ಪುಸ್ತಕ ಸಂಗಾತಿ

ಹುಳುಕ ಹೂರಣದ ಹೋಳಿಗೆ ತೋರಣ

‘ರಾಯಕೊಂಡ’ ಕರಣಂ ಪವನ ಪ್ರಸಾದರ ಬಹುನಿರೀಕ್ಷಿತ ಕಾದಂಬರಿ. ಕಾನ್ಕೇವ್ ಪ್ರಕಾಶನ ಇದನ್ನು ಪ್ರಕಟಿಸಿದೆ. ನನ್ನಿ, ಗ್ರಸ್ತ, ಕರ್ಮ ಕಾದಂಬರಿಗಳನ್ನು, ಕರಣಂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು.

ಅವರೇ ಹೇಳಿಕೊಂಡಂತೆ ಇದು ಡಾರ್ಕ್ ಹ್ಯೂಮರ್ ಪ್ರಕಾರಕ್ಕೆ ಸೇರುವ ಕಾದಂಬರಿ. ಈ ವಿಭಾಗವು ಸಾಮಾನ್ಯವಾಗಿ ನಿಷೇಧವೆಂದು ಭಾವಿಲ್ಪಡುವ ವಿಷಯದ ಬೆಳಕನ್ನು ಚೆಲ್ಲುತ್ತದೆ. ವಿಶೇಷವಾಗಿ ಗಂಭೀರ ಅಥವಾ ವಿಷಾದದಿಂದ ಕೂಡಿದ ವಿಷಯಗಳನ್ನು ಕಪ್ಪು ಹಾಸ್ಯದ ಮಾದರಿಯಲ್ಲಿ ಚರ್ಚಿಸುತ್ತದೆ. ಎಂ. ವ್ಯಾಸರ ಕಪ್ಪು ದರ್ಶನದ ಕಥೆಗಳೇ ಬೇರೆ, ಅದನ್ನು ಇಲ್ಲಿ ಚರ್ಚಿಸದೇ ಮುಂದಕ್ಕೆ ಹೋಗೋಣ ( ಕಾದಂಬರಿಯಲ್ಲಿಯೂ ನಿರೂಪಕರು ಇದೇ ಧಾಟಿಯಲ್ಲಿ ಸಾಗುತ್ತಾರೆ).

ಈ ಕಾದಂಬರಿಯ ಕೊನೆಕೊನೆಗೆ ಸ್ವಲ್ಪ ಈ ಡಾರ್ಕ್ ಹ್ಯೂಮರ್ ನ ಫೀಲಿಂಗ್ ಆಗುತ್ತದೆ. ಅದೇನೇ ಇರಲಿ, ಒಟ್ಟು ಹತ್ತು ಅಧ್ಯಾಯಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಕಥೆಗಳ ತೋರಣಕ್ಕೂ ಮುನ್ನ ಪಾತ್ರಗಳ ಸಂಬಂಧ ಸೂಚಿಯಿದೆ. ಗೋಪಾಲಕೃಷ್ಣ ಪೈಗಳ ಸ್ವಪ್ನ ಸಾರಸ್ವತ ಮತ್ತು ನಾ. ಮೊಗಸಾಲೆ ಅವರ ‘ ಉಲ್ಲಂಘನೆ’ ಕಾದಂಬರಿಯಲ್ಲಿ ಇದನ್ನು ನಾವು ಕಾಣಬಹುದು. ಮಿರ್ಜಿ ಅಣ್ಣಾರಾಯರ ‘ ನಿಸರ್ಗ’ , ಎಸ್. ಎಲ್ ಭೈರಪ್ಪನವರ ‘ಅನ್ವೇಷಣೆ’ ಆಗಾಗ ನೆನಪಾಗುತ್ತದೆ. ಭೈರಪ್ಪನವರು ಪರ್ವದಲ್ಲಿ ಪಾತ್ರಗಳ ಮುಖೇನ ಮಹಾಭಾರತವನ್ನು ಹೇಳುವ ಧಾಟಿಯಲ್ಲಿ ರಾಯಕೊಂಡದ ನಿರೂಪಣೆಯಿದೆ.

ರಾಯಕೊಂಡದ ಮೂಲಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದ ಪ್ರಾದೇಶಿಕ ಸೊಗಡನ್ನು ತುಂಬಾ ಚೆನ್ನಾಗಿ ಪವನ ಪ್ರಸಾದರು ಕಟ್ಟಿಕೊಟ್ಟಿದ್ದಾರೆ. ಆದರೆ ತೆಲುಗು ಲವಲೇಶವೂ ಗೊತ್ತಿಲ್ಲದವರಿಗೆ ಸಂಭಾಷಣೆಗಳು ತೊಂದರೆಕೊಡುತ್ತವೆ. ಅಮ್ಮಿ ಅತ್ತೆ, ಕಿಟ್ಟಪ್ಪ, ಚಿರತೆ ಪದ್ದಣ್ಣ ಪಾತ್ರಗಳ ಪೋಷಣೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಗುಂಡ ಮತ್ತು ಸೂಜಿ ; ಅದೇ ಅದೇ ಸಲಿಂಗ ಕಾಮ ಮತ್ತು ಅನೈತಿಕ ಸಂಬಂಧಗಳ ಕಥೆಗಳು. ಮತ್ತೆ ಮಧು ಪಾತ್ರ ಅದೇ ಕೆಲಸ ಮಾಡುತ್ತದೆ. ಪಾತ್ರಗಳ ಮೂಲಕ ಹೇಳಿಸಲಾಗದ ಅಭಿಪ್ರಾಯ, ನಿಲುವನ್ನು ನಿರೂಪಕ ಮುಂದೆ ನಿಂತು ಹೇಳುವುದು ಅಭಾಸ ಎನ್ನಿಸುತ್ತದೆ. ಮದುವೆಯಾಗದ ಹೆಣ್ಣುಮಕ್ಕಳನ್ನು ಕಾದಂಬರಿಯುದ್ದಕ್ಕೂ ಚಿತ್ರಿಸಿರುವ ರೀತಿಯ ಬಗ್ಗೆ ವಿಮರ್ಶಕರೇ ಬೆಳಕು ಚೆಲ್ಲುವುದು ಉಚಿತವೇನೋ! ಹೆಣ್ಣಿನ ಕುರಿತು ಕೆಲವು ಸಾಲುಗಳು ಡಿಸ್ಟ್ರಿಕ್ಟಿವ್ ಧಾಟಿಯಲ್ಲಿವೆ ಎಂಬ ಭಾವನೆ ಮೂಡದಿರದು. ತೆಲುಗು ರಾಜಕೀಯದ ರಕ್ತಸಿಕ್ತ ಅಧ್ಯಾಯ ಕಟ್ಟಿಕೊಡುವ ಪ್ರಯತ್ನ ಕೂಡ ಗಾಢವಾಗಿಲ್ಲ ಎಂದು ಪುಸ್ತಕ ಕೆಳಗಿಟ್ಟ ಮೇಲೆ ಭಾಸವಾಗುತ್ತದೆ. ಆದರೂ ಕರಣಂ ಅವರ ಹೊಸ ಪ್ರಯತ್ನವನ್ನು ಶ್ಲಾಘಿಸಲು ಭಾಷೆಯ ಪ್ರಯೋಗ, ಪಾತ್ರ ಚಿತ್ರಣ, ಕುಟುಂಬದ ಮಜಲುಗಳನ್ನು ತೆರೆದಿಡುವ ರೀತಿ ಸಾಕು.

ಒಟ್ಟಾರೆ ಕಾದಂಬರಿಯಾಗಿ ಸರಾಗವಾಗಿ ಓದಿಸಿಕೊಳ್ಳುವುದಿಲ್ಲವಾದರೂ, ಒಂದೆಡೆ ಸಿಗುವ ಕಥಾಗುಚ್ಛದ ಪರಿಣಾಮವನ್ನು ಬೀರಲು ಕಾದಂಬರಿಯು ಯಶಸ್ವಿಯಾಗುತ್ತದೆ.ಭೂಪತಿ ಶ್ರೀನಿವಾಸನ್ ಉತ್ತಮ ಮುಖಪುಟ ವಿನ್ಯಾಸ ಮಾಡಿದ್ದಾರೆ.

ಪ್ರಕಾಶಕರು ಎರಡನೇ ಮುದ್ರಣಕ್ಕೆ ಮುನ್ನ ಸಾಕಷ್ಟಿರುವ ಅಕ್ಷರ ದೋಷಗಳನ್ನು ತಿದ್ದುಪಡಿ ಮಾಡಿಸುವುದು ಒಳ್ಳೆಯದು. ಕಾದಂಬರಿ ಪ್ರಕಾರವನ್ನು ಇಷ್ಟಪಡುವ, ಧಾರಾವಾಹಿಗಳನ್ನು ಮೆಚ್ಚುವ ಜನರು ಒಮ್ಮೆ ಓದಲೇಬೇಕಾದ ಪುಸ್ತಕವಿದು.

***********************

ಡಾ. ಅಜಿತ್ ಹರೀಶಿ

Leave a Reply

Back To Top