ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು

ಪುಸ್ತಕಪರಿಚಯ

“ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ”

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ ಪ್ರೊ.ಡಿ.ಸಿ.ಅನಂತಸ್ವಾಮಿ ಸಾಹಿತ್ಯ ದತ್ತಿ 2019 ಪುರಸ್ಕಾರಕ್ಕೆ ಭಾಜನವಾಗಿರುವುದು “ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ” ಇದೇ ಪುಸ್ತಕಕ್ಕೆ ಬಾಗಲಕೋಟರ ಜಿಲ್ಲೆಯ ಸಮೀರವಾಡಿ ಸಾಹಿತ್ಯ ದತ್ತಿ ಪ್ರಶಸ್ತಿ ಬಂದಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಕಾಜಾಣ ಪುಸ್ತಕವು 2019ರಲ್ಲಿ ಪ್ರಕಟಿಸಿರುವ ಈ ಕವನ ಸಂಕಲನದಲ್ಲಿ ಮೂವತ್ತಾರು ಕವಿತೆಗಳಿವೆ. ಈ ಸಂಕಲನದ ಮೂಲಕ ಕಾವ್ಯ ಪ್ರಪಂಚಕ್ಕೆ ಪರಿಚಯಗೊಂಡಿರುವ ಸುಮಿತ್ ಮೇತ್ರಿ ಹಲಸಂಗಿಯ ಅಪರೂಪದ ಪ್ರತಿಭೆ.

ಸೆರಗು ಜಾರಿದ

ಕೊರಳ ಹರಿವಿಗೆ

ಸಾವಿರಾರು ಹಗಲು

ಮಿಣುಕು ಚುಕ್ಕಿಗಳು

ಫಳ್ಳನೆ ಹೊಳೆಯುವ

ಕರಿಬೆಕ್ಕಿನ ಕಣ್ಣ ಬೆಳದಿಂಗಳು

ಎನ್ನುವಂತಹ ಸಾಲುಗಳನ್ನು ನೋಡಿದಾಗ ಇದನ್ನು ಬರೆದ ಕವಿಯ ಮೊದಲ ಸಂಕಲನವೆಂದು ಅನ್ನಿಸುವುದೇ ಇಲ್ಲ.  ಹೀಗೆ ಈ ಸಂಕಲನದ ಉದ್ದಕ್ಕೂ ಕಣ್ಣಾಡಿಸಿದರೆ ಪ್ರಬುದ್ಧ ಮನಸ್ಸಿನ ಗಮನಾರ್ಹವಾದ ಅಭಿವ್ಯಕ್ತಿಯ ಚಿತ್ರವೊಂದು ಮೂಡುತ್ತದೆ.

ಮಾತಾಗುವ ಕಾಗದದ ಹೂವುಗಳು

ಬಸವನ ಹುಳುವಿನ ಧಾವಂತ

ಸಾವಿರದ ಕಣ್ಣಿನ ನವಿಲು

ಬಯಲೊಳಗಿನ ಬಾಗಿಲು

ಬೆತ್ತಲೆ ಹಣೆಯ ಒಂಟಿ ಸಿಂಧೂರ

ಜೊತೆಯಾಗದ ನೆರಳ

ಎದೆಯ ಗರ್ಭದ ಸಂವಹನ

ಹೀಗೆ ಕವಿತೆಯ ಕುರಿತು ಹೊಸದೇ ಆದ ಆಲೋಚನೆಗಳನ್ನು ಇಟ್ಟುಕೊಂಡು ಆದ್ಯಾತ್ಮದ ಬೆಳಕಿನಲ್ಲಿ ಅಕ್ಷರದ ಕೈ ಹಿಡಿದು ನಡೆಯುತ್ತಿರುವ ವಿಶಿಷ್ಟ ಕವಿ ಸುಮಿತ್ ಮೇತ್ರಿ. ಸಂತೆ ಪೇಟೆಯ ಗಿಜಿಗುಡುವ ತಿರುವಿನಲ್ಲಿ ಥಟ್ಟನೆ ಎದುರಾಗುವ ಹಸಿರು ತೋಟದಂತೆ ತಾಜಾ ಕವಿತೆಗಳ ಸಂಕಲನವನ್ನು ಕೈಗಿಟ್ಟಿದ್ದಾರೆ ಈ ಪ್ರಾಮಾಣಿಕ ಕವಿ ಮಿತ್ರ. ಹೌದು ಸುಮಿತ್ ಕವಿತೆಯ ಪಾಠಶಾಲೆಯ ಒಬ್ಬ ಪ್ರಾಮಾಣಿಕ ವಿದ್ಯಾರ್ಥಿ. ಆದ್ದರಿಂದಲೇ ಇವರು ಸದಾ ತಮ್ಮನ್ನು ತಾವು ಜೀವಪರ ಕಾಳಜಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಲಸಂಗಿಯ ಹುಲುಸಾದ ನೆಲದಲ್ಲಿ ಮಧುರಚೆನ್ನರನ್ನು ಬಿತ್ತಿದ್ದಾರೆ ಎಂಬ ವರಕವಿ ಬೇಂದ್ರೆಯವರ ಮಾತಿಗೆ ಸಾಕ್ಷಿ ಎನ್ನುವಂತೆ ಇವರ ಕಾವ್ಯ ಚಿಗುರು ಸಾಕ್ಷಿ ಹೇಳುತ್ತದೆ. ಈ ಕ್ಷಣದ ತೇಲುವ ಪುಳಕ ಅನುಭವಿಸುವ ಗಿಡದಿಂದುರುವ ಹೂವಿಗೆ ತನ್ನನ್ನು ತಾನು ಸಮೀಕರಿಸಿಕೊಂಡಿರುವ ಇವರು ಪದ್ಯದ ಹೊಳೆಯಲ್ಲಿ ತೇಲುವ ಸುಖದ ಪಲುಕಿನ ಘಳಿಗೆಗಳನ್ನು ದಾಖಲಿಸಿರುವುದಕ್ಕೆ ಅನೇಕ ಸಾಲುಗಳು ಸಾಕ್ಷಿ ಹೇಳುತ್ತವೆ.

ಆತ್ಮ ಹೊರಡುತ್ತದೆ

ತೊಳೆದಿಟ್ಟ ಪ್ರತಿಮೆಯಂತ

ಹೊಳೆಯುವ

ಇಳಿಜಾರಿನ ನವಿಲೂರಿಗೆ

ರೈನರ್ ಮಾರಿಯಾ ರಿಲ್ಕ್ ಹೇಳುತ್ತಾನೆ “ ನಮ್ಮ ಬದುಕು ಯಶಸ್ವಿಯೋ ಅಲ್ಲವೋ ಎಂಬುದರ ಪ್ರಮಾಣ ಪುರಾವೆಯೇ ಪ್ರೀತಿ. ನಾವು ಮಾಡುವ ಎಲ್ಲ ಕೆಲಸಗಳೂ ಪ್ರೀತಿಗಾಗಿ ಮಾಡಿಕೊಳ್ಳುವ ಸಿದ್ಧತೆಗಳು ಮಾತ್ರ” ಸುಮಿತ್ ಅವರ ಕೆಲವು ಕವಿತೆಗಳು ರಿಲ್ಕ್ ಹೇಳಿದ ಮಾತು ಸತ್ಯವೆಂಬುದಕ್ಕೆ ಸಾಕ್ಷಿ ಹೇಳುತ್ತವೆ.

ಬಯಲಾಗದೇ ಸುರಿಯುವ

ಈ ಮಳೆಯಲ್ಲಿ

ಪಾದದ ಕಿರುಬೆರಳಿಗೆ

ಮುತ್ತಿಡುವಾಸೆ ಮೂಡಿದೆ

ಸುಮಿತ್ ಅವರ ಲೇಖನಿಗೆ ಸಹಜ ಕಾವೊಂದು ಪ್ರಾಪ್ತವಾದಂತೆ ಬರೆಸಿಬಿಡುವ ಶಕ್ತಿ ಪ್ರೀತಿಗಿದೆ ಎಂಬ ಭಾವನೆ ಹುಟ್ಟಿಸುವ ಸಾಲುಗಳನ್ನು ನೋಡಿ

ಕಿಟಕಿಯ ಬದಿ ನಿಂತು

ಮುಂಗುರುಳು ಬದಿಗೊತ್ತಿ

ಕಿವಿಯಾಗದಿರು ಸದ್ದೇ ಮಾಡದ

ನಿಶಬ್ದಕೆ!

ರಿಲ್ಕ್ ಹೇಳುತ್ತಾನೆ “ಒಂದು ಸೃಜನಶೀಲ ಆಲೋಚನೆಯಲ್ಲಿ ನಾವು ಮರೆತು ಹೋದ ಸಾವಿರ ಸಾವಿರ ರಾತ್ರಿಗಳ ಪ್ರೀತಿ ಮತ್ತೆ ಜೀವ ಪಡೆಯುತ್ತದೆ.” ಹಾಗೆ ಪ್ರೀತಿಯೆನ್ನುವುದು ಸುಮಿತ್ ಅವರ ಆಲೋಚನೆಗಳನ್ನು ಸಜೀವಗೊಳಿಸುತ್ತದೆ ಮತ್ತು ಉತ್ಸಾಹಭರಿತ ಸಾಲುಗಳನ್ನು ಬರೆಸುತ್ತದೆ.

ಬೆತ್ತಲೆ ರಸ್ತೆಗೆ ಹಬ್ಬಿದ ಇಬ್ಬನಿಯ ಸ್ಪರ್ಶ

ಹೇಗೆ ಹೇಳಲಿ ಆ ಕ್ಷಣ

ಗಿಳಿಯ ತುಟಿಯ ರಂಗು

 ಅವಳ ಗುಂಗು

ಹೀಗೆ ಹೊಚ್ಚ ಹೊಸ ಉಪಮೆಗಳನ್ನು ಬಳಸಿ ಓದುಗರು ಕೂಡಾ ಉಲ್ಲಾಸಗೊಳ್ಳುವಂತಹ ಸಾಲುಗಳನ್ನು ಒಕ್ಕಣಿಸುತ್ತಾರೆ.

ಮುಂದುವರಿದು ಪ್ರೀತಿಯ ತೀವೃತೆಯ ಕಂಪಿಸುವ ಲಯಕ್ಕೆ ಶರಣಾದ ಭಕ್ತನಂತೆ ಸುಮಿತ್ ದೇವರೆದುರು ಸತ್ಯದ ತಪ್ಪೊಪ್ಪಿಗೆಗೂ ತಯಾರಾಗಿಬಿಡುತ್ತಾರೆ.

ಕ್ಷಮಿಸು ಭಗವಂತ

ಅವಳಷ್ಟು ನಿನ್ನನ್ನು ಪ್ರೀತಿಸಲಾರೆ

ನಿನ್ನಷ್ಟು ನಾನು ಅವಳಲ್ಲಿ

ಲೀನವಾಗಲಾರೆ

ಉತ್ಕಟ ಪ್ರೇಮದ ಅಭಿವ್ಯಕ್ತಿಯ ಘಳಿಗೆಯಲ್ಲಿ ತಾಜಾ ಹೂವಿನ ಘಮದಂತೆ ಭಾಸವಾಗುವ ಸುಮಿತ್ ಅವರ ಕವಿತೆ ಸಾಮಾಜಿಕ ಕಳಕಳಿಯನ್ನು ಪ್ರತಿಪಾದಿಸುವ ಹಠಕ್ಕೆ ಬಿದ್ದಾಗ ಮಾತಾಗುವ ಕಾಗದದ ಹೂವಿನಂತೆ ಕಾಣುತ್ತದೆ. ಮಧುರಚೆನ್ನರನ್ನು ತಮ್ಮ ಆತ್ಮಸಾಥ್ ಮಾಡಿಕೊಂಡಿರುವ ಸುಮಿತ್ ಅವರಿಗೆ ಭಾವಲೋಕದಲ್ಲಿ ಒರತೆ ಹುಟ್ಟಿಸಿಕೊಂಡು ಹೊಳೆವ ಅಲೆಗಳೊಡನೆ ಚಿನ್ನಾಟವಾಡುವ ಕಾವ್ಯಸುಖದ ಬಗ್ಗೆ ಯಾರೇನು ಉಪದೇಶ ಕೊಡಬೇಕಾಗಿಲ್ಲ. ಆದರೂ ಪ್ರೀತಿಯಿಂದ ಅಭಿನಂದಿಸುತ್ತ “ಈ ಪ್ರಶಸ್ತಿ ಬಂದಿರುವುದು ನನ್ನ ಕೃತಿಗೇ ಹೊರತು ವೈಯಕ್ತಿಕವಾಗಿ ನನಗಲ್ಲ”  ಎನ್ನುವ ಒಳ ಎಚ್ಚರವೊಂದನ್ನು ಜಾಗೃತವಾಗಿಟ್ಟುಕೊಂಡು ಸಾಮಾಜಿಕ ಘೋಷಣೆಗಳನ್ನ ಹಾಗೆಯೇ ಸಾಲಿಗಿಳಿಸಿದರೆ ವೃತ್ತಪತ್ರಿಕೆಯ ವರದಿಯಾಗುತ್ತದೆಯೇ ಹೊರತು ಅದರಲ್ಲಿ ಕವಿತೆ ಇರುವುದಿಲ್ಲ ಎಂಬ ಸತ್ಯವನ್ನು ಮನನ ಮಾಡಿಕೊಳ್ಳುತ್ತ ಉಕ್ಕಿ ಹರಿವ ಪ್ರೀತಿಗೆ ಒಪ್ಪಿಸಿಕೊಂಡ ಉದ್ದೀಪಿತ ಮನಸ್ಸಿನ ಘಮಲಿನಂತಹ ತಾಜಾ ಕವಿತೆಗಳನ್ನು ಮತ್ತಷ್ಟು ಬರೆಯಿರಿ ಎಂದು ಕೋರುತ್ತೇನೆ. ಮನಸ್ಸಿಗೆ ಹೊಳೆಯುವ ಪೂರ್ವ ಸೂಚನೆಗಳಾಚೆಗೆ ಒಂದಿಷ್ಟನ್ನು ನೋಡುವ ಶಕ್ತಿಯನ್ನು ಕವಿತೆಯ ಅಂತಸತ್ವದಿಂದ ನಾವು-ನೀವು ಪಡೆದುಕೊಳ್ಳೋಣ ಎಂಬುದೇ ಇವತ್ತಿನ ಹಾರೈಕೆ.

**************************************

ಪ್ರಜ್ಞಾ ಮತ್ತಿಹಳ್ಳಿ

One thought on “ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು

  1. ಕೃತಿಯ ಕುರಿತು ವಿಶ್ಲೇಷಣೆ ಚೆನ್ನಾಗಿದೆ. ಈ ಕೃತಿಯನ್ನು ಸುಮಿತ ಮೇತ್ರಿಯವರ ಕವಿತೆಗಳನ್ನು ಓದಲೇಬೇಕೆಂಬ ಹಂಬಲ ಹೆಚ್ಚಿಸುತ್ತದೆ

Leave a Reply

Back To Top