ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ

ಇಂಗ್ಲಿಷ್ ಮೂಲ : ಮಾಯಾ ಏಂಜೆಲೋ ಕನ್ನಡಕ್ಕೆ : ಎಂ.ಆರ್.ಕಮಲ
‘ಐ ನೋ ವೈ ದ ಕೇಜ್ಡ್ ಬರ್ಡ್ ಸಿಂಗ್ಸ್’ ಎಂಬ ಮೂಲ ಶೀರ್ಷಿಕೆಯನ್ನು ‘ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ’ ಎಂಬ ಸುಂದರ ಶೀರ್ಷಿಕೆಯೊಂದಿಗೆ ಅನುವಾದಿಸಿದ್ದಾರೆ.
ಇದು ಜಗತ್ಪ್ರಸಿದ್ಧ ಕಪ್ಪು ಲೇಖಕಿ ಮಾಯಾ ಎಂಜೆಲೋ ಅವರ ಆರು ಆತ್ಮಕತೆಗಳಲ್ಲಿ ಮೊದಲನೆಯದು. ಆಕೆ ತನ್ನ ಮೂರನೆಯ ವಯಸ್ಸಿನಿಂದ ಹದಿನೇಳು ವರ್ಷ ವಯಸ್ಸಿನ ವಳಾಗುವ ತನಕ ತನ್ನ ಅಣ್ಣ ಮತ್ತು ತಂದೆಯ ತಾಯಿ ಅಜ್ಜಿಯ ಜತೆಗೆ ವಾಸಿಸಿದಳು.ತಾನು ಅನುಭವಿಸಿದ್ದ ಕಷ್ಟ- ನಿಷ್ಠುರಗಳನ್ನೂ ನೋವು-ಸಂಕಟಗಳನ್ನೂ ಆಕೆ ಇಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಕಪ್ಪು ಜನಾಂಗಕ್ಕೆ ಸೇರಿದ ಮಾಯಾ ಎಂಜೆಲೋ ದಕ್ಷಿಣ ಮತ್ತು ಉತ್ತರ ಅಮೆರಿಕಾಗಳಲ್ಲಿ ಬಿಳಿಯರ ವರ್ಣದ್ವೇಷ ಮತ್ತು ಅಮಾನುಷ ವರ್ತನೆಗಳನ್ನು ಮತ್ತು ಅವರಿಂದ ಶೋಷನೆಗೊಳಗಾದ ಕರಿಯರು ತಮ್ಮ ಸ್ವಾಭಿಮಾನ ಹಾಗೂ ಸ್ವಪ್ರಯತ್ನಗಳಿಂದ ಮೇಲೆ ಬರಲು ಪ್ರಯತ್ನಿಸಿದ್ದ ರ ಬಗ್ಗೆ ಬರೆಯುತ್ತಾರೆ.ಮೂರು ವರ್ಷದ ಹುಡುಗಿಯಾಗಿ ದ್ದಾಗಲೇ ತನ್ನ ನಾಲ್ಕು ವರ್ಷ ವಯಸ್ಸಿನ ಅಣ್ಣ ಬೈಲಿಯ ಜತೆಗೆ ತಾಯಿ-ತಂದೆಯರಿಂದ ಬೇರ್ಪಟ್ಟು ಆಕೆ ಅಜ್ಜಿಯ ಮನೆಯಲ್ಲಿಯೇ ಬೆಳೆಯುತ್ತಾರೆ.ಅಜ್ಜಿಯ ಧೈರ್ಯ- ಸ್ಥೈ ರ್ಯ, ಶಿಸ್ತು-ಸ್ವಾಭಿಮಾನಗಳನ್ನು ತಾನೂ ರೂಢಿಸಿಕೊಳ್ಳು ತ್ತಾಳೆ.ಇಡೀ ಹಳ್ಳಿಯಲ್ಲಿ ತನ್ನ ಸ್ವತಂತ್ರ ಮನೋಭಾವಕ್ಕೆ ಹೆಸರಾದ ಅಜ್ಜಿಯ ಬಗ್ಗೆ ಅವಳಿಗೆ ಅಪಾರ ಮೆಚ್ಚುಗೆಯಿ ದೆ.ಆದರೆ ಆಕೆಯ ಎಂಟನೇ ವಯಸ್ಸಿನಲ್ಲಿ ಒಮ್ಮೆ ಆಕೆಯ ಅಮ್ಮ ಆಕೆಯನ್ನು ತಾನು ವಾಸವಾಗಿರುವವ ಸಾನ್ ಫ್ರಾನ್ಸಿಸ್ಕೋ ನಗರಕ್ಕೆ ಕರೆತಂದು ಇಟ್ಟುಕೊಳ್ಳುತ್ತಾಳೆ. ಆದರೆ ಅಮ್ಮನ ಗೆಳೆಯನೊಬ್ಬ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದಾಗ ಅವಳ ಮಾವಂದಿರು ಅವನನ್ನು ಕೊಲೆ ಮಾಡುತ್ತಾರೆ. ಈ ಎಲ್ಲ ದುರ್ಘಟನೆಗಳಿಂದ ಆಕೆ ಯ ಮನಸ್ಸಿಗೆ ಆದ ಘೋರ ಆಘಾತವು ಆಕೆಯನ್ನು ಅಕ್ಷ ರಶಃ ಮೂಕಿಯನ್ನಾಗಿಸುತ್ತದೆ.

ಮುಂದಿನ ಐದು ವರ್ಷಗಳ ತನಕ ಮೂಕಿಯಾಗಿಯೇ ಇದ್ದ ಆಕೆಗೆ ಮಿಸೆಸ್. ಫ್ಲವರ್ ಎಂಬ ಸ್ನೇಹಮಯಿ ಮಹಿಳೆ ಯ ಪ್ರೋತ್ಸಾಹದಿಂದ ಮಾತು ಬರುತ್ತದೆ. ಆ ಮಹಿಳೆಯ ಮೂಲಕವೇ ಮಾಯಾ ನೃತ್ಯ-ನಾಟಕ, ಶಿಕ್ಷಣ ಮೊದಲಾದ ವಿಷಯಗಳನ್ನು ಕಲಿತು ಬದುಕಿನಲ್ಲಿ ಯಶಸ್ಸು ಸಾಧಿಸು ತ್ತಾಳೆ. ಮಾತ್ರವಲ್ಲದೆ ಕಾವ್ಯಪ್ರಿಯತೆಯನ್ನೂ ರೂಢಿಸಿಕೊಂ ಡು ಕಾವ್ಯರಚನೆ ಮಾಡುತ್ತಾಳೆ.ಮಾಯಾ ಜನಾಂಗ ದ್ವೇಷ ವನ್ನು ವಿರೋಧಿಸಿ ಅನೇಕ ಕವನಗಳನ್ನು ಬರೆಯುತ್ತಾಳೆ. ತಾನು ತೀವ್ರವಾದ ಹಲ್ಲು ನೋವಿನಿಂದ ಬಳಲುತ್ತಿರುವಾ ಗಲೂ ಚಿಕಿತ್ಸೆ ಮಾಡಲೊಪ್ಪದ ಒಬ್ಬ ಬಿಳಿಯ ದಂತವೈದ್ಯ ನ ಕ್ರೌರ್ಯ ಮತ್ತು ಕೃತಘ್ನತೆಯನ್ನು ಆಕೆ ತನ್ನ ಆತ್ಮಕಥೆ ಯಲ್ಲಿ ದಾಖಲಿಸುತ್ತಾಳೆ. ಈ ಕೃತಿಯಲ್ಲಿ ಇದೇ ಧ್ವನಿಯನ್ನು ಹೊಂದಿದ ಅನೇಕ ಕವನಗಳೂ ಇವೆ. ಅಲ್ಲದೆ ಮಾಯಾ ಅವರ ವೈಯಕ್ತಿಕ ನಿಲುವುಗಳನ್ನು ಬಿಂಬಿಸುವ ನಾಲ್ಕು ಅರ್ಥಪೂರ್ಣ ಸಂದರ್ಶನಗಳೂ ಇವೆ. ಸಂದರ್ಶನಗಳಲ್ಲಿ ಜನಾಂಗದ್ವೇಷ ರಹಿತವಾದ ಒಂದು ಹೊಸ ಸಮಾಜದ ನಿರ್ಮಾಣಕ್ಕಾಗಿ ಕರೆಯಿದೆ. ಮೂಲತಃ ಕವಿಯಾದ ಎಂ.ಆರ್.ಕಮಲ ಅವರ ಅನುವಾದದ ಭಾಷೆ ಕಾವ್ಯಾತ್ಮಕವಾಗಿದ್ದು ಬಹಳ ಪರಿಣಾಮಕಾರಿಯಾಗಿದೆ.

*******************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

2 thoughts on “

  1. ಲೇಖಕಿ ಮಾಯಾಳ ಜೀವನದ ಅನಾವರಣ ಅಧ್ಬುತವಾಗಿದೆ.ಅವರ ಕವಿತೆಗಳು ಕೂಡ…ಚೆನ್ನಾಗಿದೆ ಮೇಡಂ

  2. ಸೊಗಸಾದ ಬರಹ.
    ಪಾರ್ವತಿ ಐತಾಳರನ್ನು ಬಹಳ ವರ್ಷಗಳಿಂದ ಓದುತ್ತ ಬಂದಿದ್ದೆ ಆದರೆ ಅವರ ಬಗ್ಗೆ ತಿಳಿದಿರಲಿಲ್ಲ.
    ಈಗ ಅವರ ಸಾಹಿತ್ಯಕ ಸಾಧನೆಯ ಬಗ್ಗೆ ಓದಿ ಸಂತೋಷವಾಯಿತು.

Leave a Reply

Back To Top