ಕವಿತೆ
ಗಮ್ಯದಾಚೆ
ವಿಜಯಶ್ರೀ ಹಾಲಾಡಿ
ಧೂಪ. ಹಿಡಿದು ಊರಿಡೀ
ಘಮಲು ಹತ್ತಿಸುತ್ತ
ಅಲೆವ ಅವಳ
ಕೋಮಲ ಪಾದಕ್ಕೆ
ತುಂಬು ಹೆರಳ ಗಂಧಕ್ಕೆ
ಜೀವವಿದೆ. ….
ಮಣ್ಣಿನಂತೆ ನೀರಿನಂತೆ
ಕಡಲು -ಗಾಳಿಯಂತೆ
ನಾರಿನ ಬೇರು ಅರೆಯುತ್ತ
ಅರೆಮುಚ್ಚಿದ ಕಣ್ಣೆವೆ
ಆಳದ ಹೊಳಪಿನೊಂದಿಗೆ
ಮಾತಿಗಿಳಿಯುತ್ತಾಳೆ
ತುಟಿ ಲಘು ಕಂಪಿಸುತ್ತವೆ
ಅವಳ ಮೈಮಾಟಕ್ಕೆ
ಚಿರ ಯೌವನಕ್ಕೆ
ಮಿಂಚುಹುಳುಗಳ ಮಾಲೆ
-ಯೇ ಕಾಣ್ಕೆಯಾಗುತ್ತದೆ.
ಸಂಜೆಸೂರ್ಯನ ಬೆವರೊರೆಸಿ
ಮನೆಗೆ ಹೆಜ್ಜೆಹಾಕುವ ನನ್ನ
ಕಂಡು ಅವಳ ಕಾಲ್ಗೆಜ್ಜೆ
ನಸು ಬಿರಿಯುತ್ತವೆ
ಗುಡಾರದೊಳಗಿಂದ ತುಸು
ಬಾಗಿದ ಅವಳ ಸ್ಪರ್ಶಕ್ಕೆ
ದಿನವೂ ಹಾತೊರೆಯುತ್ತೇನೆ
ಗುನುಗಿಕೊಳ್ಳುವ ಹಾಡೆಂಬ
ನೀರವಕ್ಕೆ ಪದವಾಗುತ್ತೇನೆ
‘ಲಾಟೀನು ಬೆಳಗುವುದೇಕೆ
ಇವಳೇ ಇಲ್ಲವೇ ‘ ಎಂದು
ಫಕ್ಕನೆ ತಿರುಗುವಾಗೊಮ್ಮೆ
ಗುಡುಗುಡಿಯ ಸೇದಿ
ನಿರುಮ್ಮಳ ಹೀರುತ್ತಾಳೆ
ಒದ್ದೆಮಳೆಯಾದ ನಾನು
ಛತ್ರಿ ಕೊಡವುತ್ತ ಕೈ
ಚಾಚಿದರೆ ತುಸುವೇ
ನಕ್ಕುಬಿಡುತ್ತಾಳೆ.
ಡೇರೆಯೊಳಗಿನ ಮಿಶ್ರ
ಘಮಕ್ಕೆ ಸೋತು ಅವಳ
ಅಲೆ ಅಲೆ ಸೆರಗ ಚುಂಗ
ನ್ನು ಸೋಕಿ ಬೆರಳು
ಹಿಂತೆಗೆಯುತ್ತೇನೆ …
ನಿಡಿದು ಉಸಿರ
ಬಿಸಿಗೆ ಬೆಚ್ಚುತ್ತ !
ದಿನವೊಂದು ಬರುತ್ತದೆ
ಹಿಡಿ ಗಂಟು ಇಟ್ಟಿದ್ದೇನೆ
ಹೂವಿನಾಚೆ
ಕಣಿವೆಯಾಚೆ
ಅವಳ ಜೊತೆ
ಪಯಣಿಸಿಯೇ
ತೀರುತ್ತೇನೆ !
***********************************************************
ಚಿತ್ರಕೃಪೆ:ವಿಜಯಶ್ರೀ ಹಾಲಾಡಿ