ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

     ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಮತ್ತು ಯೌವನ ಅಲ್ಬಂಗಳಿದ್ದಂತೆ. ಅವುಗಳನ್ನು ಮತ್ತೆ ಮತ್ತೆ ತೆರೆದು ನೋಡಿ ನೆನಪುಗಳು ಮರುಕಳಿಸುವಂತೆ ಮಾಡುತ್ತವೆ.  ಮಾತು ಬೆಳ್ಳಿ ಮೌನ ಬಂಗಾರವೆನ್ನುವ ಹಾಗೆ ಯೌವನ ಬೆಳ್ಳಿಯಾದರೆ ಬಾಲ್ಯ ಬಂಗಾರದಂತೆ.  

ನಾನು ಹೈಸ್ಕೂಲಿನಿಂದ ಪೊಸ್ಟ ಗ್ರಾಜ್ಯೂಯೇಶನ ವರೆಗೆ ಓದಿದ್ದು ಧಾರವಾಡದಲ್ಲಿ. ನಾನು ಹಳ್ಳಿಯಿಂದ ಧಾರವಾಡಕ್ಕೆ ಕಲಿಯಲು ದಿನವೂ ಬಸ್ ನಲ್ಲೆ ಹೋಗುವಾಗ ಬರುವಾಗ ಅರ್ದಗಂಟೆ ಪ್ರಯಾಣ. ಈ ಬಸ್ ಪ್ರಯಾಣದ ಅನೇಕ ನೆನಪುಗಳು, ಹಾಸ್ಯ ಪ್ರಸಂಗಗಳು, ವಿಚಿತ್ರ ಘಟನೆಗಳು ನನ್ನ ಜೀವನದ ಕಪಾಟಿನೊಳಗೆ  ಭದ್ರವಾಗಿ ಕುಳಿತಿವೆ. ಅವೆಲ್ಲಾ ನನ್ನ ನೆನಪಿನ ಬುತ್ತಿಯಲ್ಲಿ ಮರೆಯಲಾರದ ಕ್ಷಣಗಳು. ಶಾಲೆಯಲ್ಲಿಯ ನೆನಪುಗಳು ಒಂದು ತೆರನಾದರೆ ಕಾಲೇಜಿನ ನೆನಪುಗಳು ಮತ್ತೊಂದು ರೀತಿಯವು. ಶಾಲೆಗೆ ಹೋಗುವಾಗ ಬೆನ್ನಿಗೆ ಹಾಕುತಿದ್ದ ಪಾಟಿಚೀಲಗಳನ್ನು ನೋಡಿ ಬಸ್ಸ ನಲ್ಲಿ ಪಕ್ಕದಲ್ಲಿ ಕುಳಿತ ಅಂಕಲ ಅಂಟಿಗಳು  “ನಿಮಗಿಂತ ನಿಮ್ಮ ಪಾಟಿಚೀಲಗಳೆ ದೊಡ್ಡುವಿವೆಯಲ್ಲಾ ತಂಗಿ ಕೊಡು ಇಲ್ಲಿ ಹಿಡಕೊತೇನಿ” ಎಂದು ಕೆಲವರು ಇಸಿದು ಕೊಳ್ಳುತ್ತಿದ್ದರು.  ಇನ್ನು ಕೆಲವರು ಅದರಲ್ಲೂ ಹಳ್ಳಿಯ ಮುದಕಿಯರು ನಮ್ಮ ಬ್ಯಾಗು ಅವರ ಬೆನ್ನಿಗೆ ತಾಗಿದ ಕೂಡಲೇ ತಮಗೇನೊ ಒಂದು ದೊಡ್ಡ ಗದಾ ಪ್ರಹಾರವೇ ಆಯಿತೊ ಅನ್ನುವಂತೆ ಬಾಯಿಗೆ ಬಂದಂತೆ “ಇವೇನು ಎಷ್ಟ ಸಾಲಿ ಕಾಲಿತಾವೋ ಏನೊ?…  ಇವಿರುದೊ ಒಂದ ಮಣಾ ಇವಕರದು ಚೀಲಾ ನೋಡ…. ಗೋಣಿ ಚೀಲಾಗೆತಿ… ಎಲ್ಲಿಂದ ಬಂದಿ ಅತಾಕ… ಮದಲ ಪಾಟಿ ಚೀಲಾ ತಗದು… ಮ್ಯಾಲ ಇಡು” ಎಂದು ಬಯ್ಯುವರು. ಬಸ್ಸಿನಲ್ಲಿ ಸಾಮಾನುಗಳನ್ನು ಇಡಲು ಮೇಲಗಡೆ ಉದ್ದಕ್ಕೆ ಒಂದು ಪಟ್ಟಿ (loner/rack) ಇರತಿತ್ತು. ನಾವು ಆಜು ಬಾಜುವರ ಕಡಿಂದ ಬಯ್ಯಸಿಕೋತ ಗುದ್ಯಾಡಕೋತ ಬ್ಯಾಗ ತಗೆದು ಮೇಲೆ ಇಡುತ್ತಿದ್ದೇವು.

     ಒಂದ ಸಾರಿ  ಬಸ್ ಕಂಡಕ್ಟರ ಬಸ್ ಪಾಸ ಕೇಳಿದಾಗ ಬ್ಯಾಗನಲ್ಲಿ ಇರಲಿಲ್ಲ. ಬಸ್ ಪಾಸು ಮನೆಯಲ್ಲೆ ಉಳಿದು ಬಿಟ್ಟಿತ್ತು. ಸ್ಕೂಲಿಗೆ ಹೋಗುವಾಗ ಮನೆಯಲ್ಲಿ ಇನ್ನೂ ಸಣ್ಣವರೆಂದು ಒಂದು ಪೈಸೆಯು ಕೊಡುತ್ತಿರಲಿಲ್ಲ. ಕಂಡಕ್ಟರ್ ಟಿಕೇಟ ತೆಗೆಸಬೇಕೆಂದಾಗ ನನ್ನ ಕಡೆ ಒಂದು ಪೈಸೆಯೂ ಇರಲಿಲ್ಲ. ಪಾಪ ಪಕ್ಕದಲ್ಲಿದ್ದ ಪುಣ್ಯಾತ್ಮರೊಬ್ಬರು ಟಿಕೇಟ ತೆಗೆಸಿದರು. “ಅಂಕಲ್ ನಿಮ್ಮ ಅಡ್ರೆಸ್ ಕೊಡಿ ನಿಮಗೆ ದುಡ್ಡು ಕಳಿಸುತ್ತೇನೆ” ಎಂದು ಎಷ್ಟು ಕೇಳಿಕೊಂಡರು ಬೇಡಮ್ಮಾ ನೀನು ನನ್ನ ಮಗಳಿದ್ದಂತೆ ಎಂದರು.

ಕಾಲೇಜಿಗೆ ಹೊಗುವಾಗ ನನ್ನಪ್ಪ ತಿಂಗಳಿಗೊಮ್ಮೆ ಹತ್ತೊ ಇಪ್ಪತ್ತೊ ರೂಪಾಯಿ ದುಡ್ಡು ಕೊಡುತ್ತಿದ್ದ.  ಪಿ.ಯು.ಸಿ ಓದುವಾಗ ಕ್ಲಾಸಿನಲ್ಲಿ ಲೆಕ್ಚರೊಬ್ಬರು “ನೋಡ್ರಿ ನಿಮ್ಮನ್ಯಾಗ ನಿಮ್ಮ ಖರ್ಚಿಗಂತ ಏನೊ ದುಡ್ಡ ಕೊಟ್ಟರ ಹುಡಗರ ನೀವು ಸಿಗರೇಟೊ ಮತ್ತೊಂದೊ ಕೆಟ್ಟ ಚಟಕ್ಕ ಉಪಯೋಗಿಸಬ್ಯಾಡ್ರಿ…… ಹೆಣ್ಣ ಮಕ್ಕಳ ನೀವು.. ಖಾಲಿಪೀಲಿ ಆಯ್ಸಕ್ರೀಮ್ ತಿಂದೆ.. ಕೇಕ ತಿಂದೆ….ಅಂತ ಖರ್ಚ ಮಾಡಬ್ಯಾಡ್ರಿ  ಪಕ್ಕದಲ್ಲೆ ಇಲ್ಲೆ ಬ್ಯಾಂಕ ಅದ ಅದರಳೊಗ ಅಕೌಂಟ ಓಪನ್ ಮಾಡಿ ಕೂಡಿ ಇಡುದನ್ನ ಈಗಿಂದ ಕಲಿರಿ… ಅಲ್ಲದ ಬ್ಯಾಂಕಿನ ವ್ಯವಹಾರ ಏನು ಅನ್ನುದು ನೀವು ತಿಳಕೊಂಡಂಗ ಆಗ್ತದ” ಅಂತ ಹೇಳತಿದ್ದರು.  ಅವರ ಪ್ರಭಾವದಿಂದಾಗಿ ನಾನು ಬ್ಯಾಂಕನಲ್ಲಿ ಆಗಲೇ ಒಂದು saving account ಓಪನ್ ಮಾಡ್ದೆ.  ಕೂಡಿಟ್ಟ ಹತ್ತೊ ಇಪ್ಪತ್ತೊ ವರ್ಷಕ್ಕೆ ಸಾವಿರ ರೂಪಾಯಿವರೆಗೂ ಆಗ್ತತ್ತು.  ಆಗ ಅದೇ ದೊಡ್ಡ ಅಮೌಂಟು. ಸರ್ ಹೇಳದಂಗ ಬ್ಯಾಂಕಿನ ವ್ಯವಹಾರದ ಜ್ಞಾನನು ಬಂತು.

      ನಾನು ಕಾಲೇಜಿಗೆ ಬೆಳಿಗ್ಗೆ ೬.೩೦ ಕ್ಕೆ ನಮ್ಮೂರಿನ ಒಳಗಡೆ ಬೆರೆಯ ಮತ್ತೊಂದು ಹಳ್ಳಿಯಿಂದ ಬರುತ್ತಿದ್ದ ಬಸ್ಸ ನ್ನು ಹತ್ತಿ ಕಾಲೇಜಿಗೆ ಹೋದರೆ ಮದ್ಯಾಹ್ನ ೧ ಗಂಟಗೆ ಕ್ಲಾಸ್ ಬಿಡುತ್ತಿತ್ತು. ನಮ್ಮೂರು ಹೈವೆ ಮೇಲಿದ್ದರೂ ನಮ್ಮೂರಿಗೆ ಕಡಿಮೆ ಬಸ್ಸಗಳು ನಿಲ್ಲುತ್ತಿದ್ದವು. ಹೆಚ್ಚಾಗಿ ಎಕ್ಸಪರೆಸ್ ಬಸ್ ಗಳೆ ಅವು ನಿಲ್ಲುತ್ತಿರಲಿಲ್ಲ. ನಾನೇನಾದರೂ ಒಳಗಡೆ ಹಳ್ಳಿಯಿಂದ ಬರುತ್ತಿದ್ದ ಬಸ್ ನ್ನು ತಪ್ಪಿಸಿದರೆ ಮೊದಲನೆ ಕ್ಲಾಸ ಬಂಕ ಆಗುತ್ತಿತ್ತು. ಮದ್ಯಾಹ್ನ ಕೂಡಾ ಸರಿಯಾಗಿ ಲಾಂಗರೂಟ್ ಬಸ್ ಗಳಿಲ್ಲದೇ ಅದೇ ನಮ್ಮೂರಿನಿಂದ ಒಳ ಹೋಗುವ ಹಳ್ಳಿ ಬಸ್ಸೆ ಗತಿ. ಅದೋ ಹಳೆ ಕಾಲದ ಟ್ರಂಕ್ ತರಹ. ಡಕೊಟಾ ಬಸ್ ಎಂದೆ ಫೇಮಸ್ಸು. ಡಕೊಟಾ ಎಕ್ಸಪ್ರೆಸ ಪಿಕ್ಚರ್ ನೋಡಿದವರು ಊಹಿಸಿಕೊಳ್ಳಿ ಅದರಲ್ಲಿರುವಂತೆಯೇ ನಮ್ಮ ಬಸ್ ಡಕೊಟಾ ಆಗಿತ್ತು. ಊರನ್ನು ದಾಟಿ ಅರ್ದ ದಾರಿ ಕ್ರಮಿಸಿದ ಮೇಲೆ ಎಷ್ಟೊ ಸಾರಿ ಬಂದ್ ಬಿದ್ದು ಮತ್ತೆ ಬೇರೆ ಬಸ್ಸಿಗೆ ದಾರಿ ಕಾದ ಕಾದು ಸುಸ್ತಾಗಿ ಕಂಡಕ್ಟರ ಜೊತೆ ಜಗಳಕ್ಕೆ ನಿಲ್ಲುವದು, ಮುಖ್ಯವಾದ ಕೆಲಸ ಕಾರ್ಯಗಳಿದ್ದವರು ಪರದಾಡುವದು ಮಾಮೂಲಾಗಿತ್ತು. ಬೇಸಿಗೆಯಲ್ಲಿ ನಿಂತಂತ ಬಸ್ಸನಲ್ಲಿ ಸೆಕೆ ತಾಳಲಾರದೆ ಗಂಡಸರು ಹೊರಗಡೆ ಹೋಗಿ ನಿಂತರೆ ನಾವು ವಿಧಿಯಿಲ್ಲದೇ ಅದರಲ್ಲಿಯೇ ಬೆವರಿಳಿದು ಮೈಗೆ ಬೆವರಿನ ಸ್ನಾನ. ಕಂಡಕ್ಟರ್ ಬೇರೆ ಬಸ್ ಗೆ ಪ್ರಯಾಣಿಕರನ್ನು ಹೊಂದಿಸಲು ಹೆಣಗಾಡುತ್ತಿದ್ದ.

      ನಮ್ಮೂರು ನನ್ನ ಅಕ್ಕ ಪಕ್ಕದ ಊರುಗಳಿಂದ ಕಾಲೇಜ ಕಲಿಯಲು ಎಳೆಂಟು ಹುಡಗೀಯರು ಮತ್ತು ಒಂದಿಷ್ಟು ಹುಡಗರ ದಂಡು ಇರುತ್ತಿತ್ತು. ಡಕೋಟಾ ಎಕ್ಸಪ್ರೆಸ್ ಬಸ್ಸನ್ನು ಡ್ರೈವರ ಒಂದ ತಾಸು ಮುಂಚೆ ಬಸ್ ಸ್ಟ್ಯಾಂಡಿನಲ್ಲಿ ತಂದು ಒಂದು ಬೇರೆ ಕಡೆ ನಿಲ್ಲಿಸುತ್ತಿದ್ದ. ಕಾಯಂ ಅದೇ ಸ್ಥಳದಲ್ಲಿ ನಿಲ್ಲಿಸುತ್ತಿದ್ದ. ನಮ್ಮೂರಿಗೆ ಹೋಗುವ ಹುಡಗ ಹುಡಗೀಯರಿಗೆ ಅದೇ ಬಸ್ಸೆಂದು ಗೊತ್ತಿರುತ್ತಿತ್ತು. ಆ ಬಸ್ ಬಂದ ಕೂಡಲೇ ಹುಡಗರು “ಬಂತು…. ಬಂತು…. ಡಕೊಟಾ ಎಕ್ಸಪ್ರೆಸ್….” ಎಂದು ಹಾಡು ಸುರು ಹಚ್ಚುತ್ತಿದ್ದರು. ನನಗಿನ್ನೂ ನೆನಪಿದೆ ನಾನು ಡಿಗ್ರಿ ಕಲಿಯುತ್ತಿದ್ದಾಗ ರೀಗಲ್ ಟಾಕೀಜಗೆ ಡಕೊಟಾ ಎಕ್ಸಪ್ರೆಸ ಪಿಕ್ಚರ್ ಬಂದಿತು. ಆ ಪಿಕ್ಚರ್ ನಂತರ ಅದೇ ಸ್ಥಿತಿ ಇರುವ ನಮ್ಮ ಬಸ್ಸು ಡಕೊಟಾ ಎಕ್ಸಪ್ರೆಸ್ ಎಂದೇ ಫೇಮಸ್ ಆಗಿತ್ತು. ನಾವು ಕಾಲೇಜಿನಲ್ಲಿ ಡಬ್ಬಿ ತಿನ್ನದೇ ಹಾಗೆ ಉಳಿಸಿಕೊಂಡು ಬಂದಿದ್ದರೆ ನಿಲ್ಲಿಸಿದ ಆ ಬಸ್ ನಲ್ಲಿ ಹೋಗಿ ಕುಳಿತು ನಾನು ಮತ್ತು ಇಬ್ಬರೂ ಸ್ನೇಹಿತೆಯರು ಕೂಡಿ ಹಾಸ್ಯ ಚಟಾಕಿ ಮತ್ತು ಮಾತುಗಳ ಬತ್ತಿಗಳೊಂದಿಗೆ ನಮ್ಮ ಬುತ್ತಿ ತೆಗೆದು ತಿನ್ನುತ್ತಿದ್ದೇವು.

        ಆ ಬಸ್ ಒಂದ ತರಹ ಆಲ್ ಇಂಡಿಯಾ ರೇಡಿಯೊ, ಮಿರ್ಚ ಮಸಾಲಾ ಕಡೆಗೆ ನಮೆಗೆಲ್ಲಾ ಒಂದು ಮಿನಿ ಪ್ರಪಂಚವೇ ಆಗಿರುತ್ತಿತ್ತು‌. ಇದರೋಳಗೆ ಅಜ್ಜ -ಅಜ್ಜಿ, ಅಂಟಿ ಅಂಕಲಗಳು ಮಾತುಗಿಳಿದಾಗ ಅವರ ಮನೆ ಮನೆ ರಾಮಾಯಣ, ಹರಿಕಥೆಗಳು ನಮ್ಮ ಕಿವಿಗಳಿಗೂ ಬಿಳುತ್ತಿದ್ದವು. ಹಿಂದೆ ಕುಳಿತು ಚೇಡಿಸುವ ಹುಡಗರದು ಇನ್ನೊಂದು ತರಹ. ಸುಸ್ತಾಗಿ ಬೇಸತ್ತು ಸ್ವಲ್ಪ ನಿದ್ರೆಗೆ ಜಾರಿದರೆ. ಚೇಡಿಸುತ ಹಾಡುವವರು
“ರಾಮಚಾರಿ ಹಾಡುವಾ ಲಾಲಿ ಹಾಡ ಕೇಳವಾ
ನೀಲಿಬಾನಿನೂರಿಗೆ ಬೆಳ್ಳಿ ದೀಪ ನೀನವಾ…..”

       ಈಗೀನ ಹಾಗೆ ಆಗ ಪೇಸ್ ಬುಕ್, ಟ್ವಿಟರ, ವ್ಯಾಟ್ಸಪ್ ಯಾವುದೂ ಇಲ್ಲದ ಪ್ರಪಂಚ. ಒಬ್ಬರಿಗೊಬ್ಬರು ಹರಟೆ, ಜೊಕ್ಸು ಇವೆ ಆಗ ಬಸ್ಸಿನಲ್ಲಿ ಬೇಸರ ಕಳೆಯುವ ಟೈಮ್ ಪಾಸ್.
ಬಸ್ ನಲ್ಲಿ ಹುಟ್ಟಿಕೊಂಡ ಪ್ರೇಮಗಳೆಷ್ಟೊ, ಪರಿಚಯವಾಗಿ ಮಾತಿಗಿಳಿದ ಸ್ನೇಹದಲ್ಲಿ ರೆಕ್ಕಪುಕ್ಕ ಹಚ್ಚಿ ಹರಡಿದ ಗಾಸಿಪ್ ಗಳೆಷ್ಟೊ ಲೆಕ್ಕವಿಲ್ಲ. ಚಂದವಾಗಿರುವ ಹುಡಗೀರಗೆ ಹುಡಗರಿಂದ ಹಿಡಿದು ಹೊಟ್ಟೆ ಉಬ್ಬಿಸಿಕೊಂಡ ಅಂಕಲಗಳು ಹಲ್ಲು ಗೀರಿಯುತ್ತ  ತಮ್ಮ ಪಕ್ಕದಲ್ಲಿರುವ ಸೀಟಿನಲ್ಲಿ ಕೂತುಕೊಳ್ಳಲು ಹೇಳುವರು. ಕೆಲವೊಬ್ಬರು ತಾವೇ ಕುಳಿತ ಸೀಟನ್ನು ಬಿಟ್ಟು ಕೊಡುತ್ತಿದ್ದರು. ಎಷ್ಟೊ ಸಾರಿ ನಾನು ಕುಳಿತಂತೆ ಮಾಡಿ ಪಕ್ಕದಲ್ಲಿ ನಿಂತಿರುವ ಅಂಟಿಯರಿಗೆ, ಅಜ್ಜಿಯರಿಗೆ ನನ್ನ ಸೀಟು ಬಿಟ್ಟು ಕೊಟ್ಟಿದ್ದಿದೆ. ಈಗ ಬಿಡಿ ನಾನೂ ಅಂಟಿಯಾಗಿ ಆ ಅಂಟಿಗಳ ಸಾಲಿನಲ್ಲಿ ನಾನು ನಿಂತಿದ್ದೇನೆ.

       ಒಂದು ಸಾರಿ  ಹೆರಗಿಗೆಂದು ಧಾರವಾಡಕ್ಕೆ ಬರಲು ಬಸ್ ಹತ್ತಿದವಳು ಇನ್ನೇನೂ ಧಾರವಾಡದ ಸಮೀಪ ಇತ್ತು ಆಗಲೇ ಅವಳಿಗೆ ಜೋರಾಗಿ ಹೆರಗೆ ನೋವು ಪ್ರಾರಂಭವಾಯಿತು ಕಂಡಕ್ಟರ ಪ್ರಯಾಣಿಕರನ್ನೆಲ್ಲ ಅಲ್ಲೆ ಇಳಿಸಿದ.  ಅವಳಿಗೆ ಬಸ್ ನಲ್ಲಿಯೇ ಹೆರಿಗೆಯಾಯಿತು.  ಬಸ್ ನಲ್ಲೆ ಮಗುವಾಗಿದ್ದರಿಂದ ಗಂಡಾಗಿದ್ದರೆ ಬಸಪ್ಪ ಎಂದೋ ಹೆಣ್ಣಾಗಿದ್ದರೆ ಬಸವ್ವ ಎಂದೋ ಇಟ್ಟಿರಬಹುದೇನೊ ಎಂಬುದು ನನ್ನ ಅನುಮಾನ. ಸುಮ್ನೆ ಹಾಸಕ್ಕೆ ಹೇಳಿದೆ.  ಅವಳಿಷ್ಟದ ಹೆಸರು ಅವಳಿಟ್ಟರಬಹುದು.

       ಕುಂಟುತ್ತಾ ಸಾಗುವ ಬಸ್ಸು ಅದರಲ್ಲೂ ಮಳೆಯಾಯಿತೆಂದರೆ ರೊಡಲ್ಲಿ ಅಲ್ಲಲ್ಲಿ ತಗ್ಗು ಗುಂಡಿಗಳು, ಯೌವನಕ್ಕೆ ಕಾಲಿಟ್ಟ ಹೆಣ್ಣಿನಂತೆ ಉಬ್ಬುತಗ್ಗುಗಳು. ಅಂತುವಗಳನ್ನು ದಾಟುವಾಗ ಬಸ್ಸು ಪುಟಿದೇಳುತ್ತಿತ್ತು. ಹಾಗೆ ಪುಟಿದೆದ್ದಾಗ ಯಾರದೋ ಚೀಲದಲ್ಲಿದ್ದ ಅಕ್ಕಿಕಾಳು ನಮ್ಮೂರಿನಿಂದ ಕಾಲೇಜಿಗೆ ಬರುವ ಒಬ್ಬ ಹುಡಗಿಯ ಮೇಲೆ ಬಿದ್ದು ಬಿಟ್ಟವು.  ಅವಳು ನನಗೆ ಅಕ್ಕಳ ಸಮಾನಳಾಗಿದ್ದಳು.   ಎಲ್ಲರೂ ಗೋಳೊ ಎಂದು ನಗತೊಡಗಿದರು. ಒಬ್ಬ ಅಜ್ಜಿ “ಆತು ತುಗೊ ತಂಗಿ ನಿನ್ನ ಮದುವಿ ಲಗೂ ಆಗ್ತೈತಿ” ಅಂದಾಗ ಹಿಂದೆ ಕುಳಿತಿದ್ದ ಕಿಡಗೇಡಿ ಹುಡಗರು “ಮದುವೆ ಆತು ಡುಮ್ …ಡುಮ್ …”ಎಂದು ಚೇಡಿಸತೊಡಗಿದರು.

ಮತ್ತೆ ಕೆಲ ಹುಡಗರು ಸಣ್ಣಗೆ ತಮ್ಮ ತಮ್ಮೊಳಗೆ “ನಮ್ಮೂರ ಯುವ ರಾಣಿ ಕಲ್ಯಾಣ ವಂತೆ ವರನಾರೆಂದು ನೀ ಹೇಳು ಓ….ಕೋಗಿಲೆ..” ಎಂದು ಹಾಡಿದ್ದು ಇದೆ. ಆದರೆ ಪಾಪ ಆಗಿದ್ದೆ ಬೇರೆ ನನಗಿಂತ ನಾಲ್ಕೈದು ವರ್ಷ ದೊಡ್ಡವಳಾದ ಅವಳ ಮದುವೆ ನನ್ನ ಮದುವೆಯಾದ ನಾಲ್ಕೈದು ವರಷಕೆ  ಮದುವೆಯಾಯಿತು.  ಹೀಗೆ ಮೆಲಿಟ್ಟಂತ ಲಗೇಜುಗಳಿಂದ ಕೆಳಗೆ ಕುಳಿತವರ ತಲೆ ಮೇಲೆ ಬಿದ್ದ ಅರಿವೆ, ಉಂಡೆ, ಚಕ್ಕುಲಿ, ಬಾಳೆಹಣ್ಣು, ದ್ರಾಕ್ಷಿ ಹಣ್ಣುಗಳೆಷ್ಟೊ  ಸ್ವಲ್ಪ ಮೇಲ್ಮುಖ ಮಾಡಿದರೆ ಸೀದಾ ಅವರ ಬಾಯಿಗೆ. “ಸೀದಾ ಲಡ್ಡು ಮೂ ಪೆ….” ಯಾವುದೊ ಚಾಕ್ಲೇಟಿನ ಅಡ್ವರಟೈಸ ಒಂದು ಗಕ್ಕನೆ ಬಂದು ಕಣ್ಣು ಮುಂದೆ ಹೋದಂತೆ.  

    ಒಂದ ಬಾರಿ ಡ್ರೈವರಂತೂ ಬಸ್ ಹತ್ತಿ ಕೂತವನೆ ಬಸ್ ಹೊಡೆಯತೊಡಗಿದ.  ಬಸ್ ನಲ್ಲಿ “ಒಹೊ.. ಒಹೊ….ಬಸ್ ನಿಲ್ಲಸರಿ…” ಎಂದು ಚೀರತೊಡಗಿದರು. ಬಸ್ ಡ್ರೈವರ್ ನ ಕಿವಿ ಮಂದಿದ್ದವೋ ಏನೊ ಗೊತ್ತಿಲ್ಲ ಅವನು ಹಾಗೆ… ಗಾಡಿ ಹೊಡೆಯತೊಡಗಿದ.  ಎಲ್ಲರೂ ಅದರಲ್ಲೂ ಕಿಡಗೆಡಿ ಹುಡಗರು ಕೈಯಿಂದ ಬಸ್ ನ್ನು ಕುಳಿತಲ್ಲಿಂದ ನಿಂತಲ್ಲಿಂದ ಬಡಿಯತೊಡಗಿದರು. ಆಗ ಡ್ರೈವರ್ ಎಚ್ಚತ್ತು ಏತಕೆ ಬಸ್ಸ ಬಡಿಯುತ್ತಿರುವರು ಎಂದು ಬಸ್ ನಿಲ್ಲಿಸಿದ. ಆಗಲೇ ಅವನಿಗೆ ಗೊತ್ತಾಗಿದ್ದು ತಾನು ಕಂಡಕ್ಟರನನ್ನೆ ಬಿಟ್ಟು ಬಂದಿದ್ದೇನೆ ಎಂದು.  ಅದಾಗಲೇ ಬಸ್ ಬಸ್ ಸ್ಟ್ಯಾಂಡಿಂದ ಎರಡು ಕಿಲೊಮಿಟರ್ ಬಂದಿತ್ತು. ಡ್ರೈವರ್ ಮತ್ತೆ ಬಸ್ ನ್ನು ಹೊರಳಿಸಿ ಬಸ್ ಸ್ಟ್ಯಾಂಡ ಕಡೆಗೆ ಹೊಡೆದ. ಬಸ್ ನಲ್ಲಿದ್ದ  ಕೆಲವರು  “ಹಂಗ…. ಇದ್ದರ.. ಡ್ರೈವರ ನಮ್ಮ ಊರ ಮಟಾ… ಗಾಡಿ ಹೊಡಿತಿದ್ದ. ಇವತ್ತು ಪ್ರೀ ಯೊಳಗ… ಮನಿಗೆ ಹೋಗ್ತಿದ್ವಿ. ನಮ್ಮ ರೊಕ್ಕ ಲುಕ್ಸಾನ ಆತು ನೋಡ…” ಎಂದು ಪರದಾಡತೊಡಗಿದರು.  ಬಸ್ಸಿನಲ್ಲಿದ್ದ ನನ್ನ ಸ್ನೇಹಿತೆಯರು ಆಮೇಲೆ ಬೇರೆಯವರಿಗೆ ಆ ಸಂಗತಿ ಹೇಳಿ ನಕ್ಕಿದ್ದೆ ನಕ್ಕಿದ್ದು.

    ಮೊದಲೇ ಡಕೊಟಾ ಬಸ್ ಕೆಲವೊಂದ ಸಾರಿ ಪ್ರಯಾಣಿಕರನೆಲ್ಲಾ ಹತ್ತಿಸಕೊಂಡು ಡಿಪೊಕೆ ತಂದು ರಿಪೇರಿ ಮಾಡಿಸಲು ನಿಲ್ಲಿಸುತ್ತಿದ್ದ. ಮೊದಲೆ ತಾಸ ಗಟ್ಟಲೆ ಬಸ್ ಸ್ಟ್ಯಂಡಲ್ಲಿ ಕಾದು ಕುಳಿತವರಿಗೆ ಇದನ್ನ ಕಾಯುವದೆಂದರೆ ಹೆಣಾ ಕಾದಷ್ಟು ಸಂಕಟಾ ಆಗುತ್ತಿತ್ತು. ಬೆಳಿಗ್ಗೆ ಹೋಗುವಾಗಲೂ ಅಷ್ಟೆ ಧಾರವಾಡ ಮುಟ್ಟಿದಾಗ ಎಲ್ಲಿ ಕ್ಲಾಸ ತಪ್ಪುತ್ತದೊ ಎಂದು ಗಡಿಬಿಡಿಯಲ್ಲಿ ಸಾಮಾನುಗಳಿಡುವ ಪಟ್ಟಿಯಿಂದ (longer,/rack) ನೊಟುಬುಕ್ ಗಳು ನಮ್ಮುವ ಹೌದೊ ಅಲ್ಲೊ ಎಂದು ನೋಡದೆ ಎತ್ತಿಕೊಂಡು ಹೋಗುತ್ತಿದ್ದೇವು. ಹೀಗೆ ಅವಸರದಲ್ಲಿ ಒಮ್ಮೆ  ತೆಗೆದುಕೊಂಡು ಕಾಲೇಜಿಗೆ ಹೋಗಿ ನೋಡುತ್ತೇನೆ… ಅದು ನನ್ನ ನೋಟ ಬುಕ್ ಅಲ್ಲವೇ ಅಲ್ಲ… ಅದು ಯಾರದೊ ಹುಡಗನ ನೋಟ ಬುಕ್.   ಅದರ ಒಳಗಡೆ ಗೋಪಾಲ ಕೃಷ್ಣ ಎಂದು ಹೆಸರು ಬರೆದಿತ್ತು ಅದರ ಕೆಳಗೆ ಕೊಳಲಿನ ಚಿತ್ರವನ್ನು ಸುಂದರವಾಗಿ ಬಿಡಿಸಲಾಗಿತ್ತು. ಆ ಪೇಜಿನ ನಡುವೆ ಒಂದು ಮಾರ್ಕ್ಸ್ ಕಾರ್ಡ ಕೂಡಾ ಇತ್ತು. ಅದರಿಂದ ಅವನು ಬಿ.ಎ. ಓದಿತ್ತಿದ್ದ ಎಂದು ಗೊತ್ತಾಯಿತು. ಎಷ್ಟನೇಯ ವರ್ಷ ಎಂದು ನೆನಪಿಲ್ಲಾ ಹೆಸರಿನ ಜೊತೆಗೆ ಕೊಳಲಿನ ಚಿತ್ರ ಚೆನ್ನಾಗಿ ಬಿಡಿಸಿದ್ದರಿಂದ ಹೆಸರು ಗೋಪಾಲ ಅಥವಾ ಕೃಷ್ಣ ಎರಬಹುದೆಂದು ಚೆನ್ನಾಗಿ ನೆನಪಿದೆ. ಓದಿದ್ದಕ್ಕಿಂತ ನೋಡಿದ ಚಿತ್ರ ಚೆನ್ನಾಗಿ ನೆನಪಿರುತ್ತದಂತೆ. Visuals effects more than oral in mind.  ಆ ಮಾರ್ಕಸ್‌ ಕಾರ್ಡಿನಲ್ಲಿ ಪ್ರತಿಯೊಂದು ವಿಷಯಕ್ಕೂ ಬರಿ ಎರೆಡೊ ಮೂರೊ ಮಾರ್ಕ್ಸ್ ಪಡೆದಿದ್ದ. ಫೇಲ್ ಎಂದು ಬರೆದಿತ್ತು. ಅಯ್ಯೊ ಇದೇನಾಯಿತು ನನ್ನ ನೋಟಬುಕ್ ಎಲ್ಲಿ ಹೋದವು.. ಈ ಬುಕ್ ಯಾರದ್ದೊ ಇದರಲ್ಲಿ ಅವರ ಮಾರ್ಕ್ಸ ಕಾರ್ಡ ಕೂಡಾ ಇದೇ ಅವರು ಎಷ್ಟು ಪರದಾಡುತ್ತಿರುವರೋ ಏನೊ ಎಂದು  ಯಾರನ್ನು ಕೇಳುವದು ಎಂದು ಒದ್ದಾಡತೊಡಗಿದೆ.  ಅಲ್ಲದೇ ನನ್ನ ನೋಟಬುಕ್ ಸಿಗದೇ ಹೋದರೆ.. ಅರ್ದಕ್ಕಿಂತ ಹೆಚ್ಚು ಬರೆದ ನೋಟ ಬುಕ್ಕ ಅದಾಗಿತ್ತು ಮತ್ತೆ ಬರೆಯುವದು ಎಂದರೆ ತಲೆ ಬೆನೆ  ಸುರುವಾಗುತ್ತದೆ.. ಏನು ಮಾಡುವದು ಒಂದು ತೋಚದಾಯಿತು.

 ಮನೆಯ ಪಕ್ಕದಲ್ಲಿ ನಮ್ಮ ಸಂಬಂಧಿಕರ ಮಗ ನಮ್ಮ ಜೊತೆಯೇ ಕಾಲೇಜಿಗೆ ಓದಲು ಬರುತ್ತಿದ್ದ. ಅಂದು ರಾತ್ರಿ ನಮ್ಮ ಮನೆಗೆ ಬಂದು ನನ್ನ ಕಡೆ ಇರುವ ನೋಟುಬುಕ್ ಇಸಿದುಕೊಂಡನು ಮತ್ತು ನನ್ನ ನೋಟಬುಕ್ ನನಗೆ ಕೊಟ್ಟು ಹೋದ. ಅವನ ಜೊತೆ ನಾನು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ನನಗೆ ಕೇಳುವ ದೈರ್ಯವೂ ಬರಲಿಲ್ಲ. ಬಹುಷಃ ಅವರಿಬ್ಬರು ಸ್ನೇಹಿತರಾಗಿದ್ದರೆಂದು ತೋರುತ್ತದೆ.  ನೋಟಬುಕ್ಕಿನಲ್ಲಿ  ನನ್ನ ಹೆಸರು ನೋಡಿ ಅವನಿಗೆ ಅದು ನನ್ನದು ಎಂದು ಗೊತ್ತಾಗಿದೆ.  ಇಳಿಯುವಾಗ ಇಬ್ಬರ ನೋಟಬುಕ್ ಅದಲು ಬದಲಾಗಿದ್ದವು. ಫೇಲಾಗಿದ್ದರಿಂದ ಅವನಿಗೆ ನೇರವಾಗಿ ಕೇಳಲು ಮುಜುಗರವಾಗಿತ್ತೇನೊ ಗೊತ್ತಿಲ್ಲ ನನ್ನ ಪಕ್ಕದ ಮನೆಯ ಹುಡುಗನ ಕೈಯಲ್ಲಿ ನನ್ನ ನೋಟ ಬುಕ್ ಕೊಟ್ಟು ತನ್ನ ನೋಟ ಬುಕ್ ಇಸಿದುಕೊಂಡಿದ್ದ. ಕಡೆಗೂ ನನಗೆ ಅವನಾರೆಂದೂ ಗೊತ್ತಾಗಲೇ ಇಲ್ಲ. ನಾನು ಕೇಳುವದು ಸರಿಯಲ್ಲವೆಂದೂ ಸುಮ್ಮನಾಗಿ ಬಿಟ್ಟೆ.  

ಹೀಗೆ ಬಸ್ ನಲ್ಲಿ ದಿನಕ್ಕೊಂದರಂತೆ ಎನಾದರೊಂದು ಆಗುತ್ತಿದ್ದ ಪ್ರಸಂಗಗಳು, ಹಾಸ್ಯ ಘಟನೆಗಳು ಮರೆಯಾಲರದ ನೆನಪುಗಳಾಗಿ ನನ್ನ ಜೀವನದ ನೆನಪಿನ ಅಂಗಳದಲ್ಲಿ ಮಾಸದೆ ಹಸಿರಾಗಿ ಉಳಿದಿವೆ.


About The Author

Leave a Reply

You cannot copy content of this page

Scroll to Top