ಕವಿತೆ
ಗಾಳಿ ಪಟ
ರೇಷ್ಮಾ ಕಂದಕೂರ.
ಕೆಲವೊಮ್ಮೆ ಏರು
ಇನ್ನೊಮ್ಮೆ ಇಳಿತ
ಹರಿಯ ಬಿಡದಿರು
ಸಮತೋಲನದ ಬಾಲಂಗೋಚಿ
ಗಾಳಿ ಬಂದ ಕಡೆ ಮುಖ ಮಾಡಿ
ಘಾಸಿಗೊಳಿಸುವೆ ಮನವ
ಅತ್ತಿಂದಿತ್ತ ಸುಳಿಯುತ
ಬಾನ ಚಿತ್ತಾರದಿ ತೇಲುತಿದೆ
ಬಾನಂಚಿಗೆ ಸಾಗುವ ಕನಸಿಗೆ
ಬಣ್ಣ ಹಚ್ಚುತ ಸಾಗಿದೆ
ಮಕ್ಕಳ ಮನ ತಣಿಸುತ
ಕುಣಿದಿದೆ ಎಲ್ಲ ಮರೆತು
ತಾಗದಿರಲಿ ಕುಗ್ಗುವ ಮಾತು
ಸಿಗದಿರಲಿ ಆಡಿಕೊಳ್ಳುವವರಿಗೆ
ಮೇಲೇರುವ ಧಾವಂತಕೆ
ನೂರೆಂಟು ವಿಘ್ನ
ಸಾವರಿಸಿ ಮೇಲೇರುತಲಿರು
ಬೇಕಾ ಬಿಟ್ಟಿತನ ಬೇಡ
ಸಾಕೆಂದು ಕುರದೇ
ಗುರಿಯ ಸಾಕಾರಕೇ
ಗುರುತರ ಜವಾಬ್ದಾರಿಯಲಿ
ಏರಿದವ ಕೆಳಗಿಳಿಯಲೇ ಬೇಕು
ಸೂರೆ ಮಾಡಿದವ ಸೆರೆಯಾಗುವ
ಎಲ್ಲವನು ಸುಸ್ಥಿತಿಯಲಿ ನೋಡು
ಬಾಳ ಬೆಳಗುವೆ ನಿರಾತಂಕದಿ.
**************************************