ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

ಜಯಲಕ್ಷ್ಮಿ ಕೆ ಅವರ ಲೇಖನ “ನಡೆಯೋಣು ಬಾರಾ”

ಲಹರಿ ಸಂಗಾತಿ ಜಯಲಕ್ಷ್ಮಿ ಕೆ “ನಡೆಯೋಣು ಬಾರಾ” ಮಳೆ ಸುರಿಯುತ್ತಿದ್ದರೂ ಛತ್ರಿ ಹಿಡಿಯದೆ ನಡೆದಾಡುವುದು, ಒಂದೇ ಕೊಡೆಯಡಿಯದಲ್ಲಿ ಇಬ್ಬರು ಮೂವರು ವಿದ್ಯಾರ್ಥಿಗಳು ಸೇರಿಕೊಳ್ಳುವುದು , ಕೈಯಲ್ಲಿ ಛತ್ರಿ ಇದ್ದರೂ ಅದನ್ನು ಬಿಡಿಸದೆ ಹಾಗೆ ತಲೆ ಮೇಲೆ ಇಟ್ಟುಕೊಂಡು ನಡೆಯುವುದು ಇವೆಲ್ಲ   ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾಡುವ  ಶೋಕಿ. ಛತ್ರಿಯ ಬಗ್ಗೆ ಇಂತಹ ಟ್ರೆಂಡ್ ಇರುವಾಗ ಕಾಲೇಜಿಗೆ ರೈನ್ ಕೋಟ್ ಧರಿಸಿ ವಿದ್ಯಾರ್ಥಿನಿ ಒಬ್ಬಳು ಬರುವುದೆಂದರೆ….? ಈ ಅಪರೂಪದ ನೋಟ ಎಲ್ಲರ ಗಮನವನ್ನು ಅವಳತ್ತ ಸೆಳೆಯುವುದು ಸಹಜ ತಾನೇ? ಕೆಲವೊಂದು ಮಕ್ಕಳು ಆಕೆಗೆ ‘ರೈನ್ ಕೋಟ್ ‘ ಎನ್ನುವ ಹೆಸರನ್ನೂ ಇಟ್ಟಿದ್ದರಂತೆ.( ಆ ವಿಷಯ ತಿಳಿದ ಮೇಲೆ ಅವರಿಗೆ ಬುದ್ಧಿ ಹೇಳಲಾಯಿತು) ಅಂತೆಯೇ ಅವಳನ್ನು ಗಮನಿಸಿದ ಉಪನ್ಯಾಸಕಿಯೊಬ್ಬರು ಆಕೆಯನ್ನು  ಮಾತನಾಡಿಸುತ್ತಾ, ಅವಳ ಮನೆಯ ಸ್ಥಿತಿ, ಪೋಷಕರ ವೃತ್ತಿ, ಮೂರು  ಕಿ.ಮೀ ದೂರದಿಂದ ನಡೆದುಕೊಂಡೇ ಕಾಲೇಜಿಗೆ ಬರುವ ಆಕೆಯ ದಿನಚರಿ ಈ ಎಲ್ಲ ಅಂಶಗಳನ್ನು ಕಲೆ ಹಾಕಿಕೊಂಡು ಬಂದು  ಆ ವಿಚಾರಗಳನ್ನು  ಉಪನ್ಯಾಸಕರ ಕೊಠಡಿಯಲ್ಲಿ ಹಂಚಿಕೊಂಡರು. ವಿದ್ಯಾರ್ಜನೆಗಾಗಿ  ದಿನಕ್ಕೆ ಆರು ಕಿಲೋಮೀಟರ್ ನಡೆಯುವ ಆ ವಿದ್ಯಾರ್ಥಿನಿಯ ಬಗ್ಗೆ ನಮಗೆಲ್ಲ ಹೆಮ್ಮೆ ಎನಿಸಿತು. ಆ ಸಂದರ್ಭ ಉಪನ್ಯಾಸಕರಲ್ಲಿ ಕೆಲವರು, ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದ ತಮ್ಮ ಗತಕಾಲದ ನೆನಪುಗಳನ್ನು ಮೆಲುಕು ಹಾಕಿಕೊಂಡರೆ, ಇನ್ನು ಕೆಲವರು ನಡೆಯುವುದು ಬಡತನದ ಅನಿವಾರ್ಯತೆ ಎಂಬಂತೆ ಮಾತನಾಡಿದರು. ಇವರಲ್ಲಿ ಒಬ್ಬರ ಮಾತು ಮಾತ್ರ ನನಗೆ ತೀರಾ ಅಸಹಜವೆನಿಸಿತು. ” ನನ್ನ ಮಗಳು ಹುಟ್ಟಿದ ಮೇಲೆ  ಮೆಟ್ಟಿದ ಎರಡನೆಯ  ಹೆಜ್ಜೆಯೇ ಕಾರಿನೊಳಗೆ, ನಾವು  ಇದುವರೆಗೆ ಒಮ್ಮೆಯೂ ಅವಳನ್ನು ಎಲ್ಲಿಯೂ ನಡೆಸಿದ್ದೇ ಇಲ್ಲ,  ನಡೆದುಕೊಂಡು ಓಡಾಡಲು ಹೇಳಿದ್ದೇ ಇಲ್ಲ..ಯಾರಾದರೂ ನೋಡಿದರೆ ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ!! ನಾವು ಇಷ್ಟು ಚೆನ್ನಾಗಿದ್ದುಕೊಂಡು!! ಅವಳಿಗಂತೂ ಮನೆ ಹೊಸ್ತಿಲು ದಾಟಿ   ಯಾವಾಗ ಎಲ್ಲಿಗೇ ಹೋಗಬೇಕಾದರೂ  ಕಾರು ಬೇಕೇ ಬೇಕು “. ಎಂದರವರು. ಅವರ ಮಾತು ಕೇಳಿದ ನನಗೆ ‘ ಛೇ… ನಡೆಯುವುದೆಂದರೆ ಇಷ್ಟೊಂದು ಅವಮಾನವಾ?? ಎಂಬ ಚಿಂತನೆ ಮೂಡಿತು.ನಾವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓದುತ್ತಿದ್ದ ಆ ದಿನಗಳಲ್ಲಿ ರಣ ಬಿಸಿಲಿದ್ದರೂ, ಮಳೆಯಿದ್ದರೂ ನಾವೆಲ್ಲಾ ನಡೆದುಕೊಂಡೇ  ಶಾಲೆಗೆ  ಹೋಗುತ್ತಿದ್ದೆವು. .ನಡೆಯುವುದು ಅವಮಾನ ಎಂದು ಅನಿಸಿದ್ದೇ ಇಲ್ಲ!! ಬಹುಶಃ ಅಂಥ ಮನೋಭಾವ ಸಮಾಜದ ಯಾರಲ್ಲೂ ಆಗ ಇರಲಿಲ್ಲ. ಬೆಳಗ್ಗೆ ಏಳೂವರೆ- ಎಂಟು ಗಂಟೆಗೆ ಮನೆ ಬಿಟ್ಟರೆ  ಬಳಗದ ಮಕ್ಕಳೆಲ್ಲ ಸೇರಿಕೊಂಡು ಶಾಲೆ ತಲುಪುವಾಗ   ಹತ್ತು ಗಂಟೆಯ ಆಸು ಪಾಸು. ಬೇಸಿಗೆ ಕಾಲದಲ್ಲಿ ನೇತ್ರಾವತಿ ಕೃಪೆ ತೋರಿದರೆ ಸುತ್ತಿ ಬಳಸಿ ನಡೆಯದೆ ನದಿ ದಾಟಿ ಸ್ವಲ್ಪ ಬೇಗ ಶಾಲೆ ಸೇರುತ್ತಿದ್ದೆವು.ಆಗಲೂ ವಾಹನದಲ್ಲಿ ಶಾಲೆಗೆ ಬರುವವರು ಇಲ್ಲದಿಲ್ಲ. ಆದರೆ ಆ ಸಂಖ್ಯೆ ತೀರಾ ಕಡಿಮೆಇತ್ತು.ನಡೆದು ಸಾಗುವ ಖುಷಿಗಾಗಿ ಕೆಲವೊಮ್ಮೆ ಅವರು ಕೂಡಾ ಪೋಷಕರಲ್ಲಿ ಕಾಡಿ ಬೇಡಿ ನಮ್ಮೊಡನೆ ಬರುತ್ತಿದ್ದರು.ಎಷ್ಟೇ ವಾಹನಗಳ ದಟ್ಟಣೆ ಇರಲಿ, ಎಷ್ಟೇ ಮಕ್ಕಳು ಅಲ್ಲಿ -ಇಲ್ಲಿ ನಡೆದಾಡುತ್ತಿರಲಿ,ಕೆಲವು ಪೋಷಕರು ಶಾಲೆಯ ಗೇಟಿಗೆ ಅಂಟಿಕೊಂಡಂತೆ ತಮ್ಮ ವಾಹನ ನಿಲ್ಲಿಸಿ, ಅಲ್ಲಿಯೇ ಮಕ್ಕಳನ್ನು ವಾಹನದಿಂದ ಇಳಿಸಿ ಮುಂದೆ ಸಾಗುವ ಚಿತ್ರಣ ಇಂದು ಸರ್ವೇ ಸಾಮಾನ್ಯ . ಮಕ್ಕಳು ಕ್ಷೇಮವಾಗಿ, ಸುಖವಾಗಿ, ಬೆಚ್ಚಗೆ ತರಗತಿ ಸೇರಿಕೊಳ್ಳಲಿ ಎನ್ನುವುದೇ ಪೋಷಕರ ಆಶಯ.ಇಂದು ಮಕ್ಕಳನ್ನು ಇಷ್ಟು ಜೋಪಾನ ಮಾಡಲು ಪ್ರಸ್ತುತ ಸಮಾಜದ ಸ್ಥಿತಿಗತಿಯೂ ಕಾರಣವೇ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೋಷಕರು  ಹಿಂದಿಗಿಂತ ಹೆಚ್ಚಾಗಿ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇಂದಿದೆ. ಆದ್ದರಿಂದ ಮನೆ ಮತ್ತು ಶಾಲೆಯ ನಡುವಿನ ಅಂತರ ಎಷ್ಟೇ ಕಡಿಮೆಯಾಗಿದ್ದರೂ  ಪೋಷಕರು ಮಕ್ಕಳನ್ನು ತಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಶಾಲೆಗೆ ಕಳುಹಿಸುತ್ತಾರೆ. ವಾಹನಗಳ ದಟ್ಟಣೆ, ಅಪಘಾತದ ಭೀತಿ, ಅಪರಿಚಿತ, ಅಪಾಯಕಾರಿ ಮನುಷ್ಯರ ಭಯ,  ಸಮಯದ ಅಭಾವ, ಪುಸ್ತಕಗಳ ಹೊರೆ ತುಂಬಿರುವ ಶಾಲಾ ಚೀಲದ ಭಾರ, ಉತ್ತಮ ಶಾಲೆಗಳಲ್ಲೇ ಓದಿಸಬೇಕೆನ್ನುವ ಸಹಜ ಹಂಬಲ, ಹವಾಮಾನದ ವೈಪರೀತ್ಯಗಳಿಂದ ( ಗಾಳಿ -ಮಳೆ ) ರಕ್ಷಣೆ , ಇತ್ತೀಚೆಗೆ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ ಈ ಎಲ್ಲ ಅಂಶಗಳಿಂದ  ಮಕ್ಕಳನ್ನು ರಕ್ಷಿಸಿಕೊಳ್ಳಬೇಕಾದದ್ದು ,ತೀವ್ರ ಕಾಳಜಿ ವಹಿಸಬೇಕಾದದ್ದು ಇಂದಿನ ಅಗತ್ಯ. ಅಂದರೆ ವಾಹನಗಳಲ್ಲಿ ಸಂಚರಿಸುವುದು  ಇಂದಿನ ಅವಶ್ಯಕತೆಯೇ ಹೊರತು ಪ್ರತಿಷ್ಠೆಯ ಅಂಶವಲ್ಲ ಎನ್ನಬಹುದು. ಅದೇ ಒಂದು ಪ್ರತಿಷ್ಠೆ ಎನ್ನುವ ಅಂಶ ಮಕ್ಕಳ ಮನಸಿಗೆ ಬಂದು ಬಿಟ್ಟರೆ ವಾಹನದ ಅವಶ್ಯಕತೆ ಇದ್ದರೂ ಅನಿವಾರ್ಯ ಕಾರಣಗಳಿಂದ ನಡೆದುಕೊಂಡು ಶಾಲೆಗೆ ಬರುವ ಸಹಪಾಠಿಗಳನ್ನು  ಅವರು ತುಚ್ಚವಾಗಿ ಕಾಣುವ ಮನೋಭಾವ ಬೆಳೆಸಿಕೊಂಡಾರು. ಹೀಗಾಗದಿರಲು ಹಿರಿಯರ ಮಾತು -ವರ್ತನೆ ಜವಾಬ್ದಾರಿಯುತವಾಗಿರಬೇಕು.  ಸಾಮಾಜಿಕವಾಗಿ ಪರಿಸ್ಥಿತಿ ಸುಗಮವಾಗಿದ್ದರೆ , ದಾರಿ ಪ್ರತಿಕೂಲವಾಗಿಲ್ಲ ಎಂದಾದರೆ ಪ್ರಕೃತಿಯ ಅಂಶಗಳನ್ನು ವೀಕ್ಷಿಸುತ್ತಾ ಜೊತೆಗೂಡಿ ನಡೆದು ಸಾಗುವ ಸೊಗಸೇ ಚಂದ!  ದಣಿವರಿಯುವುದಿಲ್ಲ,ದಾರಿ ಸಾಗಿದ್ದು ತಿಳಿಯುವುದಿಲ್ಲ. ಹಾದಿ ಬದಿಯ ಅಂಗಡಿಗಳ ಬೋರ್ಡ್ ಗಳನ್ನು ಓದುವುದು, ಕೇಳಿ ಬರುವ ಪಕ್ಷಿಗಳ ಗಾನದ ಬಗ್ಗೆ ಚರ್ಚೆ ಮಾಡುವುದು, ಹಾದಿ ಬದಿಯ ಗಿಡಮರಗಳನ್ನು ನೋಡುವುದು, ಅಲ್ಲಿ ಹಾರಾಡುವ ಪಕ್ಷಿಗಳನ್ನು ವೀಕ್ಷಿಸುವುದು , ನಡೆದು ಸಾಗುವ ವಿವಿಧ ರೀತಿಯ ಜನರ ನೋಟ ಇವೆಲ್ಲವೂ ಮಕ್ಕಳಿಗೆ  ಒಂದೊಂದು ರೀತಿಯಲ್ಲಿ ಜ್ಞಾನ ನೀಡುವ ಅಂಶಗಳೇ ಹೌದು . ಆದಕಾರಣ ಸಾಧ್ಯವಾದರೆ ಪೋಷಕರು ಮಕ್ಕಳ ಜೊತೆಯಲ್ಲಿಯೇ ಇರಬಹುದಾದಂತಹ ಸಂದರ್ಭಗಳಲ್ಲಾದರೂ ಕಾಲುನಡಿಗೆಯ ಸುಖವನ್ನು ಮಕ್ಕಳಿಗೆ ಪರಿಚಯಿಸುವುದು ಒಳ್ಳೆಯದು.  ನಡೆಯುವಿಕೆ ಎನ್ನುವ ನೈಸರ್ಗಿಕ ಕ್ರಿಯೆ ಮಕ್ಕಳಿಗಾಗಲಿ ಹಿರಿಯರಿಗಾಗಲಿ ಮಾನಸಿಕ ಚೈತನ್ಯವನ್ನು ನೀಡುವಂತದ್ದು. ಹಿರಿಯರಾದ ನಾವೆಲ್ಲ ತಿಳಿದಿರುವಂತೆ ರಕ್ತದೊತ್ತಡ  ನಿವಾರಣೆಗೆ,ದೇಹದ ತೂಕದ ಸಮತೋಲನಕ್ಕೆ , ಹೃದಯದ ಆರೋಗ್ಯಕ್ಕೆ ನಡೆಯುವಿಕೆ ಅತ್ಯುತ್ತಮ ದೈಹಿಕ ವ್ಯಾಯಾಮ. ಜಯಲಕ್ಷ್ಮಿ ಕೆಮಡಿಕೇರಿ.

ಜಯಲಕ್ಷ್ಮಿ ಕೆ ಅವರ ಲೇಖನ “ನಡೆಯೋಣು ಬಾರಾ” Read Post »

ಇತರೆ

“ಸಂಬಂಧಗಳ ಅರಿವು” ವಚನಚಿಂತನೆ, ಪೂರ್ಣಿಮಾ ಮಹೇಶ ಮುತ್ನಾಳ ಅವರಿಂದ

ವಚನ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ “ಸಂಬಂಧಗಳ ಅರಿವು” ವಚನಚಿಂತನೆ, ನಂಬಿ ಬಂದವರೊಡನೆ ನಮ್ಮ ನಡೆ ಹೇಗಿರಬೇಕು? ಅಂತ ಒಂದು ಪ್ರಶ್ನೆ ಬಂದರೆ ಅದಕ್ಕೆ…… ಉತ್ತರವನ್ನು ಹುಡುಕುವ ಪ್ರಯತ್ನ ಯಾವ ರೀತಿ ಮಾಡಬಹುದು….. ಅಂತ ಅಕ್ಕನ ವಚನವೊಂದರಿಂದ ತಿಳಿಯಬಹುದು.ನಮ್ಮ ಜೀವನದಲ್ಲಿ ಅನೇಕರು ನಮ್ಮನ್ನು ನಂಬಿ, ಪ್ರೀತಿಯಿಂದ ಅಥವಾ ಆಸರೆಯನ್ನರಸಿ ಬರುತ್ತಾರೆ. ಆದರೆ ಅವರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು, ಅವರ ನಂಬಿಕೆಗೆ ಹೇಗೆ ನ್ಯಾಯ ಒದಗಿಸಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಅಕ್ಕಮಹಾದೇವಿಯವರ ಈ ವಚನ ನಮಗೆ ಮಾರ್ಗದರ್ಶನ ನೀಡುತ್ತದೆ.“ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ,ಮನ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ!ಅರಿವು ನಿಮ್ಮಲ್ಲಿ ಸ್ಥಯವಾದ ಬಳಿಕ ನಾನಾರನರಿವೆ!ಚನ್ನಮಲ್ಲಿಕಾರ್ಜುನಾ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯ.”ಈ ವಚನವು ಕೇವಲ ದೇವರಿಗಷ್ಟೇ ಸೀಮಿತವಾದ ಆಧ್ಯಾತ್ಮಿಕ ಅನುಭವವಲ್ಲ. ಇದನ್ನು ನಮ್ಮ ದೈನಂದಿನ ಲೌಕಿಕ ಜೀವನಕ್ಕೆ ಮತ್ತು ನಮ್ಮನ್ನು ನಂಬಿ ಬಂದ ಜನರೊಂದಿಗಿನ ಸಂಬಂಧಕ್ಕೆ ಅನ್ವಯಿಸಿಕೊಂಡಾಗ ಹಲವು ಮುಖ್ಯವಾದ ಜೀವನ ಮೌಲ್ಯಗಳು ದೊರೆಯುತ್ತವೆ.ಅವು ಹೇಗೆಂದರೆ…೧. ನಿಸ್ವಾರ್ಥ ಸೇವೆಯ ಬಗ್ಗೆ ಹೇಳಲಾಗಿದೆ.ಅಂದರೆ..ವಚನದಲ್ಲಿ “ತನು ನಿಮ್ಮ ರೂಪಾದ ಬಳಿಕ” ಎನ್ನಲಾಗಿದೆ. ಅಂದರೆ ಶರೀರವು ಪರಮಾತ್ಮನ ಇಚ್ಛೆಯಂತೆ ಪವಿತ್ರವಾದಾಗ, ಮಾಡುವ ಪ್ರತಿಯೊಂದು ಕಾಯಕವೂ ಪೂಜೆಯಾಗುತ್ತದೆ. ನಮ್ಮನ್ನು ನಂಬಿ ಬಂದ ಕುಟುಂಬದವರು, ಮಿತ್ರರು ಅಥವಾ ಆಶ್ರಿತರಿಗೆ ನಾವು ಮಾಡುವ ಸಹಾಯದಲ್ಲಿ ಯಾವುದೇ ಸ್ವಾರ್ಥವಿರಬಾರದು. “ನಾನು ಅವರಿಗೆ ಸಹಾಯ ಮಾಡುತ್ತಿದ್ದೇನೆ” ಎಂಬ ಅಹಂಕಾರವನ್ನು ತೊರೆದು, ಪ್ರೀತಿಯಿಂದ ನಡೆದುಕೊಳ್ಳುವುದೇ ನಿಜವಾದ ಧರ್ಮ.ಇದು ನಮ್ಮನ್ನು ನಂಬಿ ಬಂದವರಿಗೆ ನಾವು ಕೊಡುವ ಗೌರವ.೨. ಸಮಾನತೆಯ ಭಾವವನ್ನು ಹೇಳಲಾಗಿದೆ.. ಅಂದ್ರೆ“ಮನ ನಿಮ್ಮ ರೂಪಾದ ಬಳಿಕ” ಎಂದರೆ ಮನಸ್ಸಿನಲ್ಲಿ ದ್ವೇಷ, ಸ್ವಾರ್ಥ, ಮೇಲು-ಕೀಳೆಂಬ ಭೇದಭಾವಗಳಿಲ್ಲದಿರುವುದು. ಭಾರತೀಯ ಸನಾತನ ಚಿಂತನೆಯಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ.ಹೇಗೆಂದರೆ ಈ ಶ್ಲೋಕದ ಮೂಲಕ ಅದನ್ನು ತಿಳಿಯಬಹುದು.“”ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ ।ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ॥””ಅಂದರೆ..”ಇವನು ನನ್ನವನು, ಅವನು ಬೇರೆಯವನು” ಎಂಬ ಸಣ್ಣತನದ ಯೋಚನೆ ಕಿರಿದಾದ ಮನಸ್ಸಿನವರಿಗೆ ಇರುತ್ತದೆ. ವಿಶಾಲ ಮನಸ್ಸಿನ ಉದಾರ ಗುಣದವರಿಗೆ ಇಡೀ ಜಗತ್ತೇ ಒಂದು ಕುಟುಂಬದಂತೆ ಕಾಣುತ್ತದೆ.ಅಕ್ಕಮಹಾದೇವಿ ಹೇಳುವಂತೆ ನಮ್ಮನ್ನು ಆಶ್ರಯಿಸಿ ಬಂದವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಅವರಲ್ಲಿರುವ ಭಾವನೆಗಳನ್ನು ಗೌರವಿಸಬೇಕು. ಮನಸ್ಸಿನಲ್ಲಿ ನಿಷ್ಕಲ್ಮಷ ಪ್ರೀತಿ ಇದ್ದಾಗ ಮಾತ್ರ ಮತ್ತೊಬ್ಬರ ಕಷ್ಟ ನಮಗೆ ಅರ್ಥವಾಗುತ್ತದೆ.ಇಲ್ಲವಾದರೆ ಅವರು ಅನುಭವಿಸುವ ನೋವುಗಳು ನಮಗೆ ಅರ್ಥ ಆಗುವುದೇ ಇಲ್ಲ.೩. ಸನ್ಮಾರ್ಗ ಮತ್ತು ಅಭಯದ ಬಗ್ಗೆ ಹೇಳಲಾಗಿದೆ.“ಅರಿವು ನಿಮ್ಮಲ್ಲಿ ಸ್ಥಯವಾದ ಬಳಿಕ” ಎನ್ನುವುದು ಜ್ಞಾನ ಮತ್ತು ವಿವೇಕವನ್ನು ಸೂಚಿಸುತ್ತದೆ. ನಮ್ಮನ್ನು ನಂಬಿ ಬಂದವರಿಗೆ ನಾವು ನೀಡಬೇಕಾದ ಅತಿ ದೊಡ್ಡ ಕೊಡುಗೆ ಎಂದರೆ ಒಳ್ಳೆಯ ದಾರಿ ತೋರಿಸುವುದು ಮತ್ತು ಅಭಯ ನೀಡುವುದು.ಇದನ್ನೂ ಕೂಡ ಒಂದು ಶ್ಲೋಕದ ಮೂಲಕ ತಿಳಿದುಕೊಳ್ಳಬಹುದು.“”ಶರಣಾಗತ ದೀನಾರ್ಥ ಪರಿತ್ರಾಣ ಪರಾಯಣೇ ।ಸರ್ವಸ್ಯಾಪ್ತಿ ಹರೇ ದೇವಿ ನಾರಾಯಣಿ ನಮೋऽಸ್ತು ತೇ ॥””ಅಂದ್ರೆ..ನಮ್ಮನ್ನು ನಂಬಿ, ಆಸರೆಯನ್ನರಸಿ ಬಂದ ದೀನರನ್ನು ಮತ್ತು ಕಷ್ಟದಲ್ಲಿರುವವರನ್ನು ರಕ್ಷಿಸುವುದೇ ಅತ್ಯುನ್ನತ ಕರ್ತವ್ಯ ಎಂದು.ನಮ್ಮನ್ನು ನಂಬಿದವರ ಕಷ್ಟದಲ್ಲಿ ಆಸರೆಯಾಗಿ ನಿಂತು, ಸರಿ-ತಪ್ಪುಗಳ ಅರಿವು ಮೂಡಿಸಿ ಧೈರ್ಯ ತುಂಬುವುದು ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯ ಕರ್ತವ್ಯವಾಗಿದೆ.ಅವರಿಗೆ ಸರಿ ತಪ್ಪುಗಳ ಅರಿವು ಮೂಡಿಸದಿದ್ದರೆ..ಮುಂದೆಯೂ ಅದೇ ತಪ್ಪುಗಳನ್ನು ಮಾಡುವ ಸಂದರ್ಭಗಳನ್ನು ಎದುರಿಸಬಹುದು.೪. ನಿಷ್ಕಲ್ಮಷ ಪ್ರೇಮದ ಬಗ್ಗೆ ತಿಳಿಸಲಾಗಿದೆ .ವಚನದ ಕೊನೆಯಲ್ಲಿ “ನಿಮ್ಮಿಂದ ನಿಮ್ಮ ಮರೆದೆನಯ್ಯ” ಎಂದು ಅಕ್ಕಮಹಾದೇವಿ ಹೇಳುತ್ತಾರೆ. ಅಂದರೆ ‘ತಾನು’ ಎಂಬ ಅಹಂಕಾರ ಕರಗಿಹೋದಾಗ ಮಾತ್ರ ಸಂಬಂಧಗಳಲ್ಲಿ ಪೂರ್ಣತೆ ಸಾಧ್ಯ. ಲೌಕಿಕ ಜೀವನದಲ್ಲೂ ಅಷ್ಟೇ, “ನಾನು ಇಷ್ಟೆಲ್ಲಾ ಮಾಡಿದೆ” ನನ್ನಿಂದಲೇ ಇದೆಲ್ಲ ಸಾಧ್ಯವಾಗಿದ್ದು ಎಂಬ ಅಹಂ ಭಾವನೆ ಬಂದಾಗ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ನಮ್ಮನ್ನು ನಂಬಿದವರ ಬಳಿ ಅಹಂಕಾರ ತೋರದೆ, ಸಮರ್ಪಣಾ ಭಾವದಿಂದ ನಡೆದುಕೊಂಡಾಗ ಜೀವನವು ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ.ಕೊನೆಯದಾಗಿ ಹೇಳಬೇಕೆಂದರೆ..ಆಧ್ಯಾತ್ಮ ಎಂದರೆ ಎಲ್ಲವನ್ನೂ ತೊರೆದು ಕಾಡಿಗೆ ಹೋಗುವುದಲ್ಲ; ಲೌಕಿಕ ಜೀವನದಲ್ಲಿದ್ದುಕೊಂಡೇ ನಮ್ಮನ್ನು ನಂಬಿ ಬಂದವರನ್ನು ಪ್ರೀತಿಯಿಂದ, ವಿವೇಕದಿಂದ ಹಾಗೂ ಅಹಂಕಾರವಿಲ್ಲದೆ ನಡೆಸುವುದು. ಅಕ್ಕಮಹಾದೇವಿಯವರ ಈ ವಚನವು ನಮ್ಮ ನಡೆ-ನುಡಿಗಳನ್ನು ಶುದ್ಧವಾಗಿಟ್ಟುಕೊಂಡು, ಎಲ್ಲರನ್ನೂ ಗೌರವದಿಂದ ಕಾಣುವ ದಾರಿಯನ್ನು ತೋರಿಸುತ್ತದೆ. ಪೂರ್ಣಿಮಾ ಮಹೇಶ ಮುತ್ನಾಳ

“ಸಂಬಂಧಗಳ ಅರಿವು” ವಚನಚಿಂತನೆ, ಪೂರ್ಣಿಮಾ ಮಹೇಶ ಮುತ್ನಾಳ ಅವರಿಂದ Read Post »

ಇತರೆ, ಪ್ರಬಂಧ

“ಕರವಸ್ತ್ರದ ಕರಾಮತ್ತು” ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ

ಪ್ರಬಂಧ ಸಂಗಾತಿ ಶೈಲಜಾ ಪ್ರಸಾದ್‌ “ಕರವಸ್ತ್ರದ ಕರಾಮತ್ತು” ಇದೇನಿದು, ಶೀರ್ಷಿಕೆ ಹೀಗಿದೆ ಅಂತ ಯೋಚಿಸ್ತಿದ್ದೀರ ?! ಲೇಖನ ಓದಿದ ಮೇಲೆ ನಿಮಗೇ ಗೊತ್ತಾಗುತ್ತೆ  ಈ ಮಾತೆಷ್ಟು ಸತ್ಯ ಅಂತ. ಅದರಲ್ಲೂ ಇಂದಿನ   ವಿಷಮ ಪರಿಸ್ಥಿತಿಯಲ್ಲಿ (`ಕರೋನ’ ವ್ಯಾಧಿ/ಕಾಯಿಲೆ ಎಂದು ಉದ್ದೇಶ ಪೂರ್ವಕವಾಗಿಯೇ ಹೇಳಿಲ್ಲ. ಎಲ್ಲೆಲ್ಲೂ ಅದರದ್ದೇ ಆವಾಜ್ ಕೇಳಿ…ಕೇಳಿ…. ಎಲ್ಲರಿಗೂ ಖಂಡಿತಾ ಬೇಸರವಾಗಿರುತ್ತೆ ಅಂತ ಗೊತ್ತು)ಪುಟ್ಟ/ದೊಡ್ಡ ಕರವಸ್ತ್ರವೊಂದು ನಮ್ಮ ದಿನನಿತ್ಯದ ಕೆಲಸ-ಕರ‍್ಯಗಳಲ್ಲಿ ಎಂತಹ ಪ್ರಮುಖ ಪಾತ್ರ ವಹಿಸುತ್ತದೆ ಅಂತ ಗಮನಿಸಿದರೆ ನಿಜಕ್ಕೂ ಆಶ್ಚರ್ಯವೆನಿಸುವುದರಲ್ಲಿ ಅನುಮಾನವೇ ಇಲ್ಲ. `ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಅಂತಾರೆ ಬಲ್ಲವರು. ಹಾಗೇ ಇದು ಚಿಕ್ಕ ವಸ್ತುವಾದರೂ ಇದರ ಕಾರ‍್ಯವ್ಯಾಪ್ತಿ ಬಹಳ ವಿಶಾಲವಾದದ್ದು.ಆದರೆ ಇಂದಿನ ಪೀಳಿಗೆಯ ಮಕ್ಕಳಿಗೆ ಈ ಕರವಸ್ತ್ರದ ಬಗ್ಗೆ , ಅದರ ವ್ಯಾಪಕವಾದ ಬಳಕೆಯ ಬಗ್ಗೆ ತಿಳಿದಿಲ್ಲವೆಂದು ನನ್ನ ಭಾವನೆ. ಜತೆಗೆ ಅವರಿಗೆ ಈ ಬಗ್ಗೆ ಆಸಕ್ತಿಯೂ ಇಲ್ಲವೆನಿಸುತ್ತದೆ. ಅವರಿಗೇನಿದ್ದರೂ `ಯೂಸ್ ಅಂಡ್ ಥ್ರೋ’ ಸಂಸ್ಕೃತಿಯ ಕಾಗದದ ಟಿಷ್ಯೂಗಳಷ್ಟೇ ಪರಿಚಿತ. ಆದರೆ ಇದರಿಂದ ಸುಮ್ಮನೆ ಕಸ, ತ್ಯಾಜ್ಯಗಳು ಹೆಚ್ಚುತ್ತವೆಯೇ ವಿನಃ  ಬೇರೇನೂ ಉಪಯೋಗವಿಲ್ಲ. ಒಂದೆಡೆ ಕಾಗದದ ಬಳಕೆಯನ್ನು ಕಡಿಮೆ ಮಾಡುವಂತೆ ಹೇಳುತ್ತ, ಇನ್ನೊಂದಡೆ ಟಿಷ್ಯುಗಳು, ಬಳಸಿ ಬಿಸಾಡುವ ತಟ್ಟೆ-ಲೋಟಗಳು….. ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಜೊತೆ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ/ ವೃದ್ಧರ ಡಯಾರ‍್ಗಳೂ  ಸೇರುತ್ತವೆ. ಇವೆಲ್ಲದ್ದಕ್ಕೂ ಪರ‍್ಯಾಯವಾಗಿ ಬಟ್ಟೆ/ ಬೇರೆ ಏನಾದರೊಂದನ್ನು ಬಳಸಬೇಕಾಗಿರುವುದು  ಇಂದಿನ ತುರ್ತುಅಗತ್ಯವಾಗಿದೆ.ಈಗ ನಮ್ಮ ಕಾಲದ (ಅಂದರೆ ೬೦-೭೦ ರ ದಶಕಗಳ ) ಕರವಸ್ತ್ರವೆಂಬ ಬಹೂಪಯೋಗಿ ವಸ್ತುವಿನ ಬಗ್ಗೆ, ಅದರ ಬಹುರೂಪಿ ಕಾರ‍್ಯಗಳನ್ನು  ಅವಲೋಕಿಸಿದರೆ ಅಚ್ಚರಿಯಾಗುತ್ತದೆ.ಈ ಸಂದರ್ಭದಲ್ಲಿ ಕವಿವರ‍್ಯರ ಪದ್ಯವೊಂದು ಅಯಾಚಿತವಾಗಿ ನೆನಪಿಗೆ ಬರುತ್ತದೆ. ಸಾಧಾರಣವಾಗಿ ನಮ್ಮ ಕಾಲದವರಿಗೆಲ್ಲಾ ಇದು ಗೊತ್ತೇ ಇರುತ್ತದೆ.”ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ವಿಭೂತಿಯಾದೆ…..ನೀನಾರಿಗಾದೆಯೋ ಎಲೆ ಮಾನವ…..”ಅನ್ನೋ ರೀತಿ ಈ ಕರವಸ್ತ್ರವು   ಎಲ್ಲಾ  ಕಾಲಕ್ಕೂ, ಸಮಯಕ್ಕೂ ಒದಗಿಬರುತ್ತದೆ.ಮೊದಲಿಗೆ ನಾವು(ಸ್ತ್ರೀ/ಪುರುಷರು) ಆಚೆ ಹೋಗುವಾಗ ಮರೆಯದೆ ಶುಭ್ರವಾಗಿ ಒಗೆದ ಕರವಸ್ತ್ರವನ್ನು ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ.ನಮಗೆ ಆಗ ಇದರಿಂದ  ಆಗುವ ಅನುಕೂಲತೆಗಳ ಅರಿವಾಗುತ್ತದೆ.ಹೊರಗಡೆ ಹೋದಾಗ ಮುಖ್ಯವಾಗಿ ಮಾಲ್ ಗಳಲ್ಲಿನ ವಾಷ್ರೂಂಗಳನ್ನು  ಬಳಸಿದ ನಂತರ ನಮ್ಮದೇ  ಶುಭ್ರವಾದ  ಕರ‍್ಚೀಫ್ ಅನ್ನು  ಬಳಸಿ ಸಾಮಾಜಿಕ  ಪ್ರಜ್ಞೆಯನ್ನು ಮೆರೆಯಬಹುದಾಗಿದೆ. ಇದರಿಂದ ಕೆಲವರಾದರೂ ಉತ್ತೇಜಿತರಾಗಿ  ತಂತಮ್ಮ ಕರವಸ್ತ್ರಗಳನ್ನು ಉಪಯೋಗಿಸಿದರೆ ಎಷ್ಟೋ ಟಿಷ್ಯೂಗಳ ಉಳಿತಾಯವಾಗಿ ಪರಿಸರಕ್ಕೆ ಉತ್ತಮ ಕೊಡುಗೆ ನಮ್ಮಿಂದ ಆದಂತಾಗುತ್ತದೆ. ವಿಧಿಯಿಲ್ಲದಾಗ ಟಿಷ್ಯೂಗಳನ್ನು ಬಳಸಲು ಅಡ್ಡಿಯೇನಿಲ್ಲವಲ್ಲ.ಇನ್ನು ಮಾರ್ಕ್ಕೆಟ್ಟಿಗೆ ಹೋದಾಗ ಚೀಲವನ್ನು ತೆಗೆದುಕೊಂಡು ಹೋಗಲು ಅಕಸ್ಮಾತ್ ಮರೆತುಹೋಗಿದ್ದರೆ, ಇವು ಆಪತ್ಭಾಂದವನಂತೆ ನೆರವಾಗುತ್ತದೆ. ಸಣ್ಣ ಪುಟ್ಟ ಸಾಮಾನುಗಳನ್ನು/ ತರಕಾರಿಯನ್ನು ಇದರಲ್ಲಿ  ಕಟ್ಟಿಕೊಳ್ಳಬಹುದು.ಬೇಸಿಗೆಯ ಕಾಲದಲ್ಲಿ ಈ ಪುಟ್ಟ  ಕರವಸ್ತ್ರವು ಬೆವರೊರೆಸಿಕೊಳ್ಳಲು  ಅಗತ್ಯವಾಗಿ ಬೇಕೇ ಬೇಕಲ್ಲವೇ? ಈಗಿನ ಪರಿಸ್ಥಿತಿಯಲ್ಲಿ ಕೆಮ್ಮು/ಸೀನು ಬಂದಾಗ ಅವಶ್ಯಕವಾಗಿ ಇರಲೇಬೇಕಾದ ವಸ್ತುವಿದು ಎಂದರೆ ತಪ್ಪಿಲ್ಲ.  ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಎಷ್ಟೋ ಜನರು ಮಾಸ್ಕ್ ಗಳ ಬದಲಿಗೆ ಇದನ್ನೇ ಬಳಸುವುದನ್ನು ಪ್ರತಿನಿತ್ಯ ನಾವು ನೋಡುತ್ತಿದ್ದೇವೆ. ಸ್ವಚ್ಛವಾಗಿ ಒಗೆದ ಕರವಸ್ತ್ರಗಳು ನಿಜಕ್ಕೂ ನಮಗೆ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ.`ಅವರವರ ಭಾವಕ್ಕೆ ಅವರವರ ಭಕುತಿಗೆ’ ಅನ್ನೋ ಮಾತಿನಂತೆ ಯಾರಿಗೆ ಹೇಗೆ ಬಳಸಲು ಸ್ಫೂರ್ತಿ ಸಿಗುತ್ತದೆಯೋ ಅದರಂತೆ ಬಳಸಲು ಅಡ್ಡಿಯೇನಿಲ್ಲವಲ್ಲ.! ಮಳೆಗಾಲದಲ್ಲಿ  ಕೊಡೆ ತೆಗೆದುಕೊಂಡು ಹೋಗಲು ಮರೆತರೆ ಆ ತಕ್ಷಣಕ್ಕೆ ನೆರವಿಗೆ ಬರುವುದೇ  ಕರವಸ್ತ್ರಅಲ್ಲವೇ?!ಹೀಗೆ ಬಹುರೂಪಿಯಾದ , ಎಲ್ಲಾ ಕಾಲಕ್ಕೂ/ಸಂದರ್ಭಕ್ಕೂ  ಸಲ್ಲುವ ಮಹಾನ್ ಕರವಸ್ತ್ರಕ್ಕೆ ನಾವು ಕೊಡಬೇಕಾದಷ್ಟು ಮಾನ್ಯತೆಯನ್ನು ನೀಡುತ್ತಿಲ್ಲವೆಂದು ನನ್ನ ಅನಿಸಿಕೆ. ನೀವೇನಂತೀರಾ ?! ಶೈಲಜಾ ಪ್ರಸಾದ್

“ಕರವಸ್ತ್ರದ ಕರಾಮತ್ತು” ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ Read Post »

ಇತರೆ, ಸಿನೆಮಾ

“ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಗೊರೂರು ಅನಂತರಾಜು

ಸಿನಿಮಾ ಸಂಗಾತಿ ಗೊರೂರು ಅನಂತರಾಜು “ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಅತ್ಯಂತ ಸೂಕ್ಷ್ಮ ಕಥಾನಕಗಳ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವ ಸಿದ್ದು ಪೂರ್ಣಚಂದ್ರ ಇದೀಗ ಪುಟ್ಟಣ್ಣನ ಕತ್ತೆ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರ ಈಗ ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಸಿನಿಮೋತ್ಸವದಲ್ಲಿ  ಪುಟ್ಟಣ್ಣನ ಕತ್ತೆ ಚಿತ್ರ ಪ್ರದರ್ಶನಗೊಳ್ಳಲಿದೆ. ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಜಾಗತಿಕ ಮಟ್ಟದ ಘನತೆ ಗೌರವವಿದೆ. ಈ ಸಿನಿಮೋತ್ಸವಕ್ಕೆ ಸಿನಿಮಾ ಆಯ್ಕೆಯಾಗುವುದು ಮಹತ್ವದ್ದಾಗಿದೆ.   ಜಾಗತಿಕ ಮಟ್ಟದ ತುರುಸಿನ ಸ್ಪರ್ಧೆ ದಾಟಿ ಆಯ್ಕೆಯಾಗುವಲ್ಲಿ  ಗುಣಮಟ್ಟದ ಕಂಟೆಂಟು ಹೊಂದಿರಬೇಕು. ಈ ನಿಟ್ಟಿನಲ್ಲಿ ಕನ್ನಡ ಸಿನಿಮಾ ಪುಟ್ಟಣ್ಣನ ಕತ್ತೆ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೆ  ಹೆಮ್ಮೆಯ  ಸಂಗತಿಯಾಗಿದೆ. ಕತ್ತೆಯೊಂದು ಕಥೆಯಲ್ಲಿ ಕೇಂದ್ರವಾಗಿ ಚಿತ್ರ ರೂಪುಗೊಂಡಿದೆ.   ಬೆಂಗಳೂರಿನಲ್ಲಿ  ಕತ್ತೆ ಹಾಲು ಮಾರುವವರು ಬರುತ್ತಿರುತ್ತಾರೆ. ಹೀಗೆ ಹಳ್ಳಿಯೊಂದರಿಂದ  ಕತ್ತೆಯೊಂದಿಗೆ ಪಟ್ಟಣ ಸೇರಿದವನ ಸುತ್ತ ಘಟಿಸುವ ಆಸಕ್ತಿದಾಯಕ ಸನ್ನಿವೇಶಗಳು ಈ ಸಿನಿಮಾದ ಆಂತರ್ಯದಲ್ಲಿದೆ. ಭೀಮೇಶ್ ಗೌಡ ಈ ಕಥನದ ಆತ್ಮದಂಥಾ ಪುಟ್ಟಣ್ಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೀಶ್ ಆರ್ಯನ್ ಈ ಸಿನಿಮಾದ ನಾಯಕರಾಗಿ ಸಂಕೀರ್ಣ ಪಾತ್ರದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ತನ್ಮಯ್ ಎಸ್ ಗೌಡ ನಿರ್ಮಾಣ ಮಾಡಿರುವರು. ಸಿದ್ದು ಪೂರ್ಣಚಂದ್ರ ಕಥೆ ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವರು.  ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಲಕ್ಕಿ ಶಂಕರ್, ವಾಸು, ರಾಕಿ, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮತ್ತು  ದೀಪು ಸಿ.ಎಸ್  ಅವರ ಸಂಕಲನ ಈ ಚಿತ್ರಕ್ಕಿದೆ. -ಗೊರೂರು ಅನಂತರಾಜು,ಹಾಸನ.9449462879

“ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!” ಗೊರೂರು ಅನಂತರಾಜು Read Post »

ಇತರೆ, ಜೀವನ

ಜಯಶ್ರೀ ಜೆ ಅಬ್ಬಿಗೇರಿ ಅವರ ಲೇಖನ “ಕಷ್ಟದ ಹಾದಿಯೇ ಸುಖದ ಭವಿಷ್ಯ”

ಬದುಕಿನ ಸಂಗಾತಿ ಜಯಶ್ರೀ ಜೆ ಅಬ್ಬಿಗೇರಿ “ಕಷ್ಟದ ಹಾದಿಯೇ ಸುಖದ ಭವಿಷ್ಯ” ನಾವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಸುಲಭವಾದ ಹಾದಿಗಳನ್ನೇ ಹುಡುಕುತ್ತೇವೆ. ಬೆಳಿಗ್ಗೆ ಬೇಗ ಏಳುವುದಕ್ಕಿಂತ ಮತ್ತೊಂದು ಚೂರು ಹೊತ್ತು ಮಲಗುವುದು ಸುಖ ನೀಡುತ್ತದೆ. ದೈಹಿಕ ಕಸರತ್ತು ಮಾಡುವುದಕ್ಕಿಂತ ಸೋಫಾದ ಮೇಲೆ ಕುಳಿತು ಮೊಬೈಲ್ ನೋಡುವುದು ಆರಾಮ ಎನಿಸುತ್ತದೆ. ಓದುವುದಕ್ಕಿಂತ ಟಿವಿ ನೋಡುವುದು ಸಲೀಸು. ಆದರೆ ನೆನಪಿಡಿ, ಇಂದು ನಾವು ಪಡುವ ಆ ತಾತ್ಕಾಲಿಕ ಸುಖವೇ ನಮ್ಮ ನಾಳಿನ ಭವಿಷ್ಯವನ್ನು ಕಷ್ಟಕ್ಕೆ ತಳ್ಳುತ್ತದೆ. ತದ್ವಿರುದ್ಧವಾಗಿ, ಇಂದು ಯಾರು ಬೆಳಿಗ್ಗೆ ಬೇಗ ಎದ್ದು ಕಷ್ಟಪಟ್ಟು ಓದುತ್ತಾರೋ, ಶ್ರಮಿಸುತ್ತಾರೋ ಅವರ ಭವಿಷ್ಯ ಸುಲಭ ಮತ್ತು ಸುಂದರವಾಗುತ್ತದೆ.“If you want easy future life, choose hard one now” (ನಿಮಗೆ ಸುಲಭವಾದ ಭವಿಷ್ಯ ಬೇಕಿದ್ದರೆ, ಇಂದೇ ಕಷ್ಟದ ಹಾದಿಯನ್ನು ಆರಿಸಿ) ಎಂಬ ಮಾತು ನಮ್ಮ ಇಡೀ ಜೀವನದ ಯಶಸ್ಸಿನ ಗುಟ್ಟನ್ನು ಸಾರುತ್ತದೆ. ನಿಸರ್ಗದ ನಿಯಮವೂ ಇದೇ ಆಗಿದೆ; ಕಲ್ಲೊಂದು ಕಷ್ಟಪಟ್ಟು ಉಳಿಪೆಟ್ಟುಗಳನ್ನು ತಿಂದರೆ ಮಾತ್ರ ಅದು ಸುಂದರ ಮೂರ್ತಿಯಾಗಿ ಪೂಜಿಸಲ್ಪಡುತ್ತದೆ, ಇಲ್ಲದಿದ್ದರೆ ಅದು ಬರೀ ಕಾಲಡಿ ಸಿಗುವ ಕಲ್ಲಾಗಿಯೇ ಉಳಿಯುತ್ತದೆ. ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕಷ್ಟದ ಹಾದಿಯ ಬಗ್ಗೆ ಒಂದು ಅದ್ಭುತವಾದ ಮಾತು ಹೇಳಿದ್ದಾರೆ: “ಚಿನ್ನವನ್ನು ಬೆಂಕಿಯಲ್ಲಿ ಸುಟ್ಟರೆ ಮಾತ್ರ ಅದು ಶುದ್ಧವಾಗುತ್ತದೆ. ಹಾಗೆಯೇ ಮನುಷ್ಯನು ಕಷ್ಟದ ಹಾದಿಯಲ್ಲಿ ಸಾಗಿದಾಗ ಮಾತ್ರ ಅವನೊಳಗಿನ ನಿಜವಾದ ಸಾಮರ್ಥ್ಯ ಹೊರಬರುತ್ತದೆ. “ಕನ್ನಡದ ಹೆಮ್ಮೆಯ ಕವಿ ಡಿ.ವಿ.ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬದುಕಿನ ಹೋರಾಟವನ್ನು ಹೀಗೆ ವರ್ಣಿಸಿದ್ದಾರೆ: “ಹಾಸಿಗೆಯ ನೀನು ಹಾಸಿದಂತೆ ಮಲಗು ಮಗನೆ|ಕಷ್ಟಗಳ ಕಂಡು ನೀ ಬೆದರಿ ಓಡದಿರು||ಹೋರಾಟವೇ ಬದುಕು, ಗೆಲುವಿಗೆ ದಾರಿಯದು…|| “ಜಗತ್ತಿನ ಅತ್ಯಂತ ಶ್ರೇಷ್ಠ ಸಾಧಕರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಸಹ ಇದನ್ನೇ ಪ್ರತಿಪಾದಿಸುತ್ತಾರೆ, “ನೀವು ಬಡವರಾಗಿ ಹುಟ್ಟಿದರೆ ಅದು ನಿಮ್ಮ ತಪ್ಪಲ್ಲ, ಆದರೆ ನೀವು ಬಡವರಾಗಿಯೇ ಸತ್ತರೆ ಅದು ಖಂಡಿತ ನಿಮ್ಮದೇ ತಪ್ಪು”.ಅವರು ತಮ್ಮ ಯೌವನದಲ್ಲಿ ಸುಖ-ಭೋಗಗಳನ್ನು ತ್ಯಜಿಸಿ, ಹಗಲಿರುಳು ಕಷ್ಟಪಟ್ಟು ಕೋಡಿಂಗ್ ಮಾಡಿದ್ದರಿಂದಲೇ ಇಂದು ಜಗತ್ತನ್ನು ಆಳುತ್ತಿದ್ದಾರೆ. ನಿಮ್ಮ ಭವಿಷ್ಯವನ್ನು ಸುಂದರವಾಗಿಸಲು ಪ್ರಮುಖ ಸಲಹೆಗಳನ್ನು  ಇಲ್ಲಿ ನೀಡಲಾಗಿದೆ: ಕಂಫರ್ಟ್ ಝೋನ್‌ನಿಂದ (Comfort Zone) ಹೊರಬನ್ನಿ: ನಮಗೆ ಅಭ್ಯಾಸವಾಗಿರುವ ಸುಲಭದ, ಆರಾಮದಾಯಕ ಮತ್ತು ಸುರಕ್ಷಿತ ವಲಯದಿಂದ ಹೊರಬರುವುದು ಬದುಕಿನ ಮೊದಲ ಮೆಟ್ಟಿಲು. ಪ್ರತಿದಿನ ನಮಗೆ ಸುಲಭ ಎನಿಸುವ ಕೆಲಸಗಳನ್ನೇ ಮಾಡುತ್ತಾ ಕೂತರೆ ನಮ್ಮಲ್ಲಿ ಯಾವುದೇ ಬೆಳವಣಿಗೆ ಸಾಧ್ಯವಿಲ್ಲ. ನದಿಯ ನೀರು ಹರಿಯುವುದನ್ನು ನಿಲ್ಲಿಸಿದರೆ ಹೇಗೆ ಕಶ್ಮಲಗೊಳ್ಳುತ್ತದೆಯೋ, ಹಾಗೆಯೇ ಮನುಷ್ಯ ಹೊಸ ಸವಾಲುಗಳನ್ನು ಸ್ವೀಕರಿಸದಿದ್ದರೆ ಅವನ ಬುದ್ಧಿ ಮಂದವಾಗುತ್ತದೆ. ಬೆಳಿಗ್ಗೆ ಬೆಚ್ಚಗೆ ಹೊದ್ದುಕೊಂಡ ರಗ್ಗು ಬಿಟ್ಟು ಏಳುವುದು, ಎಲ್ಲರ ಮುಂದೆ ನಿಂತು ಮಾತನಾಡುವ ಧೈರ್ಯ ಮಾಡುವುದು, ಕಷ್ಟದ ಜವಾಬ್ದಾರಿಗಳನ್ನು ಹೆಗಲಿಗೆ ಹಾಕಿಕೊಳ್ಳುವುದು ಆರಂಭದಲ್ಲಿ ತುಂಬ ಕಠಿಣ ಎನಿಸುತ್ತದೆ. ಆದರೆ, ಜಗತ್ತಿನ ಮಹಾನ್ ಸಾಧಕರು ತಮ್ಮ ಆರಾಮದಾಯಕ ಜೀವನವನ್ನು ತ್ಯಜಿಸಿದ್ದರಿಂದಲೇ ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು. ನಮ್ಮ ಭಯವನ್ನು ಎದುರಿಸಿ, ನಮಗೆ ಕಷ್ಟವೆನಿಸುವ ಕೆಲಸಗಳನ್ನು ಮಾಡುತ್ತಾ ಹೋದಂತೆಲ್ಲ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕಷ್ಟದ ಹಾದಿಯ ಮೊದಲ ಹೆಜ್ಜೆಯೇ ಈ ಸೋಮಾರಿತನದ ಆವರಣವನ್ನು ಒಡೆದು ಹೊರಬರುವುದಾಗಿದೆ. ದಿನದ ಆರಂಭ ಕಠಿಣ ಕೆಲಸದಿಂದಾಗಲಿ: ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಮನಸ್ಸು ಮತ್ತು ಮೆದುಳು ಅತ್ಯಂತ ಚುರುಕಾಗಿರುತ್ತವೆ. ಈ ಅಮೂಲ್ಯವಾದ ಸಮಯದಲ್ಲಿ ನಾವು ದಿನದ ಅತ್ಯಂತ ಕಷ್ಟದ ಅಥವಾ ನಮಗೆ ಬೇಸರ ತರಿಸುವ ದೊಡ್ಡ ಕೆಲಸವನ್ನು ಮೊದಲು ಕೈಗೆತ್ತಿಕೊಳ್ಳಬೇಕು. ಅನೇಕರು ಸುಲಭವಾದ ಕೆಲಸಗಳನ್ನು ಮೊದಲು ಮಾಡಿ, ಕಷ್ಟದ ಕೆಲಸಗಳನ್ನು ದಿನದ ಕೊನೆಗೆ ದೂಡುತ್ತಾರೆ. ಇದರಿಂದ ದಿನಪೂರ್ತಿ ಮನಸ್ಸಿನಲ್ಲಿ ಆ ಕಷ್ಟದ ಕೆಲಸದ ಬಗ್ಗೆ ಒಂದು ರೀತಿಯ ಆತಂಕ ಮತ್ತು ಒತ್ತಡ ಉಳಿದುಕೊಳ್ಳುತ್ತದೆ. ಅದೇ ನೀವು ಬೆಳಿಗ್ಗೆಯೇ ಆ ಬೆಟ್ಟದಂತಹ ಕಠಿಣ ಸವಾಲನ್ನು ಮುಗಿಸಿಬಿಟ್ಟರೆ, ಇಡೀ ದಿನ ಮನಸ್ಸು ಹಗುರವಾಗುತ್ತದೆ. ಉಳಿದ ಸುಲಭದ ಕೆಲಸಗಳು ನೀರಿನಂತೆ ಸಾಗಿಬಿಡುತ್ತವೆ. ಈ ಅಭ್ಯಾಸವು ನಿಮ್ಮಲ್ಲಿ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಇಂದಿನ ಕಠಿಣ ಪರಿಶ್ರಮ ನಾಳಿನ ಸುಲಭ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆಯಿಂದ ಕಠಿಣ ಸವಾಲನ್ನು ನಗುನಗುತ್ತಾ ಎದುರಿಸಿ. ಶಿಸ್ತನ್ನು ಜೀವನದ ಉಸಿರಾಗಿಸಿಕೊಳ್ಳಿ (Self-Discipline): ಯಶಸ್ಸಿನ ಮಹಾಗೋಡೆಗೆ ಶಿಸ್ತು ಎಂಬುದು ಗಟ್ಟಿಯಾದ ಇಟ್ಟಿಗೆಯಿದ್ದಂತೆ. ಮೂಡ್ ಇದ್ದಾಗ ಮಾತ್ರ ಕೆಲಸ ಮಾಡುವುದು, ಇಲ್ಲದಿದ್ದರೆ ಸೋಮಾರಿಗಳಂತೆ ಕಾಲ ಕಳೆಯುವುದು ಯಶಸ್ವಿ ವ್ಯಕ್ತಿಯ ಲಕ್ಷಣವಲ್ಲ. ಮನಸ್ಸಿಗೆ ಇಷ್ಟ ಇರಲಿ, ಇಲ್ಲದಿರಲಿ, ಮಾಡಬೇಕಾದ ಕೆಲಸವನ್ನು ನಿಖರ ಸಮಯದಲ್ಲಿ ಮಾಡುವುದೇ ನಿಜವಾದ ಶಿಸ್ತು. ಜಗತ್ತಿನ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ದಿನಾಲೂ ನೂರಾರು ಗಂಟೆಗಳ ಕಾಲ ಮೈಮುರಿದು ಕಷ್ಟಪಟ್ಟು ಓಡಿದ್ದರಿಂದಲೇ ಕೇವಲ ಒಂಬತ್ತು ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು. ಶಿಸ್ತಿನ ಹಾದಿ ಆರಂಭದಲ್ಲಿ ಮುಳ್ಳಿನ ಬೇಲಿಯಂತೆ ಕಂಡರೂ, ಕೊನೆಯಲ್ಲಿ ಅದು ಹೂವಿನ ತೋಟಕ್ಕೆ ಕರೆದೊಯ್ಯುತ್ತದೆ. ಇಂದಿನ ಕಠಿಣ ಶಿಸ್ತು ನಿಮ್ಮ ನಾಳಿನ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕುತ್ತದೆ. ನಿಮ್ಮ ದಿನಚರಿಯನ್ನು ನೀವೇ ನಿಯಂತ್ರಿಸದಿದ್ದರೆ, ಕಾಲ ನಿಮ್ಮನ್ನು ನಿಯಂತ್ರಿಸಿ ಕಷ್ಟಕ್ಕೆ ದೂಡುತ್ತದೆ. ತಕ್ಷಣದ ಸುಖಕ್ಕೆ ಮಾರುಹೋಗದಿರು (Delayed Gratification): ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ರೀಲ್ಸ್ ನೋಡುವುದು, ವಿಡಿಯೋ ಗೇಮ್ ಆಡುವುದು ಅಥವಾ ಜಂಕ್ ಫುಡ್ ತಿನ್ನುವುದು ನಮ್ಮ ಮನಸ್ಸಿಗೆ ತಕ್ಷಣದ ಸುಖ ನೀಡುತ್ತದೆ. ಆದರೆ, ಈ ತಾತ್ಕಾಲಿಕ ಸುಖಗಳು ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯ ಮತ್ತು ಭವಿಷ್ಯವನ್ನು ಹಾಳುಮಾಡುತ್ತವೆ. ಇದನ್ನು ‘ಇನ್‌ಸ್ಟೆಂಟ್ ಗ್ರಾಟಿಫಿಕೇಶನ್’ ಎನ್ನುತ್ತಾರೆ. ಸಾಧಕರು ಎಂದಿಗೂ ಇಂತಹ ಕ್ಷಣಿಕ ಸುಖಗಳಿಗೆ ಬಲಿಯಾಗುವುದಿಲ್ಲ. ಅವರು ಇಂದಿನ ಸಣ್ಣ ಸುಖವನ್ನು ತ್ಯಜಿಸಿ, ಭವಿಷ್ಯದ ದೊಡ್ಡ ಯಶಸ್ಸಿನ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಓದುವಾಗ ಮೊಬೈಲ್ ಪಕ್ಕಕ್ಕಿಡುವುದು, ನಾಲಿಗೆಯ ರುಚಿಯನ್ನು ಹತೋಟಿಯಲ್ಲಿಡುವುದು ಕಷ್ಟದ ಕೆಲಸವೇ. ಆದರೆ, ಈ ಕಷ್ಟವನ್ನು ಯಾರು ಇಷ್ಟಪಟ್ಟು ಸಹಿಸಿಕೊಳ್ಳುತ್ತಾರೋ, ಅವರ ಜೀವನದ ಮುಂದಿನ ದಿನಗಳು ಅತ್ಯಂತ ಸುಖಮಯವಾಗಿರುತ್ತವೆ. ಬದುಕಿನ ಕ್ಯಾನ್ವಾಸ್‌ನಲ್ಲಿ ಸುಂದರ ಚಿತ್ರ ಮೂಡಬೇಕಾದರೆ ತಾಳ್ಮೆಯಿಂದ ಶ್ರಮಿಸಬೇಕು.ಸೋಲನ್ನು ಕಲಿಕೆಯ ಮೆಟ್ಟಿಲಾಗಿಸಿ:ಕಷ್ಟದ ಹಾದಿಯಲ್ಲಿ ಸಾಗುವಾಗ ಹೆಜ್ಜೆ ಹೆಜ್ಜೆಗೂ ಸೋಲುಗಳು, ಅಪಮಾನಗಳು ಎದುರಾಗುವುದು ಸಹಜ. ಸೋತ ತಕ್ಷಣ ಕೈಚೆಲ್ಲಿ ಕುಳಿತುಕೊಳ್ಳುವುದು ದುರ್ಬಲ ಮನಸ್ಸಿನ ಸಂಕೇತ. ಜಗತ್ತಿಗೆ ಬೆಳಕು ನೀಡಿದ ಮಹಾನ್ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ದೀಪ ಕಂಡುಹಿಡಿಯುವ ಮುನ್ನ ಸಾವಿರಾರು ಬಾರಿ ಸೋತಿದ್ದರು. ಆದರೆ ಅವರು ಅದನ್ನು ಸೋಲೆನ್ನದೆ, ಬಲ್ಬ್ ಮಾಡಲು ಬಾರದ ಸಾವಿರ ದಾರಿಗಳನ್ನು ಕಲಿತೆ ಎಂದು ಧನಾತ್ಮಕವಾಗಿ ಯೋಚಿಸಿದರು. ಸೋಲು ಎಂಬುದು ನಿಮ್ಮ ಜೀವನದ ಅಂತ್ಯವಲ್ಲ, ಅದು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಕೃತಿ ನೀಡುವ ಮತ್ತೊಂದು ಅದ್ಭುತ ಅವಕಾಶ. ಸೋತಾಗ ಕುಗ್ಗದೆ, ಅದರಿಂದ ಪಾಠ ಕಲಿತು ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯಬೇಕು. ಕಷ್ಟಗಳನ್ನು ಎದುರಿಸಿ ನಿಂತಾಗ ಮಾತ್ರ ಮನುಷ್ಯನ ವ್ಯಕ್ತಿತ್ವ ಪರಿಪೂರ್ಣವಾಗಿ ವಿಕಸನಗೊಳ್ಳುತ್ತದೆ. ಪ್ರತಿದಿನ ೧% ಸುಧಾರಣೆ ಮಾಡಿಕೊಳ್ಳಿ: ಒಂದೇ ದಿನದಲ್ಲಿ ಜಗತ್ತನ್ನು ಬದಲಾಯಿಸಲು ಅಥವಾ ದೊಡ್ಡ ಸಾಧನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಪ್ರತಿದಿನ ನಿಮ್ಮ ಜ್ಞಾನ, ಕೌಶಲ್ಯ, ಆಲೋಚನೆ ಅಥವಾ ಆರೋಗ್ಯದಲ್ಲಿ ಕೇವಲ ಶೇಕಡಾ ಒಂದರಷ್ಟು ಕಷ್ಟಪಟ್ಟು ಸುಧಾರಣೆ ಮಾಡಿಕೊಳ್ಳುವುದು ಖಂಡಿತ ಸಾಧ್ಯ. ದಿನಕ್ಕೆ ಒಂದು ಪುಟ ಓದುವುದು, ದಿನಕ್ಕೆ ಹತ್ತು ನಿಮಿಷ ಹೊಸ ವಿಷಯ ಕಲಿಯುವುದು ಆರಂಭದಲ್ಲಿ ಸಣ್ಣದಾಗಿ ಕಂಡರೂ, ವರ್ಷದ ಕೊನೆಗೆ ಅದು ಮುನ್ನೂರ ಅರವತ್ತೈದು ಶೇಕಡಾದಷ್ಟು ದೊಡ್ಡ ಬದಲಾವಣೆಯನ್ನು ತರುತ್ತದೆ. ಈ ನಿರಂತರ ಪರಿಶ್ರಮವೇ ನಿಮ್ಮನ್ನು ಸಮಾಜದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಮತ್ತು ಉನ್ನತವಾಗಿ ನಿಲ್ಲಿಸುತ್ತದೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ, ಇಂದಿನ ನಿಮ್ಮ ಸಣ್ಣ ಸಣ್ಣ ಕಠಿಣ ಪ್ರಯತ್ನಗಳು ನಾಳೆಯ ನಿಮ್ಮ ಬದುಕನ್ನು ಅತ್ಯಂತ ಸುಲಭ ಮತ್ತು ಸುಂದರ ರಾಜಮಾರ್ಗವನ್ನಾಗಿ ಬದಲಾಯಿಸುತ್ತವೆ.”ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಹಳೆಯ ಗಾದೆಗಿಂತ, “ಹಾಸಿಗೆಯನ್ನು ದೊಡ್ಡದಾಗಿಸುವ ಕಷ್ಟದ ಹಾದಿಯನ್ನು ಇಂದೇ ಹಿಡಿಯಿರಿ” ಎಂಬ ಹೊಸ ಚಿಂತನೆ ನಮಗಿರಬೇಕು. ಇಂದು ಪಡುವ ಕಷ್ಟ, ನಾಳೆ ನಮಗೆ ರಾಜಮಾರ್ಗವನ್ನು ನಿರ್ಮಿಸಿಕೊಡುತ್ತದೆ. ಆದ್ದರಿಂದ ಇಂದಿನ ಕಠಿಣ ಪರಿಶ್ರಮವನ್ನು ಪ್ರೀತಿಯಿಂದ ಸ್ವೀಕರಿಸೋಣ, ಉಜ್ವಲ ಭವಿಷ್ಯವನ್ನು ನಮ್ಮದಾಗಿಸಿಕೊಳ್ಳೋಣ.

ಜಯಶ್ರೀ ಜೆ ಅಬ್ಬಿಗೇರಿ ಅವರ ಲೇಖನ “ಕಷ್ಟದ ಹಾದಿಯೇ ಸುಖದ ಭವಿಷ್ಯ” Read Post »

ಇತರೆ, ಜೀವನ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ

ವಿಶೇಷ ಸಂಗಾತಿ “ಆತ್ಮದ ಪಯಣ” ಭೂಮಿಕಾ ಮಾದಾಪುರ ಒಂದು ಕಾಲದಲ್ಲಿ, ಎಲ್ಲೋ ಒಂದು ಕಡೆ, ಒಂದು ಆತ್ಮ ತನ್ನ ಮುಂದಿನ ಪಯಣಕ್ಕೆ ಸಿದ್ಧವಾಗುತ್ತಿತ್ತು.ಅದು ತನ್ನನ್ನೇ ಕೇಳಿಕೊಂಡಿತು—“ನಾನು ಎಲ್ಲಿಂದ ಬಂದೆ? ನಾನು ಎಲ್ಲಿಗೆ ಹೋಗುತ್ತಿದ್ದೇನೆ? ಈ ಜೀವನದ ಉದ್ದೇಶವೇನು?”ಆದರೆ ಆ ಪ್ರಶ್ನೆಗೆ ಉತ್ತರ ಸಿಗುವ ಮೊದಲೇ, ಆ ಆತ್ಮವು ಒಂದು ಹೊಸ ದೇಹವನ್ನು ಪಡೆದುಕೊಂಡಿತು. ಅದು ಮಗುವಾಗಿ ಭೂಮಿಗೆ ಬಂದಿತು.ಹುಟ್ಟಿದ ಕ್ಷಣದಲ್ಲಿ ಅದು ತನ್ನ ಹಿಂದಿನ ಪಯಣವನ್ನೆಲ್ಲ ಮರೆತುಬಿಟ್ಟಿತು.ಅಮ್ಮನ ಪ್ರೀತಿ ಸಿಕ್ಕಿತು.ಅಪ್ಪನ ಮಮತೆ ಸಿಕ್ಕಿತು.ಹೊಸ ಸಂಬಂಧಗಳು ಸಿಕ್ಕವು.ಹೊಸ ಹೆಸರು ಸಿಕ್ಕಿತು. ಮಗು ಬೆಳೆದಂತೆ ಅದರ ಸುತ್ತಲಿನ ಪ್ರಪಂಚವೂ ದೊಡ್ಡದಾಯಿತು.ಶಾಲೆ, ಸ್ನೇಹಿತರು, ಆಟ, ವಿದ್ಯಾಭ್ಯಾಸ…ನಂತರ ದೊಡ್ಡವನಾದಾಗ ಅವನ ಮುಂದೆ ಮತ್ತೊಂದು ಪ್ರಪಂಚ ತೆರೆದುಕೊಂಡಿತು.ಹಣ. ಹೆಸರು. ಅಧಿಕಾರ. ಯಶಸ್ಸು. ಅವನು ಓಡಲು ಆರಂಭಿಸಿದ.“ಇನ್ನಷ್ಟು ಹಣ ಬೇಕು…”“ಇನ್ನಷ್ಟು ಹೆಸರು ಬೇಕು…”“ಇತರರಿಗಿಂತ ನಾನು ದೊಡ್ಡವನಾಗಬೇಕು…” ಅವನಿಗೆ ಸಿಕ್ಕ ಪ್ರತಿಯೊಂದು ಯಶಸ್ಸಿನ ನಂತರವೂ ಮತ್ತೊಂದು ಆಸೆ ಹುಟ್ಟುತ್ತಿತ್ತು. ಒಂದು ದಿನ ಅವನಿಗೆ ಬಹಳ ಹಣ ಸಿಕ್ಕಿತು.ಆದರೆ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ.ಅವನು ದೊಡ್ಡ ಮನೆ ಕಟ್ಟಿದ.ಆದರೆ ಮನಸ್ಸಿನೊಳಗಿನ ಖಾಲಿತನ ತುಂಬಲಿಲ್ಲ.ಅವನು ಅನೇಕ ಜನರ ಸ್ನೇಹ ಗಳಿಸಿದ.ಆದರೆ ತನ್ನನ್ನೇ ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಹುಡುಕಲಾಗಲಿಲ್ಲ. ಒಂದು ರಾತ್ರಿ ಅವನು ಒಬ್ಬನೇ ಕುಳಿತಿದ್ದ.ಅವನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು—“ನಾನು ಇಷ್ಟೆಲ್ಲಾ ಗಳಿಸಿದ್ದೇನೆ… ಆದರೆ ನನಗೆ ಇನ್ನೂ ಸಂತೋಷ ಯಾಕಿಲ್ಲ?” ಆಗ ಅವನೊಳಗಿಂದ ಒಂದು ಮೃದುವಾದ ಧ್ವನಿ ಕೇಳಿಸಿತು.“ಏಕೆಂದರೆ ನೀನು ಹೊರಗೆ ಹುಡುಕುತ್ತಿರುವುದು ಒಳಗಿದೆ.”ಅವನು ಬೆಚ್ಚಿಬಿದ್ದ.“ಯಾರು ಮಾತನಾಡುತ್ತಿರುವುದು?”ಧ್ವನಿ ಮತ್ತೆ ಕೇಳಿಸಿತು.“ನಾನೇ… ನಿನ್ನೊಳಗಿನ ನೀನು.” ಅವನು ತನ್ನ ಜೀವನವನ್ನು ಹಿಂದಿರುಗಿ ನೋಡಿದ.ಚಿಕ್ಕವನಾಗಿದ್ದಾಗ ಅವನು ಎಷ್ಟು ಸರಳನಾಗಿದ್ದ!ಅವನಿಗೆ ದೊಡ್ಡ ಮನೆ ಬೇಕಿರಲಿಲ್ಲ.ದೊಡ್ಡ ಹೆಸರು ಬೇಕಿರಲಿಲ್ಲ.ಹೆಚ್ಚು ಹಣ ಬೇಕಿರಲಿಲ್ಲ.ಸಣ್ಣ ವಿಷಯಗಳಲ್ಲೇ ಸಂತೋಷ ಕಂಡುಕೊಳ್ಳುತ್ತಿದ್ದ.ಆದರೆ ದೊಡ್ಡವನಾದಂತೆ ಅವನು ತನ್ನ ನಿಜವಾದ ಸ್ವಭಾವವನ್ನು ಮರೆತಿದ್ದ. ಅವನು ತನ್ನ ದೇಹವನ್ನೇ “ನಾನು” ಎಂದುಕೊಂಡಿದ್ದ.ತನ್ನ ಹೆಸರನ್ನೇ “ನಾನು” ಎಂದುಕೊಂಡಿದ್ದ.ತನ್ನ ಸಂಪತ್ತು, ಸಂಬಂಧಗಳು ಮತ್ತು ಸ್ಥಾನಮಾನವನ್ನೇ ತನ್ನ ಅಸ್ತಿತ್ವ ಎಂದು ಭಾವಿಸಿದ್ದ. ಆದರೆ ಅವನೊಳಗಿನ ಧ್ವನಿ ಹೇಳಿತು— “ದೇಹ ಬದಲಾಗುತ್ತದೆ.ಹೆಸರು ಬದಲಾಗುತ್ತದೆ.ಸಂಬಂಧಗಳು ಬದಲಾಗುತ್ತವೆ.ಸಂಪತ್ತು ಬರುತ್ತದೆ, ಹೋಗುತ್ತದೆ.ಆದರೆ ಇವೆಲ್ಲವನ್ನೂ ಗಮನಿಸುವ ನಿನ್ನೊಳಗಿನ ಚೈತನ್ಯ ಮಾತ್ರ ನಿನ್ನ ನಿಜವಾದ ಪಯಣದ ಸಂಗಾತಿ.” ಆ ದಿನದಿಂದ ಅವನು ತನ್ನ ಜೀವನವನ್ನು ಬೇರೆ ರೀತಿಯಲ್ಲಿ ನೋಡಲು ಆರಂಭಿಸಿದ. ಅವನು ತನ್ನ ಆಸೆಗಳನ್ನು ಪ್ರಶ್ನಿಸಲು ಶುರುಮಾಡಿದ.“ನನಗೆ ಇದು ನಿಜವಾಗಿಯೂ ಬೇಕೇ?”“ನಾನು ಇದನ್ನು ಪಡೆಯುವುದರಿಂದ ಶಾಂತಿ ಸಿಗುತ್ತದೆಯೇ?”“ನನ್ನ ಜೀವನದ ನಿಜವಾದ ಉದ್ದೇಶವೇನು?” ಅವನಿಗೆ ನಿಧಾನವಾಗಿ ಒಂದು ಸತ್ಯ ಅರ್ಥವಾಗತೊಡಗಿತು.ಜೀವನವೆಂದರೆ ಕೇವಲ ಹುಟ್ಟಿ, ಓದಿ, ಕೆಲಸ ಮಾಡಿ, ಹಣ ಗಳಿಸಿ, ಸಂಬಂಧಗಳನ್ನು ಬೆಳೆಸಿ, ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗುವುದಲ್ಲ.ಜೀವನವೆಂದರೆ ತನ್ನನ್ನೇ ಅರಿಯುವ ಒಂದು ಅವಕಾಶ.ಆತ್ಮದ ಪಯಣ ಹೊರಗಿನ ಜಗತ್ತಿನಲ್ಲಿ ನಡೆಯುವುದಿಲ್ಲ.ಅದು ನಮ್ಮೊಳಗೆ ನಡೆಯುತ್ತದೆ. ಮನುಷ್ಯನು ತನ್ನ ಜೀವನದ ಕೊನೆಯ ಹಂತಕ್ಕೆ ಬಂದಾಗ, ಅವನು ಗಳಿಸಿದ ಹಣ ಅವನ ಜೊತೆ ಬರುವುದಿಲ್ಲ.ಅವನ ಮನೆ ಬರುವುದಿಲ್ಲ.ಅವನ ಸ್ಥಾನಮಾನ ಬರುವುದಿಲ್ಲ.ಅವನ ಜೊತೆ ಬರುವುದು ಅವನ ಜೀವನದ ಅನುಭವಗಳು ಮತ್ತು ಅವನು ಅರಿತ ಸತ್ಯ ಮಾತ್ರ. ಅವನು ಕಣ್ಣು ಮುಚ್ಚಿ ನಿಧಾನವಾಗಿ ಹೇಳಿದ— “ನಾನು ಈ ದೇಹವಲ್ಲ…ನಾನು ಈ ಹೆಸರಲ್ಲ…ನಾನು ಈ ಸಂಪತ್ತಲ್ಲ…ನಾನು ಈ ಸಂಬಂಧಗಳಲ್ಲ…ನಾನು ಈ ಎಲ್ಲದರ ಸಾಕ್ಷಿ.” ಅವನ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಶಾಂತಿ ಮೂಡಿತು.ಅವನಿಗೆ ತನ್ನ ಪಯಣದ ಅರ್ಥ ನಿಧಾನವಾಗಿ ತಿಳಿಯಿತು. ನಾವು ಈ ಲೋಕಕ್ಕೆ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಬರಲಿಲ್ಲ.ಹಾಗೆಯೇ ಇಲ್ಲಿಂದ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಹೋಗಲಾರೆವು. ಆದರೆ ಈ ಜೀವನ ನಮಗೆ ಒಂದು ಅಮೂಲ್ಯ ಅವಕಾಶವನ್ನು ಕೊಡುತ್ತದೆ—ನಾವು ಯಾರು ಎಂಬುದನ್ನು ಅರಿಯುವ ಅವಕಾಶ.ಅದೇ ಆತ್ಮದ ನಿಜವಾದ ಪಯಣ. ಮನುಷ್ಯನು ಹೊರಗಿನ ಜಗತ್ತನ್ನು ಗೆಲ್ಲಲು ಎಷ್ಟು ಪ್ರಯತ್ನಿಸಿದರೂ, ತನ್ನ ಮನಸ್ಸನ್ನು ಗೆಲ್ಲದೆ ನಿಜವಾದ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವನು ತನ್ನ ಜೀವನದ ಕೊನೆಯಲ್ಲಿ ಒಂದು ಮಾತನ್ನು ಮಾತ್ರ ಹೇಳಿದ— «“ನಾನು ಇಡೀ ಜೀವನ ನನ್ನ ಗಮ್ಯವನ್ನು ಹೊರಗೆ ಹುಡುಕಿದೆ.ಆದರೆ ಕೊನೆಗೆ ಅರಿತದ್ದು ಏನೆಂದರೆ…ನಾನು ಹುಡುಕುತ್ತಿದ್ದ ಗಮ್ಯ ನನ್ನೊಳಗೇ ಇತ್ತು.”» ಅವನ ಪಯಣ ಮುಗಿದಿರಲಿಲ್ಲ.ಅದು ನಿಜವಾಗಿ ಆಗಲೇ ಆರಂಭವಾಗಿತ್ತು.ಆತ್ಮದ ಪಯಣ — ಹೊರಗಿನಿಂದ ಒಳಗಿನತ್ತ. ಭೂಮಿಕಾ ಮಾದಾಪುರ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ Read Post »

ಇತರೆ, ಮಕ್ಕಳ ವಿಭಾಗ

ಅರುಣಾ ರಾವ್ ವಿರಚಿತ ಮಕ್ಕಳನಾಟಕ “ಆದಿಕವಿ ಪಂಪ”

ಮಕ್ಕಳ ಸಂಗಾತಿ ಅರುಣಾ ರಾವ್ ಆದಿ ಕವಿಪಂಪ ತರಗತಿಯ ಸನ್ನಿವೇಶ. ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಕನ್ನಡ ಗುರುಗಳು ತರಗತಿಯ ಒಳಗೆ ಬರುತ್ತಲೇ ಸದ್ದು ನಿಂತು ಹೋಗುತ್ತದೆ. ವಿದ್ಯಾರ್ಥಿಗಳು ಎದ್ದು ನಿಂತು ‘ ನಮಸ್ಕಾರ ಗುರುಗಳೇ’ಎಂದು ವಂದಿಸಿದಾಗ, ಗುರುಗಳು ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತಾರೆ.) ಮೇಷ್ಟ್ರು : ( ತರಗತಿಯೊಳಗೆ ಒಮ್ಮೆ ಕಣ್ಣಾಡಿಸಿ) ಮೋಹನ ಸದ್ಯ, ಇವತ್ತಾದರೂ ಶಾಲೆಗೆ ಬಂದೆಯಲ್ಲ, ಐದು ದಿನಗಳಿಂದ ಎಲ್ಲಿಗೆ ಹೋಗಿದ್ದೆ? ಮೋಹನ:( ಎದ್ದು ನಿಂತು) ಸರ್, ನಮ್ಮ ಅಜ್ಜಿ ಊರಿಗೆ ಹೋಗಿದ್ದೆ ಸರ್ ಬನವಾಸಿಗೆ. ಅಲ್ಲಿಗೆ ಹೋದರೆ ಸಮಯ ಹೋಗೋದೇ ಗೊತ್ತಾಗಲ್ಲ ಸರ್.( ಹಲ್ಲು ಕಿರಿಯುವನು) ಗಿರಿಜ: ಸರ್ , ‘ಬನವಾಸಿ’ ಪಂಪ ಕವಿ ಜನಿಸಿದ ಊರು ಅಲ್ವಾ? ಮೇಷ್ಟ್ರು: ಹೌದು ಗಿರಿಜಾ, ಪಂಪ ಬರಿ ಕವಿಯಷ್ಠೇ ಅಲ್ಲ, ನಮ್ಮ ಕನ್ನಡದ ಆದಿಕವಿ.( ಎಂದು ಹೇಳುತ್ತಾ ಕಪ್ಪ ಹಲಗೆಯ ಮೇಲೆ ‘ಆದಿಕವಿ ಪಂಪ’ ಎಂದು ಬರೆಯುವರು). ಮೋಹನ ನಿಮ್ಮ ಊರು ಬನವಾಸಿನೇ ಅಲ್ವವೇ! ಪಂಪನ ಬಗ್ಗೆ ನಿನಗೆ ಏನು ತಿಳಿದಿದೆ ಹೇಳು ನೋಡೋಣ. ಮೋಹನ : ಸರ್ ಪಂಪ ೧೦ನೇ ಶತಮಾನದಲ್ಲಿ ಜೀವಿಸಿದ್ದರು. ಅವರ ಕೃತಿಯ ಒಂದು ಸಾಲನ್ನು ನಮ್ಮ ಅಜ್ಜ ಯಾವಾಗಲೂ ಹೇಳುತ್ತಿರ್ತಾರೆ. ನನಗೂ ಅದು ಕಂಠ ಪಾಠ ಆಗಿಹೋಗಿದೆ ಸರ್. ಮೇಷ್ಟ್ರು: ಯಾವುದಪ್ಪಾ ಆ ಸಾಲು? ಮೋಹನ: ( ಆವೇಶಭರಿತವಾದ ಧ್ವನಿಯಿಂದ)ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಮೇಷ್ಟ್ರು : ಭೇಷ್ ಭೇಷ್ ಚೆನ್ನಾಗಿ ಹೇಳಿದೆ. ಅನನ್ಯ: ಸರ್, ನನಗೆ ಪಂಪ ಕವಿಯ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕೆಂಬ ಆಸೆ ಆಗ್ತಿದೆ. ಅವರ ಬಗ್ಗೆ ಹೇಳಿ ಸರ್. ಮೇಷ್ಟ್ರು: ಪಂಪನ ಬಗ್ಗೆ ಹೇಳಲು ಇಡೀ ದಿನನೇ ಸಾಲದು. ಪಂಪ ಮಹಾ ಕವಿಯು ‘ಅರಿಕೇಸರಿ’ ಎಂಬ ರಾಜನ ಆಸ್ಥಾನ ಕವಿಯಾಗಿದ್ದನು. ಇವನು ಬರೆದಿರುವ ಎರಡು ಮಹಾನ್ ಕೃತಿಗಳು ‘ಅದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ಆದಿಪುರಾಣ’ ಇವನ‌ಮೊದಲ ಕಾವ್ಯ. ಇದು ಜೈನ ತೀರ್ಥಂಕರರ ಚರಿತ್ತೆಯನ್ನು ಒಳಗೊಂಡಿದೆ. ಕಾವ್ಯ: ಹಾಗಾದರೆ ವಿಕ್ರಮಾರ್ಜುನ ವಿಜಯ ಅಂದ್ರೆ ಏನು ಸರ್? ವಿಕ್ರಮ್-ಬೇತಾಳ ಕತೆಯಲ್ಲಿ ಬರುವ ವಿಕ್ರಮಾನ ಕತೇನಾ? ಮೇಷ್ಟ್ರು : ಅಲ್ಲ ಕಾವ್ಯ, ಇದೊಂದು ಮಹಾಭಾರತದ ಕಥೆ. ವಿಕ್ರಮಾರ್ಜುನ ವಿಜಯ ಅಂದರೆ ಪಾಂಡವರಲ್ಲಿ ಒಬ್ಬನಾದ ಅರ್ಜುನನ ವಿಜಯ. ಪಂಪ ಅರ್ಜುನನನ್ನು ತನ್ನ ಕಾವ್ಯದ ನಾಯಕನನ್ನಾಗಿ ಮಾಡಿಕೊಂಡನು. ಅದಕ್ಕಾಗಿ ತನ್ನ ಕಾವ್ಯವನ್ಬು ವಿಕ್ರಮಾರ್ಜುನ ವಿಜಯ ಎಂದು ಕರೆದನು. ಈ ಕೃತಿಗೆ ಇನ್ನೊಂದು ಹೆಸರೂ ಇದೆ ‘ಪಂಪ ಭಾರತಾ’ ಅಂತ. ಶಂಕರ: ಅಲ್ಲಾ ಗುರುಗಳೇ, ಅರ್ಜುನ ಹೇಗೆ ನಾಯಕ ಆಗ್ತಾನೆ? ಯುಧಿಷ್ಠಿರ ತಾನೆ ಹಿರಿಯವನು? ಮೇಷ್ಟ್ರು : ಹೌದು. ನೀನು ಹೇಳಿದ್ದು ಸರಿಯಾಗಿದೆ. ಆದರೆ ಇಲ್ಲಿ ಪಂಪ ಅರ್ಜುನನನ್ನು ತನ್ನ ಆಶ್ರಯದಾತನಾದ ಅರಿಕೇಸರಿ ರಾಜನ ಜೊತೆಗೆ ಹೋಲಿಕೆ ಮಾಡಿದ್ದಾನೆ. ಆದ್ದರಿಂದ ಕಾವ್ಯದ ಉದ್ದಕ್ಕೂ ಅರ್ಜುನನನ್ನು ಹೊಗಳುವ ರೀತಿ ತನ್ನ ಆಶ್ರಯದಾತನನ್ನು ಹಾಡಿ ಹೊಗಳಿದ್ದಾನೆ. ಅವನನ್ನೇ ಕೃತಿಯ ನಾಯಕನನ್ನಾಗಿ ಮಾಡಿಕೊಂಡಿದ್ದಾನೆ. “ಉಪ್ಪಿಟ್ಟವರನ್ನು ಮುಪ್ಪಿನ ತನಕ ನೆನೆ ಅಂತ ಗಾದೆ ಕೇಳಿಲ್ಲವೇ?” ಆಶ್ರಯದಾತ ಅರಿಕೇಸರಿ ಅಂದ್ರೂ ಇನ್ನಿಲ್ಲದ ಪ್ರೀತಿ ಜೊತೆಗೆ ತನ್ನ ಹುಟ್ಟೂರಾದ ಬನವಾಸಿನ ಕಂಡರೂ ಪಂಚಪ್ರಾಣಆಗಲೇ ಮೋಹನ ಹೇಳಿದನಲ್ಲಾ ಆ ಸಾಲನ್ನು ಕೇಳಿದಾಗ ಇದು ಚೆನ್ನಾಗಿ ಅರ್ಥವಾಗುತ್ತದೆ.. ಮೋಹನ: ( ತಲೆ ಕೆರೆದುಕೊಳ್ಳುತ್ತಾ). ಪಂಪ ಹೇಳಿದ ಮಾತಿನ ಅರ್ಥ ಏನು ಸರ್?(ಇಡೀ ತರಗತಿ ಗಟ್ಟಿಯಾಗಿ ನಗುವುದು) ಮೇಷ್ಟ್ರು: ಅರ್ಥ ತಿಳಿಯದೆಯೇ ಕಂಠ ಪಾಠ ಮಾಡಿದೆಯೋ? ಅದಕ್ಕೆ ಹಿರಿಯರು ಹೇಳೋದು “ಅರ್ಥ ಇಲ್ಲದ ಓದು ವ್ಯರ್ಥ” ಅಂತ. ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”ಎಂದರೆ ಯಾರಾದರೂ ನನ್ನನ್ನು ಅಂಕುಶದಿಂದ ತಿವಿದಾಗಲೂ ನನಗೆ ಬನವಾಸಿಯ ನೆನಪಾಗುತ್ತದೆ ಎಂದು.ಅಲ್ಲದೆ” ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್” ಎಂದು ಬನವಾಸಿಯನ್ನು ತನ್ನ ಕೃತಿಯಲ್ಲಿ ಅಲ್ಲಲ್ಲಿ ನೆನೆಯುತ್ತಾನೆ. ಮರಿದುಂಬಿಯಾಗಿ, ಕೋಗಿಲೆಯಾಗಿ ಆದರೂ ನನ್ನ ಊರಿನಲ್ಲೇ ಬನವಾಸಿಯಲ್ಲೇ ಹುಟ್ಟಬೇಕು ಎಂಬುದು ಅವನ ಮಾತಿನ ಅರ್ಥ. ಶಂಕರ: ಇದೇನು ಪದ್ಯನೋ ಗದ್ಯಾನೋ ? ಮೇಷ್ಟು: ಇದು ಹಳೆಗನ್ಬಡ ಮಕ್ಕಳೇ. ಚಂಪೂ ಶೈಲಿ.ಇದರಲ್ಲಿ ಪದ್ಯನೂ ಇರುತ್ತೆ, ಗದ್ಯಾನೂ ಇರುತ್ತೆ. ಎರಡೂ ಮಿಶ್ರಿತವಾದ ಶೈಲಿಯನ್ನು ಚಂಪೂ ಶೈಲಿ ಅಂತ ಕರೀತೀವಿ. ಮಾಧುರಿ: ಇದು ತುಂಬಾ ಕಷ್ಟ ಅಲ್ಲವೇ ಸರ್? ಮೇಷ್ಟು: ಹಾಗೇನೂ ಇಲ್ಲ ಮಾಧುರಿ. ಓದಿ ಕಲಿತರೆ ಎಲ್ಲವೂ ಸುಲಭಾನೇ. ಪಂಪ ಹಾಕಿಕೊಟ್ಟ ದಾರಿಯಲ್ಲೇ ಅವನ ಸಮಕಾಲೀನರಾದ ರನ್ನ ಮತ್ತು ಪೊನ್ನ ಕೂಡ ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಪಂಪ, ರನ್ನ ಮತ್ತು ಪೊನ್ನರನ್ನು ‘ರತ್ನತ್ರಯರು’ ಅಂತ ಕರೆಯುತ್ತಾರೆ. ಶಂಕರ: ಗುರುಗಳೇ ನನಗೂ ಒಮ್ಮೆ ಬನವಾಸಿಯನ್ನು ನೋಡಬೇಕೆನಿಸುತ್ತಿದೆ. ಮೋಹನ: ಅದಕ್ಕೇನಂತೆ, ಬರುವ ಬೇಸಿಗೆ ರಜೆಯಲ್ಲಿ ನೀವೆಲ್ಲರೂ ನನ್ನ ಜೊತೆ ನಮ್ಮ ಊರಿಗೆ ಬನ್ನಿ. ನಮ್ಮ ಅಜ್ಜಿ ತಾತನಿಗೂ ಬಹಳ ಸಂತೋಷವಾಗುತ್ತದೆ. ಮಧುಕೇಶ್ವರ ದೇವಾಲಯ, ಗುಡ್ನಾಪುರ ಸರೋವರ, ರಾಣಿ ಮಹಲ್ ಮುಂತಾದ ನೋಡಬೇಕಾದ ಪ್ರೇಕ್ಷಣೀಯ ಸ್ಥಳಗಳೂ ಇವೆ. ಮೇಷ್ಟ್ರು: ಹಾಗೇ ಆಗಲಿ ಮೋಹನ, ನಾನು ಪ್ರಾಂಶುಪಾಲರ ಜೊತೆ ಮಾತನಾಡಿ ಈ ವರ್ಷದ ಶೈಕ್ಷಣಿಕ‌ ಪ್ರವಾಸವನ್ನು ಬನವಾಸಿಗೇ ಏಪರ್ಡಿಸುವಂತೆ ವಿನಂತಿಸಿಕೊಳ್ಳುತ್ತೇನೆ. ಆ ಮಹಾನ್ ಕವಿಯ ಊರನ್ನು ಎಲ್ಲರೂ ದರ್ಶಿಸಿದಂತಾಗುತ್ತದೆ. (ಅಷ್ಟರಲ್ಲಿ ಅವಧಿ ಮುಗಿದ ಗಂಟೆ ಬಾರಿಸುತ್ತದೆ. ಗುರುಗಳು ತರಗತಿಯಿಂದ ಹೊರಗೆ ನಡೆಯುತ್ತಾರೆ. ವಿದ್ಯಾರ್ಥಿಗಳೆಲ್ಲರೂ ಎದ್ದು ನಿಂತು “ಧನ್ಯವಾದಗಳು ಗುರುಗಳೇ” ಎಂದು ವಂದಿಸುತ್ತಾರೆ ಅರುಣಾ ರಾವ್

ಅರುಣಾ ರಾವ್ ವಿರಚಿತ ಮಕ್ಕಳನಾಟಕ “ಆದಿಕವಿ ಪಂಪ” Read Post »

ಇತರೆ

“ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು”ವೀಣಾ ಹೇಮಂತ್‌ ಗೌಡ ಪಾಟೀಲ

ಗೃಹ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು” ಮನಸ್ಸಿನಲ್ಲಿ ಅತ್ಯಂತ ಗೊಂದಲವನ್ನು ಮೂಡಿಸಿ ಒಂದು ಬಗೆಯ ವಿಷಣ್ಣತೆಯನ್ನು ತುಂಬಿದ ಒಂದು ಪೋಸ್ಟ್ ಮುಖ ಪುಸ್ತಕದ ಪುಟದಲ್ಲಿ ಓದಿದೆ.ವಿಷಯ ಇಷ್ಟೇ ಕರ್ನಾಟಕದ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಚಿಲಕೂರು ಸುಮಲತಾ ಅವರು ವಿವಾಹಿತ ಪತ್ನಿಯು ತನ್ನ ಪತಿ ಮತ್ತು ಆತನ ಕುಟುಂಬದವರಿಂದ ಗೃಹ ಕೃತ್ಯಗಳನ್ನು ಮಾಡಲೇಬೇಕು ಎಂಬ ಒತ್ತಾಯವನ್ನು ಹಾಗೂ ಪತಿಯ ತಂದೆ ತಾಯಿ ಹಾಗೂ ಕುಟುಂಬದ ಸರ್ವ ಸದಸ್ಯರ ಎಲ್ಲ ರೀತಿಯ ಕಾಳಜಿ ಮಾಡಬೇಕು ಎಂಬ ವಾದವನ್ನು ತಳ್ಳಿ ಹಾಕಿದೆ.ತಮ್ಮ ಪಾಲಕರ ಕಾಳಜಿಯನ್ನು ಮಾಡುವುದು ಅವರ ಗಂಡು ಹಾಗೂ ಹೆಣ್ಣು ಮಕ್ಕಳ ಮೊದಲ ಕರ್ತವ್ಯವಾಗಿರುತ್ತದೆಯೇ ಹೊರತು ಸೊಸೆ ಇಲ್ಲವೇ ಅಳಿಯನ ಕೆಲಸವಲ್ಲ… ಅಂತಹ ಕಾಳಜಿಯನ್ನು ಅವರು ತಾವೇ ಸ್ವಯಂ ಇಚ್ಛಾ ಪೂರ್ವಕವಾಗಿ ಮಾಡುತ್ತಿದ್ದರೆ ಪರವಾಗಿಲ್ಲ ಆದರೆ ಈ ಕುರಿತು ಅವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಹೇರುವುದು ತಪ್ಪು ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.ಮುಂದುವರಿಸಿದ ನ್ಯಾಯಮೂರ್ತಿ ಸುಮಲತಾ ಅವರು ವಿವಾಹ ಎಂಬ ಪ್ರಕ್ರಿಯೆಯು ಸಂಗಾತಿಯನ್ನು ನಿಯಂತ್ರಿಸುವ ಅಥವಾ ಅವರ ಮೇಲೆ ಅಧಿಕಾರ ಚಲಾಯಿಸುವ, ಅವರ ವ್ಯಕ್ತಿತ್ವಕ್ಕೆ ಕುಂದು ತರುವ, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ   ಲೈಸೆನ್ಸ್ ಅಲ್ಲ. ಈ ಕುರಿತು ಯಾರೊಬ್ಬರೂ ತಮ್ಮ ಸಂಗಾತಿಯನ್ನು ಒತ್ತಾಯ ಪಡಿಸಬಾರದು ಎಂದು ತಮ್ಮ ತೀರ್ಪಿನಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಹೆಣ್ಣು ಮಕ್ಕಳು ತಮ್ಮ ಪಾಲಕರನ್ನು ಭೇಟಿಯಾಗುವುದಕ್ಕೆ ಪತಿಯ ಇಲ್ಲವೇ ಗಂಡನ ಮನೆಯವರ ಅನುಮತಿಯ ಅವಶ್ಯಕತೆ ಇಲ್ಲ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ತನ್ನಿಂದ ದೂರವಾದ ಪತ್ನಿ ಮತ್ತು ಮಗಳ ಮುಂದಿನ ಬದುಕನ್ನು ನಿರ್ವಹಿಸಲು ಅಗತ್ಯವಾದ ನಿರ್ವಹಣಾ ವೆಚ್ಚವನ್ನು ಕೊಡಲು ನಿರಾಕರಿಸಿ ಆಕೆಯ ಪತಿ ಹಾಕಿದ ಪಿಟಿಶನ್ ಅರ್ಜಿಯನ್ನು ತಿರಸ್ಕರಿಸಿದ ಈ ಮಾತನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹೇಳಿದ್ದಾರೆ.ಉಚ್ಚ ನ್ಯಾಯಾಲಯದ ಈ ತೀರ್ಪನ್ನು ಸಾಕಷ್ಟು ಮನನೊಂದ ಮಹಿಳೆಯರು ಸ್ವಾಗತಿಸಿದ್ದಾರೆ. ಆದರೆ ಬಹಳಷ್ಟು ಜನ ಹಿರಿಯ ಜೀವಿಗಳು ಭಾರತೀಯ ಸಂಪ್ರದಾಯಕ್ಕೆ ವಿರೋಧವಾದ ಈ ಮನಸ್ಥಿತಿಯನ್ನು ಖಂಡಿಸಿದ್ದಾರೆ. ಹಾಗಾದರೆ ಮದುವೆಯಾಗುವುದರ ಅವಶ್ಯಕತೆಯಾದರೂ ಏನಿದೆ ಎಂದು ಕೆಲ ಯುವಕರು ಹಾಗೂ ಅವರ ಹೆತ್ತವರು ಪ್ರಶ್ನಿಸಿದ್ದಾರೆ.ಮತ್ತೆ ಕೆಲ ಗಂಡಸರ ಮಾತುಕತೆ ವಾದಗಳನ್ನು ನೋಡಿದಾಗ ಅವರ ವೈವಾಹಿಕ ಬದುಕಿನ ಮುಖ್ಯ ಉದ್ದೇಶ ಓರ್ವ ಪುಕ್ಕಟೆ ಕೆಲಸದ ಹೆಣ್ಣು ಮಗಳನ್ನು ಪಡೆಯುವುದು ಆಗಿದೆ ಎಂಬಂತೆ ತೋರುತ್ತದೆ. ಅವರ ಪ್ರಕಾರ ಮದುವೆ ಎಂದರೆ ಪರಸ್ಪರ ಒಪ್ಪಿ ವಿವಾಹವಾದ ಗಂಡು ಹೆಣ್ಣಿನ ನಡುವಿನ ಸಾಂಗತ್ಯ, ಜೊತೆಗಾರಿಕೆ, ಪರಸ್ಪರ ಗೌರವ ಮತ್ತು ಒಟ್ಟಾಗಿ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ಎಂಬ ಅರಿವು ಇಲ್ಲವೇ ಇಲ್ಲ. ಹಿರಿಯರು ನೋಡಿ ಮಾಡುವ ಅರೇಂಜ್ಡ್  ಮ್ಯಾರೇಜ್ ನಂತಹ ವೈವಾಹಿಕ ಸಂಬಂಧಗಳಲ್ಲಿ ವಿವಾಹಕ್ಕೆ ಗಳಿಸುವ ವಧು ಮತ್ತು ವರರು ಪರಸ್ಪರ ಭೇಟಿಯಾಗುವುದು, ಅರಿತುಕೊಳ್ಳುವುದು ಹಾಗೂ ತಮ್ಮ ಜೊತೆ ಬದುಕು ಕಟ್ಟಿಕೊಂಡು ಸುಖವಾಗಿ ಸಂಸಾರ ಮಾಡಬೇಕಾದ ಕುರಿತು ಯಾವುದೇ ಮಾತುಕತೆಗಳು ಇರುವುದಿಲ್ಲ.. ಇದರಿಂದಾಗಿ ಗಂಡು ಹುಡುಗರ ಮನದ ಮಾತುಗಳು ಅಲ್ಲಿಯೇ ಮುಚ್ಚಿ ಹೋದರೆ ಹೆಣ್ಣು ಮಕ್ಕಳು ಕೂಡ ಇದರಿಂದ ಹೊರತಾಗುವುದಿಲ್ಲ.ಅಕಸ್ಮಾತ್ ಮೊದಲ ಭೇಟಿಯಲ್ಲಿಯೇ ಮನೆಯ ಎಲ್ಲಾ ಕೆಲಸಗಳನ್ನು ನೀನೆ ಮಾಡಬೇಕು, ನನ್ನ ಪಾಲಕರ ಜವಾಬ್ದಾರಿಯೂ ನಿನ್ನದೇ ಎಂದು ಹುಡುಗನೇನಾದರೂ ಹೇಳಿದರೆ ಖಂಡಿತವಾಗಿಯೂ ಆಕೆ ಒಪ್ಪುವುದಿಲ್ಲ. ಬದಲಾಗಿ ತನ್ನ ಕುಟುಂಬವನ್ನು ಒಪ್ಪವಾಗಿಸುವ ತನ್ನ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವ ತನ್ನ ಜವಾಬ್ದಾರಿಯಲ್ಲಿ ಒಂದಷ್ಟು ಪಾಲನ್ನು ನೀನು ಹೊತ್ತುಕೋ ಎಂದು ಹೇಳಿದರೆ ಭಾರತೀಯ ಸಮಾಜದ ರೀತಿ ನೀತಿಗಳನ್ನು ಸಹಜವಾಗಿ ಆಕೆ ಒಪ್ಪಿಕೊಳ್ಳುತ್ತಾಳೆ.ಆದರೆ ಅದೇ ಹೆಣ್ಣು ಮಗಳಿಗೆ ಕೊಂಚ ಸ್ವಾತಂತ್ರವಿದ್ದು ಆಕೆ ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಒಂದಷ್ಟು ಹೊತ್ತು  ಒಡನಾಡುವ ಅವಕಾಶ ದೊರೆತರೆ ಆಕೆ ಸಾಮಾಜಿಕ ಒತ್ತಡದ ಅಡಿಯಲ್ಲಿ ನರಳಲು ಇಚ್ಚಿಸದೆ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ತನಗೆ ಒದಗಿ ಬಂದ ಸಂಬಂಧವನ್ನು ಒಪ್ಪದೆ ಹೋಗಬಹುದುಸಾಮಾಜಿಕ ಒತ್ತಡ ಇಲ್ಲದ ಹೊರತು ಪಿತೃ ಸತ್ತಾತ್ಮಕವಾಗಿ ನಡೆದು ಬಂದ ಯೋಚನೆಯನ್ನು ಈಗಾಗಲೇ ಬಹುತೇಕ ಹೆಣ್ಣು ಮಕ್ಕಳ ತಿರಸ್ಕರಿಸಿದ್ದಾರೆ. ಇನ್ನೂ ಹೆಚ್ಚಿನ ಸ್ವಾತಂತ್ರ್ಯವನ್ನು ಹೆಣ್ಣು ಮಕ್ಕಳಿಗೆ ಕೊಟ್ಟರೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ತಮ್ಮ ಪಾಲಕರ ಊಟ ಉಪಚಾರ ಆರೋಗ್ಯ ಹೀಗೆ ಎಲ್ಲವನ್ನು ನೋಡಿಕೊಳ್ಳಲು… ಅದೂ 24/7  ರಜೆ ಹಾಕದೆ ಪುಕ್ಕಟೆ ದುಡಿಯುವವರು ಎಲ್ಲಿ ಸಿಕ್ಕಬೇಕು ಎಂಬ ಆತಂಕ ಗಂಡು ಹುಡುಗರಲ್ಲಿ ಇದ್ದರೆ ಅವರ ಪಾಲಕರು ಭಾರತೀಯ ಸಂಸ್ಕೃತಿಯನ್ನು ಜನರು ಮರೆಯುತ್ತಿದ್ದಾರೆ ಎಂದು ಸಾರಾಸಗಟಾಗಿ ಎಲ್ಲರನ್ನು ಬೈಯುತ್ತಿದ್ದಾರೆ. ಪಿತೃಸತ್ತಾತ್ಮಕ ಯೋಚನೆಗಳು ಸದಾ ಪುರುಷ ಅಹಂಕಾರವನ್ನು ಹೆಚ್ಚಿಸುವಲ್ಲಿ ಆತನ ಮೇಲರಿಮೆಯನ್ನು ಪೋಷಿಸುವಲ್ಲಿ ಸಹಾಯಕವಾಗಿವೆ. ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಕೂಡ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೀಕರಣಗೊಂಡಿದ್ದು ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತಾವೇ ಕೈಗೊಳ್ಳುವಷ್ಟು ಸದೃಢರಾಗಿದ್ದಾರೆ. ಅಂತೆಯೇ ಇದೀಗ ಅವರ ಮೇಲೆ ಪ್ರೀತಿಯ ಒತ್ತಾಸೆ ಮಾಡಬಹುದೇ ಹೊರತು ಕಡಿವಾಣದ ನಿಯಂತ್ರಣ ಸಾಧ್ಯವಿಲ್ಲ. ಬಹುಶಃ ಇದನ್ನೇ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದು ಹೇಳಬಹುದು. ಆಲ್ವೇ ಸ್ನೇಹಿತರೆ?  ವೀಣಾ ಹೇಮಂತ್ ಗೌಡ ಪಾಟೀಲ್ 

“ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು”ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ, ಜೀವನ

“ಅರಿವಿನ ಪರಿಧಿ” ವನಜಾ ಮಹಾಲಿಂಗಯ್ಯ

ಅರಿವಿನ ಸಂಗಾತಿ ವನಜಾ ಮಹಾಲಿಂಗಯ್ಯ “ಅರಿವಿನ ಪರಿಧಿ” ಅರಿವು ಎಂದರೆ ಬೆಳಕಿದ್ದಂತೆ. ಆದರೆ ನಾವು ಸಾಮಾನ್ಯವಾಗಿ ಬೆಳಕಿನಲ್ಲಿ ಕಾಣುವ ವಸ್ತುಗಳನ್ನೇ ನೋಡುತ್ತೇವೆ, ಬೆಳಕಿನ ಮೂಲವನ್ನಲ್ಲ.     ನಮ್ಮ ಬದುಕಿನ ಬಹುಪಾಲು ಭಾಗ ನಾವು “ತಿಳಿದಿದ್ದೇವೆ” ಎಂದುಕೊಂಡಿರುವುದರೊಳಗೇ ನಡೆಯುತ್ತದೆ. ಇದಕ್ಕೆ ನಾವು ಜ್ಞಾನ ಎನ್ನುತ್ತೇವೆ. ಪದವಿ, ಉದ್ಯೋಗ, ಸಂಬಂಧ, ಊರು – ಇವೆಲ್ಲಾ ನಮ್ಮ ಅರಿವಿನ ಕೇಂದ್ರಬಿಂದು.     ಆದರೆ ನಿಜವಾದ ಬೆಳವಣಿಗೆ ನಡೆಯುವುದು ಕೇಂದ್ರದಲ್ಲಲ್ಲ, ಪರಿಧಿಯಲ್ಲಿ.   “ಪರಿಧಿ ಎಂದರೇನು?”1.  ನಮಗೆ ಗೊತ್ತಿಲ್ಲ ಎಂದು ಗೊತ್ತಿರುವುದು:ಇದು ಪರಿಧಿಯ ಮೊದಲ ಹಂತ. “ನನಗೆ ವಚನ ಸಾಹಿತ್ಯದ ಆಳ ಗೊತ್ತಿಲ್ಲ” ಎಂದು ಒಪ್ಪಿಕೊಳ್ಳುವುದು. ಇಲ್ಲಿ ವಿನಯ ಹುಟ್ಟುತ್ತದೆ.2.  ನಮಗೆ ಗೊತ್ತೇ ಇಲ್ಲ ಎಂದು ಗೊತ್ತಿಲ್ಲದಿರುವುದು: ಇದು ಅತಿ ದೊಡ್ಡ ಪರಿಧಿ. ನಮ್ಮ ಅಹಂ, ನಮ್ಮ ಪೂರ್ವಗ್ರಹ, ನಾವು ದಿನಾ ಮಾಡುವ ಸಣ್ಣ ಸುಳ್ಳುಗಳು – ಇವು ನಮಗೆ ಕಾಣುವುದೇ ಇಲ್ಲ. ಆದರೆ ಇವೇ ನಮ್ಮನ್ನು ನಡೆಸುತ್ತಿರುತ್ತವೆ. ಬಸವಣ್ಣನವರು ಇದನ್ನೇ “ಅಂತರಂಗದ ಅರಿವು” ಎಂದರು.ಪರಿಧಿ ವಿಸ್ತಾರವಾದಷ್ಟೂ ಕೇಂದ್ರ ಚಿಕ್ಕದಾಗುತ್ತದೆ. ನಾನು ದೊಡ್ಡವನು ಎನ್ನುವ ಭಾವ ಕರಗುತ್ತದೆ. “ಪರಿಧಿಯನ್ನು ಹೇಗೆ ವಿಸ್ತರಿಸುವುದು?”          ಪುಸ್ತಕ ಓದುವುದರಿಂದ ಮಾತ್ರವಲ್ಲ. ಮೂರು ಅಭ್ಯಾಸಗಳಿಂದ:          1. ಕೇಳುವುದು:   ವಾದ ಮಾಡಲು ಅಲ್ಲ, ಅರ್ಥ ಮಾಡಿಕೊಳ್ಳಲು ಕೇಳುವುದು. ಎದುರಿನವರು ನಮ್ಮ ವಿರೋಧಿಯಲ್ಲ, ನಮ್ಮ ಪರಿಧಿಯನ್ನು ತೋರಿಸುವ ಕನ್ನಡಿ.         2. ಸುಮ್ಮನಿರುವುದು:  ದಿನಕ್ಕೆ 10 ನಿಮಿಷವಾದರೂ ಮಾತು, ಮೊಬೈಲ್, ಆಲೋಚನೆ ಇಲ್ಲದೆ ಸುಮ್ಮನಿರುವುದು. ಆಗ ಪರಿಧಿಯಲ್ಲಿರುವ ಸೂಕ್ಷ್ಮ ಸದ್ದುಗಳು ಕೇಳಿಸುತ್ತವೆ. 3. ಅನುಮಾನಿಸುವುದು:   ನಮ್ಮ ಅತ್ಯಂತ ಖಚಿತವಾದ ನಂಬಿಕೆಯನ್ನೇ ಒಂದು ದಿನ “ಇದು ತಪ್ಪಾಗಿರಬಹುದೇ?” ಎಂದು ಕೇಳಿಕೊಳ್ಳುವುದು. ಇದೇ ಬಸವ ತತ್ವದ ಪೂರ್ಣ ಕ್ರಾಂತಿ. ಬಸವಣ್ಣನವರು ಹೇಳಿದರು – “ಅರಿವೇ ಗುರು”. ಅರಿವು ಎಂದರೆ ಮಾಹಿತಿಯ ರಾಶಿಯಲ್ಲ. ಅದು ನನ್ನ ಮಿತಿಯನ್ನು ನಾನೇ ನೋಡುವ ಬೆಳಕು.ಕೇಂದ್ರದಲ್ಲಿ ಬದುಕುವವನು ಸುರಕ್ಷಿತ. ಪರಿಧಿಯಲ್ಲಿ ಬದುಕುವವನು ಜೀವಂತ. ವನಜಾ ಮಹಾಲಿಂಗಯ್ಯ ಮಾದಾಪುರ.

“ಅರಿವಿನ ಪರಿಧಿ” ವನಜಾ ಮಹಾಲಿಂಗಯ್ಯ Read Post »

ಇತರೆ

“ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ಅಂಗವಾಗಿಬಾರದು.” ವಿಶೇಷ ಲೇಖನ ಸವಿತಾ ಇನಾಮದಾರ್

ವಿಶೇಷ ಸಂಗಾತಿ ಸವಿತಾ ಇನಾಮದಾರ್ “ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಎಂದರೆ ಕೇವಲ ಆಗಸ್ಟ್ ೧೫ರಂದು ಧ್ವಜಾರೋಹಣ ಮಾಡುವುದು, ರಾಷ್ಟ್ರಗೀತೆ ಹಾಡುವುದು ಅಥವಾ ಇತಿಹಾಸದ ಪುಸ್ತಕಗಳಲ್ಲಿ ಬರೆದಿರುವ ಘಟನೆಗಳನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲ. ಅದು ನಮ್ಮ ರಕ್ತದಲ್ಲಿ, ನಮ್ಮ ಉಸಿರಿನಲ್ಲಿ, ನಮ್ಮ ಪ್ರತಿದಿನದ ನಡವಳಿಕೆಯಲ್ಲಿ ಜೀವಂತವಾಗಿರಬೇಕು. ಸ್ವತಂತ್ರ ಭಾರತದಲ್ಲಿ ನಾವೆಲ್ಲರೂ ಯಾವುದೇ ರೀತಿಯ ಚಿಂತೆಯಿಲ್ಲದೆ ಆರಾಮವಾಗಿ ಉಸಿರಾಡಲು, ಮನಸಿಗೆ ಬಂದದ್ದನ್ನು ಮಾಡಲು ಕಾರಣ ದೇಶಾದ್ಯಂತ ಲಕ್ಷಾನುಗಟ್ಟಲೇ ಜನರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ, ಅದೆಷ್ಟೋ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸತತ ಹೋರಾಟ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸುವ ಅಹಿಂಸಾ ಸಂಗ್ರಾಮ. ಆ ಹೋರಾಟದಲ್ಲಿ ಅಸಂಖ್ಯಾತ ಜನರು ತಮ್ಮ ಜೀವವನ್ನೇ ಅರ್ಪಿಸಿದರು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹ, ಅಸಹಕಾರ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವು. ಆ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು. ಆ ಎಲ್ಲಾ ಸ್ವಾತಂತ್ರ್ಯ ಯೋಧರಿಗೆ ಶತ ಶತ ನಮನಗಳು. ನನ್ನ ಮಾವನವರಾದ ದಿ. ಶ್ರೀ. ಗುರುರಾವ್ ರಂಗರಾವ್ ಇನಾಮದಾರರು ಸಹ ಈ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಅವರ ತಾಯಿ ತಮ್ಮ ಹಿರಿಯ ಮಗನ ಜೊತೆಗೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಇವರನ್ನೂ ಸಹ ವಿಜಯಾಪುರ ಜಿಲ್ಲೆಯ ನಮ್ಮ ಹಳ್ಳಿ ಗೊಣಶಿಗಿಯ ಸಮೀಪವಿರುವ ಅಥಣಿ ಎಂಬ ಸಣ್ಣ ಪಟ್ಟಣಕ್ಕೆ ಕಳಿಸಿದ್ದರು. ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾದಾಗ ನಮ್ಮ ಮಾವನವರ ವಯಸ್ಸು ಕೇವಲ 10 ವರ್ಷ.ಒಂದು ದಿನ ಸಂಜೆ ಕೆಲವು ಸ್ವಾತಂತ್ರ್ಯ ಚಳುವಳಿಯ ನಾಯಕರಿಂದ ಹತ್ತಿರದ ಬಯಲು ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯ ಸಭೆ ನಡೆಸುವವರಿದ್ದಾರೆ ಎಂದು ಈ ಇನಾಮದಾರ ಬಂಧುಗಳಿಗೆ ಗೊತ್ತಾಯಿತು. ಯಾವ ಹೆದರಿಕೆ ಅಥವಾ ಹಿಂಜರಿಕೆ ಇಲ್ಲದೆ ತಮ್ಮ ಅಣ್ಣನ ಜೊತೆ ಅವರೂ ಸಹ ಭಾಗವಹಿಸಲು ಒಂದು ನಿಗದಿತ ಸ್ಥಳಕ್ಕೆ ಹೋದರು. ಸಭೆಯ ನಡುವೆ ಪೊಲೀಸ್ ಪಡೆ ನುಗ್ಗಿತು. ಲಾಠಿ ಚಾರ್ಜ್ ಮಾಡಲಾಯಿತು. ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗುವ ಮೊದಲ ಅಲ್ಲಿದ್ದವರನ್ನೆಲ್ಲ ಹಿಡಿದು ಹಿಂದೆ ಮುಂದೆ ನೋಡದೆ, ಪ್ರಾಣಿಗಳ ಹಾಗೆ ಪೋಲಿಸ್ ಗಾಡಿಗಳಲ್ಲಿ ತುಂಬಿಕೊಂಡು ಬೆಳಗಾವಿಯ ಹಿಂಡಲ್ಗಾ ಕೇಂದ್ರ ಕಾರಾಗೃಹದಲ್ಲಿ ಸೆರೆ ಹಾಕಿದರು. ಅಲ್ಲಿ 6 ತಿಂಗಳ ವರೆಗೆ ಬಂಧನದಲ್ಲಿ ಇದ್ದರು. ನಂತರ ಅಲ್ಲಿಂದ ಪುಣೆಯ ಯೆರವಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ 8ತಿಂಗಳ ಕಾಲ ಅವರನ್ನು ಇಟ್ಟಿದ್ದರಂತೆ.ಬಳಿಕ ಅಣ್ಣಾ- ತಮ್ಮ ಅಥಣಿಗೆ ಬಂದು ವಿದ್ಯಾಭ್ಯಾಸ ಮುಂದುವರೆಸಿ, ನಂತರ ಧಾರವಾಡದ ಕರ್ನಾಟಕ ಕಾಲೇಜಿನಗೆ MSc ಮುಗಿಸಿ, ಭಾರತ ಸರಕಾರದ ಉದ್ಯೋಗ ಸಚಿವಾಲಯದಲ್ಲಿ ಮುಖ್ಯ ಸಲಹೆಗರಾಗಿ (Chief Industrial Advisor) ದೆಹಲಿಯಲ್ಲಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಈ ನಡುವೆ ದೆಹಲಿ ಕರ್ನಾಟಕ ಸಂಘದ ಏಳಿಗೆಗೆ ಎಲೆಮರೆಯ ಕಾಯಿಯಂತೆ ಅನೇಕ ವರ್ಷಗಳವರೆಗೆ ಎಲ್ಲರೊಂದಿಗೆ ಬೆರೆತು ಸೇವೆ ಸಲ್ಲಿಸಿದ್ದಾರೆ. ಅವರಿಗೆ ತಾವು ನೀಡಿದ ಸೇವೆಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಸುತಾರಾಂ ಇಷ್ಟವಿರಲಿಲ್ಲ. ಹಾಗಾಗಿ ಅವರ ಫೋಟೋ ಹಳೆಯ ದಾಖಲೆಗಳಲ್ಲಿ ಕಂಡು ಬರುವುದಿಲ್ಲ. ಆದರೆ ಅದೇನೋ ಅಂತಾರಲ್ಲ – ಒಳಿತನ್ನು ಮಾಡಿದವರು ಹೆಸರು ಅಳಿಸಲು ಸಾಧ್ಯವಿಲ್ಲ ಎಂಬಂತೆ ಅವರ ಈ ನಿಸ್ವಾರ್ಥ ಸೇವೆಗಳನ್ನು ನೆನೆದು, ದೆಹಲಿ ಕರ್ನಾಟಕ ಸಂಘದಲ್ಲಿ ದಿ. ನಾಗರಾಜ್ ಅವರ ಅಧ್ಯಕ್ಷತೆ ಮತ್ತು ಶ್ರೀ ಕೃಷ್ಣ ಭಟ್ ಅವರು ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ನಮ್ಮ ಮಾನವರಿಗೆ ಮಾನ್ಯ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರಿಂದ ಸನ್ಮಾನ ಮಾಡಲಾಗಿದೆ ಎಂದು ತಿಳಿಸಲು ತುಂಬಾ ಹೆಮ್ಮೆ ಎನಿಸುತ್ತದೆ.ಈ ಸಾಮಾಜಿಕ ಕಾರ್ಯಗಳ ಜೊತೆಗೆ ನಮ್ಮ ಹಳ್ಳಿಯ ಸುಧಾರಣೆಗಾಗಿಯೂ ದಾದಾ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಮೊಮ್ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಜೈಲಿನಲ್ಲಿ ಕಳೆದ ಆ ದಿನಗಳನ್ನು ನೆನೆಯುತ್ತ, – “ನಿಮ್ಮ ಹಕ್ಕಿಗಾಗಿ ನೀವು ಹೋರಾಡಲೇ ಬೇಕು. ಯಾವತ್ತೂ ಯಾವುದಕ್ಕೂ ಹೆದರಬಾರದು. ಬಲಶಾಲಿಯಾಗಿರಿ, ಧೈರ್ಯಶಾಲಿಯಾಗಿರಿ, ಜನರಿಗೆ ಸಹಾಯ ಮಾಡಿರಿ ಮತ್ತು ನಮ್ಮ ಮನೆತನದ ಹೆಸರನ್ನು ಉಳಿಸಿರಿ” ಅಂತ ಹೇಳ್ತಾ ಇದ್ದದ್ದು ಇನ್ನೂ ನನಗೆ ನೆನಪಿದೆ.ಪ್ರೀತಿಯ ದಾದಾ ನಿಮ್ಮ ಬಗ್ಗೆ ನಮಗೆಲ್ಲಾ ತುಂಬಾ ಅಭಿಮಾನವಿದೆ. ನಿಮ್ಮ ಮಾರ್ಗದರ್ಶನ ಮತ್ತು ಹಿತವಚನಗಳು ನನ್ನ ಮಕ್ಕಳಿಗೆ ಶ್ರೀರಕ್ಷೆ ಇದ್ದಂತೆ.ಸ್ನೇಹಿತರೇ..ನಮ್ಮ ಮಾವನವರು, ಅಜ್ಜ-ಅಜ್ಜಿಯರು, ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸಂಕಟವನ್ನು ಅನುಭವಿಸಿ, ಜೀವವನ್ನು ಅರ್ಪಿಸಿ ನಮಗೆ ಈ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡಿದರು. ಅವರು ಕೇವಲ ಇತಿಹಾಸದ ಪುಟಗಳಲ್ಲಿ ಹೆಸರುಗಳಾಗಿ ಉಳಿಯಬಾರದು; ಅವರ ತ್ಯಾಗವು ನಮ್ಮ ಜೀವನದಲ್ಲಿ ಮುಂದುವರಿಯಬೇಕು.ಸ್ವಾತಂತ್ರ್ಯವೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಘನತೆ ಮತ್ತು ಸುರಕ್ಷತೆ ಇರುವುದು. ಅದು ಮಹಿಳೆಯರು ರಾತ್ರಿ ಹೊರಗೆ ಹೋಗುವಾಗ ಭಯವಿಲ್ಲದಿರುವುದು, ಮಕ್ಕಳು ಶಾಲೆಗೆ ಹೋಗುವಾಗ ಸುರಕ್ಷಿತರಾಗಿರುವುದು, ಬಡವರು ನ್ಯಾಯ ಪಡೆಯುವುದು, ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸುವ ಸ್ವಾತಂತ್ರ್ಯವನ್ನು ಹೊಂದಿರುವುದು. ಇಂದು ನಾವು ನೋಡುತ್ತಿರುವ ಅನೇಕ ಘಟನೆಗಳು—ಅನ್ಯಾಯ, ಶೋಷಣೆ, ಹಿಂಸೆ—ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿರುವುದನ್ನು ತೋರಿಸುತ್ತವೆ. ಸ್ವಾತಂತ್ರ್ಯವು ಕಾಗದದ ಮೇಲಿನ ಹಕ್ಕು ಮಾತ್ರವಾಗಿ ಉಳಿದರೆ, ಅದು ಅರ್ಥಹೀನವಾಗುತ್ತದೆ.ನಮ್ಮ ಹಿರಿಯರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ್ದು ಕೇವಲ ವಿದೇಶಿ ಆಳ್ವಿಕೆಯನ್ನು ಕೊನೆಗೊಳಿಸಲು ಮಾತ್ರವಲ್ಲ. ಅವರು ನ್ಯಾಯ, ಸಮಾನತೆ ಮತ್ತು ಮಾನವೀಯತೆಯನ್ನು ಸ್ಥಾಪಿಸಲು ಹೋರಾಡಿದರು. ಆದ್ದರಿಂದ ನಾವು ಅವರನ್ನು ನೆನಪಿಸಿಕೊಳ್ಳುವಾಗ, ಕೇವಲ ಅವರ ಹೆಸರುಗಳನ್ನು ಪುಸ್ತಕಗಳಲ್ಲಿ ಓದುವುದಲ್ಲದೆ, ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು. ಅನ್ಯಾಯವನ್ನು ನೋಡಿದಾಗ ಮೌನವಾಗಿರುವುದು, ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದು, ಮಹಿಳೆ-ಮಕ್ಕಳ ಮೇಲಿನ ಹಿಂಸೆಯನ್ನು ನಿರ್ಲಕ್ಷಿಸುವುದು—ಇವೆಲ್ಲವೂ ಸ್ವಾತಂತ್ರ್ಯದ ಮೇಲಿನ ದ್ರೋಹ.ನಿಜವಾದ ಸ್ವಾತಂತ್ರ್ಯವು ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊರುವಾಗ ಮಾತ್ರ ಸಾಧ್ಯ. ಅದು ನಮ್ಮ ಮತದಾನದಲ್ಲಿ, ನಮ್ಮ ಕೆಲಸದಲ್ಲಿ, ನಮ್ಮ ಮಾತುಗಳಲ್ಲಿ ಮತ್ತು ನಮ್ಮ ಕ್ರಿಯೆಗಳಲ್ಲಿ ಕಾಣಬೇಕು. ಇತಿಹಾಸವು ನಮಗೆ ಪಾಠ ಕಲಿಸುತ್ತದೆ, ಆದರೆ ಭವಿಷ್ಯವನ್ನು ನಿರ್ಮಿಸುವುದು ನಮ್ಮ ಕೆಲಸ. ಸ್ವಾತಂತ್ರ್ಯವನ್ನು ಕೇವಲ ನೆನಪಿನಲ್ಲಿ ಇಡದೆ, ಅದನ್ನು ಪ್ರತಿದಿನ ಜೀವಂತವಾಗಿ ಇರಿಸೋಣ. ನಮ್ಮ ಮಕ್ಕಳು ಸ್ವಾತಂತ್ರ್ಯವನ್ನು ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ, ತಮ್ಮ ಜೀವನದಲ್ಲಿ ಅನುಭವಿಸುವಂತೆ ಮಾಡೋಣ. ನಮ್ಮ ಜೀವನದಲ್ಲಿ ಇಂತಹ ವಿಶೇಷ ವ್ಯಕ್ತಿಗಳೊಂದಿಗೆ ಹಂಚಿಕೊಂಡ ಸುಂದರಸವಿ ನೆನಪುಗಳು ಎಂದಿಗೂ ಮಾಸುವುದಿಲ್ಲ. ತಮ್ಮ ದೇಶಕ್ಕೆ ಮತ್ತು ತಮ್ಮ ಮುಂದಿನಪೀಳಿಗೆಗೆ ಸ್ವಾತಂತ್ರ್ಯವನ್ನು ತರಲು ಹಿಂಜರಿಯದೇ ಹೋರಾಡಿದ ಆ ಎಲ್ಲಾ ವೀರಚೇತನಗಳಿಗೆ ಹೃದಯಾಳದಿಂದ ನಮನಗಳು. ಜೈ ಹಿಂದ್ ಸವಿತಾ ಇನಾಮದಾರ್

“ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ಅಂಗವಾಗಿಬಾರದು.” ವಿಶೇಷ ಲೇಖನ ಸವಿತಾ ಇನಾಮದಾರ್ Read Post »

You cannot copy content of this page

Scroll to Top