ಫ್ಲೈಟ್ ತಪ್ಪಿಸಿದ ಮೆಹೆಂದಿ

ಪ್ರಬಂಧ

   ಫ್ಲೈಟ್ ತಪ್ಪಿಸಿದ  ಮೆಹೆಂದಿ

ಸುಮಾ ವೀಣಾ

                                       

ಫ್ಲೈಟ್  ರಾತ್ರಿ ಹತ್ತು ಗಂಟೆಗೆ ಅಂದುಕೊಂಡು ಬೆಳಗ್ಗೆ 6 ಗಂಟೆಗೆಎದ್ದು  ವಿದೇಶೀ ಲಲನೆಯರಿಗಿಂತ ನಾವೇನು ಕಡಿಮೆ ನಾವೂ ಹೇರ್ ಕಲರ್ ಮಾಡಿಕೊಳ್ಳೋಣ  ಎನ್ನುತ್ತಲೇ ನಾನು ನನ್ನ ತಮ್ಮನ ಹೆಂಡತಿ ಶಾಲಿನಿ ಇಬ್ಬರೂ ಮೆಹೆಂದಿ ಕಲೆಸಿ ತಲೆಗೆ ಮೆತ್ತಿಕೊಂಡೆವು.  ಫಿಲ್ಟರ್ ಕಾಫಿ ಹೀರುತ್ತಾ   ಹರಟುತ್ತಿರಬೇಕಾದರೆ ನಮ್ಮ ಮೊಬೈಲಿಗೆ ಮೆಸೇಜ್  ಮಹಾಶಯ ಬಂದು “ನನ್ನನ್ನು ಒಮ್ಮೆ ನೋಡುವಿರಾ! ನೋಡುವಿರಾ!” ಎಂದು ವಿನಂತಿಸಿಕೊಳ್ಳಲಾರಂಭಿಸಿದ. ಹಾಗೆ  ತಲೆಯನ್ನೊಮ್ಮೆ ನೇವರಿಸಿಕೊಂಡರೆ ಮೆಹೆಂದಿ ಕೈಗೆಲ್ಲಾ ತಾಗಿ ಇರಿಸು ಮುರಿಸಾಯಿತು.  ಆದರೂ ಬಿಡದೆ ಮೊಬೈಲನ್ನೊಮ್ಮೆ ತೀಡಿದೆವು. ಆ ಮೆಸೇಜ್  ಮಹಾಶಯ ನಮ್ಮನ್ನೇ ಗುರಾಯಿಸುವಂತಿದ್ದ. ಅವನನ್ನು ಓದಿದರೆ ಅವನು ನಮ್ಮ ಫಾರಿನ್ ಟೂರ್ ಕುರಿತೇ ಎಚ್ಚರ  ನೀಡಿದಂತೆ ಇತ್ತು. ಫ್ಲೈಟ್  ಬೆಳಗ್ಗೆ ಹತ್ತು ಗಂಟೆಗೇ ಎಂದಿತ್ತು.   ನಾನು ಶಾಲಿನಿ ಇಬ್ಬರೂ ತಡಬಡಾಯಿಸಿಕೊಂಡು ಕಾಫಿಮಗ್ ಅನ್ನು ಕೆಳಕ್ಕೆ  ಕುಕ್ಕರಿಸಿ  “ಇನ್ನು ಹೊರಡಲು ಹೆಚ್ಚಿಗೆ ಸಮಯವೇನು ಉಳಿದಿಲ್ಲ! ಹೊರಡೋಣ! ಹೊರಡೋಣ!” ಎಂದು ಕೈ ಸನ್ನೆ ಮಾಡಿಕೊಂಡೆವು. ಮಾತನಾಡುವುದಕ್ಕೆ ಸಮಯವಿರಲಿಲ್ಲ ರಾತ್ರಿಯೇ ಲಗೇಜ್ ಪ್ಯಾಕ್  ಮಾಡಿಕೊಂಡಿದ್ದರೆ ಬಹುಶಃ ಗಾಬರಿಯಾಗುತ್ತಿರಲಿಲ್ಲವೇನೋ…..?? “ರಾತ್ರಿ ಹತ್ತು ಗಂಟೆಗಲ್ಲವ ಫ್ಲೈಟ್” ಎಂದು ಹರಟುತ್ತಿದ್ದೆವು. ಮೆಸೇಜ್ ಮಹಾಶಯ ಎಚ್ಚರಿಸದೇ ಇರದಿದ್ದರೆ ನಾವು ಇನ್ನೂ ಹಾಗೆ ಇರುತ್ತಿದ್ದವೋ ಏನೋ??


 ಏರ್ಪೋರ್ಟಿಗೆ ಟ್ಯಾಕ್ಸಿಯಲ್ಲೇ ಹೋಗೋಣ  ಎಂದು ಟ್ಯಾಕ್ಸಿಯನ್ನೂ ಬುಕ್ ಮಾಡಿ ಕರೆಸಿಕೊಂಡೆವು. ಸೂಟ್ಕೇಸ್ನಲ್ಲಿ ಬಟ್ಟೆಗಳನ್ನು , ಟ್ರಾವಲಿಂಗ್  ಬ್ಯಾಗ್ನಲ್ಲಿ ತಿಂಡಿತೀರ್ಥಗಳನ್ನು ತುರುಕಿಕೊಂಡು ಟ್ಯಾಕ್ಸಿ ಹತ್ತಿ ಹೊರಟೆವು. ಟ್ಯಾಕ್ಸಿ  ಏರ್ಪೋರ್ಟ್ ಪ್ರವೇಶಿಸಿದೊಡನೆ ದಢಕ್ಕನೆ ನಿಂತಿತು. ಸಧ್ಯ! ವಾರಕ್ಕೆ ಮೊದಲೇ ಟಿಕೇಟ್ ಪ್ರಿಂಟ್ ಅವ್ಟು, ಪಾಸ್ಪೋರ್ಟ, ವೀಸಗಳನ್ನು ಬೇರೊಂದು ಬ್ಯಾಗಿಗೆ ತುರುಕಿ ಇಟ್ಟಿದ್ದೆವು.  ಅದನ್ನೇ ಕ್ಯೂನಲ್ಲಿ ನಿಂತು ಬೀಗುತ್ತಾ ತೋರಿಸಿ “ನಮಗೆ ವಿಂಡೋ ಸೈಡ್ ಸಿಕ್ಕರೆ ಸಾಕು ವಿಂಗ್ ಹತ್ತಿರ ಬೇಡ” ಎಂದುಕೊಂಡೆವು. ಅಲ್ಲೇ ಏಕೋ ಕಸಿವಿಸಿಯಾಗಲು ಪ್ರಾರಂಭವಾಯಿತು.  ಅದಕ್ಕೆ ಕಾರಣ ಅಲ್ಲಿದ್ದವರು ಸೆಲಿಬ್ರಿಟಿಗಳನ್ನಲ್ಲ ಅಪರಾಧಿಗಳನ್ನು ಗಮನಿಸುವಂತೆ, ನೋಡುವಂತೆ, ಧಿಕ್ಕರಿಸುವಂತೆ ರೆಪ್ಪೆ ಬಡಿಯದೆ ನಮ್ಮನ್ನೇ ನೋಡುತ್ತಿದ್ದರು. ನಾನು ಶಾಲಿನಿ “ ನಾವು ಈಗಷ್ಟೆ  ಫಾರಿನ್  ಟೂರ್ ಹೊರಟಿರುವುದು.  ಇನ್ನು ಫಾರಿನ್ನವರಾಗಿಲ್ಲವಲ್ಲ “ಏಕೆ ಹೀಗೆ ನೋಡುತ್ತಾರೆ” ಅಂದುಕೊಂಡೆವು.

     ಹಾಗೆ ಎರಡು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಯುವತಿಯೊಬ್ಬಳ ಭಾರೀ ಕನ್ನಡಕದಿಂದ  ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ  ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು.  ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು,. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ  ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ  ನಮ್ಮಿಬ್ಬರಿಗೂ ಸಿಟ್ಟು ಬರುತ್ತಿತ್ತು .ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು  ಮೆಹೆಂದಿ ವಾಶ್ ಮಾಡಲೆಂದು.  ಎಲ್ಲರ ಕಣ್ಣು ನಮ್ಮ ಮೇಲೆಯೇ.  ಮನೆ ಅಲ್ಲವಲ್ಲ ಬೇಕಾದ ಹಾಗೆ ತಲೆತೊಳೆದುಕೊಳ್ಳಲು, ಇನ್ನು ಜನ್ಮಾಪಿ ಮೆಹೆಂದಿ ಸಹವಾಸ ಮಾಡುವುದಿಲ್ಲ ಎಂದು ಶಪಥ ಮಾಡಿ ಒಬ್ಬರ ತಲೆಯನ್ನು ಒಬ್ಬರು ಪರಸ್ಪರ ತೊಳೆದುಕೊಂಡು ತಕ್ಷಣ ಲೌಂಜಿನ ಕಡೆಗೆ ಓಡಿಬಂದೆವು . ನಮ್ಮ ಸಹಪ್ರಾಯಣಿಕರೆಲ್ಲಾ ಫ್ಲೈಟ್ ಹತ್ತಿದ್ದರು. ಸಮಯ ಹತ್ತಾಗುವ ಹಾಗಿತ್ತು  ನಮಗೆ ಮತ್ತೆ ಪ್ರಯಾಣಕ್ಕೆ ಅವಕಾಶವಿರಲಿಲ್ಲ. ಕೈಕೈ ಹಿಡಿದುಕೊಂಡು ಲಗೇಜ್ ಕಡೆ ಗಮನ  ಹರಿಸಿದೆವು ಅದೂ ಅಲ್ಲಿರಲ್ಲಿಲ್ಲ . ಫಾರಿನ್ ಪ್ರಯಣಕ್ಕೆ ವಿಘ್ನ ಬಂತು ! ಅಲ್ಲಿರುವವರೆಲ್ಲರೂ ನಮ್ಮನ್ನೇ ನೋಡುತ್ತಿದ್ದರು.  ನಮ್ಮ ಕೋಪ ನೆತ್ತಿಗೇರಿತ್ತು.  ಎಲ್ಲರನ್ನು ಸುಟ್ಟುರಿಯುವಂತೆ ನೋಡುವ ಹಾಗಾಯಿತು ಏರ್ಪೋರ್ಟ್ ಸಿಬ್ಬಂದಿಯ ಮೇಲೂ ರೇಗಾಡಲೂ ಪ್ರಾರಂಭಿಸಿದೆವು. ನೀರಿಗಿಳಿದ ಮೇಲೆ ಚಳಿಯೇನು? ಎಂಬಂತೆ ಕೈಗಳನ್ನು ಜೋರಾಗಿಯೇ ಬೀಸಿಕೊಂಡು ಕಿರುಚಾಡಲು ಪ್ರಾರಂಭಿಸಿದೆವು. ಆದರೆ ನನಗೆ ಗಂಟಲಲ್ಲಿ ಏನೋ ಹಿಡಿದ ಅನುಭವ ಆಗುತ್ತಿತ್ತು.

 “ಮಮ್ಮಿ! ಮಮ್ಮಿ!  ನಾನು ಎದ್ದು ಹೊರಗೆ ಹೋಗ್ತೀನಿ ನೀವೇ ಲೈಟ್ ಆಫ್ ಮಾಡಿಕೊಳ್ಳಿ” ಎಂದು ಅಲ್ಲೇ ಇದ್ದ ಚಿನ್ನು ಎರಡೆರಡು ಬಾರಿ ಕಿರುಚಿದಾಗ ನನಗೆ ದೂರದಲ್ಲಿ ಯಾರೋ ಕರೆದಂತಾಯಿತು. ಮೂರನೆಯ ಬಾರಿ ಕಿರುಚಿದಾಗ ಎದ್ದು ಕುಳಿತೆ “ ಅಯ್ಯೋ ಫ್ಲೈಟ್ ಮಿಸ್ ಆಗಲಿಲ್ವ”, “ಫ್ಲೈಟ್ ಹೋಯ್ತು”, ಲಗೇಜ್” , ಮೆಹಂದಿ,  ಶಾಲಿನಿ…. ಮತ್ತೆ ಆ ಜಗಳ ಇತ್ಯಾದಿ ಇತ್ಯಾದಿ ನೆನಪು ಮಾಡಿಕೊಂಡು ಲೈಟ್ ನೋಡಿದ ಬಳಿಕ ನನಗೆ ಅರಿವಾಯ್ತು “ಅಯ್ಯೋ! ನಾನು ಕನಸು ಕಂಡಿದ್ದು! “ಎಂದು ಮತ್ತೆ ಮತ್ತೆ ಕನಸನ್ನು ನೆನಪು ಮಾಡಿಕೊಂಡು  ಹಾಗೆ ಮಲಗಿದ್ದೆ. ಮತ್ತೆ ಚಿನ್ನು “ವ್ಯಾನ್ ಬೇಗ ಬರುತ್ತೆ” ಎಂದು ಎಚ್ಚರಿಸಿದಳು.

 ಮನಸ್ಸಿಲ್ಲದೆ ಎದ್ದು  ಕನಸಿನಲ್ಲಿ ಮಿಸ್ ಮಾಡಿಕೊಂಡ ಫ್ಲೈಟನ್ನು ನೆನಪಿಸಿಕೊಂಡು ಸ್ನಾನ ,ಪೂಜೆ ಮುಗಿಸಿ  ದೋಸೆ ಹಾಕಿ ತಿರುವಿ ಮತ್ತೆ ಬೇಯಿಸುತ್ತಾ ಹಾಟ್ ಬಾಕ್ಸ್ನೊಳಗೆ ಹಾಕುವಾಗಲೆ ಇನ್ನೂ ಹಳೆಯ ನೆನಪುಗಳು ,ಮರುಕಳಿಸುತ್ತಾ ಹೋದವು.  ಹೊಟ್ಟೆ ಹುಣ್ಣಾಗುವಂತೆ ನಗಲಾರಂಭಿಸಿದೆ. “ಯಾಕೆ? ಮಮ್ಮಿ ಒಬ್ಬರೇ ನಗುವುದು” ಎಂದು ಚಿನ್ನು ಕೇಳಿದಳು. “ಏನೋ ನೆನಪಾಯಿತು” ಅಂದೆ. “ಅದೇ ನಮ್ಮ ಸೋದರ ಮಾವ ಶ್ರೀನಿವಾಸ ತಾತ ಇದ್ರಲ್ಲ ಅವರು ನೆನಪಾದರು” ಎಂದು ಘಟನೆಯನ್ನು ಚುಟುಕಾಗಿ ಹೇಳಿದೆ.  “ನಯನನ ಮದುವೆ ಇನ್ನೆರಡು  ವಾರವಿತ್ತು ಮನೆಯಲ್ಲಿ ಎಲ್ಲರೂ ಮದುವೆ ಸಾಮಾಗ್ರಿ ಖರೀದಿಗೆಂದು ಹೋಗಿದ್ದರು, ಕಾಲಿಂಗ್ ಬೆಲ್ ಸದ್ದಾಯಿತು. ಸರಿ ಬಾಗಿಲು ತೆಗೆದರೆ ಶ್ರೀನಿವಾಸ ತಾತ ಅಲ್ಲಿದ್ದರು “ಬನ್ನಿ ಬನ್ನಿ” ಎಂದು ಅವರನ್ನು ಕೂರಿಸಿ ತಿಂಡಿಕಾಫಿ ಕೊಟ್ಟೆ ಆದರೆ ಅವರು  ತೆಗೆದುಕೊಳ್ಳುವ ಸ್ಥಿತಿಯಲ್ಲಿ  ಇರಲಿಲ್ಲ ಅವರ  ಮುಖದಲ್ಲಿ ಗಾಬರಿಯಿತ್ತು “ಮದುವೆಮುಂದಕ್ಕೆ ಹೋಯ್ತ’?   ಎಂದರು “ಇಲ್ಲ ಎಂದೆ ಮದುವೆ ನಿಂತು ಹೋಯ್ತ?”  ಎಂದರು “ಇಲ್ಲ!” ಎಂದೆ ಅಷ್ಟರಲ್ಲಿ  ಅಲ್ಲೇ ಟೇಬಲ್ ಮೇಲೆ ಇದ್ದ  ನಯನಳ ಮದುವೆ ಆಮಂತ್ರಣ ಪತ್ರಿಕೆ ನೋಡಿ ತಂತಾನೆ ನಗಲಾರಂಭಿಸಿದರು. ನನಗೆ ಗಾಬರಿ ಇದೇಕೆ ಹೀಗೆ” ಹುಷಾರಾಗೇ  ಇದ್ರಲ್ಲ ಅಂದುಕೊಂಡೆ ಸರಿ ! ನಾನು ಹೊರಡುವೆ  ಎಂದು ಎದ್ದು ನಿಂತು ಮನೆಯವರನ್ನೆಲ್ಲಾ ನಾನು ಕೇಳಿರುವುದಾಗಿ ತಿಳಿಸು ನಾನು ಇವತ್ತೆ ವರಪೂಜೆ ಅಂದುಕೊಂಡು ಬಂದೆ ಸರಿಯಾಗಿ ದಿನಾಂಕ ನೋಡಿರಲಿಲ್ಲ ಎಂದು ನಗುತ್ತಲೇ ಅವರಿಗಾದ ಮದುವೆ ದಿನಾಂಕ ಕುರಿತ ಗೊಂದಲವನ್ನು  ವಿವರಿಸಿದರು. ಪರವಾಗಿಲ್ಲ ಬಿಡಿ ಬರುವ ವಾರ  ಅತ್ತೆಯನ್ನೂ ಕರೆದುಕೊಂಡು ಬನ್ನಿ       ಎಂದೆ. ಇಲ್ಲ!  ಇಲ್ಲ! ನಾನು ಹೇಗೂ ಬಂದಿದ್ದೇನಲ್ಲಾ ಅವಳೇ ಮದುವೆಗೆ ಬರುತ್ತಾಳೆ   ಮದುವೆಗೆ ಎನ್ನುತ್ತಾ ನಗುತ್ತಲೇ ಹೊರಟರು” ಎಂದು ಹೇಳಿ ಮುಗಿಸಿಲ್ಲ. ಚಿನ್ನು ಮತ್ತೆ ಜೋರಾಗಿ ನಗಲಾರಂಭಿಸಿದಳು ಅರೆ…..!! ಅವರ್ಬಿಟ್ ಇವರ್ಬಿಟ್ ಅವರ್ಯಾರು ಅನ್ನೋಹಂಗೆ ನಿನಗೇನಾಯ್ತು? ಎಂದೆ.” ನಾನು ಮಧು ಬರ್ತಡೆ ಆದ ಮೇಲೆ ಅವರ ಮನೆಗೆ ಗಿಫ್ಟ್ ತೆಗೆದುಕೊಂಡು ಹೋಗಿದ್ದೆ ಅಲ್ವ” ಎಂದಳು. ಗಿಫ್ಟ್ ಹಿಡಿದುಕೊಂಡು ಅವರ ಮನೆ ಬಾಗಿಲು ಬಡಿದರೆ “ನಿನ್ನೆ ಕರೆದರೆ ಇವತ್ತು ಬಂದಿದ್ದೀಯ ಬಾ” ಎಂದು ಕರೆದು ಕೂರಿಸಿ ಸ್ವೀಟ್, ಕೇಕ್  ತಂದು ನನ್ನ ಮುಂದೆ  ಹಿಡಿದ. ತನ್ನ ತಪ್ಪನ್ನ ಇನ್ನೊಮ್ಮೆ ಹೇಳಲಾರದೆ ,ಮುರುಕು ಡಿಲೇಟೆಡ್ ವಿಶಸ್   ಹೇಳಿ  ಮನೆಗೆ ಬಂದೆ “  ಹೇಗ್ ಮಿಸ್ ಮಾಡಿಕೊಳ್ತಿವಿ ಅಲ್ವ? ಪರೀಕ್ಷೆ  ಟೈಮಲ್ಲಿ ಹೀಗಾದರೆ …..! ಎಂದು ಉದ್ಗಾರ  ಎಳೆದಳು.

 “ ಅನುಭವವೇ ಗುರು ಅಂತ ಅದಕ್ಕೆ ಹೇಳೋದು” ಎಂದು ನಾನು ಹೇಳಿದೆ. ಇನ್ನು  ಮುಂದೆ ಯಾವುದೇ ಪರೀಕ್ಷೆ, ಪೂಜೆ, ವೃತ ಫಂಕ್ಷನ್ಗಳೇ ಇರಲಿ ಪಂಕ್ಚುವಲ್ ಆಗಿ ಹೋಗಬೇಕು, ಮೊಬೈಲ್ನಲ್ಲಿ  ಅಲರಾಂ ಸೆಟ್ ಮಾಡಿ ಆದರೂ ಸರಿ,  ಕ್ಯಾಲೆಂಡರ್ ನಲ್ಲಿ  ಗುರುತು ಮಾಡಿಯಾರೂ ಸರಿ, ವಾರ್ಡ್ರೋಬ್ಗಳ ಮೇಲೆ ಚೀಟಿ ಅಂಟಿಸದರೂ ಸರಿ” ಎಂದೆ  ಅದಕ್ಕೆ ಅವಳು” ಕ್ಯಾಲೆಂಡರಿನಲ್ಲೂ ಸರಿಯಾಗಿ ಬರೆಯಬೇಕು ಸೆಪ್ಟೆಂಬರ್ನಲ್ಲಿ ಹೋಗಬೇಕಾದ ಕಾರ್ಯಕ್ರಮದ  ವಿವರವನ್ನು ಅಕ್ಟೋಬರ್ನಲ್ಲಿ ಬರೆಯಬಾರದಷ್ಟೇ” ಎಂದಳು. ಇಬ್ಬರೂ ನಕ್ಕೆವು ಗಡಿಯಾರ ನೋಡಿದರೆ ಸ್ವಲ್ಪ ಹೆಚ್ಚೇ ಮುಂದೇ ಓಡಿದಂತಿತ್ತು. ನೆನಪಿನ ಮಡಿಕೆಗಳನ್ನು  ತೆರೆಯಲು ಈಗ ಸಮಯವಿಲ್ಲ ಎಂದು ಹೇಳುತ್ತಾ ನೆನಪಿನ ಬುತ್ತಿಯನ್ನು, ಚಿನ್ನುವಿಗೆ ಮದ್ಯಾಹ್ನಕ್ಕೆ ಬೇಕಾದ  ಬುತ್ತಿಯನ್ನು ಮುಚ್ಚಿ ಯಥಾಪ್ರಕಾರ ನಿತ್ಯದ ಕೆಲಸಗಳಲ್ಲಿ ನಿರತಳಾದೆ. ಆದರೆ ಕಂಡ ಕನಸು, ಫಾರಿನ್  ಹೋಗುವ ಆತುರದ ಕನಸು ಮತ್ತೆ ಮತ್ತೆ ನನ್ನನ್ನು ಪ್ರಶ್ನಿಸುತ್ತದೆ.  ಯಾವಾಗ   ಇನ್ನೊಮ್ಮೆ ಫ್ಲೈಟ್ ಹತ್ತುವುದು ಎಂದು?

**************************************

  

Leave a Reply

Back To Top