ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ – ಸಂಚಿಕೆ -7 ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು ಮುಖಾಮುಖಿಯಾದಾಗ ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು  ಮುಖಾಮುಖಿಯಾದಾಗ ಓಹ್! ನಮಸ್ಕಾರ ಸಾರ್!.. ಬನ್ನಿ..ಬನ್ನಿ.. ಹೀಗೆ ಬನ್ನಿ! ಇದೇ ನೋಡಿ! ನಮ್ಮ ಕವಿಗಳ ಮನೆಯ ಡ್ರಾಯಿಂಗ್ ರೂಂ,  ಎಷ್ಟು ವಿಶಾಲವಾಗಿದೆ ಅಲ್ವಾ. ಕೆಲವೇ ಕೆಲವು ಪೀಠೋಪಕರಣಗಳು, ಅವರಿವರು ಬಂದಾಗ, ಮುಖಕ್ಕೆ ಮುಖ ಕೊಟ್ಟು ಮಾತಾಡಲು, ಕೆಲವೊಮ್ಮೆ ಮುಖವಾಡ ತೊಟ್ಟು ಮಾತಾಡಲೂ. ಸ್ವರಗಳು ಕಂಪಿಸುವ ಮಾತುಗಳು, ಸ್ವರಗಳು ಸರೀಸೃಪದ ಹಾಗೆ ಹರಿದಾಡುವ ಮಾತುಗಳು, ಹಾವಿನಂತೆ ಬುಸುಗುಟ್ಟುವ ಮಾತುಗಳು, ಏರು ಸ್ವರ, ತಗ್ಗು ಸ್ವರದ ಬೆನ್ನೇರಿ ಥಳತಳಿಸುವ ಮಾತುಗಳು ಸಾಮಾನ್ಯವೇ. ಮಾತುಗಳು,  ಮಾತುಗಳು ಖಡ್ಗ ಹಿಡಿದು ಕಾದಿ ಮಾತು ಮಾತನ್ನು ತುಂಡರಿಸಿ ತುಂಡು ತುಂಡಾಗಿ ಮಾತುಗಳು ಕಸದ ಬುಟ್ಟಿ ಸೇರಿಯೋ ಅಥವಾ ಕಣ್ಣೀರಾಗಿ ಹರಿದೋ, ಕೊನೆಗೆ ಒಂದೇ ದೊಡ್ಡ ಮಾತು ಉಳಿದಂತೆ ಭಾಸವಾಗುತ್ತದೆ. ಮಾತುಗಳು ಮುಖಾಮುಖಿಯಾದವೆಂದರೆ, ಅಲ್ಲಿ ಯುದ್ಧವೇ ನಡೆಯಬೇಕೆಂದಿಲ್ಲ. ಮಾತುಗಳು ಪ್ರಣಯೋನ್ಮತ್ತ ಕಾಳಿಂಗಸರ್ಪಗಳ ಹಾಗೆ ಒಂದಕ್ಕೊಂದು ಸುತ್ತಿ  ಆಟವಾಡಿ, ಶಾಂತವಾಗಿ ಮಾತುಗಳು ಮೊಟ್ಟೆಯಿಟ್ಟು, ಕಾವು ಕೊಟ್ಟು ಹತ್ತಾರು ಮರಿಗಳಾಗಿ ಹರಿದಾಡುತ್ತವೆ. ಕೆಲವೊಮ್ಮೆ ಮಾತುಗಳು ಗಂಟಲೊಳಗೇ ಇಂಗಿ, ಮೌನ ಮೌನಕ್ಕೇ ಮುಖವಾಗುವುದೂ ಇದೆ. ಈ ಡ್ರಾಯಿಂಗ್ ರೂಂ ನಲ್ಲಿ, ಒಂದು ಕುರ್ಚಿ, ಟೇಬಲ್ಲು. ಆ ಕುರ್ಚಿಯಲ್ಲಿ ಕುಳಿತು, ರಾತ್ರೆ –  ಜಗತ್ತು ಮಲಗಿದಾಗ,  ಕಿಟಿಕಿಯಲ್ಲಿ ಇಣುಕುವ ಆಗಸದತ್ತ  ಕಣ್ಣು ನೆಟ್ಟರೆ, ಕೆಲವೊಮ್ಮೆ ತಾರೆಗಳ ಮಾತುಗಳು ಇಳಿದು ಬಂದು, ಮನಸ್ಸೊಳಗೆ ಆವಿಷ್ಕರಿಸುತ್ತವೆ. ಕೆ. ವಿ. ತಿರುಮಲೇಶ್ ಅವರ “ಮುಖಾಮುಖಿ” ಕವಿತೆಯಲ್ಲಿ ಒಂದು ದಷ್ಟ ಪುಷ್ಟ ಬೆಕ್ಕು,ಕವಿಯ ಡ್ರಾಯಿಂಗ್ ರೂಮ್ ಗೆ ನುಗ್ಗುತ್ತೆ.  ಅವರದ್ದೇ ಸಾಲುಗಳು ಹೀಗಿವೆ. “ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು ಹಠಾತ್ತನೆ ನಿಂತಿತು.  ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು. ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ. ತುಸು ಅಸಮಾಧಾನದಿಂದ ನನ್ನ ಕಡೆ ನೋಡಿತು. ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು ಮುಖ ತಿರುಗಿಸುವುದು ಎಂಬ ಒಂದು ವಿಧ ಅಘೋಷಿತ ಯುದ್ಧದಲ್ಲಿ ಇಬ್ಬರೂ ತೊಡಗಿದೆವು. ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ ಎಂದು ನನಗೆ ಗೊತ್ತಿರಲಿಲ್ಲ.” ಬಂದದ್ದು ಬೆಕ್ಕು.‌ ಪೀಚು ಪೀಚು ಬೆಕ್ಕಲ್ಲ,  ದಷ್ಟಪುಷ್ಟ ಬೆಕ್ಕು. ಅದು ಮನುಷ್ಯನ ಡ್ರಾಯಿಂಗ್ ರೂಂಗೆ ಬಂದದ್ದು ಪ್ರಾಣಿ ಮನುಷ್ಯನ ಮುಖಾಮುಖಿ ಎಂಬುದು ನೇರವಾದ ಅರ್ಥ. ಆಮೇಲೆ ಮನುಷ್ಯ ಮತ್ತು ಪ್ರಾಣಿಯ ಅಘೋಷಿತ ದೃಷ್ಟಿಯುದ್ಧ,ಕವಿತೆಯುದ್ದಕ್ಕೂ. ಈ ಕವಿತೆಯಲ್ಲಿ ಬಂದದ್ದು ನಿಜವಾದ ಬೆಕ್ಕು ಎಂದೇ ಅದರ ಅರ್ಥವೇ?. ಮನುಷ್ಯನ ಡ್ರಾಯಿಂಗ್ ರೂಂ, ಮನುಷ್ಯನ ಮನಸ್ಸು. ಆ ಮನಸ್ಸೊಳಗೆ ಒಂದು ಪ್ರಾಣಿ ಪ್ರಜ್ಞೆಯಿದೆ. ಮನುಷ್ಯ ಮೂಲತಃ ಪ್ರಾಣಿಯೇ ಆದ್ದರಿಂದ, ಅದು ದಷ್ಟಪುಷ್ಟ ಪ್ರಾಣಿ ಪ್ರಜ್ಞೆ.  ಮನುಷ್ಯನ ಮನಸ್ಸೊಳಗೆ, ವಿಕಸಿತ,ಚಿಂತನಶೀಲ, ವಿವೇಚನಾಶೀಲ ಪ್ರಜ್ಞೆಯೂ ಇದೆ. ಅದು ಕವಿ. ಈ ಎರಡೂ ಪ್ರಜ್ಞೆಯೊಳಗೆ ನಡೆಯುವ ದೃಷ್ಟಿ ಯುದ್ಧ ಈ ಕವಿತೆಯಾಗಬಹುದು. ಮೂರನೆಯದಾಗಿ, ಡ್ರಾಯಿಂಗ್ ರೂಂ, ಹೆಸರೇ ಹೇಳುವಂತೆ ಹೊಸ ಹೊಸ ಡ್ರಾಯಿಂಗ್ ಬರೆಯಲು ಉಪಯೋಗಿಸುವ ಕೋಣೆ. ಯಾವುದೇ ಹೊಸತನ್ನು ಬರೆಯುವಾಗ, ಹಳೆಯ, ವಿಚಾರಗಳು,ಹೊಸತನ್ನು ವಿರೋಧಿಸುತ್ತವೆ. ಬೆಕ್ಕು,ಪ್ರಾಣಿ, ಅದು ಮನುಷ್ಯನ ಹಳತು. ಡ್ರಾಯಿಂಗ್ ರೂಂ ನಲ್ಲಿ ಹೊಸತರ ಅನ್ವೇಷಣೆಯಲ್ಲಿ ತೊಡಗಿದಾಗ ದಷ್ಟ ಪುಷ್ಟವಾದ ( well established) ಬೆಕ್ಕು, ಹೊಸ ಡ್ರಾಯಿಂಗ್ ನ್ನು (ಚಿತ್ರ ಬಿಡಿಸುವುದನ್ನು) ವಿರೋಧಿಸುತ್ತೆ. ಹಾಗೆ ನಡೆಯುವುದು ದೃಷ್ಟಿಯುದ್ಧ. ವಿಚಾರಗಳ ಒಂದಕ್ಕೊಂದು ಮುಖಾಮುಖಿ, ವರ್ತಮಾನ ಸಂಧಿಯಲ್ಲಿ, ಭೂತ ಭವಿಷ್ಯಗಳ ಮುಖಾಮುಖಿ. ಇನ್ನೂ ಹತ್ತು ಹಲವು ದೃಷ್ಟಿಯುದ್ಧ ನಮಗೆ ದಿನಾಲೂ ಅನುಭವಗ್ರಾಹ್ಯವಾಗುತ್ತೆ. “ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ ಎಂದು ನನಗೆ ಗೊತ್ತಿರಲಿಲ್ಲ.” ಮುಖಾಮುಖಿಯ ಮುಖ್ಯ ಅಂಗ, ಕಣ್ಣು. ಕಣ್ಣು ಎಂದರೆ, ನೋಟ, ಒಳನೋಟ. ಕಣ್ಣಿನ ಮೂಲಕ ನಾವು ನೋಡುವುದು ಎಂದರೆ, ನಮ್ಮ ಬದುಕಿನಲ್ಲಿ ನಂಬಿದ, ಅಳವಡಿಸಿದ ಸಿದ್ಧಾಂತದ,ಸಂಪ್ರದಾಯದ ಮೂಲಕ ನೋಡುವುದು ತಾನೇ. ಮುಖಾಮುಖಿಯಾದ ಬೆಕ್ಕಿನ ಕಣ್ಣು, ನಿಶ್ಚಲವಾಗಿ ದೃಷ್ಟಿಯುದ್ಧಕ್ಕೆ ಅಣಿಯಾಗಿ ನಿಂತಾಗ, ಆ ಕಣ್ಣುಗಳು ಸ್ಥಿರವಾದ, ಅಚಲಾಗಿ ನಂಬಿದ, ಬದಲಾಗಲು ನಿರಾಕರಿಸುವ ಸಿದ್ಧಾಂತವೇ?. ತಿರುಮಲೇಶ್ ಅವರ ಅನನ್ಯ ಕವಿತೆ ಮುಖಾಮುಖಿಯ ಹಂದರ, ಕವಿಯ ಡ್ರಾಯಿಂಗ್ ರೂಂ ನೊಳಗೆ ನಡೆಯುವ ಬೆಕ್ಕು ಮತ್ತು ವ್ಯಕ್ತಿಯ ನಡುವಿನ ದೃಷ್ಟಿಯುದ್ಧ.  ಹಾಗಂತ, ಈ ಮುಖಾಮುಖಿಯನ್ನು ಪ್ರಾಣಿ ಮತ್ತು ಮನುಷ್ಯನ ನಡುವೆ ನಡೆಯುವ ಡೈನಾಮಿಕ್ಸ್ ಗೆ ಮಾತ್ರ ಸೀಮಿತ ಗೊಳಿಸಿದರೆ, ನಮ್ಮ ಕಣ್ಣು ಕೂಡಾ, ಕವಿ ಹೇಳಿದ, ಬೆಕ್ಕಿನ ನಿಶ್ಚಲ ಕಣ್ಣುಗಳ ಹಾಗೆ ಸ್ಥಿರವೂ, ಸೀಮಿತವೂ ಆಗುತ್ತವೆ. ಮುಖಾಮುಖಿ ಎಂಬ ಒಂದು ಸಹಜಕ್ರಿಯೆ, ನಮ್ಮ ಮನಸ್ಸೊಳಗೆ, ಮನಸ್ಸು ಮನಸ್ಸುಗಳ ನಡುವೆ, ಹಳೆ-ಹೊಸ ಜನರೇಶನ್ ಗಳ ನಡುವೆ, ಸಿದ್ಧಾಂತಗಳ ನಡುವೆ, ಕ್ರಿಯೆ-ಪ್ರತಿಕ್ರಿಯೆಗಳ ನಡುವೆ, ವೈರಸ್ಸು ಮತ್ತು ಬಿಳಿ ರಕ್ತ ಕಣಗಳ ನಡುವೆ, ಮಿಸೈಲು-ಮಿಸೈಲುಗಳ ನಡುವೆ, ತಾರೆಯೊಳಗೆ ನಿರಂತರ ನಡೆಯುವ ಗುರುತ್ವಾಕರ್ಷಣ ಶಕ್ತಿ ಮತ್ತು ಪರಮಾಣು ಸಂಯೋಗದಿಂದ ಉತ್ಪನ್ನವಾದ ಉಷ್ಣಚೈತನ್ಯದ ನಡುವೆ, ಮತ್ತು ನನ್ನ ಅರಿವಿಗೆ ಮೀರಿದ ನೂರಾರು ಪ್ರಕ್ರಿಯೆಗಳಲ್ಲಿ ನಡೆಯುತ್ತಲೇ ಇರುತ್ತೆ.  ಹೈದರಾಬಾದ್ ನ ಕನ್ನಡ ಕವಿ, ಪ್ರಹ್ಲಾದ ಜೋಶಿಯವರ ಕವನ, ” ಕವಿ – ಕವಿಪತ್ನಿ ಯರ ಸಂವಾದ ” ಇಂತಹ ಒಂದು ಸಾತ್ವಿಕ ಮುಖಾಮುಖಿಯ, ಕಣ್ಣಿಗೆ ಕಣ್ಣಿಟ್ಟು ನೋಡುವ,ಅವಲೋಕಿಸುವ ಕವನ. ಈ ಕವಿತೆಯಲ್ಲಿ, ಕವಿ ಮತ್ತು ಕವಿ ಪತ್ನಿಯರ ಸಂಭಾಷಣೆಯೇ ಕವಿತೆಯ ತಂತ್ರ. ಕವಿತೆಯಲ್ಲಿ  ಮನೆಯಾಕೆ, ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ತರಲು ಕವಿಯನ್ನು ಮಾರ್ಕೆಟ್ ಗೆ ಕಳುಹಿಸುತ್ತಾಳೆ. ಕವಿ ಮಾರ್ಕೆಟ್ ನಿಂದ ವಾಪಸ್ ಬಂದಾಗ, ಕವಿ ತೊಟ್ಟ ಬಿಳಿ ಬಟ್ಟೆ ಪೂರಾ ಮಣ್ಣು ಮಣ್ಣಾಗಿದ್ದನ್ನು ನೋಡಿ ತನ್ನ ಸಾತ್ವಿಕ ಅಸಹನೆಯನ್ನು ಪ್ರಕಟಿಸುವುದೇ ಮೊದಲ ಪ್ಯಾರಾ. ” ಕವಿಯ ಪತ್ನಿ : ಏನಾಗ್ಯದ ನೋಡರ‍್ಯಾ ಸ್ವಲ್ಪನ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣೂ ಬಾರಾ ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ ಎಲ್ಲಾ ನನ್ನ ಹಣೇಬಾರಾ ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶ ನೋಡ್ತಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು ತೆರೆದು ಕಲ್ಪನಾಲೋಕ ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು ನಾ ಕೊಟ್ಟ ಸಾಮಾನಿನ ಪಟ್ಟಿ ಥಟ್ಟನೆ ನೆನಪಾಗಿ ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ ಜಾರಿ ಬಿದ್ದಿರಬೇಕು ಏನು ಮಾಡಲಿ ಎಲ್ಲ ನನ್ನ ಹಣೇಬಾರಾ ಎಷ್ಟು ಹಚ್ಚಿದ್ದೆ ಸಾಬೂಣು ಬಾರಾ” ಇಲ್ಲಿ ಕವಿ ಪತ್ನಿ , ನೆಲ ಕಚ್ಚಿ ನಿಂತು, ಮನೆ ನಡೆಸುವ, ಜವಾಬ್ದಾರಿ ಹೊತ್ತವಳು. ಹಸಿವೆಯಾದರೆ, ಊಟ ಬಡಿಸಬೇಕು ತಾನೇ. ಕವಿತೆ, ಹಾಡು, ಭಾವನೆ ಬಡಿಸಿದರೆ ಹೊಟ್ಟೆ ತುಂಬಲಾರದು. ಆಕೆ ಒಂದು,ಸಾತ್ವಿಕ, ಸಾಂಸಾರಿಕ,  ಭೌತಿಕ ಪ್ರಜ್ಞೆಗೆ ಪ್ರತಿಮೆ. “ಸ್ವಲ್ಪನ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣೂ ಬಾರಾ ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ ಎಲ್ಲಾ ನನ್ನ ಹಣೇಬಾರಾ” ಎಂತಹ ಸಾತ್ವಿಕ, ಸಾಂಸಾರಿಕ, ವಾಸ್ತವ ಪ್ರಜ್ಞೆ. ಗಂಡನ ಬಟ್ಟೆ,ಸಾಬೂನು ಹಚ್ಚೀ ಹಚ್ಚೀ ತಿಕ್ಕಿ ತೊಳೆದು ಗಂಡನ ರೂಪಕ್ಕೆ ಸ್ವಚ್ಛತೆಯನ್ನು ಹೊಳಪನ್ನೂ ಕೊಟ್ಟರೆ, ಆತ ಮಣ್ಣು ಮೆತ್ತಿ ರಮರಾಡಿ ಮಾಡ್ಕೊಂಡು ಬರಬೇಕೇ. ಎಲ್ಲಾ ನನ್ನ ಹಣೇಬರಹ ಎನ್ನುವ ಆಕೆ ಹಳ್ಳಿಯ,ಮುಗ್ಧ ಪ್ರಜ್ಞೆ. “ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶ ನೋಡ್ತಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು ತೆರೆದು ಕಲ್ಪನಾಲೋಕ ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು” ಆಕೆ, ಕವಿಯ ಕಲ್ಪನಾ ಸಾಮ್ರಾಜ್ಯದ ಪರಿಚಯ ಕೊಡುವ ಸಾಲುಗಳಿವು. ಈ ಸಾಲುಗಳಲ್ಲಿ ಕವಿಯ ಪ್ರಜ್ಞೆ ನೆಲೆ ನಿಂತಿರುವ, ಭಾವ ಜಗತ್ತು, ಕಲ್ಪನಾ ಜಗತ್ತು ಆಕೆಯ ಮಾತುಗಳಲ್ಲಿ ಪ್ರಕಟವಾಗುತ್ತೆ. ಅದು ನಿಜವೂ ತಾನೇ. “ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ ಜಾರಿ ಬಿದ್ದಿರಬೇಕು” ಕವಿಯ ಕಾವ್ಯಜಗತ್ತಿನಿಂದ ವಾಸ್ತವ ಜಗತ್ತಿಗೆ ಆತ ಜಾರಿ ಬಿದ್ದು ಅಂಗಿ ಕೊಳೆಯಾಗಿರಬಹುದು ಎಂದು ಆಕೆಯ ಅಂಬೋಣ. ಈ ಪ್ಯಾರಾದಲ್ಲಿ, ಕವಿ ಪತ್ನಿಯ, ವಾಸ್ತವ,ಸಾಂಸಾರಿಕ,ಭೌತಿಕ ಪ್ರಜ್ಞೆ ಮತ್ತು ಕವಿಯ ಭಾವನಾತ್ಮಕ, ಕಲ್ಪನಾ ಪ್ರಜ್ಞೆಗಳ ನಡುವೆ ಮುಖಾಮುಖಿ ಸಂಭವಿಸಿದೆ. ಈ ಸಂವಾದದಲ್ಲಿ ಈ ಎರಡೂ ಪ್ರಜ್ಞೆಗಳು,ಅತ್ಯಂತ ಸಾತ್ವಿಕವಾಗಿ ತಾಕಲಾಡುತ್ತವೆ. ಆಕೆ ಕವಿಯನ್ನು ಭಾವನೆಯ ಲೋಕದಿಂದ ಸಾಬೂನು ಹಾಕಿ ತೊಳೆದು ಪುನಃ ವಾಸ್ತವಕ್ಕೆ  ತರುವ ಪ್ರಯತ್ನ ಮಾಡುತ್ತಲೇ, ಮಾಡುತ್ತಲೇ ಇರುತ್ತಾಳೆ. ಮುಂದಿನ ಪ್ಯಾರಾದಲ್ಲಿ ಕವಿ, ಸಾಮಾನು ತರಲು ಹೋದಾಗ ರಸ್ತೆಯಲ್ಲಿ,  ತನ್ನ ಮತ್ತು  ನೀಲ್ ಆರ್ಮ್‌ಸ್ಟ್ರಾಂಗ್ ನ ( ಚಂದ್ರನ ಮೇಲೆ ಮೊದಲು ಕಾಲಿಟ್ಟ ವ್ಯೋಮಯಾತ್ರಿ) ನಡುವಿನ  ಸಂಭಾಷಣೆಯನ್ನು ಹೆಂಡತಿಗೆ ವಿವರಿಸುತ್ತಾನೆ. ಚಂದ್ರನ ಬಗ್ಗೆ ಕವಿಗಳ ವರ್ಣನೆ ಕೇಳಿ ಚಂದಿರನ ಮೇಲೆ ಕಾಲಿಟ್ಟ ವ್ಯೋಮಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಗೆ  ಅಲ್ಲಿ ,ಬರೇ ಮಣ್ಣು ಕಂಡು ಭ್ರಮನಿರಸನವಾದಾಗ ಆತನ ಪ್ರತಿಕ್ರಿಯೆ, ಕವಿಯತ್ತ, ಹೇಗಿರಬಹುದು?  ಕವಿತೆಯ ಸಾಲುಗಳು ಹೀಗಿವೆ. “ಕವಿ: ಸುಮ್ಮನಾಗು ಮಾರಾಯ್ತಿ, ಗುಟ್ಟಾಗಿ ಹೇಳ್ತೀನಿ ರಟ್ಟಾದರ ನಮ್ಮರ‍್ಯಾದಿ ಪ್ರಷ್ನಿ ಹೊಂಟಿದ್ದೆ ಹಿಡಿದು ನಂದಾರಿ ನೀನಂದದ್ದು ನೆನಪಿನೊಳಗಿಟ್ಟು ಕವಿತೆ ರಚಿಸುವ ಗೀಳು ಬಿಟ್ಟು ಸೀದಾ ರಸ್ತೆ ಮ್ಯಾಲೆ ನನ್ನ ಕಣ್ಣು ನೆಟ್ಟು ಮಾಡಲಿಲ್ಲ ಕವಿತೆಗೆ ವಿಷಯ ಹುಡುಕೊ ಉಸಾಬರಿ ಅರಳಿದರೆ ಅರಳಲಿ ಎಂದೆ ಹೂವು ಕೆರಳಿದರೆ ಕೆರಳಲಿ ಭಾವ ಇದ್ದರೆ ಇರಲಿ ರಮ್ಯ ಸೂರ‍್ಯಾಸ್ತ ಇಂದಿನದೇನಲ್ಲ ಅದು ನಾಳೆ ಇಲ್ಲವೆಂದಿಲ್ಲ ಮುಗಿಯಲಿ ಮೊದಲು ಬಂದ ಕೆಲಸ ಅಂತ ಸಾಗಿದ್ದೆ ಆಗ ಎಲ್ಲಿಂದಲೋ ಬಂದ ತುಂಟ ಪೋರ ಬಿರ ಬಿರ ನಡೆದರೂ ಬಂದ ಹತ್ತಿರ ಬಂದವನೆ ಎಸೆದ ತನ್ನ ಮುಷ್ಠಿಯೊಳಗಿನ ಮಣ್ಣು ನಂಬಲಾರದಾದವು ನನ್ನ ಕಣ್ಣು ತಬ್ಬಿಬಾಗಿ ಕೇಳಿದೆ ಪೋರನ ನಾನೇನು ಮಾಡಿದೆ ಎಂದು ಕೊಳೆ ಮಾಡಿದಿ ನಾ ಧರಿಸಿದ ಉಡುಪು ಏನು ಹೇಳಲಿ ನನ್ನ ಮನೆಯಾಕೆಗೆ ಸಾಬೂನಿನ ಜೊತೆ ಶುಭ್ರ ಪ್ರೀತಿಯನು ಹಚ್ಚಿ ಹೇಗೆ ಹೋಗಬೇಕು ಕಲೆ ಅಂದರ ಏನನಬೇಕು ತುಂಟ ಪೋರ “ಇರಲಿ ಕಡೀತನ ಈ ಕಲೆ ಕವಿ ಅಲ್ಲವೆ ನೀವು – ಕಲ್ಪನೆಯ ಕುದುರೆಯನೇರಿ ಇಲ್ಲದನು ಬಣ್ಣಿಸುವ ಕಲೆ ಅಲ್ಲವೆ ನಿಮಗೆ ಕರಗತ ಹೊಗಳಲಿಲ್ಲವೆ ನೀವು ಚಂದಿರನ ಸತತ ಸುಂದರಿಯರ ನೋಡಿ ಇಂದುಮುಖಿ ಎಂದಿರಿ ಕಾವ್ಯಗಳ ಪುಟಗಳಲಿ ತುಂಬಿಸಿದಿರಿ ಚಂದಿರ ಬೆಳದಿಂಗಳು ಕರ್ನೈದಿಲೆಗಳಿಂದ ನೀವು ಹೇಳಿದ್ದು ಕೇಳಿ ಬಾಯಾಗ ನೀರೂರಿ ಹೋದೆ ಅಲ್ಲೀತನಕ ಆಸ್ವಾದಿಸಲು ಸೌಂದರ್ಯ ಆದರ ಅಲ್ಲಿ ಸಿಕ್ಕಿದ್ದೇನು ನಿನ್ನ ಮ್ಯಾಲೆ ಎಸೆದ ಮಣ್ಣು” ಅಂತ ಅನಬೇಕ ಬಿಡಲಿಲ್ಲ ನಾನು, ಕೇಳಿದೆ ನೀ ಇರೋದು ಎಲ್ಲೆ ನಿನ್ನ ಹೆಸರೇನು ಅಂದರ “ ನನ್ನ ಹೆಸರು ನೀಲ್  ಆರ್ಮ್‌ಸ್ಟ್ರಾಂಗ್” ಅಂತ ಹೇಳಿ ಓಡ ಬೇಕ ಮಿಂಚಿನ ವೇಗದಾಗ ಸಿಗದ್ಹಾಂಗ ಕೈಗೆ ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ ಮನಸಿನಾಗೇ ಇಟ್ಕೋ ಮರ‍್ಯಾದಿ ಪ್ರಷ್ನಿ” ,ಇಲ್ಲಿ ನಮಗೆ ಕವಿಯ,ಕಾವ್ಯಪ್ರಜ್ಞೆ ಮತ್ತು, ವ್ಯೋಮಯಾತ್ರಿಯ ಭೌತಿಕ ವೈಜ್ಞಾನಿಕ ಪ್ರಜ್ಞೆಯ ನಡುವಿನ ಮುಖಾಮುಖಿ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಬಾನ್ಸುರಿ ಮತ್ತು ರಾಧೆ

ಕಬ್ಬಿಗರ ಅಬ್ಬಿ – ಸಂಚಿಕೆ -6 ಭೂಪೇಶ್ವರೀ ರಾಗದ ಆಲಾಪದ ಮಂದ್ರಸ್ಥಾಯಿಯ ಸ್ವರಗಳು, ಸಾಯಂಕಾಲದ ಸಾಂದ್ರತೆಯನ್ನು ಜೇನಿನಂತಾಗಿಸಿ, ಧಾರೆಯೆಷ್ಟು ಎಳೆಯಾದರೂ ಕಡಿಯದಂತೆ, ವಾತಾವರಣವನ್ನು ಆರ್ದ್ರವಾಗಿಸಿತ್ತು. ಗಾಯಕನ ( ಒ ಎಸ್. ಅರುಣ್‌) ನಾಭಿಯಿಂದ ಹೊರಟ ಸ್ವರಕಂಪನದ ತರಂಗ, ಎದೆಯನ್ನು ಹೊಕ್ಕು, ಭಾವ ಹೀರಿ, ಕಂಠದಿಂದ ಹೊರಹರಿಯುವಾಗ,  ಆಗಷ್ಟೇ ಸೋನೆ ಮಳೆ ನಿಂತು, ವಾತಾವರಣದ ತಂಪೊಳಗೂ ಆರ್ದ್ರ ಭಾವ. ಬಾನ್ಸುರಿಯ ದಪ್ಪ ಬಿದಿರಿನ ರಂಧ್ರಗಳಿಂದ ಸ್ವಾತಂತ್ರ್ಯ ಪಡೆದ ನಾದಸೆಲೆ ಅಂತರಂಗದ ಅಂತರ್ನಾದವೇ ಆಗಿತ್ತು. ತಬಲಾದ ಮೇಲೆ ಹೂಪಕಳೆಗಳು ತಡವಿದಂತೆ ವಾದಕನ ಬೆರಳುಗಳು, ಎದೆಗೆ ಎದೆ ಸೇರಿ ಅನುರಣಿಸಿದ ಸ್ಪಂದನವಾಗಿತ್ತು.  ಈ ರಾಗವೂ ಹಾಗೇ, ಇದರಲ್ಲಿ ಕೋಮಲ ಧೈವತದ ಸ್ಪರ್ಶ, ದೈವಿಕ ವಿರಹಸ್ವನವನ್ನು ಮನಸ್ಸಿನ ಕೋಣೆಯೊಳಗೆ ತುಂಬಿ, ನಿಧಾನವಾಗಿ ಮುಚ್ಚಿ ಆಸ್ವಾದಿಸುವಾಗ, ಕಣ್ರೆಪ್ಪೆಗಳು ತೆರೆಯಲಾಗದಷ್ಟು, ಹಿತಭಾರವೆನಿಸಿ, ಮಾನಸ ಲೋಕದೊಳಗಿದ್ದೆ. ಜಯದೇವ ಕವಿ, ‘ಗೀತಗೋವಿಂದ’ ಎದೆಗಿಳಿಸುವಾಗ, ಬಹುದಿನದಿಂದ ಮಿಲನ ಕಾಣದೆ ನೊಂದ,ರಾಧೆಯನ್ನು, ಕೃಷ್ಣ, ಹೃದಯತುಂಬಿ ಆರ್ತ ದನಿಯಲ್ಲಿ ಸಲ್ಲಪಿಸಿ ಆಕೆಯ ಕೋಮಲ ಪ್ರೀತಿಯ ನೋವನ್ನು ಹರಿಸುವ ಸಾಲುಗಳು, “ಪ್ರಿಯೇ… ಚಾರುಶೀಲೆ.. ಮುಂಚ ಮಯಿ ಮಾನಮ್ ಅನಿದಾನಮ್ ಸಪದಿ ಮದನಾಲಲೋ ದಹತಿ ಮಮ ಮಾನಸಮ್ ದೇಹಿ ಮುಖಕಮಲಮಧುಪಾನಮ್” (ಚಾರುಶೀಲೇ..ಮನಸ್ಸನ್ನು ದಹಿಸುತ್ತಿರುವನು ಮದನ!, ಪ್ರಿಯೇ, ದೇಹಿ! ಮುಖಕಮಲ ಮಧುಪಾನಮ್!) ಈ ಸಾಲುಗಳು ಸಂಗೀತಸ್ವರಗಳಿಗೆ ಹೊತ್ತೊಯ್ಯಲಾಗದಷ್ಟು ಭಾರವಾಗಿ, ಮನತುಂಬುವಾಗ, ಭಾವ ಜೊಂಪು ಎದೆಗಿಳಿದು ವಿರಹದ  ನೋವು ಅದೆಷ್ಟು ಹಿತಕರ ಅನುಭೂತಿ, ಅಲ್ಲವೇ!. ಜಯದೇವ ಈ ಅನುಭವ ಸಾಂದ್ರತೆಯಲ್ಲಿ ಬರೆಯುತ್ತಾನೆ! “ಸ್ಮರಗರಲ ಖಂಡನಮ್ ಮಮ ಶಿರಸಿ ಮಂಡನಮ್ ದೇಹಿ ಪದ ಪಲ್ಲವಮುದಾರಮ್’ ಜ್ವಲತಿ ಮಯಿ ದಾರುಣೋ ಮದನ ಕದನಾನಲೋ ಹರತು ತಪುದಾಹಿತ ವಿಕಾರಮ್” “ರಾಧೇ! ಚಾರುಶೀಲೇ, ನಿನ್ನ ಪಾದಗಳನ್ನು, ನನ್ನ ಶಿರಸ್ಸಿನ ಮೇಲಿರಿಸಿ,  ನನ್ನನ್ನು ಜ್ವಲಿಸುತ್ತಿರುವ ಮದನನನ್ನು ತಂಪಾಗಿಸು!”  ಎಂದು ಅಂಗಲಾಚುವ ಕೃಷ್ಣ!, ಜಯದೇವನಿಗೆ, ‘ಈ ಸಾಲುಗಳನ್ನು, ತಾನು ಹೇಗೆ ಬರೆದೆ?. ಕೃಷ್ಣ, ದೇವರಲ್ಲವೇ, ಆತನ ತಲೆಯೆಷ್ಟು ಪವಿತ್ರ, ಅದರ ಮೇಲೆ ರಾಧೆಯ ಪಾದ.. ಛೇ,ಇಂತಹ ಆಲೋಚನೆ ನನಗೆ ಹೇಗಾದರೂ ಬಂತು? ‘ ಎಂದು ದುಃಖವಾಗಿ, ಬರೆದ ಸಾಲುಗಳನ್ನು ಅಳಿಸಿ, ಹಾಳೆಗಳನ್ನು, ಪತ್ನಿ, ಪದ್ಮಾವತಿಯ ಕೈಗಿತ್ತು, ಮೀಯಲು ಹೋದನಂತೆ. ನದಿಯ ತಂಪು ನೀರಿಗನ ಹರಿವಿಗೆ ಮೈಯೊಡ್ಡಿ, ಒಳಹೊರಗೆ ಶುಚಿಯಾಗಿ ಪುನಃ ಬರೆಯಲು ಕುಳಿತರೆ, ಅಳಿಸಿ ಹೋದ ಅಕ್ಷರಗಳು ಹಾಳೆಗಳಲ್ಲಿ ಪುನಃ ಮೊದಲಿನ ಹಾಗೆಯೇ ಬರೆಯಲ್ಪಟ್ಟಿವೆ. “ಪದ್ಮಾವತೀ!, ಪ್ರಿಯೇ!, ಏನಿದಚ್ಚರಿ..ಈಗ ಅಳಿಸಿ ಹೋಗಿ, ಮಿಂದು ಬರುವಾಗ, ಪುನಃ ಅದೇ ಸಾಲುಗಳು!” ಪದ್ಮಾವತಿ ಉಲಿಯುತ್ತಾಳೆ,  “ಸ್ವಾಮೀ, ನೀವೇ ಮಧ್ಯದಲ್ಲಿ ಬಂದು, ಆ ಸಾಲುಗಳನ್ನು ಬರೆದು, ಹೀಗೇ ಇರಲಿ! ಎಂದು ಮೀಯಲು ಹೋದಿರಲ್ಲಾ!” ಕೃಷ್ಣನೇ ಬಂದು ಅಳಿಸಿದ ಅದೇ ಸಾಲುಗಳನ್ನು, ಬದಲಿಸದೆ ಬರೆದದ್ದು ಮನಸ್ಸಿಗಿಳಿದಾಗ, ಜಯದೇವ, ಭಾವೋತ್ಕರ್ಷ ಅನುಭವಿಸಿ, ಕೃಷ್ಣದರ್ಶನ ಪಡೆದ ಹೆಂಡತಿಯ ಕಾಲು ಮುಟ್ಟಿ ನಮಸ್ಕರಿಸಿ,  ಆ ಕಾವ್ಯಭಾಗದಲ್ಲಿ, ಪದ್ಮಾವತೀರಮಣ ಎಂಬ ಅಂಕಿತವನ್ನೂ ಹಾಕುತ್ತಾನೆ. ಕೃಷ್ಣ ಬದುಕನ್ನು, ಇತರರನ್ನು ತಲಪಿದ ರೀತಿಯೇ ಹಾಗೆ. ರಾಧೆಯ ಪಾದಸ್ಪರ್ಶ ಕೃಷ್ಣನ ತಲೆಯ ಮೇಲೆ, ಆತನನ್ನು ಸಣ್ಣದಾಗಿಸುವುದಿಲ್ಲ. ಆತನ ಆತ್ಮಾನುಯಾಯಿ, ಜಯದೇವ, ತನ್ನ ಹೆಂಡತಿಯ ಪಾದಮುಟ್ಟಿ ನಮಸ್ಕರಿಸಿದ್ದೂ ಆಶ್ಚರ್ಯವೇ?. ಈ ಅನುಭೂತಿ, ಪ್ರೀತಿ ದೇಹದ ಗಡಿ ದಾಟಿ,ಆತ್ಮಸಂಬಂಧಗಳಿಗೆ ಸ್ವರಸಂಯೋಜನೆ ಮಾಡೋವಾಗ, ಅದರಲ್ಲಿ ತುರೀಯಾವಸ್ತೆಯನ್ನು ಅನುಭವಿಸುವಾಗ, ಪಾದ, ಶಿರಸ್ಸು, ಇತ್ಯಾದಿಗಳು,ಕಾವ್ಯದ ಅಕ್ಷರಗಳಾಗಿ ಮಾತ್ರ ಉಳಿಯುತ್ತವೆ. ಭಕ್ತಿಯ ಮೂಲದಲ್ಲಿ, ಸಮರ್ಪಣೆಯಿದೆ. ಅದು ಒಂದು  ಚಿಂತನಾ ಮನೋಸ್ಥಿತಿಯಿಂದಲೂ ಉನ್ನತ ಮಟ್ಟದ್ದು. ರಾಧೆಯ ಪ್ರೀತಿ, ಪಾತ್ರವಿರದ ತೊರೆ! ಅಂತ ಬರೆಯುವ ಹೆಚ್. ಎಸ್ ವೆಂಕಟೇಶ ಮೂರ್ತಿ ಅವರ ಸಾಲುಗಳನ್ನು ನೋಡಿ. ” ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ “ ರಾಧೆಯ ಪ್ರೀತಿ, ಅದು,ಉಕ್ಕಿ ಹರಿಯುವ ಪ್ರವಾಹ. ಅದರ ಹರಿವಿಗೆ ಸಾಧಾರಣ ನದಿಗಳಿಗೆ ಇರುವಂತೆ, ದಡಗಳಿಲ್ಲ, ನದೀಪಾತ್ರವಿಲ್ಲ. ಉಕ್ಕಿ, ಬೇಕಾದಂತೆ ಹರಿಯುವ, ತಡೆಕಟ್ಟು ಇಲ್ಲದ, ಶಕ್ತಿ ಪ್ರೀತಿಗೆ. ಎಲ್ಲವನ್ನೂ ತನ್ನೊಳಗೆ ಮುಳುಗಿಸಿ, ಆವರಿಸಿ, ಹರಿಯುವ ಮಹಾ ಪ್ರವಾಹ ಅದು. ಈ ಕವಿತೆಯ ಮೊದಲ ಸಾಲುಗಳಲ್ಲಿ, ಹೆಚ್.ಎಸ್.ವಿ ಅವರು, ರಾಧೆ ಮತ್ತು ಕೃಷ್ಣನ ಪ್ರೀತಿಯ ಬಗ್ಗೆ ಹೀಗೆ ಬರೆಯುತ್ತಾರೆ. ” ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು” ಲೋಕದ ಕಣ್ಣು, ಲೌಕಿಕ ಕಣ್ಣು, ಭೌತಿಕ ವ್ಯಾಪಾರೀ ಜಗತ್ತಿನ ಕಣ್ಣಿಗೆ, ರಾಧೆ, ಬರೇ ಒಬ್ಬ ಹೆಣ್ಣು. ಆದರೆ, ಕವಿಗೆ, ಈ ರಾಧೆ, ಪ್ರೀತಿಯ ಕಣ್ಣು. ಕೃಷ್ಣನ ತೋರುವ, ಪ್ರೀತಿಯು ನೀಡಿದ ಕಣ್ಣು. ಪ್ರೀತಿಯಲ್ಲಿ ಸ್ವಾರ್ಥ ಇರಲ್ಲ. ಪ್ರೀತಿಯಲ್ಲಿ ಕೊಡು ಕೊಳ್ಳುವಿಕೆಯ ಅರ್ಥಶಾಸ್ತ್ರ ಇರಲ್ಲ. ಪ್ರೀತಿಯಲ್ಲಿ ಪ್ರತಿಫಲದ ನಿರೀಕ್ಷೆ ಇರಲ್ಲ. ಶುದ್ಧಾಂತಃಕರಣದ ಅನಿರ್ವಚನೀಯ ಅನುಭೂತಿ ಅದು. ಸಂಪೂರ್ಣ ಸಮರ್ಪಣಾ ಭಾವದ ಅನುಭೂತಿ. ಅಂತಹ ಪ್ರೀತಿಯೇ ಕೃಷ್ಣದರ್ಶನ. ಆ ದರ್ಶನ,ಆ ಕಣ್ಣು, ಆ ಪ್ರೀತಿ ಯೇ , ರಾಧೆ ಅಂತ ಕವಿ ಹೇಳುವುದು, ಎಷ್ಟು ಗಹನವಾದದ್ದು ಅಲ್ಲವೇ. ” ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ “ ನಾನು, ನನ್ನವರು, ಎನ್ನುವ ತೊಡಕುಗಳನ್ನು ತೊರೆದು, ಪ್ರೀತಿಸುವ ದಾರಿ ರಾಧೆಯದ್ದು. ಇಲ್ಲಿ, ನಾನು, ನನ್ನವರನ್ನು ತೊರೆಯುವುದು,ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸಿಯಾಗುವುದಲ್ಲ. ನಾನು, ಎಂಬ, ನನ್ನವರು ಎಂಬ ಐಡೆಂಟಿಟಿ, ತೊರೆದಾಗ, ಎಲ್ಲವನ್ನೂ, ತಾನಾಗಿ ಕಾಣುವ ದೃಷ್ಟಿ ಪ್ರಾಪ್ತವಾಗುತ್ತೆ, ಎಲ್ಲವನ್ನೂ ಅನ್ ಕಂಡಿಶನಲ್ ಆಗಿ ಪ್ರೀತಿಸುವ ಸಾಧ್ಯತೆ ತೆರೆಯುತ್ತೆ. ಬದುಕನ್ನು ಅರ್ಥಪೂರ್ಣವಾಗಿಸಲು ಇದು ರಾಧೆ ತೋರುವ ದಾರಿ. ಹೆಚ್ ಎಸ್ ವಿ ಅವರು ಕೃಷ್ಣ,ರಾಧೆಯರ ಬಗ್ಗೆ ಇನ್ನೊಂದು ಇಂಪು ಇಂಚರದ ಹಾಡು ಬರೆದಿದ್ದಾರೆ. “ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ “ ರಾಧೆ, ಪ್ರೀತಿಯನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಕೊಟ್ಟಾಗ, ಆತ,ಆಕೆಗಿತ್ತ ಭಾಷೆಯಾಗುತ್ತಾನೆ. ರಾಧೆ ಎಂಬ ಕೊಳಲು, ತನ್ನನ್ನು ತಾನೇ ಅರ್ಪಿಸಿ ಕೊಂಡಾಗ, ಕೃಷ್ಣ, ಆ ಕೊಳಲಿನ ದನಿಯಾಗುತ್ತಾನೆ, ರಾಗವಾಗುತ್ತಾನೆ. ಕೊಳಲು ಯಾವುದು, ಸ್ವರ ಯಾವುದು ಎಂಬ ಬೇಧವಿಲ್ಲದ ಸಂಯೋಗ ಅದು. ಇಲ್ಲಿ, ಇನ್ನೊಂದು ಸುಪ್ತ ಅರ್ಥವಿದೆ. ಕೊಳಲು,ಇಲ್ಲದೆ ರಾಗ ಹೊರಡುವುದೇ?. ಕೃಷ್ಣನೂ ಎಷ್ಟು ಸಮರ್ಪಿತ ಎಂದರೆ, ರಾಧೆಯಿಲ್ಲದೆ, ಪ್ರೀತಿಯಿಲ್ಲದೆ ಕೃಷ್ಣನೂ ಇಲ್ಲ. ಜಯದೇವ ಕವಿಯ ಅಷ್ಟಪದಿಯ ಕೃಷ್ಣ, ರಾಧೆಯ ಪಾದವನ್ನು ತನ್ನ ಶಿರಸ್ಸಿನ ಮೇಲಿರಿಸಿ, ರಾಧೆಯ ಪ್ರೀತಿಗೆ ಸಮರ್ಪಣೆಯಾಗುವ ಕ್ರಿಯೆಯೂ, ಹೆಚ್.ಎಸ್.ವಿ. ಅವರ ಕವಿತೆಯಲ್ಲಿ, ರಾಧೆಯೆಂಬ ಕೊಳಲಿಗೆ, ರಾಗವಾಗಿ ಯುನಿಫಿಕೇಷನ್ ಅನುಭವಿಸುವ  ಕೃಷ್ಣನ ಕ್ರಿಯೆಗೂ ವ್ಯತ್ಯಾಸವಿಲ್ಲ. ****************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

ಬಾನ್ಸುರಿ ಮತ್ತು ರಾಧೆ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ!

ಕಬ್ಬಿಗರ ಅಬ್ಬಿ – ಸಂಚಿಕೆ ೫ ನನ್ನ ಗೆಳೆಯನ ಪುಟ್ಟ ಮಗು ನನ್ ಹತ್ರ ಕೇಳಿದ,  ” ಮಾಮಾ, ಈ ಚಂದಾಮಾಮ ಎಷ್ಟೆತ್ತರ? “. ನಾನಂದೆ! ” ತುಂಬಾ ಎತ್ತರದಲ್ಲಿ ಇದ್ದಾನೆ ಪುಟ್ಟಾ”. “ಹೇಗೆ ತಲಪೋದು! ” ಪುಟ್ಟನ ಪ್ರಶ್ನೆ! ರಾಕೆಟ್ಟು..ಜೆಟ್ ಪ್ರಿನ್ಸಿಪಲ್ ಅಂತ ಒಂದಷ್ಟು ಕೊರೆದೆ!. ಪುಟ್ಟನ ಕಣ್ಣೊಳಗೆ ಏನೋ ಮಿಂಚು! ಆತ ಅಂದ, ” ಮಾಮಾ, ಅಷ್ಟೆಲ್ಲ ಕಷ್ಟ ಯಾಕೆ! ನಮ್ಮ ತಾರಸಿಯ ಮೇಲೆ ಒಂದು ಮೆಟ್ಟಿಲು ಕಟ್ಟೋಣ!, ಆ ಮೆಟ್ಟಿಲು ಹತ್ತಿ ನಿಂತು ಇನ್ನೊಂದು ಕಟ್ಟುವಾ! ಮತ್ತೆ ಅದರ ಮೇಲೆ ಹತ್ತಿ ನಿಂತು ಇನ್ನೊಂದು ಮೆಟ್ಟಿಲು! ಹೀಗೇ ಹತ್ತಿದರೆ ಚಂದಾಮಾಮ ಸಿಗಲ್ವಾ! ಹೀಗೆ, ಮುಗ್ಧ ಪುಟಾಣಿಗಳಿಗೂ ಕವಿಗಳಿಗೂ ಕಲ್ಪನೆ ಎನ್ನುವುದಕ್ಕೆ ಭೌತಿಕದ ಭೂತ ಕಾಡಲ್ಲ! ಎತ್ತರ, ಇನ್ನೂ ಎತ್ತರ, ನೆಲಕ್ಕೆ ನೆಲವೇ ಮೆಟ್ಟಿಲಾಗಿ ನಿಂತ ಮೆಟ್ಟಿಲುಗಳ ಸಾಲುಗಳೇ ಹಿಮಾಲಯ ಪರ್ವತಶ್ರೇಣಿ. ‌ ತುಂಬಿದ ಕೋಶಕೋಟಿಯಿಂದ ನಿರ್ವಾತದತ್ತ ನಡಿಗೆಯದು! ಆಕಾಶವನ್ನೇ ಘನೀಕರಿಸುವ ಥಂಡಿ. ವರುಣನೂ ಅಲ್ಲಿ ಸೋತು ಗಡ್ಡೆ ಕಟ್ಟಿದ ನೀರ್ಗಲ್ಲ ಪದರದೊಳಗೆ ಬಂದಿ. ಕರೆದೇ ಬಿಟ್ಟರು! ಇಳಿದು ಬಾ ತಾಯೇ ಇಳಿದು ಬಾ! ಸಾಮಾನ್ಯರೇ ಅವರು! ಅಂಬಿಕಾತನಯದತ್ತರು! ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ. ಗಂಗಾ ನದಿ ಗೋಮುಖದ ಎತ್ತರದಿಂದ ಭಾಗೀರಥಿ ಯಾಗಿ ಇಳಿದು, ಬಂಗಾಳಕೊಲ್ಲಿಯಲ್ಲಿ ಸಾಗರವಾಗುವ ನಡುವಿನ ಯಾತ್ರೆ, ಅದು ದರ್ಶನ. ನದಿ ಎಂದರೆ ಹರಿವು, ನಿರಂತರ ಹರಿವು. ಚಲನಶೀಲತೆಗೆ ಪ್ರತಿಮೆ, ನದಿ.  ಉಕ್ಕಿ ಹರಿಯುವ ನದಿ, ಮನುಷ್ಯನ ಭಾವೋತ್ಕರ್ಷದಂತೆ. ತಿರುವುಗಳು, ಪರಿವರ್ತನೆಯ ಸಂಧಿಯಂತೆ. ಎತ್ತರದಿಂದ ಜಲಪಾತವಾಗಿ ಬೀಳುವ ಧಾರೆ, ಪತನದ ಪ್ರತಿಮೆಯಂತೆ. ಕೆಳಬಿದ್ದ ಧಾರೆ ಸುಳಿ ಸುಳಿಯಾಗಿ ಎದ್ದು ಕೊಚ್ಚಿಕೊಂಡು, ಕೊಚ್ಚಿಸಿಕೊಂಡು ಬಿಂದು ಬಿಂದು ಸೇರಿ ಪುನಃ ಪ್ರವಹಿಸುವುದು, ಜೀವನದ ಅನಿವಾರ್ಯ ಸಂಘರ್ಷದಂತೆ, ಮರುಹುಟ್ಟಿನಂತೆ, ಪತನದ ನಂತರವೂ ಹರಿವಿನ ಸಾಧ್ಯತೆಯ ಧನಾತ್ಮಕ ಚಿಂತನೆಯಂತೆ. ಪರ್ವತದ ಕೊರಕಲಿನಲ್ಲಿ ಆಕೆಯ ರಭಸ, ಕೋಪವೋ, ಅಸಹನೆಯೋ, ಯೌವನದ ಶಕ್ತಿಪ್ರದರ್ಶನವೋ, ಯದ್ಧೋನ್ಮಾದವೋ ಗೊತ್ತಿಲ್ಲ. ಬಯಲಿನ ಸಮತಲದಲ್ಲಿ  ಆಕೆಗೆ ಮಧ್ಯವಯಸ್ಸು, ಶಾಂತಚಿತ್ತೆ, ಗಂಭೀರೆ. ಹರಡಿಕೊಳ್ಳುವಳು,  ವಿಸ್ತಾರವಾಗುವಳು,  ವಿಶಾಲ ಹೃದಯದ ಅಮ್ಮನಂತೆ. ನಿಧಾನವಾಗಿ, ಗಮ್ಯದತ್ತ ಸಾಗುವಳು,ಯೋಗಸಮಾಧಿಯ ಅಭ್ಯಾಸದಂತೆ. ಈ ಚಲನಶೀಲ ತತ್ವ ಹರಿಯುವ ನದಿಯ ನೀರಿನದ್ದು ಮಾತ್ರವಲ್ಲ!. ಅಸಂಖ್ಯ ಜೀವಜಾಲವನ್ನು ಗರ್ಭದಲ್ಲಿ ಹೊತ್ತು, ಅವಕ್ಕೆ ಉಸಿರೂಡಿ ಹರಿಯುವ ಹರಿವದು. ನದಿಯ ಇಕ್ಕೆಲಗಳಲ್ಲಿ, ನಾಗರಿಕತೆಯನ್ನು ಕಟ್ಟಿ, ಬೆಳೆಸುವ ಕಾಲನದಿಯೂ ಅದೇ. ನದಿಯ ಬಗ್ಗೆ ಒಂದು ಅಪೂರ್ವ ಕಲ್ಪನೆಯನ್ನು ತಡವಿ ಮುಂದುವರಿಯೋಣ!  ಕೆಳಗಿನ ಸಾಲುಗಳು, ಸಿದ್ದಲಿಂಗಯ್ಯನವರ, “ಸಾವಿರಾರು ನದಿಗಳು” ಕವಿತೆಯಿಂದ ” ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿಮೆಳೆಯ ಮರೆಗಳಲ್ಲಿ ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು” ಪರಿವರ್ತನೆಯ, ಹೊಸ ಬದುಕಿನ ಕನಸು ಹೊತ್ತ ಜನರ ಹೋರಾಟದ ದನಿಗಳಿವು. ಅವರು ಮುಂದುವರೆದು, “ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು ವೇದಶಾಸ್ತ್ರಪುರಾಣ ಬಂದೂಕದ ಗುಡಾಣ ತರೆಗೆಲೆ ಕಸಕಡ್ಡಿಯಾಗಿ ತೇಲಿತೇಲಿ ಹರಿದವು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಹೀಗೆ, ಸಿದ್ದಲಿಂಗಯ್ಯ ನವರ ಕಲ್ಪನೆಯಲ್ಲಿ, ಪರಿವರ್ತನೆಗಾಗಿ ಹೋರಾಡುವ ಪ್ರತಿಯೊಬ್ಬನೂ, ಅಂತಹ ಸಾವಿರಾರು ಜನಮಾನಸ, ಹೋರಾಟದ ಸಾಗರದತ್ತ ಧುಮುಕಿದ ಸಾವಿರಾರು ನದಿಗಳು ಅಂತ, ನದಿಗೆ ಒಂದು ಹೊಸ ಪ್ರತಿಮೆ ಕೊಟ್ಟಿದ್ದಾರೆ. ಗಂಗಾನದಿಯನ್ನು, ಗಂಗೆಯ ತಟದ ಸಾಮಾನ್ಯ ಜನರು “ಗಂಗಾ ಮಾತಾ” ಅಂತ ಕರೆಯುತ್ತಾರೆ. ಎಷ್ಟೆಂದರೆ, ಅದು ಭೌತಿಕ ನದಿಯೆಂದು ಅವರು ಒಪ್ಪಲಾರರು. ಅದು ಅಮ್ಮ! ಈ ಭಾವನೆ, ಒಂದೆರಡು ದಿನಗಳ ಭಾವಬೆಳೆ ಅಲ್ಲ. ಇದು ಕುಡಿಯಲು ನೀರುಕೊಟ್ಟ, ಕೃಷಿಯ ಮೂಲಕ ಅನ್ನ ಕೊಟ್ಟ, ಅಮ್ಮನತ್ತ ಪ್ರೀತಿ,ಕೃತಜ್ಞ ಭಾವ. ತನ್ನನ್ನು ಸಾಕಿದ ಪ್ರಕೃತಿಯ ಶಕ್ತಿಯಾಗಿ ಅದಕ್ಕೆ ಸೂರ್ಯ, ಅಗ್ನಿ,ಇತ್ಯಾದಿ ಶಕ್ತಿಗಳ ಹಾಗೆಯೇ ದೈವೀಸ್ವರೂಪವೂ. ಗಂಗೆ ಅಂತಲ್ಲ, ಕಾವೇರಿ, ತುಂಗಭದ್ರೆ,  ಗೋದಾವರಿ ಇತ್ಯಾದಿ ನದಿಗಳ ಮಡಿಲಲ್ಲಿ ನಾಗರೀಕತೆ ಹುಟ್ಟಿ ಹುಲುಸಾಗಿ ಬೆಳೆಯಿತಷ್ಟೇ ಅಲ್ಲ, ಆ ನದಿಗಳೂ ನಮ್ಮ ಮನೆ, ಮನಸ್ಸು,ಭಾಷೆ, ಕಲೆಯ ಭಾಗವೇ ಆದವು. ಕೆಲವು ವರ್ಷಗಳ ಹಿಂದೆ, ಉತ್ತರಾಖಂಡದಲ್ಲಿ ಭೀಕರ ಮಳೆ ಸುರಿದು, ಗಂಗೆಯ ಪ್ರವಾಹ, ತನ್ನ ತಟದಲ್ಲಿ ಕಟ್ಟಿದ ಆಧುನಿಕತೆಯ ರೂಪಕಗಳಾದ ಹೋಟೆಲ್ ಕಟ್ಟಡಗಳನ್ನು ನೋಡು ನೋಡುತ್ತಲೇ ಕೊಚ್ಚಿ ತನ್ನ ಪ್ರವಾಹಕ್ಕೆ ಎಳೆದು ನುಂಗಿ ಹರಿದ ರೌದ್ರ ರೂಪವನ್ನು ,ನಾನು ಋಷೀಕೇಶದಲ್ಲಿ ಕಣ್ಣಾರೆ ನೋಡಿರುವೆ. ಆಗ ಅಲ್ಲಿನ ಜನರ ಬಾಯಲ್ಲಿ ಒಂದೇ ಮಾತು,  “ಗಂಗಾ ಮಾ, ಗುಸ್ಸೇ ಮೈ ಹೈ” ನೀರಿನಲ್ಲಿ ತರಗೆಲೆಯಂತೆ ತೇಲಿ ಹೋಗುವ ಕಾರು, ಗ್ಯಾಸ್ ಸಿಲಿಂಡರ್, ಮರದ ದಿಮ್ಮಿಗಳನ್ನು ನೋಡಿದರೆ ನಿಜವಾಗಿಯೂ, ನಾಗರಿಕತೆಯ ದೌರ್ಜನ್ಯದತ್ತ ಅಮ್ಮ ಅತೀವ ಕೋಪದಲ್ಲಿ ಹರಿಯುವಂತೆಯೇ ನನಗೂ ಅನಿಸಿತ್ತು. ” ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ ಬಾರೆ ಬಾ ತಾಯಿ ಇಳಿದು ಬಾ” ಸ್ವರ್ಗವನ್ನು ತೊರೆದು ಬಂದ ತಾಯೀ, ನಿನಗೆ ಪೊಡಮಡುವೆ,  ಎನ್ನುವ ಬೇಂದ್ರೆ ಅವರಿಗೆ ಈ ತಾಯಿಯತ್ತ ಎಷ್ಟು ಪ್ರೀತಿ. ನದಿ,ತಾಯಿಯೇ ಎಂಬ ಸ್ಥಾಯೀ ಭಾವ. “ಬಯಲ ಜರೆದು ಬಾ, ನೆಲದಿ ಹರಿದು ಬಾ,”  ಎನ್ನುವಾಗ ಅಮ್ಮನ ಶಕ್ತಿಚಲನಕ್ರಿಯೆಯತ್ತ ಬಾಲಕ ಬೇಂದ್ರೆಯ ಬೆರಗಿನ,ಒಲವಿನ ಕರೆ ಕೇಳಿಸುತ್ತೆ ಅಲ್ಲವೇ!. ಹೀಗೆ ಚಲನಶೀಲ, ಚಣಚಣದ ಪರಿವರ್ತನೆಯೇ ಅಂತರಂಗದ ಸೂತ್ರವಾಗಿ ಹರಿಯುವ ನದಿಯನ್ನು ಒಡ್ಡು ಕಟ್ಟಿ ಬಂಧಿಸಿ ಒಂದು ಕೆರೆಯಾಗಿಸಿದರೆ, ಅದು ಕಂಬಾರರ ಗಂಗಾಮಾಯಿ ಕವಿತೆಯಾಗುತ್ತೆ.  ” ಕೆಂಪಾನ ಕೆಂಪುಗುಡ್ಡ ಬೆಳ್ಳಾನ ಬಿಳಿ ಗುಡ್ಡ ಒಡಮುರಿದು ಕೂಡಿದ ಒಡ್ಡಿನಲ್ಲೆ,ನಮ್ಮೂರ ಕೆರೆ ಹೆಸರು ಗಂಗಾಮಾಯಿ.” ಗುಡ್ಡಗಳು ಸೇರುವಲ್ಲಿ, ಅಣೆಕಟ್ಟು ಕಟ್ಟಿ, ಹರಿಯುವ ನೀರನ್ನು ಮನುಷ್ಯ ನಿಲ್ಲಿಸಿದ್ದಾನೆ. ಹಾಗೆ ಮೂಡಿದ, ಕೆರೆಯೇ ಗಂಗಾಮಾಯಿ ಕೆರೆ . ಮಾಯಿ ಅಂದರೆ ಮಾತೆಯೇ. ಗಂಗೆಯ ಎಲ್ಲಾ ಗುಣಗಳನ್ನು ಈ ಕೆರೆ ಹೊಂದಿದೆ, ಆದರೆ ಚಲನಶೀಲತೆ ಇಲ್ಲ. ಈ ಕವಿತೆಯಲ್ಲಿ ಹಲವಾರು ಪ್ರತಿಮೆಗಳು. ಈ ಕೆರೆಯ ಸುತ್ತ ಮೂರು ಥರದ ಜೀವ ವೈವಿಧ್ಯತೆ. ೧. ” ಮರಗಿಡ ಕಂಟಿ,ಸಸ್ಯ ಕೋಟಿ ೨. ” ನಾಯಿ ನರಿ ಹಂದಿ,ಶುಕಪಿಕಾದಿಯ, ಚೌರ್ಯಾಂಸಿ ಲಕ್ಷ ಕೀಚು ಕೀಚು. ( ಹಲವು ಪ್ರಾಣಿಗಳಲ್ಲದೇ, 84 ಲಕ್ಷ, ಕ್ರಿಮಿ ಕೀಟಗಳ ಪ್ರಾಣಿಜಗತ್ತು. , ಕೀಚು ಕೀಚು ಪ್ರಯೋಗ, ಒಂದು ಧ್ವನಿ ಪ್ರಬೇಧ) ೩. ದಡದ ಗಿಡಗಳ ನೆತ್ತಿ ಜೋತ ಬಾವಲಿ ಹಿಂಡು, ನೀರಿನೆದೆಯಲ್ಲದರ ವಕ್ರ ನೆರಳು. ( ಇದನ್ನು ಸ್ವಾರ್ಥ ಮನುಷ್ಯ ಪ್ರಜ್ಞೆಯ ಪ್ರತಿಮೆ, ಅಂತ ವಿಮರ್ಶಕರು ವಿವರಿಸಿದ್ದಾರೆ. ಈ ಬಾವಲಿಗಳು, ತಲೆಕೆಳಗಾಗಿ, ದಡದ ಮರಕ್ಕೆ ಜೋತು ಬಿದ್ದಿವೆ, ಅವುಗಳ ವಕ್ರ ನೆರಳು ಕೆರೆಯ ಎದೆಮೇಲೆ.) ಕವಿತೆಯುದ್ದಕ್ಕೂ ಹರಿವ ನೀರು,ನಿಂತ ನೀರಾಗಿ, ಅದನ್ನು ಮನುಷ್ಯ, ತನ್ನ ಸ್ವಾರ್ಥಕ್ಕಾಗಿ ಕೊಳೆ ಕೊಳೆಯಿಸುವ ಭಾವ. ಕವಿತೆಯಲ್ಲಿ ಕವಿ ಉಪಯೋಗಿಸಿದ ಒಂದು ಯೋಚನೆಗೂ ನಿಲುಕದ, ಪ್ರತಿಮೆಯಿದೆ. ಸಾಧಾರಣವಾಗಿ, ಬೆಳಗು, ಶುಭ ಸೂಚಕವೂ,ಆನಂದದಾಯಕವೂ. ನಿರಾಶೆಯ ಪರಮಾವಧಿಯಲ್ಲಿ ಕವಿಗೆ ಸೂರ್ಯೋದಯ ಹೇಗೆ ಕಾಣಿಸುತ್ತೆ?  ” ಮೂಡಣದ ಮುದಿಕುರುವೊಡೆದು ನೆತ್ತರು ಕೀವು ಸೋರಿತೋ, ಸುರುವಾಯ್ತಿಲ್ಲಿ ಚಲನೆ” ಜೀವಿಸುವ ದೇಹದ ನೂರಾರು ಅಂಗಾಂಗಗಳಿಗೆ ರಕ್ತಸಂಚಾರ ನಿರಂತರವಾಗಿ ಆಗುತ್ತಲೇ ಇರಬೇಕು. ಹಾಗೆ ಹರಿಯುತ್ತಾ, ರಕ್ತ, ದೇಹದ ಮುಕ್ಕೋಟಿ ಜೀವಕೋಶಗಳಿಗೆ ಶಕ್ತಿ ಹಂಚುತ್ತೆ. ಜೀವಕೋಶಗಳ  ಕಲ್ಮಶಗಳನ್ನು ತನ್ನೊಳಗೆ ಸೇರಿಸಿ, ಕಿಡ್ಣಿಯ ಮೂಲಕ ಹಾದು, ಕಲ್ಮಶ ಕಳೆದು, ಶ್ವಾಸಕೋಶಗಳನ್ನು ಹಾದು, ಕಾರ್ಬನ್ ಡೈ ಆಕ್ಸೈಡ್ ಕೊಟ್ಟು,ಆಕ್ಸೀಜನ್, ತುಂಬಿ ಹೃದಯದ ಮುಖಾಂತರ ಪುನಃ ದೇಹದ ಸುತ್ತ ಸುತ್ತುತ್ತೆ. ಇದೊಂದು ಚಲನಶೀಲ ಕ್ರಿಯೆ!. ದೇಹದಲ್ಲಿ ಕುರುವಾದಾಗ, ರಕ್ತಕಣಗಳು ಸತ್ತು, ಕೀವಾಗಿ, ಕುರು ಒಡೆದಾಗ ಸೋರುತ್ತದೆ. ಆ ಸೋರಿಕೆಯಲ್ಲಿ, ಕೆಟ್ಟುಹೋದ ರಕ್ತವೂ ಸೋರುತ್ತೆ. ಬಿಳಿ,ಕೆಂಪು ಬಣ್ಣಗಳ ಮಿಶ್ರಣವದು. ಚಲನಶೀಲ ತತ್ವಕ್ಕೆ ತಡೆಯುಂಟಾದಾಗ, ಕುರುವಾಗಿ ಒಡೆದು,ಸೋರುವುದು, ದೇಹದ ಪ್ರಕೃತಿ. ಬೆಳಗನ್ನು,ಇಷ್ಟು ಪ್ರತಿಮಾತ್ಮಕವಾಗಿ ಋಣಾತ್ಮಕ, ವಿದ್ಯಮಾನಕ್ಕೆ ಬಳಸಿದ ಇನ್ನೊಂದು ಕಾವ್ಯ ಇದಯೇ?.  ಪ್ರಕೃತಿ ಚಲನಶೀಲ ತತ್ವದ ಮೇಲೆಯೇ ನಿಂತರುವ, ಸದಾ ಬದಲಾಗುವ, ಅನಂತ ವ್ಯವಸ್ಥೆ. ಅದಕ್ಕೆ ತಡೆಯಾದಾಗ, ಭೂಕಂಪ,ನೆರೆ, ಚಂಡಮಾರುತ ಇತ್ಯಾದಿಗಳು, ನಿಸರ್ಗ,ತನ್ನ ಡಾಕ್ಟರ್,ತಾನೇ ಆಗುವ ಪ್ರಕ್ರಿಯೆಯಷ್ಟೇ?. ಹಾಗೆ ಮೂಡಣದ ಮುದಿಕುರುವೊಡೆದು,ಸೋರಿದಾಗ, ಸುರುವಾಯ್ತಿಲ್ಲಿ,ಚಲನೆ! ಎನ್ನುವಾಗ ಕವಿ,ಕುರುವಿಗೆ ಕನ್ನಡಿ ಹಿಡಿದು ಗಂಗಾಮಾಯಿ ಕೆರೆಯ ಸುತ್ತ ನಡೆಯುವ ಮಾನವ ನಿರ್ಮಿತ ಕೊಳೆತ, ಕೊಳೆಯುತ್ತಲೇ ಇರುವ ವ್ಯವಸ್ಥೆಯ ಪ್ರತಿಬಿಂಬ ತೋರಿಸುತ್ತಾನೆ. ” ಕೊಡುಕೊಲ್ಲು ವ್ಯವಹಾರ,ದರ ನಿರಾತಂಕ ತಂಗಾಳಿ ಸುಳಿಯದ,ದೊಡ್ಡ ತೆರೆ ಮೂಡಿ ಮುಳುಗದ ಹರಿಯುವುದಕ್ಕೆ ದಿಕ್ಕಿಲ್ಲದ ನೀರು” ಹರಿಯುವ ತೊರೆಗೆ, ಮನುಷ್ಯ,ಒಡ್ಡು ಕಟ್ಟಿ, ಕೊಡು ಕೊಲ್ಲು ವ್ಯವಹಾರದ ವ್ಯವಸ್ಥೆ, ವ್ಯಾಪಾರ ದರದಿಂದ ಅರ್ಥದಲ್ಲಿಯೇ ಅರ್ಥ ಅನ್ನುವ, ತಂಗಾಳಿಯೂ ಸುಳಿಯದ ವ್ಯವಸ್ಥೆ. ಹೊಸ ಯೋಚನೆ, ಹಳೆಯದು ತೊಳೆದು ಹೊಸ ಚಿಂತನೆ,ಇಲ್ಲದ, ಸ್ತಬ್ಧ ಚಿತ್ರದಂತೆ ನಾವೇ ಹೇರಿಕೊಂಡು, ಪ್ರಕೃತಿಯನ್ನು ಕಟ್ಟಿ ಹಾಕಿ ನಿಲ್ಲಿಸಿದ ವ್ಯವಸ್ಥೆ. ಪ್ರಕೃತಿ ಹರಿಯಲು ಬಯಸುತ್ತಿದೆ,ಆದರೆ ಮನುಷ್ಯ ಕಟ್ಟಿದ ಒಡ್ಡು,ಆ ಹರಿವಿಗೆ ಅಡ್ಡವಾಗಿದೆ!. 1969ರಲ್ಲಿ, ಕಂಬಾರರು ಬರೆದ ಕವಿತೆ, ಇಂದು  ಹೆಚ್ಚು, ಮನಮುಟ್ಟಲು ಕಾರಣ, ನಾವಿನ್ನೂ ಕಟ್ಟುತ್ತಿರುವ ಒಡ್ಡುಗಳೇ?. ಕೊರೊನಾ ವೈರಸ್ ಕೂಡಾ, ಮಾನವ, ನಿರ್ಮಿಸಿ ಕೊಳೆಯಿಸಿದ ಕೆರೆಯೊಳಗೆ ಹುಟ್ಟಿದ್ದೇ?. ******************************************************* ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ! Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ದೇವರ ವಾನಪ್ರಸ್ತ.

ರಾತ್ರಿಯಿಡೀ ಕಗ್ಗತ್ತಲು. ಯಾಕಿಲ್ಲ, ಅಮವಾಸ್ಯೆಯ ರಾತ್ರೆಯದು. ಗುಹೆಯೊಂದರಲ್ಲಿ ಮಲಗಿದ್ದ ಶಿಲಾಮಾನವ ರಾತ್ರೆ ಕಳೆಯುತ್ತಿದ್ದ. ಸುತ್ತ ,ಅಡವಿ. ಅದೊಂದು ನಿದ್ದೆಯಲ್ಲದ ನಿದ್ದೆ. ಗಾಳಿಗೆ ಮರಗಳ ಸುಂಯ್..ಸುಂಯ್.. ಒಂಥರಾ ನೀರವ ಕಗ್ಗತ್ತಲು. ಕಣ್ಣಿಗೇನೂ ಕಾಣಿಸದಾದಾಗ, ಕಿವಿ ಅತ್ಯಂತ ಸೂಕ್ಷ್ಮವಾಗುತ್ತೆ. ದೂರದಿಂದ, ನರಿಗಳು ಊಳಿಡುವ ಶಬ್ಧ, ಪಟ್ಟೆ ಹುಲಿ ನಡೆಯುವಾಗ,ಓಡುವಾಗ ಶಬ್ಧಮಾಡುವುದಿಲ್ಲ. ಸೈಲೆಂಟ್ ಕಿಲ್ಲರ್ ಅದು! ಹ್ಞಾ! ಕೇಳಿಸಿತಲ್ಲ, ಜಿಂಕೆಯ ಮರಣಾಕ್ರಾಂದನ..ಖಂಡಿತಾ ಹುಲಿ ಹಿಡಿದಿರಬೇಕು, ನಾಳೆ ಸಿಗುತ್ತೆ ಅದರ ಅವಶೇಷಗಳು. ಹೇಗಿದ್ದರೂ, ಗುಹೆಯ ಬಾಗಿಲಿಗೆ ಬಂಡೆ ಪಾರ್ಶ್ವದಿಂದ ಮುಚ್ಚಿದೆ. ಹುಲಿಗೂ ಭಯವಿದೆ. ಎಲ್ಲಿ, ನನ್ನ ಈಟಿ ಹತ್ತಿರವೇ ಇದೆಯಲ್ಲ. ಅಂತಹ ಹೋರಾಟದ ರಾತ್ರೆ, ಗಾಢನಿದ್ದೆಗೆ ಬಿದ್ದರೆ, ಹುಲಿಯ ಬಾಯಿಗೆ ತುತ್ತು.ಹ್ಞಾ! ..ಬೆಳಕಿನ ಮೊದಲ ಕಿರಣ ಕಾಡಿನ ಎತ್ತರದ ಮರಗಳ ಎಲೆಗಳ ನಡುವಿಂದ ನುಸುಳಿ ಬಂತಲ್ಲಾ!. ರಾತ್ರಿ ಕಳೆಯಿತು.. ಸೂರ್ಯ ಉದಯಿಸಿದ್ದು ಅಂದರೆ ಹೊಸ ಜೀವ ಬಂದಂತೆಯೇ. ಅಂತಹ ಸೂರ್ಯನಿಗೆ ತನ್ನ ಒರಟು ಕೈಗಳನ್ನು ಎತ್ತಿ, ಈಟಿ ಬೀಸಿ, ಕೇಕೇ ಹಾಕಿ ತನ್ನದೇ ರೀತಿಯಲ್ಲಿ ನಮಸ್ಕರಿಸಿದ ಆ ಶಿಲಾ ಮಾನವ!ಅಂದು ನಕ್ಷತ್ರ ಸೂರ್ಯನಿಗೆ ದೇವರ ದರ್ಜೆ! ಹೀಗೇ ನೀರು,ಗಾಳಿ,ಬೆಂಕಿ,ಆಕಾಶ, ತನ್ನ ವ್ಯಾಪ್ತಿಗೆ ಮೀರಿದ,ಅರಿವಿಗೆ ನಿಲುಕದ ಸೋಜಿಗಗಳೆಲ್ಲಾ ದೇವರೇ.ದೇವರನ್ನು, ನಾವೆಷ್ಟು ಹುಡುಕುತ್ತೇವೋ ಅಷ್ಟೇ, ವಿಚಾರವಾದಿಗಳು,ಸಾಹಿತಿಗಳು ದೇವರ ಪರಿಕಲ್ಪನೆಯನ್ನು,ಅದರ ಮನೋವೈಜ್ಞಾನಿಕ ಹಿನ್ನೆಲೆಯನ್ನು ಹುಡುಕುತ್ತಾರೆ.ಡಿ.ವಿ.ಜಿ.ಅವರ ಕಗ್ಗದಿಂದಲೇ ಶುರುಮಾಡೋಣವೇ?. ಧರ್ಮವೆಂಬುದದೇನು? ಕರ್ಮವೆಂಬುದದೇನು?|ಬ್ರಹ್ಮಾಂಡಕಥೆಯೇನು? ಜೀವಿತವಿದೇನು?||ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ|ಬ್ರಹ್ಮವೇ ಜೀವನವೊ – ಮಂಕುತಿಮ್ಮ||೯೭|| ಆಕಾರಭ್ರಹ್ಮನಿಂದ ನಿರಾಕಾರ ಬ್ರಹ್ಮನವರೆಗೆ ಬೆಳೆದುಬಂದ ಈ ಜ್ಞಾನದ ಅಗಾಧತೆ, ನನ್ನ ಅರಿವಿಗೂ, ವಿದ್ಯೆಗೂ ಮೀರಿದ್ದು. ಈ ಅಬ್ಬಿಯ ಧಾರೆಗೆ, ಕನ್ನಡ ಸಾಹಿತ್ಯದ ಸಂದರ್ಭವನ್ನಷ್ಟೇ ಉಲ್ಲೇಖಿಸುವೆ.ಶಿವರಾಮ ಕಾರಂತರ ಮೂಕಜ್ಜಿಯ ಮಾತುಗಳನ್ನು ಕೇಳಿ. ” ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ.” ಮನಸ್ಸಿನ, ಚಿಂತನೆಯ ತರ್ಕದೊಳಗೆ ದೇವರನ್ನು ಅನ್ವೇಷಿಸುವ ಪ್ರಯತ್ನವದು. ಜಿ.ಎಸ್ ಶಿವರುದ್ರಪ್ಪನವರು “ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆ” ಅಂತ ಬರೆಯುತ್ತಾರೆ. ಕಲ್ಲು ಮಣ್ಣುಗಳ ಗುಡಿಯೊಳಗೆ ದೇವರನ್ನು ಹುಡುಕಬೇಡ, ದೇವರು ಅಲ್ಲಿಲ್ಲ, ಆತ ನಮ್ಮೊಳಗಿನ ಪ್ರೀತಿ,ಬಾಂಧವ್ಯದೊಳಗಿರುವನು, ಎನ್ನುವಾಗ, ಅವರ ಕವಿಸಹಜ ಅನಂತಪ್ರೇಮವೇ ದೇವರ ರೂಪತಾಳುತ್ತದೆ. ಕುವೆಂಪು ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, “ನೂರು ದೇವರನೆಲ್ಲ ನೂಕಾಚೆ ದೂರಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ” ಹಾಗೆ ಬರೆಯುವಾಗ ದೇಶ, ನಾಡು ಮತ್ತು ನೆಲ ಅವರಿಗೆ ದೇವೀ ಸ್ವರೂಪವಾಗುತ್ತೆ. ಹೀಗೆ ಸಾಮಾನ್ಯರು ದೇವರನ್ನು ಬೇರೆ ಬೇರೆ ರೂಪಗಳಲ್ಲಿ, ಕಂಡರೆ, ಕವಿಗಳು,ದಾರ್ಶನಿಕರು ಆತನನ್ನು, ಎಲ್ಲರೊಳಗೂ, ಎಲ್ಲವಲ್ಲೂ, ಮೂರ್ತವಾಗಿ ಹಲವೊಮ್ಮೆ, ಅಮೂರ್ತವಾಗಿ ಕೆಲವೊಮ್ಮೆ ಕಾಣುತ್ತಾರೆ. ಅದಕ್ಕೆ ಸರಿಹೊಂದುವ ಪ್ರಾರ್ಥನಾ ಪದ್ಧತಿ ಜನಜೀವನದ ವಿವಿಧ ಎಸಳುಗಳ ಬಣ್ಣಗಳಂತೆ ವಿವಿಧ ಆಚರಣೆಗಳಾಗಿವೆ.ಹಿಂದೂ ಸಮಾಜದಲ್ಲಿ ಮೂರ್ತಿಪೂಜೆ ಅತ್ಯಂತ ಸಾಮಾನ್ಯ. ಮೂರ್ತಿ ಸಿಗಲಿಲ್ಲವಾದರೆ ದೇವರ ಚಿತ್ರವೂ ನಮಗೆ ಸರಿಯೇ. ಹೈದರಾಬಾದ್ ನ ಕವಯಿತ್ರಿ, ಪ್ರಭಾ ಮಟಮಾರಿ ಅವರ “ದೇವರ ವಾನಪ್ರಸ್ಥ ” ಕವಿತೆಯ ಈ ವಸ್ತು, ಬಹಳ ಗಹನವಾದದ್ದೇ. ” ತನ್ನ ಜೀವನಕೊಂದು ಇರಲೆಂದು ಮಿತಿ.ಮನುಷ್ಯನೇ ಸೃಷ್ಟಿಸಿದಾ ಧರ್ಮನೀತಿ ನಿಷ್ಟೆ ಯಿಂದ ಧರ್ಮವ ಪಾಲಿಸಿದಾತಎನಿಸಿಕೊಂಡ ಧರ್ಮದಾತ. ಮಿತಿ ಮೀರಿ ಮಾಡಿದ ತಪ್ಪುಅಪರಾಧಗಳು ತಿರುಗುಬಾಣಗಳಾದಾಗಮೊರೆ ಹೋದ ದೇವರಬಗೆ ಬಗೆಯ ದೇವರ ಚಿತ್ರಗಳ ತಂದುಗೋಡೆಗೆ ನೇತ್ಹಾಕಿಯೋಮಂಟಪದಲ್ಲಿ ಬಂಧಿಸಿಯೋಫಲಪುಷ್ಪ, ದೀಪ ಧೂಪಗಳಅಟ್ಟಹಾಸದ ಪೂಜೆಗೈದ,ಸುಗ್ರಾಸ ಭೋಜನವ ಮಾಡಿನೈವೇದ್ಯವೆಂದಾತಾನೇ ತಿಂದು ತೇಗಿದಾ. ಸಂಪೂರ್ಣವಾದಾಗ ತನ್ನಾಸೆ ,ತಾಯ್ತಂದೆಯರನಟ್ಟಿ ವೃದ್ಧಾಶ್ರಮಕೆಶ್ರದ್ಧೆಯಿಂದ ಪೂಜೆ ದೇವರ ಪಟಗಳಿಗೆಬಿಟ್ಟಾ,ಊರಾಚೆಯ ನಿರ್ಜನಪ್ರದೇಶದ ಹಳೆಯ ಮರವೊಂದರಡಿಗೆ !ವೃದ್ಧ ಮಾನವನಿಗೆ ನಾಲ್ಕು ಗೋಡೆಗಳಮೇಲೊಂದು ಸೂರಿನ ಛಾಯೆಯದಯಪಾಲಿಸಿದ ದೇವರಿಗೆ,ಮಾನವ ಹೇರಿದ ವಾನಪ್ರಸ್ಥದ ದೀಕ್ಷೆ! ಮರದಕೆಳಗೆ ಹಳೆಯ ದೇವರ ಪಟದಲ್ಲಿಅದೇ ದಿಟ್ಟನೋಟ, ನಸುನಗೆಅಭಯ ವರದ ಹಸ್ತದ ಚಿತ್ರಮಳೆ ಚಳಿ ಗಾಳಿ ಹೆಚ್ಚಾದಾಗ ,ಕೊಚ್ಚಿ ಹೋಗಿ ನೀರಿನೊಡನೆ ,ನಿಸರ್ಗದಲ್ಲಿ ಹಸಿರಾಗಿ ನೀಲಾಕಾಶದಡಿಯಲಿ ಧುಮ್ಮಿಕ್ಕುವ ಜಲಪಾತವಾಗಿ ,ಜುಳು ಜುಳು ಹರಿವ ಹಳ್ಳವಾಗಿ ,ಹೊಳೆಯಾಗಿ ನಳ ನಳಿಸುವಹೂ ಬಳ್ಳಿಯಾಗಿ ಕವಿಯ ಕಣ್ಣಲ್ಲಿದೇವರೂ ಕವಿತೆಯಾದ.” ಅವರ ಕವಿತಾ ಕಥನದ ಆರಂಭದ ಸಾಲುಗಳು, ಕವಿತೆಗೆ ಅವರು ಹಾಕುವ ತಾತ್ವಿಕ ತಳಹದಿ. ಮುಂದಿನ ಸಾಲುಗಳಲ್ಲಿ, ಸ್ವಾರ್ಥಿ ಮನುಷ್ಯ, ತನ್ನ ಆಚಾರದೋಷಗಳ ಪರಿಣಾಮಗಳನ್ನು ಎದುರಿಸಲಾಗದೆ, ದೇವರ ಮೊರೆ ಹೋಗುತ್ತಾನೆ. ಇದು ಒಂದು ನಂಬಿಕೆಯ ಮೇಲೆ ನಿಂತಿರುವ ಸೌಧ. ಪ್ರಾರ್ಥನೆ, ಪೂಜೆ ಇತ್ಯಾದಿ ಆಚರಣೆಗಳಿಂದ ದೇವರು ಪ್ರಸನ್ನನಾಗಿ, ಸಮಸ್ಯೆ ಪರಿಹಾರವಾಗುತ್ತೆ,ಎಂಬುದೇ ಆ ನಂಬಿಕೆ.ಪ್ರಭಾ ಅವರು, ಈ ಆಚರಣೆ, ಸ್ವಾರ್ಥ, ಮತ್ತು ದೇವರ ನಿಜ ಭಕ್ತಿಯ ನಡುವಿನ ತಳಕಾಣದ ಅಂತರವನ್ನು ಮಥಿಸಿ ತೆಗೆಯುತ್ತಾರೆ. ಈ ಸಾಲುಗಳು, ಅಲ್ಲಮ ಪ್ರಭುಗಳ ವಚನವನ್ನು ನೆನಪಿಸುತ್ತೆ. “ಮಾಡಿದ ಓಗರ ಮಾಡಿದಂತೆ ಇದ್ದಿತ್ತುನೀಡಿದ ಕೈಗಳೆಡೆಯಾಡುತ್ತಿದ್ದವುಲಿಂಗಕ್ಕರ್ಪಿತವ ಮಾಡಿದೆನೆಂಬರುಒಂದರಲೊಂದು ಸವೆಯದು ನೋಡಾಲಿಂಗವಾರೋಗಣೆಯ ಮಾಡಿದನೆಂಬರುತಾವುಂಡು ನಿಮ್ಮ ದೂರುವರು ಗುಹೇಶ್ವರ.” ಪ್ರಭಾ ಅವರ ಕವಿತೆಗೆ ಹೊಸ ಹೊಳಹು ಕೊಡುವುದೇ ಮುಂದಿನ ಸಾಲುಗಳು. ಈ ಸಾಲುಗಳಲ್ಲಿ, ಆಧುನಿಕ ನಾಗರಿಕ ಸಮಾಜದ, ವ್ಯಾಪಾರೀ ವ್ಯವಸ್ಥೆಯ ಮನೋಭಾವ ಕಾಣಿಸುತ್ತೆ. ತನ್ನ ಅಗತ್ಯ ಪೂರ್ಣವಾದ ನಂತರ ಮನುಷ್ಯ ಯಾವುದನ್ನೂ ಇಟ್ಟುಕೊಂಡು ನಷ್ಟ ಅನುಭವಿಸಲು ತಯಾರಿಲ್ಲ. ಅದು, ತನ್ನ ವೃಧ್ಧ ತಂದೆತಾಯಂದಿರಿರಬಹುದು, ಹಾಲು ನಿಂತ ದನವಿರಬಹುದು, ದೇವರ ಮೂರ್ತಿಯೇ ಇರಬಹುದು. ತಾಯಿತಂದೆಯರನ್ನು ವೃದ್ಧಾಶ್ರಮಕ್ಕೂ, ದೇವರ ಪಟಗಳನ್ನು ಮರದಡಿಯ ಕಟ್ಟೆಗೂ ( ವಾನಪ್ರಸ್ತಕ್ಕೂ) ಕಳಿಸುವ ಕ್ರಿಯೆಯಲ್ಲಿ ಬಿಂಬ ಪ್ರತಿಬಿಂಬಗಳಿವೆ. ” ಮರದಕೆಳಗೆ ಹಳೆಯ ದೇವರ ಪಟದಲ್ಲಿಅದೇ ದಿಟ್ಟನೋಟ, ನಸುನಗೆ “ ಮನುಷ್ಯನ ಭೌತಜಗತ್ತಿನ ಕ್ರಿಯೆಗಳು, ಪರಮಾತ್ಮ ಪ್ರಜ್ಞೆಯಲ್ಲಿ ಯಾವುದೇ ಬದಲಾವಣೆ ಉಂಟುಮಾಡುವುದಿಲ್ಲ. ಭಾವಾತೀತ ಶಕ್ತಿಯದು ಎಂಬ ಧ್ವನಿ, ಕವಿತೆಯದ್ದು. ಮಳೆಗೆ ಕೊಚ್ಚಿಹೋಗುವ ದೇವರ ಚಿತ್ರ, ಮಳೆಯೇ ಆಗಿ, ಜಲಪಾತವಾಗಿ, ಪ್ರಕೃತಿಯಾಗಿ ಕೊನೆಗೆ ಕವಿತೆಯ ಹಿಂದಿನ ಕಾವ್ಯಪ್ರಜ್ಞೆಯೂ ಆಗಿ ಹರಿಯುತ್ತೆ. ಸ್ಥಿರ,ಸ್ಥಿತ ಚಿತ್ರ ಹರಿಯುವ ಚೇತನವಾಗುತ್ತೆ,ಆಕಾರದಿಂದ ಬಹುರೂಪೀ ಪ್ರಕೃತಿಯಾಗಿ,ಕೊನೆಗೆ ಕಾವ್ಯಪ್ರಜ್ಞೆಯಾಗುವಾಗ, ನಿರಾಕಾರ ಬ್ರಹ್ಮನಾಗಿ, ಪ್ಯೂರ್ ಕಾನ್ಶಿಯಸ್ ನೆಸ್ ಆಗುತ್ತೆ. ಇಲ್ಲಿ ವಾನಪ್ರಸ್ತ ಅನುಭವಿಸುವ ದೇವರ ಚಿತ್ರ, ಮಳೆಗೆ ಕೊಚ್ಚಿಹೋಗುವುದು, ನಶ್ವರವಾದ ದೇಹವನ್ನು ತ್ಯಜಿಸಿ ( ದೇಹದ ಸಾವು) ಆತ್ಮ ಸ್ವತಂತ್ರವಾಗುವ ಕ್ರಿಯೆಯಾಗಿಯೂ ನೋಡಬಹುದು. ಕುವೆಂಪು ಅವರ, “ದೇವರು ರುಜು ಮಾಡಿದನು” ಎಂಬ ಕವಿತೆಯ ಕೊನೆಯ ಸಾಲುಗಳನ್ನು ಗಮನಿಸಿ. ” ಸೃಷ್ಟಿಯ ರಚನೆಯ ಕುಶಲಕೆ ಚಂದಕೆಜಗದಚ್ಚರಿಯಂದದ ಒಪ್ಪಂದಕೆಚಿರಚೇತನ ತಾನಿಹೆನೆಂಬಂದದಿಬೆಳ್ಳಕ್ಕಿಯ ಹಂತಿಯ ಆ ನೆವದಿದೇವರು ರುಜು ಮಾಡಿದನು:ರಸವಶನಾಗುತ ಕವಿ ಅದ ನೋಡಿದನು!” ಕುವೆಂಪು ಅವರ ಕವಿತೆಯಲ್ಲಿ, ಪ್ರಕೃತಿಯ ಪ್ರತೀ ಕ್ರಿಯೆಗಳ ಮೇಲೆ, ದೇವರು ರುಜುಮಾಡುತ್ತಾನೆ ಮತ್ತು ರಸವಶನಾಗುತ,ಕವಿ ಅದನ್ನು ನೋಡುತ್ತಾನೆ.ಪ್ರಭಾ ಅವರ ಕವನ, “ದೇವರ ವಾನಪ್ರಸ್ತ” ದಲ್ಲಿ, ದೇವರು ಅದೆಲ್ಲವನ್ನೂ ಮೀರಿ, ಕಾವ್ಯಪ್ರಜ್ಞೆಯೂ ಆಗುತ್ತಾನೆ. *** ಮಹಾದೇವ ಕಾನತ್ತಿಲ

ದೇವರ ವಾನಪ್ರಸ್ತ. Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ – ಸಂಚಿಕೆ ೩

ಶ್ರಾವಣ ಗೀತ ಮಹಾದೇವ ಕಾನತ್ತಿಲ ಸಂಕ್ರಮಣ! ಹೌದು, ಸಂಕ್ರಮಣ, ಒಂದು ಸ್ಥಿತಿಯಿಂದ ಇನ್ನೊಂದಕ್ಕೆ, ಮತ್ತೆ ಮತ್ತೊಂದಕ್ಕೆ!.  ಅಂಗಳದಲ್ಲಿ ಲಂಗದಾವಣಿ ಹಾಕಿ ಕುಣಿದು ಹಾರುತ್ತಿದ್ದ ಹುಡುಗಿ, ಪುಷ್ಪವತಿಯಾಗಿ, ಗಾಂಭೀರ್ಯ ತುಂಬಿ, ಗಜಗಾಮಿನಿಯಾದಾಗ ಸಂಕ್ರಮಣ. ಒಂದು ಮುಂಜಾನೆ, ಕಪ್ಪುಹಸಿರು ಜಡ ಎಲೆಗಳ ಮಾಮರದಲ್ಲಿ, ನಸುಗೆಂಪು ತಳಿರು ಚಿಗುರೊಡೆದಾಗ ಮರಕ್ಕೆ ಸಂಕ್ರಮಣ. ನಲವತ್ತರ ನಸುಕಲ್ಲಿ, ಕಣ್ಣು ಮಬ್ಬಾಗಿ ನೆಟ್ಟ ನೇರ ನೋಟಕ್ಕೆ, ಚಾಳೀಸು ಬಂದಾಗ ಸಂಕ್ರಮಣ. ಅರುವತ್ತಕ್ಕೆ ವೃತ್ತಿಯಿಂದ ನಿವೃತ್ತಿ ಸಂಕ್ರಮಣ. ಹೆಚ್ಚೇನು! ಸೂರ್ಯೋದಯ,ಸೂರ್ಯಾಸ್ತಮಾನ ದಿನ ರಾತ್ರೆಗಳ ಅದಲು ಬದಲು ಸಂಕ್ರಮಣ!.  ಪ್ರಕೃತಿಯಲ್ಲಿ, ಬದುಕಿನ ಘಟನೆಗಳಲ್ಲಿ, ಅರ್ಥವ್ಯವಸ್ಥೆಯ ಸಾಧ್ಯತೆಗಳಲ್ಲಿ, ನೇರವಾಗಿ ಚಲಿಸುವ ನಮ್ಮ ಕಾರು, ಅಚಾನಕ್ ಆಗಿ ರಸ್ತೆ ಬಲಕ್ಕೋ, ಎಡಕ್ಕೋ  ತಿರುಗಿದರೆ ಒಂದು ಬಿಂದುವಿನಲ್ಲಿ ದಾರಿ ಸಂಕ್ರಮಿಸುತ್ತದೆ. ಹೌದು ಅಲ್ಲೊಂದು ಸಂಧಿಬಿಂದುವಿದೆ. ಇಂತಹ ಸಂಕ್ರಮಣಕ್ಕೆ, ಕವಿಮನಸ್ಸನ್ನು ಹೇಗೆ ಸ್ಪಂದಿಸಬಹುದು ಎನ್ನುವುದು ಕೌತುಕವೇನಲ್ಲ. ಕವಿಮನಸ್ಸು ಅತ್ಯಂತ ಸೂಕ್ಷ್ಮ. ಸುತ್ತುಮುತ್ತಲಿನ ಅತಿ ಚಿಕ್ಕ ಬದಲಾವಣೆಗಳನ್ನೂ, ಗಮನಿಸಿ ಸ್ಪಂದಿಸುವ, ಅನುಭವಿಸಿ, ಸೃಜಿಸುವ ಮನಸ್ಸದು. ಉದಾಹರಣೆಗೆ, ನಿನ್ನೆಯವರೆಗೆ ರಣರಣ ಬಿಸಿಲು, ಸಾಯಂಕಾಲ ಗಾಳಿಬೀಸಿದರೂ, ಒಲೆಯಿಂದ ಹೊರಟ ತಿದಿಯ ಹಾಗೆ ಬೇಯಿಸುವ ಗಾಳಿ. ಧೂಳನ್ನೆಬ್ಬಿಸುವ, ಸುಳಿ ಸುಳಿಯಾಗಿ ತಿರುಗಿಸುವ ಸುಂಟರಗಾಳಿ. ಆಕಾಶದಲ್ಲಿ ಬಿಳೀ ಮೋಡಗಳು ನಿರಾಶೆಯ ಹೆಣವನ್ನು ಹೊತ್ತು ಸ್ಮಶಾನ ಹುಡುಕುವಂತೆ ಸುತ್ತುವಾಗ, ಮಳೆಯೆಲ್ಲಿಯದು! ಎಲ್ಲೋ ಮರೀಚಿಕೆಯಂತೆ ಒಂದೋ ಎರಡೋ ಹನಿ ಉದುರಿಸಿ ವಾತಾವರಣವನ್ನು, ಇಡ್ಲಿ ಬೇಯಿಸುವ ಕುಕ್ಕರ್ ನೊಳಗಿನ ಹಬೆಯಂತೆ ಬೆವರಿಳಿಸುವ ಹವೆ.  ಹಾಗಿದ್ದಾಗ ಅಚಾನಕ್ ಆಗಿ ಮಳೆ ಬಂದರೆ! ಅದೆಂಥಾ ಮಳೆ!. ಇಳೆ ತಣಿಸುವ, ನೊಂದು ಬಿಕ್ಕಳಿಸುವ ಮನಸ್ಸಿಗೆ ಬೆನ್ನು ಸವರಿ ಸಾಂತ್ವನ ಹೇಳುವ ಅಮ್ಮನ ಸ್ಪರ್ಶದಂತಹಾ ಮಳೆ!. ಮಳೆಯೋ ಮಳೆ. ಹ್ಞಾ! ಇದೊಂದು ಮೈನವಿರೇಳಿಸುವ ಸಂಕ್ರಮಣವೇ!. ಹೀಗೆ ಉತ್ತರ ಕರ್ನಾಟಕಕ್ಕೆ ಹಾಜರು ಹಾಕುವುದು ಶ್ರಾವಣ! (ಇವಿಷ್ಟೂ ಮಲೆನಾಡು ಮತ್ತು, ಕರಾವಳಿಗೆ ಅನ್ವಯವಾಗಲ್ಲ. ಅಲ್ಲಿ, ಆಷಾಢ ಪೂರ್ತಿ ಮಳೆಸುರಿದು,ಶ್ರಾವಣದಲ್ಲಿ ಸೋನೆಮಳೆ.) ಶ್ರಾವಣ ಬಂತೆಂದರೆ, ಬೇಂದ್ರೆಯಂತಹ ಬೇಂದ್ರೆ, ಕರಗಿ ಹರಿಯುತ್ತಾರೆ.. “ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಓ! ಬಂತು ಶ್ರಾವಣ” ಸಮ ದೃಷ್ಟಿ, ಬೇಂದ್ರೆಯವರ ಶ್ರಾವಣಕ್ಕೆ!.  ಈ ಶ್ರಾವಣ, ಎಲ್ಲರಿಗೂ, ಎಲ್ಲಾ ನೆಲಕ್ಕೂ, ತಾರತಮ್ಯವಿಲ್ಲದೆ ಕದ ತಟ್ಟಿ, ಎಲ್ಲವನ್ನೂ ಹೊಸತಾಗಿಸುವ ಸಂಕ್ರಮಣ ಕ್ರಿಯೆ. ಶ್ರಾವಣದ ಅಗಾಧತೆ,  ಮನಷ್ಯನ ಯೋಚನೆಗೂ ಮೀರಿದ ಅದರ ಶಕ್ತಿಯನ್ನು, ವ್ಯಾಪ್ತಿಯನ್ನು ಬೇಂದ್ರೆಯವರು ಈ ಕೆಳಗಿನ ಸಾಲುಗಳಲ್ಲಿ ಅನುಭವಿಸುತ್ತಾರೆ. “ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ| ಕುಣಿದಾವ ಗಾಳಿ| ಭೈರವನ ರೂಪತಾಳಿ” ಇಲ್ಲಿ, ಕಡಲು, ಗಾಳಿ ಇತ್ಯಾದಿಗಳು, ಬೇಂದ್ರೆಯವರ ಕಾವ್ಯ ಕುಸುರಿಯ ಹಲವು ಅರ್ಥಸಾಧ್ಯತೆಗಳು. ಅವರು ಮುಂದುವರೆದು, “ಶ್ರಾವಣ ಬಂತು ಘಟ್ಟಕ್ಕ ರಾಜ್ಯ ಪಟ್ಟಕ್ಕ, ಬಾಣ ಮಟ್ಟಕ್ಕ” ಅನ್ನುತ್ತಾರೆ. ಶ್ರಾವಣ ಎಂಬ ಪ್ರತಿಮೆಯನ್ನು, ಮಳೆಯಿಂದ, ಎತ್ತರಕ್ಕೆ ಬೆಳೆಸಿ, ಅದಕ್ಕೆ ರಾಜ್ಯಭಾರದ ಹವಾಮಾನದ ಪ್ರತಿಮೆ, ವಿವಿಧ ಬದುಕಿನ ಸ್ತರಗಳನ್ನು ಅದು ಆವರಿಸುವ ಪ್ರತಿಮೆ, ಅದರ ಅಗಾಧತೆ ಇತ್ಯಾದಿ ಆಯಾಮಗಳಿಂದ ಅರ್ಥವರ್ಷವಾಗಿಸುತ್ತಾರೆ. ಆಷಾಢ ಮಾಸದ ಅಗಂತುಕ, ಅಪರೂಪದ ಅತಿಥಿ ಮಳೆ. ನೆಲ ಹಸನು ಮಾಡಿ, ಬಿತ್ತಿ, ಮಳೆಗಾಗಿ ಕಾಯುವಾಗ, ಅದೋ ನೋಡಿ, ಆಗಸ ತುಂಬಾ ದಟ್ಟ ಮೋಡಗಳು.ಮೋಡಗಳು ಜೀವಜಾಲಕ್ಕೆ ಹೊಸ ಭರವಸೆಯ ಮೋಡ.‌ ಬರೇ ಮೋಡವಲ್ಲ, ಆಗಸದ ತುಂಬಾ ತೂತು ಬಿದ್ದು ಸೋರಿ ಬೀಳುವ ತುಂತುರು ನಿರಂತರ ಮಳೆ, ಆಶೆ ಆಶೋತ್ತರಗಳ ಸಂಕೇತ. “ಬನಬನ ನೋಡು ಈಗ ಹ್ಯಾಂಗ| ಮದುವಿ ಮಗನ್ಹಾಂಗ ತಲಿಗೆ ಬಾಸಿಂಗ| ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು” ಶ್ರಾವಣ ಎಂದರೆ ಬೇಂದ್ರೆಯವರಿಗೆ ಸೃಷ್ಟಿಯ ಮುಖಬಾಗಿಲು.  ಅಸಂಖ್ಯ ಬೀಜಗಳು ತಂತಾನೇ ಮೊಳೆತು ಜೀವಸಂಕುಲಗಳ ಚಿಲಿಪಿಲಿ ಎಷ್ಟು ಅಗಾಧ ಎಂದರೆ  ಬೆಟ್ಟಗಳೆಲ್ಲಾ ಹಸಿರಿನ ಅಂಗಿ ತೊಡುತ್ತವೆ. ಶ್ರಾವಣ ಎಂದರೆ ಅದು ಸೃಷ್ಟಿಕ್ರಿಯೆಯ ಉತ್ಸವವೂ ಹೌದು.  ಬನಬನಗಳೂ ಬಾಸಿಂಗ ಕಟ್ಟಿ ಮದುಮಗ, ಮದುಮಗಳಾಗಿ ಸಂಭ್ರಮಿಸುವದನ್ನು ಬೇಂದ್ರೆಯವರು, ಶ್ರಾವಣದ ಮೂಲಕ ಕಾಣುತ್ತಾರೆ. ರೈತರಿಗೆಲ್ಲ, ಬಿತ್ತಿದ,ಬೀಜ, ಮೊಳಕೆ ಹಸಿರು ಚಿಗುರೊಡೆಯುವ ಸಂತಸ. ಪ್ರಕೃತಿ ಹಸಿರುಮನೆಯಾಗಿ ಹೊಸ ಹಕ್ಕಿಗಳನ್ನು ಕರೆಯುತ್ತೆ, ಬಳ್ಳಿಗಳು ಬಳುಕಿ ಮರವೇರಿ ಹೂಗಳ ಬಾವುಟ ಹಾರಿಸುತ್ತವೆ. ಇಂತಹಾ ಶ್ರಾವಣ, ಪ್ರಕೃತಿಯ ಸಂಭ್ರಮದ ಬಾಗಿಲು ತೆರೆದಂತೆ,  ಜೀವಸಂಕುಲಕ್ಕೆ ಚೇತನ ಮೂಡಿಸಿದಂತೆ,  ಹಬ್ಬಗಳೂ ಜನಮಾನಸಕ್ಕೆ ಬಣ್ಣ ತುಂಬುತ್ತವೆ. ಮದುವೆಯಾಗಿ ಗಂಡನಮನೆ ಸೇರಿದ ಹೆಣ್ಣು ಮಗಳನ್ನು ಹೊಕ್ಕುಳಬಳ್ಳಿ ಸೆಳೆಯುತ್ತೆ,ಆಷಾಢ ಮಾಸದ ಕೊನೆಯಲ್ಲಿ. ಅಣ್ಣ ಬಂದು ತವರುಮನೆಗೆ ಕರೆದೊಯ್ಯುವ, ಹಬ್ಬದ ಸಡಗರ ಶ್ರಾವಣದ ಚೌತಿ ಮತ್ತು ಪಂಚಮಿ. ಜಾನಪದ ಸಂಗೀತಕ್ಕೂ ಮತ್ತು ಶ್ರಾವಣಕ್ಕೂ ಬಿಟ್ಟಿರದ ಸಂಬಂಧ. ‘ಆನಂದ ಕಂದ’ ( ಬೆಟಗೇರಿ ಕೃಷ್ಣಶರ್ಮ) ಅವರು ಜಾನಪದ ಶೈಲಿಯಲ್ಲಿ ಬರೆದ ಹಾಡು.. “ಪಂಚಮಿ ಹಬ್ಬ ಉಳಿದಿದೆ ದಿನ ನಾಕs.. ಅಣ್ಣ ಬರಲಿಲ್ಲ ಯಾಕs ಕರಿಯಾಕs..” ಅಂತ ಆರ್ತದನಿಯಲ್ಲಿ ಅಣ್ಣನಿಗಾಗಿ ಕಾಯುವ ತಂಗಿಯ ಹಾಡು.  ಈ ಹಾಡು ಮನಮನವನ್ನೂ ಹೊಕ್ಕು, ಪ್ರತಿಯೊಂದು ಮನೆಯಲ್ಲೂ ಗುನುಗುನಿಸಿ, ಬರೆದವರ ಹೆಸರೇ ಮರೆತಷ್ಟು ಜಾನಪದ ಹಾಡಿನ ಸ್ವರೂಪ ಪಡೆದಿದೆ. ಈ ಶ್ರಾವಣವೇ ಹೀಗೆ. ಇದರ ಮಳೆ, ಇದರ ಮೋಡ, ಮೊಳಕೆಯೊಡೆಯುವ ಹೊಲ, ಎಲ್ಲವೂ ಆಶೆ ಆಶೋತ್ತರಗಳನ್ನು, ಭರವಸೆಗಳನ್ನು ಸೋನೆಮಳೆಯಾಗಿ ಸುರಿಸುತ್ತೆ. ಈ ಹಾಡಿನ ಕೆಳಗಿನ ಸಾಲುಗಳನ್ನು ನೋಡಿ.. “ನಮ್ಮ ತವರೀಲಿ ಪಂಚಮಿ ಭಾರಿ ಮಣದ ತುಂಬಾ ಬಟ್ಟಲ ಕೊಬ್ಬರೀ ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ ನಾನೂ ತಿನುವಾಕಿ ಬಂದ್‌ ಹಾಂಗ ಮನಕ- ಅಣ್ಣ ಬರಲಿಲ್ಲ ಯಾಕೋ ಕರಿಲಾಕ …” ಪಂಚಮಿ ಹಬ್ಬದ ಸಿಹಿ ತಿಂಡಿಗಳು, ಮನೆ ಮುಂದೆ ಚಿತ್ರಿಸುವ ರಂಗೋಲಿಗಳು, ಹೆಣ್ಮಕ್ಕಳೆಲ್ಲಾ ಮಕ್ಕಳೆಲ್ಲಾ ಸಪ್ತವರ್ಣದ ಬಳೆ ತೊಟ್ಟು ಗಲಗಲಿಸಬೇಕು, ಹೊಸ ಅಂಗಿ ತೊಟ್ಟು,ಜೋಕಾಲಿ ಆಡಬೇಕು, ಎಷ್ಟೆಂದರೆ, ಈ ಹಬ್ಬವನ್ನೇ, ಜೋಕಾಲಿ ಹಬ್ಬ ಎನ್ನುವಷ್ಟು!. ಶ್ರಾವಣ ಅಂದರೆ ಬರೇ ಮಳೆಯಲ್ಲ, ಇದೊಂದು ಸಮಾಜದಿಂದ ಸಮಾಜಕ್ಕೇ ಕಳೆಕಟ್ಟುವ ಹಬ್ಬಗಳ ತೋರಣ. ಶ್ರಾವಣದ ಪಂಚಮಿಯಂದು ಮದುವೆಯಾದ ಹೆಣ್ಣುಮಗಳು ತನ್ನ ತವರಿಗೆ ಬಂದು,  ನಾಗನಿಗೆ ಹಾಲೆರೆದು ತಮ್ನ ಬೆನ್ನು, ಬಸಿರು ತಣ್ಣಗಿರಿಸಬೇಕೆಂದು ನಾಗನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ತನ್ನ ಬೆನ್ನು ಎಂದರೆ ತವರು, ಅಣ್ಣ ತಮ್ಮಂದಿರು, ಬಸಿರು ಎಂದರೆ ಮುಂದಿನ ಪೀಳಿಗೆ. ಹೀಗೆ ತವರಿಗಾಗಿ ಮತ್ತು ತನ್ನ ಪೀಳಿಗೆಗಾಗಿ ಪ್ರಾರ್ಥನೆ ಮಾಡುವಾಗ,ಆಕೆ, ಎರಡು ಮನೆಗಳನ್ನು ತನ್ನ ಮೂಲಕ ಜೋಡಿಸುತ್ತಾಳೆ. ಶ್ರಾವಣ ಕಳೆಯುವ ಕಾಲವಲ್ಲ, ಕೂಡುವ ಕೂಡಿ ಚಿಗುರುವ ಸಮೃಧ್ಧಿಯ ಕಾಲ. ಹೀಗೆ ಶ್ರಾವಣ, ಕವಿಮನಸ್ಸಿನೊಳಗೆ ಹೇಗೆ ಹಲವಾರು ಪ್ರತಿಮೆಗಳ ರೂಪತಳೆದು ಜನ್ಮಿಸುತ್ತದೋ,ಹಾಗೆಯೇ ಜಾನಪದದಲ್ಲೂ ಹಲವು ಆಯಾಮಗಳಿಗೆ ರೂಪಕವಾಗಿ, ಹಳತನ್ನು ಮರೆಯದೆ ಹೊಸತಿಗೆ ತೆರೆಯುವ, ಸ್ವಸ್ಥ ಸಮಾಜದ ನಿರ್ಮಾಣದ, ಸಂಕ್ರಮಣ, ಜೀವಸಂಭ್ರಮ. **********

ಕಬ್ಬಿಗರ ಅಬ್ಬಿ – ಸಂಚಿಕೆ ೩ Read Post »

You cannot copy content of this page

Scroll to Top