ಪುಸ್ತಕಪರಿಚಯ
ಜಂಜಿ ಡಪಾತಿ ಬೋ ಪಸಂದಾಗೈತಿ!
ಚುಕ್ಕಿ ಬೆಳಕಿನ ಜಾಡು
ಕಾದಂಬರಿ
ಕರ್ಕಿ ಕೃಷ್ಣಮೂರ್ತಿ
ಛಂದ ಪುಸ್ತಕ.
ಇದು ಕಥೆಗಾರ ಕರ್ಕಿ ಕೃಷ್ಣಮೂರ್ತಿ ಅವರ ಮೊದಲ ಕಾದಂಬರಿ. ‘ಮಳೆ ಮಾರುವ ಹುಡುಗ’ ‘ಗಾಳಿಗೆ ಮೆತ್ತಿದ ಬಣ್ಣ’ ಅವರ ಪ್ರಕಟಿತ ಕಥಾಸಂಕಲನಗಳು. ಅರಿಕೆಯಲ್ಲಿ ಕೃಷ್ಣಮೂರ್ತಿ ಅವರು ಹೇಳಿಕೊಂಡಂತೆ ‘ ಜಂಜಿ ಡಂಪಾತಿ’ ಎಂಬ ಅಪ್ರಕಟಿತ ಕಥೆಯೊಂದನ್ನು ಓದಿ ಅವರ ಗೆಳೆಯರು ಕಾದಂಬರಿ ಮಾಡಬಹುದು ಎಂದು ಹೊಳಹು ನೀಡಿದ್ದೇ ಈ ಕೃತಿಯ ಹುಟ್ಟಿಗೆ ಕಾರಣ. ಮಲಯೂ ಭಾಷೆಯ ಶಬ್ದ ಈ ಜಂಜಿ ಡಪಾತಿ. ಅಂದರೆ “ಭರವಸೆ ಪೂರೈಸಿದ್ದೇನೆ” ಎಂದರ್ಥ.
ವಲಸೆಯ ಕಥನಗಳ ಪ್ರಕಾರಕ್ಕೆ ಸೇರುವ ಕಾದಂಬರಿಯಿದು. ಇತ್ತೀಚೆಗೆ ವಸುಧೇಂದ್ರ, ಡಾ.ಗುರುಪ್ರಸಾದ್ ಕಾಗಿನೆಲೆ, ಎಂ. ಆರ್. ದತ್ತಾತ್ರಿ ಸೇರಿದಂತೆ ಹಲವರು ಈ ವಿಭಾಗದಲ್ಲಿ ಕೃತಿಗಳನ್ನು ಬರೆದಿದ್ದಾರೆ. ಆದರೆ ಮಲೇಷ್ಯಾದ ಕುರಿತು ಕನ್ನಡದಲ್ಲಿ ಬಂದ ಮೊದಲ ಕಾದಂಬರಿಯಿದು.
ಸಹಸ್ರಾರು ಕಿಮೀ ಕ್ರಮಿಸುವ ವಲಸೆ ಹಕ್ಕಿಗಳ ಮಾರ್ಗ ನಿರ್ಣಯವು, ನಕ್ಷತ್ರಗಳ ಜಾಡೂ ಸೇರಿದಂತೆ ಹಲವು ಸಂವೇದನೆಗಳನ್ನು ಆಧರಿಸಿದೆ. ಇದಕ್ಕೆ ಸೂಕ್ತವಾಗಿ ದೇಶ ಕುಲಕರ್ಣಿ ಅವರ ಕವನದ ಸಾಲು ‘ ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು..’ಇದರ ಕೊನೆಯ ಭಾಗ ಈ ಕಾದಂಬರಿಗೆ ಶೀರ್ಷಿಕೆಯಾಗಿದೆ. ನೋಡಿ, ದೇಶ ಕುಲಕರ್ಣಿ ಅವರ ಈ ಕವಿತೆಯು ಕಾದಂಬರಿಯ ಅಪರಿಮಿತ ಸಾಧ್ಯತೆಗಳನ್ನು ಸೂಚ್ಯವಾಗಿ ಹೇಳುತ್ತದೆ.
“ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ
ಮುರಿದು ಹೋಯಿತೇ ಈಗ ಆ ಪುಟ್ಟ ಗೂಡು”
ಅವಕಾಶ ಸಿಕ್ಕರೆ ಹೊರದೇಶಕ್ಕೆ ಹಾರುವ ಆಸೆಯ ನಿರಂಜನ, ಬೇರಿನ ಹುಡುಕಾಟದಲ್ಲಿ ಇರುವ ಶಣ್ಮುಗರತ್ಮಮ್, ತನ್ನ ಮೂಲದ ಕುರಿತು ಅಭಿಮಾನ ಹೊಂದಿರುವ ದುರೈ; ಹೀಗೆ ಇಲ್ಲಿ ಎಲ್ಲರೂ ಚುಕ್ಕಿ ಬೆಳಕಿನ ಜಾಡಿನಲ್ಲಿದ್ದಾರೆ. ಕುತೂಹಲದ ಕಂದೀಲು ಹಿಡಿದು ಸದ್ಯದ ಸನ್ನಿವೇಶಗಳು ಬದುಕಿನ ಅಸಂಗತತೆಯನ್ನು ಇನ್ನೂ ದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂ ಈ ಕೃತಿ ಕಾಣಿಸುತ್ತದೆ. ಈ ಕಾದಂಬರಿಯ ಮುಖ್ಯ ಪಾತ್ರವಾದ ನಿರಂಜನನನ್ನು ಅತ್ಯುತ್ತಮವಾಗಿ ಕರ್ಕಿಯವರು ಕಡೆದಿದ್ದಾರೆ. ಇವನನ್ನು ಪ್ರತಿನಾಯಕ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಆದರೆ ಇಲ್ಲಿ ನಾಯಕನೂ ಇವನೇ! ಇದು ವರ್ತಮಾನದ ಕಟು ಸತ್ಯ ಸಹ ಹೌದು.
ಆಫೀಸಿನ ಕೆಲಸದ ಪ್ರಯುಕ್ತ ನಿರಂಜನ ವಿದೇಶಕ್ಕೆ ಹೋದರೆ ಸ್ಟಾರ್ ಹೋಟೆಲಿನಲ್ಲುಳಿದುಕೊಂಡು ಬರುವಾಗ ಅಲ್ಲಿನ ಸೋಪು, ಬ್ರಶ್ಶು, ಬಾಚಣಿಕೆಯನ್ನು ತುಂಬಿಕೊಂಡು ಬರುವ ಮನಸ್ಥಿತಿಯವ. ಪುಕ್ಕಟೆ ಆಸ್ಪತ್ರೆ, ಬಾಡಿಗೆ ಕಾರಿನ ಬಿಲ್ಲನ್ನು ಹೆಚ್ಚು ತೋರಿಸಿ ಕ್ಲೈಮ್ ಮಾಡುವ ಭಾರತದ ಬಹುಸಂಖ್ಯಾತ ಮನಸ್ಥಿತಿಯವನು. ಅದರಲ್ಲಿ ಅವನಿಗೆ ಯಾವುದೇ ಎಗ್ಗುಸಿಗ್ಗಿಲ್ಲ. ಇವಕ್ಕೆಲ್ಲ ಅವನದೇ ಆದ ಸಮರ್ಥನೆಗಳಿವೆ. ಇವು ನಮ್ಮೊಳಗೂ ಇವೆ ಎಂದು ಅನ್ನಿಸದೇ ಇರದು. ಈತ ಹೆಜ್ಜೆ ಹೆಜ್ಜೆಗೂ ಹೇವರಿಕೆಯನ್ನು ಹುಟ್ಟಿಸುತ್ತಾನೆ. ಅತ್ಯಂತ ಸೂಕ್ಷ್ಮವಾದ ಕೃತಿಕಾರ ಮಾತ್ರ ಇಂತಹದೊಂದು ಪಾತ್ರವನ್ನು ಕಡೆತನಕ ಅದೇ ಲಯದಲ್ಲಿ ನಿರ್ವಹಿಸಬಲ್ಲರು.
ಮಲೇಷ್ಯಾದ ಕೌಲಾಲಂಪುರದ ಆಸುಪಾಸಿನಲ್ಲಿ ಒಂದು ವಾರದ ಕಾಲ ನಡೆಯುವ ಕಥನವೇ ಈ ಚುಕ್ಕಿ ಬೆಳಕಿನ ಜಾಡು. ತನ್ನ ಕಛೇರಿಯ ಕಾರ್ಯದ ನಿಮಿತ್ತ ಇಲ್ಲಿಗೆ ಆಗಮಿಸುವ ನಿರಂಜನನಿಗೆ ಇಲ್ಲೆ ಒಂದು ನೌಕರಿ ಕಂಡುಕೊಳ್ಳುವ ಆಸೆಯಿರುತ್ತದೆ. ಹಾಗಾಗಿ ಉಳಿದೆರಡು ದಿನಗಳನ್ನು ಕಣ್ಣದಾಸನ್ ಅವರ ಸೋವಿಯ ಹೋಂ ಸ್ಟೇನಲ್ಲಿ ಕಳೆಯುತ್ತಾನೆ. ಆಗಲೇ ಆತ ಪಾಸ್ಪೋರ್ಟ್ ಕಳೆದುಕೊಳ್ಳುವುದು ಮತ್ತು ಕಥೆ ರೋಚಕವಾಗುವುದು.ಮನುಷ್ಯನನ್ನು ಏನೆಲ್ಲ ಘಟನೆ ಮತ್ತು ವಸ್ತುಗಳು ಕಾಡುತ್ತವೆ ಎನ್ನುವುದಕ್ಕೆ ನಿರಂಜನನ ಡಾಂಬರು ಗುಳಿಗೆ ( ನಾಫ್ತಾಲಿನ್ ಮಾತ್ರೆ), ಕಣ್ಣದಾಸನ್ ಜೀವನ,ಶಣ್ಮುಗರತ್ನಮ್ ನ ವಂಶಜರ ಮೂಲದ ಹುಡುಕಾಟ, ದುರೈಯ ನೈಸರ್ಗಿಕ ಕರ್ಪೂರದ ಹುಚ್ಚು ಇಲ್ಲಿ ಸೊಗಸಾದ ಉದಾಹರಣೆಗಳಾಗಿವೆ.
ಭೂಮಿಯ ಅಡಿಯ ಸ್ಕ್ಯಾನಿಂಗ್ ಮಾಡುವ ಕೆಲಸ ಮತ್ತು ಅದರ ಯಂತ್ರಗಳನ್ನು ಪೂರೈಕೆ ಮಾಡುವುದು ನಿರಂಜನನ ಕಂಪೆನಿಯ ಕೆಲಸ. ಈಗ ಎಲೆಕ್ಟ್ರಿಕ್ ಕೇಬಲ್, ಗ್ಯಾಸ್ ಲೈನ್, ಓಎಫ್ಸಿ.. ಎನ್ನುತ್ತಾ ಭೂಮಿಯ ಅಡಿಗೆ ಟ್ರಾಫಿಕ್ ಜಾಮಾಗಿದೆ. ಅದನ್ನು ಕಂಡು ಹಿಡಿದು, ಸಮಸ್ಯೆ ನಿವಾರಿಸುವುದು ಅವನ ಕೆಲಸ. ಇದರ ಹಿನ್ನೆಲೆಯಲ್ಲಿ ಒಬ್ಬ ಇವನಿಂದ ನಿಧಿ ಹುಡುಕುವ ಕೆಲಸಕ್ಕೆ ಇವನಿಗೆ ಆಮಿಷ ತೋರಿ ಅಲ್ಲಿ ನಡೆಯುವ ಘಟನೆ ಮಜವಾಗಿದೆ. ಕ್ಯಾಸೆಟ್ ಶ್ರೀಪತಿ, ಜೋಮೋ, ಸಂಗೊಂಗ್ ತಾಸಿ, ಮುರಳೀಧರ, ರೇವತಿ ಪಾತ್ರಗಳು ಕಾದಂಬರಿಯ ಸಣ್ಣ ಸಣ್ಣ ಪ್ರಸಂಗಗಳಲ್ಲಿ ಬಂದು ಹೋದರೂ ಬಹಳ ಹೊತ್ತು ನೆನಪಿನಲ್ಲಿ ಉಳಿಯುತ್ತವೆ. ಸಣ್ಣ ಬುದ್ಧಿಯ, ವಿಪರೀತ ಲೆಕ್ಕಾಚಾರದ ನಿರಂಜನನ ಹೆಜ್ಜೆಯ ಜಾಡನ್ನು ಊಹಿಸುವ ಕೆಟ್ಟ ಕುತೂಹಲವನ್ನು ಓದುಗನಲ್ಲಿ ಸೃಷ್ಟಿಸುವುದರ ಸವಾಲಿನಲ್ಲಿ ಕರ್ಕಿ ಕೃಷ್ಣಮೂರ್ತಿಯವರು ಗೆದ್ದು, ಕಾದಂಬರಿಯ ಕ್ಯಾನ್ವಾಸಿಗೆ ಹಿಗ್ಗಿರುವ ಕೌಶಲ್ಯವು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ಮೂಲಕ ಕಾದಂಬರಿಯ ಗೆಲುವೂ ಆಗಿದೆ.
ಮಲೇಷ್ಯಾದ ಇಂಡಿಯನ್ಸ್ ಅದರಲ್ಲೂ ತಮಿಳರ ಬದುಕು ಮತ್ತು ಸಂಕಟಗಳು, ಭೂಮಿಪುತ್ರರೆಂದು ಕರೆದುಕೊಳ್ಳುವ ಮಲಯೂ ಜನಾಂಗ,ಅಲ್ಲಿನ ಚೀನಿಯರು, ಅಲ್ಲಿಯೂ ತಿಕ್ಕಾಟ ಮಾಡಿಕೊಳ್ಳುವ ಶ್ರೀಲಂಕಾದ ಸಿಂಹಳೀಯರು ಮತ್ತು ತಮಿಳರು, ‘ಒರಾಂಗ್ ಅಸ್ಲಿ’ ಎಂಬ ಬುಡಕಟ್ಟು ಜನಾಂಗ ಹೀಗೆ ಮಲೇಷ್ಯಾದ ಪ್ರಾದೇಶಿಕ ಚಿತ್ರಣ ಈ ಕೃತಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ಕೇವಲ ಎರಡು ನೂರು ರೂಪಾಯಿಗಳಲ್ಲಿ ಮಲೇಷ್ಯಾ ದೇಶದ ಪ್ರವಾಸ ಮತ್ತು ನವಿರಾದ ಕಾದಂಬರಿಯ ಓದು ನಮ್ಮದಾಗಲಿದೆ.
*******************************************************
- ಡಾ. ಅಜಿತ್ ಹರೀಶಿ
ಅದ್ಭುತ ಪರಿಚಯ.