಳು- ಸಟೆ ಬಿಡು
ನೀತಿ ನಡೆ ನುಡಿಯೇ ಕೂಡಲಸಂಗಮ
ಆವು ತಾವೆಂಬ ಸರಳತೆಯ ಕಲಿಸಿದ
ಮಮತೆಯ ಮಾತೆ

ಚಂದ್ರ- ಚಕೋರರ, ಭ್ರಮರ – ಬಂಡುವ
ಅಂಬುಜ- ರವಿ, ಜ್ಯೋತಿ – ತಮಂಧ
ಆಡುವ ನವಿಲು, ಓದುವ ಗಿಳಿ
ಜಗವ ಅವನಲಿ ಕಂಡು
ತನ್ನ ಅವನಲಿ ಪಡೆದು
ಆರಾಧಿಪ ಕವಿ

ಇಳೆಯ ಬಾಚಿ ನಿಂತು
ಭಕ್ತಿ -. ವಿರಕ್ತಿಗಳ ಮುಕ್ತಿಸಿ
ನೀತಿ – ದಯೆಗಳ ನುಲಿಸುವ
ಆನು – ತಾನುಗಳ ಪ್ರಣವ
ಜಂಗಮಕ್ಕಳಿವಿಲ್ಲ ದಿಟ.

*************************************************

Leave a Reply

Back To Top