ಸಂವಿಧಾನ ಮತ್ತು ಮಹಿಳೆ.
ನೂತನ ದೋಶೆಟ್ಟಿ
1) ಅವಳು 23ರ ಹುಡುಗಿ. ಆಗಲೇ ಮದುವೆಯಾಗಿ ಎರಡು ಮಕ್ಕಳು. ಅಂದು ಮನೆಕೆಲಸಕ್ಕೆ ಬಂದಾಗ ಬಹಳ ಸಪ್ಪಗಿದ್ದಳು. ಬಾಯಿಯ ಹತ್ತಿರ ರಕ್ತ ಕರೆಗಟ್ಟಿತ್ತು.ಏನೆಂದು ಕೇಳುವುದು? ಇದೇನು ಹೊಸದಲ್ಲ. ಅವಳ ಕುಡುಕ ಗಂಡ ಹೊಡೆಯುತ್ತಾನೆ. ತನ್ನ ಕುಡಿತದ ದುಡ್ಡಿಗೆ ಅವಳನ್ನೇ ಪೀಡಿಸುತ್ತಾನೆ. ಪುಟ್ಟ ಇಬ್ಬರು ಮಕ್ಕಳ ಜೊತೆ ನಾಲ್ವರ ಸಂಸಾರದ ಹೊಣೆ ಅವಳ ಮೇಲಿದೆ. ವಾರದಲ್ಲಿ ಎರಡು ದಿನ ಗಂಡನಿಂದ ಹೊಡೆಸಿಕೊಂಡು ಬರುತ್ತಿದ್ದವಳು ಈಗ ದಿನವೂ ಬಡಿಸಿಕೊಳ್ಳುತ್ತಿದ್ದಾಳೆ. ಅವಳ ನೋವು ನೋಡಲಾಗದೆ, ” ತೂರಾಡುವವನಿಂದ ಹೊಡೆಸಿಕೊಳ್ಳುತ್ತೀಯಲ್ಲ. ಒಂದು ದಿನ ತಿರುಗಿ ಒಂದು ಬಾರಿಸಿಬಿಡು”, ಎಂದರೆ. ಅವಳದು . ” ಗಂಡನಿಗೆ ಹೇಗೆ ಹೊಡೆಯೋದು” ಎಂಬ ಮರುಪ್ರಶ್ನೆ.
2) ಅವಳು ವಿದ್ಯಾವಂತೆ. ಒಳ್ಳೆಯ ಸರ್ಕಾರಿ ನೌಕರಿಯಲ್ಲಿದ್ದಾಳೆ. ಅವಳ ವಿದ್ಯಾವಂತ, ಸರ್ಕಾರಿ ನೌಕರಿಯ ಪತಿ ಆಕೆಯ ಹಿಂಬಾಲಕ. ಎಲ್ಲಿಗೂ ಆಕೆಯನ್ನು ಒಬ್ಬಳೇ ಕಳಿಸುವುದಿಲ್ಲ. ಅವಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಕೊನೆಗೆ ತಾನು ದುಡಿಯುವ ಹಣಕ್ಕೂ ಅವಳಿಗೆ ಹಕ್ಕಿಲ್ಲ. ಅವಳು ಅವನಿಗೆ ಹಣದ ಥೈಲಿ. ಅವನು ಕೈಯಲ್ಲಿಟ್ಟಷ್ಟು ಹಣವನ್ನು ಮಾತ್ರ ಅವಳು ಖರ್ಚು ಮಾಡಬೇಕು. ಹಾಗೆಂದು ಅವಳಿಗೆ ತನ್ನ ಹಕ್ಕಿನ ಬಗ್ಗೆ ಜಾಗೃತಿ ಇಲ್ಲವೆಂದಲ್ಲ. ಆದರೆ ಗಂಡನೆದುರು ಅದು ಕೆಲಸ ಮಾಡುವುದಿಲ್ಲ.
3) ಅವಳಿಗೆ ತಾನು ಉದ್ಯೋಗ ಮಾಡುವುದರಲ್ಲಿ ಆಸಕ್ತಿ ಇಲ್ಲ. ಆದರೆ ಉದ್ಯೋಗ ಮಾಡುವ ಹೆಣ್ಣುಗಳ ಮನೆಯ ಪರಿಸ್ಥಿತಿ ಚೆನ್ನಾಗಿ ಇರದಿದ್ದರಿಂದಲೇ ಅವರು ಉದ್ಯೋಗ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ.
ಇವು ಮೂರು ತೀರ ಸಾಮಾನ್ಯ ಉದಾಹರಣೆಗಳು. ನಮ್ಮ ಸುತ್ತಮುತ್ತ ದಿನನಿತ್ಯ ಕಾಣುವಂಥವುಗಳೇ. ಇಂಥ ನೂರಾರು ಉದಾಹರಣೆಗಳನ್ನು ಕೊಡಬಹುದು. ಈ ಮೇಲಿನ ಮೂರನ್ನು ಈಗ ಗಮನಿಸೋಣ.
ನಮ್ಮ ಸಂವಿಧಾನ ಸಾರ್ವತ್ರಿಕವಾಗಿ ಆತ್ಮರಕ್ಷಣೆಯ ಹಕ್ಕನ್ನು ನೀಡಿದೆ. ಆರ್ಥಿಕ ಹಕ್ಕನ್ನು ನೀಡಿದೆ. ಉದ್ಯೋಗದ ಹಕ್ಕನ್ನು ನೀಡಿದೆ. ವಿದ್ಯಾಭ್ಯಾಸದ ಹಕ್ಕನ್ನು ನೀಡಿದೆ. ಇದರಲ್ಲಿ ಲಿಂಗಬೇಧವಿಲ್ಲ. ಹಾಗಿದ್ದರೆ ಈ ಮೂರು ಪ್ರಸಂಗಗಳು ನಮ್ಮೆದುರು ಬಂದುದಾದರೂ ಹೇಗೆ?
ನಮ್ಮ ದೇಶದಲ್ಲಿ ಅನೇಕ ಸಾಮಾಜಿಕ ಕಟ್ಟುಪಾಡುಗಳನ್ನು, ಅಡೆ-ತಡೆಗಳನ್ನು ಅನಗತ್ಯವಾಗಿ ನಿರ್ಮಿಸಲಾಗಿದೆ. ಗಂಡನೆಂದರೆ ದೇವರಿಗೆ ಸಮಾನ. ಪತಿಯೇ ಪರದೈವ. ಅವನ ಅಡಿಯಾಳಾಗಿ ಇರುವುದರಲ್ಲಿಯೇ ಸತಿಯ ಸುಖವಿದೆ. ಅವನು ಬೈದರೆ ಬೈಸಿಕೊಳ್ಳುವುದು, ಹೊಡೆದರೆ ಹೊಡೆಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ ಎಂಬ ಸಾಮಾಜಿಕ ಬಿಂಬಿಸುವಿಕೆಯಲ್ಲಿ ಬಹುತೇಕ ಹೆಣ್ಣುಗಳು ಬೆಳೆಯುತ್ತಾರೆ. ವಿದ್ಯಾವಂತರೂ ಇದಕ್ಕೆ ಹೊರತೇನಲ್ಲ. ಹಣೆಯ ಕುಂಕುಮವೆಂದರೆ ಗಂಡನ ಪ್ರತಿರೂಪವೆಂದು ನಂಬಿರುವ ಮಹಿಳೆಯರು ಇದ್ದಾರೆ. ಬೆಳಿಗ್ಗೆ ಏಳುವಾಗ ಅವರು ತಾಳಿಯನ್ನು ಕಣ್ಣಿಗೊತ್ತಿಕೊಂಡು ಏಳುತ್ತಾರೆ. ಕುಂಕುಮದ ಡಬ್ಬಿಯನ್ನು ಶುಕ್ರವಾರ ಬೇರೆಯವರ ಮನೆಯಲ್ಲಿ ಬಿಟ್ಟು ಬಂದೆ ಎಂದು ಗೋಳಾಡುವ ವಿಜ್ಞಾನ. ಪದವೀಧರರು ಕಾಣಸಿಗುತ್ತಾರೆ. ಇಂಥ ಸಾಮಾಜಿಕ ವಾತಾವರಣಕ್ಕೂ ವಿದ್ಯೆಗೂ ಯಾವುದೇ ಸಂಬಂಧವಿಲ್ಲ. ಅಂದು ಮೇಲೆ ಹಕ್ಕಿನ ಪ್ರಶ್ನೆಯೂ ಉದ್ಭವಿಸುವುದಿಲ್ಲ. ವಿದ್ಯಾವಂತರಲ್ಲೇ ಪರಿಸ್ಥಿತಿ ಹೀಗಿರುವಾಗ ಮೊದಲ ಉದಾಹರಣೆಯಲ್ಲಿ ಬರುವ ಅವಿದ್ಯಾವಂತ ಹುಡುಗಿಯ ಬಗ್ಗೆ ಏನು ಹೇಳುವುದು? ಹೆಣ್ಣೆಂದರೆ ಸಹನೆಗೆ ಇನ್ನೊಂದು ಹೆಸರು ಎಂದು ನಂಬಿಸಿರುವ ನಮ್ಮ ಪುರುಷ ಪ್ರಧಾನ ಸಮಾಜ ಅವಳು ತಗ್ಗಿ ಬಗ್ಗಿ ನಡೆಯುವಂತೆ ನೋಡಿಕೊಳ್ಳಲು ಅದಕ್ಕೆ ಧಾರ್ಮಿಕ ಬಣ್ಣವನ್ನೂ ನೀಡಿದೆ. ಕೌಟುಂಬಿಕ ಒತ್ತಡಗಳೂ ಇಲ್ಲಿ ಹೆಚ್ಚಿರುತ್ತವೆ. ಇದರಿಂದ ಇಂಥ ಪ್ರಕರಣಗಳು ಮನೆಯ ನಾಲ್ಕು ಗೋಡೆಗಳ ನಡುವೆ ಇತ್ಯರ್ಥವಾಗುತ್ತವೆ ಅಥವಾ ಬಂಧಿಯಾಗುತ್ತವೆ. ಸಂವಿಧಾನ ಕೊಡುವ ಜೀವಿಸುವ ಹಕ್ಕು, ಸಮಾನತೆಯ ಹಕ್ಕು ಮೊದಲಾದವು ಹಾಳೆಯ ಮೇಲೆ ಉಳಿದು ಬಿಡುತ್ತವೆ.
ಎರಡನೇ ಉದಾಹರಣೆಯಲ್ಲಿ ದುಡಿಮೆಯ ಹಕ್ಕು, ಆರ್ಥಿಕ ಹಕ್ಕುಗಳು ಪ್ರಶ್ನೆಗೊಳಪಡುತ್ತವೆ. ವಿದ್ಯಾವಂತ ಪತಿಯಿಂದಲೇ ತಿಳಿದೂ ಶೋಷಣೆಗೊಳಗಾಗುವ ವಿದ್ಯಾವಂತ ಪತ್ನಿಗೆ ತಾನು ಶೋಷಿಸಲ್ಪಡುತ್ತಿದ್ದೇನೆ ಎಂದು ಅನ್ನಿಸುವುದೇ ಇಲ್ಲ. ಇದು ಸ್ವಂತ ಹಕ್ಕಿನ ಚ್ಯುತಿಯಾಗಿಯೂ ಕಾಣುವುದಿಲ್ಲ.
ಮೂರನೇ ಉದಾಹರಣೆಯಲ್ಲಿ ಉದ್ಯೋಗದ ಹಕ್ಕಿನ ಪ್ರಶ್ನೆ ಇದೆ. ಉದ್ಯೋಗದ ಬಗ್ಗೆ ಇಂಥ ಮನೋಭಾವವಿರುವ ಹೆಣ್ಣುಗಳಂತೆ, ಅವಳು ಮನೆಯಲ್ಲಿದ್ದರೆ ಪುರುಷನೊಬ್ಬನಿಗೆ ಉದ್ಯೋಗ ದೊರೆಯುವುದಲ್ಲವೇ ಎಂದು ಮಾತಾಡುವವರನ್ನೂ ನಾವು ನೋಡಿದ್ದೇವೆ. ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿನ ಪ್ರಯೋಗದ ಸಂದರ್ಭವೇನಿತ್ತೋ ತಿಳಿಯದು. ಆದರೆ ನಮ್ಮ ಸಮಾಜದಲ್ಲಿ ಇದರ ಬಳಕೆ ಸೀಮಿತ ಅರ್ಥದಲ್ಲೇ ಇದೆ. ಉದ್ಯೋಗ ನೀಡಬಹುದಾದ ಸಾಮಾಜಿಕ, ಆರ್ಥಿಕ, ನೈತಿಕ ಸ್ಥೈರ್ಯದ ಅರಿವು ತೀರ ಇತ್ತೀಚಿನವರೆಗೂ ಬಹಳ ಕಡಿಮೆ ಇತ್ತು. ಕಳೆದ ಕೆಲ ದಶಕಗಳಿಂದ ಮಹಿಳೆ ಉದ್ಯೋಗ ಮಾಡುವುದು ಅನಿವಾರ್ಯತೆಯಿಂದ ಸಹಜತೆಯತ್ತ ಹೊರಳಿದೆ ಎಂಬುದೇ ಸಮಾಧಾನ. ಅದರಂತೆ ದುಡಿಯುವ ಹೆಣ್ಣುಗಳನ್ನು ಹೀನವಾಗಿ ನೋಡುವ ಮನಸ್ಥಿತಿಯಿಂದ , ಗೌರವದ ಹಂತವನ್ನು ದಾಟಿ ಇಂದು ಸಹಜತೆಗೆ ತಿರುಗಿದ್ದುದರಲ್ಲಿ ಸಾಮಾಜಿಕ ಜಾಗೃತಿಯ ಪಾಲೇ ಹೆಚ್ಚಿದೆ.
ಕೇವಲ ಮೂರು ಉದಾಹರಣೆಗಳ ಸೀಮಿತ ಪರಿಶೀಲನೆ ಇದು. ಮಹಿಳಾ ಲೋಕವೆಂಬುದು ಅಗಾಧ. ಅದರಲ್ಲಿ ನೋವು, ಸಂಘರ್ಷ, ಹೋರಾಟ, ದೌರ್ಜನ್ಯ, ಹೇಳಿ ತೀರದ್ದು. ಕಾನೂನಿನ ಎಲ್ಲ ರಕ್ಷಣೆ ಇದ್ದರೂ ಸಾಮಾಜಿಕವಾಗಿ ಆಗಬೇಕಾಗಿರುವುದು ಬಹಳಷ್ಟಿದೆ. ನಮ್ಮ ಸಂವಿಧಾನದ ಬಗೆಗೆ ನನಗೆ ಅಪಾರ ಗೌರವವಿದೆ. ಸಂವಿಧಾನ ನೀಡಿರುವ ನಮ್ಮ ಹಕ್ಕುಗಳನ್ನು ಅರಿತು ಅವುಗಳ ಸರಿಯಾದ ಅನುಷ್ಠಾನವನ್ನು ಮಾಡಬೇಕಾಗಿರುವ ಗುರುತರವಾದ ಹೊಣೆ ನಮ್ಮೆಲ್ಲರ ಮೇಲಿದೆ.
******