ಹೀಗೊಂದು ವಿರಹ ಗೀತೆ

ಕವಿತೆ

ಹೀಗೊಂದು ವಿರಹ ಗೀತೆ

ಒತ್ತಿ ಉಕ್ಕುವ ಮನಕೆ ತಂಪೆರೆವ ಬಿಸುಪಿಲ್ಲ
ಎಲ್ಲಿಂದ ಬರಬೇಕು, ನಾನು ಬಡವಿ…..
ಬಿಸುಪಿಲ್ಲದಾ ಭಯಕೆ ತೆರೆಯದಾತನ ತೋಳು
ಅದನರಿತ ಮೇಲೂ.. ಆತ ಬಡವ…

ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತು
ಒಲವಿತ್ತು ನಾ -ನೀನು ಬೇಧವಿರದೇ
ನಿನ್ನೊಳಗೆ ನಾನು, ನನ್ನೊಳಗೆ ನೀನೆಂಬುವುದು
ಮುದವಿತ್ತು ಸಂಗೀತ ಲೋಪವಿರದೇ

ಈಗ ನಿಶ್ಶಬ್ದದಲಿ ಈಟಿಯಂತೆಯೆ ಇರಿವ
ನಿನ ಮೌನ ಸಹಿಸುವುದು ಕಷ್ಟ ಎನಗೆ
ಇಷ್ಟ ಇರದಿದ್ದರೂ ನನ ಮಾತು ಜೋರಾಗಿ
ಗುಡುಗು ಸಿಡಿಲುಗಳಂತೆ ಶಬ್ದ ಕೊನೆಗೆ

ಕೊಟ್ಟರೆ ಕಳೆದುಬಿಡುವಂತೆಂಬ ನಿನ ಪ್ರೀತಿ
ಇಟ್ಟರೆ ಹಳಸಿಬಿಡುವಂತೆ ನಾನೂ
ಇಟಿಗೆ ಗಾರೆಯ ಹಾಕಿ ಕಟ್ಟುವುದೆ ಗೋಡೆಯನು
ಈಚೆ ನಾ ಮರುಗುತಿಹೆ, ಆಚೆ ನೀನು

ಒಡೆದ ಗೊಂಬೆಯ ಕೆಡವಿ ಸರಿಮಾಡಬಹುದೆಂತು
ಕೆತ್ತನೆಯು ನಮಗೊಲಿದ ವಿದ್ಯೆಯೆಂದು
ಮರೆತುಹೋಯಿತೆ ಪ್ರೀತಿ ಅಂಟೆಂದು ಜೋಡಿಸಲು
ಚೂರಾದ ಹೃದಯಗಳ ಮಾಡಲೊಂದು

ಮೆಚ್ಚಿ ಆಡುವ ಮಾತು ಚುಚ್ಚುವಂತಾಯಿತು ಏಕೆ
ಬೆಚ್ಚಿಹೆನು, ಬೆದರಿಹೆನು ಏಕಾಂತದಿ
ಅಚ್ಚುಮೆಚ್ಚಿನ ಸೊಡರು ಕೊಚ್ಚಿ ಹೋಗುತಲಿಹಿದು
ಇಚ್ಛೆಯಿದ್ದರೂ ಉಳಿಸಿಕೊಳದ ಹಠದಿ…

*********************

2 thoughts on “ಹೀಗೊಂದು ವಿರಹ ಗೀತೆ

Leave a Reply

Back To Top