ಹೆತ್ತಿರುವ ತಾಯಿ, ನಮ್ಮನ್ನು
ಹೊತ್ತಿರುವ ಭೂಮಿಗಿಂತ ದೊಡ್ಡ
ಧರ್ಮವಿಲ್ಲ’
ಫಾಲ್ಗುಣ ಗೌಡ
ತಣ್ಣಗಿನ ವ್ಯಕ್ತಿತ್ವದ ಸರಳ ಮನುಷ್ಯ ನಮ್ಮ ಫಾಲ್ಗುಣ ಗೌಡ. ಹುಟ್ಟಿದ್ದು ಅಂಕೋಲಾ ತಾಲೂಕಿನ ಅಚವೆ. ಕಾಲೇಜು ಹಂತದಲ್ಲಿ ಬರವಣಿಗೆ ಪ್ರಾರಂಭಿಸಿದರು. ಜಿ.ಸಿ .ಕಾಲೇಜಿನ ಭಿತ್ತಿ ಪತ್ರ ವಿಭಾಗದಿಂದ ಕವಿತೆ ಬರೆಯಲು ಪ್ರಾರಂಭ. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಏರ್ಪಡಿಸಿದ ಬೇಂದ್ರೆ ಸ್ಮ್ರತಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಎರಡು ಸಲ ಬಹುಮಾನ ಪಡೆದರು ಪಾಲ್ಗುಣ. ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ `ಸಂಚಯ’ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಐದು ಬಾರಿ ಬಹುಮಾನ ಪಡೆದಿದ್ದಾರೆ.
ಕಾರವಾರ, ಧಾರವಾಡ, ಭದ್ರಾವತಿ ಆಕಾಶವಾಣಿ ಕೇಂದ್ರಗಳಲ್ಲಿ ಕತೆ, ಕವಿತೆ ಪ್ರಸಾರವಾಗಿವೆ. ಗೋವಾದಲ್ಲಿ ನಡೆದ ಅಂತರರಾಜ್ಯ ಕವಿಗೋಷ್ಟಿ ಸೇರಿದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇವರ ಮೊದಲ ಕವನ ಸಂಕಲನ `ಮಾಮೂಲಿ ಮಳೆಯಲ್ಲ’ ಪ್ರಕಟಿಸಿದೆ. ` ಅಶಾಂತ ಕಡಲು ಪ್ರಶಾಂತ ಮುಗಿಲು’ ಎಂಬ ಪ್ರಬಂಧ ಸಂಕಲನ ಪ್ರಕಟವಾಗಿದೆ. ಚೌಕಿಮನೆ(ಕವನ ಸಂಕಲನ), ಬಕ್ಕೆಮರ (ಕಥಾ ಸಂಕಲನ) ಸಿದ್ದತೆಯಲ್ಲಿದ್ದಾರೆ.
ದಾಂಡೇಲಿಯ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ `ಯುವ ಕವಿ ಪ್ರಶಸ್ತಿ’ ನೀಡಿ ಗೌರವಿಸಿದೆ.ಕಾರವಾರದ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಕೆಲಸ ಮಾಡುತ್ತ ನಗರದ ದಿವೇಕರ ವಾಣಿಜ್ಯ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಅಂಕೋಲೆಯ ಪಿ.ಎಂ.ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
…………………………………
ಕತೆ, ಕವಿತೆ ಯಾಕೆ ಬರೆಯುತ್ತೀರಿ?
ಎಲ್ಲೋ ಕಂಡ ಸನ್ನಿವೇಶಗಳು, ಸಂದರ್ಭಗಳು ನನ್ನ ಮನಸ್ಸನ್ನು ತಟ್ಟಿದರೆ ತಕ್ಷಣ ಬರೆಯಲು ತೊಡಗುತ್ತೇನೆ. ಕೆಲವು ಪಾತ್ರಗಳು ನನ್ನನ್ನು ಕಾಡಿದರೆ ಅದೇ ವಸ್ತುವಾಗಿ ಒಂದು ಕಥೆಯಾಗಬಹುದು. ಯಾವುದೋ ಒಂದು ಸನ್ನಿವೇಶ ನನ್ನದೆಯ ಭಾವನೆಗಳನ್ನು ಉಕ್ಕಿಸಿದರೆ ಅದು ಕವಿತೆಯಾಗುತ್ತದೆ. ಯಾವುದಕ್ಕೂ ಸ್ಫೂರ್ತಿ ಬೇಕೇ ಬೇಕು. ಸ್ಫೂರ್ತಿ ಸಿಕ್ಕರೆ ಅದನ್ನು ಕಥೆ, ಕವಿತೆಯಾಗಿಸುವುದಕ್ಕೆ ಪ್ರತಿಭೆ ಕೂಡಾ ಬೇಕಾಗುತ್ತದೆ. ಬರೆಯುವುದಕ್ಕೆ ಶುರು ಮಾಡಿದರೆ ಮಾತ್ರ ಮನಸ್ಸಿನ ಕದ ತೆರೆದು ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ತನಗೆ ತಾನೇ ಹೇಗೆ ಬರೆಯಬೇಕೆಂದು ನಿರ್ದೇಶಿಸುತ್ತದೆ. ನನ್ನ ಪ್ರೀತಿಯ ಚಿತ್ತಾಲರು ಹೇಳಿದ ಹಾಗೆ ‘ನಾನು ತಿಳಿದದ್ದನ್ನು ಬರೆಯುವುದಲ್ಲ, ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುತ್ತೇನೆ’. ಈ ಹೇಳಿಕೆ ನನಗೆ ತುಂಬಾ ಇಷ್ಟ. ಆಗಲೇ ಹೇಳಿದಂತೆ ನನಗೆ ಕಾಡಿದ ಪಾತ್ರಗಳು, ಸನ್ನಿವೇಶಗಳು ಕಾಡಿದ್ದರಿಂದಲೇ ನಾನು ಬರೆಯುವುದಕ್ಕೆ ತೊಡಗುತ್ತೇನೆ.
ಕತೆ, ಕವಿತೆ ಹುಟ್ಟುವ ಕ್ಷಣ ಯಾವುದು?
ಅಕಾರಣ ಭಾವವೊಂದು ಸ್ಪೂರ್ತಿಯ ಬಿಂದುವಿನಲ್ಲಿ ಲೀನವಾದಾಗ ಮೂರ್ತರೂಪ ಪಡೆದು ಕೆಲವೇ ಸಾಲುಗಳಲ್ಲಿ ಬರೆದರೆ ಅದು ಕವಿತೆ. ಅದು ವಿಸ್ತಾರ ಪಡೆದರೆ ಕಥೆಯಾಗುತ್ತದೆ. ಆ ಕ್ಷಣ ಲೌಕಿಕವಾದ್ದು. ಅದು ಅಕಾರಣ ಪ್ರೀತಿಯಂತೆ. ನಾವು ಅನುಭವಿಸಿದ ನೋವುಗಳು ಕೂಡ ಕಥೆ, ಕವಿತೆಯ ರೂಪ ಪಡೆಯುತ್ತದೆ. ಕವಿಯಾದವ ಆ ಕ್ಷಣಕ್ಕಾಗಿ ಕಾಯಬೇಕಾಗುತ್ತದೆ. ಕವಿತೆಯ ಭಾವವೋ ಕಥೆಯ ಪಾತ್ರವೋ, ವಸ್ತುವೋ ಮನಸ್ಸಿನ ತುಂಬ ತುಂಬಿ ಅದು ಬರವಣಿಗೆ ರೂಪ ಪಡೆದಾಗಲೇ ಮನಸ್ಸು ನಿರಾಳತೆ ಅನುಭವಿಸುವುದು. ಹೆಣ್ಣು ಅನುಭವಿಸುವ ಹೆರಿಗೆ ನೋವನ್ನು ಒಬ್ಬ ಕವಿ, ಕಥೆಗಾರನೂ ಅನುಭವಿಸುತ್ತಾನೆ.
ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು?
ಸಾಮಾನ್ಯವಾಗಿ ದುರ್ಬಲ ವರ್ಗದವರ ಮೇಲೆ ಮಾಡುವ ಉಳ್ಳವರ ಶೋಷಣೆ ಪ್ರೀತಿಯ ಅಗಾಧತೆ ಸಮಾಜವನ್ನು ನಡೆಯುವ ಘಟನೆಗಳು ಉದ್ಯೋಗಸ್ತರ ಮಾನಸಿಕ ತಾಕಲಾಟಗಳು, ದ್ವೇಷ ತುಂಬಿದ ವ್ಯಕ್ತಿತ್ವಗಳ ಮನೋಧರ್ಮಗಳು ಕಥೆಯಾಗುವಲ್ಲಿ ಕಾರಣವಾಗಿವೆ.
ನನಗೆ ತುಂಬಾ ಕಾಡುವ ವಿಷಯವೆಂದರೆ ಪ್ರಾಮಾಣಿಕತೆ, ನಿಷ್ಠೆಗೆ ಈಗ ಕವಡೆ ಕಾಸಿನ ಕಿಮ್ಮತ್ತಿಲ್ಲದಿರುವುದು. ಅಸೂಯೆ ತುಂಬಿದ ಸಣ್ಣತನದ ವ್ಯಕ್ತಿತ್ವಗಳು, ಹೆದ್ದಾರಿಯಲ್ಲಿ ಹೂಮಾರಿ ಶಾಲೆಗೆ ಹೋಗುವ ಹುಡುಗಿಯರು, ಹತ್ತಾರು ಕೀಲೋಮೀಟರ್ ಬೆಟ್ಟ ಸುತ್ತಿ ಸೌದೆ ತಂದು, ಮತ್ತೆ ಅಷ್ಟೇ ಕೀಲೋ ಮೀಟರ್ ಸೌದೆ ಹೊತ್ತು ಅದನ್ನು ಕಡಿಮೆ ದುಡ್ಡಿಗೆ ಮಾರಿ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಮನೆ ಮುನ್ನಡೆಸುವ ‘ಲಂಕೇಶರ ಅವ್ವ’ನಂತ ನನ್ನ ಜನಾಂಗದ ಮಹಿಳೆಯರು. ಮನುಷ್ಯನಲ್ಲಿ ಮಾನವೀಯತೆ ಕಳಕೊಂಡಾಗ ಪ್ರಾಣಿಗಳಲ್ಲಿ ಅದು ವ್ಯಕ್ತವಾಗುತ್ತದಲ್ಲ ಅದು ನನ್ನನ್ನು ತುಂಬಾ ಕಾಡುತ್ತದೆ. ವಿಕಲಚೇತನ ವ್ಯಕ್ತಿ ಇರುವ ಒಂದೇ ಅದೂ ಸೊಟ್ಟಗಾಗಿರುವ ಕಾಲಿನಲ್ಲಿ ಚಿತ್ರ ಬಿಡಿಸಿ, ಬಣ್ಣ ತುಂಬಿ ಅದನ್ನು ದಾರಿಹೋಕರಿಗೆ ಮಾರಿ ಮನೆಯಲ್ಲಿರುವ ತಾಯಿ ತಂಗಿಯನ್ನು ಸಾಕುವ ಬೆಂಗಳೂರಿನ ಒಬ್ಬ ವ್ಯಕ್ತಿಯೊಬ್ಬ ನನ್ನನ್ನು ತುಂಬಾ ಕಾಡುತ್ತಾನೆ.
ಕಥೆ, ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ?
ಹೌದು. ಬಾಲ್ಯವಿಲ್ಲದೆ ಯಾವುದು ಇಲ್ಲ. ನಾನು ಬರೆಯುವ ಕಥೆ ಮತ್ತು ಕವಿತೆಗಳಲ್ಲಿ ಬಾಲ್ಯದ ಅನುಭವಗಳೇ ಜಾಸ್ತಿಯಾಗಿವೆ. ಬಾಲ್ಯ ಅನುಭವಿಸದೆ ಹರೆಯಕ್ಕೆ ಅರ್ಥವಿಲ್ಲ. ಈಗ ಮಕ್ಕಳ ಬಾಲ್ಯವೆಲ್ಲಾ ಹೋಮ್ ವರ್ಕ, ರಿಯಾಲಿಟಿ ಶೋಗಳ ತಯಾರಿ, ಮೊಬೈಲಿನ ವಿಡಿಯೋ ಗೇಮ್‌ಗಳಲ್ಲಿ. ಮಕ್ಕಳ ಪ್ರತಿಭಾ ಪ್ರದರ್ಶನದ ಹೆಸರಿನಲ್ಲಿ, ಪ್ರಖ್ಯಾತಿಯ ಹುಚ್ಚಿನ ಪಾಲಕರು ಮಕ್ಕಳಿಗೆ ಉಂಟು ಮಾಡುವ ಒತ್ತಡ ಕಂಡಾಗ ಅಚ್ಚರಿಯೆನಿಸುತ್ತದೆ. ಬಾಲ್ಯದ ಮುಗ್ಧತೆ ಅನುಭವಿಸುವುದನ್ನು ಪಾಲಕರು ನೋಡಬೇಕು. ಆ ನಂತರ ಪ್ರತಿಭಾ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು.
ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
‘ಸೇವೆ’ ಎನ್ನುವುದು ಅರ್ಥ ಕಳೆದು ಕೊಂಡಿದೆ ಪ್ರಸ್ತುತ ರಾಜಕೀಯ ಅವಕಾಶವಾದಿ ರಾಜಕಾರಣವಾಗಿದೆ. ಮೌಲ್ಯಾಧಾರಿತ ರಾಜಕಾರಣ ಎಂದೋ ಕಳೆದು ಹೋಗಿದೆ. ವಿರೋಧ ಪಕ್ಷ ಇದ್ದು ಇಲ್ಲದಂತಾದ ಎಂಬತ್ತರ ದಶಕದಲ್ಲಿ ಲಂಕೇಶರ ‘ಲಂಕೇಶ ಪತ್ರಿಕೆ’ ಪ್ರಬಲ ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿತ್ತು. ಅದು ದೇಶಕ್ಕೇ ಮಾದರಿ. ಯಾವ ಜಾಹಿರಾತಿಲ್ಲದೇ ಪತ್ರಿಕೆ ನಡೆಸಿ ರಾಜಕೀಯ ಪಕ್ಷಗಳನ್ನು, ಸರ್ಕಾರವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಎಲ್ಲಾ ತರದ ಪತ್ರಿಕೆಗಳಿಗೆ ಮಾದರಿ. ಪತ್ರಿಕೆಗಳೂ ಕೂಡಾ ಪಕ್ಷಗಳ ಮುಖವಾಣಿಯಾಗಬಾರದು.
ನಮ್ಮ ದಿನಕರ ದೇಸಾಯಿಯಂತವರು ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದರು. ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಇಡೀ ಜಿಲ್ಲೆಯನ್ನು ಆವರಿಸಿದೆ. ಶಿಕ್ಷಣ, ರೈತ ಹೋರಾಟ, ದುರ್ಬಲ ವರ್ಗದವರ ಅಭ್ಯುದಯ ಅವರ ನಿಸ್ವಾರ್ಥ ಸೇವೆಯನ್ನು ಹೇಳುತ್ತದೆ. ಆಗಿನ ಅವರ ರೈತ ಹೋರಾಟ ಕರ್ನಾಟಕದ ಮೊದಲ ರೈತ ಹೋರಾಟ ಎಂದು ಲಂಕೇಶ ಕರೆದಿದ್ದರು. ಕಾಗೋಡ ಹೋರಾಟದ ಭರಾಟೆಯಲ್ಲಿ ದೇಸಾಯಿಯವರ ರೈತ ಹೋರಾಟಕ್ಕೆ ಅಷ್ಟು ಪ್ರಭಾವ ಸಿಗಲಿಲ್ಲವೆನ್ನಬೇಕು. ಈಗಲೂ ಕೂಡ ಉತ್ತಮ ರಾಜಕಾರಣಿಗಳು ಖಂಡಿತಾ ಇದ್ದಾರೆ. ಅಂತವರಿಂದಲೇ ನಾಡಿನ ಅಭಿವೃದ್ಧಿಯನ್ನು ನೀರಿಕ್ಷಿಸಬಹುದು. ಹಣ, ಅಧಿಕಾರದ ದುರಾಸೆ ಇಲ್ಲದ ಯುವಕರು ಕಾರಣಕ್ಕೆ ಬರಬೇಕು. ಮತ ಕೂಡ ಮಾರಾಟದ ಸರಕಾಗಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ. ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಹೆಚ್ಚೇನು ಕೈಗಾ ಅಣುಸ್ಥಾವರ ಸ್ಥಳಾಂತರ ಮಾಡಲು ಚುನಾವಣೆಗೆ ನಿಂತ ಕಾರಂತರನ್ನು ಸೋಲಿಸಿದ ಜಿಲ್ಲೆ ನಮ್ಮದು.
ಧರ್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು?
ಧರ್ಮದ ಬಗ್ಗೆ ಮಾತಾಡುವುದೇ ಕಷ್ಟ. ಅದೊಂದು ಧರ್ಮ ಸೂಕ್ಷ್ಮ. ದಯವೇ ಧರ್ಮದ ಮೂಲವೆಂದರು ಬಸವಣ್ಣನವರು. ಮನುಷ್ಯ ಮಾನವೀಯವಾಗುವುದೇ ಧರ್ಮವೆನ್ನುವುದು ನನ್ನ ಭಾವನೆ. ನಮ್ಮ ಆಚಾರ ವಿಚಾರಗಳು ಸಕಲ ಜೀವಿಗಳ ಬಗ್ಗೆ ಪ್ರೀತಿ ತೋರುವುದೇ ನಿಜವಾದ ಧರ್ಮ ಮತ್ತೆ ‘ನಮ್ಮನ್ನು ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿತಾಯಿಗಿಂತ ದೊಡ್ಡ ಧರ್ಮವಿಲ್ಲ’ವೆಂದು ನನಗನಿಸುತ್ತದೆ.
ಈ ಸೃಷ್ಠಿಯ ಹಿಂದೆ ಒಂದು ಕಾಣದ ಕೈ ಕೆಲಸ ಮಾಡುತ್ತಿದೆ. ಅದೇ ದೇವರು. ಅದಕ್ಕೆ ಮನುಷ್ಯ ಹಲವು ಹೆಸರುಗಳನ್ನಿಟ್ಟು ಪೂಜಿಸುತ್ತಿರುವದು. ಅದು ಅವರವರ ನಂಬಿಕೆಗೆ ಬಿದ್ದದ್ದು. ಯಾಕೆಂದರೆ ನಮ್ಮ ಬದುಕು ನಿಂತಿರುವುದೇ ಪ್ರೀತಿ, ವಿಶ್ವಾಸ, ನಂಬಿಕೆಗಳ ಆಧಾರದ ಮೇಲೆ. ಅಲ್ಲವೇ? ಅದರ ಸಾಕ್ಷಾತ್ಕಾರ ಆದವರಿಗೆ ಅದರ ಬಗ್ಗೆ ನಂಬಿಕೆ ಇರುತ್ತದೆ. ರಾಜಕುಮಾರ ಹೇಳ್ತಾರೆ. “ಮಕ್ಕಳೇ ದೇವರು, ದೇವರು ಒಂದು ಮಗು” ಅಂತ.
ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ?
ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಸದಾ ನಡೆಯುತ್ತಿದ್ದರೆ ಭಾಷೆ ಮತ್ತು ಸಂಸ್ಕೃತಿಯ ಕುರಿತು ಜನಗಳಿಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಜಾಗತೀಕರಣದ ಮಾರಿ ನಮ್ಮ ಭಾಷೆ, ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿದೆ. ಜಾಗತೀಕರಣ ಎಂಬ ವಿಷಕನ್ಯೆ ಮನೆ ಬಾಗಿಲಿಗೆ ಬಂದು ನಿಂತಿದೆ. ಅದರ ಕಬಂಧ ಬಾಹುಗಳ ಆಲಿಂಗನದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಅದಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಉಳಿಸುವ, ಸಂಸ್ಕೃತಿಯನ್ನು ಪೋಷಿಸುವ ಕೆಲಸ ನಿರಂತರ ನಡೆಯಬೇಕು. ನಮ್ಮ ಜನಪದರ ಹಾಡುಗಳು, ಗುಮಟೆ ಪಾಂಗ್, ಸುಗ್ಗಿ ಕುಣಿತ, ತರ‍್ಲೆ, ಪುಗಡಿ ಜೊತೆಗೆ ಬಹುತೇಕ ಜನಾಂಗಗಳಲ್ಲಿ ಉಳಿದಿರುವ ಜನಪದ ಪ್ರಕಾರಗಳನ್ನು ಗುರುತಿಸಿ ಕಲಾವಿದರಿಗೆ ವೇದಿಕೆ, ಗೌರವಧನ ನೀಡಿ ಪ್ರೋತ್ಸಾಹಿಸಬೇಕು. ಅವರಿಗೆ ಸರ್ಕಾರ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆಯ ಕರಾವಳಿ ಉತ್ಸವ, ಹಂಪಿ ಉತ್ಸವ, ನಮ್ಮ ಜಿಲ್ಲೆಯಲ್ಲಿ ನಡೆಯುವ ಉತ್ಸವಗಳ ಕಾರ್ಯ ಖಂಡಿತಾ ಶ್ಲಾಘನೀಯ. ಜಿಲ್ಲೆಯ ಕಲಾವಿದರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಯಾಕೆಂದರೆ ನಿಜವಾಗಿಯೂ ಭಾಷೆ ಸಂಸ್ಕೃತಿ ಉಳಿದಿರುವುದು ಹಳ್ಳಿಗಳಲ್ಲಿ. ಬೆಂಗಳೂರು ತುಮಕೂರಿನವರೆಗೆ ವಿಸ್ತಾರ ಪಡೆದರೆ ಅದು ಅಭಿವೃದ್ಧಿಯಲ್ಲ ; ನಾಡಿನ ಬೆಳವಣಿಗೆಯ ಮೂಲ ಹಳ್ಳಿಗಳಲ್ಲಿದೆ ಎಂದು ಮಹಾತ್ಮ ಗಾಂದೀಜಿ ಹೇಳ್ತಾರೆ. ಹಳ್ಳಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಿದರೆ ಹಾಗೆಯೇ ಅವರ ನಂತರದ ಪೀಳಿಗೆಯನ್ನು ಪ್ರೋತ್ಸಾಹಿಸಿದರೆ ಸಂಸ್ಕೃತಿ ಉಳಿಯುತ್ತದೆ. ಈಗ ಬೆಳಂಬಾರದ ಸುಗ್ಗಿ ಜನಪದ ಪ್ರಕಾರಕ್ಕೆ ಯಾವ ಜಾಗತೀಕರಣದ ಬಿಸಿ ಇನ್ನೂ ತಟ್ಟಿಸಿಕೊಂಡಿಲ್ಲ. ಒಂದೊಂದು ತುರಾಯಿ ಮಾಡಿಸಲು ಸಾವಿರಗಟ್ಟಲೆ ಖರ್ಚು ಮಾಡುವ ಆ ಹಾಲಕ್ಕಿಗಳಿಗೆ ಸರ್ಕಾರ ಇಲಾಖೆಗಳು ಪ್ರೋತ್ಸಾಹಿಸಬೇಕು. ನಮ್ಮ ಅಂಕೋಲಾ, ಕಾರವಾರ ಮತ್ತು ಜಿಲ್ಲೆಯ ಜನಸ್ಪಂದಿ ಪತ್ರಕರ್ತರು ಇಲಾಖೆಗಳ ಗಮನ ಸೆಳೆಯಬೇಕು.
ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?
ಸಾಹಿತ್ಯದ ರಾಜಕಾರಣದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷ ಪಂಗಡಗಳನ್ನು ಬಿಟ್ಟು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಗಬೇಕು. ನಿಜವಾದ ಸಾಹಿತ್ಯಕ್ಕೆ ಕೃತಿಗೆ ಮನ್ನಣೆ ಸಿಗಬೇಕು. ಸುಮ್ಮನೆ ಕೂತು ಬರೆಯುವುದು, ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬೀಳದೆ ಬರೆಯುವುದು. ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುವುದು, ಆರೋಗ್ಯಕರ ಸಮಾಜವನ್ನು ಕಾಪಾಡಿಕೊಂಡು ಹೋಗುವಂತಹ ಬರಹಗಳನ್ನು ಬರೆಯುವುದು ಒಬ್ಬ ಬರಹಗಾರನ ಜವಾಬ್ದಾರಿಯಾಗಬೇಕು. ‘ನಾನು ತಿಳಿದಿದ್ದನ್ನು ಬರೆಯಲು ಪ್ರಯತ್ನಿಸುವುದಿಲ್ಲ. ಬರೆಯುವುದರ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ನನ್ನ ಪ್ರೀತಿಯ ಚಿತ್ತಾಲರು ಹೇಳುತ್ತಾರೆ.
ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ?
ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ.
ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?
ಸದ್ಯ ಕಾವ್ಯ ಬರೆಯುತ್ತಿರುವೆ. ಕಥೆ ಬರೆಯುವುದು ನನ್ನದೇ ಒತ್ತಡಗಳ ಮಧ್ಯೆ ನಿಂತು ಹೋಗಿದೆ. ಮತ್ತೆ ಬಿಡುವು ಮಾಡಿಕೊಂಡು ಸುಮ್ಮನೆ ಬರೆಯಬೇಕು. ಇನ್ನು ತುಂಬಾ ಓದಬೇಕು. ಕವಿತೆ, ಕಥಾ ಸಂಕಲನ ಪ್ರಕಟಿಸಬೇಕು. ಒಂದು ಕಾದಂಬರಿ ಬರೆಯುವ ಇರಾದೆ ಇದೆ. ಜಯಂತ ಸರ್ ಕಾದಂಬರಿ ಬರೆ ಎಂದು ಹೇಳುತ್ತಿರುತ್ತಾರೆ. ಅವರ ಕಾದಂಬರಿ ನೀರಿಕ್ಷೆಯಲ್ಲಿ ನಾವಿದ್ದೇವೆ.
ಇನ್ನು ನನ್ನ ನೆಚ್ಚಿನ ಮತ್ತು ಕಾಡಿದ ಸಾಹಿತಿಗಳು ಹಲವಾರು ಜನ ಇದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾರೆ. ಜಯಂತ್ ಸರ್ ಹೇಳಿದಂತೆ ಅವರನ್ನು ಇಷ್ಟ ದೇವತೆಗಳು ಎನ್ನುತ್ತೇವೆ. ಶಿವರಾಮ ಕಾರಂತ, ತೇಜಸ್ವಿ, ಲಂಕೇಶ, ಅನಂತಮೂರ್ತಿ, ಚಿತ್ತಾಲ, ಬರಗೂರು, ಜಯಂತ ಕಾಯ್ಕಿಣಿ, ಎಸ್. ಮಂಜುನಾಥ ಮುಂತಾದವರು ನನಗೆ ಬಹಳ ಇಷ್ಟ. ಶಿವರಾಮ ಕಾರಂತರ ಬಗ್ಗೆ ಅವರ ಪರಿಸರ ಪ್ರೀತಿಯ ಕಾರಣಕ್ಕೆ ಬಹಳ ಗೌರವ. ಚಿತ್ತಾಲರ ‘ಸೆರೆ’ ಕಥೆ ನನ್ನನ್ನು ಕಥೆಗಾರನನ್ನಾಗಿ ಮಾಡಿತ್ತು. ಅವರ ಶೈಲಿಯ ಪ್ರಭಾವ ನನಗಿದೆ. ತೇಜಸ್ವಿ ಓದಿದಾಗಲೆಲ್ಲ ಕಾದಂಬರಿ ಬರಿಬೇಕು ಅನಿಸುತ್ತೆ. ಆರಂಭದಲ್ಲಿ ಕೆ.ಎಸ್.ನ. ಆರಾಧ್ಯ ದೈವವಾದರೆ ಈಗ ಜಯಂತ ಕಾಯ್ಕಿಣಿಯವರು ನನ್ನ ಕಾವ್ಯದ ಮಾನಸಿಕ ಗುರು ಆಗಿದ್ದಾರೆ.
ನೀವು ಈಚೆಗೆ ಓದಿದ ಕೃತಿ?
ಕೆ.ವಿ.ತಿರುಲೇಶ ಕಾವ್ಯ ಕಾರಣ, ಅವರದೆ ವಾಗರ್ಥ…
ಸಾಹಿತ್ಯಾಭ್ಯಾಸಿಗಳು ಓದಲೇ ಬೇಕಾದ ಕೃತಿಗಳು.. ಕಾವ್ಯ, ಸಾಹಿತ್ಯ,ಶೈಲಿ ಮುಂತಾದುವುಗಳ ಬಗ್ಗೆ ಅವರ ವಿಚಾರಧಾರೆ ಅದ್ಭುತ..
ವಾಗರ್ಥ ಕನ್ನಡದ ಹಿರಿಯ ಕವಿಗಳ ಕೃತಿಗಳ ಕುರಿತು ಬೆಳಕು ಚೆಲ್ಲತ್ತ ವಿಶ್ವ ಸಾಹಿತ್ಯದ ಜೊತೆ ಸಂವಹನ ಮಾಡುವ ಪರಿ ಅಚ್ಚರಿ ಮೂಡಿಸುತ್ತದೆ..
ಆರಂಭದಿಂದ ವಿಮರ್ಶೆನೆ ಬರೆದರೆ ಯಾವ ವಿಮರ್ಶಕರು ಅವರಿಗೆ ಸಾಟಿಯಾಗಲು ಸಾಧ್ಯವಿಲ್ಲ.. ಈಗ ಅವರದೇ ಟಿಪ್ಪಣಿ ಪುಸ್ತಕ’ ಓದುತ್ತಿರುವೆ.ಜೊತೆಗೆ ನಿಮ್ಮ ವಿರಹಿ ದಂಡೆ ಕೂಡ..
ನಿಮಗೆ ಇಷ್ಟವಾದ ಕೆಲಸ?
ಸಂಗೀತ ಕೇಳುವುದು.
ಪಾಠವನ್ನು ಪಾಠ ಮಾಡದೇ ಅದೊಂದು ಉಪನ್ಯಾಸ ಎಂದು ತಿಳಿದು ನಾನು ಓದಿದ್ದನ್ನು ತಲುಪಿಸುವುದು..ಮುದ್ದು ಕರುಗಳು ಹಸುಗಳೆಂದರೆ ಎಂಥದೋ ಮಮತೆ. ನಾನು ಬದುಕಿದ್ದೇ ಹಸುವಿನ ಹಾಲು ಕುಡಿದು ಅಂತ ಅಪ್ಪ ಹೇಳುತ್ತಿದ್ದ. ಹಿಂದೆಲ್ಲಾ ದನ ಕಾಯೋದು,ಬಿಡೋದು ಕಟ್ಟೋದು,ಅವುಗಳಿಗೆ ಹುಲ್ಲು ಕೊಯ್ದು ಹಾಕುವುದೆಂದರೆ ಎಂಥದೋ ಪ್ರೀತಿ.
ನೀವು ತುಂಬಾ ಇಷ್ಟಪಡುವ ಸ್ಥಳ ಯಾವುದು ?
ನನ್ನ ಅಪ್ಪನನ್ನು ವೈಕುಂಠಕ್ಕೆ ಕಳಿಸಿದ ಜಾಗ.ಅಲ್ಲಿ ತುಳಸಿ ಕಟ್ಟೆಯ ಮೇಲೆ ಕುಳಿತು ಅಪ್ಪನೊಂದಿಗೆ ಆಗಾಗ ಮಾತನಾಡುತ್ತೇನೆ.ಆದರೆ, ಸಾಯುವ ಎಷ್ಟೋ ಮೊದಲು ಅವನು ನನಗೆ ತೋರಿಸಿದ ಜಾಗ ಬೇರೆಯೇ ಆಗಿತ್ತು. ನನಗೆ ಅಂತಿಮ ದರ್ಶನ ಸಿಕ್ಕಿರಲಿಲ್ಲ.ಕೊನೆಗೊಂದು ದಿನ ಅಪ್ಪನ ತುಳಸಿ ಕಟ್ಟೆಯಲ್ಲನ ಅಪ್ಪನ ಆತ್ಮದಲ್ಲಿ ನಾನು ಲೀನವಾಗಬೇಕು. ಅಲ್ಲಿ ಇದೆ ನನ್ನ ಮನೆ. ಇಲ್ಲಿರುವೆನು ಸುಮ್ಮನೆ.ಅದು ಬಿಟ್ಟರೆ ನಾನು ಜಗತ್ತಿಗೆ ಪರಿಚಯಿಸಿದ ನಮ್ಮ ವಿಭೂತಿ ಫಾಲ್ಸ್ ತುಂಬಾ ಇಷ್ಟ..
ನಿಮ್ಮ ಇಷ್ಟದ ಸಿನಿಮಾ ಯಾವುದು ?
ಹಲವಾರಿವೆ. ದ್ವೀಪ,ಚಿಗುರಿದ ಕನಸು, ಮೈಸೂರು ಮಲ್ಲಿಗೆ,ಮುಂಗಾರು ಮಳೆ ಮತ್ತು ನನ್ನ ಪ್ರೀತಿಯ ಶಂಕರ್ ನಾಗ್ ನಟಿಸಿದ ಸಾಂಗ್ಲಿಯಾನ..
ಇದನ್ನು ಎಷ್ಟು ಸಲ ನೋಡಿದ್ದಿನೆಂದು ನೆನಪಿಲ್ಲ.ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಮೆಟ್ರೋ ಬರಬೇಕೆಂದು ಯೋಚಿಸಿದ , ಎನೇನೋ ಕನಸುಗಳ ನನಸು ಮಾಡುವ ಶಂಕರ್‌ನಾಗ್ ಈಗಲೂ ಇದ್ದಿದ್ದರೆ….
ನಿಮ್ಮ ಜೀವನದಲ್ಲಿ ಮರೆಯಲಾರದ ಘಟನೆ ಯಾವುದು ?
ಅಪ್ಪನ ಅಂತಿಮ ದರ್ಶನ ಸಿಗದೇ ಇದ್ದದ್ದು,ಸೋಮವಾರ, ಮಂಗಳವಾರ ಧಾರವಾಡಕ್ಕೆ ರಿಜಲ್ಟ್ ನೋಡಲು ಹೋಗಲಾಗದೇ, ಬುಧವಾರ ಹೋದೆ. ಅಲ್ಲಿ ದುಡ್ಡಿನ ಆಸೆಗೆ ರಿಸಲ್ಟ್ ತೋರಿಸದೇ ಸಂಜೆವರೆಗೆ ಸತಾಯಿಸಿದ ಧಾರವಾಡ ವಿಶ್ವ ವಿದ್ಯಾಲಯದ ಭ್ರಷ್ಟರಿಗೆ ಧಿಕ್ಕಾರ! ರಾತ್ರಿ ಎಂಟು ಗಂಟೆಗೆ ಅಂಕೋಲಾದಲ್ಲಿ ಇದ್ದರೂ, ಅಪ್ಪನ ಸುದ್ದಿ ಗೊತ್ತಾಗದೇ, ಮರುದಿನ ನಾನು ಅನುಭವಿಸಿದ ನೋವು ಈಗಲೂ ಹಿಂಸೆ ಕೊಡುತ್ತಿದೆ.
ಈಗಲೂ ಜುಲೈ ಬಂತೆಂದರೆ ಅಪ್ಪ ತೀವ್ರವಾಗಿ ಕಾಡುತ್ತಾನೆ.ಅಪ್ಪನ ನೆನಪಿನೊಂದಿಗಿನ ತಾದಾತ್ಮ್ಯವೇ ನನ್ನ ಅಧ್ಯಾತ್ಮ!!
ಅಪ್ಪನ ಸಾವು ,ನನಗೆ ಸಿಗದ ಅಂತಿಮ ದರ್ಶನ ನೆನಪಾದಾಗಲೆಲ್ಲ ನನಗೆ ಗಿರಡ್ಡಿ ಗೋವಿಂದರಾಜರ ಕತೆ ‘ ಮಣ್ಣು’ ನೆನಪಾಗುತ್ತದೆ.. ನಾನು ಕೂಡ `ಚಿತೆಯೊಂದು ಎದೆಯೊಳಗೆ ನೆನಪಿಗಾಗಿ ಉರಿದುರಿದು’ ಕತೆ ಬರೆದೆ. ಅದಕ್ಕೆ ಬಹುಮಾನ ಬಂತು. ಬಕ್ಕೆಮರ,ತಡ ಅಂತೆಲ್ಲ ಅಪ್ಪನ ಕುರಿತಾಗಿಯೇ ಕತೆ ಬರೆದೆ. ಆತ ದಿನಕರ ದೇಸಾಯಿ ಅವರ ಮಹಾನ್ ಅಭಿಮಾನಿ ಆಗಿದ್ದ. ರಾಮಕೃಷ್ಣ ಹೆಗಡೆ, ದೇವರಾಜ ಅರಸು ಜನತಾ ಪಾರ್ಟಿ ಅಂದರೆ ಜೀವವಾಗಿತ್ತು. ಎದೆಯಲ್ಲಿ ಬಿಳಿ ದಾಸಾಳದ ಮುಗ್ದತೆ ಇಟ್ಟುಕೊಂಡ ಭಯಂಕರ ಹಟವಾದಿಯಾಗಿದ್ದ..ಅವನನ್ನು ನೆನಪಿಸಿದ್ದಕ್ಕೆ ಹಿರಿಯ ಗೆಳೆಯ ನಾಗರಾಜ ಹರಪನಹಳ್ಳಿಯವರಿಗೆ.
******************************************************
ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಮ್ಮ ಕುರಿತಾದ ಸಂದರ್ಶನ ಓದಿ ತುಂಬಾ ಖುಷಿ ಪಟ್ಟೆ..ತಮ್ಮ ಸಾಹಿತ್ಯ ಕ್ಷೇತ್ರದ ಸಾಧನೆ ಮೆಚ್ಚುವಂತದ್ದು.ಹೀಗೆ ಸಾಗುತ್ತಿರಲಿ ತಮ್ಮ ಸಾಹಿತ್ಯ ಪಯಣ.ಶುಭಾವಾಗಲಿ ಸರ್
ತು0ಬ ಸಹಜವಾಗಿ ಮೂಡಿಬಂದಿದೆ. ಓದಿ ಖುಷಿ ಯಾಯಿತು.ಅಭಿನಂದನೆಗಳು
ಫಾಲ್ಗುಣರ ಕವನಗಳನ್ನು ಪ್ರಜಾವಾಣಿ, ಮಯೂರ ಮೊದಲಾದ ಪತ್ರಿಕೆಗಳಲ್ಲಿ ಆಗಾಗ ಓದಿದ್ದಿದೆ.
ಚಿತ್ತಾಲರ ಮಾತು ಎಷ್ಟು ನಿಜ. ಬರೆಯುವುದು ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವ ಬಗೆ.
ಬಹಳ ಸಾಂದ್ರವಾದ ವಿಚಾರಗಳನ್ನು ಹೇಳಿದ್ದೀರಿ.
ಇಬ್ಬರಿಗೂ ಅಭಿನಂದನೆಗಳು.