ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ!

ಕಬ್ಬಿಗರ ಅಬ್ಬಿ – ಸಂಚಿಕೆ ೫

ನನ್ನ ಗೆಳೆಯನ ಪುಟ್ಟ ಮಗು ನನ್ ಹತ್ರ ಕೇಳಿದ,

 ” ಮಾಮಾ, ಈ ಚಂದಾಮಾಮ ಎಷ್ಟೆತ್ತರ? “.

ನಾನಂದೆ! ” ತುಂಬಾ ಎತ್ತರದಲ್ಲಿ ಇದ್ದಾನೆ ಪುಟ್ಟಾ”.

“ಹೇಗೆ ತಲಪೋದು! ” ಪುಟ್ಟನ ಪ್ರಶ್ನೆ!

ರಾಕೆಟ್ಟು..ಜೆಟ್ ಪ್ರಿನ್ಸಿಪಲ್ ಅಂತ ಒಂದಷ್ಟು ಕೊರೆದೆ!. ಪುಟ್ಟನ ಕಣ್ಣೊಳಗೆ ಏನೋ ಮಿಂಚು!

ಆತ ಅಂದ, ” ಮಾಮಾ, ಅಷ್ಟೆಲ್ಲ ಕಷ್ಟ ಯಾಕೆ! ನಮ್ಮ ತಾರಸಿಯ ಮೇಲೆ ಒಂದು ಮೆಟ್ಟಿಲು ಕಟ್ಟೋಣ!, ಆ ಮೆಟ್ಟಿಲು ಹತ್ತಿ ನಿಂತು ಇನ್ನೊಂದು ಕಟ್ಟುವಾ! ಮತ್ತೆ ಅದರ ಮೇಲೆ ಹತ್ತಿ ನಿಂತು ಇನ್ನೊಂದು ಮೆಟ್ಟಿಲು! ಹೀಗೇ ಹತ್ತಿದರೆ ಚಂದಾಮಾಮ ಸಿಗಲ್ವಾ!

ಹೀಗೆ, ಮುಗ್ಧ ಪುಟಾಣಿಗಳಿಗೂ ಕವಿಗಳಿಗೂ ಕಲ್ಪನೆ ಎನ್ನುವುದಕ್ಕೆ ಭೌತಿಕದ ಭೂತ ಕಾಡಲ್ಲ!

ಎತ್ತರ, ಇನ್ನೂ ಎತ್ತರ, ನೆಲಕ್ಕೆ ನೆಲವೇ ಮೆಟ್ಟಿಲಾಗಿ ನಿಂತ ಮೆಟ್ಟಿಲುಗಳ ಸಾಲುಗಳೇ ಹಿಮಾಲಯ ಪರ್ವತಶ್ರೇಣಿ. ‌ ತುಂಬಿದ ಕೋಶಕೋಟಿಯಿಂದ ನಿರ್ವಾತದತ್ತ ನಡಿಗೆಯದು! ಆಕಾಶವನ್ನೇ ಘನೀಕರಿಸುವ ಥಂಡಿ. ವರುಣನೂ ಅಲ್ಲಿ ಸೋತು ಗಡ್ಡೆ ಕಟ್ಟಿದ ನೀರ್ಗಲ್ಲ ಪದರದೊಳಗೆ ಬಂದಿ.

ಕರೆದೇ ಬಿಟ್ಟರು!

ಇಳಿದು ಬಾ ತಾಯೇ ಇಳಿದು ಬಾ!

ಸಾಮಾನ್ಯರೇ ಅವರು! ಅಂಬಿಕಾತನಯದತ್ತರು!

ಇಳಿದು ಬಾ ತಾಯಿ

ಇಳಿದು ಬಾ

ಹರನ ಜಡೆಯಿಂದ

ಹರಿಯ ಅಡಿಯಿಂದ

ಋಷಿಯ ತೊಡೆಯಿಂದ

ನುಸುಳಿ ಬಾ

ದೇವದೇವರನು ತಣಿಸಿ ಬಾ

ದಿಗ್ದಿಗಂತದಲಿ ಹಣಿಸಿ ಬಾ

ಚರಾಚರಗಳಿಗೆ ಉಣಿಸಿ ಬಾ

ಇಳಿದು ಬಾ ತಾಯಿ

ಇಳಿದು ಬಾ.

ಗಂಗಾ ನದಿ ಗೋಮುಖದ ಎತ್ತರದಿಂದ ಭಾಗೀರಥಿ ಯಾಗಿ ಇಳಿದು, ಬಂಗಾಳಕೊಲ್ಲಿಯಲ್ಲಿ ಸಾಗರವಾಗುವ ನಡುವಿನ ಯಾತ್ರೆ, ಅದು ದರ್ಶನ.

ನದಿ ಎಂದರೆ ಹರಿವು, ನಿರಂತರ ಹರಿವು. ಚಲನಶೀಲತೆಗೆ ಪ್ರತಿಮೆ, ನದಿ. 

ಉಕ್ಕಿ ಹರಿಯುವ ನದಿ, ಮನುಷ್ಯನ ಭಾವೋತ್ಕರ್ಷದಂತೆ.

ತಿರುವುಗಳು, ಪರಿವರ್ತನೆಯ ಸಂಧಿಯಂತೆ. ಎತ್ತರದಿಂದ ಜಲಪಾತವಾಗಿ ಬೀಳುವ ಧಾರೆ, ಪತನದ ಪ್ರತಿಮೆಯಂತೆ.

ಕೆಳಬಿದ್ದ ಧಾರೆ ಸುಳಿ ಸುಳಿಯಾಗಿ ಎದ್ದು ಕೊಚ್ಚಿಕೊಂಡು, ಕೊಚ್ಚಿಸಿಕೊಂಡು ಬಿಂದು ಬಿಂದು ಸೇರಿ ಪುನಃ ಪ್ರವಹಿಸುವುದು, ಜೀವನದ ಅನಿವಾರ್ಯ ಸಂಘರ್ಷದಂತೆ, ಮರುಹುಟ್ಟಿನಂತೆ, ಪತನದ ನಂತರವೂ ಹರಿವಿನ ಸಾಧ್ಯತೆಯ ಧನಾತ್ಮಕ ಚಿಂತನೆಯಂತೆ.

ಪರ್ವತದ ಕೊರಕಲಿನಲ್ಲಿ ಆಕೆಯ ರಭಸ, ಕೋಪವೋ, ಅಸಹನೆಯೋ, ಯೌವನದ ಶಕ್ತಿಪ್ರದರ್ಶನವೋ, ಯದ್ಧೋನ್ಮಾದವೋ ಗೊತ್ತಿಲ್ಲ.

ಬಯಲಿನ ಸಮತಲದಲ್ಲಿ  ಆಕೆಗೆ ಮಧ್ಯವಯಸ್ಸು, ಶಾಂತಚಿತ್ತೆ, ಗಂಭೀರೆ.

ಹರಡಿಕೊಳ್ಳುವಳು,  ವಿಸ್ತಾರವಾಗುವಳು,  ವಿಶಾಲ ಹೃದಯದ ಅಮ್ಮನಂತೆ.

ನಿಧಾನವಾಗಿ, ಗಮ್ಯದತ್ತ ಸಾಗುವಳು,ಯೋಗಸಮಾಧಿಯ ಅಭ್ಯಾಸದಂತೆ.

ಈ ಚಲನಶೀಲ ತತ್ವ ಹರಿಯುವ ನದಿಯ ನೀರಿನದ್ದು ಮಾತ್ರವಲ್ಲ!. ಅಸಂಖ್ಯ ಜೀವಜಾಲವನ್ನು ಗರ್ಭದಲ್ಲಿ ಹೊತ್ತು, ಅವಕ್ಕೆ ಉಸಿರೂಡಿ ಹರಿಯುವ ಹರಿವದು. ನದಿಯ ಇಕ್ಕೆಲಗಳಲ್ಲಿ, ನಾಗರಿಕತೆಯನ್ನು ಕಟ್ಟಿ, ಬೆಳೆಸುವ ಕಾಲನದಿಯೂ ಅದೇ.

ನದಿಯ ಬಗ್ಗೆ ಒಂದು ಅಪೂರ್ವ ಕಲ್ಪನೆಯನ್ನು ತಡವಿ ಮುಂದುವರಿಯೋಣ!  ಕೆಳಗಿನ ಸಾಲುಗಳು, ಸಿದ್ದಲಿಂಗಯ್ಯನವರ, “ಸಾವಿರಾರು ನದಿಗಳು” ಕವಿತೆಯಿಂದ

” ನೆನ್ನೆ ದಿನ

ನನ್ನ ಜನ

ಬೆಟ್ಟದಂತೆ ಬಂದರು

ಬೀದಿಯಲ್ಲಿ ಗಲ್ಲಿಯಲ್ಲಿ

ಬೇಲಿಮೆಳೆಯ ಮರೆಗಳಲ್ಲಿ

ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ

ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು”

ಪರಿವರ್ತನೆಯ, ಹೊಸ ಬದುಕಿನ ಕನಸು ಹೊತ್ತ ಜನರ ಹೋರಾಟದ ದನಿಗಳಿವು. ಅವರು ಮುಂದುವರೆದು,

“ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು

ವೇದಶಾಸ್ತ್ರಪುರಾಣ ಬಂದೂಕದ ಗುಡಾಣ

ತರೆಗೆಲೆ ಕಸಕಡ್ಡಿಯಾಗಿ

ತೇಲಿತೇಲಿ ಹರಿದವು

ಹೋರಾಟದ ಸಾಗರಕ್ಕೆ

ಸಾವಿರಾರು ನದಿಗಳು”

ಹೀಗೆ, ಸಿದ್ದಲಿಂಗಯ್ಯ ನವರ ಕಲ್ಪನೆಯಲ್ಲಿ, ಪರಿವರ್ತನೆಗಾಗಿ ಹೋರಾಡುವ ಪ್ರತಿಯೊಬ್ಬನೂ, ಅಂತಹ ಸಾವಿರಾರು ಜನಮಾನಸ, ಹೋರಾಟದ ಸಾಗರದತ್ತ ಧುಮುಕಿದ ಸಾವಿರಾರು ನದಿಗಳು ಅಂತ, ನದಿಗೆ ಒಂದು ಹೊಸ ಪ್ರತಿಮೆ ಕೊಟ್ಟಿದ್ದಾರೆ.

ಗಂಗಾನದಿಯನ್ನು, ಗಂಗೆಯ ತಟದ ಸಾಮಾನ್ಯ ಜನರು “ಗಂಗಾ ಮಾತಾ” ಅಂತ ಕರೆಯುತ್ತಾರೆ. ಎಷ್ಟೆಂದರೆ, ಅದು ಭೌತಿಕ ನದಿಯೆಂದು ಅವರು ಒಪ್ಪಲಾರರು. ಅದು ಅಮ್ಮ! ಈ ಭಾವನೆ, ಒಂದೆರಡು ದಿನಗಳ ಭಾವಬೆಳೆ ಅಲ್ಲ. ಇದು ಕುಡಿಯಲು ನೀರುಕೊಟ್ಟ, ಕೃಷಿಯ ಮೂಲಕ ಅನ್ನ ಕೊಟ್ಟ, ಅಮ್ಮನತ್ತ ಪ್ರೀತಿ,ಕೃತಜ್ಞ ಭಾವ. ತನ್ನನ್ನು ಸಾಕಿದ ಪ್ರಕೃತಿಯ ಶಕ್ತಿಯಾಗಿ ಅದಕ್ಕೆ ಸೂರ್ಯ, ಅಗ್ನಿ,ಇತ್ಯಾದಿ ಶಕ್ತಿಗಳ ಹಾಗೆಯೇ ದೈವೀಸ್ವರೂಪವೂ. ಗಂಗೆ ಅಂತಲ್ಲ, ಕಾವೇರಿ, ತುಂಗಭದ್ರೆ,  ಗೋದಾವರಿ ಇತ್ಯಾದಿ ನದಿಗಳ ಮಡಿಲಲ್ಲಿ ನಾಗರೀಕತೆ ಹುಟ್ಟಿ ಹುಲುಸಾಗಿ ಬೆಳೆಯಿತಷ್ಟೇ ಅಲ್ಲ, ಆ ನದಿಗಳೂ ನಮ್ಮ ಮನೆ, ಮನಸ್ಸು,ಭಾಷೆ, ಕಲೆಯ ಭಾಗವೇ ಆದವು.

ಕೆಲವು ವರ್ಷಗಳ ಹಿಂದೆ, ಉತ್ತರಾಖಂಡದಲ್ಲಿ ಭೀಕರ ಮಳೆ ಸುರಿದು, ಗಂಗೆಯ ಪ್ರವಾಹ, ತನ್ನ ತಟದಲ್ಲಿ ಕಟ್ಟಿದ ಆಧುನಿಕತೆಯ ರೂಪಕಗಳಾದ ಹೋಟೆಲ್ ಕಟ್ಟಡಗಳನ್ನು ನೋಡು ನೋಡುತ್ತಲೇ ಕೊಚ್ಚಿ ತನ್ನ ಪ್ರವಾಹಕ್ಕೆ ಎಳೆದು ನುಂಗಿ ಹರಿದ ರೌದ್ರ ರೂಪವನ್ನು ,ನಾನು ಋಷೀಕೇಶದಲ್ಲಿ ಕಣ್ಣಾರೆ ನೋಡಿರುವೆ. ಆಗ ಅಲ್ಲಿನ ಜನರ ಬಾಯಲ್ಲಿ ಒಂದೇ ಮಾತು,

 “ಗಂಗಾ ಮಾ, ಗುಸ್ಸೇ ಮೈ ಹೈ”

ನೀರಿನಲ್ಲಿ ತರಗೆಲೆಯಂತೆ ತೇಲಿ ಹೋಗುವ ಕಾರು, ಗ್ಯಾಸ್ ಸಿಲಿಂಡರ್, ಮರದ ದಿಮ್ಮಿಗಳನ್ನು ನೋಡಿದರೆ ನಿಜವಾಗಿಯೂ, ನಾಗರಿಕತೆಯ ದೌರ್ಜನ್ಯದತ್ತ ಅಮ್ಮ ಅತೀವ ಕೋಪದಲ್ಲಿ ಹರಿಯುವಂತೆಯೇ ನನಗೂ ಅನಿಸಿತ್ತು.

” ನಿನಗೆ ಪೊಡಮಡುವೆ

ನಿನ್ನನುಡುತೊಡುವೆ

ಏಕೆ ಎಡೆತಡೆವೆ

ಸುರಿದು ಬಾ

ಸ್ವರ್ಗ ತೊರೆದು ಬಾ

ಬಯಲ ಜರೆದು ಬಾ

ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ”

ಸ್ವರ್ಗವನ್ನು ತೊರೆದು ಬಂದ ತಾಯೀ, ನಿನಗೆ ಪೊಡಮಡುವೆ,  ಎನ್ನುವ ಬೇಂದ್ರೆ ಅವರಿಗೆ ಈ ತಾಯಿಯತ್ತ ಎಷ್ಟು ಪ್ರೀತಿ. ನದಿ,ತಾಯಿಯೇ ಎಂಬ ಸ್ಥಾಯೀ ಭಾವ.

“ಬಯಲ ಜರೆದು ಬಾ, ನೆಲದಿ ಹರಿದು ಬಾ,” 

ಎನ್ನುವಾಗ ಅಮ್ಮನ ಶಕ್ತಿಚಲನಕ್ರಿಯೆಯತ್ತ ಬಾಲಕ ಬೇಂದ್ರೆಯ ಬೆರಗಿನ,ಒಲವಿನ ಕರೆ ಕೇಳಿಸುತ್ತೆ ಅಲ್ಲವೇ!.

ಹೀಗೆ ಚಲನಶೀಲ, ಚಣಚಣದ ಪರಿವರ್ತನೆಯೇ ಅಂತರಂಗದ ಸೂತ್ರವಾಗಿ ಹರಿಯುವ ನದಿಯನ್ನು ಒಡ್ಡು ಕಟ್ಟಿ ಬಂಧಿಸಿ ಒಂದು ಕೆರೆಯಾಗಿಸಿದರೆ, ಅದು ಕಂಬಾರರ ಗಂಗಾಮಾಯಿ ಕವಿತೆಯಾಗುತ್ತೆ. 

” ಕೆಂಪಾನ ಕೆಂಪುಗುಡ್ಡ ಬೆಳ್ಳಾನ ಬಿಳಿ ಗುಡ್ಡ

ಒಡಮುರಿದು ಕೂಡಿದ ಒಡ್ಡಿನಲ್ಲೆ,ನಮ್ಮೂರ ಕೆರೆ

ಹೆಸರು ಗಂಗಾಮಾಯಿ.”

ಗುಡ್ಡಗಳು ಸೇರುವಲ್ಲಿ, ಅಣೆಕಟ್ಟು ಕಟ್ಟಿ, ಹರಿಯುವ ನೀರನ್ನು ಮನುಷ್ಯ ನಿಲ್ಲಿಸಿದ್ದಾನೆ. ಹಾಗೆ ಮೂಡಿದ, ಕೆರೆಯೇ ಗಂಗಾಮಾಯಿ ಕೆರೆ .

ಮಾಯಿ ಅಂದರೆ ಮಾತೆಯೇ. ಗಂಗೆಯ ಎಲ್ಲಾ ಗುಣಗಳನ್ನು ಈ ಕೆರೆ ಹೊಂದಿದೆ, ಆದರೆ ಚಲನಶೀಲತೆ ಇಲ್ಲ. ಈ ಕವಿತೆಯಲ್ಲಿ ಹಲವಾರು ಪ್ರತಿಮೆಗಳು.

ಈ ಕೆರೆಯ ಸುತ್ತ ಮೂರು ಥರದ ಜೀವ ವೈವಿಧ್ಯತೆ.

೧. ” ಮರಗಿಡ ಕಂಟಿ,ಸಸ್ಯ ಕೋಟಿ

೨. ” ನಾಯಿ ನರಿ ಹಂದಿ,ಶುಕಪಿಕಾದಿಯ, ಚೌರ್ಯಾಂಸಿ ಲಕ್ಷ ಕೀಚು ಕೀಚು.

( ಹಲವು ಪ್ರಾಣಿಗಳಲ್ಲದೇ, 84 ಲಕ್ಷ, ಕ್ರಿಮಿ ಕೀಟಗಳ ಪ್ರಾಣಿಜಗತ್ತು. , ಕೀಚು ಕೀಚು ಪ್ರಯೋಗ, ಒಂದು ಧ್ವನಿ ಪ್ರಬೇಧ)

೩. ದಡದ ಗಿಡಗಳ ನೆತ್ತಿ ಜೋತ ಬಾವಲಿ ಹಿಂಡು, ನೀರಿನೆದೆಯಲ್ಲದರ ವಕ್ರ ನೆರಳು.

( ಇದನ್ನು ಸ್ವಾರ್ಥ ಮನುಷ್ಯ ಪ್ರಜ್ಞೆಯ ಪ್ರತಿಮೆ, ಅಂತ ವಿಮರ್ಶಕರು ವಿವರಿಸಿದ್ದಾರೆ. ಈ ಬಾವಲಿಗಳು, ತಲೆಕೆಳಗಾಗಿ, ದಡದ ಮರಕ್ಕೆ ಜೋತು ಬಿದ್ದಿವೆ, ಅವುಗಳ ವಕ್ರ ನೆರಳು ಕೆರೆಯ ಎದೆಮೇಲೆ.)

ಕವಿತೆಯುದ್ದಕ್ಕೂ ಹರಿವ ನೀರು,ನಿಂತ ನೀರಾಗಿ, ಅದನ್ನು ಮನುಷ್ಯ, ತನ್ನ ಸ್ವಾರ್ಥಕ್ಕಾಗಿ ಕೊಳೆ ಕೊಳೆಯಿಸುವ ಭಾವ.

ಕವಿತೆಯಲ್ಲಿ ಕವಿ ಉಪಯೋಗಿಸಿದ ಒಂದು ಯೋಚನೆಗೂ ನಿಲುಕದ, ಪ್ರತಿಮೆಯಿದೆ. ಸಾಧಾರಣವಾಗಿ, ಬೆಳಗು, ಶುಭ ಸೂಚಕವೂ,ಆನಂದದಾಯಕವೂ.

ನಿರಾಶೆಯ ಪರಮಾವಧಿಯಲ್ಲಿ ಕವಿಗೆ ಸೂರ್ಯೋದಯ ಹೇಗೆ ಕಾಣಿಸುತ್ತೆ?

 ” ಮೂಡಣದ ಮುದಿಕುರುವೊಡೆದು ನೆತ್ತರು ಕೀವು ಸೋರಿತೋ, ಸುರುವಾಯ್ತಿಲ್ಲಿ ಚಲನೆ”

ಜೀವಿಸುವ ದೇಹದ ನೂರಾರು ಅಂಗಾಂಗಗಳಿಗೆ ರಕ್ತಸಂಚಾರ ನಿರಂತರವಾಗಿ ಆಗುತ್ತಲೇ ಇರಬೇಕು. ಹಾಗೆ ಹರಿಯುತ್ತಾ, ರಕ್ತ, ದೇಹದ ಮುಕ್ಕೋಟಿ ಜೀವಕೋಶಗಳಿಗೆ ಶಕ್ತಿ ಹಂಚುತ್ತೆ. ಜೀವಕೋಶಗಳ  ಕಲ್ಮಶಗಳನ್ನು ತನ್ನೊಳಗೆ ಸೇರಿಸಿ, ಕಿಡ್ಣಿಯ ಮೂಲಕ ಹಾದು, ಕಲ್ಮಶ ಕಳೆದು, ಶ್ವಾಸಕೋಶಗಳನ್ನು ಹಾದು, ಕಾರ್ಬನ್ ಡೈ ಆಕ್ಸೈಡ್ ಕೊಟ್ಟು,ಆಕ್ಸೀಜನ್, ತುಂಬಿ ಹೃದಯದ ಮುಖಾಂತರ ಪುನಃ ದೇಹದ ಸುತ್ತ ಸುತ್ತುತ್ತೆ. ಇದೊಂದು ಚಲನಶೀಲ ಕ್ರಿಯೆ!. ದೇಹದಲ್ಲಿ ಕುರುವಾದಾಗ, ರಕ್ತಕಣಗಳು ಸತ್ತು, ಕೀವಾಗಿ, ಕುರು ಒಡೆದಾಗ ಸೋರುತ್ತದೆ. ಆ ಸೋರಿಕೆಯಲ್ಲಿ, ಕೆಟ್ಟುಹೋದ ರಕ್ತವೂ ಸೋರುತ್ತೆ. ಬಿಳಿ,ಕೆಂಪು ಬಣ್ಣಗಳ ಮಿಶ್ರಣವದು. ಚಲನಶೀಲ ತತ್ವಕ್ಕೆ ತಡೆಯುಂಟಾದಾಗ, ಕುರುವಾಗಿ ಒಡೆದು,ಸೋರುವುದು, ದೇಹದ ಪ್ರಕೃತಿ. ಬೆಳಗನ್ನು,ಇಷ್ಟು ಪ್ರತಿಮಾತ್ಮಕವಾಗಿ ಋಣಾತ್ಮಕ, ವಿದ್ಯಮಾನಕ್ಕೆ ಬಳಸಿದ ಇನ್ನೊಂದು ಕಾವ್ಯ ಇದಯೇ?.  ಪ್ರಕೃತಿ ಚಲನಶೀಲ ತತ್ವದ ಮೇಲೆಯೇ ನಿಂತರುವ, ಸದಾ ಬದಲಾಗುವ, ಅನಂತ ವ್ಯವಸ್ಥೆ. ಅದಕ್ಕೆ ತಡೆಯಾದಾಗ, ಭೂಕಂಪ,ನೆರೆ, ಚಂಡಮಾರುತ ಇತ್ಯಾದಿಗಳು, ನಿಸರ್ಗ,ತನ್ನ ಡಾಕ್ಟರ್,ತಾನೇ ಆಗುವ ಪ್ರಕ್ರಿಯೆಯಷ್ಟೇ?.

ಹಾಗೆ ಮೂಡಣದ ಮುದಿಕುರುವೊಡೆದು,ಸೋರಿದಾಗ, ಸುರುವಾಯ್ತಿಲ್ಲಿ,ಚಲನೆ! ಎನ್ನುವಾಗ ಕವಿ,ಕುರುವಿಗೆ ಕನ್ನಡಿ ಹಿಡಿದು ಗಂಗಾಮಾಯಿ ಕೆರೆಯ ಸುತ್ತ ನಡೆಯುವ ಮಾನವ ನಿರ್ಮಿತ ಕೊಳೆತ, ಕೊಳೆಯುತ್ತಲೇ ಇರುವ ವ್ಯವಸ್ಥೆಯ ಪ್ರತಿಬಿಂಬ ತೋರಿಸುತ್ತಾನೆ.

” ಕೊಡುಕೊಲ್ಲು ವ್ಯವಹಾರ,ದರ ನಿರಾತಂಕ

ತಂಗಾಳಿ ಸುಳಿಯದ,ದೊಡ್ಡ ತೆರೆ ಮೂಡಿ ಮುಳುಗದ

ಹರಿಯುವುದಕ್ಕೆ ದಿಕ್ಕಿಲ್ಲದ ನೀರು”

ಹರಿಯುವ ತೊರೆಗೆ, ಮನುಷ್ಯ,ಒಡ್ಡು ಕಟ್ಟಿ, ಕೊಡು ಕೊಲ್ಲು ವ್ಯವಹಾರದ ವ್ಯವಸ್ಥೆ, ವ್ಯಾಪಾರ ದರದಿಂದ ಅರ್ಥದಲ್ಲಿಯೇ ಅರ್ಥ ಅನ್ನುವ, ತಂಗಾಳಿಯೂ ಸುಳಿಯದ ವ್ಯವಸ್ಥೆ. ಹೊಸ ಯೋಚನೆ, ಹಳೆಯದು ತೊಳೆದು ಹೊಸ ಚಿಂತನೆ,ಇಲ್ಲದ, ಸ್ತಬ್ಧ ಚಿತ್ರದಂತೆ ನಾವೇ ಹೇರಿಕೊಂಡು, ಪ್ರಕೃತಿಯನ್ನು ಕಟ್ಟಿ ಹಾಕಿ ನಿಲ್ಲಿಸಿದ ವ್ಯವಸ್ಥೆ. ಪ್ರಕೃತಿ ಹರಿಯಲು ಬಯಸುತ್ತಿದೆ,ಆದರೆ ಮನುಷ್ಯ ಕಟ್ಟಿದ ಒಡ್ಡು,ಆ ಹರಿವಿಗೆ ಅಡ್ಡವಾಗಿದೆ!.

1969ರಲ್ಲಿ, ಕಂಬಾರರು ಬರೆದ ಕವಿತೆ, ಇಂದು  ಹೆಚ್ಚು, ಮನಮುಟ್ಟಲು ಕಾರಣ, ನಾವಿನ್ನೂ ಕಟ್ಟುತ್ತಿರುವ ಒಡ್ಡುಗಳೇ?. ಕೊರೊನಾ ವೈರಸ್ ಕೂಡಾ, ಮಾನವ, ನಿರ್ಮಿಸಿ ಕೊಳೆಯಿಸಿದ ಕೆರೆಯೊಳಗೆ ಹುಟ್ಟಿದ್ದೇ?.

*******************************************************

ಲೇಖಕರ ಬಗ್ಗೆ:

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

17 thoughts on “ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ!

  1. ಹಲವು ಕವಿಗಳ ಕಾವ್ಯ ಸಾಲುಗಳೊಂದಿಗೆ ನದಿ ಹಾಗೂ ಜೀವನವನ್ನು ಸಂಯೋಜಿಸುತ್ತಾ, ವಿಶ್ಲೇಷಿಸುತ್ತಾ… ಬರೆದಿರುವ ಈ ಲೇಖನ ಬಹಳ ಚೆನ್ನಾಗಿದೆ. ಓದುತ್ತಾ ಓದುತ್ತಾ ಹಲವು ವಿಚಾರಗಳನ್ನೂ ಹೊಳೆಯಿಸಿದೆ. ಅಭಿನಂದನೆ ಹಾಗೂಧನ್ಯವಾದಗಳು ಉತ್ತಮ ಲೇಖನಕ್ಕಾಗಿ…

    1. ವಸುಂಧರಾ ಅವರೇ
      ನಿಮ್ಮ ಪ್ರತಿಕ್ರಿಯೆಗೆ ಕಟ್ಟಿದ ಒಡ್ಡನ್ನು ಒಡೆದು ಪ್ರವಾಹ ಹರಿಸುವ, ನಿರಂತರವಾಗಿಸುವ ಶಕ್ತಿಯಿದೆ.
      ತುಂಬಾ ಧನ್ಯವಾದಗಳು

    1. ನೂತನ ಅವರೇ

      ನೋಟದಲ್ಲಿ ಹೊಸತು ಕಂಡ ನಿಮ್ಮ ನೋಟಕ್ಕೆ, ನಮನಗಳು

  2. ಆಶ್ಚರ್ಯವಾಯಿತು ಸರ್. ! ನಿಮ್ಮ ಭಾಷೆ ನಿರೂಪಣಾ ಪ್ರಾವಿಣ್ಯ ಸಾಹಿತ್ಯದ ಆಳವಾದ ಜ್ಞಾನ ಬೆರಗು ಮೂಡಿಸಿತು. ಅದೂ ನೀವು ಒಬ್ಬ ವಿಜ್ಞಾನಿ ಯಾಗಿ ಇಂಥಾ ಸಾಧನೆ ಅಪೂರ್ವ ವಾದದ್ದು ನಿಮ್ಮ ಪ್ರತಿಭೆಗೆ ಅಭಿನಂದನೆಗಳು

    1. ಅನಾಮಿಕಾ,ಅವರೇ.
      ನಿಮ್ಮ ಪ್ರತಿಕ್ರಿಯೆ ನನಗೆ ಹುಮ್ಮಸ್ಸು ಕೊಡುತ್ತೆ. ವಿಜ್ಞಾನ ಎನ್ನುವುದು ವಿಜ್ಞಾನಿಗಳ ತೊತ್ತಲ್ಲ!,ಅದು ನಿಮ್ಮ, ಎಲ್ಲರ ಸ್ವತ್ತು. ಭಾಷೆಯಲ್ಲಿ ವಿಜ್ಞಾನವಿದೆ. ವಿಜ್ಞಾನದಲ್ಲಿ ಭಾಷೆಯೂ ಇದೆ. ಯೋಚಿಸುವ ಮನಸ್ಸಿಗೆ, ಭಾಷೆ ಮತ್ತು ವಿಜ್ಞಾನ, ಹಾಲು ಸಕ್ಕರೆಯ ಹಾಗೆ.
      ನಿಮ್ಮ ಅತ್ಯುತ್ತಮ ಪ್ರತಿಕ್ರಿಯೆ ನನ್ನೊಳಗೆ ಒಂದು ಹೃದ್ಯವಾದ ಚರ್ಚೆ ಹುಟ್ಟುಹಾಕಿತು.
      ನಿಮ್ಮ ಪ್ರೀತಿಗೆ ನಾನು ತುಂಬಾ ಕೃತಜ್ಞ.

  3. ಗಂಗಾನದಿಯಂತೆ ಹರಿದು ಬಂದಿದೆ ನಿಮ್ಮ ಕಾವ್ಯಧಾರೆ.

    1. ರಮೇಶ್ ಸರ್.
      ತುಂಬಾ ಧನ್ಯವಾದಗಳು. ನನ್ನ ಬರವಣಿಗೆಗೆ, ನದಿಯ ರುಪಕ ಕೊಟ್ಟ ನಿಮ್ಮೊಳಗಿನ ಕವಿಗೆ,
      ಸದಾ ನಮನಗಳು

  4. ಹೆಂಗರುಳಿನ ವಿಜ್ಞಾನಿ ಮಹಾದೇವ ಭಟ್. ಸಾಹಿತ್ಯದ ವಿದ್ಯಾರ್ಥಿ ಯೇನೋ ಅನಿಸುವಷ್ಟು ಭಾಷಾ ಪ್ರೌಢಿಮೆ. ಅದಕ್ಕೆ university wits ಗಳ ತೋರಿಕೆ,ಠಕ್ಕುಗಳಿಲ್ಲ. ಇವರ ಮಾತುಗಳಲ್ಲಿ ನಿರ್ಮಲವಾಗಿ ಹರಿಯುವ ನೀರಿನ ಗುಣವಿದೆ, ಕೊಳೆಯನ್ನು ಬದಿಗೆ ಸರಿಸಿ ಒಳಿತನ್ನ ಹೀರುವ ಧನಾತ್ಮಕ ಚಿಂತನೆ ಇದೆ. ಈ ಜಲದೊರತೆಯ ಹರಿವು, ಹರವನ್ನು ತಿಳಿಯಲು ಕಾದು ನೋಡಬೇಕು.All the best!

    1. ಸುಮತಿ ಮ್ಯಾಡಂ,
      ನಿಮ್ಮ ಪ್ರತಿಕ್ರಿಯೆಯಲ್ಲಿ ಅಂತರಂಗದ ಅಂತರ್ಗಾಮೀ ಒಲವಗಂಗೆಯ ಹರಿವು ಅನುಭವಕ್ಕೆ ಬರ್ತಿದೆ.
      ಹರಿದಷ್ಟೂ ಹರಿವಾಗುವತ್ತ ಈ ಪಯಣ!

      ಆಶೀರ್ವದಿಸಿ.

  5. ವಿಜ್ಞಾನ ಮತ್ತುಸಾಹಿತ್ಯ ಎರಡಕ್ಕೂ ಕೊಂಡಿಯಾಗಿದ್ದೀರಿ ಸರ್ ನೀವು! ನಿಮ್ಮದು ಎಲ್ಲ ಅರ್ಥದಲ್ಲಿ ಗಡಿ ಮೀರಿದ ಪ್ರತಿಭೆ ! ಕನ್ನಡ ಸಾಹಿತ್ಯ ಗಂಗೆ ಹೀಗೆಯೇ ಪ್ರವಹಿಸುತ್ತಿರಲಿ ತಮಗೆ ಅನಂತ ಅನಂತ ಧನ್ಯವಾದಗಳು

    1. ಅನಾಮಿಕಾ ಅವರೇ.
      ನಿಮ್ಮ ಪ್ರತಿಕ್ರಿಯೆಯಲ್ಲಿರುವ ರೂಪಕ ಗಡಿಮೀರಿದ ಪ್ರತಿಭೆ ತುಂಬಾ ಕಾವ್ಯಾತ್ಮಕವಾಗಿದೆ.
      ಸಹೃದಯತೆ ಬರೆಯಲೂ,ಓದಲೂ ಅಗತ್ಯವಿರುವ ಕ್ಯಾನುವಾಸು. ನಿಮ್ಮಲ್ಲಿ ಅದಿದೆ. ನೀವುನನ್ನಂತೆ,ಅತವಾ ಇನ್ನೂ ಚಂದ ಬರೆಯಬಲ್ಲಿರಿ.

      ಧನ್ಯವಾದಗಳು

  6. ಇಂದು ಬೆಳಗಿನ ಜಾವವೇ ನಿಮ್ಮ ಬರಹದ ಸವಿ ಉಂಡಿದ್ದೇನೆ.ನನ್ನನ್ನು ಮಾತನಾಡಿಸ ಬೇಡಿ.ನಾನು ಇಂದು ದಿನಪೂರ್ತಿ ಅದೇ ಗುಂಗಿನಲ್ಲಿರಲು ಬಿಡಿ.

    1. ರವಿ ಅವರೇ.
      ನಿಮ್ಮ ರಸಾನುಭವ ಮತ್ತು ಅದರತ್ತ ನಿಮ್ಮ unconditional love, ತುಂಬಾ ಪ್ರೇರಣೀಯ.
      ಧನ್ಯವಾದಗಳು

  7. ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುತ್ತಿಲ್ಲ ತುಂಬಾ ವಿಚಾರಪೂರ್ಣ ಗಂಭೀರ ಬರಹವನ್ನು ಸೊಗಸಾದ ರಸವತ್ತಾದ ಭಾಷೆಯಲ್ಲಿ ಕಟ್ಟಿಕೊಟ್ಟಿರಿ. ವಾಹ್ ಅದ್ಭುತ ಅಷ್ಟೇ ನನ್ನ ಪ್ರತಿಕ್ರಿಯೆ

    1. ಸುಜಾತಾ ಅವರೇ. ಹರಿವ ನದಿಗೆ ಕಾವ್ಯದ ಪ್ರಾಸ,ಲಯ, ಮತ್ತು ಧ್ವನಿ ಎಲ್ಲವೂ ಇದೆ. ಕರೆಸಿಕೊಂಡು ಹೋಯಿತು.
      ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಕೃತಜ್ಞ ನಾನು

Leave a Reply

Back To Top