ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಗೃಹ ಕೃತ್ಯಗಳ ನಿರ್ವಹಣೆ(ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ವೀಣಾ ಹೇಮಂತ್ ಗೌಡ ಪಾಟೀಲ್

ಗೃಹ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಗೃಹ ಕೃತ್ಯಗಳ ನಿರ್ವಹಣೆ (ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ಇತ್ತೀಚಿಗೆ ಮುಖ ಪುಸ್ತಕದಲ್ಲಿ ಒಂದು ಜಾಹೀರಾತು ನೋಡಿದೆ. ಪುಟ್ಟ ವಯಸ್ಸಿನ ಇಬ್ಬರು ಮಕ್ಕಳು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ಅಮ್ಮನ ಮಾರ್ಗದರ್ಶನದಲ್ಲಿ ಅಡುಗೆ ತಯಾರಿಸುತ್ತಿದ್ದರು. ಇದನ್ನು ನೋಡಿದ ಅಜ್ಜಿ ಅರೆ ಮಕ್ಕಳು ಅಮ್ಮನಿಗೆ ಸಹಾಯ ಮಾಡುವಷ್ಟು ದೊಡ್ಡವರಾದರೆ! ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ಕೂಡಲೇ ಬಾಯಿಯ ಮೇಲೆ ಬೆರಳಿಟ್ಟ ಮಗಳು ಅಮ್ಮ.. ಪ್ಲೀಸ್ ಹಾಗೆಲ್ಲ ಹೇಳಬೇಡ ಮಕ್ಕಳು ಮನೆಯ ಕೆಲಸದಲ್ಲಿ ಪಾಲ್ಗೊಳ್ಳುವುದು ಅವರು ನಮಗೆ ಮಾಡುವ ಸಹಾಯವಲ್ಲ, ಬದಲಾಗಿ ಅದು ಅವರ ಜೀವನದಲ್ಲಿ ಅತ್ಯವಶ್ಯಕವಾಗಿ ಕಲಿಯಲೇಬೇಕಾದ ಒಂದು ಕೌಶಲ ಸಹಾಯ ಮಾಡುವ ಮೂಲಕ ತಾವು ಮತ್ತೊಬ್ಬರಿಗೆ ಮಹದುಪಕಾರ ಮಾಡುತ್ತಿದ್ದೇವೆ ಎಂಬ ಭಾವ ಮಕ್ಕಳಲ್ಲಿ ಮೂಡುವುದು ಬೇಡ ಎಂದು  ತಾಯಿಗೆ ಹೇಳಿದಾಗ ಆಕೆಯ ತಾಯಿ ಹೌದು ಎಂಬಂತೆ ತಲೆಯಾಡಿಸಿದರು.ಕಲಿತ ಹೆಣ್ಣು ಮಗಳೊಬ್ಬಳು ಮನೆಯವರ ಸ್ನೇಹಿತರ ಅದೆಷ್ಟೇ ಒತ್ತಾಯದ ನಡುವೆಯೂ ಕೂಡ ಒಂದೇ ಒಂದು ಅಡುಗೆಯನ್ನು ಕಲಿಯಲಿಲ್ಲ….ಅಡುಗೆ ಮಾಡುವುದನ್ನು ಹೆಣ್ಣು ಮಕ್ಕಳು ಕಡ್ಡಾಯವಾಗಿ ಕಲಿಯಲೇಬೇಕು ಎಂಬ ಸಾಮಾಜಿಕ ಗ್ರಹಿಕೆಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಆಕೆ ಹಾಗೆ ವರ್ತಿಸುತ್ತಿದ್ದಳು.ಅದೊಂದು ದಿನ ಆಕೆಯ ಪುಟ್ಟ ಸಹೋದರಿ ಅಕ್ಕನಿಗೆ ಅಕ್ಕ ನಿನಗೂ ಹಸಿವಾಗುತ್ತದಲ್ಲವೇ?’ ಆದ್ದರಿಂದ ನೀನು ಅಡುಗೆ ಮಾಡುವುದನ್ನು ಕಲಿತುಕೋ ಎಂದು ಹೇಳಿದಾಗ ಅದನ್ನು ಮೂಲಭೂತ ಅವಶ್ಯಕತೆ ಎಂದು ಸಹಜವಾಗಿ ಸ್ವೀಕರಿಸಿದ ಆ ಹೆಣ್ಣು ಮಗಳು ಅಡುಗೆ ಮಾಡುವುದನ್ನು ಕಲಿತಳು.ಮೇಲಿನ ಎರಡು ಜಾಹೀರಾತುಗಳು ನಿಜವಾಗಿಯೂ ಅಡುಗೆ ಎಂಬ ಕಲೆ ಕೇವಲ ಹೆಣ್ಣು ಮಕ್ಕಳು ಕಲಿಯಲೇಬೇಕಾದ ಕೌಶಲವಲ್ಲ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರು ತಮ್ಮ ಬದುಕನ್ನು ನಿರ್ವಹಿಸಲು ಹೊಂದಿರಲೇಬೇಕಾದ ಅಗತ್ಯ ಮೂಲಭೂತ ಕೌಶಲಗಳಲ್ಲಿ ಒಂದು ಎಂಬುದನ್ನು ನಮಗೆ ತೋರಿಸಿಕೊಡುತ್ತವೆ.ಮತ್ತೊಂದು ಕಡೆ ಇನ್ನೇನು ಕೆಲವೇ ದಿನಗಳಲ್ಲಿ ತನ್ನದೇ ವೃತ್ತಿಯಲ್ಲಿ ಇರುವ ಹೆಣ್ಣು ಮಗಳನ್ನು ವಿವಾಹವಾಗುತ್ತಿರುವ ಮಗನಿಗೆ ಅಡುಗೆ ಕೆಲಸಗಳನ್ನು ಕಲಿಸಿದ ತಾಯಿ ಇಬ್ಬರು ಒಟ್ಟಿಗೆ ಕೆಲಸಕ್ಕೆ ಹೋಗುತ್ತಾರೆ ಎಂದ ಮೇಲೆ ಮನೆಯ ಕೆಲಸಗಳನ್ನು ಕೂಡ ಒಟ್ಟಾಗಿ ನಿರ್ವಹಿಸಬೇಕು ಎಂದು ಹೇಳುವುದು ಹಾಗೂ ಅದಕ್ಕೆ ಮಗ ಅತ್ಯಂತ ಪ್ರೀತಿಯಿಂದ ಸಮ್ಮತಿಸಿ ಕಲಿಯಲು ಉತ್ಸಾಹ ತೋರುವುದು ಸ್ವಾಗತಾರ್ಹ ಬೆಳವಣಿಗೆ. ಮುಂದಿನ ದಿನಮಾನಗಳಲ್ಲಿ ಈ ಮಾದರಿಯನ್ನು  ನಾವು ಇನ್ನೂ ಹೆಚ್ಚು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಖಂಡಿತವಾಗಿಯೂ ಇದೆ.ನಿಜ ಅಲ್ಲವೇ ಸ್ನೇಹಿತರೆ ?… ಗೃಹ ಕೃತ್ಯಗಳು ಯಾರು ಯಾರಿಗೂ ಮಾಡಬಹುದಾದ ಉಪಕಾರವಲ್ಲ ಬದಲಾಗಿ ಅವು ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕಾದ ಜೀವನ ಕೌಶಲ್ಯಗಳು. ಅಡುಗೆ ಮಾಡುವುದು ಕೇವಲ ಹೆಣ್ಣು ಮಕ್ಕಳ ಕೆಲಸವಲ್ಲ. ಅಂತೆಯೇ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಎಲ್ಲಾ ಕೆಲಸಗಳು ಕೇವಲ ಮಹಿಳೆಯರವಲ್ಲ. ಅಡುಗೆ ಮಾಡುವ ಮೂಲಕ ಗಂಡಸು ಹೆಣ್ಣಾಗುವುದಿಲ್ಲ ಅಥವಾ ಅಡುಗೆ ಮಾಡುವ ಮನೆ ಕೆಲಸಗಳನ್ನು ನಿರ್ವಹಿಸುವುದು ಲಿಂಗ ಆಧಾರದ ಕೆಲಸ ಕಾರ್ಯಗಳಲ್ಲ.ಮಾತೆತ್ತಿದರೆ ಭೀಮಸೇನ, ನಳ ಮಹಾರಾಜರು ಅತ್ಯಂತ ಪಾಕ ಪ್ರವೀಣರು ಎಂದು ಬೊಬ್ಬೆ ಹೊಡೆಯುವ ಗಂಡಸರು ತಮ್ಮ ತಮ್ಮ ಮನೆಗಳಲ್ಲಿ ಒಂದು ಕಪ್ ಚಹಾ ಮಾಡಿಕೊಳ್ಳಲು ಕೂಡ ಪರದಾಡುವುದನ್ನು ನಾವು ನೋಡುತ್ತೇವೆ. ಅದು ಹೋಗಲಿ ಕುಟುಂಬದ ಇತರ ಮಹಿಳಾ ಸದಸ್ಯರೇ ಅವರಿಗೆ ಅವರು ಕುಳಿತಲ್ಲಿಯೇ ನೀರು ಚಹಾ ತಿಂಡಿ, ಊಟಗಳನ್ನು ಕಾಲಕಾಲಕ್ಕೆ ಒದಗಿಸಬೇಕು.ಒಗೆದು ಇಸ್ತ್ರಿ ಮಾಡಿದ ಬಟ್ಟೆಗಳನ್ನು ಪೂರೈಸಬೇಕು, ಓರಣವಾಗಿ ಮನೆಯನ್ನು ಇಟ್ಟುಕೊಳ್ಳಬೇಕು. ಹಬ್ಬ ಹುಣ್ಣಿಮೆಗಳಲ್ಲಿ ಮನೆ ದೇವರ ಪೂಜೆಯಿಂದ ಹಿಡಿದು ಹಬ್ಬದ ಅಡುಗೆಯನ್ನು ಕೂಡ ಹೆಣ್ಣು ಮಕ್ಕಳೇ ಮಾಡ್ತಾ ಬಂದಿದ್ದು ಅದೊಂದು ರೀತಿಯಲ್ಲಿ ಗಂಡು ಮಕ್ಕಳ ಪಾತ್ರ ಕೇವಲ ತಂದು ಹಾಕುವುದು ಎಂಬಂತಹ ಪರಿಸ್ಥಿತಿ ಅವರದ್ದಾಗಿದೆ.ನಮ್ಮ ಮನೆಯ ಗಂಡು ಮಕ್ಕಳನ್ನು ನಾವು ರಾಜಾ ಬೇಟಾ ಎಂಬಂತೆ ಬೆಳೆಸುತ್ತಿದ್ದು ದೈನಂದಿನ ಎಲ್ಲ ಜವಾಬ್ದಾರಿಗಳಿಂದ ದೂರವಿರಿಸುತ್ತೇವೆ… ಆದರೆ ಹೀಗೆ ಗಂಡು ಮಕ್ಕಳನ್ನು ಬೆಳೆಸುವ ಮೂಲಕ ನಾವು ಅವರನ್ನು ಇತರರ ಮೇಲೆ ಅವಲಂಬನೆ ಹೊಂದಿರುವಂತೆ ಮಾಡುತ್ತೇವೆ. ತಮ್ಮೆಲ್ಲ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಳ್ಳುವ ಓರ್ವ ಸಮರ್ಥ ವ್ಯಕ್ತಿಯನ್ನಾಗಿಸದೆ ಪರಾವಲಂಬಿ ಆಗಿಸುತ್ತೇವೆ.ಗೃಹ ಕೃತ್ಯಗಳನ್ನು ತಮ್ಮ ಮಕ್ಕಳ ನಡುವೆ ಹಂಚಿ ಕೊಟ್ಟು ಕೆಲಸ ಮಾಡಿಸುವ ಮೂಲಕ ಪಾಲಕರು ಕೌಟುಂಬಿಕ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸಬೇಕು. ಇದು ಅವರನ್ನು ಆತ್ಮ ನಿರ್ಭರ, ಕಾಳಜಿಪರ ಹಾಗೂ ಆತ್ಮವಿಶ್ವಾಸವುಳ್ಳ ನಾಗರಿಕರನ್ನಾಗಿಸುತ್ತದೆ. ಮಗು ಗಂಡಿರಲಿ ಹೆಣ್ಣಿರಲಿ ಇದು ನನ್ನ ಕೆಲಸ ನಾನು ಇದನ್ನು ಮಾಡುವ ಮೂಲಕ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಹೇಳಿದಾಗ ಅದು ಸಂಪೂರ್ಣ ಆತ್ಮ ನಿರ್ಭರತೆಯ ಸ್ವತಂತ್ರ ವ್ಯಕ್ತಿತ್ವವನ್ನು ಸೂಚಿಸುತ್ತದೆ…. ಅದು ನಿಜವಾದ ಸಬಲೀಕರಣ.ಹೋಂ ಮೇಕರ್ ಎಂದರೆ ಕೇವಲ ಅದು ಮಹಿಳೆಯರು ಎಂಬಂತೆ ಅನಾದಿಕಾಲದಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ.ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಎಂಬುದಕ್ಕೆ ಪುಷ್ಠಿ ನೀಡಲು ಇತ್ತೀಚೆಗೆ ಕರ್ನಾಟಕದ ಉಚ್ಚ ನ್ಯಾಯಾಲಯವು ಹೋಂ ಮೇಕರ್ ಎಂಬ ಪದವನ್ನು ಗಂಡು ಮತ್ತು ಹೆಣ್ಣು ಎರಡು ಆಗಿರಬಹುದಾದ ನ್ಯೂಟ್ರಲ್ ಅಂದರೆ ತಟಸ್ಥ  ಲಿಂಗ ಅಂದರೆ ಎಲ್ಲರಿಗೂ ಅನ್ವಯಿಸಲಾಗುತ್ತದೆ. ವ್ಯಕ್ತಿ ತಮ್ಮ ಮನೆಯ ದೈನಂದಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ದುಡಿಯುವ ಕೂಲಿಯಾಗಿದ್ದರೂ, ದೊಡ್ಡ ಆಫೀಸರ್ ಆಗಿದ್ದರೂ ಅದು ಗಂಡೇ ಇರಲಿ, ಹೆಣ್ಣೇ ಇರಲಿ ಗೃಹ ಕೃತ್ಯಗಳನ್ನು ಮಾಡಿಕೊಳ್ಳಲು ಕಲಿತಿರಬೇಕು ಹಾಗೂ ಮಾಡಲೂಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಹೇಳಿದೆ.ಪಂಪಾಲಾಲ್ ಎಂಬ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ತೀವ್ರ ಗಾಯಗೊಂಡ. ನಂತರ ಪರಿಹಾರಕ್ಕೆ ಅರ್ಜಿ ಗುಜರಾಯಿಸಿದ ಸಂಬಂಧ ನಡೆದ ವಿಚಾರಣೆಯಲ್ಲಿ ಗೃಹಕೃತ್ಯದ ವಿಷಯ ಮುನ್ನೆಲೆಗೆ ಬಂದಿತ್ತು  ಅವರಿಗೆ ವಿರೋಧವಾದ ಎದುರಾಳಿಗಳ ವಾದ ಗಮನಾರ್ಹವಾಗಿತ್ತು. ಸ್ನಾತಕೋತ್ತರ ಪದವಿಯನ್ನು ಹೊಂದಿದ್ದ ಹಾಗೂ ಈ ಹಿಂದೆ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಣ್ಣು ಮಗಳನ್ನು ಗೃಹಿಣಿ ಎಂದು ಹೇಳಲು ಬರುವುದಿಲ್ಲ ಎಂಬ ಮಾತನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದ್ದು  ಒಪ್ಪಲಿಲ್ಲತನ್ನ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯವು ಹೆಣ್ಣುಮಗಳು ಅನಕ್ಷರಸ್ಥ ಳೇ ಆಗಬೇಕಾಗಿಲ್ಲ ಆಕೆ ದಿನದ 24 ಗಂಟೆಯೂ ಮನೆಯಲ್ಲಿ ಇರುವ ಹಾಗೂ ಗೃಹ ಕೃತ್ಯಗಳನ್ನು ನಿಭಾಯಿಸುವುದನ್ನು ಗೃಹಿಣಿ ಎಂದು ಹೇಳಲಾಗುವುದಿಲ್ಲ. ಗೃಹಿಣಿಯಾಗಿರುವ ಆಕೆಗೆ 1.96 ಲಕ್ಷ ರೂ ಹಣವನ್ನು ಆರು ಶೇಕಡ ವಾರ್ಷಿಕ ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶ ಮಾಡಿತು.ಆದರೂ ಕೂಡ ಗೃಹ ಕೃತ್ಯಗಳು ಪ್ರಾಥಮಿಕವಾಗಿ ಕೇವಲ ಹೆಣ್ಣು ಮಕ್ಕಳದ್ದೇ ಎಂಬಂತೆ ನಾವೇಕೆ ಯೋಚಿಸುತ್ತೇವೆ ಎಂಬುದು ಪ್ರಶ್ನೆಯಾಗಿದೆ ಉಳಿಯುತ್ತದೆ.   ಹಾಗಾದರೆ ನಾವೇನು ಮಾಡಬೇಕು ?ಗೃಹ ಕೃತದ ಎಲ್ಲಾ ಕೆಲಸಗಳನ್ನು ಯಾವುದೇ ಬಗೆಯ ಲಿಂಗ ಭೇದವಿಲ್ಲವೇ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಕಲಿಸಬೇಕು. ದೈನಂದಿನ ಬದುಕಿನಲ್ಲಿ ಕುಟುಂಬದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಅಡುಗೆ ಮಾಡುವುದನ್ನು, ಮನೆಯ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದನ್ನು ಸ್ವಲ್ಪವಾದರೂ ಕಲಿತಿರಲೇಬೇಕು… ಅದು ಅವರ ಮೂಲಭೂತ ಅವಶ್ಯಕತೆಯೂ ಹೌದು. ಕಲಿತಿರುವವರು ಬದುಕಿನ ಎಲ್ಲ ಬಗೆಯ ಪರೀಕ್ಷೆಗಳಿಗೆ ಸಿದ್ಧರಾಗಿರುತ್ತಾರೆ.ಕಳೆದ ಒಂದೆರಡು ದಶಕಗಳಿಂದ ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿರುವ ಯುವಕ ಯುವತಿಯರು ತಮ್ಮ ದೈನಂದಿನ ಬದುಕಿಗೆ ಅತ್ಯವಶ್ಯಕವಾದ ಈ ಎಲ್ಲವನ್ನು ಕಲಿಯುತ್ತಿದ್ದಾರೆ ಆದರೆ ಒಂದೊಮ್ಮೆ ಮದುವೆಯಾದರೆ ಕೂಡಲೇ ಇದೆಲ್ಲವನ್ನು ಹೆಣ್ಣು ಮಕ್ಕಳ ಜವಾಬ್ದಾರಿಗೆ ಒಪ್ಪಿಸಿ ಗಂಡಸರು ತಾವು ನಿಶ್ಚಿಂತರಾಗುವರು…. ಇದು ಸಲ್ಲದು.ಗೃಹ ಕೃತ್ಯಗಳನ್ನು ಅರಿತಿರುವುದು ವೈಯುಕ್ತಿಕವಾಗಿ ನಮ್ಮೆಲ್ಲ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿದಷ್ಟೇ ಒಳ್ಳೆಯದು.ಗಂಡಿರಲಿ ಹೆಣ್ಣಿರಲಿ ಸಮಯ ಸಂದರ್ಭ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮಗೆ ತಾವು ಪರಾವಲಂಬಿ ಗಳಾಗದೆ ಇರುವ ನಿಟ್ಟಿನಲ್ಲಿ ಎಲ್ಲ ಬಗೆಯುವ ಗೃಹ ಕೃತ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.  ವೀಣಾ ಹೇಮಂತ್ ಗೌಡ ಪಾಟೀಲ್ 

“ಗೃಹ ಕೃತ್ಯಗಳ ನಿರ್ವಹಣೆ(ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

“ಮಕ್ಕಳು ಮತ್ತು ಸ್ವಾತಂತ್ರ್ಯ.” ವಿಶೇಷ ಲೇಖನ ಜಯಲಕ್ಷ್ಮಿ .ಕೆ

ಮಕ್ಕಳ ಸಂಗಾತಿ ಜಯಲಕ್ಷ್ಮಿ .ಕೆ “ಮಕ್ಕಳು ಮತ್ತು ಸ್ವಾತಂತ್ರ್ಯ.” ನನ್ನ ಗೆಳತಿಯೊಬ್ಬಳ ಜೊತೆಗೆ ಮೈಸೂರಿನ ಬಟ್ಟೆ ಮಳಿಗೆಯೊಂದಕ್ಕೆ ಹೋಗಿದ್ದೆ.ಆಕೆಯ ಅವಳಿ ಮಕ್ಕಳ ಹುಟ್ಟುಹಬ್ಬ ಸ್ವಾತಂತ್ರ್ಯ ದಿನಾಚರಣೆಯಂದೇ ಆಗಿದ್ದುದರಿಂದ ಮಕ್ಕಳ ಬಟ್ಟೆಯ ಆಯ್ಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ಅವರಿಗೇ ಬಿಡಲಾಗಿತ್ತು. ಮಕ್ಕಳು ಇಷ್ಟ  ಪಟ್ಟ ಬಟ್ಟೆಗಳು ( ತಾಯಿಗೆ ಇಷ್ಟ ಆಗದಿದ್ದರೂ )ಖರೀದಿ ಮಾಡಲೇಬೇಕಾದ ಅವಿವಾರ್ಯತೆಯಲ್ಲಿದ್ದಳು ನನ್ನ ಗೆಳತಿ. ಮಕ್ಕಳು ಬಟ್ಟೆ ಆರಿಸಿದ್ದೇ ಆರಿಸಿದ್ದು… ಕೊನೆಗೂ ಆಯ್ಕೆ ಮುಗಿಯಿತು. ಬಹು ಹೊತ್ತು ಅಲ್ಲೇ ನಿಂತಿದ್ದರಿಂದ ದಣಿವು ಹಸಿವು ಎರಡೂ ಆಗಿತ್ತು. ಬಟ್ಟೆ ಮಳಿಗೆಯಿಂದೀಚೆ ಬಂದ ತಕ್ಷಣ  ಏನಾದರೂ ತಿನ್ನೋಣ ಎಂದೆನಿಸಿತ್ತು. ಮತ್ತೆ ಹೋಟೆಲ್ ನ ಆಯ್ಕೆ.. ಅಲ್ಲಿ ತಿನಿಸಿನ ಆಹಾರದ ಆಯ್ಕೆ ಎಲ್ಲ ಸ್ವಾತಂತ್ರ್ಯ  ಮಕ್ಕಳದ್ದೇ ಆಗಿತ್ತು. ಅಲ್ಲಿಂದ ಮರಳಿ ಮನೆಗೆ ಬಂದರೆ ಅಲ್ಲೂ ಮಕ್ಕಳಿಗೆ ನೀಡುತ್ತಿದ್ದ ಅತಿಯಾದ ಸ್ವಾತಂತ್ರ್ಯ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಬ್ಬರಿಗೂ ಪ್ರತ್ಯೇಕ ಮೊಬೈಲ್.. ಮೊಬೈಲ್ ಗೇಮ್ ಜೊತೆ ಜೊತೆಗೇ  ಮಕ್ಕಳ ಆಯ್ಕೆಯ ಟಿ ವಿ ಸೀರಿಯಲ್ ವೀಕ್ಷಣೆ!! ಇಷ್ಟೆಲ್ಲಾ ಆದ ಮೇಲೂ ಒಂದರ್ದ ಗಂಟೆ ಓದಿಕೊಳ್ಳಿ ಎಂದು ಹೇಳಿದ್ದಕ್ಕೆ ” ನಮಗೆ ಸ್ವಾತಂತ್ರ್ಯಾನೇ  ಇಲ್ಲ ” ಎನ್ನುತ್ತಾ ಸಿಟ್ಟು ಮಾಡಿಕೊಂಡು ಆ ಮಕ್ಕಳು  ನಿದ್ದೆ ಮಾಡಿದವು!! ಇವನ್ನೆಲ್ಲ ನೋಡಿ ಸ್ವಾತಂತ್ರ್ಯ ಎನ್ನುವ ಪದದ ಅರ್ಥವೇನು ಎಂದು ಯೋಚಿಸತೊಡಗಿದೆ. ನಮ್ಮ ಬಾಲ್ಯದಲ್ಲಿ, (ಬಾಲ್ಯದಲ್ಲಿ ಅನ್ನುವುದಕ್ಕಿಂತ ದುಡಿದು ಗಳಿಸುವ ಹಂತಕ್ಕೆ ನಾವು ತಲುಪುವವರೆಗೂ ಎಂದೇ ಹೇಳಬಹುದು )ಬಟ್ಟೆ, ಊಟ ವಸತಿ ಈ ಎಲ್ಲವುಗಳ ಆಯ್ಕೆ ಅಪ್ಪ ಅಮ್ಮ ಅಥವಾ ಮನೆಯ ಹಿರಿಯರದ್ದೇ ಆಗಿತ್ತು. ಆಗ ನಮಗೆ ಸ್ವಾತಂತ್ರ್ಯ ಬೇಕು ಎಂದು ಅನಿಸುತ್ತಲೇ ಇರಲಿಲ್ಲ. ಸ್ವಾತಂತ್ರ್ಯ ಎಂದರೆ ನೆನಪಾಗುತ್ತಿದ್ದದ್ದು ಆಗಸ್ಟ್ 15 ರ ಸಂಭ್ರಮ! ಅಷ್ಟೇ. ಅಗತ್ಯ ವಸ್ತುಗಳನ್ನು ಕೇಳಲೂ ಭಯಪಡುತ್ತಿದ್ದ ಕಾಲವದು. ಆದರೆ ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಕೇಳಿದ ವಸ್ತುಗಳನ್ನು ತೆಗೆದು ಕೊಡದಿದ್ದರೆ ಮಕ್ಕಳು ಏನು ಮಾಡಿಕೊಳ್ಳುವರೋ ಎಂದು ಭಯಪಡುವ ಸ್ಥಿತಿ ಪೋಷಕರದ್ದು .  ಹೊರಗಿನ ನಿಯಂತ್ರಣದಿಂದ ಮುಕ್ತವಾಗಿ ನಮ್ಮ ಮನ ದಿಚ್ಚೆಯಂತೆ ಬದುಕುವ ನಿರಾಳ ಸ್ಥಿತಿಯನ್ನು ಸ್ವಾತಂತ್ರ್ಯ ಎನ್ನಬಹುದು. ನಮ್ಮ ಜೀವನ ಇನ್ನೊಬ್ಬರ ಅಧೀನದಲ್ಲಿ ಇಲ್ಲದೆ ನಮ್ಮ ಸ್ವಂತಿಕೆಯನ್ನು ಯಾರೂ ಪ್ರಶ್ನಿಸಲಾಗದ ಸ್ಥಿತಿಯಲ್ಲಿ ನಾವಿದ್ದರೆ ನಾವು ಸ್ವತಂತ್ರರು ಎಂದು ಅರ್ಥ. ಒಂದು ದೇಶ ತನ್ನದೇ ಆದ ಕಾನೂನುಗಳನ್ನು ರಚಿಸಿಕೊಂಡು ಅವುಗಳನ್ವಯ ಆಡಳಿತವನ್ನು ಸುಸೂತ್ರವಾಗಿ ನಡೆಸುತ್ತಿದ್ದರೆ ಅದನ್ನು ಸ್ವತಂತ್ರ ದೇಶವೆನ್ನುತ್ತೇವೆ.  ವ್ಯಕ್ತಿಯೊಬ್ಬ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು,ಊಟ ವಸತಿ ವಸ್ತ್ರಗಳ ವಿಚಾರದಲ್ಲಿ ತನ್ನ ಆಯ್ಕೆಯಾನುಸಾರ ಬದುಕುತ್ತಿದ್ದಾನೆಂದರೆ ಅದು ಅವನ  ವೈಯಕ್ತಿಕ ಸ್ವಾತಂತ್ರ್ಯ. ಚಿತ್ತ ಚಂಚಲತೆಯನ್ನು ಹೊಂದಿರದೆ ತನ್ನ ಭಾವನೆಗಳನ್ನು ಇತರರ ಅಭಿಪ್ರಾಯಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳದೆ ಸ್ವಾಭಿಮಾನದಿಂದ ಬದುಕುವ ವ್ಯಕ್ತಿ ಭಾವನಾತ್ಮಕವಾಗಿ ಸ್ವತಂತ್ರವಾಗಿದ್ದಾನೆ ಎಂದರ್ಥ. ತಮ್ಮ ಎಲ್ಲ ಬೇಡಿಕೆಗಳ ಪೂರೈಕೆಗೆ ಪೋಷಕರನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಭೂತ ವರ್ತಮಾನ,ಭವಿಷ್ಯಗಳ ಬಗೆಗೆ ಕಿಂಚಿತ್ತೂ ಚಿಂತನೆ ಮಾಡಲಾಗದ ಎಳೆ ಮಕ್ಕಳು ಕೇಳುವ ಸ್ವಾತಂತ್ರ ಯಾವ ವರ್ಗದ್ದು ಎನ್ನುವುದೇ ಒಂದು ಉತ್ತರ ಕಂಡುಕೊಳ್ಳಲಾಗದ ಪ್ರಶ್ನೆ!  ಮಿತಿಮೀರಿದ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುವ ಒಂದು ಮಾತಿದೆ. ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ಬದುಕಲು ಸ್ವಾತಂತ್ರ್ಯ ಬೇಕು. ಆದರೆ ಆ ಸ್ವಾತಂತ್ರ್ಯ ಕಡಿವಾಣವಿಲ್ಲದ ಕುದುರೆಯಂತಾಗಬಾರದು. ಮಕ್ಕಳ ವಿಚಾರಕ್ಕೆ ಬಂದಾಗ ತುಂಬಾ ಚಿಂತನೆ ಮಾಡಬೇಕಾದ ಅಂಶವಿದು. ಇಂದು ನಾವು ಅವರಿಗೆ ನೀಡುವ ಸ್ವಾತಂತ್ರ್ಯ ನಾಳಿನ ಅವರ ಬಾಳ ಹಾದಿಗೆ ಕಂಟಕವಾಗಬಾರದು. ಮನೆಯಲ್ಲಿ ಮಕ್ಕಳ ತಾಳಕ್ಕೆ ತಕ್ಕಂತೆ ಕುಣಿಯುವ ಅಸಹಾಯಕ ಸ್ಥಿತಿ ಪೋಷಕರದ್ದು. ಶಾಲೆಯಲ್ಲಿ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಹೇಳಲಿಕ್ಕೂ ಹೆದರುವ ಪರಿಸ್ಥಿತಿ ಶಿಕ್ಷಕರದ್ದು. ಬೇರೆಯವರ ಮಕ್ಕಳು.. ತಿದ್ದಿ ಬುದ್ಧಿ ಹೇಳಿದರೆ  ಸಂಬಂಧವೆಲ್ಲಿ ಹಾಳಾಗುವುದೋ ಎನ್ನುವ ಆತಂಕ ಸಮಾಜದ್ದು. ಅಗತ್ಯಕ್ಕೂ ಮೀರಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದ ಕಾನೂನು. ಇವೆಲ್ಲವುಗಳ ನಡುವೆ  ಸರಿ ತಪ್ಪುಗಳ ವಿಮರ್ಶೆ ಮಾಡಲಾಗದ ಸ್ಥಿತಿಯ ಮಕ್ಕಳು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತೆ  ಮಕ್ಕಳನ್ನು ತಿದ್ದುವ ಹೊಣೆಗಾರಿಕೆ ಯಾರದ್ದು ಎನ್ನುವುದೇ ಯಾರ ಚಿಂತನೆಗೂ ನಿಲುಕದ ವಿಚಾರ.  ಬೆಳೆಯುವ ಮಕ್ಕಳಿಗೆ ಸ್ವಾತಂತ್ರ್ಯ ಬೇಕು. ದೇಹ ಮನಸುಗಳನ್ನು ಆರೋಗ್ಯವಾಗಿರಿಸುವಷ್ಟು ಆಟವಾಡಲು, ತಮ್ಮಲ್ಲಿನ  ಬುದ್ಧಿಶಕ್ತಿ ಯನ್ನು ಒರೆಗೆ ಹಚ್ಚಲು, ಕ್ರಿಯಾಶೀಲತೆಯನ್ನು ಸೂಕ್ತ ರೀತಿಯಲ್ಲಿ  ಬಳಸಿಕೊಳ್ಳಲು,ಸುಪ್ತ ಪ್ರತಿಭೆಗಳನ್ನು ಸೂಕ್ತ ವೇದಿಕೆಗಳಲ್ಲಿ ಅನಾವರಣಗೊಳಿಸಲು,ಮನದ ಕುತೂಹಲಕ್ಕೆ ಉತ್ತರವನ್ನು ಕಂಡುಕೊಳ್ಳಲು ಸ್ವಾತಂತ್ರ್ಯ ಬೇಕು. ಈ ಎಲ್ಲ ಸಂದರ್ಭಗಳಲ್ಲಿಯೂ  ಮಕ್ಕಳಿಗೆ ನೀಡುವ ಸ್ವಾತಂತ್ರ್ಯಕ್ಕೆ ಒಂದು ಎಲ್ಲೆ ಇರಬೇಕು. ಮಕ್ಕಳ ಇಚ್ಛೆಯಂತೆಯೇ ಎಲ್ಲವೂ ನಡೆಯಲಿ ಎನ್ನುವ ಭಾವಕ್ಕೆ ಸ್ವಾತಂತ್ರ್ಯ ಎನ್ನುವುದಿಲ್ಲ.  ಇಂದು ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ನಾಳಿನ ಅವರ ಬದುಕಿಗೆ ಮಾರಕವಾಗಬಾರದು. ಮಿತಿಮೀರಿದ ಸ್ವಾತಂತ್ರ್ಯ ಅಪಾಯಕಾರಿ ಎನ್ನುವ ಮಾತು ಮಕ್ಕಳ ವಿಚಾರಕ್ಕೆ ಹೇಳಿ ಮಾಡಿಸಿದಂತಿದೆ. ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ಅವರ ಭವಿಷ್ಯಕ್ಕೆ ಉರುಳಾಗಬಾರದು. ಕುಸಿಯುತ್ತಿರುವ ಶೈಕ್ಷಣಿಕ ಮೌಲ್ಯದ ಜೊತೆ ಜೊತೆಗೆ ಮಕ್ಕಳ ನೈತಿಕ ಮೌಲ್ಯಗಳೂ ಕುಸಿದರೆ ಅವರ ಮುಂದಿನ ಬಾಳಿಗೆ ದಾರಿ ತೋರುವವರು ಯಾರು ಎನ್ನುವುದು ಹಿರಿಯರಾದ ನಮ್ಮೆಲ್ಲರ ಚಿಂತನೆಯಾಗಬೇಕು. ಇದು ಇಂದಿನ ಅವಶ್ಯ ಕೂಡ.  ಅಸುರಕ್ಷಿತ ಸಂಬಂಧಗಳು, ಹಾನಿಕಾರಕ ಹವ್ಯಾಸಗಳು, ಮಿತಿ ಮೀರಿದ ಹಠ . ಬಯಸಿದ್ದೆಲ್ಲ ಸಿಗಲೇಬೇಕು ಎನ್ನುವ ಮನೋ ಭಾವ, ಶಿಸ್ತಿಲ್ಲದ ಜೀವನ ಕ್ರಮ.. ವೈಭವೀ ಬದುಕಿಗೆ ಹಾತೊರೆದು ಅವರು ತುಳಿಯುವ ಅಡ್ಡದಾರಿ ಇವೆಲ್ಲವೂ ಬಾಲ್ಯದಲ್ಲಿ ನಾವು ನೀಡಿದ ಸ್ವಾತಂತ್ರ್ಯದ ಪರಿಣಾಮವೇ ಏನೋ ಎಂದೆನಿಸುತ್ತದೆ. ಹಾಗೆಂದು ನಮ್ಮ ಮುಷ್ಟಿಯಲ್ಲಿಯೇ ಮಕ್ಕಳಿರಬೇಕು.. ಮಕ್ಕಳು ಹೆಜ್ಜೆ ಹೆಜ್ಜೆಗೂ ನಮ್ಮ ಮಾತಿನಂತೆಯೇ ನಡೆಯಬೇಕು ಎನ್ನುವ ಹಿರಿಯರ ಕಠಿಣ ನಿಲುವು ಕೂಡಾ ಸರಿಯಲ್ಲ. ಬಹುಶಃ ವಯೋಮಾನಕ್ಕೆ ಅನುಗುಣವಾಗಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಅಡ್ಡಿ ಆಗದ ರೀತಿಯಲ್ಲಿ ಸ್ವಾತಂತ್ರ್ಯ ನೀಡುವುದು ಉತ್ತಮ. ಯಾವ ಹಂತದಲ್ಲಿ ಯಾವ ಸ್ವಾತಂತ್ರ್ಯ ನೀಡಬೇಕು ಎನ್ನುವುದು ಪೋಷಕರ ವಿವೇಚನೆಗೇ ಬಿಟ್ಟದ್ದು. ಜಯಲಕ್ಷ್ಮಿ ಕೆಮಡಿಕೇರಿ.

“ಮಕ್ಕಳು ಮತ್ತು ಸ್ವಾತಂತ್ರ್ಯ.” ವಿಶೇಷ ಲೇಖನ ಜಯಲಕ್ಷ್ಮಿ .ಕೆ Read Post »

ಇತರೆ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ

ಛಾಯಾಚಿತ್ರ ಸಂಗಾತಿ “ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು (ಪ್ರಪಂಚದಾದ್ಯಂತ ದಿ.19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ಯ ಈ ಲೇಖನ )  ***                    ಕಣ್ಣಿಗೆ ಕಾಣುವ ಒಂದು ಕ್ಷಣವನ್ನು ಕ್ಯಾಮೆರಾದ ಕಣ್ಣಿನ ಮೂಲಕ ಸೆರೆಹಿಡಿದು, ಅದನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡುವ ಛಾಯಾಗ್ರಾಹಕರ ಸೃಜನಶೀಲತೆ ಮತ್ತು ಪರಿಶ್ರಮವನ್ನು ಗೌರವಿಸುವ ದಿನವಿದು. ಛಾಯಾಗ್ರಹಣವೆಂದರೆ ಕೇವಲ ಒಂದು ಚಿತ್ರ ತೆಗೆಯುವ ತಂತ್ರವಲ್ಲ; ಅದು ಕಾಲವನ್ನು ದಾಖಲಿಸುವ ಕಲೆ. ಒಂದು ಛಾಯಾಚಿತ್ರದಲ್ಲಿ ವ್ಯಕ್ತಿಯ ಭಾವನೆ, ಸಮಾಜದ ಸ್ಥಿತಿ, ಪ್ರಕೃತಿಯ ಸೌಂದರ್ಯ, ಇತಿಹಾಸದ ಹೆಜ್ಜೆಗುರುತು ಹಾಗೂ ಬದುಕಿನ ಅನೇಕ ನೆನಪುಗಳು ಅಡಗಿರುತ್ತವೆ. ಮಾತುಗಳಿಂದ ಹೇಳಲಾಗದ ಭಾವವನ್ನೂ ಒಂದು ಉತ್ತಮ ಛಾಯಾಚಿತ್ರ ಹೇಳಬಲ್ಲದು. ಒಬ್ಬ ಛಾಯಾಗ್ರಾಹಕ ಸಾಮಾನ್ಯ ದೃಶ್ಯದಲ್ಲಿಯೂ ಅಸಾಮಾನ್ಯ ಸೌಂದರ್ಯವನ್ನು ಕಂಡುಕೊಳ್ಳುತ್ತಾನೆ. ಬೆಳಕು–ನೆರಳು, ಬಣ್ಣ–ಭಾವ, ಕ್ಷಣ–ಕಾಲ ಇವೆಲ್ಲವನ್ನೂ ಸಮನ್ವಯಗೊಳಿಸಿ ಒಂದು ಚಿತ್ರಕ್ಕೆ ಜೀವ ತುಂಬುತ್ತಾನೆ. ಕೆಲವೊಮ್ಮೆ ಒಂದು ಛಾಯಾಚಿತ್ರವೇ ಸಾವಿರಾರು ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳಲ್ಲಿಯೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗಿವೆ. ಪ್ರತಿಯೊಬ್ಬರೂ ಛಾಯಾಚಿತ್ರ ತೆಗೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಚಿತ್ರ ತೆಗೆಯುವುದು ಬೇರೆ, ಚಿತ್ರವನ್ನು ಸೃಷ್ಟಿಸುವುದು ಬೇರೆ. ಸರಿಯಾದ ಕ್ಷಣವನ್ನು ಗುರುತಿಸುವ ದೃಷ್ಟಿ, ಬೆಳಕಿನ ಅರಿವು, ಸಂಯೋಜನೆಯ ಪ್ರಜ್ಞೆ ಮತ್ತು ವಿಷಯದ ಮೇಲಿನ ಸೂಕ್ಷ್ಮ ಸಂವೇದನೆ ಒಬ್ಬ ಉತ್ತಮ ಛಾಯಾಗ್ರಾಹಕನನ್ನು ರೂಪಿಸುತ್ತವೆ. ರೂಪ ದರ್ಶಿ ಫೋಟೋ ಗ್ರಫಿ, ನಿಸರ್ಗ, ವ್ಯಾಪಾರಿ, ಪತ್ರಿಕೋದ್ಯಮ,  ಫಿಲಂ ಫೋಟೋ ಗ್ರಫಿ ಹೀಗೆ ಅನೇಕ ಬಗೆಯ ಫೋಟೋ ಗ್ರಾಫರ್ಗಳ ಜೊತೆಗೆ ಹವ್ಯಾಸಿ ಫೋಟೋ ಗ್ರಾಫರ್ ನಮ್ಮ ನಡುವೆ ಇದ್ದಾರೆ.ಸುದ್ದಿ ಛಾಯಾಗ್ರಾಹಕರು ಸಮಾಜದ ಘಟನೆಗಳನ್ನು ದಾಖಲಿಸುತ್ತಾರೆ. ಪ್ರಕೃತಿ ಛಾಯಾಗ್ರಾಹಕರು ಪರಿಸರದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಾರೆ. ವನ್ಯಜೀವಿ ಛಾಯಾಗ್ರಾಹಕರು ಅಪರೂಪದ ಜೀವಿಗಳ ಬದುಕನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಕಲಾತ್ಮಕ ಛಾಯಾಗ್ರಾಹಕರು ಕಲ್ಪನೆ ಮತ್ತು ಸೌಂದರ್ಯದ ಹೊಸ ಲೋಕವನ್ನು ನಿರ್ಮಿಸುತ್ತಾರೆ. ಹೀಗೆ ಛಾಯಾಗ್ರಹಣದ ಪ್ರತಿಯೊಂದು ಕ್ಷೇತ್ರವೂ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಒಂದು ಹಳೆಯ ಛಾಯಾಚಿತ್ರವನ್ನು ನೋಡಿದಾಗ ನಾವು ಕೇವಲ ಮುಖಗಳನ್ನು ನೋಡುವುದಿಲ್ಲ; ಅದರೊಂದಿಗೆ ಒಂದು ಕಾಲಘಟ್ಟವನ್ನೇ ಮರುಕಾಣುತ್ತೇವೆ. ಕುಟುಂಬದ ನೆನಪುಗಳಿಂದ ಹಿಡಿದು ಐತಿಹಾಸಿಕ ಘಟನೆಗಳವರೆಗೆ, ಛಾಯಾಚಿತ್ರಗಳು ನಮ್ಮ ಸ್ಮೃತಿಯ ಅಮೂಲ್ಯ ದಾಖಲೆಗಳಾಗಿವೆ. ಆದ್ದರಿಂದ ವಿಶ್ವ ಛಾಯಾಗ್ರಾಹಕರ ದಿನವು ಕೇವಲ ಛಾಯಾಗ್ರಾಹಕರಿಗೆ ಶುಭಾಶಯ ಕೋರುವ ದಿನವಲ್ಲ. ಕಾಲವನ್ನು ಸೆರೆಹಿಡಿದು ನೆನಪುಗಳಿಗೆ ಜೀವ ನೀಡುವ ಪ್ರತಿಯೊಬ್ಬ ಛಾಯಾಗ್ರಾಹಕನ ಕಲೆಯನ್ನು ಗೌರವಿಸುವ ದಿನ. ಅವರ ಕ್ಯಾಮೆರಾದ ಕಣ್ಣು ಸಮಾಜವನ್ನು ನೋಡುವ ಮತ್ತೊಂದು ಸೂಕ್ಷ್ಮ ಕಣ್ಣಾಗಿದೆ. ಕ್ಷಣ ಕಳೆದುಹೋಗಬಹುದು; ಕಾಲ ಮುಂದೆ ಸಾಗಬಹುದು; ಆದರೆ ಅದನ್ನು ಪ್ರೀತಿಯಿಂದ ಸೆರೆಹಿಡಿದ ಒಂದು ಛಾಯಾಚಿತ್ರ ಮಾತ್ರ ನೆನಪಾಗಿ ನಮ್ಮೊಂದಿಗೆ ಉಳಿಯುತ್ತದೆ.ಗದಗ ಜಿಲ್ಲೆಯ ಪತ್ರಿಕಾ ಫೋಟೋ ಗ್ರಾಫರ್ ಗಳಿಗೆ ಒಂದು ವಿಶೇಷ ಸ್ಥಾನ ಮಾನ ವಿದೆ ಜೊತೆಗೆ ಇತಿಹಾಸ ಕೂಡ.   ನಾಗಪ್ಪ ಮಹೇಂದ್ರ ಕರ್ ಅವರು 1922ರಲ್ಲಿ ಸ್ಟುಡಿಯೋ ಆರಂಭಸಿದರು. ಮಹಾತ್ಮಾ ಗಾಂಧೀಜಿ ಯವರು ಜಕ್ಕಲಿ ಗೆ ಆಗಮಿಸಿದ ಸಂದರ್ಭವನ್ನು ಸೆರೆ ಹಿಡಿದಿದ್ದು ಈ ನಾಗಪ್ಪ ಅವರೇ. ಅವರ 5ಜನ ಮಕ್ಕಳು ಕೂಡ ಫೋಟೋಗ್ರಫಿಯಲ್ಲಿ ತೊಡಗಿ ಕೊಂಡಿದ್ದಾರೆ. ಅವರಲ್ಲಿ ಭೀಮರಾವ, ದತ್ತಾತ್ರೇಯ, ಶ್ರೀಧರ್, ವಸಂತ, ಮಧುಕರ್ ಅವರು ತಮ್ಮ ಉಸಿರನ್ನು ಫೋಟೋ ಗ್ರಫಿ ಗಾಗಿ ಮೀಲಿಟ್ಟಿದ್ದಾರೆ.73 ವಸಂತ ದಲ್ಲಿರುವ ವಸಂತ ಮಹೇಂದ್ರಕರ ಅವರು ಗದಗ ಕಾಟನ್ ಸೇಲ್ಸ್ ಸೊಸೈಟಿ ಗೆ ಆಗಮಿಸಿದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಯವರ ಫೋಟೋ ನಾನೇ ತೆಗಿದಿದ್ದು ಅಂತಾ ಹೆಮ್ಮೆ ಮತ್ತು ಅಭಿಮಾನದಿಂದ ಹೇಳುತ್ತಾರೆ ಅವರ ಕಂಗಳಲ್ಲಿ ಮೂರನೇ ಕಣ್ಣು ಕೂಡ ಗತ ಕಾಲದ ಘಟನೆಯ ರೀಲು ಚಕ್ ಚಕ್ ಹೊರಳುತ್ತದೆ. ಇವರ ಮಕ್ಕಳು ಗುತ್ತಿಗೆ ಆಧಾರದ ಮೇಲೆ ವಿಶ್ವ ವಿದ್ಯಾಲಯದ ಫೋಟೋ ಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನವೋದಯ. ವಾರ್ತಾ ಇಲಾಖೆಯ ಫೋಟೋ ಗ್ರಾಫರ್ ಕೂಡ ಹೌದು ಇವರ ಸಹೋದರ ಪೊಲೀಸ್ ಇಲಾಖೆಯ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಹೋದರರ ಮಗ ಚೋಟು  ಕಿತ್ತೂರು ಕರ್ನಾಟಕ ಪತ್ರಿಕೆಯ ಫೋಟೋ ಗ್ರಾಫರ್. ಪ್ರಜಾವಾಣಿ ಪತ್ರಿಕೆ ಫೋಟೋ ಗ್ರಾಫರ್ ಬನೇಶ್ ಕುಲಕರ್ಣಿ ಕೆಳೆದ 37 ವರುಷಗಳಿಂದ ಕ್ಯಾಮರಾ ಕೊರಳಿಗೆ ಹಾಕಿ ಕೊಂಡಿದ್ದಾರೆ. ಈ ಟಿವಿ, ಉದಯ ಟಿವಿ ಕ್ಯಾಮರಾ ಮ್ಯಾನ್. ಫೋಟೋ ಗ್ರಾಫರ್ ಆಗಿ ಸಧ್ಯ ಪ್ರಜಾವಾಣಿ ಪತ್ರಿಕೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯ ಕರ್ನಾಟಕ ಜಿಲ್ಲಾ ವರದಿ ಗಾರ ಸಲೀಂ ಬಳಬಟ್ಟಿ ಯವರದು ವಿಶೇಷ ಫೋಟೋ ಗ್ರಫಿ ಅವರ ತಂದೆಯವರಾದ ಬಂಡಾಯ ಸಾಹಿತಿ, ಕವಿ, ರಂಗಭೂಮಿ ಕಲಾವಿದ, ಫೋಟೋ ಗ್ರಾಫರ್ ಬಿ. ಬಾಬು ಅವರಿಂದ ಬಂದ ಬಳುವಳಿಯಾಗಿದೆ.  ಸಮೋಹ ಸಂವಹನ ಮತ್ತು ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸನ್ 2008ರಲ್ಲಿ ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ಯ ಫೋಟೋ ಜರ್ನಲಿಸ್ಟ ಆಗಿ ಸೇವೆ ಆರಂಭ ಮಾಡಿದರು. ಉದಯ ವಾಣಿ. ಕನ್ನಡ ಪ್ರಭಾ ಪತ್ರಿಕೆ ವರದಿ ಗಾರರಾಗಿ ವಿಶ್ವ ವಾಣಿ ಉಪ ಸಂಪಾದಕರಾಗಿ ಸೇವೆ ಕೂಡ ಸಲ್ಲಿಸಿದ್ದಾರೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಛಾಯಾ ಚಿತ್ರ ಪ್ರದರ್ಶನ ದಲ್ಲಿ ಭಾಗ ವಹಿಸಿ ಪ್ರಶಸ್ತಿ ಕೂಡ ಪಡೆದಿದ್ದಾರೆ.    ಕಳೆದ 34ವರ್ಷ ಗಳಿಂದ ಕೊರಳಿಗೆ ಕ್ಯಾಮರಾ ಹಾಕಿಕೊಂಡ  ಜಂಗಮ ಮುತ್ತು ಹಾಳಕೇರಿ. ಫೋಟೋ ಗ್ರಾಫರ್ ಚಿತ್ರ ಮಾತ್ರ ತೆಗೆಯುವದಲ್ಲ  ತನ್ನನ್ನು ತಾನೇ ಪ್ರಶ್ನಿಸಿ ಕೊಳ್ಳಬೇಕು, ಕ್ಯಾಮರಾ ಕಟ್ಟಿದ ಕೊರಳು ನೂರು ಕೊರಳುಗಳ ಬಗ್ಗೆ ಚಿಂತಿಸಬೇಕು . ಪ್ರಚಲಿತ ಸಮಸ್ಯೆ ಗಳ ಬಗ್ಗೆ, ಗ್ರಾಮೀಣ ಬದುಕಿನ ಜೀವನ ಬಗ್ಗೆ ಚಿಂತಿಸಬೇಕೆಂಬುದು ಅವರ ಆಶಯ. ಅಲೆಮಾರಿ ಕುರಿಗಾಯಿ ಗಳು ನೀರಿಗಾಗಿ ಅಲೆಯುವ ಮುತ್ತು ಅವರು ತೆಗೆದ ಫೋಟೋ 25 ಸಾವಿರ ರೂ ಬಹುಮಾನ ಪಡೆಯಿತು ಆ ಬಹುಮಾನ ದ ಮೊತ್ತ ಕುರಿಗಾಯಿಗಳಿಗೆ ಕಾಣಿಕೆ ಯಾಗಿ ಕೊಟ್ಟ ಸಹೃದಯಿ ಯಾಗಿದ್ದಾರೆ. ನಾಡಿನ ತುಂಬೆಲ್ಲ ಇವರ ಛಾಯಾಚಿತ್ರ ಪ್ರದರ್ಶನ ಗೊಂಡಿವೆ. ಮದುವೆ ಕ್ಷಣ ಗಳು ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುವರ್ಣ ನ್ಯೂಸ್ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಮುತ್ತು ಅವರದು. ಪ್ರತಿ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮ ದಲ್ಲಿ ಮುತ್ತು ಅವರ ಹಾಜರಾತಿ ಇದ್ದೆ ಇರುತ್ತದೆ. ಸಾರ್ವಜನಿಕ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮ ಗಳಲ್ಲಿ ರಾಮು ವಗ್ಗಿ ವಿಜಯ ಕರ್ನಾಟಕ ಪತ್ರಿಕೆ, ಲಕ್ಷ್ಮಣ ವಗ್ಗಿ ಉದಯ ವಾಣಿ ಪತ್ರಿಕೆ ಫೋಟೋ ಗಳಾಗಿ ಎಲ್ಲರ ಗಮನ ಸೆಳೆದಿದ್ದಾರೆ.ಗದಗ ಉತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಪ್ರಶಸ್ತಿ ಪುರಸ್ಕಾರ ಗಳನ್ನು ಸಹೋದರರು ತಮ್ಮ ಮೂಡಿಗೇರಿಸಿ ಕೊಂಡಿದ್ದಾರೆ.ಸಂಜೆವಾಣಿ ಪತ್ರಿಕೆಯ ಬಸವ ರಾಜ ದಂಡಿನ ಹಿರಿಯ ಪತ್ರ ಕರ್ತ್ ರು ಫೋಟೋ ಗ್ರಾಫರ್ ಕೂಡ.ಸಮಾಜ ಮುಖಿ ಚಿಂತನೆಗಳ ಬರವಣಿಗೆ ಯಲ್ಲಿ ತೊಡಗಿ ಕೊಂಡವರು ನಾಡಿನ ಅನೇಕ ಪತ್ರಿಕೆಗಳಲ್ಲಿ ಸಂಘಟನೆಗಳಲ್ಲಿ ಗುರುತಿಸಿ ಕೊಂಡವರು. ಶಂಕರ್ ಗುರಿಕಾರ. ಉಮೇಶ್ ಸಜ್ಜನ ಮಾತ್ರವಲ್ಲ ಜಿಲ್ಲೆಯ ತುಂಬಾ ಅನೇಕ ಪತ್ರಿಕೆ ಛಾಯಾಚಿತ್ರ ಕಲಾವಿದರು ಇದ್ದಾರೆ.ai ಮೊಬೈಲ್ ಹಾವಳಿಗಳ ನಡುವೆ ತಮ್ಮ ತನ ಉಳಿಸಿಕೊಂಡು ಪತ್ರಿಕಾ ಛಾಯಾ ಚಿತ್ರಕಾರರಾಗಿ ಪರೋಕ್ಷ ಅಪರೋಕ್ಷ ವಾಗಿ ಪತ್ರಿಕೋದ್ಯಮದ ಘನತೆ ಗೌರವ ಎತ್ತಿ ಹಿಡಿಯುತ್ತಿದ್ದಾರೆ ಇದೊಂದು ಅಭಿಮಾನ ದ ಸಂಗತಿ ವಿಶ್ವ ಛಾಯಾಗ್ರಾಹಕರ ದಿನದಂದು ಕ್ಷಣಗಳಿಗೆ ಚಿರಂತನತೆ ನೀಡುವ ಎಲ್ಲ ಛಾಯಾಗ್ರಾಹಕರಿಗೆ ಹೃತ್ಪೂರ್ವಕ ಶುಭಾಶಯಗಳು.. ಎ. ಎಸ್. ಮಕಾನದಾರಕವಿ, ಪ್ರಕಾಶಕ, ಸಂಪಾದಕನಿರಂತರ ಪ್ರಕಾಶನ, ಗದಗ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ Read Post »

ಇತರೆ

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ

ವಿಮರ್ಶಾ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ”           ಇಂದು ಸಾಹಿತ್ಯ ಲೋಕದಲ್ಲಿ ‘ವಿಮರ್ಶೆ’ ಎಂಬ ಪದವು ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆದರೆ ವಿಪರ್ಯಾಸವೆಂದರೆ, ತನ್ನ ಮೂಲ ಅರ್ಥವನ್ನು ಕ್ರಮೇಣ ಕಳೆದುಕೊಳ್ಳುತ್ತಿರುವುದು! ಪುಸ್ತಕ ಪರಿಚಯ, ಕೃತಿಯ ಸಂಕ್ಷಿಪ್ತ ಸಾರಾಂಶ, ಲೇಖಕರ ಪರಿಚಯ, ಪ್ರಶಂಸಾತ್ಮಕ ಲೇಖನ, ಪ್ರಚಾರಾತ್ಮಕ ಬರಹ, ಮುನ್ನುಡಿ-ಬೆನ್ನುಡಿಯ ವಿವರಣೆ, ಬಿಡುಗಡೆ ಸಮಾರಂಭದ ಭಾಷಣ, ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ, ವೈಯಕ್ತಿಕ ಅಭಿಪ್ರಾಯ ….. ಇವೆಲ್ಲವನ್ನೂ ‘ವಿಮರ್ಶೆ’ಯೆಂದು ಕರೆಯುವ ಪ್ರವೃತ್ತಿ ವ್ಯಾಪಕವಾಗುತ್ತಿದೆ. ಈ ಗೊಂದಲವು ‘ವಿಮರ್ಶೆ’ಯ ಸ್ವರೂಪವನ್ನೇ ವಿಕೃತಗೊಳಿಸುತ್ತಿದೆ. ಪುಸ್ತಕವನ್ನು ಓದಿದ ನಂತರ ಅದನ್ನು ಪರಿಚಯಿಸುವುದು ಪುಸ್ತಕ ಪರಿಚಯ; ಅದರ ವಿಷಯವಸ್ತುವನ್ನು ವಿವರಿಸುವುದು ವಿವರಣೆ; ಕೃತಿಯ ಪ್ರಸಾರ ಮತ್ತು ಓದುಗರ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಬರೆಯುವುದು ಪ್ರಚಾರಾತ್ಮಕ ಬರಹ; ಓದುಗರ ವೈಯಕ್ತಿಕ ಅನುಭವವನ್ನು ದಾಖಲಿಸುವುದು ಓದುಗರ ಪ್ರತಿಕ್ರಿಯೆ. ಹಾಗಾಗಿ ಪುಸ್ತಕ ಪರಿಚಯವನ್ನು ಪರಿಚಯವೆಂದೇ, ಪ್ರಚಾರ ಬರಹವನ್ನು ಪ್ರಚಾರವೆಂದೇ, ಓದುಗರ ಪ್ರತಿಕ್ರಿಯೆಯನ್ನು ಪ್ರತಿಕ್ರಿಯೆಯೆಂದೇ ಗುರುತಿಸಬೇಕಾಗಿದೆ. ಇವೆಲ್ಲವೂ ತಮ್ಮದೇ ಆದ ಸಾಹಿತ್ಯಿಕ ಮಹತ್ವವನ್ನು ಹೊಂದಿವೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯೂ ತನ್ನದೇ ಆದ ಉದ್ದೇಶ ಮತ್ತು ಮಿತಿಯನ್ನು ಹೊಂದಿವೆ. ಅವುಗಳ ನಡುವಿನ ಭೇದವನ್ನು ಉಳಿಸಿಕೊಳ್ಳುವುದೇ ಸಾಹಿತ್ಯದ ಆರೋಗ್ಯವನ್ನು ಕಾಪಾಡುವ ಮೊದಲ ಹೆಜ್ಜೆಯಾಗಿದೆ.        ಇಂದು ಸಾಹಿತ್ಯ ಲೋಕದಲ್ಲಿ ಪುಸ್ತಕ ಪರಿಚಯ, ಓದುಗರ ಪ್ರತಿಕ್ರಿಯೆ, ಪ್ರಚಾರಾತ್ಮಕ ಬರಹ ಮತ್ತು ವಿಮರ್ಶೆ ಇವುಗಳ ನಡುವಿನ ಗಡಿರೇಖೆಗಳು ಮಸುಕಾಗುತ್ತಿರುವ ಸಂದರ್ಭದಲ್ಲಿ, ಅವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಮರುನಿರ್ವಚಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯನ್ನೂ ಅದರ ಉದ್ದೇಶಕ್ಕೆ ಅನುಗುಣವಾಗಿ ಗುರುತಿಸಿದಾಗ ಮಾತ್ರ ವಿಮರ್ಶೆಯ ಗೌರವ ಮತ್ತು ಸಾಹಿತ್ಯದ ಆರೋಗ್ಯ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯ. ‘ವಿಮರ್ಶೆ’ಯ ಉದ್ದೇಶವು ಕೇವಲ ಮಾಹಿತಿ ನೀಡುವುದಾಗಲಿ ಅಥವಾ ಆಸಕ್ತಿ ಹುಟ್ಟಿಸುವುದಾಗಲಿ ಅಲ್ಲ; ಕೃತಿಯ ಅಂತರಂಗವನ್ನು ವಿವೇಚನಾತ್ಮಕವಾಗಿ ಪರಿಶೀಲಿಸಿ ಅದರ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವುದಾಗಿದೆ. ಅಂದರೆ, ಕೃತಿಯ ರೂಪ, ಆಶಯ, ಭಾಷೆ, ಶೈಲಿ, ಸಾಂಸ್ಕೃತಿಕ ಹಿನ್ನೆಲೆ, ಸೌಂದರ್ಯಪ್ರಜ್ಞೆ ಮತ್ತು ಸಾಹಿತ್ಯಿಕ ಮೌಲ್ಯಗಳನ್ನು ಸಮಗ್ರವಾಗಿ ಪರಿಶೀಲಿಸುವ ಬೌದ್ಧಿಕ ಹಾಗೂ ಸೃಜನಾತ್ಮಕ ಕ್ರಿಯೆ. ಅದರ ಗುರಿ ಲೇಖಕರನ್ನು ಸಂತೋಷಪಡಿಸುವುದೂ ಅಲ್ಲ, ನೋಯಿಸುವುದೂ ಅಲ್ಲ; ಕೃತಿಯ ಸಾಹಿತ್ಯಸತ್ಯವನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ದಾಖಲಿಸುವುದಾಗಿದೆ.        ಸಮಕಾಲೀನ ಸಾಹಿತ್ಯದಲ್ಲಿ ಇನ್ನೊಂದು ಪ್ರವೃತ್ತಿಯೂ ಕಂಡುಬರುತ್ತಿದೆ. ಕೆಲವರು ಪ್ರಶಂಸೆಯನ್ನೇ ‘ವಿಮರ್ಶೆ’ ಎಂದು ಭಾವಿಸುತ್ತಿರುವುದು; ಇನ್ನೂ ಕೆಲವರು ದೋಷಗಳನ್ನು ಹುಡುಕುವುದನ್ನೇ ‘ವಿಮರ್ಶೆ’ಯ ಮುಖ್ಯ ಗುರಿಯೆಂದು ಪರಿಗಣಿಸುತ್ತಿರುವುದು. ಈ ಎರಡೂ ಅತಿರೇಕಗಳು ‘ವಿಮರ್ಶೆ’ಯ ನಿಜವಾದ ಧರ್ಮಕ್ಕೆ ವಿರುದ್ಧವಾಗಿವೆ. ಹಾಗಂತ ಹೊಗಳಿಕೆಯಾಗಲಿ, ತೆಗಳಿಕೆಯಾಗಲಿ ವಿಮರ್ಶೆಯಾಗುವುದಿಲ್ಲ. ಅದು ಪ್ರಶಂಸೆ ಮತ್ತು ಟೀಕೆ ಎಂಬ ಎರಡೂ ಅಂಶಗಳನ್ನು ಮೀರಿದ, ನ್ಯಾಯಸಮ್ಮತ ವಿವೇಚನೆಯಾಗಿದೆ. ಕೃತಿಯಲ್ಲಿ ಗುಣಗಳಿದ್ದರೆ ಅವುಗಳನ್ನು ಸೂಕ್ತವಾಗಿ ಗುರುತಿಸುವ, ಮಿತಿಗಳಿದ್ದರೆ ಅವುಗಳನ್ನು ವಸ್ತುನಿಷ್ಠವಾಗಿ ಸೂಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಆದರೆ ಈ ಎರಡನ್ನೂ ಮಾಡುವಾಗ ವಿಮರ್ಶಕರ ವೈಯಕ್ತಿಕ ರುಚಿ, ಸ್ನೇಹ, ದ್ವೇಷ, ಪೂರ್ವಾಗ್ರಹ ಅಥವಾ ಸಿದ್ಧಾಂತಗಳ ಒತ್ತಡ ನಿರ್ಣಾಯಕವಾಗಬಾರದು. ನಿರ್ಣಾಯಕವಾಗಬೇಕಾದುದು ಕೃತಿಯ ಸ್ವರೂಪ ಮತ್ತು ಅದರ ಸಾಹಿತ್ಯಿಕ ಮೌಲ್ಯ ಮಾತ್ರ! ನಿಜವಾದ ವಿಮರ್ಶೆಯು ಕೃತಿಯ ಕಥೆಯನ್ನು ಪುನಃ ಹೇಳುವುದಿಲ್ಲ; ಕೃತಿಯೊಳಗೆ ಅಡಗಿರುವ ಅರ್ಥವನ್ನು ಅನಾವರಣಗೊಳಿಸುತ್ತದೆ. ಅದು ಲೇಖಕರನ್ನು ಕೇಂದ್ರವಾಗಿಸಿಕೊಳ್ಳುವುದಿಲ್ಲ; ಕೃತಿಯನ್ನು ಕೇಂದ್ರವಾಗಿಸಿಕೊಳ್ಳುತ್ತದೆ. ಅದು ಓದುಗರ ಮೇಲೆ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸುವುದಿಲ್ಲ; ಅವರ ಗ್ರಹಿಕೆಯನ್ನು ವಿಸ್ತರಿಸುತ್ತದೆ. ವಿಮರ್ಶಕರು ನ್ಯಾಯಾಧೀಶರಂತೆ ಶಿಕ್ಷೆ ವಿಧಿಸುವವರೂ ಅಲ್ಲ; ಪ್ರಚಾರಕರಂತೆ ಹೊಗಳುವವರೂ ಅಲ್ಲ. ಅವರು ಕೃತಿಯ ಅಂತರಂಗವನ್ನು ಸೂಕ್ಷ್ಮವಾಗಿ ಅರಿತು, ಅದರ ಸಾಹಿತ್ಯಿಕ ಸತ್ಯವನ್ನು ಸಹೃದಯ ಓದುಗರ ಮುಂದಿಡುವ ಮಧ್ಯವರ್ತಿ!        ಭಾರತೀಯ ಕಾವ್ಯಮೀಮಾಂಸೆಯು ವಿಮರ್ಶಕರಲ್ಲಿ ಸಹೃದಯತೆಯನ್ನು ಅತ್ಯುನ್ನತ ಗುಣವೆಂದು ಪರಿಗಣಿಸುತ್ತದೆ. ಸಹೃದಯತೆ ಎಂದರೆ ಕೇವಲ ಮೆಚ್ಚುಗೆಯಲ್ಲ; ಕೃತಿಯ ಅಂತರಂಗದೊಂದಿಗೆ ತಾದಾತ್ಮ್ಯ ಸಾಧಿಸುವ ಸಾಮರ್ಥ್ಯ. ಪಾಶ್ಚಾತ್ಯ ವಿಮರ್ಶೆಯು ವಸ್ತುನಿಷ್ಠತೆ, ತಾರ್ಕಿಕತೆ ಮತ್ತು ಸಾಹಿತ್ಯಿಕ ಮಾನದಂಡಗಳನ್ನು ಒತ್ತಿ ಹೇಳುತ್ತದೆ. ಈ ಎರಡೂ ಪರಂಪರೆಗಳ ಸಾರ ಒಂದೇ, ಅದೆಂದರೆ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ಜ್ಞಾನ ಮತ್ತು ಸಂವೇದನೆಯ ಸಮನ್ವಯದ ವಿವೇಚನಾತ್ಮಕ ಕ್ರಿಯೆಯಾಗಿರಬೇಕು ಎಂಬುದು! ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಪುಸ್ತಕ ಪರಿಚಯವನ್ನು ವಿಮರ್ಶೆ ಎಂದು ಕರೆಯುವುದು, ಪ್ರಚಾರಾತ್ಮಕ ಬರಹವನ್ನು ವಿಮರ್ಶೆ ಎಂದು ಭಾವಿಸುವುದು ಅಥವಾ ವೈಯಕ್ತಿಕ ಅಭಿಪ್ರಾಯವನ್ನು ವಿಮರ್ಶೆಯೆಂದು ಪ್ರತಿಪಾದಿಸುವುದು ವಿಮರ್ಶೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತದೆ. ಇವು ಸಾಹಿತ್ಯ ಸಂವಹನದ ಅಗತ್ಯ ರೂಪಗಳಾದರೂ, ಅವುಗಳನ್ನು ವಿಮರ್ಶೆಯೊಂದಿಗೆ ಸಮೀಕರಿಸುವುದು ಶಾಸ್ತ್ರೀಯ ದೃಷ್ಟಿಯಿಂದ ಸಮಂಜಸವಲ್ಲ. ವಿಮರ್ಶೆಯು ವಿಶ್ಲೇಷಣೆ, ವ್ಯಾಖ್ಯಾನ, ಮೌಲ್ಯಮಾಪನ, ಸೌಂದರ್ಯಾಸ್ವಾದನೆ ಮತ್ತು ವಸ್ತುನಿಷ್ಠ ವಿವೇಚನೆಯ ಎಲ್ಲ ಆಯಾಮಗಳ ಸಮನ್ವಯದಿಂದ ರೂಪುಗೊಳ್ಳುವ ಸ್ವತಂತ್ರ ಸಾಹಿತ್ಯ ಪ್ರಕಾರವಾಗಿದೆ. ಹೀಗಾಗಿ ವಿಮರ್ಶೆಯು ಕೃತಿಯನ್ನು ಹೊಗಳುವ ಸಾಧನವಾಗಲಿ, ಅವಮಾನಿಸುವ ಆಯುಧವಾಗಲಿ, ಲೇಖಕರನ್ನು ಪ್ರತಿಷ್ಠಾಪಿಸುವ ವೇದಿಕೆಯಾಗಲಿ, ಅವರನ್ನು ನಿರಾಕರಿಸುವ ನ್ಯಾಯಪೀಠವಾಗಲಿ ಅಲ್ಲ. ಅದು ಕೃತಿಯ ಸಾಹಿತ್ಯಿಕ ಸತ್ಯವನ್ನು ಅನಾವರಣಗೊಳಿಸಿ, ಅದರ ಮೌಲ್ಯವನ್ನು ಸಮರ್ಥವಾಗಿ ನಿರ್ಣಯಿಸಿ, ಲೇಖಕ ಮತ್ತು ಸಹೃದಯ ಓದುಗರ ನಡುವೆ ಅರ್ಥಪೂರ್ಣ ಸಂವಾದವನ್ನು ನಿರ್ಮಿಸುವ ಸೃಜನಾತ್ಮಕ ಬೌದ್ಧಿಕ ಪ್ರಕ್ರಿಯೆಯಾಗಿದೆ.        ಸಾಹಿತ್ಯಕ್ಕೆ ಶ್ರೇಷ್ಠ ಸೃಜನಶೀಲರು ಎಷ್ಟು ಅಗತ್ಯವೋ, ಅಷ್ಟೇ ಪ್ರಾಮಾಣಿಕ ವಿಮರ್ಶಕರೂ ಅಗತ್ಯ. ಸೃಜನಶೀಲರು ಸಾಹಿತ್ಯವನ್ನು ನಿರ್ಮಿಸಿದರೆ, ವಿಮರ್ಶಕರು ಅದರ ಮೌಲ್ಯವನ್ನು ಗುರುತಿಸುತ್ತಾರೆ, ಸಾಹಿತ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಹಾಗೂ ಓದುಗರ ಅಭಿರುಚಿಯನ್ನು ಪರಿಷ್ಕರಿಸುತ್ತಾರೆ. ಸೃಷ್ಟಿ ಸಾಹಿತ್ಯವನ್ನು ವಿಸ್ತರಿಸಿದರೆ, ವಿಮರ್ಶೆ ಅದನ್ನು ಆಳಗೊಳಿಸುತ್ತದೆ. ಈ ನೆಲೆಯಲ್ಲಿ ವಿವೇಚಿಸಿದಾಗ ವಿಮರ್ಶೆಯು ಸಾಹಿತ್ಯದ ಪರಾವಲಂಬಿಯಲ್ಲ; ಅದು ಸಾಹಿತ್ಯದ ಸಹಸೃಷ್ಟಿ. ಒಂದು ಉತ್ತಮ ಕೃತಿ ಹೇಗೆ ಓದುಗರಲ್ಲಿ ಹೊಸ ಅನುಭವವನ್ನು ಮೂಡಿಸುತ್ತದೆಯೋ, ಅದೇ ರೀತಿ ಉತ್ತಮ ವಿಮರ್ಶೆಯು ಆ ಅನುಭವಕ್ಕೆ ಅರ್ಥ, ಆಳ ಮತ್ತು ದೃಷ್ಟಿಯನ್ನು ನೀಡುತ್ತದೆ ಎಂಬುದು ಮನವರಿಕೆಯಾಗುತ್ತದೆ. ನಿಜವಾದ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ತರ್ಕದಿಂದ ನಿಯಂತ್ರಿತವಾದ, ಸೌಂದರ್ಯಪ್ರಜ್ಞೆಯಿಂದ ಸಮೃದ್ಧವಾದ ಮತ್ತು ಸಾಹಿತ್ಯಸತ್ಯಕ್ಕೆ ಬದ್ಧವಾದ ಚಿಂತನಾ ಪ್ರಕ್ರಿಯೆಯಾಗಿದೆ. ಅದು ಲೇಖಕರ ಪರವೂ ಅಲ್ಲ, ವಿರುದ್ಧವೂ ಅಲ್ಲ; ಸಾಹಿತ್ಯದ ಪರವಾಗಿದೆ. ಆದ್ದರಿಂದ ವಿಮರ್ಶಕರ ಮೊದಲ ನಿಷ್ಠೆ ವ್ಯಕ್ತಿಯ ಮೇಲಲ್ಲ, ಕೃತಿಯ ಮೇಲೆ; ಕೃತಿಯ ಮೇಲಲ್ಲ, ಸಾಹಿತ್ಯಸತ್ಯದ ಮೇಲೆ ಇರಬೇಕು. ಈ ನಿಷ್ಠೆಯೇ ವಿಮರ್ಶೆಯನ್ನು ಸಾಮಾನ್ಯ ಅಭಿಪ್ರಾಯದಿಂದ ಪ್ರತ್ಯೇಕಿಸಿ, ಅದನ್ನು ಶಾಸ್ತ್ರೀಯ, ಸೃಜನಾತ್ಮಕ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯಾಗಿ ರೂಪಿಸುತ್ತದೆ. ವಿಮರ್ಶೆಯ ಈ ಮೂಲ ಸ್ವರೂಪವನ್ನು ಪುನಃ ಸ್ಥಾಪಿಸುವುದು ಇಂದಿನ ಸಾಹಿತ್ಯ ಲೋಕದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ವಿಮರ್ಶೆಯನ್ನು ಅದರ ನಿಜವಾದ ಅರ್ಥದಲ್ಲಿ ಮರುಸ್ಥಾಪಿಸುವುದು ಕೇವಲ ವಿಮರ್ಶಕರ ಹೊಣೆಗಾರಿಕೆಯಲ್ಲ; ಲೇಖಕರು, ಓದುಗರು, ಸಂಶೋಧಕರು ಮತ್ತು ಸಾಹಿತ್ಯ ಸಂಸ್ಥೆಗಳು ಸೇರಿದಂತೆ ಸಮಸ್ತ ಸಾಹಿತ್ಯ ಸಮುದಾಯದ ಜವಾಬ್ದಾರಿಯಾಗಿದೆ. ಏಕೆಂದರೆ ಉತ್ತಮ ಸಾಹಿತ್ಯವು ಶ್ರೇಷ್ಠ ಸೃಷ್ಟಿಯಿಂದ ಮಾತ್ರವಲ್ಲ, ಪ್ರಾಮಾಣಿಕ ಮತ್ತು ಪ್ರಬುದ್ಧ ವಿಮರ್ಶೆಯಿಂದಲೂ ರೂಪುಗೊಳ್ಳುತ್ತದೆ.        ಸಾಹಿತ್ಯವು ಸೃಷ್ಟಿಯ ಕಲೆ; ವಿಮರ್ಶೆಯು ಆ ಸೃಷ್ಟಿಯ ಸತ್ಯವನ್ನು ಅನಾವರಣಗೊಳಿಸುವ ಪುನರ್ ಕಲೆ. ಆದ್ದರಿಂದ ವಿಮರ್ಶೆಯು ಯಾವುದೇ ವ್ಯಕ್ತಿಯ ಪರವಾಗಲೀ ವಿರುದ್ಧವಾಗಲೀ ನಿಲ್ಲದೆ; ಸಾಹಿತ್ಯದ ಪರವಾಗಿ ಇರುವಂಥದ್ದು. ಈ ಉದ್ದೇಶವನ್ನು ಸಾಧಿಸಲು ಪ್ರತಿಯೊಬ್ಬ ವಿಮರ್ಶಕರು ಪಾಲಿಸಬೇಕಾದ ಹತ್ತು ಮೂಲ ತತ್ತ್ವಗಳನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದು!√೦೧. ಕೃತಿಯೇ ಕೇಂದ್ರ; ಲೇಖಕರಲ್ಲ : ವಿಮರ್ಶೆಯ ವಿಷಯ ಲೇಖಕರ ವ್ಯಕ್ತಿತ್ವವಲ್ಲ, ಕೃತಿ. ಲೇಖಕರ ಖ್ಯಾತಿ, ಸ್ನೇಹ, ವೈಯಕ್ತಿಕ ಬದುಕು ಅಥವಾ ಸಾಮಾಜಿಕ ಸ್ಥಾನಮಾನವು ವಿಮರ್ಶೆಯ ಮಾನದಂಡವಾಗಬಾರದು. ಕೃತಿಯೇ ವಿಮರ್ಶೆಯ ಕೇಂದ್ರಬಿಂದುವಾಗಬೇಕು.√೦೨. ಸಂಪೂರ್ಣವಾಗಿ ಓದದೆ ಕೃತಿಯ ವಿಮರ್ಶೆ ಸಲ್ಲದು : ಅಪೂರ್ಣ ಓದು ಅಪೂರ್ಣ ತೀರ್ಪಿಗೆ ಕಾರಣವಾಗುತ್ತದೆ. ಕೃತಿಯ ಆಶಯ, ರಚನೆ, ಭಾಷೆ, ಸಂದರ್ಭ ಮತ್ತು ಅಂತರಾರ್ಥವನ್ನು ಗ್ರಹಿಸದೆ ನೀಡುವ ಯಾವುದೇ ಅಭಿಪ್ರಾಯ ವಿಮರ್ಶೆ ಎಂದು ಅನಿಸಿಕೊಳ್ಳುವುದಿಲ್ಲ.√೦೩. ಹೊಗಳಿಕೆ-ತೆಗಳಿಕೆ ಎರಡನ್ನೂ ಸಮಾನವಾಗಿ ಕಾಣಬೇಕು : ಕಾರಣವಿಲ್ಲದ ಪ್ರಶಂಸೆ ಹೇಗೆ ಅಪಾಯಕಾರಿಯೋ, ಕಾರಣವಿಲ್ಲದ ಟೀಕೆಯೂ ಅಷ್ಟೇ ಅಪಾಯಕಾರಿ. ಗುಣವನ್ನು ಗುಣವೆಂದೂ, ಮಿತಿಯನ್ನು ಮಿತಿಯೆಂದೂ ಹೇಳುವ ಪ್ರಾಮಾಣಿಕತೆಯೇ ವಿಮರ್ಶೆಯ ಧರ್ಮ.√೦೪. ವೈಯಕ್ತಿಕ ಅಭಿರುಚಿಯನ್ನು ಸಾಹಿತ್ಯಿಕ ಮಾನದಂಡವೆಂದು ಭಾವಿಸಲಾಗದು : ‘ನನಗೆ ಇಷ್ಟ’ ಅಥವಾ ‘ನನಗೆ ಇಷ್ಟವಿಲ್ಲ’ ಎಂಬುದು ಓದುಗರ ಪ್ರತಿಕ್ರಿಯೆಯಾಗಬಹುದು; ಆದರೆ ವಿಮರ್ಶೆಯ ನಿರ್ಣಯ ಸಾಹಿತ್ಯಿಕ ಆಧಾರಗಳ ಮೇಲೆ ನಿಲ್ಲಬೇಕು.√೦೫. ಮೊದಲು ಮನನ; ನಂತರ ನಿರ್ಣಯ : ಅರ್ಥೈಸದೆ ನಿರ್ಣಯಿಸುವುದು ಪೂರ್ವಾಗ್ರಹವಾಗುತ್ತದೆ. ಕೃತಿಯು ಏನು ಹೇಳುತ್ತದೆ ಎಂಬುದನ್ನು ಮೊದಲು ಗ್ರಹಿಸಬೇಕು; ಅದು ಎಷ್ಟರ ಮಟ್ಟಿಗೆ ಸಾಧಿಸಿದೆ ಎಂಬುದನ್ನು ನಂತರ ಪರಿಶೀಲಿಸಬೇಕು.√೦೬. ಕೃತಿಯ ಕಾಲ, ಸಮಾಜ ಮತ್ತು ಸಾಹಿತ್ಯಿಕ ಹಿನ್ನೆಲೆಯನ್ನು ಗೌರವಿಸಬೇಕು : ಯಾವುದೇ ಕೃತಿಯನ್ನು ಅದರ ಸಂದರ್ಭದಿಂದ ಬೇರ್ಪಡಿಸಿ ಅಳೆಯಲಾಗದು. ಪ್ರತಿಯೊಂದು ಕೃತಿಯೂ ತನ್ನ ಕಾಲದ, ಸಂಸ್ಕೃತಿಯ ಮತ್ತು ಸಾಹಿತ್ಯ ಪರಂಪರೆಯೊಂದಿಗೆ ಸಂವಾದ ನಡೆಸುತ್ತದೆ.√೦೭. ದೋಷಗಳನ್ನು ಮಾತ್ರವಲ್ಲ, ಗುಣಗಳನ್ನೂ ಗುರುತಿಸಬೇಕು : ವಿಮರ್ಶೆಯ ಗುರಿ ಕೇವಲ ತಪ್ಪುಗಳನ್ನು ಪತ್ತೆ ಹಚ್ಚುವುದಲ್ಲ; ಕೃತಿಯ ನಿಜವಾದ ಸಾಹಿತ್ಯಿಕ ಮೌಲ್ಯವನ್ನು ಕಂಡುಹಿಡಿಯುವುದು. ಮಿತಿಗಳನ್ನು ಸೂಚಿಸುವಷ್ಟೇ ಪ್ರಾಮಾಣಿಕವಾಗಿ ಸಾಧನೆಗಳನ್ನೂ ಗುರುತಿಸಬೇಕು.√೦೮. ಓದುಗರ ಗ್ರಹಿಕೆಯನ್ನು ವಿಸ್ತರಿಸಬೇಕು; ನಮ್ಮ ಅಭಿಪ್ರಾಯಗಳನ್ನು ಹೇರಬಾರದು : ಉತ್ತಮ ವಿಮರ್ಶೆಯು ಓದುಗರಿಗೆ ಯೋಚಿಸಲು ಕಲಿಸುತ್ತದೆ. ಅದು ಅಂತಿಮ ತೀರ್ಪನ್ನು ಹೇರದೆ, ಹೊಸ ಅರ್ಥಗಳ ಕಡೆಗೆ ದಾರಿ ತೋರಿಸುತ್ತದೆ.√೦೯. ಸತ್ಯಕ್ಕೆ ನಿಷ್ಠವಾಗಿರಬೇಕು; ವ್ಯಕ್ತಿಗೆ ಅಲ್ಲ : ಸ್ನೇಹ, ದ್ವೇಷ, ಗುಂಪುಗಾರಿಕೆ, ಸಿದ್ಧಾಂತ ಅಥವಾ ವೈಯಕ್ತಿಕ ಹಿತಾಸಕ್ತಿಗಳು ವಿಮರ್ಶೆಯನ್ನು ನಿಯಂತ್ರಿಸಬಾರದು. ವಿಮರ್ಶಕರ ಮೊದಲ ನಿಷ್ಠೆ ಸಾಹಿತ್ಯಸತ್ಯಕ್ಕೆ ಇರಬೇಕು.√೧೦. ವಿಮರ್ಶೆ ಸಾಹಿತ್ಯಸೇವೆ; ಅಧಿಕಾರವಲ್ಲ : ವಿಮರ್ಶಕರು ನ್ಯಾಯಾಧೀಶರಲ್ಲ; ಸಾಹಿತ್ಯದ ಸಹಯಾತ್ರಿ. ಹಾಗಾಗಿ ವಿಮರ್ಶಕರ ಕೆಲಸ ಲೇಖಕರನ್ನು ಭಯಪಡಿಸುವುದಲ್ಲ, ಸಾಹಿತ್ಯವನ್ನು ಸಮೃದ್ಧಗೊಳಿಸುವುದು. ಆದ್ದರಿಂದ ವಿನಯ, ಸಹೃದಯತೆ, ತಾರ್ಕಿಕತೆ ಮತ್ತು ವಸ್ತುನಿಷ್ಠತೆ ವಿಮರ್ಶಕರ ಶಾಶ್ವತ ಗುಣಗಳಾಗಿರಬೇಕು.      ಈ ದಶಸೂತ್ರಗಳು ವಿಮರ್ಶಕರನ್ನು ಬಂಧಿಸುವ ನಿಯಮಗಳಲ್ಲ; ಅವರನ್ನು ಪ್ರಬುದ್ಧರನ್ನಾಗಿ ಮಾಡುವ ಮಾರ್ಗಸೂಚಿಗಳಾಗಿವೆ. ಇವುಗಳನ್ನು ಅನುಸರಿಸಿದಾಗ ಮಾತ್ರ ವಿಮರ್ಶೆಯು ಪುಸ್ತಕ ಪರಿಚಯದಿಂದ ಭಿನ್ನವಾಗಲು; ಪ್ರಶಂಸೆ ಮತ್ತು ಟೀಕೆಯ ಮಿತಿಗಳನ್ನು ಮೀರಲು ಹಾಗೂ ವೈಯಕ್ತಿಕ ಅಭಿಪ್ರಾಯದಿಂದ ಸಾಹಿತ್ಯಿಕ ಮೌಲ್ಯಮಾಪನದ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ಆಗ ವಿಮರ್ಶೆಯು ಕೇವಲ ಒಂದು ಬರವಣಿಗೆಯ ವಿಧಾನವಾಗಿ ಉಳಿಯುವುದಿಲ್ಲ; ಬದಲಿಗೆ ಸಾಹಿತ್ಯದ ಗುಣಮಟ್ಟವನ್ನು ಕಾಪಾಡುವ ಸಾಂಸ್ಕೃತಿಕ ಹೊಣೆಗಾರಿಕೆಯಾಗುತ್ತದೆ. ಅಂದಾಗ ಮಾತ್ರ ‘ಸೃಷ್ಟಿಯು ಸಾಹಿತ್ಯಕ್ಕೆ ಜೀವ ನೀಡಿದರೆ, ವಿಮರ್ಶೆಯು ಆ ಜೀವಕ್ಕೆ ದಿಕ್ಕು ನೀಡುತ್ತದೆ’ ಎಂಬ ಸೂಕ್ತಿ ನಿಜವೆನಿಸುತ್ತದೆ. ಡಾ. ಮಲ್ಲಿನಾಥ ಎಸ್. ತಳವಾರಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರುಕನ್ನಡ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ Read Post »

ಇತರೆ

“ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಅನುಷ್ಠಾನ ಕಲೆಯ ನವ್ಯತೆ” ಗೊರೂರು ಅನಂತರಾಜು.

ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು,. ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆ ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆಗೊರೂರು ಅನಂತರಾಜು,. ಹಾಸನ.ಹಾಸನದ ಹಾಸನಾಂಬ ಕಲಾಕ್ಷೇತ್ರದ ಹೊರಗೆ ಯುವ ಕಲಾವಿದ ಕೃಷ್ಣಾಚಾರಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಪ್ರದರ್ಶಿತ ಚಿತ್ರಕಲೆ, ಅನುಷ್ಠಾನ ಕಲೆ ಯುವ ಕಲಾವಿದನ ತಾಜಾ ಪ್ರತಿಭೆ ಅನಾವರಣಗೊಳಿಸಿತು.೧೯೯೬ ನವೆಂಬರ್ ೨೭ ಜನ್ಮದಿನದ ಕೃಷ್ಣಾಚಾರಿ ಬ್ಯಾಚುಲರ್ ಆಫ್ ವಿಶುಯಲ್ ಆರ್ಟ್ ಕಲಾವ್ಯಾಸಂಗವನ್ನು ಹಾಸನದ ನಿರ್ಮಲ ಕಾಲೇಜಿನಲ್ಲಿ ಮಾಸ್ಟರ್ ಆಫ್ ವಿಶುಯಲ್ ಆರ್ಟ್ ವ್ಯಾಸಂಗವನ್ನು ಎಂ.ಎಂ.ಕೆ ಕಾಲೇಜು ಕಲ್ಬುರ್ಗಿಯಲ್ಲೂ ಮಾಡಿದ್ದಾರೆ. ೨೦೨೪ರಲ್ಲಿ ಚಾರು ಕಲಾ ಗ್ಯಾಲರಿ ಮೈಸೂರು, ಐಜಿಎನ್ ಸಿಎ ಗ್ರೂಪ್ ಶೋ ಬೆಂಗಳೂರು ಹೀಗೆ ಕೆಲವು ಗುಂಪು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ೨೦೨೩ರಲ್ಲಿ ದೆಹಲಿಯ ಇಂಡಿಯನ್ ಆರ್ಟ್ ಆರ್ಕಿಟೆಕ್ಚರ್ ಡಿಸೈನ್ ಬೈನ್ನಲೆ, ಆಹಮದಬಾದ್‌ನ ಅಬಿರ್ ಫಸ್ಟ್ ಟೇಕ್, ೨೦೨೨ರಲ್ಲಿ ರೂಟ್ ಆಫ್ ಸಾಯಿಲ್ ಏಕವ್ಯಕ್ತಿ ಪ್ರದರ್ಶನ, ಸಿಕೆಪಿ ಬೆಂಗಳೂರು, ೨೦೨೧ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ೫೨ನೇ ಕಲಾಮಹೋತ್ಸವ, ವಿಜಯಪುರ ಕರ್ನಾಟಕ ಲಲಿತಕಲಾ ಅಕಾಡೆಮಿ ೪೨ನೇ ವಾರ್ಷಿಕ ಕಲಾ ಪ್ರದರ್ಶನ, ಬೆಂಗಳೂರಿನ ಶಿಲ್ಪಕಲಾ ಅಕಾಡೆಮಿ ವಾರ್ಷಿಕ ಪ್ರದರ್ಶನ, ಅಮೃತ ದೃಶ್ಯಕಲಾ ಉತ್ಸವ ಪೈಂಟಿAಗ್ ಶೋ..ಹೀಗೆ ಇವರ ಪ್ರದರ್ಶನಗಳು ಸಾಕಷ್ವಟು ನಡೆದಿವೆ. ಹಲವಾರು ಕಲಾ ಕ್ಯಾಂಪ್‌ನಲ್ಲೂ ಭಾಗವಹಿಸಿದ್ದಾರೆ ಅಲ್ಲದೇ ಹತ್ತಾರು ಅವಾರ್ಡ್ ಪಡೆದಿದ್ದಾರೆ. ಹಾಸನದ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಈ ವ್ಯಕ್ತಿಯನ್ನು ಮಾತನಾಡಿಸಿದೆ. ಸಾರ್, ನನ್ನ ಕಲಾ ಅಭ್ಯಾಸವು ಮಣ್ಣು, ಪ್ರಕೃತಿ, ಪರಿಸರ ಮತ್ತು ಮಾನವ ಬದುಕಿನ ನಡುವಿನ ಆಳವಾದ ಸಂಬAಧವನ್ನು ಅನ್ವೇಷಿಸುತ್ತದೆ. ಭೂಮಿ ಕೇವಲ ನಮ್ಮ ಬದುಕಿನ ಆಧಾರವಲ್ಲ. ಅದು ಅನೇಕ ನೆನಪುಗಳು, ಅನುಭವಗಳು, ಸಂಸ್ಕೃತಿಗಳು ಮತ್ತು ಬದಲಾವಣೆಗಳನ್ನು ತನ್ನೊಳಗೆ ಸಂಗ್ರಹಿಸಿಕೊAಡ ಜೀವಂತ ಅಸ್ತಿತ್ವ. ನನ್ನ ಕಲಾಕೃತಿಗಳಲ್ಲಿ ಮಣ್ಣು, ನೈಸರ್ಗಿಕ ಬಣ್ಣಗಳು, ಬೀಜಗಳು, ಎಲೆ, ಬಿದಿರು, ಮರ ಇದ್ದಿಲು, ಟೆರಾಕೋಟಾ, ಕೈಯಿಂದ ತಯಾರಿಸಿದ ಕಾಗದ, ಖಾದಿ ಬಟ್ಟೆ.. ಹೀಗೆ ನೈಸರ್ಗಿಕ ವಸ್ತು ಬಳಸುತ್ತೇನೆ. ಈ ವಸ್ತುಗಳು ನನಗೆ ಕೇವಲ ಕಲಾ ಮಾಧ್ಯಮಗಳಲ್ಲ. ಅವು ತಮ್ಮದೇ ಆದ ಇತಿಹಾಸದ ನೆನಪು ಮತ್ತು ಸಾಂಸ್ಕೃತಿಕ ಅರ್ಥ ಹೊಂದಿರುವ ಜೀವಂತ ಅಂಶ.. ಮಣ್ಣಿನ ಪದರಗಳು, ಭೂ ದೃಶ್ಯಗಳ ಬದಲಾವಣೆ, ಜೀವ ವೈವಿಧ್ಯದ ಕಾಡು ಪರಿಸರ ನಾಶ, ನಗರೀಕರಣ, ಅತಿಯಾದ ಅಭಿವೃದ್ಧಿ, ಮಾನªನ ಪ್ರಕೃತಿಯ ಮೇಲಿನ ಹಸ್ತಕ್ಷೇಪ ಇವು ಇವರ ಕಲೆಯ ಒಳಸುಳಿ ಹುಳಿ ಪೆಟ್ಟು. ಪ್ರಕೃತಿಯೊಂದಿಗೆ ಮಾನವನ ಸಂಬAಧ ಬದಲಾಗುತ್ತಿರುವುದನ್ನು ಕಲಾಕೃತಿಗಳು ಪ್ರಶ್ನಿಸುತ್ತವೆ. ಹಾಗೆಯೇ ನಮ್ಮ ಸುತ್ತಲ ಪರಿಸರವನ್ನು ನಾವು ಮತ್ತೊಮ್ಮೆ ಮಗದೊಮ್ಮೆ ಗಮನಿಸುವಂತೆ ಸೂಚಿಸುತ್ತಲೇ ಹೊಸ ಹೊಳವು ಮನದಲ್ಲಿ ಮೂಡಿಸುತ್ತವೆ.ನೋಡಿ ಅದು ಒಂದು ಓಲ್ಡ್ ಮರದ ಖುರ್ಚಿ. ಬಹುಶ: ಅದರ ಮೇಲೆ ಇವರ ತಂದೆ ಅಥವಾ ತಾತಾ ಕೂರುತ್ತಿದ್ದಾರೇನೋ..? ಅದು ಸರಿ ಅದರ ಮೇಲೇಕೆ ಮಂಜಿನ ಗೆಡ್ಡೆ..? ಎಂದು ಕೇಳಿದರೆ ಅದಕ್ಕೊಂದು ವ್ಯಾಖ್ಯಾನ. ಅಜ್ಜ ಕೂರುತ್ತಿದ್ದ ಖುರ್ಚಿ ಕಾಲ ಕಳೆದಂತೆ ಶಿಥಿಲವಾಗುತ್ತದೆ. ಮಂಜು ಕರಗಿದಂತೆ ಅಜ್ಜನ ನೆನಪು ಕಾಲ ಕಳೆದಂತೆ ಮಾಸುತ್ತಾ ಹೋಗುತ್ತದೆ. ಅರೇ ಹೀಗೂ ಈ ಅನುಷ್ಟಾನ ಕಲೆ ಅರ್ಥೈಸುವುದೇ..? ಎಂದು ಆಶ್ಚರ್ಯಚಿಕಿತನಾದೆ. ಮತ್ತೊಂದು ಕಡೆ ಮೇಲೆ ಪ್ಲಾಸ್ಟಿಕ್ ತೆಳು ಪರದೆಯ ಉಯ್ಯಾಲೆಯಂತೆ ತೂಗುಹಾಕಿರುವಲ್ಲಿ ಅದರ ತುಂಬಾ ಪೇಪರ್ ದೋಣಿಗಳು. ನಾವು ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯ ಮುಂದೆ ಮಣ್ಣಿನ ಗುಂಡಿ ರಸ್ತೆಯಲ್ಲಿ ಅಥವಾ ಹರಿಯುವ ಚರಂಡಿ ನೀರಿನಲ್ಲಿ ಪೇಪರ್ ದೋಣಿ ಅದು ಸಾದಾ ದೋಣಿ, ಕತ್ತಿ ದೋಣಿ ಎಂದೆಲ್ಲಾ ಮಾಡಿ ಹರಿಯಲು ಬಿಟ್ಟು ಖುಷಿ ಪಡುತ್ತಿರಲಿಲ್ಲವೇ ಅದು ನೆನಪಾದರೆ ದೇಸಾಯಿ ಹೇಳಿದÀರು ಕೊಲ್ಲಿ ಯುದ್ಧದಲ್ಲಿ ಹರ್ಮುಜ್ ಜಲಸಂಧಿ ಬಂದ್ ಮಾಡಿ ಅಲ್ಲಿ ಬಾಂಬ್ ಹಾಕಿದ್ದರೆ ಪೆಟ್ರೋಲ್, ಗ್ಯಾಸ್ ಹಡಗುಗಳು ಹೀಗೆ ಮುಳುಗಿ ವುಡ್ ತೇಲುತ್ತಿತ್ತು ಪ್ರಪಂಚ ಫುಡ್ ಗಾಗಿ ಬಾಯಿ ಬಡಿದುಕೊಳ್ಳುತ್ತಿತ್ತು. ಅಣ್ಣಾ ಎತ್ತಣಿಂದ ಎತ್ತಣ ಹೋಲಿಕೆ..!ಓಕೆ ನೀವು ಏನಾದರೂ ಊಹಿಸಿಕೊಳ್ಳಿ, ಏನಾದರೂ ಹೇಳಿಕೊಳ್ಳಿ ನಿಮ್ಮ ಚಿಂತನೆ ನಿಮಗೆ ಬಿಟ್ಟಿದ್ದು ಎಂದು ಮೈಕ್ ಹಿಡಿದು ಎಲ್ಲರೂ ಶಾಂತವಾಗಿರಿ ಎನ್ನುತ್ತಿದ್ದರು ಕೃಷ್ಞಾಚಾರಿಯವರು. ಏಕೆಂದರೆ ಅಂದು ಅದೇ ಕಲಾಭವನದಲ್ಲಿ ಒಳಗೆ ವಾರ್ಷಿಕೋತ್ಸವ ಏರ್ಪಾಡು ನಡೆಯುತ್ತಿದ್ದರೆ, ಹೊರಗೆ ಮಾಸ್ತರುಗಳ ಉಭಯ ಕುಶಲೋಪರು ಮಾತುಕತೆಗಳು ನಡೆದಿದ್ದವು. ಮೈಕ್ ನಲ್ಲೇ ಜೋರಾಗಿ ಹೇಳಿ ಕೇಳಿಸಿಕೊಳ್ಳುತ್ತೇವೆ ಎಂದೆ.ನಾನು ಬಳಸುವ ನೈಸರ್ಗಿಕ ವಸ್ತುಗಳ ವಿನ್ಯಾಸ, ವಿನ್ಯಾಸದಲ್ಲಿನ ಸರಳತೆ ಮತ್ತು ಅವುಗಳ ಸಹಜ ಗುಣಗಳನ್ನು ಉಳಿಸಿಕೊಂಡು ಸಮಕಾಲೀನ ದೃಶ್ಯಭಾಷೆಯನ್ನು ರೂಪಿಸಲು ಪ್ರಯತ್ನಿಸುತ್ತೇನೆ. ನನ್ನ ಕಲಾಕೃತಿಗಳು ಒಂದು ನಿರ್ದಿಷ್ಠ ಕಥೆಯನ್ನು ಹೇಳವುದಕ್ಕಿಂತಲೂ ಪ್ರೇಕ್ಷಕರಲ್ಲಿ ನೆನಪು ಪ್ರಶ್ನೆ ಮತ್ತು ಅನುಭವಗಳನ್ನು ಹುಟ್ಟಿಸುವ ಒಂದು ಮುಕ್ತ ಸಂವಾದದAತೆ ಇರಬೇಕೆಂದು ಬಯಸುತ್ತೇನೆ..ಸರಿ, ಅಲ್ಲೊಂದು ಬಾವಿಯಲ್ಲಿ ನೀರು ಸೇದುವ ಹಗ್ಗವನ್ನು ಗುಪ್ಪೆಯಾಗಿ ಹುತ್ತದಂತೆ ಮಾಡಿ ಹಗ್ಗದ ತುದಿಗಳಿಗೆ ಕೆಂಪುಬಣ್ಣ ಹಚ್ಚಿದ್ದೀರಲ್ಲಾ ಇದರ ಕಥೆಯೇನು.. ? ಎಂದು ಕೇಳಿದೆ. ಅದು ಒಂದು ಕಡೆಯಿಂದ ನೋಡಿದರೆ ಯಾರೋ ಮುನಿವರ್ಯ ಮನೆಯಲ್ಲಿ ಧರ್ಮಪತ್ನಿಯೊಂದಿಗೆ ಮುನಿಸಿಕೊಂಡು ಕಾಡಿನಲ್ಲಿ ತಪಸ್ಸಿಗೆ ಕುಳಿತು ಕರ್ಮ ಕಳೆದುಕೊಳ್ಳುವಂತೆ ಕಂಡಿತು. ಈ ಹಗ್ಗಕ್ಕೆ ಕೊನೆ ಎಲ್ಲ ಅನಂತರಾಜು.. ಎಂದು ಚಿತ್ರಕಲಾ ಗುರು ಕಾರದಕಟ್ಟಿ ಹೇಳಿದರು. ಋಷಿ ಮೂಲ ಗುರು ಮೂಲ ಹುಡುಕಬಾರದು ತೆಪ್ಪಗಾದೆ. ನೋಡಿ ಈ ಅನುಷ್ಠಾನ ಕಲೆಗೆ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದು ಗುರುಗಳು ಶಿಷ್ಯನ ಕಲೆಗಾರಿಕೆ ಕಡೆ ಬೆರಳು ತೋರಿಸಿದರು. ಕಾರದಕಟ್ಟಿ ನಿರ್ಮಲ ಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಈಗ ನಿವೃತ್ತರು. ಇದು ಮಣ್ಣಿನಲ್ಲಿ ರೂಪಿಸಿದ ಅನುಷ್ಠಾನ ಕಲೆ ಎಂದರು. ಅಕಾಡೆಮಿಯೇ ಪ್ರಶಸ್ತಿ ಕೊಟ್ಟಮೇಲೆ ಕಲೆಯ ಗೂಢರ್ಥ ಕೇಳಲುಂಟೆ..? ಶಿಷ್ಯ ಮಾತು ಮುಂದುವರೆಸಿದರು. ನನ್ನ ಕಲಾ ಪ್ರಯಾಣದ ಮೂಲಕ ಭೂಮಿ ನಮ್ಮ ಹೊರಗಿನ ಆಸ್ತಿತ್ವವಲ್ಲ. ಅದು ನಮ್ಮ ಬದುಕಿನ ಅವಿಭಾಜ್ಯ ಭಾಗ ಎಂಬ ಅರಿವನ್ನು ಮೂಡಿಸುವುದು ನನ್ನ ಉದ್ದೇಶ. ಮಣ್ಣು ಮತ್ತು ಪ್ರಕೃತಿಯೊಂದಿಗೆ ನನ್ನ ನಿರಂತರ ಸಂವಾದದ ಮೂಲಕ ಕಳೆದು ಹೋಗುತ್ತಿರುವ ಪರಿಸರ, ಸಂಸ್ಕೃತಿ ನೆನಪುಗಳನ್ನು ಕಲೆಯ ಮೂಲಕ ದಾಖಲಿಸಿ ಅವುಗಳೊಂದಿಗೆ ಹೊಸ ಸಂಬAಧವನ್ನು ಕಟ್ಟಿಕೊಳ್ಳುವ ಪ್ರಯತ್ನ ಮುಂದುವರಿಸುತ್ತೇನೆ.. ಗುಡ್ ಲಕ್ ಎಂದೆ. ಬ್ಯಾಡ್ ಲಕ್ ಎಂದರೆ ಅದೇ ರೀತಿ ಮತ್ತೊಂದು ಅನುಷ್ಠಾನ ಕಲೆ ಪಕ್ಕದಲ್ಲಿತ್ತು. ಒಂದು ಹಸುವಿನ ಹೊಟ್ಟೆಯಲ್ಲಿ ಕರಗದ ಪ್ಲಾಸ್ಟಿಕ್ ಚೀಲಗಳು, ಹಾಲು ಕರೆಯುವ ಯಂತ್ರ ಗೋಮಾತೆಯ ಕೆಚ್ಚಲಿನಿಂದ ಹಾಲನ್ನು ಬಕೇಟಿಗೆ ಕರೆಯುತ್ತಿತ್ತು. ಈ ಕಲೆಯ ಕೆಳಗಿನ ದೃಶ್ಯವು ಆನೆಯ ಹೊಟ್ಟೆಯಲ್ಲಿ ಕಲ್ಲುಗಳ ರಸ್ತೆ. ಬಹುಶ: ಅದು ಎತ್ತಿನಹೊಳೆ ರಸ್ತೆ ಇರಬೇಕೆನಿಸಿತು. ಕೇಳಲಿಲ್ಲ ಅಷ್ಟೇ..! ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಅನುಷ್ಠಾನ ಕಲೆಯ ನವ್ಯತೆ” ಗೊರೂರು ಅನಂತರಾಜು. Read Post »

ಇತರೆ

ಆರಂಭವಾಗಲಿ ಬದಲಾವಣೆ ನಮ್ಮಿಂದಲೇ……ಜಯಶ್ರೀ ಜೆ ಅಬ್ಬಿಗೇರಿ

ಪ್ರೇರಣಾ ಸಂಗಾತಿ ಜಯಶ್ರೀ ಜೆ ಅಬ್ಬಿಗೇರಿ ಆರಂಭವಾಗಲಿ ಬದಲಾವಣೆ  ನಮ್ಮಿಂದಲೇ…… ನಾವೆಲ್ಲ ಜಗತ್ತು ಬದಲಾಗಬೇಕು ಎಂದು ಬಯಸುತ್ತೇವೆ.ಆದರೆ ನಾವು ಬದಲಾಗಲು ಬಯಸುವುದಿಲ್ಲ.ಈ ಮಾತು ವಿಚಿತ್ರ ಆದರೂ ಸತ್ಯ. ನೀನು, ಮೊದಲು ಆ ಬದಲಾವಣೆಯಾಗಿ ಬದಲಾಗು” (Be the change you want to see in the world) ಎಂಬ ಮಹಾತ್ಮ ಗಾಂಧೀಜಿಯವರ ಈ ಮಾತು ಕೇವಲ ಘೋಷಣೆಯಲ್ಲ; ಅದು ಬದುಕಿನ ಪರಮ ಸತ್ಯ.ನಾವು ಜಗತ್ತನ್ನು ದೂಷಿಸುವ ಮುನ್ನ ನಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಲು ಕಲಿಯಬೇಕಿದೆ. ಒಂದು ಪುಟ್ಟ ಪ್ರೇರಣಾದಾಯಕ ಕಥೆಯೊಂದನ್ನು ಓದಿದ್ದುನೆನಪಾಗುತ್ತಿದೆ. ನೀವೂ ಓದಿ. ಒಮ್ಮೆ ಕಡಲತೀರದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿತ್ತು. ಅಲೆಗಳ ಆರ್ಭಟಕ್ಕೆ ಸಿಲುಕಿ ಲಕ್ಷಾಂತರ ನಕ್ಷತ್ರ ಮೀನುಗಳು  ತೀರದ ಮರಳಿನ ಮೇಲೆ ಬಂದು ಬಿದ್ದಿದ್ದವು. ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆ ಅವು ನೀರಿಲ್ಲದೆ ಒದ್ದಾಡಿ ಸಾಯತೊಡಗಿದವು.ಅದೇ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ವೃದ್ಧ, ಮರಳಿನ ಮೇಲೆ ಬಿದ್ದಿದ್ದ ಮೀನುಗಳನ್ನು ನೋಡಿ ನಿಟ್ಟುಸಿರು ಬಿಟ್ಟರು. ಆದರೆ, ಅಷ್ಟರಲ್ಲೇ ಒಬ್ಬ ಪುಟ್ಟ ಬಾಲಕ ಅಲ್ಲಿಗೆ ಬಂದ. ಅವನು ಮರಳಿನ ಮೇಲಿದ್ದ ಮೀನುಗಳನ್ನು ಒಂದೊಂದಾಗಿ ಎತ್ತಿ ಪ್ರೀತಿಯಿಂದ ಸಮುದ್ರದ ನೀರಿಗೆ ಎಸೆಯತೊಡಗಿದ. ಇದನ್ನು ನೋಡಿದ ವೃದ್ಧ ಬಾಲಕನ ಹತ್ತಿರ ಬಂದು, “ಮಗುವೇ, ಇಲ್ಲಿ ಲಕ್ಷಾಂತರ ಮೀನುಗಳಿವೆ. ನೀನು ಕೆಲವೇ ಕೆಲವು ಮೀನುಗಳನ್ನು ಉಳಿಸಿದರೆ ಈ ವಿಶಾಲ ಜಗತ್ತಿಗೆ ಏನು ವ್ಯತ್ಯಾಸವಾಗುತ್ತದೆ?” ಎಂದು ಕೇಳಿದ. ಬಾಲಕ ನಸುನಕ್ಕು, ಮತ್ತೊಂದು ಮೀನನ್ನು ಕೈಗೆತ್ತಿಕೊಂಡು ನೀರಿಗೆ ಎಸೆದ. ನಂತರ ವೃದ್ಧರ ಕಣ್ಣುಗಳನ್ನು ದಿಟ್ಟಿಸಿ ನೋಡಿ, “ಇಡೀ ಜಗತ್ತಿಗೆ ವ್ಯತ್ಯಾಸವಾಗದೇ ಇರಬಹುದು, ಆದರೆ ನಾನು ನೀರಿಗೆ ಎಸೆದ ಆ ಒಂದು ಮೀನಿನ ಜೀವಕ್ಕೆ ಇಡೀ ಜಗತ್ತೇ ಬದಲಾದಂತಾಯಿತಲ್ಲವೇ?” ಎಂದನು.ವೃದ್ಧನಿಗೆ ತನ್ನ ತಪ್ಪಿನ ಅರಿವಾಯಿತು. ಅವನೂ ಬಾಲಕನೊಂದಿಗೆ ಕೈಜೋಡಿಸಿದನು. “ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಹಬ್ಬ.” ಎಂಬಂತೆ, ಆ ಪುಟ್ಟ ಬಾಲಕನ ಒಂದು ಸಣ್ಣ ಪ್ರಯತ್ನದಹೆಜ್ಜೆ ಅಂದು ಸಾವಿರಾರು ಜೀವಗಳನ್ನು ಉಳಿಸಿತು. ಮುನ್ನುಡಿಬದಲಾವಣೆಗೆ ನಾವೇಮುನ್ನುಡಿ ಬರೆಯಬೇಕು.ಬದಲಾವಣೆ ನಮ್ಮಿಂದಲೇ ನಾವು ಪ್ರತಿದಿನ ಸಮಾಜದಲ್ಲಿನ ಭ್ರಷ್ಟಾಚಾರ, ಸ್ವಾರ್ಥ, ಪರಿಸರ ಮಾಲಿನ್ಯ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತೇವೆ.ಸಮಾಜವನ್ನು,ವ್ಯವಸ್ಥೆಯನ್ನು ದೂಷಿಸುವುದು ಹೂವಿನ ಮೇಲಿನ ಇಬ್ಬನಿಯನ್ನು ಒರೆಸಿದಷ್ಟೇ ಸುಲಭ. ಆದರೆ, “ನಾನು ಸಮಾಜಕ್ಕೆ ಏನು ನೀಡುತ್ತಿದ್ದೇನೆ?” ಎಂದು ಯೋಚಿಸಿ, ಸಮಾಜಕ್ಕೆ ಕೊಡುಗೆ ನೀಡುವುದು ತುಂಬಾ ಕಷ್ಟದ ಕೆಲಸ.ಹಾಗೆ ನೋಡಿದರೆ ಅಂಥವರ ಸಂಖ್ಯೆಯುವಿರಳ. “ಕತ್ತಲೆಯನ್ನು ಶಪಿಸುತ್ತಾ ಕೂರುವುದಕ್ಕಿಂತ ಒಂದು ಪುಟ್ಟ ಹಣತೆಯನ್ನು ಹಚ್ಚುವುದು ಲೇಸು.” ಮನೆ ಕಸ ನಮ್ಮ ಮನೆ ಮತ್ತುಮನೆಯ ಮುಂದೆ ನಾವು ಕಸ ಗೂಡಿಸಿ ಪಕ್ಕದ ಮನೆಯವರ ಮುಂದೆ ಚೆಲ್ಲಿದರೆ ಏನು ಮಾಡಿದಂತಾಯಿತು? ಕಸ ಗುಡಿಸಿದ್ದು ವ್ಯರ್ಥ.ಆ ಕಸ ಗಾಳಿಗೆ ಎಲ್ಲೆಲ್ಲೂ ಹಾರಿ ಹೋಗುತ್ತದೆ.ಊರಿನ ಅಂಗಳಮತ್ತಷ್ಟು ಹೊಲಸಾಗುತ್ತದೆ.ನಾವು ಕಸವನ್ನು ಡಬ್ಬಿಗೆ ಹಾಕಿದರೆಇಡೀ ನಗರವೇ ಸ್ವಚ್ಛವಾಗುತ್ತದೆ. ಪ್ರತಿಬಿಂಬ ನಾವು ಇತರರಿಗೆ ಗೌರವ ನೀಡಿದರೆ, ಅವರು ನಮಗೆ ಗೌರವ ನೀಡುತ್ತಾರೆ. ಗೌರವ ಕೇಳಿ ಪಡೆಯುವುದಲ್ಲ. ಅದು ಕೊಟ್ಟು ಪಡೆಯುವಂಥದ್ದು.ನಾವು ಇತರರಿಗೆ ಪ್ರೀತಿ ನೀಡಿದರೆಸಮಾಜ ನಮಗೆ ಪ್ರೀತಿಯನ್ನು ಉಡುಗೊರೆಯಾಗಿ ನೀಡುತ್ತದೆ. ಸಮಾಜ ಎಂಬುದು ನಮ್ಮದೇ ಪ್ರತಿಬಿಂಬ. ನಾವು ಸುಂದರವಾಗಿದ್ದರೆ ಜಗತ್ತೂ ಸುಂದರವಾಗಿಯೇ ಕಾಣುತ್ತದೆ. ಪ್ರಾಜ್ಞರ ದೃಷ್ಟಿ ಕುವೆಂಪು ಹೇಳಿದಂತೆ: “ಮನುಜಮತ, ವಿಶ್ವಪಥದತ್ತ ಸಾಗಬೇಕಾದರೆ ಮೊದಲು ವ್ಯಕ್ತಿತ್ವದ ವಿಕಾಸವಾಗಬೇಕು. ನಿನ್ನ ಅಂತರಂಗದ ದೀಪವನ್ನು ಮೊದಲು ಹಚ್ಚಿಕೋ, ಜಗತ್ತಿನ ಕತ್ತಲೆ ತಾನಾಗಿಯೇ ಸರಿಯುತ್ತದೆ. “ಡಿ. ವಿ.ಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ :”ತಿದ್ದಿಕೊಳು ನಿನ್ನ ಒರಟು ನಡೆನುಡಿಗಳನು,ಜಗವ ತಿದ್ದುವ ಸಾಹಸಕೆ ಹೋಗದಿರು ಮನುಜ… ಎಂದಿದ್ದಾರೆ. “ಸ್ವಾಮಿ ವಿವೇಕಾನಂದ: “ನಿನ್ನನ್ನು ನೀನು ನಂಬು. ಇಡೀ ಜಗತ್ತನ್ನು ಬದಲಾಯಿಸುವ ಶಕ್ತಿ ನಿನ್ನ ಒಂದು ಸಣ್ಣ ಸಂಕಲ್ಪದಲ್ಲಿದೆ.” ಹರಿಕಾರ “ಬದಲಾವಣೆಯ ಹಾದಿಯಲ್ಲಿ ನೀ ಮೊದಲ ಹೆಜ್ಜೆಯಾಗು, ಒಣಗಿದ  ಮರಭೂಮಿಗೆ ನೀ ತಂಪಿನ ಹನಿಯಾಗು.ದೂಷಿಸಬೇಡ ಜಗದ ಕತ್ತಲನು ಮೌನದಿ ಕೊರಗಿ,ಉರಿಯುವ ಹಣತೆಯಾಗಿ ನೀ ಜಗಕೆ ಬೆಳಕಾಗು.ಕಲ್ಲನ್ನು ನುಣುಪುಗೊಳಿಸುವ ಶಿಲ್ಪಿಯಂತೆ, ನಿನ್ನ ನಡೆ-ನುಡಿ ಇರಲಿ. ಈ ಕಾವ್ಯದಂತೆ.ಜಗವ ಗೆಲ್ಲುವ ಆತುರ ಬಿಡು ಓ ಗೆಳೆಯಾ,ನಿನ್ನ ನೀ ಗೆದ್ದರೆ ಜಗವೇ ನಿನ್ನಂತೆ…!! ಕೊನೆ ಮಾತು ಜಗತ್ತನ್ನು ಬದಲಾಯಿಸಲು ನಾವ್ಯಾರೂ ಮೇಧಾವಿಗಳು ಆಗಬೇಕೆಂದಿಲ್ಲಸಿರಿವಂತರು ಆಗಬೇಕೆಂದಿಲ್ಲ.ಅಗತ್ಯವಿದ್ದವರಿಗೆಒಂದು ಪುಟ್ಟ ಸಹಾಯ,ನೊಂದವರಿಗೆ ಹೆದರದಿರಿ, ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಒಂದು ಸಾಂತ್ವನದ ಮಾತು.ಮುಖದ ಮೇಲೊಂದು ಸದಾ ಸಣ್ಣದೊಂದುನಗು ಸಾಕು.ಕೇವಲ ಒಬ್ಬ ಒಳ್ಳೆಯ ‘ಮನುಷ್ಯ’ನಾದರೆ ಸಾಕು. ನಾವು ಬಯಸುವ ಪ್ರೀತಿ, ಶಾಂತಿ, ಕರುಣೆ ಮತ್ತು ಪ್ರಾಮಾಣಿಕತೆ ಮೊದಲು ನಮ್ಮ ದಿನನಿತ್ಯದ ಬದುಕಿನಲ್ಲಿ ಮೂಡಿಬರುತ್ತದೆ.ನಮ್ಮ ಕಿರುನಗೆ ಒಬ್ಬರ ದುಃಖವನ್ನು ಮರೆಸಬಹುದು, ನಮ್ಮ ಒಂದು ಒಳ್ಳೆಯ ಮಾತು ಧೃತಿಗೆಟ್ಟ ಜೀವಕ್ಕೆ ಆಸರೆಯಾಗಬಹುದು. ಪೀಠಿಕೆ ಬದಲಾವಣೆಯ ಮಹಾಕಾವ್ಯಕ್ಕೆ ನಾವೇ ಪೀಠಿಕೆ ಬರೆಯಬೇಕು.ವಿನಃ ಬೇರೆ ಯಾರೋ ಬರೆಯುತ್ತಾರೆಂದು ಕಾಯುತ್ತ ವ್ಯವಸ್ಥೆಯನ್ನು ಬೈಯುತ್ತಾ ಕುಳಿತುಕೊಳ್ಳಬಾರದು.ಹಾಗಾದರೆ ತಡವೇಕೆ ಇಂದಿನಿಂದಲೇ ನಮ್ಮಿಂದಲೇ ಆಗಲಿ ಬದಲಾವಣೆಯಆರಂಭ. ಸಂತಸ ಸಮೃದ್ಧಿ ತರಲಿ  ಶುಭಾರಂಭ. ಜಯಶ್ರೀ ಜೆ ಅಬ್ಬಿಗೇರಿ

ಆರಂಭವಾಗಲಿ ಬದಲಾವಣೆ ನಮ್ಮಿಂದಲೇ……ಜಯಶ್ರೀ ಜೆ ಅಬ್ಬಿಗೇರಿ Read Post »

ಇತರೆ

“ಭಾಷೆ ಉಳಿದರೆ ಬದುಕಿನ ಬೇರು ಉಳಿಯುತ್ತದೆ” ಲೇಖನ ಕೆ.ಎಂ. ಕಾವ್ಯ ಪ್ರಸಾದ್

ಭಾಷಾ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ಭಾಷೆ ಉಳಿದರೆಬದುಕಿನ ಬೇರುಉಳಿಯುತ್ತದೆ” ಕೆಲವೊಮ್ಮೆ ನಾವು ಕಳೆದುಕೊಳ್ಳುತ್ತಿರುವುದು ಕಣ್ಣಿಗೆ ಕಾಣಿಸುವುದಿಲ್ಲ. ಮನೆಯ ಹಳೆಯ ವಸ್ತುವೊಂದು ಕಳೆದುಹೋದರೆ ಅದರ ಜಾಗ ಖಾಲಿಯಾಗಿರುವುದು ಕಾಣುತ್ತದೆ. ಮರದ ನೆರಳು ಕಡಿಮೆಯಾದರೆ ಅದರ ಕೊರತೆ ಗೊತ್ತಾಗುತ್ತದೆ. ಆದರೆ ಮನೆಯೊಳಗೆ ನಿಧಾನವಾಗಿ ಒಂದು ಭಾಷೆ ಕಡಿಮೆಯಾಗುತ್ತಿದ್ದರೆ, ಅದರ ನೋವು ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ಒಂದು ದಿನ ಅಜ್ಜಿ ಹೇಳುತ್ತಿದ್ದ ಗಾದೆ ಅರ್ಥವಾಗುವುದಿಲ್ಲ. ಮತ್ತೊಂದು ದಿನ ಹಳೆಯ ಜನಪದ ಹಾಡಿನ ಪದಗಳು ಅಪರಿಚಿತವಾಗುತ್ತವೆ. ಇನ್ನೊಂದು ದಿನ ಮನೆಯಲ್ಲೇ ಮಕ್ಕಳಿಗೆ ಕೆಲವು ಕನ್ನಡ ಪದಗಳನ್ನು ಹೇಳಿದರೆ ಅವರು ಅದರ ಬದಲಿಗೆ ಬೇರೆ ಭಾಷೆಯ ಪದವನ್ನು ಹುಡುಕುತ್ತಾರೆ. ಹೀಗೆ ಭಾಷೆ ನಮ್ಮ ಬದುಕಿನಿಂದ ಒಂದೇ ದಿನದಲ್ಲಿ ಹೊರಗೆ ಹೋಗುವುದಿಲ್ಲ; ಮೊದಲು ಅದು ನಮ್ಮ ಬಳಕೆಯಿಂದ ದೂರವಾಗುತ್ತದೆ. ನಂತರ ನಮ್ಮ ನೆನಪಿನಿಂದ. ಇಲ್ಲಿಯೇ ನಾವು ಒಮ್ಮೆ ನಿಂತು ಯೋಚಿಸಬೇಕಾಗಿದೆ. ಭಾಷೆ ಎಂದರೆ ನಿಜವಾಗಿ ಏನು? ಅದು ಅಕ್ಷರಗಳ ಜೋಡಣೆಯೇ? ವ್ಯಾಕರಣದ ನಿಯಮಗಳೇ? ಪರೀಕ್ಷೆಯಲ್ಲಿ ಬರೆಯುವ ವಿಷಯವೇ? ನನ್ನ ದೃಷ್ಟಿಯಲ್ಲಿ ಭಾಷೆ ಅದಕ್ಕಿಂತ ದೊಡ್ಡದು. ಒಬ್ಬ ತಾಯಿ ಮಗುವನ್ನು ಕರೆಯುವ ರೀತಿ ಭಾಷೆ. ಒಬ್ಬ ರೈತ ಮಣ್ಣನ್ನು ಕರೆಯುವ ಪದ ಭಾಷೆ. ಮಳೆ ಬಂದಾಗ ಹಳ್ಳಿಯ ಹಿರಿಯನ ಬಾಯಿಂದ ಹೊರಬರುವ ಮಾತು ಭಾಷೆ. ಅಜ್ಜಿ ಹೇಳುವ ಕಥೆಯಲ್ಲಿ ಉಳಿದಿರುವ ಕಾಲ ಭಾಷೆ. ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಭಾಷೆ. ಸಂತೋಷದಲ್ಲಿ ನಗುವಾಗಲೂ, ದುಃಖದಲ್ಲಿ ಮೌನವಾಗುವಾಗಲೂ ನಮ್ಮೊಳಗೆ ನಡೆಯುವ ಮಾತುಕತೆ ಭಾಷೆಯೇ. ಅದಕ್ಕಾಗಿಯೇ ಮಾತೃಭಾಷೆಯನ್ನು ಕಳೆದುಕೊಳ್ಳುವುದು ಎಂದರೆ ಒಂದು ವಿಷಯವನ್ನು ಮರೆತುಬಿಡುವುದು ಮಾತ್ರವಲ್ಲ; ನಮ್ಮ ಬದುಕನ್ನು ಅರ್ಥಮಾಡಿಕೊಳ್ಳಲು ಬಳಸುತ್ತಿದ್ದ ಒಂದು ಕಿಟಕಿಯನ್ನು ಮುಚ್ಚಿಕೊಳ್ಳುವುದು. ಇಂದು ಜಗತ್ತು ನಮ್ಮ ಮುಂದೆ ದೊಡ್ಡದಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು. ಅವರಿಗೆ ಇಂಗ್ಲಿಷ್ ಬರಬೇಕು. ಬೇರೆ ರಾಜ್ಯಗಳ ಜನರೊಂದಿಗೆ ಮಾತನಾಡಲು ಬೇರೆ ಭಾಷೆಗಳು ಬೇಕು. ಉದ್ಯೋಗದ ಜಗತ್ತಿನಲ್ಲಿ ಹಲವು ಭಾಷೆಗಳ ಜ್ಞಾನ ಅವಕಾಶಗಳನ್ನು ಹೆಚ್ಚಿಸಬಹುದು. ಇವೆಲ್ಲವೂ ಸತ್ಯ. ಆದರೆ ಇನ್ನೊಂದು ಸತ್ಯವನ್ನೂ ನಾವು ಒಪ್ಪಿಕೊಳ್ಳಬೇಕು. ಹೊಸ ಭಾಷೆ ಕಲಿಯಲು ಹಳೆಯ ಭಾಷೆಯನ್ನು ಬಿಟ್ಟುಬಿಡಬೇಕಿಲ್ಲ. ಮನೆಯ ಬಾಗಿಲು ತೆರೆದಿದ್ದರೆ ಹೊರಗಿನ ಜಗತ್ತನ್ನು ನೋಡಬಹುದು. ಆದರೆ ಹೊರಗೆ ಹೋಗಿ ಎಷ್ಟೇ ದೂರ ನಡೆದರೂ ಮರಳಿ ಬರುವ ಮನೆ ಇರಬೇಕು. ಮಾತೃಭಾಷೆ ಆ ಮನೆಯಂತದ್ದು. ಮಗುವಿಗೆ ಇಂಗ್ಲಿಷ್ ಕಲಿಸಬೇಡಿ ಎನ್ನುವುದು ಪರಿಹಾರವಲ್ಲ. ಬದಲಾಗಿ, ಇಂಗ್ಲಿಷ್ ಕಲಿಸುತ್ತಲೇ ಕನ್ನಡದಲ್ಲಿ ಯೋಚಿಸುವ, ಓದುವ, ಬರೆಯುವ ಮತ್ತು ತನ್ನ ಭಾವನೆಗಳನ್ನು ಹೇಳುವ ಸಾಮರ್ಥ್ಯವನ್ನು ಬೆಳೆಸಬೇಕು. ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಶತ್ರುವನ್ನಾಗಿ ಮಾಡುವುದು ನಮ್ಮದೇ ಸೃಷ್ಟಿಸಿದ ಸಮಸ್ಯೆ. ನಮ್ಮ ಶಿಕ್ಷಣದ ದೊಡ್ಡ ಪ್ರಶ್ನೆಯೂ ಇದೇ. ಮಗುವಿಗೆ ಪಾಠ ಅರ್ಥವಾಗಬೇಕೇ, ಅಥವಾ ಪಾಠದ ಭಾಷೆ ಮಾತ್ರ ಸರಿಯಾಗಿ ಕಾಣಬೇಕೇ? ಮಗುವಿಗೆ ಒಂದು ವಿಷಯವನ್ನು ತನ್ನ ಪರಿಚಿತ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಅದರ ಪ್ರಶ್ನೆಗಳು ಇನ್ನಷ್ಟು ಆಳವಾಗಬಹುದು. ಅದು ಅನುಮಾನ ಕೇಳಬಹುದು. ತನ್ನದೇ ಉದಾಹರಣೆ ಕೊಡಬಹುದು. ಕಲಿತ ವಿಷಯವನ್ನು ತನ್ನ ಬದುಕಿನೊಂದಿಗೆ ಜೋಡಿಸಬಹುದು. ಮಾತೃಭಾಷೆ ಆಲೋಚನೆಗೆ ಒಂದು ನೆಲ ಒದಗಿಸುತ್ತದೆ ಎಂಬುದನ್ನು ಇತ್ತೀಚಿನ ಶಿಕ್ಷಣ ಚರ್ಚೆಗಳೂ ಗುರುತಿಸಿವೆ. ಆದರೆ ನಮ್ಮಲ್ಲಿ ಕೆಲವೊಮ್ಮೆ ಭಾಷೆಯೇ ಬುದ್ಧಿವಂತಿಕೆಯ ಅಳತೆಯಾಗಿಬಿಡುತ್ತದೆ. ಮಗುವಿಗೆ ಇಂಗ್ಲಿಷ್ ಚೆನ್ನಾಗಿ ಬಂದರೆ ಅದು ಬುದ್ಧಿವಂತ ಮಗು ಎಂದುಕೊಳ್ಳುತ್ತೇವೆ. ಕನ್ನಡದಲ್ಲಿ ಸರಳವಾಗಿ ಮಾತನಾಡಿದರೆ ಅದರ ಸಾಮರ್ಥ್ಯವನ್ನು ಅಷ್ಟಾಗಿ ಗಮನಿಸುವುದಿಲ್ಲ. ಇದು ಭಾಷೆಯ ಬಗ್ಗೆ ಇರುವ ನಮ್ಮ ಮನೋಭಾವದ ಸಮಸ್ಯೆ. ಭಾಷೆ ಒಂದು ಸಾಧನ. ಬುದ್ಧಿವಂತಿಕೆ ಅದಕ್ಕಿಂತ ವಿಶಾಲವಾದುದು. ಒಂದು ಮಗು ತನ್ನ ತಾಯಿಯೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾ ಜಗತ್ತಿನ ಬಗ್ಗೆ ದೊಡ್ಡ ಪ್ರಶ್ನೆ ಕೇಳಬಹುದು. ಮತ್ತೊಬ್ಬ ಮಗು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಅದೇ ಪ್ರಶ್ನೆ ಕೇಳಬಹುದು. ಪ್ರಶ್ನೆಯ ಮೌಲ್ಯವನ್ನು ಭಾಷೆ ನಿರ್ಧರಿಸುವುದಿಲ್ಲ. ಆದ್ದರಿಂದ ಮಕ್ಕಳನ್ನು ಭಾಷೆಯ ಹೆಸರಿನಲ್ಲಿ ಅಳೆಯುವುದನ್ನು ನಿಲ್ಲಿಸಬೇಕು. ಇನ್ನೊಂದು ಕಡೆ, ಕನ್ನಡವನ್ನು ಉಳಿಸುವ ಜವಾಬ್ದಾರಿಯನ್ನು ಕೇವಲ ಶಾಲೆಗಳ ಮೇಲೆ ಹಾಕಿದರೂ ಸಾಲದು. ಮೊದಲ ಶಾಲೆ ಮನೆ. ಮನೆಯಲ್ಲೇ ಕನ್ನಡ ಪುಸ್ತಕ ಓದದಿದ್ದರೆ, ಮಕ್ಕಳೊಂದಿಗೆ ಕನ್ನಡದಲ್ಲಿ ವಿಚಾರಗಳನ್ನು ಹಂಚಿಕೊಳ್ಳದಿದ್ದರೆ, ಹಿರಿಯರ ಮಾತನ್ನು ಕೇಳಿಸದಿದ್ದರೆ, ನಂತರ ಶಾಲೆಯಲ್ಲಿ ಭಾಷಾಭಿಮಾನವನ್ನು ಪಾಠವಾಗಿ ಕಲಿಸುವುದರಿಂದ ಮಾತ್ರ ಭಾಷೆ ಉಳಿಯುವುದಿಲ್ಲ. ಮಗುವಿಗೆ ಕನ್ನಡವನ್ನು ಪ್ರೀತಿಸು ಎಂದು ಹೇಳುವುದಕ್ಕಿಂತ, ಕನ್ನಡದಲ್ಲಿ ಒಂದು ಕಥೆ ಹೇಳಿ. ಕನ್ನಡ ಓದು ಎಂದು ಹೇಳುವುದಕ್ಕಿಂತ, ಒಳ್ಳೆಯ ಕನ್ನಡ ಪುಸ್ತಕವನ್ನು ಅದರ ಕೈಗೆ ಕೊಡಿ. ಕನ್ನಡ ಮಾತನಾಡು ಎಂದು ಒತ್ತಾಯಿಸುವುದಕ್ಕಿಂತ, ಮನೆಯಲ್ಲೇ ಕನ್ನಡದಲ್ಲಿ ಮಾತನಾಡಲು ಒಂದು ಸುಂದರ ವಾತಾವರಣ ನಿರ್ಮಿಸಿ. ಭಾಷೆ ಆದೇಶದಿಂದ ಬೆಳೆಯುವುದಿಲ್ಲ; ಬಳಕೆಯಿಂದ ಬೆಳೆಯುತ್ತದೆ. ಇದೇ ವಿಚಾರವನ್ನು ಆಡಳಿತಕ್ಕೂ ಅನ್ವಯಿಸಬಹುದು. ಸರ್ಕಾರದ ಯೋಜನೆಗಳು, ಕಾನೂನುಗಳು, ಸಾರ್ವಜನಿಕ ಸೇವೆಗಳು, ಜನರ ಹಕ್ಕುಗಳು—ಇವು ಸಾಮಾನ್ಯ ಜನರಿಗೆ ಅರ್ಥವಾಗಬೇಕಾದರೆ ಅವರ ಪರಿಚಿತ ಭಾಷೆಯಲ್ಲಿ ಸರಳವಾಗಿ ತಲುಪಬೇಕು. ಜನರ ಬದುಕನ್ನು ನಿರ್ಧರಿಸುವ ವಿಷಯಗಳು ಜನರಿಗೆ ಅರ್ಥವಾಗದ ಭಾಷೆಯ ಗೋಡೆಯ ಹಿಂದೆ ಉಳಿದರೆ, ಜ್ಞಾನ ಎಲ್ಲರಿಗೂ ಸಮಾನವಾಗಿ ತಲುಪುವುದಿಲ್ಲ. ಭಾಷೆಯ ಪ್ರಶ್ನೆ ಇಲ್ಲಿ ಭಾವನೆಯಷ್ಟೇ ಅಲ್ಲ; ಅದು ಅರ್ಥಮಾಡಿಕೊಳ್ಳುವ ಹಕ್ಕಿನ ಪ್ರಶ್ನೆಯೂ ಹೌದು. ಇಂದು ಮತ್ತೊಂದು ಹೊಸ ಕ್ಷೇತ್ರ ನಮ್ಮ ಮುಂದೆ ಬಂದಿದೆ—ತಂತ್ರಜ್ಞಾನ. ಮೊಬೈಲ್‌ನಲ್ಲಿ ಕನ್ನಡ ಇದೆಯೇ? ಕನ್ನಡದಲ್ಲಿ ಉತ್ತಮ ಡಿಜಿಟಲ್ ಪುಸ್ತಕಗಳಿವೆಯೇ? ಮಕ್ಕಳಿಗೆ ಕನ್ನಡದಲ್ಲಿ ವಿಜ್ಞಾನ, ಗಣಿತ, ಕಾನೂನು, ತಂತ್ರಜ್ಞಾನ ಕಲಿಯಲು ಗುಣಮಟ್ಟದ ವಿಷಯ ಸಿಗುತ್ತಿದೆಯೇ? ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳಲ್ಲಿ ಕನ್ನಡದ ಬಳಕೆ ಎಷ್ಟು ಸುಲಭವಾಗಲಿದೆ? ಈ ಪ್ರಶ್ನೆಗಳನ್ನು ಕೇಳದೇ ಭಾಷೆಯನ್ನು ಉಳಿಸುವ ಮಾತು ಅಪೂರ್ಣ. ಇಂದಿನ ಮಗು ಪುಸ್ತಕದ ಜೊತೆಗೆ ಪರದೆಯಲ್ಲೂ ಕಲಿಯುತ್ತಿದೆ. ಅದು ಜ್ಞಾನವನ್ನು ಮೊಬೈಲ್‌ನಲ್ಲಿ ಹುಡುಕುತ್ತದೆ, ವಿಡಿಯೋದಲ್ಲಿ ನೋಡುತ್ತದೆ, ಧ್ವನಿಯಲ್ಲಿ ಕೇಳುತ್ತದೆ. ನಾಳೆ ಕೃತಕ ಬುದ್ಧಿಮತ್ತೆಯೊಂದಿಗೆ ಮಾತನಾಡುತ್ತದೆ. ಹೀಗಿರುವಾಗ ಕನ್ನಡವನ್ನು ಕೇವಲ ಹಳೆಯ ಪುಸ್ತಕಗಳ ಭಾಷೆಯನ್ನಾಗಿ ಉಳಿಸಬಾರದು. ಕನ್ನಡಕ್ಕೆ ಭವಿಷ್ಯ ಬೇಕು. ಅದು ಪ್ರಯೋಗಾಲಯದಲ್ಲೂ ಇರಬೇಕು, ಕಂಪ್ಯೂಟರ್‌ನಲ್ಲೂ ಇರಬೇಕು, ಮೊಬೈಲ್‌ನಲ್ಲೂ ಇರಬೇಕು, ವಿಜ್ಞಾನದಲ್ಲೂ ಇರಬೇಕು, ಕಾನೂನಿನಲ್ಲೂ ಇರಬೇಕು, ಹೊಸ ಉದ್ಯೋಗಗಳಲ್ಲೂ ಇರಬೇಕು, ಮಕ್ಕಳ ಕನಸುಗಳಲ್ಲೂ ಇರಬೇಕು. ಒಂದು ಭಾಷೆ ಕೇವಲ ಹಳೆಯ ನೆನಪುಗಳನ್ನು ಹೊತ್ತುಕೊಂಡು ಬದುಕುವುದಿಲ್ಲ. ಹೊಸ ಕಾಲವನ್ನು ತನ್ನೊಳಗೆ ಸ್ವೀಕರಿಸಿದಾಗ ಮಾತ್ರ ಅದು ಜೀವಂತವಾಗಿರುತ್ತದೆ. ನಮ್ಮ ಹಿರಿಯರು ಬಳಸುತ್ತಿದ್ದ ಅನೇಕ ಕನ್ನಡ ಪದಗಳು ಇಂದು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳ ಜಾಗದಲ್ಲಿ ಬೇರೆ ಭಾಷೆಯ ಪದಗಳು ಬರುವುದು ತಪ್ಪೇನಲ್ಲ. ಭಾಷೆಗಳು ಯಾವಾಗಲೂ ಪರಸ್ಪರದಿಂದ ಪದಗಳನ್ನು ಸ್ವೀಕರಿಸುತ್ತವೆ. ಆದರೆ ಒಂದು ಪೀಳಿಗೆ ತನ್ನದೇ ಭಾಷೆಯ ಪದಗಳನ್ನು ಬಳಸುವುದೇ ನಾಚಿಕೆಯ ವಿಷಯ ಎಂದುಕೊಳ್ಳಲು ಪ್ರಾರಂಭಿಸಿದಾಗ ಸಮಸ್ಯೆ ಆರಂಭವಾಗುತ್ತದೆ. ಭಾಷಾಭಿಮಾನ ಎಂದರೆ ಬೇರೆ ಭಾಷೆಯನ್ನು ತಿರಸ್ಕರಿಸುವುದು ಅಲ್ಲ. “ನನ್ನ ಭಾಷೆಯನ್ನು ಪ್ರೀತಿಸುತ್ತೇನೆ; ಆದ್ದರಿಂದ ನಿನ್ನ ಭಾಷೆಯನ್ನೂ ಗೌರವಿಸುತ್ತೇನೆ” ಎನ್ನುವಷ್ಟು ವಿಶಾಲವಾದ ಮನಸ್ಸು ಬೇಕು. ಭಾರತದ ಸೌಂದರ್ಯವೇ ಅದರ ಬಹುಭಾಷಿಕತೆಯಲ್ಲಿ ಇದೆ. ಒಂದೊಂದು ಭಾಷೆಯ ಹಿಂದೆ ಒಂದೊಂದು ಜನಜೀವನ, ಒಂದೊಂದು ಇತಿಹಾಸ, ಒಂದೊಂದು ಸಂಸ್ಕೃತಿ, ಒಂದೊಂದು ಜ್ಞಾನಪರಂಪರೆ ಇದೆ. ಹೀಗಾಗಿ ಮಕ್ಕಳನ್ನು ಒಂದೇ ಭಾಷೆಯೊಳಗೆ ಬಂಧಿಸುವುದೂ ಸರಿಯಲ್ಲ; ಅವರ ಮಾತೃಭಾಷೆಯನ್ನು ಅವರಿಂದ ಕಸಿದುಕೊಳ್ಳುವುದೂ ಸರಿಯಲ್ಲ. ಅವರಿಗೆ ಹಲವು ಭಾಷೆಗಳ ಬಾಗಿಲುಗಳನ್ನು ತೆರೆಯಬೇಕು. ಆದರೆ ಆ ಬಾಗಿಲುಗಳನ್ನು ತೆರೆಯುವಾಗ ತಮ್ಮ ಮನೆಯ ಹೆಸರನ್ನು ಮರೆಯದಂತೆ ನೋಡಿಕೊಳ್ಳಬೇಕು. ನನ್ನಿಗೆ ಭಾಷೆಯ ಬಗ್ಗೆ ಇರುವ ದೊಡ್ಡ ಭಯ ಕನ್ನಡವನ್ನು ಮಕ್ಕಳು ಅರ್ಥಮಾಡಿಕೊಳ್ಳದಿರುವುದಷ್ಟೇ ಅಲ್ಲ; ಕನ್ನಡದಲ್ಲಿ ತಮ್ಮದೇ ಭಾವನೆಯನ್ನು ಹೇಳಿಕೊಳ್ಳಲು ಸಾಧ್ಯವಾಗದಿರುವುದು. ಅಮ್ಮನನ್ನು ಕರೆಯಲು ಬೇರೆ ಪದ ಹುಡುಕಬಹುದು. ಅಪ್ಪನನ್ನು ಕರೆಯಲು ಬೇರೆ ಪದ ಹುಡುಕಬಹುದು. ಆದರೆ ಆ ಕರೆಯೊಳಗಿನ ಭಾವನೆ ಬದಲಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಒಂದು ಭಾಷೆಯ ಜೀವ ಅದರ ನಿಘಂಟಿನಲ್ಲಿ ಇರುವ ಪದಗಳ ಸಂಖ್ಯೆಯಿಂದ ಮಾತ್ರ ಅಳೆಯಲಾಗುವುದಿಲ್ಲ. ಅದು ಎಷ್ಟು ಮನೆಗಳಲ್ಲಿ ಕೇಳಿಸುತ್ತದೆ ಎಂಬುದರಿಂದ ಅಳೆಯಬೇಕು. ಎಷ್ಟು ಮಕ್ಕಳು ಅದರಲ್ಲಿ ಕನಸು ಕಾಣುತ್ತಾರೆ ಎಂಬುದರಿಂದ ಅಳೆಯಬೇಕು. ಎಷ್ಟು ಜನ ಅದರಲ್ಲಿ ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ ಎಂಬುದರಿಂದ ಅಳೆಯಬೇಕು. ಎಷ್ಟು ಹೊಸ ಪುಸ್ತಕಗಳು ಅದರಲ್ಲಿ ಹುಟ್ಟುತ್ತವೆ ಎಂಬುದರಿಂದ ಅಳೆಯಬೇಕು. ಎಷ್ಟು ಹೊಸ ಆಲೋಚನೆಗಳು ಅದರಲ್ಲಿ ಮೊಳಕೆಯೊಡೆಯುತ್ತವೆ ಎಂಬುದರಿಂದ ಅಳೆಯಬೇಕು. ಆದ್ದರಿಂದ ಕನ್ನಡವನ್ನು ಉಳಿಸುವ ಕೆಲಸವನ್ನು ಯಾರಾದರೂ ಬಂದು ಮಾಡುತ್ತಾರೆ ಎಂದು ಕಾಯಬೇಕಾಗಿಲ್ಲ. ಒಂದು ದಿನಕ್ಕೆ ಒಂದು ಕನ್ನಡ ಪುಸ್ತಕ ಓದಲಾಗದಿದ್ದರೂ ಒಂದು ಪುಟ ಓದಬಹುದು. ಮಗುವಿನೊಂದಿಗೆ ಪ್ರತಿದಿನ ಕೆಲವು ನಿಮಿಷ ಕನ್ನಡದಲ್ಲಿ ಮಾತನಾಡಬಹುದು. ಹಳೆಯ ಪದವೊಂದನ್ನು ಹಿರಿಯರಿಂದ ಕೇಳಿ ಅದರ ಅರ್ಥವನ್ನು ದಾಖಲಿಸಬಹುದು. ಒಳ್ಳೆಯ ಕನ್ನಡ ಬರಹವನ್ನು ಮತ್ತೊಬ್ಬರಿಗೆ ಪರಿಚಯಿಸಬಹುದು. ಹೊಸ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಬಹುದು. ಅದರಲ್ಲೇ ಭಾಷೆಯ ಭವಿಷ್ಯ ಅಡಗಿದೆ. ಭಾಷೆಯನ್ನು ಉಳಿಸುವುದು ಎಂದರೆ ಭಾಷೆಯ ಸ್ಮಾರಕ ಕಟ್ಟುವುದು ಅಲ್ಲ; ಅದನ್ನು ಬದುಕುವುದು. ನಮ್ಮ ನಂತರ ಬರುವ ಮಗುವೊಂದು ತನ್ನ ಅಜ್ಜಿಯ ಹಳೆಯ ಕಥೆಯನ್ನು ಅರ್ಥಮಾಡಿಕೊಳ್ಳುವಂತಿದ್ದರೆ, ನಾವು ಒಂದು ಸೇತುವೆಯನ್ನು ಉಳಿಸಿದ್ದೇವೆ. ಒಬ್ಬ ಮಗು ತನ್ನ ತಾಯಿಯೊಂದಿಗೆ ತನ್ನ ಮನದ ಮಾತನ್ನು ತನ್ನದೇ ಭಾಷೆಯಲ್ಲಿ ಹೇಳಬಲ್ಲದಾದರೆ, ನಾವು ಒಂದು ಸಂಬಂಧವನ್ನು ಉಳಿಸಿದ್ದೇವೆ. ಒಬ್ಬ ವಿದ್ಯಾರ್ಥಿ ಜಗತ್ತಿನ ಹಲವು ಭಾಷೆಗಳನ್ನು ಕಲಿತರೂ ತನ್ನ ನೆಲದ ಭಾಷೆಯಲ್ಲಿ ಯೋಚಿಸುವ ಸಾಮರ್ಥ್ಯ ಕಳೆದುಕೊಳ್ಳದಿದ್ದರೆ, ನಾವು ಒಂದು ಬೇರು ಉಳಿಸಿದ್ದೇವೆ. ಮತ್ತು ಒಂದು ಪೀಳಿಗೆ ತನ್ನ ಬೇರುಗಳನ್ನು ಉಳಿಸಿಕೊಂಡೇ ಜಗತ್ತಿನತ್ತ ಹೆಜ್ಜೆ ಇಟ್ಟರೆ—ಅದೇ ನಿಜವಾದ ಪ್ರಗತಿ. ಜಗತ್ತನ್ನು ಕಲಿಯೋಣ. ಹೊಸ ಭಾಷೆಗಳನ್ನು ಅಪ್ಪಿಕೊಳ್ಳೋಣ. ಹೊಸ ಜ್ಞಾನವನ್ನು ಸ್ವೀಕರಿಸೋಣ. ಆದರೆ ನಮ್ಮೊಳಗೆ ಮೊದಲು ಮಾತಾಡಿದ ಆ ಭಾಷೆಗೆ ನಮ್ಮ ಬದುಕಿನಲ್ಲಿ ಒಂದು ಜಾಗವನ್ನು ಸದಾ ಉಳಿಸೋಣ. ಏಕೆಂದರೆ ಮನುಷ್ಯ ಎಷ್ಟು ದೂರ ಹೋದರೂ, ತನ್ನ ಮೊದಲ ಮಾತಿನ ಬಳಿಗೆ ಮರಳುವ ದಾರಿ ಅವನೊಳಗೇ ಎಲ್ಲೋ ಉಳಿದಿರುತ್ತದೆ. ಕೆ.ಎಂ. ಕಾವ್ಯ ಪ್ರಸಾದ್

“ಭಾಷೆ ಉಳಿದರೆ ಬದುಕಿನ ಬೇರು ಉಳಿಯುತ್ತದೆ” ಲೇಖನ ಕೆ.ಎಂ. ಕಾವ್ಯ ಪ್ರಸಾದ್ Read Post »

ಇತರೆ

“ಭಾರತ ಸ್ವಾತಂತ್ರ್ಯ ದಿನ” ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ, ಲೇಖಕಿ:ಗೊರೂರು ವಸಂತಿ ಮೂರ್ತಿ

ಇತಿಹಾಸ ಸಂಗಾತಿ ಲೇಖಕಿ:ಗೊರೂರು ವಸಂತಿ ಮೂರ್ತಿ ಭಾರತ ಸ್ವಾತಂತ್ರ್ಯ ದಿನ ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ 1947 ನೆಯ ಇಸವಿ ಆಗಸ್ಟ್ 15 ನೆಯ ತಾರೀಕು ಭಾರತವನ್ನು ಒಂದು ಸ್ವತಂತ್ರದೇಶ ಎಂದು ಘೋಷಿಸಲಾಯಿತು. ಆದಿನ ಇಂಡಿಯಾ ಪಶ್ಚಾತ್ಯರ ದಬ್ಬಾಳಿಕೆಯಿಂದ ಮುಕ್ತವಾಯಿತು. ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ಪ್ರಭಾವಿತರಾಗಿ ದೇಶದಾದ್ಯಂತ ಲಕ್ಷಾಂತರ ದೇಶಪ್ರೇಮಿಗಳು ಆ ದಿನಕ್ಕಾಗಿ ದುಡಿದಿದ್ದರು, ಸೆರೆವಾಸ ಅನುಭವಿಸಿದ್ದರು, ಅಪಾರ ತ್ಯಾಗಗಳನ್ನು ಮಾಡಿದ್ದರು. 1947ನೆಯ ಇಸವಿ ಆಗಸ್ಟ್ 15 ಕ್ಕೆ ಅವರುಗಳೆಲ್ಲ ಮಾಡಿದ ತ್ಯಾಗ ಮತ್ತು ಸಹಿಸಿದ ಕಷ್ಟಗಳಿಗೆ ಫಲ ಲಭಿಸಿತು. 1947ನೆಯ ಆಗಸ್ಟ್ 14, ಸರಿಯಾಗಿ ಮಧ್ಯರಾತ್ರಿ 12 ಘಂಟೆಯಲ್ಲಿ ಭಾರತ ಸ್ವತಂತ್ರ ದೇಶವೆಂದು (sovereign nation) ಘೋಷಿಸಲಾಯಿತು. ಮಧ್ಯರಾತ್ರಿಯಲ್ಲಿ All India Radio, ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ನ್ಯೂಸ್ ದೇಶದಾದ್ಯಂತ ಕೆಲವೇ ನಿಮಿಷಗಳಲ್ಲಿ ಹರಡಿತು. ಜನ ಖುಷಿಯಿಂದ ಹುಚ್ಚೆದ್ದು ಬೀದಿ ಬೀದಿಗಳಲ್ಲಿ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಕುಣಿಯುತ್ತಾ ಮೆರವಣಿಗೆ ಹೊರಟು ತಮ್ಮ ಆತ್ಮ ಸಂತೋಷವನ್ನು ತೋರ್ಪಡಿಸಿದರು ಮತ್ತು ಹಂಚಿಕೊಂಡರು. ಭಾರತ್ ಮಾತಾಕಿ ಜೈ, ಮಹಾತ್ಮ ಗಾಂಧೀಕಿ ಜೈ, ಜವಾಹರಲಾಲ್ ನೆಹರೂಕಿ ಜೈ, ಸರ್ದಾರ್ ವಲ್ಲಬಾಯಿ ಪಟೇಲ್ ಕಿ ಜೈ, ಇತ್ಯಾದಿ ಜಯಘೋಷಗಳ ಕೂಗು ಮುಗಿಲನ್ನೇ ಮುಟ್ಟಿತ್ತು. ಹಳ್ಳಿಹಳ್ಳಿಗಳಲ್ಲಿಯೂ, ದೊಡ್ಡ ಮೈಸೂರು, ಬೆಂಗಳೂರು, ದೆಹಲಿ, ಕಲ್ಕತ್ತಾ ಮುಂತಾದ ನಗರಗಳಲ್ಲಿಯೂ ಈ ಜಯಘೋಷದ ಪ್ರತಿಧ್ವನಿ ವಾತಾವರಣವನ್ನು ಸಂಪೂರ್ಣವಾಗಿ ಮುಳುಗಿಸಿತ್ತು. ಇಂತಹ ಪವಿತ್ರ ಘಳಿಗೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸಮಸ್ತವನ್ನೂ ಮುಡುಪಿಟ್ಟು ಹೊಡೆದಾಡಿದ ಮಹಾತ್ಮಗಾಂಧಿ ಮತ್ತು ಇತರ ಮುಖಂಡರು ಎಲ್ಲಿದ್ದರು? ಅವರು ಖುಷಿಯಿಂದ ಬೀದಿಯಲ್ಲಿ ಮೆರವಣಿಗೆ ಹೊರಟಿರಲಿಲ್ಲ. ಮಿಠಾಯಿ ಹಂಚಿ ತಾವೂ ತಿನ್ನುತ್ತಿರಲಿಲ್ಲ. ಗಾಂಧೀಜಿ ಮತ್ತು ಅವರ ಕೆಲವು ನಿಕಟ ಅನುಯಾಯಿಗಳು (ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್) ಮುಂತಾದವರು ಕಲ್ಕತ್ತಾದಲ್ಲಿ ಇದ್ದರು. ಗಾಂಧೀಜಿ ಅವರು ದೇಶದಲ್ಲಿ ಶಾಂತಿ, ಅಹಿಂಸೆ ಮತ್ತು ಹಿಂದೂ ಮುಸ್ಲಿಂ ಸೌಹಾರ್ದಕ್ಕಾಗಿ ಉಪವಾಸದಲ್ಲಿ ತೊಡಗಿದ್ದರು. ಎಲ್ಲರೂ ಪ್ರಾರ್ಥನೆಯಲ್ಲಿ ನಿರತರಾಗಿದ್ದರು!! ಭಾರತದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆಯಲಿಲ್ಲ. ಕೋಟ್ಯಾಂತರ ಪ್ರಜೆಗಳು, ಯುವಕರು, ಮಧ್ಯವಯಸ್ಕರು, ಮುದುಕರು, ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕೆಚ್ಚೆದೆಯಿಂದ ತಮ್ಮ ದೇಹವನ್ನು ಬ್ರಿಟಿಷರ ಲಾಠಿ,ಬಂದೂಕಗಳಿಗೆ ಸ್ವಂತ ಇಚ್ಛೆಯಿಂದ ಒಡ್ಡಿದರು. ಗಾಂಧೀ ಅವರ ತತ್ವದ ಪ್ರಕಾರ ವಾಪಸ್ಸು ಹೊಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿದೂ ಭಾರತದ ಸ್ವಾತಂತ್ರ್ಯದ ಭವ್ಯ ಕನಸಿನಲ್ಲಿ ಪ್ರಜೆಗಳು ತಮ್ಮ ಸಮಸ್ತವನ್ನೂ ತ್ಯಾಗಮಾಡಲು ಮುಂದಾದರು. ಈ ದೇಶಭಕ್ತರು ಕಾರಾಗ್ರಹವಾಸಕ್ಕೂ ಹೆದರಲಿಲ್ಲ; ಬ್ರಿಟಿಷರ ಗುಂಡಿಗೂ ಹೆದರಲಿಲ್ಲ; ಇದು ಗಾಂಧೀಜಿ ಅವರ ತಪಸ್ಸಿನ ಆತ್ಮಶಕ್ತಿ. ಗಾಂಧೀಜಿ ಅವರನ್ನು ಹಿಂಬಾಲಿಸಿ ಸತ್ಯಾಗ್ರಹಕ್ಕೆ ಧುಮುಕಿದರೆ ವಾಪಸ್ಸು ಜೀವಂತವಾಗಿ ಬರುವುದು ಸಂದೇಹ ಎಂದು ತಿಳಿದೂ ಕೂಡ ಕೋಟಿ ಕೋಟಿ ಜನಗಳು ಸತ್ಯಾಗ್ರಹದಲ್ಲಿ ಭಾಗವಹಿಸಲು ಮುಂದಾದರು. ಜಗತ್ತಿನ ಚರಿತ್ರೆಯಲ್ಲಿಯೇ ಇಂತಹ ಅದ್ಭುತ ಎಲ್ಲಿಯೂ ನಡೆದಿಲ್ಲ. ಹಾಗಾದರೆ ಎಲ್ಲ ಆರಾಮವಾಗಿ ಸುಭಿಕ್ಷವಾಗಿ, ಶಾಂತಿ ಸೌಹಾರ್ದ, ಪ್ರೀತಿಯಿಂದ ಮುಗಿಯಿತೆಂದು ಹೇಳುವಹಾಗಿಲ್ಲ. ದೇಶ ವಿಭಾಗ ಮಾಡುವ ಪ್ರಶ್ನೆ ಎದ್ದಿತ್ತು. ಪಂಜಾಬ್, ಬಂಗಾಳಾಗಳಲ್ಲಿ ಹಿಂದೂ ಮುಸ್ಲಿಂ ಕೋಮುವಾದ ಮತ್ತು ಜಾತೀಯ ಘರ್ಷಣೆಗಳಿಂದ ಹಿಂಸೆ ಕೊಲೆಗಳು ನಡೆದು ಗಾಂಧೀಜಿ ಅವರ ಮನಸ್ಸಿಗೆ ತೀವ್ರ ದುಃಖವುಂಟು ಮಾಡಿದ್ದವು. ಅವರು ಮತ್ತೆ ಉಪವಾಸ ಪ್ರಾರಭಿಸಿದ್ದರು. ಈ ಬಾರಿ ಬ್ರಿಟಿಶರನ್ನು ಎದುರಿಸುವುದಕ್ಕಲ್ಲ. ತಮ್ಮ ಪ್ರೀತಿಯ ಭಾರತೀಯರ ಮನಸ್ಸಿನ ಆತ್ಮ ಸಂಧಾನಕ್ಕಾಗಿ. ಹೀಗೆ ದೇಶದಲ್ಲಿ ಅಶಾಂತಿ ಉಂಟಾದಾಗ ಪ್ರತಿ ಮನೆಯಲ್ಲೂ ಅವರವರದೇ ಆದ ಪರಿಸ್ಥಿತಿ/ಪ್ರಶ್ನೆಗಳು ಹುಟ್ಟಿದುವು ವಿದ್ಯಾರ್ಥಿಗಳು ಅನೇಕರು ಶಾಲೆ ಕಾಲೇಜುಗಳನ್ನು ಬಿಟ್ಟು ಚಳುವಳಿ ಸೇರಿದ್ದರು. ಅವರ ವಿದ್ಯಾಭ್ಯಾಸ ಕಡೆಗಣಿತವಾಗಿ ಅವರು ಯಾವ ತರಗತಿಗೆ ಸೇರಿ ಮುಂದುವರಿಸಬೇಕು ಎಂಬುದನ್ನು ತೀರ್ಮಾನಿಸಬೇಕಾಗಿತ್ತು. ಇನ್ನು ಕೆಲವು ಯುವಕರು ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಜೀವವನ್ನೇ ಕಳೆದುಕೊಂಡು ಅವರ ಹೆಂಡತಿಯರು ಮತ್ತು ಮಕ್ಕಳ ಗತಿಯೇನು ಎಂದು ತಿಳಿಯದೇ ಆತಂಕದಲ್ಲಿದ್ದರು. ಮತ್ತು ಕೆಲವರು ತಾವು ಸತ್ಯಾಗ್ರಹದಲ್ಲೂ ಭಾಗವಹಿಸಲಿಲ್ಲ, ಕಾರಾಗ್ರಹಕ್ಕೂ ಹೋಗಲಿಲ್ಲ, ಮನೆಯಲ್ಲಿಯೇ ಕುಳಿತು “ನಾನೂ ಸತ್ಯಾಗ್ರಹಿ ಆಗಿದ್ದೇ; ಲಾಠಿ ಏಟು ತಿಂದಿದ್ದೇ” ಎಂದು ಸುಳ್ಳು ಹೇಳತೊಡಗಿದರು. ಮನೆಗೊಂದು ಕಥೆಯಾಯಿತು. ನಮ್ಮ ಗೊರೂರು ಮನೆಯಲ್ಲೂ ಒಂದು ಕಥೆ ಆಯಿತು. ಸ್ವಾತಂತ್ರ್ಯ ಬಂದಾಗ ನಮ್ಮ ತಂದೆ ಡಾ. ಗೊರೂರರು ಇನ್ನೂ ಸೆರೆಮನೆಯಲ್ಲಿಯೇ ಇದ್ದರು. “ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅವರಿಗೆ ಸ್ವಾತಂತ್ರ್ಯ ಬಂದಿರಲಿಲ್ಲ.” ಎಂಬ ಮಾತು ಬಳಕೆಯಲ್ಲಿದೆ. 1947 ಆಗುಸ್ಟ್ ತಿಂಗಳಿನಲ್ಲಿ ನನ್ನ ದೊಡ್ಡ ಅಣ್ಣ ರಾಮಚಂದ್ರ ತುಮಕೂರಿನಲ್ಲಿ ಇಂಟರ್ಮೀಡಿಯಟ್ ಓದುತ್ತಿದ್ದ. ಅವನಿಗೆ ಆಗ 17 ವಯಸ್ಸು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಆಗಬೇಕಾಗಿತ್ತು. ಅದಕ್ಕೆ ಎಲ್ಲರೂ ಕಾತುರರಾಗಿದ್ದರು. ಆದರೆ ಅದಕ್ಕೆ ಒಂದು ಅಡಚಣೆ ಬಂದಿತ್ತು. ಅದೇನೆಂದರೆ ಅನೇಕ ಮಹಾರಾಜರುಗಳು ತಮ್ಮ ಆಳ್ವಿಕೆಯನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಸೇರಲು ಇಷ್ಟಪಡಲಿಲ್ಲ. ಆಗ ಮತ್ತೊಂದು ಚಳುವಳಿ ಪ್ರಾರಂಭವಾಯಿತು. ಈ ಚಳುವಳಿಗೆ “ಚಲೋ ಪ್ಯಾಲೆಸ್” ಎಂದು ಹೆಸರು. ಈ ಚಳುವಳಿ ರಾಜರುಗಳ ಮನಸ್ಸನ್ನು ಬದಲಾಯಿಸುವುದಕ್ಕಾಗಿ ಮಾಡಿದ ಚಳುವಳಿ. ಇದರಲ್ಲಿ ಡಾ ಗೊರೂರರ ಮಗ ರಾಮಚಂದ್ರ ಭಾಗವಹಿಸುತ್ತಿದ್ದ. 1947 ಸೆಪ್ಟೆಂಬರ್ 14 ನೆಯ ತಾರೀಕು ಪೊಲೀಸರು ತುಮಕೂರಿನಲ್ಲಿ ಸತ್ಯಾಗ್ರಹಿಗಳ ಮೇಲೆ ಗೋಲೀಬಾರ್ ಚಲಾಯಿಸಿದರು. ಆ ದಿನ ರಾಮಚಂದ್ರನೂ ಸೇರಿದಂತೆ ನಿರಾಯುಧರಾದ ಅಹಿಂಸಾ ಚಳುವಳಿಯಲ್ಲಿ ಶಾಂತರಾಗಿ ತೊಡಗಿದ್ದ ಮೂರು ಜನ ಕನ್ನಡಿಗರನ್ನು ಬ್ರಿಟಿಷ್ ಪೋಲೀಸ ರು ವಿನಾಕಾರಣ ಗುಂಡು ಹಾರಿಸಿ ಕೊಂದರು. ಇಂದಿಗೂ ಆ ಸ್ಥಳದಲ್ಲಿ ಈ ಮೂವರ ಹೆಸರನ್ನು ಹೊತ್ತ ಒಂದು ಶಾಸನ ಇದೆ. ಈ ಪುಣ್ಯ ಸ್ಥಳಕ್ಕೆ “ಸ್ವತಂತ್ರ ಚೌಕ” ಅಥವಾ “Freedom Circle” ಎಂದು ಹೆಸರಿಸಲಾಗಿದೆ. ಇದಾದಮೇಲೆ 1947 ಅಕ್ಟೋಬರ್ 14 ನೆಯ ತಾರೀಕು ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ತಮ್ಮ ಒಪ್ಪಿಗೆಯನ್ನು ಘೋಷಿಸಿದರು. ಅದಾದಮೇಲೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಕರ್ನಾಟಕದ ಮೊಟ್ಟಮೊದಲನೆಯ ಮುಖ್ಯಮಂತ್ರಿ ಎಂಬ ಗೌರವ ಶ್ರೀ ಕೆ ಸಿ ರೆಡ್ಡಿ ಅವರಿಗೆ ಸಲ್ಲುತ್ತದೆ. ಭಾರತ ದೇಶದ ಸ್ವಾತಂತ್ರಕ್ಕಾಗಿ ಕಷ್ಟ ನಷ್ಟಗಳನ್ನು ಅನುಭವಿಸಿದ ಮತ್ತು ಪ್ರಾಣ ಕೊಟ್ಟ ಅನೇಕ ದೇಶಭಕ್ತರಿಗೆ ಅವರ ನಿಸ್ಸ್ವಾರ್ಥ ಸೇವೆಗೆ ಈ ದಿನ ನಮ್ಮ ನಮನಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಗೊರೂರು ವಸಂತಿ ಮೂರ್ತಿ

“ಭಾರತ ಸ್ವಾತಂತ್ರ್ಯ ದಿನ” ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ, ಲೇಖಕಿ:ಗೊರೂರು ವಸಂತಿ ಮೂರ್ತಿ Read Post »

ಇತರೆ

“80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ” ವೀಣಾ ಹೇಮಂತ್ ಗೌಡ ಪಾಟೀಲ್

ಸ್ವಾತಂತ್ರ್ಯ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ 80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ”  ತಾಯ್ನಾಡಿನ ರಕ್ಷಣೆಗಾಗಿ ಆಕೆಯ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಜನ ಪ್ರಾಣ ತೆತ್ತಿರುವ ಸ್ವಾತಂತ್ರ್ಯ ಸೇನಾನಿಗಳ ಉಗ್ರ ಹೋರಾಟ ಮತ್ತು ಹಲವಾರು ಶಾಂತಿಯುತ ಹೋರಾಟಗಳ ಚಳುವಳಿಗಳ ಫಲವಾಗಿನಾವು ಗಳಿಸಿಕೊಂಡ ಸ್ವಾತಂತ್ರ್ಯಕ್ಕೆ ಇದೀಗ 78ರ ಹರಯ. ಇಷ್ಟು ವರ್ಷಗಳ ಸ್ವತಂತ್ರ ಭಾರತದಲ್ಲಿ ನಾವು ಗಳಿಸಿದ್ದೇನು?.ಉಳಿಸಿದ್ದೇನು? ದೇಶಕ್ಕೆ ಕೊಟ್ಟದ್ದೇನು? ದೇಶದಿಂದ ಪಡೆದುಕೊಂಡದ್ದು ಏನನ್ನು ಎಂದು ಯೋಚಿಸಿದಾಗ ಒಂದೆಡೆ ಹೆಮ್ಮೆಯ ಭಾವ ಸ್ಫುರಿಸಿದರೆ ಮತ್ತೊಂದೆಡೆ ವಿಷಾದ ಮಡುಗಟ್ಟುತ್ತದೆ. ‘ದೇ ದೀ ಹಮೆ ಆಜಾದಿ.. ಬಿನಾ ಖಡ್ಗ ಬಿನಾ ಡಾಲ್: ಎಂಬ ಹಾಡನ್ನು ಹಾಡುವ ಮೂಲಕ ನಮ್ಮ ರಾಷ್ಟ್ರಪಿತನನ್ನು ನೆನೆಸಿಕೊಳ್ಳುವ ನಾವುಗಳು ಗಾಂಧೀಜಿಯವರು ಹಾಕಿಕೊಟ್ಟ ಸತ್ಯ ಅಹಿಂಸೆ ಮತ್ತು ಶಾಂತಿಯ ಮಾರ್ಗದಲ್ಲಿ ನಡೆದು ಸರ್ವಧರ್ಮ ಸಾಮರಸ್ಯವನ್ನು, ಬಂಧುತ್ವವನ್ನು ತೋರುವ ಅಖಂಡ ಭಾರತವನ್ನು ಸೃಷ್ಟಿಸಿದ್ದೇವೆಯೇ?! ಅವರು ಕಂಡ ರಾಮ ರಾಜ್ಯದ ಕನಸನ್ನು ನನಸು ಮಾಡಿದ್ದೇವೆಯೇ ಎಂದರೆ… ಉಹೂಂ ಕನಸಿನಲ್ಲಿಯೂ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು. ವಿಶ್ವದ ನೂರಾರು ದೇಶಗಳ ರಾಜ್ಯ ನೀತಿಗಳನ್ನು ಅರಿತು ಅರಗಿಸಿಕೊಂಡು ಭಾರತದಂತಹ ಬಹುದೊಡ್ಡ ಪ್ರಜಾತಂತ್ರ ದೇಶಕ್ಕೆ ಅತ್ಯವಶ್ಯಕವಾದ ಸಂವಿಧಾನವನ್ನು ರೂಪಿಸಿಕೊಟ್ಟ ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣಗೊಂಡಿದೆಯೇ ಎಂದರೆ…. ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು.  ನಿಜ, ಭಾರತ ಹಿಂದೆಂದಿಗಿಂತಲೂ ಹೆಚ್ಚು ಆರ್ಥಿಕವಾಗಿ ಬಲಿಷ್ಠವಾಗಿದೆ…. ಆದರೆ ಬಡತನ, ನಿರುದ್ಯೋಗ, ಸುಸ್ಥಿರ ಬದುಕು ಇನ್ನೂ ಕನಸಾಗಿದೆ. ಮೂರು ಹೊತ್ತಿನ ಊಟ ಬಿಡಿ…ಒಪ್ಪತ್ತಿನ ಊಟಕ್ಕೂ ತತ್ವಾರವಾದ ಜನರ ಬವಣೆಗಳು ನಮ್ಮ ಕಣ್ಣ ಮುಂದೆ ಇವೆ. ತಲೆಯ ಮೇಲೆ ಸೂರಿಲ್ಲದ, ಇದ್ದರೂ ಜೋರಾದ ಗಾಳಿ, ಬಿರುಸಾದ ಮಳೆಗೆ ಯಾವಾಗ ಬೀಳುತ್ತದೆ ಎಂಬ ಆತಂಕವನ್ನು ಉಂಟು ಮಾಡುವ, ಹಾಗೊಂದು ವೇಳೆ ಬಿದ್ದರೆ ಮುಂದೇನು? ಎಂದು ಭವಿಷ್ಯದ ಕುರಿತು ಚಿಂತಿಸುವ ಜನರು ನಮ್ಮ ಕಣ್ಣ ಮುಂದೆ ಇದ್ದಾರೆ. ಕೆಲವಷ್ಟು ವಲಯಗಳಲ್ಲಿ ಆರ್ಥಿಕತೆ ತನ್ನ ಛಾಪನ್ನು ಮೂಡಿಸಿದ್ದರೂ ಕೂಡ ನಾವಿನ್ನೂ ಮೂಲಭೂತ ಸೌಕರ್ಯಗಳನ್ನು ಹೊಂದಲು ಒದ್ದಾಡುತ್ತಿದ್ದೇವೆ. ಜನಸಂಖ್ಯೆಯ ದೃಷ್ಟಿಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿಯೇ ನಿಲ್ಲುವ ನಾವು ಕಾರ್ಯಶೀಲತೆಯ ದೃಷ್ಟಿಯಲ್ಲಿ ನೋಡಿದಾಗ ಬಹಳಷ್ಟು ಹಿಂದೆ ಉಳಿದಿದ್ದೇವೆ. ನಮ್ಮನ್ನು ಬೃಹದಾಕಾರವಾಗಿ ಕಾಡುವ ಸಮಸ್ಯೆಗಳು ಹತ್ತು ಹಲವು. ಯುವಕರು, ಮಧ್ಯಮ ವಯಸ್ಸಿನವರು, ಮುದುಕರು ಎನ್ನದೆ ಎಲ್ಲರೂ ಕೂಡ ತಮ್ಮ ಕೈಯನ್ನು ಕೋಳವನ್ನಾಗಿಸಿಕೊಂಡು ದಿನದ ಹಲವಾರು ಗಂಟೆ ಮೊಬೈಲ್ನ ಮಾಯೆಯಲ್ಲಿ ಸಿಲುಕಿದ್ದಾರೆ.ಪರಿಣಾಮವಾಗಿ ನೀರ್ವೀರ್ಯತೆ ನಮ್ಮನ್ನು ಆಳುತ್ತಿದೆ. ಶೈಕ್ಷಣಿಕವಾಗಿ ನಾವು ಸಾಕ್ಷರರಾಗುತ್ತಿದ್ದೇವೆ ನಿಜ…. ಆದರೆ ವಿದ್ಯೆ?. ಸಾವಿರಾರು ವರ್ಷಗಳಿಂದ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮೌಲ್ಯಗಳು ನಶಿಸುತ್ತಿವೆ. ಹಲವಾರು ಮನೆಗಳು ಸಿರಿವಂತಿಕೆಯಿಂದ, ಪೀಠೋಪಕರಣಗಳಿಂದ ತುಂಬಿ ತುಳುಕುತ್ತಿದ್ದರೂ ಮನಸ್ಸು ದ್ವೇಷ ಅಸೂಯೆ ಅಸಹನೆಗಳನ್ನು ಹೊಂದಿ ಪ್ರೀತಿ ವಿಶ್ವಾಸ ಬಾಂಧವ್ಯ ಬಂಧುತ್ವ ಗಳನ್ನು ಹೊರಹಾಕಿವೆ. “ವಸುದೈವ ಕುಟುಂಬಕಂ” ಎಂದು ಜಗತ್ತಿಗೆ ಸಾರಿದ ನಮ್ಮ ದೇಶದಲ್ಲಿ ಕೌಟುಂಬಿಕ ಸಾಮರಸ್ಯ ನಶಿಸುತ್ತಿದೆ. ನೆರೆಹೊರೆಯವರನ್ನು ಬಂಧು ಬಾಂಧವರಂತೆ ಕಾಣುತ್ತಿದ್ದ ನಾವೀಗ ಮನೆಯ ಸದಸ್ಯರನ್ನೇ ನೀವ್ಯಾರು? ಎಂಬಂತೆ ಬದುಕುತ್ತಿದ್ದೇವೆ.ಮನೆ ಮನಗಳು ಛಿದ್ರವಾಗುತ್ತಿವೆ.  ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ’ ಎಂದು ಪಶು ಪಕ್ಷಿಗಳು ಕೂಡ ಹಾಡಿ ಹೊಗಳಿರುವ ನಮ್ಮ ದೇಶದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಸಾಮಾಜಿಕವಾಗಿ ಒಂದಾಗಿ ಬಾಳಬೇಕಿರುವ, ಸರ್ವಧರ್ಮ ಸಮನ್ವಯದ ನಾಡು ಇದೀಗ ಜಾತಿಯ ವಿಷ ಬೀಜಗಳನ್ನು ಬಿತ್ತುವ, ಧರ್ಮಾಂಧತೆಯನ್ನು ತುಂಬುವ ನಾಡಾಗಿ ಪರಿವರ್ತನೆಯಾಗಿದೆ. ಸಾಮಾಜಿಕ ಸಮಾನತೆ ಎನ್ನುವುದನ್ನು ಪುಸ್ತಕಗಳಲ್ಲಿ ಮಾತ್ರ ಕಾಣಬಹುದು…. ಉಳ್ಳವರು ಮತ್ತಷ್ಟು ಶ್ರೀಮಂತರಾಗುವ, ಬಡವರು ಮತ್ತಷ್ಟು ಬಡವರಾಗುವ ದೈನೇಸಿ ಸ್ಥಿತಿ ನಮ್ಮದಾಗಿದೆ. ಕೆಲವರಿಗೆ ತಿನ್ನಲು ಸಾಧ್ಯವಾಗದಷ್ಟು ಆಹಾರ ಮಿಕ್ಕಿ ತಿಪ್ಪೆ ಸೇರಿದರೆ ಆ ತಿಪ್ಪೆಯಲ್ಲಿ ಕುಳಿತು ಚೆಲ್ಲಿದ ಆಹಾರವನ್ನು ತಿನ್ನಲು ಬರುವ ನಾಯಿಗಳನ್ನು ಓಡಿಸಿ ತಾವು ತಿನ್ನುವ ಸ್ಥಿತಿಯಲ್ಲಿರುವ ಜನರು ನಮ್ಮಲ್ಲಿದ್ದಾರೆ. ಬಡ ಜನರ ಅನುಕೂಲಕ್ಕಾಗಿ ಸರಕಾರಗಳು ಕೊಡ ಮಾಡುವ ಯೋಜನೆಗಳು ನಿಜವಾಗಿಯೂ ಅವಶ್ಯಕತೆ ಉಳ್ಳವರನ್ನು ತಲುಪುವ ಮುನ್ನವೇ ಮಧ್ಯವರ್ತಿಗಳ ಮತ್ತು ಖೊಟ್ಟಿ ಬಡವರ ಕೈ ಸೇರುತ್ತಿದ್ದು ಬಹಳಷ್ಟು ಬಾರಿ ಈ ಯೋಜನೆಯ ಫಲಾನುಭವಿಗಳು ಕನ್ನಡಿಯಲ್ಲಿನ ಗಂಟಿನಂತೆ ಈ ಸೌಲಭ್ಯಗಳಿಗಾಗಿ ಎದುರು ನೋಡುವುದೇ ಆಗಿದ್ದು ನೀರಿನಲ್ಲಿ ಹೋಮ ಮಾಡಿದಂತೆ ನಿಷ್ಪ್ರಯೋಜಕವಾಗಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವ್ಯವಸ್ಥೆಯು ಸಾಕಷ್ಟು ಹೆಣಗಾಡುತ್ತಿದ್ದರೂ ಕೂಡ ಆಗಾಗ ಅಲ್ಲಲ್ಲಿ ಜಾತಿ, ಮತ, ಪಂಥ, ಗುಂಪುಗಾರಿಕೆಗಳ ಕಾರಣ ಜನರ ಮಾನ, ಜೀವ ಹಾನಿ ಆಗುತ್ತಿದೆ. ಸರ್ವಧರ್ಮ ಸಮಭಾವದಿಂದ ನೋಡುತ್ತಿದ್ದ ದೇಶದಲ್ಲಿ ಇಂದು ಪ್ರತಿಯೊಂದು ಜಾತಿಗಳಲ್ಲಿನ ಒಳ ರಾಜಕೀಯಗಳು ಭಾವೈಕ್ಯತೆಯ ಬದುಕನ್ನು ಶಿಥಿಲಗೊಳಿಸಿವೆ. ಹೆಣ್ಣನ್ನು ದೇವತೆ ಎಂದು ಪೂಜಿಸುತ್ತಿದ್ದ ನಾಡಿನಲ್ಲಿ ಇಂದು ಹಾಡು ಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಹತ್ಯೆಗೈಯುತ್ತಿದ್ದಾರೆ. ಬಹುತೇಕ ಶಿಕ್ಷಣವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದ ಪರಿಣಾಮವಾಗಿ ಉನ್ನತ ಶಿಕ್ಷಣ ಎಂಬುದು ಉಳ್ಳವರ ಸ್ವತ್ತಾಗಿದ್ದು, ಬಡವರಿಗೆ ಗಗನ ಕುಸುಮವಾಗಿದೆ. ಉದ್ಯೋಗಾಧಾರಿತ ಶಿಕ್ಷಣಗಳು ದೊರೆಯದೆ ಇರುವ ಕಾರಣ ನಮ್ಮಲ್ಲಿ ಪದವೀಧರರು ಇದ್ದರೂ ಅವರಲ್ಲಿ ಇರಬೇಕಾದ ಅವಶ್ಯಕ ಜಾಣ್ಮೆ, ಕಾರ್ಯಶೀಲತೆ ಕಣ್ಮರೆಯಾಗಿದ್ದು ಒಬ್ಬರೇ ಮಾಡಬಹುದಾದ ಕೆಲಸವನ್ನು ಹತ್ತಾರು ಜನರು ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಗುಲಾಮಿ ಪ್ರವೃತ್ತಿಯನ್ನು ಹೊಂದಿರುವ ಜನರು ಉದ್ಯೋಗಕ್ಕಾಗಿ ಅಲೆಯುತ್ತಾರೆಯೇ ಹೊರತು ಉದ್ಯೋಗವನ್ನು ಸೃಷ್ಟಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಐತಿಹಾಸಿಕವಾಗಿ ಸಮೃದ್ಧವಾಗಿರುವ ನಮ್ಮ ಇತಿಹಾಸವನ್ನು, ಶೈಕ್ಷಣಿಕ ಜ್ಞಾನದ ವ್ಯವಸ್ಥೆಯನ್ನು ಹಿಂದಿಕ್ಕೆ ಆಂಗ್ಲರು ಜಾರಿಗೆ ತಂದಂತಹ ಶೈಕ್ಷಣಿಕ ಪದ್ಧತಿಗೆ ಜೋತು ಬಿದ್ದಿರುವ ನಾವುಗಳು ಸೀಡ್ ಲೆಸ್ ಶಿಕ್ಷಕರನ್ನು ಸೃಷ್ಟಿಸುತ್ತಿದ್ದೇವೆ. ಜನರು ಶಿಕ್ಷಿತರಾಗಿದ್ದಾರೆ ನಿಜ, ಆದರೆ ಸುಶಿಕ್ಷಿತರಾಗಿಲ್ಲ. ನ್ಯಾಯ, ಧರ್ಮ, ಸತ್ಯ, ನಿಷ್ಠೆ, ಪ್ರೀತಿ, ಮಮತೆ ಮುಂತಾದ ಮೌಲ್ಯಗಳು ಇಂದಿನ ಜನತೆಯ ಪಾಲಿಗೆ ಹಳೆಯ ಸವಕಲು ನಾಣ್ಯದಂತಾಗಿದ್ದು ಆ ಜಾಗದಲ್ಲಿ ದ್ವೇಷ ಅಸೂಯೆ, ಮತ್ಸರಗಳು ತುಂಬಿ ಮೌಲ್ಯಗಳ ಅಪಮೌಲೀಕರಣವಾಗುತ್ತಿದೆ. ರಾಮಾಯಣ ಮಹಾಭಾರತ, ಭಗವದ್ಗೀತೆಯಂತಹ ಮಹಾನ್ ಗ್ರಂಥಗಳನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದದೇಶದಲ್ಲಿ ಕವಿ, ಸಾಹಿತಿ, ಕಲೆ ಮತ್ತು ಕಲಾವಿದರನ್ನು ಕೆಲಸಕ್ಕೆ ಬಾರದವರು ಎಂಬಂತೆ ಕಾಣಲಾಗುತ್ತಿದೆ. ಹೊಡಿ ಬಡಿ ಲಾಂಗು ಮಚ್ಚು ಹಿಂಸೆಯನ್ನು ವೈಭವೀಕರಿಸುವ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಂಡು ಅದರ ಹೀರೋಗಳು ಜನನಾಯಕರಾಗಿ ಮೆರೆದರೆ, ಸಮಾಜವನ್ನು ಕಟ್ಟುವ ಶಿಕ್ಷಕರು, ದೇಶವನ್ನು ಕಾಯುವ ಯೋಧರನ್ನು ಅಸಡ್ಡೆಯಿಂದ ಕಾಣಲಾಗುತ್ತದೆ. ಶೈಕ್ಷಣಿಕ ಸೇವೆ ಮತ್ತು ವೈದ್ಯಕೀಯ ಸೇವೆಗಳು ಇದೀಗ ಕಾರ್ಪೊರೇಟ್ ರೂಪವನ್ನು ಪಡೆದುಕೊಂಡಿದ್ದು ಸೇವೆಯ ಬದಲಾಗಿ ದಂಧೆಗಳಾಗಿ ಪರಿವರ್ತನೆ ಹೊಂದಿವೆ. ರಕ್ತ ಬೀಜಾಸುರನ ಸಂತತಿಯಂತೆ ದೇಶವನ್ನೆಲ್ಲಾ ವ್ಯಾಪಿಸಿರುವ ಇವರ ಜಾಲವು ಜನರ ಶೈಕ್ಷಣಿಕ ಗುಣಮಟ್ಟವನ್ನು, ಆರೋಗ್ಯವನ್ನು ಕಟ್ಟಿಕೊಡುವ ಭರವಸೆಯನ್ನು ನೀಡುತ್ತವೆ, ನಿಜ ಆದರೆ ಅದರ ಜೊತೆಗೆ ಆರ್ಥಿಕ ದಿವಾಳಿತನಕ್ಕೆ ಕಾರಣವಾಗುತ್ತದೆ. ಇನ್ನು ಕೃಷಿ ಪ್ರಧಾನವಾದ ಭಾರತ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ನಮ್ಮ ದೇಶದಲ್ಲಿ ರೈತನ ಬದುಕು ಮೂರಾಬಟ್ಟೆಯಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಮಳೆ, ಸಿಗದ ಬಿತ್ತನೆ ಬೀಜಗಳು ಗೊಬ್ಬರಗಳು ಬಿತ್ತಿದ್ದು ಬೆಳೆಯಾಗದೆ, ಬೆಳೆದದ್ದು ಸರಿಯಾಗಿ ಕೈಗೆ ಬರದೆ ಕೈಗೆ ಬಂದರೂ ದಲ್ಲಾಳಿಗಳ ಮಧ್ಯವರ್ತಿಗಳ ನಡುವೆ ಸಿಲುಕಿ ಮಾರಾಟ ಮಾಡಿದಾಗ ಹಿಡಿಯಷ್ಟು ಹಣವನ್ನು ಕೈಯಲ್ಲಿ ಮನೆಗೆ ಹಿಡಿದು ಬರುವ ರೈತ ತನ್ನ ಮನೆಯವರ ಕಣ್ಣಿನಲ್ಲಿಯೇ ಸಸಾರವಾಗುತ್ತಾನೆ. ದೇಶದ ಬೆನ್ನೆಲುಬು ರೈತ ಎಂದು ನಮ್ಮ ಜನ ಹಾಡಿ ಹೊಗಳುವರು ….ಆದರೆ ಆ ರೈತನ ಬೆನ್ನೆಲುಬೇ ಮುರಿದುಹೋಗಿದೆ.  ಓಟು ಪಡೆಯುವ ಮುನ್ನ ಮತದಾರ ಪ್ರಭುವಿನ ಎದುರು ಶಿರಬಾಗಿ ನಮಿಸುವ ಮತ ಯಾಚಿಸುವ ನಾನು ನಿಮ್ಮವನು ಎಂದು ಹೇಳುವ ರಾಜಕಾರಣಿಗಳು ಒಂದೊಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದಾಗ ಇವನ್ಯಾರವ ಎಂದು ಕೇಳುವ, ಅಧಿಕಾರ ಚಲಾಯಿಸುವ, ತಮ್ಮ ಮುಂದಿನ ಮೂರು ತಲೆಮಾರಿನ ಜನರು ಕುಳಿತು ತಿನ್ನುವಷ್ಟು ಹಣವನ್ನು ಆಸ್ತಿಯನ್ನು ಸಂಗ್ರಹಿಸುವುದನ್ನು ನೋಡಿದರೆ ಅಸಹ್ಯವೆನಿಸುತ್ತದೆ. ‘ಶ್ವಾಸ ಬಿಟ್ಟರೂ ಆಶ್ವಾಸನೆ ಕೊಡುವುದನ್ನು ಬಿಡುವುದಿಲ್ಲ ಎಂಬಂತೆ ವರ್ತಿಸುವ ಜನ ಸೇವಕರು ಮುಂದೆ ಜನ ನಾಯಕರಾಗಿ ಪ್ರಜಾಪ್ರಭುತ್ವವನ್ನೇ ತಮ್ಮ ಕಾಲಡಿಯಲ್ಲಿ ತುಳಿದು ಅಟ್ಟಹಾಸಗೈಯುವುದನ್ನು ನಾವು ನೋಡುತ್ತೇವೆ.  ನಿಜ! ರಸ್ತೆಗಳ ಅಗಲೀಕರಣ ಮಾಡುವುದರಿಂದ ಫ್ಲೈ ಓವರ್ ಗಳನ್ನು ನಿರ್ಮಿಸುವುದರಿಂದ, ಬೃಹದಾಕಾರದ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಿಂದ ನಮ್ಮ ದೇಶ ಅಭಿವೃದ್ಧಿಯಾಗುವುದಿಲ್ಲ. ದೇಶದ ಅಭಿವೃದ್ಧಿಯನ್ನು 360° ಕೋನದಲ್ಲಿ ನೋಡಬೇಕು. ದೇಶದ ಅಭಿವೃದ್ಧಿಯನ್ನು ಮೂಲಭೂತ ಸೌಲಭ್ಯಗಳನ್ನು ಒದಗಿಸುವ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಅತ್ಯವಶ್ಯಕವಾದ ಮಾರ್ಗಗಳನ್ನು ಅನುಸರಿಸಲು ಸರಕಾರಗಳು ಹೆಣಗಾಡುತ್ತಿವೆ ನಿಜ…. ಆದರೆ ಪ್ರಯತ್ನ ಮತ್ತು ಕಾರ್ಯಶೀಲತೆ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಲೇಬೇಕು. ಮುಖ್ಯವಾಗಿ ಯುವ ಜನತೆಯಲ್ಲಿ ಮೌಲ್ಯಗಳ ಪುನರುತ್ಥಾನವಾಗಬೇಕು. ಬದುಕಿನಲ್ಲಿ ಭರವಸೆಯ ಜೊತೆಗೆ ಭದ್ರ ಭವಿಷ್ಯದ ಕನಸುಗಳು ಸಾಕಾರಗೊಳ್ಳುವ ನಿಶ್ಚಯಗಳು ಇರಬೇಕು. ಬಹಳಷ್ಟು ಇಲ್ಲಗಳ ನಡುವೆಯೂ ಕೂಡ ಸತತ ಪ್ರಯತ್ನಕ್ಕೆ ಜಯವಿದೆ ಎಂಬ ಮಾತಿನಂತೆ ದೇಶದ ನಾಲ್ಕು ಅಂಗಗಳು ಸಂವಿಧಾನವು ನಮಗೆ ನೀಡಿರುವ ಅಧಿಸೂಚನೆಗಳಂತೆ ಕಾರ್ಯನಿರ್ವಹಿಸಿದರೆ ಮುಂದಿನ ಕೆಲವೇ ದಶಕಗಳಲ್ಲಿ ನಾವು ಸುಸ್ಥಿರವಾದ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳುವ ಯುವ ಪೀಳಿಗೆಯನ್ನು ನೋಡಬಹುದು.  ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಅಂಕಿ ಅಂಶಗಳ ಆಧಾರದಿಂದ ನೋಡದೆ ಆ ದೇಶದ ಜನರ ಬದುಕಿನ ಸ್ಥಿತಿಗತಿಗಳು, ಆರ್ಥಿಕ ಸ್ಥಿರತೆ, ಸಾಮಾಜಿಕ ಭದ್ರತೆ, ಸಾಂಸ್ಕೃತಿಕ ಮೌಲ್ಯಗಳ ಅಳವಡಿಸಿಕೊಳ್ಳುವಿಕೆ, ಉತ್ತಮ ನಾಯಕತ್ವದ ಸಜ್ಜನಿಕೆಯ ದೂರ ದೃಷ್ಟಿಯುಳ್ಳ ವೈಯುಕ್ತಿಕ ಹಿತಾಸಕ್ತಿಯನ್ನು ಮೀರಿದ ರಾಜಕಾರಣ,ಸರ್ವಧರ್ಮ ಸಮಾನತೆಯ ಸಂಘಟನಾತ್ಮಕವಾದ ಜಾತ್ಯತೀತ, ಧರ್ಮಾತೀತ ಸಮಾಜ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಾಜವನ್ನು, ಮಹಿಳೆಯರ ಸದಲೀಕರಣವನ್ನು ಹೊಂದಿರುವ ನಿಟ್ಟಿನಲ್ಲಿ ನಾವು ನೋಡುವುದು. ಇದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ನೀಡಬೇಕಾಗಿರುವ ನಮ್ಮ ನಮ್ಮ ಸಾಲಿನ ಕಾಣಿಕೆ.ಇನ್ನಾದರೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ…. ಸುಸ್ಥಿರ ಸಮಾಜದ ಭದ್ರಬುನಾದಿಗೆ ಅಸ್ತಿ ಭಾರವನ್ನು ಹಾಕೋಣ ಎಂಬ ಆಶಯದೊಂದಿಗೆಎಲ್ಲರಿಗೂ 08ನೇ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು ವೀಣಾ ಹೇಮಂತ್ ಗೌಡ ಪಾಟೀಲ್

“80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಜೀವನ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »

You cannot copy content of this page

Scroll to Top