ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
“ಬಹುಮುಖ”


ಯಾವುದು ನಿಜ ಸುಖ ಎಲ್ಲಿದೆ ನಾಕ
ನೀನೆಯ ಹೇಳು ನನ್ನ ಸಖ
ದರ್ಪಣದಿಂದ ಕಾಣದು ಮೂರ್ಖ
ದರ್ಪದ ಅಹಮ್ಮಿನ ಕೋರೆಮುಖ
ತೊಡಲುಬೇಕು ದಿನವೂ ಬಹುಮುಖ
ನಾನು ನೀನು ಕೊನೆಯಾಗುವ ತನಕ
ಯಾವುದು ನಿಜ ಸುಖ ಎಲ್ಲಿದೆ ನಾಕ
ನೀನೆಯ ಹೇಳು ನನ್ನ ಸಖ
ದಿನಗಳೆದಂತೆ ಬರಿದಾಗುವ ದೇಹ
ಇಲ್ಲದ ಬಯಸುವ ಮನುಜನ ಮೋಹ
ಎಂದಿಗೂ ತೀರದ ಸ್ವಾರ್ಥದ ದಾಹ
ಜಗದಲಿ ನಿಲ್ಲದ ದುಗುಡದ ವಾಹ
ಯಾವುದು ನಿಜ ಸುಖ ಎಲ್ಲಿದೆ ನಾಕ
ನೀನೆಯ ಹೇಳು ನನ್ನ ಸಖ
ಮೋಸದ ಬಲೆಯಲಿ ಚಿನ್ನದ ಮೀನು
ಪರಿಶ್ರಮಕಿಲ್ಲಿ ಸಿಗುವುದೆ ಜೇನು
ಮರಗಳ ಕಡಿದು ಬರಿದಾಗಿದೆ ಕಾನು
ಕಡಲಿನ ಮೊರೆತಕೆ ಬಾಗಿದೆ ಬಾನು
ಯಾವುದು ನಿಜ ಸುಖ ಎಲ್ಲಿದೆ ನಾಕ
ನೀನೆಯ ಹೇಳು ನನ್ನ ಸಖ
ನನ್ನವರು ಪರರು ನಡುವೆ ನಾ ಯಾರು
ಅರಿಯದೆ ಸಾಗಿದೆ ಜನಪದ ತೇರು
ಅಂಕಿಯ ಅಂಕುಶದಿ ಬಡಿದಾಡುವ ಜನರು
ಮಾನವ ಮರೆತು ಯುದ್ಧವ ಸಾರುತಲಿಹರು
ಯಾವುದು ನಿಜ ಸುಖ ಎಲ್ಲಿದೆ ನಾಕ
ನೀನೆಯ ಹೇಳು ನನ್ನ ಸಖ
ಶಾಲಿನಿ ಕೆಮ್ಮಣ್ಣು



