ಕಬ್ಬಿಗರ ಅಬ್ಬಿ ೧೧.

 ಹಸಿವಿನಿಂದ ಹಸಿರಿನತ್ತ

 ಹಸಿವಿನಿಂದ ಹಸಿರಿನತ್ತ

“Generations to come will scarce believe that such a one as this ever in flesh and blood walked upon this earth” .(Albert Einstein, About Mahatma Gandhi)

” ಮುಂದಿನ ಪೀಳಿಗೆಯ ಮಕ್ಕಳು ಆಶ್ಚರ್ಯ ಪಡುವ ದಿನ ಬರಲಿದೆ, ಇಂತಹಾ  ಮನುಷ್ಯ ದೇಹ, ಈ ಭೂಮಿಯ ಮೇಲೆ ನಡೆದಾಡಿರಬಹುದೇ?” ( ಆಲ್ಬರ್ಟ್ ಐನ್ ಸ್ಟೈನ್ ,ಮಹಾತ್ಮಾ ಗಾಂಧಿ ಅವರ ಕುರಿತು).

 ಅಹಿಂಸಾ ಸತ್ಯಾಗ್ರಹದ ಮೂಲಕ ಗಾಂಧೀಜಿ ಅವರ ಹೋರಾಟದಿಂದ ಪ್ರೇರಣೆ ಪಡೆದು, ಐನ್‍ಸ್ಟೈನ್ ಮೇಲಿನ ಮಾತುಗಳನ್ನು ಹೇಳಿದ್ದು ಕಳೆದ ಶತಮಾನದ ಮಧ್ಯಭಾಗದಲ್ಲಿ.

ವಿಪರ್ಯಾಸವೆಂದರೆ, ಜಪಾನ್ ನ ಮೇಲೆ ಅಮೆರಿಕಾ ಸುರಿದ ಅಣು ಬಾಂಬ್ ತಯಾರಿಸಿದ ವಿಜ್ಞಾನಿಗಳ ತಂಡದಲ್ಲಿ ಐನ್‍ಸ್ಟೈನ್ ಮುಖ್ಯ ವಿಜ್ಞಾನಿಗಳಾಗಿದ್ದರು!. ಅಣು ಬಾಂಬ್ ನಿಂದ ಮನುಷ್ಯ ಮನುಷ್ಯನನ್ನೇ ನಾಶಮಾಡುವ ಕ್ರೌರ್ಯವನ್ನು  ನೋಡಿ ಜಗತ್ತಿನ ಎದೆಯೇ ನಡುಗಿತ್ತು.

ನಮ್ಮದೊಂದು ತತ್ವವಿತ್ತು, ನೆನಪಿದೆಯೇ! “ವಸುಧೈವ ಕುಟುಂಬಕಂ” ಅಂತ. ಕುವೆಂಪು ಅವರ ಕನಸು ‘ವಿಶ್ವ ಮಾನವ’  ಇದಕ್ಕಿಂತ ಬೇರೆಯಲ್ಲ. ಆದರೆ ಕಳೆದ ಶತಮಾನದ ಪ್ರತಿಯೊಂದು ಹೆಜ್ಜೆಯ ಮಾನವ ಸಂಕುಲದ ಇತಿಹಾಸ ರಕ್ತಸಿಕ್ತ.

ಭೂಮಿ ಮತ್ತದರ ವಾತಾವರಣದ ಹೊದಿಕೆಯೊಳಗೆ ೭೦೦ ಕೋಟಿ ಮನುಷ್ಯರು ಮತ್ತು ಅದಕ್ಕಿಂತ ಲಕ್ಷ ಪಟ್ಟು ಜಾಸ್ತಿ ಜೀವಸಂಕುಲಗಳು ಒಂದೇ ಬಾನನ್ನು ಹಂಚಿ ಬದುಕುತ್ತಿದ್ದೇವೆ. ಈ ಬಯೋ ಡೈವರ್ಸಿಟಿಯೊಳಗೆ ಒಂದು ಸೂಕ್ಷ್ಮ ಸಮತೋಲನ ಇದೆ. ಹಾಗೆಯೇ, ವಾತಾವರಣದಲ್ಲಿ ಮೋಡ,ಗಾಳಿ, ಭೂಮಿಯೊಳಗೆ ಒತ್ತಡ, ಭೂಕಂಪನದ ಅಲೆಗಳು, ಸಾಗರದೊಳಗೆ ನೀರಿನ ಪ್ರವಾಹಗಳು, ಭೂಮಿ,ಚಂದ್ರ, ಸೂರ್ಯಾದಿಗಳ ಚಲನೆಯ ನಿರ್ದಿಷ್ಟ ತತ್ವಗಳು, ಎಲ್ಲ ಚಲನಶೀಲತೆಯಲ್ಲಿಯೂ ಅದರಷ್ಟಕ್ಕೇ ಹದ ಹುಡುಕಿ ಸಮೀಕೃತವಾಗಿವೆ.

ಇಂತಹಾ ಸಂದರ್ಭದಲ್ಲಿ ಮನುಷ್ಯ, ತನ್ನ ಆಧಿಪತ್ಯದ ಅಮಲಿನಲ್ಲಿ ನಡೆಸುವ ವೈಪರೀತ್ಯಗಳು, ಒಟ್ಟೂ ಸಮತೋಲನವನ್ನು ಹೇಗೆ ಸ್ಥಾನಪಲ್ಲಟ ಮಾಡುತ್ತೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ.  ಇಂದಿನ ಅಂಕಣದಲ್ಲಿ ಮನುಷ್ಯ ಮತ್ತು  ಪ್ರಾಣಿ ಸಸ್ಯ ಸಂಕುಲಗಳ ನಡುವೆ, ಹಾಗೂ ಮನುಷ್ಯ ಮನುಷ್ಯನ ನಡುವೆ ಮತ್ತು ಮನುಷ್ಯನ ಮನಸ್ಸೊಳಗಿನ ಹಲವು ಧ್ರುವಗಳ ನಡುವಿನ ತಿಕ್ಕಾಟ ದ ಬಗ್ಗೆ ಅವಲೋಕನದ ಪ್ರಯತ್ನ ಮಾಡುವೆ.

ಅಮೆರಿಕಾದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ನಾನು ಸಂಶೋಧನೆ ಮಾಡಲು ಹೋಗಿದ್ದಾಗ, ಓರ್ವ ಚೀನೀ ಸಂಶೋಧಕ ನನ್ನ ಲ್ಯಾಬ್ ಮೇಟ್ ಆಗಿದ್ದ. ಆತನ ಹತ್ತಿರ ಒಂದು ಟಿನ್ ತುಂಬಾ ಅರೆ ಒಣಗಿಸಿದ ಮಾಂಸದ ಹಸಿ ತುಣುಕುಗಳು. ಹಸಿವಾದಾಗ ಆ ತುಣುಕುಗಳನ್ನು ಅತ ಜಗಿದು ತುಂಬಾ ರಸಭರಿತವಾಗಿದೆ ಅಂತ ಚಪ್ಪರಿಸುತ್ತಿದ್ದ. ಅದು ಅವರಿಗೆಲ್ಲಾ ಸಾಮಾನ್ಯವೇ ಆಗಿತ್ತು. ವಿವೇಚನೆಯಿಲ್ಲದೆ ಸೃಷ್ಟಿಯಲ್ಲಿರುವ ಇನ್ನೊಂದು ಜೀವಿಯನ್ನು ತಿನ್ನುವುದು ಮನುಷ್ಯಸಹಜವೇ?

ಎರಡನೆಯ ಉದಾಹರಣೆ ಇನ್ನೊಂದು ಆಯಾಮದ್ದು. ವ್ಯಾಪಾರೀ ಜಗತ್ತು ತನ್ನ ಉತ್ಪಾದನೆಯನ್ನು ಹೆಚ್ಚಿಸಲು, ಹಣ ಸಂಪಾದಿಸಲು, ಲಾಭ ಪಡೆಯಲು ನಡೆಸುವ ಅಮಾನವೀಯ ಕತೆ ಇದು. ಕೆಲವು ವರ್ಷಗಳ ಹಿಂದೆ mad cow disease ಎಂಬ ರೋಗ ಮನುಷ್ಯರಲ್ಲಿ ಹಬ್ಬಿತು. ಇದು ದನದ ಮಾಂಸ ತಿಂದವರಲ್ಲಿ ಕಾಣಿಸಿತ್ತು. ದನಕ್ಕೆ ಈ ರೋಗ ಎಲ್ಲಿಂದ ಬಂತು? ಎಂದು ಶೋಧಿಸಿದಾಗ ದನಕ್ಕೆ ತಿನ್ನಲು ಕೊಟ್ಟ ಕುರಿ ಮಾಂಸದಿಂದ ಬಂತು ಎಂದು ತಿಳಿಯಿತು. ಹೌದು, ನೀವು ಸರಿಯಾಗಿ ಓದಿದ್ದೀರಿ. ದನ ಹೆಚ್ಚು ಹಾಲು ಕೊಡಲು ಮತ್ತು ದನ ದಷ್ಟಪುಷ್ಟವಾಗಿ ಬೆಳೆದ ಮೇಲೆ ಅದರ ಮಾಂಸ ಮಾರುವಾಗ ಮಾಂಸದ ತೂಕ ಹೆಚ್ಚಾಗಲು, ಮಾತು ಬಾರದ ದನಕ್ಕೆ ಕುರಿ ಮಾಂಸ ತಿನಿಸಿದ ಮನುಷ್ಯರ ಹಣದ ಲಾಭದ ಆಸೆಗೆ ಏನು ಹೇಳೋಣ. ಇಂತಹ ಅನೈಸರ್ಗಿಕ ವಿಧಾನಗಳನ್ನು ಪ್ರಕೃತಿಯ ಮೇಲೆ ಹೇರಿದ ಮನುಷ್ಯನಿಗೆ ಮ್ಯಾಡ್ ಕೌ ಡಿಸೀಸ್ ಬಂದದ್ದಲ್ಲಿ ಆಶ್ಚರ್ಯವೇನು?.

ಇನ್ನೊಂದು ಉದಾಹರಣೆ ಇತ್ತೀಚಿನದ್ದು. ಚೀನಾ ವುಹಾನ್ ನಲ್ಲಿ ದೇಶದ ಜೀವಂತ ಪ್ರಾಣಿಗಳ ಭಾರೀ ದೊಡ್ಡ ಮಾರ್ಕೆಟ್ ಇದೆ ಅಲ್ಲಿ. ಸಾವಿರಾರು ಕಾಡು ಪ್ರಾಣಿಗಳನ್ನು ಜೀವಂತ ಹಿಡಿದು ಪಂಜರ, ಗೂಡೊಳಗಿಟ್ಟು, ಮಾರುವ ಮಾರುಕಟ್ಟೆ, ಇದಕ್ಕೆ ಆಂಗ್ಲರು Wet market  ಅಂತಾರೆ. ಅಂತಹ ನೂರಾರು ಮಾರ್ಕೆಟ್ ಚೀನಾದಲ್ಲಿದೆ. ಅಲ್ಲಿನ ಬಾವಲಿಯಿಂದ ಮನುಷ್ಯನಿಗೆ, ಕೊರೊನಾ ವೈರಸ್ಸು ಬಂತು ಎಂಬುದು ಇದುವರೆಗೆ ಜಗತ್ತು ನಂಬಿದ ಸತ್ಯ. ಇವುಗಳು ಮನುಷ್ಯನಿಗೆ ತಿನ್ನಲೆಂದೇ ಸೃಷ್ಟಿಯಾದವು ಎಂಬಂತೆ, ಸಿಕ್ಕಿದ ಬಡ ಪ್ರಾಣಿಗಳನ್ನು, ಕಡಿದು ತಿಂದು ತೇಗಿದ್ದು ಮಾನವನ ಹೆಗ್ಗಳಿಕೆ. ಕಳೆದ ಒಂದು ವರ್ಷದಿಂದ ಜಗತ್ತಿನ ಮನುಷ್ಯ ಸಮಾಜವನ್ನು ಕಟ್ಟಿ ಹಾಕಿದ ಕೊರೊನಾ,ಬರಲು ಮನುಷ್ಯನ ಈ ಮನೋಭಾವ ಕಾರಣವಲ್ಲವೇ?.

ಪ್ಯಾಂಟು, ಕೋಟು ತೊಟ್ಟು ಆಧುನಿಕ ನಾಗರಿಕತೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಸಮಾಜದ, ಕ್ರೌರ್ಯವನ್ನು ನೋಡ ಬೇಕಾದರೆ ಕಸಾಯಿಖಾನೆಯಲ್ಲಿ ಪ್ರಾಣಿಗಳನ್ನು ಜೀವಂತ ತಲೆ ಕೆಳಗಾಗಿ ತೂಗು ಹಾಕಿ ನೇಲಿಸಿ ಚರ್ಮ ಸುಲಿಯುವ ( ಹೀಗೆ ಉತ್ಪಾದಿಸುವ ಮಾಂಸ ರುಚಿಕರವಂತೆ) ಉತ್ಪಾದನಾ ಲೈನ್ ಗಳನ್ನು ನೋಡಿಬಂದರೆ ಸಾಕು. ಅಂತಹ  ಸಾವಿರಾರು ಉತ್ಪಾದನಾ ಘಟಕಗಳು ಭಾರತದಲ್ಲಿಯೂ ಇವೆ.

ಪಂಚೆ ಕಚ್ಚೆ ಕಟ್ಟಿ ನೆಲದಲ್ಲಿ ಮಲಗಿ ಪ್ರಕೃತಿಯ ಜತೆಗೆ ಜೀವನ ನಡೆಸುವ ಹಳ್ಳೀ ಮಂದಿ ನಾಗರಿಕರೋ, ಮೇಲೆ ಹೇಳಿದ ಅಮಾನವೀಯ ಆಧುನಿಕರು ನಾಗರಿಕರೋ ಎಂಬ ಪ್ರಶ್ನೆ  ಮನುಷ್ಯನ ಸೂಕ್ಷ್ಮ ಪ್ರಜ್ಞೆಯನ್ನು ಕಾಡುತ್ತೆ.

ಇಂತಹ ಅಮಾನವೀಯ ಕಾಲಘಟ್ಟದಲ್ಲಿ ನಿಂತು, ಕವಿ, ತನ್ನ ಸ್ಪಂದನೆಯನ್ನು ಹರಿಯಬಿಟ್ಟರೆ, ಬರುವ ಕವಿತೆ, ಕೆ. ವಿ. ತಿರುಮಲೇಶ್ ಅವರ  “ನೂರು ಮಂದಿ ಮನುಷ್ಯರು”


ನೂರು ಮಂದಿ ಮನುಷ್ಯರು

ಒಮ್ಮೆ ನೂರು ಮಂದಿ ಮನುಷ್ಯರು

ಆಸಿಕ್ಕಿಬಿದ್ದರು

ಒಂದು ದ್ವೀಪದಲ್ಲಿ

ಮೊದಲು ಅವರು ಅಲ್ಲಿನ

ಸಸ್ಯಗಳನ್ನು ತಿಂದರು

ನಂತರ ಅಲ್ಲಿನ ಪ್ರಾಣಿಗಳನ್ನು

ಮುಗಿಸಿದರು

ನಂತರ ತಮ್ಮಲ್ಲೊಬ್ಬರನ್ನು

ವಾರಕ್ಕೊಂದರಂತೆ ತಿಂದರು

ಕೊನೆಗುಳಿದವನು

ಒಬ್ಬನೇ ಒಬ್ಬ

ಅವನು ಮೊದಲು

ತನ್ನ ಪಾದದ ಬೆರಳುಗಳನ್ನು ತಿಂದ

ನಂತರ ಪಾದಗಳನ್ನು ತಿಂದ

ನಂತರ ತನ್ನ ಕೈಬೆರಳುಗಳನ್ನು ತಿಂದ

ನಂತರ ಕೈಗಳನ್ನು ತಿಂದ

ನಂತರ ಕಿವಿ ಕಣ್ಣು ಮೂಗುಗಳನ್ನು

ಒಂದೊಂದಾಗಿ ತಿಂದ

ಕೊನೆಗೆ ತನ್ನ ತಲೆಯನ್ನೇ ತಿನ್ನತೊಡಗಿದ

ಅರೇ!

ಇದು ಹೇಗೆ ಸಾಧ್ಯ ಎಂದು ಕೇಳದಿರಿ

ಇಂಥ ಪ್ರಶ್ನೆ ಮೊದಲೇ ಕೇಳಿರುತ್ತಿದ್ದರೆ

ಈಗ ಇಂಥಾ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ.

**     ***    **    

ಇದರ ಶೀರ್ಷಿಕೆ “ನೂರು ಮಂದಿ ಮನುಷ್ಯರು”

ಈ ಕವನ ಓದಿದ ನಂತರ, ನಿಮಗೇ ಪ್ರಶ್ನೆ ಹುಟ್ಟುತ್ತದೆ, ಇವರು ಮನುಷ್ಯರೇ?. ಶೀರ್ಷಿಕೆ ಹಾಗಿದ್ದರೆ ವಿಡಂಬನಾತ್ಮಕವೇ?.

ತಿರುಮಲೇಶ್ ಅವರ ಎಲ್ಲಾ ಕವಿತೆಗಳ ಹಾಗೆಯೇ ಈ ಕವಿತೆಯೂ ಓದಲು ಸುಲಭ. ಓದುತ್ತಾ ಓದುತ್ತಾ ನಮ್ಮನ್ನು ಚಿಂತನೆಯ ಸುಳಿಗೆ ಸೆಳೆದು ತಿರು ತಿರುಗಿಸಿ ತಿಳಿಸಿ ಹೇಳುತ್ತೆ. ದಿನವಿಡೀ ಕಾಡುತ್ತೆ. ಕವಿತೆ ಬೆಳೆಯುತ್ತಾ ಹೋದಂತೆ ಪ್ರಶ್ನೆಗಳು ಉದ್ಭವವಾಗುತ್ತವೆ. ಉತ್ತರ ಹೇಳುವತ್ತ ಚಿತ್ತವಲ್ಲ,  ಶಿಷ್ಟ ದಾರಿಯಿಂದ ವಿಶಿಷ್ಟ ಹಾದಿಗೆ ಹೊರಳಿಸುವ ಪ್ರಯತ್ನ.

ಕವಿತೆಯುದ್ದಕ್ಕೂ ಒಂದು ಅತ್ಯಂತ ಕಾಮನ್ ಡಿನಾಮಿನೇಟರ್,  ಹಸಿವು ಮತ್ತು ತಿನ್ನುವುದು. ಊಟ, ಲೈಂಗಿಕ ಕ್ರಿಯೆ ಮತ್ತು ನಿದ್ದೆ, ಇವು ಮೂರು, ದೇಹಕ್ಕೆ ಮಾತ್ರ ಸಂಬಂಧಿಸಿದ್ದು. ಇವು ಮನುಷ್ಯನ ಪ್ರಾಣಿ ಗುಣಗಳು. ತಿನ್ನುವ ಕ್ರಿಯೆಯಲ್ಲಿ ಹಸಿವಿಗೆ ದಾಸನಾದವ ಏನೂ ತಿನ್ನಬಲ್ಲ. ಪ್ರಾಣಿಗಳ ತಿನ್ನುವ ಕ್ರಿಯೆ,  ಬದುಕುಳಿಯುವುದಕ್ಕಾಗಿ ಅತ್ಯಂತ ಅಗತ್ಯ. ಜೀವವುಳಿಸುವುದಕ್ಕಾಗಿ ಸಸ್ಯ, ಪ್ರಾಣಿ, ತನ್ನ ಸಹಚರರು, ಕೊನೆಗೆ ತನ್ನನ್ನೂ ತಿನ್ನುವುದರಲ್ಲಿ ಕವಿತೆ ಮುಗಿಯುತ್ತದೆ. ತನ್ನನ್ನೂ ತಿನ್ನುವ ಈ ಕವಿತೆಯ ಸಾಲುಗಳು ಫ್ಯಾಂಟಸಿಕಲ್ ಆಗಿರುವುದು ಕವಿತೆಯ ಆಶಯಕ್ಕೆ ರೂಪ ಕೊಡಲು ಮಾಡಿದ ಪ್ರಯತ್ನ.

ಎರಡನೆಯ ಅಂಶ, ಮನುಷ್ಯನ ಆಕ್ರಮಣಕಾರಿ ಮನೋಭಾವ. ಆತ, ಮೊದಲು ಸಸ್ಯಗಳನ್ನು, ಆಮೇಲೆ ಪ್ರಾಣಿಗಳನ್ನು, ತಿನ್ನುತ್ತಾ ಮುಂದುವರೆಯುತ್ತಾನೆ. ಮನುಷ್ಯನ ಸ್ವಕೇಂದ್ರಿತ ಮನೋಭಾವ, ಮತ್ತು ತನ್ನದಲ್ಲದ ಎಲ್ಲವನ್ನೂ ಆಕ್ರಮಿಸುವ ಮತ್ತು ತನ್ನದಾಗಿಸುವುದನ್ನು ಈ ಸಾಲುಗಳು ಸೂಚಿಸುತ್ತವೆ.

ತಿಂದ ಆಹಾರ ಸ್ವಂತದ ಜೀವಕೋಶಗಳಾಗುತ್ತವೆ. ಇಲ್ಲಿ expansionist ( ವಿಸ್ತಾರವಾದ) ಮನೋಭಾವದ ಛಾಯೆಯನ್ನು ಕಾಣಬಹುದು. ರಾಜ, ತನ್ನ ರಾಜ್ಯ ವಿಸ್ತಾರ ಮಾಡುತ್ತಾನೆ, ಇತರ ದೇಶಗಳನ್ನು ತನ್ನ ದೇಶದೊಳಗೆ ವಿಲೀನ ಮಾಡುತ್ತಾನೆ, ಕೊನೆಗೆ ಒಂದು ದೊಡ್ಡ ಸಾಮ್ರಾಜ್ಯ ಕಟ್ಟುತ್ತಾನೆ. ಆಮೇಲೆ ಆತನಿಗೆ ದಂಡೆತ್ತಿಹೋಗಲು ಬೇರೇನೂ ಉಳಿದಿಲ್ಲ. ಆಗ, ಆತ ತನ್ನ ಈ ಆಕ್ರಮಣಕಾರಿ ಮನೋಭಾವ ಬದಲಿಸದಿದ್ದರೆ, ತನ್ನೊಳಗೇ ಅಂತರ್ಯುದ್ಧ ಮಾಡುತ್ತಾನೆ. ತನ್ನ ತಲೆಯನ್ನೇ ತಿನ್ನತ್ತಾನೆ.

ಮೂರನೆಯ ಅಂಶ, ಮನುಷ್ಯ ಮತ್ತು ಪ್ರಕೃತಿಗಳ ನಡುವಿನ, ಚಲನಶೀಲ ಸಂಘರ್ಷ. ಕವಿತೆಯ ಮೊದಲೆರಡು  ಹಂತಗಳಲ್ಲಿ, ಸಸ್ಯವನ್ನೂ ಪ್ರಾಣಿಗಳನ್ನು ಮನುಷ್ಯ ತಿಂದು ಮುಗಿಸುತ್ತಾನೆ. ಮುಗಿಸುತ್ತಾನೆಯೇ? ಸಾಧ್ಯವೇ?  ಕೊರೊನಾ ಅನುಭವದ ಬೆಳಕಿನಲ್ಲಿ ನೋಡಿದರೆ, ಮನುಷ್ಯ ಪ್ರಕೃತಿಯ ಮೇಲೆ ಹತೋಟಿ ಸಾಧಿಸಿದ ಎಂದರೆ ತಪ್ಪಾಗುತ್ತದೆ. ಅಲ್ಲವೇ. ಆ ಪ್ರಶ್ನೆ ಕವಿತೆಯಲ್ಲಿ ಮನುಷ್ಯನ attitude ನೋಡುವಾಗ ನಮ್ಮನ್ನು ಕಾಡುತ್ತೆ. ನನ್ನ ಮಟ್ಟಿಗೆ, ನಮಗೆ ಪರಿಹಾರ, ತೀರ್ಪು ಇತ್ಯಾದಿ ಕೊಡುವುದು ಕವಿತೆಯ ಉದ್ದೇಶ ಅಲ್ಲ. ನಮ್ಮೊಳಗಿನ ಸಂವೇದನೆಯನ್ನು ಎಬ್ಬಿಸಿ ಜಾಗೃತಗೊಳಿಸುವತ್ತ ಕಾವ್ಯದೃಷ್ಟಿ ಅನ್ಸುತ್ತೆ. ಮನುಷ್ಯನ ಹೊಸತನ್ನು ಅರಸುವ ಮನೋಭಾವ, ಆಕ್ರಮಣಕಾರೀ ಮನೋಭಾವವಾಗಿ ಪರಿವರ್ತನೆಗೊಂಡಾಗ, ಅಸಂಖ್ಯ ಜೀವ ಜಾಲಗಳ ನಡುವಿನ ಮತ್ತು ನಿರಜೀವ ಕಾಯಗಳೊಳಗಿನ ಡೈನಾಮಿಕ್ಸ್ ನ ಸೂಕ್ಷ್ಮ ತಂತುಗಳನ್ನು ಕತ್ತರಿಸಿ, ಬ್ರಹ್ಮಾಂಡದ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನದ ಚಿತ್ರಣವಿದು. ಆದರೆ, ಓ ನನ್ನ ಚೇತನಾ, ಅನಂತದ ಒಡೆಯನಾಗುವ ಬದಲು ಅನಂತವೇ ತಾನಾಗುವ ಕನಸು ಕವಿಪ್ರಜ್ಞೆಯದ್ದು.

ಕವಿತೆಯಲ್ಲಿ ಮನುಷ್ಯ ಮೊದಲು ಕಾಲಿನ ಬೆರಳುಗಳನ್ನು, ಕೊನೆಗೆ, ಮೂಗು ಕಿವಿ, ಕಣ್ಣು ತಿನ್ನುತ್ತಾನೆ. ಮೂಗು,ಕಿವಿ,ಕಣ್ಣು ಮನುಷ್ಯನ ಸಂವೇದನೆಯ ಇಂದ್ರಿಯಗಳು. ಮನುಷ್ಯ ಸಂವೇದನೆ ಕಳೆದು ಕೊಂಡಾಗ, ಕಣ್ಣಿದ್ದೂ ಕುರುಡ, ಕಿವಿಯಿದ್ದೂ ಕಿವುಡನಾಗುತ್ತಾನೆ. ಆತ ಎಷ್ಟು ಸ್ವಕೇಂದ್ರಿತನಾಗುತ್ತಾನೆ ಎಂದರೆ ಇತರರ ಸಮಸ್ಯೆಗೆ ಅಂಧನಾಗುತ್ತಾನೆ. ಕೊನೆಗೆ ಆತ ತನ್ನ ತಲೆಯನ್ನು ತಿನ್ನುತ್ತಾನೆ. ಅಂದರೆ, ತನ್ನ ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪರಿಸ್ಥಿತಿಗೆ ದಾಸನಾಗುತ್ತಾನೆ.

ಕೊನೆಯದಾಗಿ, ಮೇಲಿನ ಕವನದ ನೂರು ಮನುಷ್ಯರು, ಒಂದು ವಿಭಾಗ. ಅದನ್ನು ಒಂದು ವರ್ಗ ಅಂತ ಇಟ್ಟುಕೊಳ್ಳೋಣ. ಆ ವರ್ಗವನ್ನು ಬಿಟ್ಟು ಉಳಿದವೆಲ್ಲಾ, ಇನ್ನೊಂದು ವರ್ಗ. ಈ ಎರಡೂ ವರ್ಗಗಳ ಸಂಘರ್ಷ, ಮೊದಲು. ಕಾರಣ ಅಸ್ಥಿತ್ವದ ಪ್ರಶ್ನೆ. ಒಮ್ಮೆ, ಹೊರಗಿನ ವರ್ಗ ಮತ್ತು ಸ್ವವರ್ಗದ ತಿಕ್ಕಾಟ ಮುಗಿದಾಗ, ಇರುವ ಒಂದೇ ವರ್ಗ ಒಡೆದು ಕಾದುತ್ತದೆ. ಹೀಗೇ ಸಂಘರ್ಷ ಮುಂದುವರೆದು ಉಳಿಯುವುದು ಒಬ್ಬ. ಆತ ತನ್ನೊಳಗೇ  ತಿಕ್ಕಾಟ ನಡೆಸಿ ಕೊನೆಗೆ ತಲೆಯನ್ನೂ ತಿಂದು ಏನೂ ಉಳಿಯುವುದಿಲ್ಲ. ಅಂದರೆ ಸ್ವಕೇಂದ್ರಿತ ವರ್ಗ ಸಂಘರ್ಷದ ಕೊನೆ ಸರ್ವನಾಶವೇ?.

ಈ ಕವಿತೆ ಕೊನೆಯಲ್ಲಿ ಕವಿ ಅತ್ಯಂತ ಸಹಜವಾಗಿ ಅಭಿವ್ಯಕ್ತಿಸುವುದು ಹೀಗೆ.

” ಇದು ಹೇಗೆ ಸಾಧ್ಯ ಎಂದು ಕೇಳದಿರಿ

ಇಂಥ ಪ್ರಶ್ನೆ ಮೊದಲೇ ಕೇಳಿರುತ್ತಿದ್ದರೆ

ಈಗ ಇಂಥಾ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ.”

ನಿಯಂತ್ರಿತ, ವಿದ್ಯಮಾನ, ಅನಿಯಂತ್ರಿತ ವಿಸ್ಪೋಟವಾಗುವುದರ ನಡುವೆ ಇರುವ ಗೆರೆಯ ಅರಿವಿಲ್ಲದೆ, ಚಲನಶೀಲ ಜಗತ್ತಿನ ಸೂಕ್ಷ್ಮ ತೋಲನದ ಕಂಟ್ರೋಲ್ ಸಿಸ್ಟಮ್ ನ ಮೇಲೆ ಬೆರಳಾಡಿಸುವುದು, ವಿನಾಶದ ಕದ ತೆರೆದಂತೆ,ಅಲ್ಲವೇ.

ಮೊನ್ನೆ ಜೈಪುರದ ಮರುಭೂಮಿ ಪ್ರದೇಶದಲ್ಲಿ ೧೭ ಸೆಂಟಿಮೀಟರ್ ಮಳೆ ಬಂತು. ಜೈಪುರದ ಬೀದಿಗಳಲ್ಲಿ ಬಂದ ಪ್ರವಾಹ ಹೊಳೆಯ ಥರಾ, ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ದೃಶ್ಯ ನೋಡಿದೆ. ಮರುಭೂಮಿಯಲ್ಲಿ ಇಷ್ಟೊಂದು ಮಳೆ ಇತಿಹಾಸದಲ್ಲಿ ದಾಖಲಾಗಿಲ್ಲ.

ಪಶ್ಚಿಮ ಘಟ್ಟಗಳ ಸಾಲುಗಳಲ್ಲಿ, ಕೇರಳದ ಮುನಾರ್ ನಲ್ಲಿ ಗುಡ್ಡಗಳು ಜಾರಿ ಚಹಾ ಎಸ್ಟೇಟ್ ನ ಮನೆಗಳು, ಕಾಲನಿಗಳು ಭೂಗರ್ಭ ಸೇರಿದವು. ಗುಡ್ಡಗಳಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ನಿಂತಿದ್ದ ಸಸ್ಯರಾಶಿಯನ್ನು ಮತ್ತು ಅವುಗಳ ಜತೆಗಿದ್ದ ಅಸಂಖ್ಯಾತ ಪ್ರಾಣಿಜೀವಿಗಳನ್ನ ನಾಶಮಾಡಿ, ಮನುಷ್ಯ ನೆಟ್ಟ ಚಹಾ ಗಿಡಗಳಿಗೆ ಗುಡ್ಡ ಜಾರುವಾಗ ಹಿಡಿದಿಡಲು ಆಗಲಿಲ್ಲ.

ಪ್ರಕೃತಿಯ ಅಸಮತೋಲನ ಒಂದು ನಿರ್ದಿಷ್ಟ ರೀತಿಯ ನಾಶ ನಷ್ಟಕ್ಕೆ ಕಾರಣವಾಗುತ್ತಿದೆ. ಆ ಅಸಮತೋಲನದ ಮೂಲದಲ್ಲಿ ಮನುಷ್ಯನ ಸ್ವಕೇಂದ್ರಿತ ಆಕ್ರಮಣಕಾರಿ ತತ್ವ ಮತ್ತು ಆಚರಣೆಗಳು ಅಡಗಿವೆ.

ಬಹುಷಃ ಕಳೆದ ಶತಮಾನದಲ್ಲಿ ತಿರುಮಲೇಶ್ ಅವರು ಬರೆದ ಕವನ, ಈ ಎಲ್ಲವುಗಳನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡಿತ್ತು. ಅದಕ್ಕೇ ಇರಬೇಕು , “ರವಿ ಕಾಣದ್ದನ್ನೂ ಕವಿ ಕಂಡ” ಎಂಬ ನಾಣ್ನುಡಿ ಪ್ರಚಲಿತವಾದದ್ದು.

ಇಂದಿನ ಅಬ್ಬಿಯಲ್ಲಿ, ಸೌಮ್ಯ ವಿಷಯವಿಲ್ಲ.‌ ಮಾನವನ ಅಮಾನವೀಯ ಕ್ರೌರ್ಯವಿದೆ. ನೋವಿದೆ,ಹಿಂಸೆಯಿದೆ. ನನಗೆ ಬರೆಯಲು ಕಷ್ಟವಾದರೂ ಬರೆದಿದ್ದೇನೆ. ನಿಮಗೆ ಓದುವಾಗ ನೋವಾದರೆ ಕ್ಷಮಿಸಿ. ಆದರೆ, ವಾಸ್ತವಕ್ಕೆ ಕನ್ನಡಿ ಹಿಡಿದು ನಮ್ಮ ಸಂವೇದನೆಯನ್ನು ಸೂಕ್ಷ್ಮ ಗೊಳಿಸುವ, ಜಾಗೃತಗೊಳಿಸುವ ಅಪೂರ್ವ ಕವನದ ಪ್ರಸ್ತುತಿ, ಇಂದಿನ ಸಂದರ್ಭದಲ್ಲಿ ಅತ್ಯಂತ ಉಚಿತ ಎಂದು ಅನಿಸಿದ್ದರಿಂದ, ಬರೆದೆ.

ಹಿರೋಷಿಮಾದಲ್ಲಿ ವಿಸ್ಫೋಟಿಸಿದ ಅಣುಬಾಂಬು, ಜೀವನಾಶದ ನಂತರ, ಜಪಾನಿನ ಮಾನವೀ ಪ್ರಜ್ಞೆ ಚಿಗುರಿದ ಬಗೆ, ಆ ದೇಶ ಕಂಡುಕೊಂಡ ಹೊಸ ದಾರಿಗಳು, ಆವಿಷ್ಕಾರಗಳು, ಹಸಿವಿನಿಂದ ಹಸಿರಿನತ್ತ ನಡಿಗೆ. ಹಸಿರು ಉಸಿರಾಗಲಿ, ಉಸಿರು ಹಸಿರಾಗಲಿ ಎಂಬುದು ಅಬ್ಬಿಯ ಆಶಯ.

ಸಾಹಿತ್ಯದ ಮೂಲಕ ಪ್ರಜ್ಞೆಯನ್ನು, ಸಂವೇದನೆಯನ್ನು, ಚಿಂತನೆಯನ್ನು ತಡವಿ, ಎಬ್ಬಿಸಿ,ಎಚ್ಚರಿಸಿ ಹೊಸಗಾಲದ ಹಸುಮಕ್ಕಳ ಹರಸುವ, ಯುಗದ  ಕವಿ ಕೆ.ವಿ. ತಿರುಮಲೇಶ್  ಅವರಿಗೆ ನಿನ್ನೆ ಎಂಭತ್ತು ತುಂಬಿದೆ.

ಕಳೆದೊಂದು ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ, ತಮ್ಮದೇ ಹೊಸ ದಾರಿಗಳನ್ನು ಕೊರೆದು, ಕವಿಮಾರ್ಗಕ್ಕೆ ಹೊಸ ತಂತ್ರಜ್ಞಾನ ಆವಿಷ್ಕರಿಸಿದ ಭಾಷಾವಿಜ್ಞಾನಿಯಾದ ಅವರಿಗೆ ಎಂಭತ್ತರ ಶುಭಾಶಯಗಳು.

******************************************************************

ಮಹಾದೇವ ಕಾನತ್ತಿಲ್

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

8 thoughts on “

  1. ತಿರುಮಲೇಶರ ಎಂಬತ್ತರ ಸಂಭ್ರಮದ ಅಂಗವಾಗಿ ಅವರ ಸಂವೇದನಾಶೀಲ ಕವಿತೆಯನ್ನು ಆಯ್ದುಕೊಂಡಯ ಅದರ ಸೂಕ್ತ ಹಾಗೂ ಸಮರ್ಥ ವಿಶ್ಲೇಷಣೆ ಮಾಡುತ್ತ ಬರೆದ ನಿಮ್ಮ ಅಂಕಣ ನೀವು ಅವರಿಗೆ ಸಲ್ಲಿಸುವ ಸಾಹಿತ್ಯ ನಮನವೆನಿಸಿದೆ. ಅಭಿನಂದನೆ.

    1. ರಮೇಶ್ ಸರ್.
      ತಿರುಮಲೇಶ್ ಅವರು ಬರೆದ ಕವಿತೆಗಳು ತಮ್ಮಷ್ಟಕ್ಕೇ ದಾರಿ ಮಾಡಿಕೊಂಡು, ಹಲವು ದಿನ ಕಾಡುವ ಕವಿತೆಗಳು.
      ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು

  2. ಮನುಷ್ಯನ ಅಮಾನವೀಯ ಪ್ರಜ್ಞೆ ಹೇಗೆ ದುರಂತಗಳನ್ನು ಬರಮಾಡಿಕೊಂಡು ಚಲನಶೀಲ ವ್ಯವಸ್ಥೆಯ ಕೊಂಡಿಯನ್ನು ಕತ್ತರಿಸುತ್ತದೆ ಎಂಬುದನ್ನು ಕವಿತೆಯ ಮೂಲಕ ಸಾದರ ಪಡಿಸುತ್ತ ಮಾನವೀಯ ಪ್ರಜ್ಞೆ ವಿಶ್ವ ಮಾನವ ಪ್ರಜ್ಞೆ ಯೊಂದಿಗೆ ನಿಸರ್ಗ ಸ್ನೇಹಿ ಯಾಗಿ ಬದುಕಿದಾಗ ಮಾತ್ರ ಆತನಿಗೆ ಉಳಿಗಾಲ ಪ್ರಾಣಿಗಳಿಗೆ ಆತ ತಂದ ಸ್ಥಿತಿ ಆತನಿಗೂ ಮುಂದೆ ಕಾದಿದೆ ಮನೋಜ್ಞ ಲೇಖನ ಸರ್ ಇಬ್ಬರಿಗೂ ವಂದನೆಗಳು

    1. ಹೌದು!. ಈ ಕವಿತೆ ಮೊದಲ ಓದಿಗೆ ತೇಲಿಸುತ್ತೆ
      ಎರಡನೇ ಓದಿಗೆ ಈಜಿಸುತ್ತೆ
      ಮೂರನೆಯ ಓದಿಗೆ ಪ್ರಜ್ಞೆಯನ್ನೆಬ್ಬಿಸಿ ತಮ್ಮಷ್ಟಕ್ಕೇ ಉತ್ತರ ಹುಡುಕಲು ಪ್ರೇರೇಪಿಸುತ್ತೆ.
      ಸಮಾಜ ಬದಲಾಗಲು ಮನುಷ್ಯನ ಮೂಲಭೂತ ಆಶಯದ ಬದಲಾವಣೆಯನ್ನು ಸೂಚಿಸುವ ದ್ವನಿಯಾಗಿ ಈ ಕವಿತೆಗಳು ನೆಲೆಯಾಗುತ್ತವೆ.
      ತುಂಬಾ ಧನ್ಯವಾದಗಳು

  3. ಹಿರಿಯ ಸಾಹಿತಿ ತಿರುಮಲೇಶ್ ಅವರಿಗೆ ೮೦ ತುಂಬಿದ ಸಂಭ್ರಮದಲ್ಲಿ, ಅವರು ರಚಿಸಿದ ಕವನವನ್ನು ಬಹಳ ವಿವರವಾಗಿ ವಿಶ್ಲೇಷಿಸಿದ್ದಾರೆ ಮಹಾದೇವ ಅವರು. ಸಮರ್ಥವಾದ ಅವರ ವಿಶ್ಲೇಷಣೆಯಲ್ಲಿ , ಮಹಾದೇವ್ ಅವರು ಕವನ ಧ್ವನಿಸುವ ವಿವಿಧ ಅರ್ಥಗಳನ್ನು ತಿಳಿಸುತ್ತಾ, ಕವನದ ಎಲ್ಲ ಅಂಶಗಳನ್ನು ಅನಾವರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ, ನಾಡಿನ ಹಿರಿಯ ಸಾಹಿತಿ ತಿರುಮಲೇಶ್ ಅವರ ಕುರಿತು ಬರೆದ ಮಹಾದೇವ್ ಅವರ ಲೇಖನ ಸಮರ್ಪಕವಾಗಿದೆ. ಹಾರ್ದಿಕ ಅಭಿನಂದನೆಗಳು

    1. ತಿರುಮಲೇಶ್ ಎಂಭತ್ತರ ಹೊತ್ತಿಗೆ ನಿರಂತರ ಬೆಳೆಸಿದ, ಬೆಳೆದ ಕನ್ನಡದ ಬೆಳೆ ಕವಿತೆಗಳಲ್ಲಿ, ನಿಮ್ಮಂತಹ ಶಿಷ್ಯರೊಳಗೆ ಪ್ರಜ್ಞೆಯಾಗಿ ಮೂಡಿರುವುದು ಕಾವ್ಯಾರ್ಥ ಸಮೃದ್ಧಿ ಅಲ್ವಾ ಸರ್.
      ತುಂಬಾ ಧನ್ಯವಾದಗಳು

  4. ಅಧ್ಬುತ ಹಾಗೂ ವಿಸ್ತ್ರತ ವಾಸ್ತವವನ್ನು ಎಳೆಎಳೆಯಾಗಿ ಬಿಚ್ಚಿರುವುದು,ಮನುಷ್ಯನೊಳಗಿನ ದುರಾಸೆಯ ಮನೋಭಾವ ಕಡಿಮೆಯಾದಷ್ಟು ಪ್ರಕೃತಿಯ ಉಳಿವು ಸಾಧ್ಯ…. ಹಿರಿಯ ಸಾಹಿತಿಗಳು ಕೆ.ವಿ.ತಿರುಮಲೇಶರವರ ಚಿಂತನೆಗೆ ಅದಮ್ಯ ಶಕ್ತಿ ಇದೆ…ಸೂಪರ್..

    1. ಶಿವಲೀಲಾ ಅವರೇ. ತುಂಬಾ ಸೂಕ್ಷ್ಮ ಮನಸ್ಸು ಮತ್ತು
      ಸ್ಪಂದನೆ ನಿಮ್ಮದು. ಈ ಕವಿತೆ ಕಾಡುತ್ತೆ.. ಕಾಡುವ ಕವಿತೆ ಮನಸ್ಸನ್ನು, ಸಮಾಜವನ್ನು ಹಸಿರಿನತ್ತ ನಡೆಸಬಹುದು.

      ತುಂಬಾ ಧನ್ಯವಾದಗಳು

Leave a Reply

Back To Top