ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹುಸಿ ಹಾಸದ ಹಸಿ ಭಾರವನು ತೊರೆದು ಮನವೀಗ ಹಗುರಾಗಿದೆ
ಮುಗಿಲ ಮಲ್ಲೆಯ ಸೌಗಂಧವನು ಮರೆತು ಕನಸೀಗ ಸಿಹಿಯಾಗಿದೆ

ಬೆಂಬಿಡದ ಭ್ರಾಂತಿಗೆ ನೆಚ್ಚಿ ಮನವು ಬಂಧಿಯಾಗಿತ್ತು ಮೋಹದಲಿ
ಶೂನ್ಯ ಭಾವದ ನೆಂಪುಗಳ ಬಿಸುಟುತ ಬಿಕ್ಕಳಿಕೆಯೀಗ ಬರಿದಾಗಿದೆ

ಸ್ವಪ್ನ ಬಂಡಿಗೆ ಸಾರಥಿ ನೀನೆನುತ ಆದರಿಸಿದುದಕೆ ಮರ್ಮವಿಲ್ಲ ಇನ್ನು
ಸೆಳೆತ ಹೀನ ಬಾಂಧವ್ಯಕೆ ಬೆನ್ನು ತೋರುತ ಬದುಕೀಗ ನೀಳವಾಗಿದೆ

ನಿಡುಸೊಯ್ವ ಒಡಲ ಬೇಗೆಗೆ ತಂಬೆಲರ ಮುತ್ತುಣಿಸಿದ್ದು ಸಟೆಯಷ್ಟೇ
ಕಾಪಟ್ಯದ ಪೊರೆಗೆ ಹೆಣೆದ ನಿಚ್ಚಣಿಕೆಯಲಿ ದಿಟವೀಗ ಬಯಲಾಗಿದೆ

ಹಾವ ಭಾವಗಳ ಮೇಳದಿ ಕುಣಿಯುವ ತೆವಲಿಗೆ ಬದ್ಧಳಲ್ಲ ‘ನಯನ’
ಶೋಧಿಸಿ ರುಜುವಾದ ಕಟು ತಥ್ಯದಲಿ ಕ್ಷಣವೀಗ ವಿಶದವಾಗಿದೆ.

=====

ವಿಷಣ್ಣತೆಯ ಸರಪಳಿಯನು ಕಳಚಿ ಮುಂದಡಿಯಿಡಲು ಆತ್ಮವೀಗ ಗೆಲುವಾಗಿದೆ
ವಿಷಾದದ ಕಲ್ಪಮೇಘವು ಕರಗಿ ಸ್ಥೈರ್ಯದ ಬೆಳಕಲ್ಲಿ ಗಮ್ಯವೀಗ ಉಜ್ವಲವಾಗಿದೆ

ಮರುಧರೆಯಲಿ ನೆರಳಿನ ಆಸರೆಯನು ಅರಸುತ ಬಳಲಿ ಬೆಂಡಾಗಿದ್ದೆ ಬಾಳಿನಲಿ
ಸುಳ್ಳು ಭರವಸೆಯ ಮೃಗಜಲದ ಭ್ರಮೆಯನ್ನು ತ್ಯಜಿಸಿ ಬದುಕೀಗ ನಿರಾಳವಾಗಿದೆ

ಅರಿವಾಗಿದೆಯಿಂದು ಆನಂದವೆನ್ನುವುದು ಅಂತರಂಗದ ಅನುಭೂತಿಯೆಂದು
ತಪ್ಪಳೆಯ ಸಪ್ಪಳವಿಲ್ಲದೆ ಬದುಕನು ರೂಪಿಸಿ ಆತ್ಮಪ್ರತ್ಯಯವೀಗ ಬಲಿಷ್ಠವಾಗಿದೆ

ಸುಡುವ ಎದೆಯು ಬಡಿಯುವುದನು ಬಿಡಲಿಲ್ಲ ಸಾಂತ್ವನ ಹೇಳುವವರಿಲ್ಲವೆಂದು
ತೊಡಕಿನಲಿ ತೊರೆದವರ ಮನ್ನಿಸಿ ಮುನ್ನಡೆಯೆ ಜನುಮದರ್ಥವೀಗ ವ್ಯಕ್ತವಾಗಿದೆ

ಬಣ್ಣದ ಮಾತಿಗೆ ಮರುಳಾಗುತ ವಿಜಯ ಪಥದಿಂದ ವಿಚಲಿತನಾಗಲಾರೆ ನಾನು
ಸಣ್ಣದಾದರೂ ಪರರ ನಲಿವಲ್ಲಿ ಸಂಭ್ರಮಿಸುತಿರಲು ಹರುಷವೀಗ ವೃದ್ಧಿಯಾಗಿದೆ.


About The Author

Leave a Reply

You cannot copy content of this page

Scroll to Top