ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು?

ಲೇಖನ

ಎಂಜಿನಿಯರ್ಸ್ ಆಗಿ ನಾವೇನು

ಮಾಡಬಹುದು?

ಸುಶ್ಮಿತಾ ಐತಾಳ್

Engineering designing connection tecnology. Creation digital communications technology royalty free stock images

       ಎಂಜಿನಿಯರ್ಸ್ ಡೇ ಆದ ಇಂದು ಎಲ್ಲೆಲ್ಲೂ ನಮಗೆ ಆದರ್ಶ ಪ್ರಾಯರಾಗಿರುವ ಮಹಾನ್ ವ್ಯಕ್ತಿ ವಿಶ್ವೇಶ್ವರಯ್ಯನವರ ಭಾವಚಿತ್ರಗಳು ರಾರಾಜಿಸುತ್ತಿರುವುದು ಕಾಣುತ್ತಿವೆ. ಅವರು ಎಷ್ಟು  ಬುದ್ಧಿವಂತರಾಗಿದ್ದರು, ಎಷ್ಟು ಪರಿಶ್ರಮಿಗಳೂ ಪ್ರಾಮಾಣಿಕ ಕೆಲಸಗಾರರೂ ಶಿಸ್ತಿನ ಸಿಪಾಯಿಯೂ ಆಗಿದ್ದರು ಮುಂತಾಗಿ ಅವರ ಗುಣ ಗಾನ ಮಾಡುವುದು ಕೇಳುತ್ತಿದೆ. ಆದರೆ ಇಷ್ಟು ಮಾಡಿದರೆ ಮುಗಿಯಿತೇ? ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಎಂಜಿನಿಯರ್ಸ್ ಡೇ ಎಂದು ನಾವು ಯಾಕೆ ಆಚರಿಸುತ್ತೇವೆ? ಈ ದಿನ ನಾವು ಏನನ್ನು ನೆನಪಿಸಿಕೊಳ್ಳ ಬೇಕಾಗಿದೆ?

        ನಮ್ಮ ದೇಶದಲ್ಲಿ ದಿನದಿನವೂ ಸಾವಿರಾರು ಅಪಘಡ ಮತ್ತು ಅಪಘಾತಗಳ ಬಗ್ಗೆ ನಾವು ಕೇಳುತ್ತಿದ್ದೇವೆ..ರಸ್ತೆಗಳುದ್ದಕ್ಕೂ ಕಾಣುವ ಹೊಂಡ ಗುಂಡಿಗಳು, ಮುರಿದು ಬೀಳುವ ಸೇತುವೆಗಳು, ಬಿರುಕು ಬಿಡುವ ಗೋಡೆಗಳು, ಸೋರುವ ತಾರಸಿಗಳು, ಕುಸಿಯುವ ಕಟ್ಟಡಗಳು, ಹೊಗೆಯುಗುಳಿ ಪರಿಸರವನ್ನು ವಿಷಮಯಗೊಳಿಸುವ ಕಾರ್ಖಾನೆಗಳು- ಹೀಗೆ ಎಲ್ಲೆಡೆಯೂ ಸರಕಾರದಿಂದಲೋ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಂದಲೋ  ಹಂಚಿಕೆಗೊಳಿಸಲ್ಪಡುವ ಹಣವನ್ನು ನುಂಗಿ ಒಳಗೆ ಹಾಕಿಕೊಂಡು ಯಾವುದೇ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ ಇಲ್ಲದೆ ಜನತೆಗೆ ದ್ರೋಹ ಬಗೆಯುವ ಎಂಜಿನಿಯರ್ಗಳು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಇಂಥವರಲ್ಲಿ ಜವಾಬ್ದಾರಿಯ ಅರಿವು ಮೂಡಿಸುವವರು ಯಾರು? ಅಥವಾ ಮೂಡಿಸುವ ಬಗೆ ಎಂತು? 

   ಮನುಷ್ಯ ಮನಸ್ಸು ಮಾಡಿದರೆ ಸಾಧ್ಯವಾಗದಿರುವುದು ಯಾವುದೂ ಇಲ್ಲ. ಸಂಕಲ್ಪ ಶಕ್ತಿ ನಮ್ಮಲ್ಲಿ ಇರಬೇಕು ಅಷ್ಟೆ. ಎಂಜಿನಿಯರುಗಳು ದೇಶದ ಬೆನ್ನೆಲುಬು ಇದ್ದ ಹಾಗೆ. ಅನೇಕ ಯುವ ಎಂಜಿನಿಯರುಗಳಿಗೆ ತಾವೇನು ಮಾಡಬೇಕಾಗಿದೆ, ಏನು ಮಾಡುತ್ತಿದ್ದೇವೆ ಅನ್ನುವ ಅರಿವಾಗಲಿ ಚಿಂತನೆಯಾಗಲಿ ಇರುವುದಿಲ್ಲ. ಕೈಗೆ ಸಂಬಳವೋ ಗಿಂಬಳವೊ ಬಂದರಾಯಿತು, ಜನತೆಯ ಸೌಖ್ಯದ ಚಿಂತೆ ತಮಗೆ ಯಾಕೆ ಅಂದುಕೊಳ್ಳುತ್ತಾರೆ. ಅಂಥವರಲ್ಲಿ ಅರಿವು ಮೂಡಿಸುವ ಕೆಲಸವನ್ನು ಎಂಜಿನಿಯರುಗಳ ಸಂಘಟನೆಗಳು ಮಾಡಬೇಕು. ಕಾಲಕಾಲಕ್ಕೆ ಇಂಥ ವಿಷಯಗಳ ಬಗ್ಗೆ ಸಭೆಗಳಲ್ಲಿ ಚರ್ಚಿಸುವುದರಿಂದ ರಾತ್ರಿ ಬೆಳಗಾಗುವುದರೊಳಗೆ ಬದಲಾವಣೆಯಾಗದಿದ್ದರೂ, ಯುವಜನತೆಯಲ್ಲಿ     ಜವಾಬ್ದಾರಿಯ ಪ್ರಜ್ಞೆ ಮೂಡಿಸುವ ಕೆಲಸವಾದರೂ ಆಗಬಹುದು.ಆ ಮೂಲಕ ವಿಶ್ವೇಶ್ವರಯ್ಯನವರು ಮಾಡಿದ ಘನಕಾರ್ಯಗಳಿಗೆ ಗೌರವವಿತ್ತಂತಾಗಬಹುದು.

*******************************************

One thought on “ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು?

  1. ಜವಾಬ್ದಾರಿಯುತ ಮಾತುಗಳುಳ್ಳ
    ಅರ್ಥಗರ್ಭಿತ ಲೇಖನ

Leave a Reply

Back To Top