ಶಿಶುತನದ ಹದನದೊಳು ಬದುಕಲೆಳಸಿ

ಪ್ರಬಂಧ

ಶಿಶುತನದ ಹದನದೊಳು ಬದುಕಲೆಳಸಿ

ಡಾ.ಲಕ್ಷ್ಮಿನಾರಾಯಣ ಭಟ್

ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ.

ನೆನಪಿದೆಯೇ ನಿನಗೆ?

ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು

ಮರಳು ಮನೆಗಳ ಕಟ್ಟಿ ಆಟವಾಡಿದ್ದು

ನಿನಗೆ ನೆನಪಿದೆಯೇ ನಿನಗೆ?

ಬಾ ಗೆಳೆಯ ಬಾರಯ್ಯಾ, ಆಟವಾಡೋಣ

ಬಾಲ್ಯದ ನೆನಪನು ಮರಳಿ ಕಟ್ಟೋಣ.

ನೆನಪಿದೆಯೇ ನಿನಗೆ?

ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ ಬಾಲ್ಯದ ದಿನಗಳು ಮತ್ತೆ ಜೀವ ತಳೆಯುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯತೊಡಗುತ್ತವೆ. ನೆನಪಿನ ದೋಣಿಯಲ್ಲಿ ತೇಲುತ್ತಾ, ಕಾಲಾತೀತ ಭಾವಪ್ರಪಂಚಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಆದರೆ ಯಾವುದೇ ದಿನಪತ್ರಿಕೆಯ ಮುಖಪುಟದ ಸುದ್ದಿ, ಅಂತೆಯೇ ಟಿವಿ ಚ್ಯಾನೆಲ್-ಗಳ ಆರ್ಭಟ ಓದಿದೊಡನೆ/ನೋಡಿದೊಡನೆ ಕನಸಿನ ಈ ಸುಂದರ ಲೋಕ ನುಚ್ಚುನೂರಾಗಿ ಹೋಗುತ್ತದೆ. ದುರಂತಗಳ ಸರಮಾಲೆ –- ರಾಜಕೀಯ ದೊಂಬರಾಟ, ರೇಪ್, ಕೊಲೆ, ಸುಲಿಗೆ, ವಂಚನೆ, ಭಯೋತ್ಪಾದನೆ, ಅಪಘಾತ, ಈಗಂತೂ ಕೊರೊನಾ ಕೊರೊನಾ ಸಹಸ್ರನಾಮ ಕಣ್ಣಿಗೆ ಹೊಡೆಯುವಂತೆ ರಾರಾಜಿಸುತ್ತಿರುತ್ತದೆ. ಕೇವಲ ಯೋಚಿಸಿದರೂ ಭಯ, ಜಿಗುಪ್ಸೆ ಹುಟ್ಟಿಸುವ ಮಾನವನ ಅತೀ ಆಸೆ, ತೀರದ ದಾಹ -– ಹಣ, ಅಧಿಕಾರ, ಭೋಗಲಾಲಸೆಗಳೇ ನಮ್ಮನ್ನು ಈ ದುಃಸ್ಥಿತಿಗೆ ದೂಡಿವೆ. ಇದಕ್ಕೆ ಕಾರಣ, ಪರಿಹಾರ ಏನೆಂದು ಯೋಚಿಸಬೇಡವೇ?

ಜೀವ ಪ್ರಪಂಚದಲ್ಲಿ ಮನುಷ್ಯ ಮಾತ್ರ ಕನಸು ಕಾಣಬಲ್ಲ, ನಗಬಲ್ಲ ಅದ್ಭುತ ಸಾಮರ್ಥ್ಯ ಪಡೆದಿದ್ದಾನೆ. ಇತರ ಯಾವ ಪ್ರಾಣಿಯೂ – ಪ್ರಾಣ ಇರುವುದೆಲ್ಲವೂ ‘ಪ್ರಾಣಿ’ಯೇ – ನಗುವುದೂ ಇಲ್ಲ, ಕನಸು ಕಾಣುವುದೂ ಇಲ್ಲ. ಹುಲಿ, ಸಿಂಹಗಳಂತಹ ಕೂರ ಪ್ರಾಣಿಗಳೂ ಕೂಡಾ ಭಾವನೆಗಳಿಗೆ, ನಾವು ತೋರುವ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಇದಕ್ಕೆ ಏಕೈಕ ಅಪವಾದವೆಂದರೆ ಮನುಷ್ಯ ಪ್ರಾಣಿ ಮಾತ್ರ! ಪ್ರೀತಿಗೆ ದ್ರೋಹ; ನಂಬಿಕೆ, ವಿಶ್ವಾಸಕ್ಕೆ ಪ್ರತಿಯಾಗಿ ಮೋಸ, ದಗಲ್ಬಾಜಿ ಎಲ್ಲವನ್ನೂ – ತನ್ನವರನ್ನೂ ಸೇರಿಸಿ – ಭಾವನಾರಹಿತವಾಗಿ, ಅಷ್ಟೇ ಚಾಣಾಕ್ಷತನದಿಂದ ಮನುಷ್ಯ ಮಾಡಬಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಏನು ಎಂದರೆ ಯಾವಾಗ ಮನುಷ್ಯ ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆವಾಗಲೆಲ್ಲಾ ಭಾವನೆಗಳಿಗೆ ಎರವಾಗುತ್ತಾನೆ. ಎಲ್ಲಿಲ್ಲದ ದುರಂಹಕಾರ ಆತನ ರಾಕ್ಷಸೀ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ವಿನಾಶದಂಚಿಗೆ ಆತನನ್ನು ತಳ್ಳುತ್ತದೆ. ಸುನಾಮಿ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳು, ಹಾಗೆಯೇ ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೊನಾ ವೈರಸ್-ನಂತಹ ಮಹಾವ್ಯಾಧಿಜನಕ ಹೆಮ್ಮಾರಿಗಳು ಉಂಟುಮಾಡುವ ವಿನಾಶಕ್ಕಿಂತಲೂ ಹೆಚ್ಚು ದುರಂತವನ್ನು ಕೆಟ್ಟ ಮನಸ್ಸಿನ ಕೇವಲ ಒಬ್ಬನೇ ಒಬ್ಬ ಮನುಷ್ಯ ಮಾಡಬಲ್ಲ! ಇದರಿಂದ ಬಿಡುಗಡೆ ಬೇಕಾದರೆ, ಮನುಷ್ಯ ಮತ್ತೆ ತನ್ನ ಬಾಲ್ಯದ ಮುಗ್ಧ, ಸ್ನಿಗ್ಧ ಭಾವಪ್ರಪಂಚಕ್ಕೆ ಹಿಂತಿರುಗಬೇಕು. ಸಹಜ ಮುಗ್ಧತೆ, ನಗು, ನಲಿವು, ಸಂಭ್ರಮಗಳ ಆ ದಿನಗಳನ್ನು ಪುನಃ ಜೀವಂತಗೊಳಿಸಬೇಕು. ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಭಾವ ಪ್ರಧಾನ ಮಾಧ್ಯಮಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಮನಸ್ಸನ್ನು ಉದಾತ್ತ ಭಾವಗಳತ್ತ ಹರಿಯಬಿಡಬೇಕು. ಕನಸು ಕಾಣುವ, ಶಿಶುವಿನೋಪಾದಿಯಲ್ಲಿ ನಿರ್ಮಲವಾಗಿ ನಗುವ ಸಹಜ ಪ್ರವೃತ್ತಿಗೆ ಮತ್ತೆ ಮರಳಬೇಕು. ಪ್ರಸಿದ್ಧ ಆಂಗ್ಲ ದಾರ್ಶನಿಕ ಕವಿ ವಿಲಿಯಂ ಬ್ಲೇಕ್-ನ (೧೭೫೭-೧೮೨೭) ‘Auguries of Innocence’ ಎಂಬ ಕವನದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ:

It is right it should be so

Man was made for Joy & Woe

And when this we rightly know

Thro the World we safely go

ಕಷ್ಟ, ಸುಖಗಳನ್ನು ಅನುಭವಿಸಲೆಂದೇ ದೇವರು ಮನುಷ್ಯನನ್ನು ಸೃಷ್ಟಿಸಿ ಈ ಪ್ರಪಂಚಕ್ಕೆ ತಂದ. ಇದರಲ್ಲಿ ಮನುಷ್ಯನಿಗೆ ಆಯ್ಕೆಯ ಅವಕಾಶವೇ ಇಲ್ಲ. ಎರಡನ್ನೂ ಅನುಭವಿಸಬೇಕು. ಹಾಗಿದ್ದಾಗ ಅದನ್ನು ಸಮಚಿತ್ತದಿಂದ ಸ್ವೀಕರಿಸುವುದೊಂದೇ ದಾರಿ. ಮಗುವಿಗೂ, ಅನುಭಾವಿಗೂ ಇರುವ ಸಾಮ್ಯತೆ ಎಂದರೆ ಈ ಸಮಚಿತ್ತತೆ; ಅನುಭಾವಿ ನಕ್ಕು ಸುಮ್ಮನಾಗುತ್ತಾನೆ, ಮಗು ಅತ್ತು, ನಗುತ್ತದೆ. ಮರುಕ್ಷಣ ನಕ್ಕದ್ದೇಕೆ, ಅತ್ತದ್ದೇಕೆ ಎಂಬುದನ್ನು ಮರೆತುಬಿಡುತ್ತದೆ. ದೊಡ್ಡವರು ನಾವು ಹೀಗಲ್ಲ. ಎಂದೋ ಆಗಿ ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನಿತ್ಯ ದುಃಖಿಗಳಾಗುತ್ತೇವೆ. ವಿಸ್ಮಯ ಎಂದರೆ ಇದು ‘ಸುಖದ ಕ್ಷಣಗಳಿಗೆ’ ಅನ್ವಯವಾಗುವುದಿಲ್ಲ. ಎಂದೋ ಅನುಭವಿಸಿದ ಸುಖವನ್ನು ಮತ್ತೆ ಮತ್ತೆ ನೆನಪಿಸಿಕೊಂಡರೆ ಆಗುವುದು ದುಃಖವೇ ಹೊರತು ಸಂತೋಷವಲ್ಲ!

ಬ್ಲೇಕ್-ನ ಕವನದ ಇನ್ನೊಂದೆರಡು ಸಾಲುಗಳನ್ನು ನೋಡೋಣ:

The Childs Toys & the Old Mans Reasons

Are the Fruits of the Two seasons

ಮಗುವಿನ ಆಟಿಕೆಗಳೇ ಅದರ ಪ್ರಪಂಚ ಹಾಗೂ ಸರ್ವಸ್ವ. ಮಲಗಿ ನಿದ್ರಿಸುವಾಗಲೂ ಒಂದು ಗೊಂಬೆಯನ್ನೋ, ಅಥವಾ ಇನ್ಯಾವುದಾರೊಂದು ಆಟದ ವಸ್ತುವನ್ನೋ ಎದೆಗವಚಿಕೊಂಡು ಮಗು ಸುಖ ನಿದ್ರೆಗೆ ಜಾರುವುದನ್ನು ನಾವೆಲ್ಲಾ ಕಂಡವರೇ. ಅಂತೆಯೇ ಜೀವನ ಸಂಧ್ಯಾಕಾಲದಲ್ಲಿರುವ ಒಬ್ಬ ಹಿರಿಯ ತನ್ನ ಅನುಭವದಿಂದ ಮಾಗಿ, ಹಣ್ಣಾಗಿ, ಪಕ್ವವಾಗಿರುತ್ತಾನೆ. ಈಗ ಆ ಹಿರಿಯನ ನಿಜವಾದ ಗಳಿಕೆ, ಆಸ್ತಿ ಎಂದರೆ ಈ ಅನುಭವದ ಮೂಟೆಗಳೇ. ಅವು ಸುಖಾಸುಮ್ಮನೆ ಬಂದವುಗಳಲ್ಲ. ಪ್ರತಿಯೊಂದು ಅನುಭವದ ಹಿಂದೆಯೂ ಒಂದೊಂದು ಕಾದಂಬರಿಗಾಗುವಷ್ಟು ಸರಕು ಇದ್ದಿರಬೇಕು. ಅವನ ಮುಖದ ಸುಕ್ಕುಗಳೇ ಅದಕ್ಕೆ ಸಾಕ್ಷಿ. ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಅವನು ನಗುವಾಗ ಅದೆಷ್ಟೋ ಅನುಭವಗಳು ಸದ್ದಿಲ್ಲದೇ ತೂರಿಹೋಗುತ್ತಾವೋ ಏನೋ! ವಾರ್ಧಕ್ಯ ಎಂದರೆ ಮತ್ತೆ ಶಿಶುತನಕ್ಕೆ ಜಾರುವುದು: ಹಣ್ಣೆಲೆಯನ್ನು ನೋಡಿ ಚಿಗುರೆಲೆ ಹಾಸ್ಯ ಮಾಡುವುದೂ ಉಂಟು. ಸಂದಿಗ್ಧ ಕಾಲದಲ್ಲಿ ಕಿರಿಯನಾದವನು ಹಿರಿಯನೊಡನೆ ಪರಾಮರ್ಶೆ ಮಾಡುವುದೂ ಉಂಟು. ತೀರಾ ಚಿಕ್ಕವನಾದರೆ ಕಥೆ ಹೇಳು ಎಂದು ಗೋಗರೆಯುವುದೂ ಉಂಟು. ಹೀಗೆ ಮಗುವಿಗೂ ಮುದಿಯನಿಗೂ ಬಿಡಿಸಲಾರದ ನಂಟು ಉಂಟೇ ಉಂಟು. ಮಗುವಿಗೆ ಆಟವಾಡಲು ಓರಗೆಯ ಸಮವಯಸ್ಕ ಮಕ್ಕಳಿಲ್ಲದಿದ್ದರೆ ಒಳ್ಳೆಯ ಜತೆ ಅಂದರೆ ಆಜ್ಜ, ಅಜ್ಜಿಯೇ ಅಲ್ಲವೇ? ಏಕೆಂದರೆ ಇಬ್ಬರಿಗೂ ಸಮಯದ ಒತ್ತಡ, ಧಾವಂತ ಇಲ್ಲ. ಎಲ್ಲವನ್ನೂ ನಿಧಾನವಾಗಿ ಮಾಡಿದರಾಯಿತು, ಸಲ್ಪ ಹೆಚ್ಚು ಕಡಿಮೆಯಾದರೂ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವ ವಾಸ್ತವ ಹಿರಿಯನಿಗೆ ಅನುಭವದಿಂದ ದಕ್ಕಿದರೆ, ಮಗುವಿಗೆ ಅದು ಸಹಜ ಪ್ರಾಪ್ತಿ. ಅದಕ್ಕಾಗಿಯೇ ಮರಳಿ ಬಾಲ್ಯಕ್ಕೆ ಹೋಗೋಣ. ಬದುಕಿನ ನಿತ್ಯದ ಜಂಜಾಟದಲ್ಲಿ ನಾವು ಕಳೆದುಕೊಂಡ ಆ ಶಿಶು-ಸಹಜ-ವರ್ತನೆಯನ್ನು ಮತ್ತೆ ಆವಾಹಿಸಿಕೊಳ್ಳೋಣ.

ಇದು ಕೇವಲ ಹಗಲುಕನಸು, ಸಾಧಿಸಾಲಾಗದ ಗೊಡ್ಡು ಆದರ್ಶ, ಕೈಲಾಗದವ ಮೈ ಪರಚಿಕೊಂಡಂತೆ ಎಂದೆಲ್ಲಾ ಅಂದುಕೊಂಡು ಒಳಗೊಳಗೇ ನೀವೂ ನಗುತ್ತಿಲ್ಲ ತಾನೇ? ಸರಿ ಹಾಗಾದರೆ, ಈ ನೆವದಿಂದಲಾದರೂ ನಿಮ್ಮ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬಂತಲ್ಲ, ಅಷ್ಟೇ ಸಾಕು ನನಗೆ. ಈಗ ನೋಡಿ, ನಕ್ಕು ಹಗುರಾಗುವುದೊಂದೇ ಇದಕ್ಕಿರುವ ಪರಿಹಾರ ಎಂದು ನೀವೂ ನಂಬುತ್ತೀರಲ್ಲ? ಹಾಗಾದರೆ ಒಮ್ಮೆ ಜೋರಾಗಿ ನಕ್ಕುಬಿಡಿ. ನಮಸ್ಕಾರ.

****************************

2 thoughts on “ಶಿಶುತನದ ಹದನದೊಳು ಬದುಕಲೆಳಸಿ

    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

Leave a Reply

Back To Top