ಧಾರಾವಾಹಿ ಸಂಗಾತಿ-110 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಬದಲಾದ ವಾಸ್ತವ್ಯ ರೈಟರ್ ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು. ಸುಮತಿ ಟೀಚರ್ ಮತ್ತು ಮಕ್ಕಳು ತೋಟದ ದೊಡ್ಡ ಬಂಗಲೆಯ ಹತ್ತಿರವಿರುವ ಮನೆಯ ಕಡೆಗೆ ಪ್ರಯಾಣ ಬೆಳೆಸಲು ಬೇಕಾದ ಸೌಕರ್ಯವನ್ನು ಮಾಡಿಕೊಟ್ಟರು. ತೋಟದ ಲಾರಿಯನ್ನು ತರಿಸಿ, ಕೆಲಸಗಾರರ ಸಹಾಯದಿಂದ ಸುಮತಿಯ ಬಳಿಯಿದ್ದ ಅಲ್ಪಸ್ವಲ್ಪ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ಸುಮತಿ ವಾಸಿಸಬೇಕಾದ ಮನೆಯ ಬಳಿಗೆ ಕಳುಹಿಸಿಕೊಟ್ಟರು. ಸಾಹುಕಾರರು ಸೂಚಿಸಿದ ಪರಿಹಾರದದಂತೆ ಸುಮತಿ ಮತ್ತು ಮಕ್ಕಳು ದೊಡ್ಡ ತೋಟದ ಬಂಗಲೆ ಹತ್ತಿರ ಇರುವ ಮನೆಯಲ್ಲಿ ಹೊಸದಾಗಿ ವಾಸ್ತವ್ಯ ಹೂಡಿದರು. ಅವರಿಗೆ ಚಿರಪರಿಚಿತವಾದ ಸ್ಥಳವಾಗಿದ್ದ ಕಾರಣ ಅಂತಹಾ ದೊಡ್ಡ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಆದರೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಸುಮತಿ ಪ್ರತಿದಿನವೂ ನಡೆದು ಅದೇ ಶಾಲೆಗೆ ಹೋಗುತ್ತಿದ್ದಳು. ಮಕ್ಕಳಿಬ್ಬರು ಬಿಡುವಿರುವಾಗ ಅಮ್ಮನ ಜೊತೆ ಶಾಲೆಯ ಬಳಿ ತೆರಳುತ್ತಿದ್ದರು. ನವೋದಯ ಶಾಲೆಯಲ್ಲಿ ಓದುತ್ತಿದ್ದ ಕೊನೆಯ ಮಗಳು ಈ ಬಾರಿಯೂ ರಜಕ್ಕೆ ಬಂದಳು. ಹೊಸ ವಾಸ್ತವ್ಯ ಅವಳಿಗೂ ಖುಷಿ ಕೊಟ್ಟಿತು. ಆದರೆ ಮೂವರಿಗೂ ಮೊದಲಿನಂತೆ ಸ್ವಚ್ಛಂದವಾಗಿ ತೋಟವನ್ನು ಸುತ್ತಲು ಸಾಧ್ಯವಿರಲಿಲ್ಲ. ಅಲ್ಲಿನ ಪರಿಸರವೇ ಬೇರೆ ಇಲ್ಲಿನ ಪರಿಸರವೇ ಬೇರೆ. ಎರಡನೇ ಮಗಳು ದ್ವಿತೀಯ ಪಿಯುಸಿಯಲ್ಲಿ, ಮೂರನೇ ಮಗಳು ಹತ್ತನೇ ತರಗತಿಯಲ್ಲಿ ಹಾಗೂ ಮೂರನೇ ಮಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರಿಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಬೇಕಾಗಿರುತ್ತಿತ್ತು. ಮಕ್ಕಳು ಮೂವರೂ ಓದಿನಲ್ಲಿ ಬಹಳ ಚುರುಕಾಗಿದ್ದುದರಿಂದ ಸುಮತಿಗೆ ಅವರ ವ್ಯಾಸಂಗದ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಬದಲಿಗೆ ತನ್ನ ಮಕ್ಕಳು ಇನ್ನೇನು ಬೆಳೆದು ದೊಡ್ಡವರಾಗಿದ್ದಾರೆ. ಎಲ್ಲರೂ ಸಾಧ್ಯವಾದಷ್ಟು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸಗಳಿಗೆ ಸೇರುತ್ತಾರೆ ಎಂಬ ಭರವಸೆ ಇತ್ತು. ಇಬ್ಬರೂ ಹೆಣ್ಣು ಮಕ್ಕಳು ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಫೀಸ್ ಹಣವನ್ನು ಭರಿಸುವಂತಿರಲಿಲ್ಲ. ಹಾಗೂ ಇಬ್ಬರೂ ಪಠ್ಯ ವಿಷಯಗಳಲ್ಲಿ ಉತ್ತಮರಾಗಿದ್ದ ಕಾರಣ ಸ್ಪೈಸಸ್ ಬೋರ್ಡ್ ನಿಂದ ಅವರಿಬ್ಬರಿಗೂ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಮೂರನೇ ಮಗಳು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ಅವಳ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸುತ್ತಿತ್ತು. ಕಡುಬಡತನದ ಜೀವನವಾದರೂ ಅಮ್ಮ ಮಕ್ಕಳು ಸಂತೋಷದಿಂದಲೇ ಬದುಕುತ್ತಿದ್ದರು. ಈಗೀಗ ಸುಮತಿಗೆ ಕೇರಳದ ತನ್ನ ಮನೆ ಅಪ್ಪ ಅಮ್ಮ, ಅಕ್ಕ, ತಮ್ಮಂದಿರು, ತಂಗಿ ಹಾಗೂ ಸಂಬಂಧಿಕರ ನೆನಪು ಬಹಳವಾಗಿ ಕಾಡುತ್ತಿತ್ತು. ಅಕ್ಕ ಸಕಲೇಶಪುರದಲ್ಲಿ ಇರುವುದರಿಂದ ಗುರುವಾರ ಸಂತೆಗೆ ಹೋದಾಗ ಕೆಲವೊಮ್ಮೆ ಅಕ್ಕನ ಮನೆಗೆ ಹೋಗಿ ಅಕ್ಕನನ್ನು ಕಂಡು ಮಾತನಾಡಿಸಿ ಬರುತ್ತಿದ್ದಳು. ಒಮ್ಮೊಮ್ಮೆ ಸುಮತಿ ಮತ್ತು ಮಕ್ಕಳು ಅವರ ಮನೆಯಲ್ಲಿ ಒಂದು ರಾತ್ರಿ ಕಳೆದು ಮಾರನೇ ದಿನ ತಮ್ಮ ಮನೆಯ ಕಡೆಗೆ ಹೊರಡುತ್ತಿದ್ದರು. ದೊಡ್ಡಮ್ಮನ ಮಕ್ಕಳಲ್ಲಿ ಕಿರಿಯ ಅಣ್ಣ ಎಂದರೆ ಈ ನಾಲ್ಕು ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಚಿಕ್ಕಮ್ಮನ ಮಕ್ಕಳನ್ನು ತನ್ನ ಸ್ವಂತ ತಂಗಿಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆತ. ಅವರೆಲ್ಲರೂ ಮನೆಗೆ ಬಂದಾಗ ಹತ್ತಿರದಲ್ಲಿಯೇ ಇರುವ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತಿದ್ದ. ಸುಮತಿಯ ತಮ್ಮಂದಿರು ಇಬ್ಬರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹಿರಿಯ ತಮ್ಮ ಹಾಸನದಲ್ಲಿ ವಾಸ್ತವ್ಯವಿರುವಾಗ ಅಪರೂಪಕ್ಕೊಮ್ಮೆ ಅಲ್ಲಿಗೆ ಮಕ್ಕಳೊಂದಿಗೆ ಹೋಗಿ ಬರುತ್ತಿದ್ದಳು. ಈಗ ಅವನು ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ ಮೇಲೆ ಅವನನ್ನು ಕಾಣುವುದು ಸಾಧ್ಯವಿರಲಿಲ್ಲ. ಏಕೆಂದರೆ ಬೆಂಗಳೂರು ಬಹಳ ದೂರವಿದ್ದುದರಿಂದ ಹಾಗೂ ಅವಳಲ್ಲಿ ಅಷ್ಟೊಂದು ಹಣವಿರದ ಕಾರಣ ಅಲ್ಲಿಗೆ ಹೋಗಿ ತಮ್ಮನನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಚಿಕ್ಕ ತಮ್ಮನೂ ಕೂಡ ಗೊರೂರಿನಿಂದ ಕುಶಾಲನಗರದ ಹತ್ತಿರವಿರುವ ಪಿರಿಯಾಪಟ್ಟಣದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದ. ಅಮ್ಮ ತೀರಿ ಹೋದ ನಂತರ ಸುಮತಿ ಎಂದಿಗೂ ಕಿರಿಯ ತಮ್ಮನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹಿರಿಯ ತಮ್ಮನಿಂದ ಮತ್ತು ಅಕ್ಕನಿಂದ ಅವನ ಯೋಗ ಕ್ಷೇಮದ ವಿಚಾರಗಳು ತಿಳಿಯುತ್ತಿದ್ದವೇ ವಿನಹ ಅವಳೆಂದೂ ಅವನ ಮನೆಗೆ ಹೋಗಿರಲಿಲ್ಲ. ಅವನಿಗೆ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಚಾರವು ಅಕ್ಕನಿಂದ ಸುಮತಿಗೆ ತಿಳಿದಿತ್ತು. ತನ್ನ ಕಷ್ಟಕರವಾದ ಜೀವನದ ಬಗ್ಗೆ ಅವನಲ್ಲಿ ಹೇಳಿಕೊಳ್ಳಲು ಸುಮತಿಗೆ ಮನಸ್ಸಿರಲಿಲ್ಲ. ಅದೇಕೋ ಇವರಿಬ್ಬರ ಭೇಟಿ ಸಾಧ್ಯವಾಗಲೇ ಇಲ್ಲ. ಕಾಲವು ಎಲ್ಲವನ್ನೂ ಬದಲು ಮಾಡಿತ್ತು. ಸುಮತಿಗೆ ಕಿರಿಯ ತಮ್ಮನನ್ನು ನೋಡಲೇಬೇಕು ಎಂಬ ಹಂಬಲವೂ ಹೆಚ್ಚಾಗಿತ್ತು. ಆದರೆ ಮಕ್ಕಳನ್ನು ಕರೆದುಕೊಂಡು ತಾನು ಅವನ ಮನೆಗೆ ಹೋಗುವ ಅವಕಾಶವೇ ಇರಲಿಲ್ಲ. ಏಕೆಂದರೆ ಅವಳಿಗೆ ಬರುವ ಸಂಬಳದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟಕರವಾಗಿತ್ತು. ದೊಡ್ಡ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ ಮೇಲೆ ಮಲಯಾಳಿ ಡ್ರೈವರ್ ಕುಟುಂಬದೊಂದಿಗೆ ಸುಮತಿ ಹಾಗೂ ಮಕ್ಕಳು ಹೆಚ್ಚಾಗಿ ಬೆರೆಯಲು ಅವಕಾಶವಾಯಿತು. ಸುಮತಿಯ ಕಷ್ಟ ಸುಖಗಳನ್ನು ಡ್ರೈವರ್ ಹಾಗೂ ಆತನ ಪತ್ನಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರು ಪಡುತ್ತಿರುವ ಕಷ್ಟವನ್ನು ಕಂಡು ಮರುಗಿ ಸಾಹುಕಾರರ (ಪತ್ನಿ) ಅಮ್ಮ ನಲ್ಲಿ ಡ್ರೈವರ್ ಹೇಳಿಕೊಳ್ಳುತ್ತಿದ್ದರು. ಸುಮತಿಯ ಕಷ್ಟವನ್ನು ಅರಿತ ಅಮ್ಮ ಸುಮತಿಯನ್ನು ಕರೆದು ಬಂಗಲಗೆ ಸೇರಿಕೊಂಡಂತೆ ಇದ್ದ ಸಹಕಾರಿ ಅಂಗಡಿಯಿಂದ ತಿಂಗಳಿಗೆ ಒಂದಿಷ್ಟು ರೇಷನ್ ಕೊಡಿಸುವ ವ್ಯವಸ್ಥೆ ಮಾಡಿದರು. ಹಳೆಯದಾದರೂ ಹೊಸದರಂತೆ ಕಾಣುವ ಸೀರೆಗಳನ್ನು ಹಾಗೂ ತನ್ನ ಮಕ್ಕಳ ಬಟ್ಟೆಗಳನ್ನು ಸುಮತಿಯ ಮಕ್ಕಳಿಗೆ ಕೊಡುತ್ತಿದ್ದರು. ಹಾಗಾಗಿ ಬಟ್ಟೆಬರೆಯ ಬಗ್ಗೆ ಚಿಂತಿಸುವ ಅಗತ್ಯ ಸುಮತಿಗೆ ಇರಲಿಲ್ಲ. ಸುಮತಿಯ ಮಕ್ಕಳು ಬುದ್ಧಿವಂತರು ಎನ್ನುವ ವಿಷಯ ಅಮ್ಮನಿಗೆ ತಿಳಿದಿತ್ತು. ಹಾಗಾಗಿ ಆ ಮಕ್ಕಳ ಬಗ್ಗೆ ಅಮ್ಮನಿಗೆ ಕಾಳಜಿ ಇತ್ತು. ಸುಮತಿಯ ಮಕ್ಕಳಿಬ್ಬರೂ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರು. ಸುಮತಿ ಈಗೀಗ ಮೊದಲಿಗಿಂತ ನಿತ್ರಾಣಗೊಳ್ಳುತ್ತಿದ್ದಳು. ಗಾಳಿ,ಮಳೆ, ಬಿಸಿಲು ಎನ್ನದೇ ಸುಮಾರು ದೂರವಿದ್ದ ಶಾಲೆಗೆ ಕಾಲ್ನಡಿಗೆಯಲ್ಲೇ ಹೋಗಿ ಬರುತ್ತಿದ್ದಳು. ಈಗಿಗ ಅವಳಿಗೆ ಹೆಚ್ಚು ಆಯಾಸವಾಗುತ್ತಿತ್ತು. ಆದರೂ ಏನೂ ಮಾಡುವಂತಿರಲಿಲ್ಲ. ಮಕ್ಕಳ ಓದು ಮುಗಿದು ಒಳ್ಳೆಯ ಕೆಲಸ ದೊರಕುವವರೆಗೂ ತಾನು ಹೇಗಾದರೂ ದುಡಿಯಲೇಬೇಕಿತ್ತು.
ಧಾರಾವಾಹಿ ಸಂಗಾತಿ-108 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಆತಂಕದಲ್ಲಿಯೇ ರಾತ್ರಿ ಕಳೆದ ಕುಟುಂಬ “ಮುಂದಿನ ಬಾರಿ ಈ ತರದ ಯಾವ ಅದೃಷ್ಟವೂ ಇವರನ್ನು ಖಂಡಿತಾ ಕಾಪಾಡುವುದಿಲ್ಲ…. ಸರಿಯಾಗಿ ಪ್ಲಾನ್ ಮಾಡಿಕೊಳ್ಳೋಣ”…. ಎಂದು ಮತ್ತೊಬ್ಬ ಹೇಳಿದ. ಆಗ ಇನ್ನೊಬ್ಬ ಹೌದೆನ್ನುವಂತೆ ತಲೆ ಆಡಿಸಿದ. ಮಾತನಾಡುತ್ತಲೇ ಆ ಇಬ್ಬರು ಯುವಕರ ಸಂಭಾಷಣೆಯನ್ನು ಅಕ್ಕತಂಗಿಯರು ಗಮನಿಸಿದರು. ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುವ ಪ್ರಯತ್ನ ಮಾಡಿದರು. ಅವರು ಹೇಳಿದ ಮಾತುಗಳು ತಮಗಲ್ಲವೇನೋ ಅನ್ನುವಂತೆ ಕಿಟಕಿಯಿಂದ ಆಚೆ ನೋಡುತ್ತಾ ಕುಳಿತುಕೊಂಡರು. ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಅಕ್ಕನ ಕೈಯನ್ನು ತಂಗಿ, ತಂಗಿಯ ಕೈಯನ್ನು ಅಕ್ಕ ಬಲವಾಗಿ ಹಿಡಿದು ಮೌನವಾಗಿ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು. ಇಬ್ಬರ ಮನಸ್ಸು ಭಾರವಾಯಿತು. ತಮ್ಮ ಬಸ್ ನಿಲ್ದಾಣ ಬಂದಾಗ ಅಂಜುತ್ತಲೇ ಇಳಿದರು. ಆದರೆ ಹಿಂತಿರುಗಿ ನೋಡಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ತಿರುಗಿ ನೋಡಿದರು. ಅವರ ಜೊತೆ ಈ ಬಸ್ ನಿಲ್ದಾಣದಲ್ಲಿ ದಿನವೂ ಇಳಿಯುವ ಇತರೆ ಪ್ರಯಾಣಿಕರಿದ್ದರೇ ಹೊರತು ಆ ಇಬ್ಬರು ಯುವಕರು ಕಾಣಲಿಲ್ಲ. ಇಬ್ಬರೂ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ವೇಗವಾಗಿ ಹೆಜ್ಜೆ ಹಾಕುತ್ತಾ ಆತುರದಿಂದ ಮನೆಯ ಕಡೆಗೆ ನಡೆದರು. ಮನೆ ತಲುಪಿದಾಗ ಅಮ್ಮ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದುದು ಕಂಡರು. ಅಕ್ಕ-ತಂಗಿಯರಿಬ್ಬರೂ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು ತಾವೂ ದೇವರಿಗೆ ಕೈ ಮುಗಿದರು. ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರೂ ಸುಮತಿಗೆ ಮಕ್ಕಳಿಬ್ಬರ ಆಗಮನದ ಅರಿವಾಯಿತು. ಪ್ರಾರ್ಥನೆ ಮುಗಿದ ನಂತರ ಮಕ್ಕಳಿಬ್ಬರನ್ನು ಗಮನಿಸಿದಳು. ಇಂದು ಕೂಡ ಅವರ ಮುಖ ಬಾಡಿತ್ತು. ಬಹುಶಃ ನಿನ್ನಯ ಘಟನೆಯನ್ನು ನೆನೆದು ಮಕ್ಕಳು ಈ ರೀತಿ ಇರಬಹುದು ಎಂದುಕೊಂಡಳು. ಆದರೂ….” ಏನಾಯ್ತು ಮಕ್ಕಳೇ”…. ಎಂದು ಕೇಳಿದಳು. ಅಕ್ಕ-ತಂಗಿಯರಿಬ್ಬರು ಪರಸ್ಪರ ನೋಡಿಕೊಂಡು ಹೇಳೋಣ ಎನ್ನುವಂತೆ ಕಣ್ಣಲ್ಲಿ ಸನ್ನೆ ಮಾಡಿಕೊಂಡರು. ಇಬ್ಬರೂ ಒಕ್ಕೊರಲಿನಿಂದ…. “ಅಮ್ಮಾ….. ನಮ್ಮನ್ನು ಹಿಂಬಾಲಿಸಿ ಬಂದು ತೊಂದರೆ ಕೊಟ್ಟಂತಹ ಯುವಕರು ಯಾರೆಂದು ತಿಳಿಯಿತು”…. ಎಂದು ಮಕ್ಕಳು ಹೇಳಿದಾಗ, ಸುಮತಿ ಕಾತರದಿಂದ ಯಾರವರು?… ನಿಮಗೆ ಪರಿಚಿತರೇ?… ಅಥವಾ ಹೊರಗಿನವರೇ?… ಎಂದು ಕೇಳಿದಳು. ಆಗ ತಮಗೆ ತಿಳಿದಿರುವ ವಿಷಯಗಳನ್ನು ಮಕ್ಕಳು ತಿಳಿಸಿದರು. ಜೊತೆಗೆ ತಾವು ಬಸ್ಸಿನಲ್ಲಿದ್ದಾಗ ಅವರು ಮಾತನಾಡಿಕೊಂಡ ಬಗ್ಗೆಯೂ ಹೇಳಿದರು. ಮಕ್ಕಳ ಮಾತುಗಳನ್ನು ಆಲಿಸಿದ, ಸುಮತಿ ಹೌಹಾರಿದಳು. ಮುಂದೆ ಏನು ಮಾಡುವುದು? ಎನ್ನುವ ಚಿಂತೆಯು ಅವಳ ಮನವನ್ನು ಆವರಿಸಿತು. ದೇವರೇ ಗಂಡಿನಾಶ್ರಯವಿಲ್ಲದ ನಮ್ಮ ಬದುಕು ಎಷ್ಟೊಂದು ದುಸ್ತರವಾಗುತ್ತಿದೆ. ಆರೋಗ್ಯವಿರದ, ಅಬಲೆಯಾದ ನಾನು ನನ್ನ ಮಕ್ಕಳನ್ನು ಹೇಗೆ ದುಷ್ಟರಿಂದ ಕಾಪಾಡಲಿ.? ಒಂದು ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ನನ್ನನ್ನು ನಾನು ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದೇನೆ…. ನನಗಿರುವವರು ನಾಲ್ಕು ಹೆಣ್ಣು ಮಕ್ಕಳು…. ಒಬ್ಬಳದು ಮದುವೆಯಾಗಿದೆ…. ಉಳಿದ ಹೆಣ್ಣು ಮಕ್ಕಳಿಗೆ ಒಂದು ದಾರಿಯಾಗುವವರೆಗೂ ಹೇಗೆ ನಾನು ಕಾಪಾಡಲಿ? ನನ್ನ ಮಕ್ಕಳು ಕೂಡ ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಕೃಷ್ಣಾ ನೀನೇ ಏನಾದರೂ ಒಂದು ದಾರಿ ತೋರು ನಮಗೆ ಎಂದು ಮೌನವಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಿದ್ದಳು. ಅಮ್ಮನ ಚಿಂತಾಕ್ರಾಂತವಾದ ಮುಖವನ್ನು ನೋಡಿ ಮಕ್ಕಳಿಬ್ಬರೂ ಅಮ್ಮನ ಹೆಗಲ ಮೇಲೆ ಕೈಯಿಟ್ಟು ಏನು ಯೋಚಿಸುತ್ತಿರುವೆ? ಎಂಬಂತೆ ಅವಳ ಮುಖ ನೋಡಿದರು. ಸುಮತಿ ಬಾರದ ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾ….”ಹೆದರಬೇಡಿ ಮಕ್ಕಳೇ, ದೇವರು ನಮಗೆ ಏನಾದರೂ ಒಂದು ದಾರಿ ತೋರುವನು. … ಬನ್ನಿ ಮಕ್ಕಳೇ ಊಟ ಮಾಡೋಣ”… ಎಂದು ಅಡುಗೆ ಮನೆಯ ಕಡೆಗೆ ಮಕ್ಕಳನ್ನು ಬರುವಂತೆ ಸೂಚಿಸಿದಳು. ಇಬ್ಬರೂ ಸುಮತಿಯ ಜೊತೆಗೆ ಅಡುಗೆ ಮನೆಗೆ ಬಂದರು. ತಾವು ಕುಳಿತುಕೊಳ್ಳುವ ಮಣೆಯನ್ನು ಇಟ್ಟುಕೊಂಡು ಅಮ್ಮನಿಗೂ ಒಂದು ಮಣೆಯನ್ನು ಇಟ್ಟರು. ಸುಮತಿ ಇಬ್ಬರಿಗೂ ಊಟ ಬಡಿಸಿದಳು. ತಾನು ತಟ್ಟೆಯಲ್ಲಿ ಊಟವನ್ನು ಹಾಕಿಕೊಂಡು ಅನ್ಯಮನಸ್ಕಳಾಗಿ ಏನನ್ನೋ ಯೋಚಿಸುತ್ತಾ ಊಟ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅನ್ನವು ಅವಳ ನೆತ್ತಿಗೇರಿತು. ಜೋರಾಗಿ ಕೆಮ್ಮಲು ಪ್ರಾರಂಭಿಸಿದಳು. ಮಕ್ಕಳಿಬ್ಬರೂ ನೀರಿನ ಲೋಟವನ್ನು ಅಮ್ಮನೆಡೆಗೆ ಹಿಡಿದರು. ಸುಮತಿಯ ಕಣ್ಣುಗಳಲ್ಲಿ ನೀರು ತುಂಬಿ ಕನ್ನಡಕದ ಮೇಲೆ ಬಿದ್ದು ದೃಷ್ಟಿ ಮಂಜಾಯಿತು. ತನ್ನ ದಪ್ಪ ಕನ್ನಡಕವನ್ನು ತೆಗೆದು ಸೀರೆಯಿಂದ ಒರೆಸಿ ಪುನಹ ಹಾಕಿಕೊಳ್ಳುತ್ತಾ ನೀರನ್ನು ಕುಡಿದಳು. ಊಟ ಮುಗಿಸಿ, ಪಾತ್ರೆ ತೊಳದಿಟ್ಟು ಮಕ್ಕಳ ಜೊತೆಗೆ ಹೊರಗೆ ವರಾಂಡದಲ್ಲಿ ಬಂದು ಕುಳಿತಳು. ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ಕುಳಿತುಕೊಂಡು ಅಮ್ಮನ ಹೆಗಲ ಮೇಲೆ ತಲೆ ಇಟ್ಟುಕೊಂಡರು. ಅಮಾವಾಸ್ಯೆಯು ಹತ್ತಿರ ಬರುತ್ತಿದ್ದುದರಿಂದ ಆಗಸದಲ್ಲಿ ನಕ್ಷತ್ರಗಳು ಇನ್ನೂ ಹೆಚ್ಚು ಹೊಳಪಾಗಿ ಕಾಣುತ್ತಿದ್ದವು. ಸುಮತಿ ಗಿಡ ಮರಗಳ ನಡುವೆ ಆವರಿಸಿರುವ ಕತ್ತಲೆಯಲ್ಲಿ ಶೂನ್ಯತೆಯನ್ನು ನೋಡುತ್ತಾ, ಮನಸ್ಸಿನಲ್ಲಿ ಉಪಾಯವೊಂದು ಹೊಳೆದಂತಾಗಿ…. “ಮಕ್ಕಳೇ ನಾಳೆ ನೀವುಗಳು ಶಾಲಾ-ಕಾಲೇಜಿನಿಂದ ಹಿಂತಿರುಗಿ ಬರುವಾಗ ತೋಟದ ದೊಡ್ಡ ಬಂಗಲೆಯ ಗೇಟಿನ ಬಳಿ ಇಳಿದುಕೊಳ್ಳಿ….. ನಾನು ಶಾಲೆ ಮುಗಿದ ನಂತರ ಸಂಜೆ ಬಂದು ಅಲ್ಲಿ ಬಂಗಲೆಯ ಬಳಿ ನಿಮಗಾಗಿ ಕಾಯುತ್ತಿರುತ್ತೇನೆ….. ಸಾಹುಕಾರರನ್ನು ಕಂಡು ಮಾತನಾಡೋಣ…. ಅವರು ಏನಾದರೂ ಒಂದು ಪರಿಹಾರ ಸೂಚಿಸಬಹುದು”…. ಎಂದು ಸುಮತಿ ಮಕ್ಕಳಿಗೆ ಹೇಳಿದಳು. ಅಮ್ಮನ ಮಾತನ್ನು ಕೇಳಿದ ಮಕ್ಕಳು ಹಾಗೆಯೇ ಆಗಲಿ ಎನ್ನುವಂತೆ ತಲೆಯಾಡಿಸಿದರು. ಮನಸ್ಸಿನಲ್ಲಿ ಸಣ್ಣ ಆಶಾ ಭಾವನೆ ಹೊಳೆದಿದ್ದರಿಂದ ಸುಮತಿಯ ಮನಸ್ಸು ಸ್ವಲ್ಪ ತಿಳಿಯಾಯಿತು. ಏನಾದರೂ ಒಂದು ದಾರಿ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಮನೆಯ ಒಳಗೆ ನಡೆದಳು. ಬಾಗಿಲ ಚಿಲಕವನ್ನು ಹಾಕಿ, ಇಬ್ಬರನ್ನೂ ತನ್ನ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುವ ಪ್ರಯತ್ನ ಮಾಡಿದಳು. ಅಮ್ಮನ ತೋಳನ್ನು ತಲೆದಿಂಬಾಗಿಸಿಕೊಂಡು ಮಕ್ಕಳಿಬ್ಬರೂ ಅಮ್ಮನನ್ನು ಅಪ್ಪಿ ಮಲಗಿದರು. ದಿನವೂ ಮಲಗುವಾಗ ಸುಮತಿ ಮಕ್ಕಳಿಗೆ ಯಾವುದಾದರೊಂದು ನೀತಿ ಕಥೆಯನ್ನು ಹೇಳುತ್ತಿದ್ದಳು. ವಿಶೇಷವಾಗಿ ತನ್ನ ಇಷ್ಟದೈವ ಶ್ರೀ ಕೃಷ್ಣನ ಕಥೆಯನ್ನೇ ಹೆಚ್ಚಾಗಿ ಹೇಳುತ್ತಿದ್ದಳು. ಮಕ್ಕಳಿಗೂ ಅಮ್ಮ ಹೇಳುವ ಶ್ರೀ ಕೃಷ್ಣನ ಕಥೆ ಎಂದರೆ ಬಹಳ ಇಷ್ಟವಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ, ಹೂಂಗುಟ್ಟುತ್ತಾ ಮಕ್ಕಳಿಬ್ಬರೂ ನಿದ್ರೆಗೆ ಜಾರಿದರು.
ಅಂಕಣ ಸಂಗಾತಿ ಧಾರಾವಾಹಿಕಂತು=106 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಪಾರಾಗಿ ಬಂದ ಮಕ್ಕಳು ತನ್ನನ್ನು ಬಲವಾಗಿ ಹಿಂದಿನಿಂದ ಹಿಡಿದುಕೊಂಡವನು ಯಾರೆಂದು ಅವಳಿಗೆ ಊಹಿಸಲು ಸಾಧ್ಯವಿರಲಿಲ್ಲ. ಈ ದಿನ ತನಗೆ ಆಪತ್ತು ಖಂಡಿತ ಹಾಗಾಗಿ ಹೇಗಾದರೂ ಮಾಡಿ ಇವನಿಂದ ಬಿಡಿಸಿಕೊಳ್ಳಬೇಕು. ಎಂದು ಮನದಲ್ಲೇ ಅಂದುಕೊಂಡು “ಕೃಷ್ಣಾ ನನಗೆ ಶಕ್ತಿ ಕೊಡು” ಎಂದು ಕೇಳಿಕೊಂಡಳು. ಕೈಯಲ್ಲಿ ಪುಸ್ತಕ ಹಾಗೂ ಮಡಚಿಟ್ಟಿದ್ದ ಕೊಡೆ ಇತ್ತು. ಅವಳು ಪುಸ್ತಕವನ್ನು ಎದೆಗಾನಿಸಿಕೊಂಡು ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ವಸ್ತ್ರವನ್ನು ಧರಿಸಿದ್ದರೂ ಶಲ್ಯವನ್ನು ಹೊದ್ದುಕೊಂಡಿದ್ದರೂ ಕ್ಯಾಮರಾ ಕಣ್ಣುಗಳಿಂದ ವಕ್ಷಸ್ಥಳವನ್ನೇ ದಿಟ್ಟಿಸಿ ನೋಡುವ ಲಂಪಟರ ನೋಟಕ್ಕೆ ಬೇಸತ್ತು ಪುಸ್ತಕವನ್ನು ಎದೆಗವಚಿಕೊಂಡು ನಡೆಯುತ್ತಿದ್ದಳು. ತನ್ನನ್ನು ಬಲವಾಗಿ ಹಿಡಿದುಕೊಂಡವನ ಕರಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಕೈಯಲ್ಲಿದ್ದ ಕೊಡೆಯ ಹಿಡಿಯಿಂದ ಬಲವಾಗಿ ಒತ್ತಿದಳು. ಬಹುಶಃ ಆತನಿಗೆ ಹೊಟ್ಟೆಗೆ ಏನೋ ಚುಚ್ಚಿದಂತ ಅನುಭವ ಆಗಿರಬೇಕು ಹಿಡಿತವನ್ನು ಸ್ವಲ್ಪ ಸಡಿಲಿಸಿದ. ಇದು ಗಮನಕ್ಕೆ ಬಂದ ಕೂಡಲೇ ಆ ಹುಡುಗಿ ಹಿಂತಿರುಗಿ ನೋಡದೆ ಮಡಚಿದ್ದ ಕೊಡೆಯನ್ನು ಹಿಡಿದುಕೊಂಡು ಅದರ ಹಿಡಿಯಿಂದ ಮತ್ತೊಮ್ಮೆ ಬಲವಾಗಿ ಹೊಟ್ಟೆಗೆ ಗುದ್ದಿದಳು. ಬಹುಶಃ ಅವಳನ್ನು ಹಿಡಿದುಕೊಂಡಾತ ಹೆಚ್ಚು ಎತ್ತರವಿಲ್ಲದವನಿದ್ದಿರಬೇಕು. ಅವನ ಮರ್ಮಾಂಗಕ್ಕೆ ಕೊಡೆಯ ಹಿಡಿಯ ಹೊಡೆತ ಬಲವಾಗಿ ಬಿದ್ದುದರಿಂದ ಅಮ್ಮಾ ಎಂದು ಜೋರಾಗಿ ಕಿರುಚಿಕೊಂಡು ಆತ ಅವಳನ್ನು ಬಿಟ್ಟು ನೆಲದ ಮೇಲೆ ದೊಪ್ಪನೆ ಕುಳಿತುಬಿಟ್ಟ. ಆತನ ಸ್ನೇಹಿತ …”ಏನಾಯ್ತೋ ನಿನಗೆ”….ಎನ್ನುತ್ತಾ ಆತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಟಾರ್ಚ್ ಕೈಯಿಂದ ಕೆಳಗೆ ಬಿದ್ದ ಸದ್ದು ಕೇಳಿಸಿತು. ಕೂಡಲೇ ಆ ಹುಡುಗಿ ಜಾಗ್ರತಳಾಗಿ ಪುಸ್ತಕವನ್ನೆಲ್ಲ ಅಲ್ಲಿ ಬಿಸಾಡಿ ತನ್ನ ತಂಗಿಯ ಕೈ ಹಿಡಿದು ಮಾತಾಡದೆ ಎಳೆದುಕೊಂಡು ನೆಲಗೇಟಿನ ಗ್ರಿಲ್ ಮೇಲೆ ಹೆಜ್ಜೆ ಇಟ್ಟು ವೇಗವಾಗಿ ಓಡಲು ಶುರು ಮಾಡಿದಳು. ತಂಗಿಯು ತನ್ನ ತೋಳಲ್ಲಿದ್ದ ಪುಸ್ತಕದ ಚೀಲವನ್ನು ಕೆಳಗೆ ಬಿಸಾಡಿ ಅಕ್ಕನೊಂದಿಗೆ ಓಡಿದಳು. ಎಲ್ಲಿ ತಮ್ಮ ಹಿಂದೆ ಅವರು ಬರುತ್ತಿವರೋ ಎಂದು ಹೆದರುತ್ತ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಓಡುವ ಪ್ರಯತ್ನವನ್ನು ಮಾಡಿದರು. ಮಣ್ಣಿನ ಕಚ್ಚಾ ದಾರಿಯಲ್ಲಿ ಅಲ್ಲಲ್ಲಿ ಕಲ್ಲುಗಳು ಎದ್ದಿದ್ದವು. ಜೊತೆಗೆ ಕತ್ತಲು ಬೇರೆ, ಓಡುತ್ತಿರುವಾಗ ತಂಗಿ ಎಡವಿ ಬಿದ್ದಳು. ಬಿದ್ದ ತಂಗಿಯನ್ನು ಹಿಡಿದೆತ್ತಿ….”ಬಾ ಆದಷ್ಟು ಬೇಗ ಹೋಗೋಣ ….ಇಲ್ಲದಿದ್ದರೆ ನಮಗೆ ಆಪತ್ತು ಖಂಡಿತ”… ಎಂದಾಗ ಮಂಡಿ ತರಚಿ ಹೆಬ್ಬೆರಳು ಕೂಡ ನೋಯುತ್ತಿದ್ದರೂ ಅಕ್ಕನ ಮಾತಿಗೆ ಸರಿ ಎಂದು ಜೊತೆಗೆ ತಾನೂ ಓಡಿದಳು. ಇಳಿಜಾರು ದಾಟಿದ ನಂತರ ತಿರುವಿನ ಪಕ್ಕದಲ್ಲಿಯೇ ರೈಟರ್ ಮನೆ ಇತ್ತು. ಅಕ್ಕ ಓಡುತ್ತಲೇ ಹೋಗಿ ರೈಟರ್ ಮನೆಯ ಬಾಗಿಲನ್ನು ತಟ್ಟಿದಳು…” ಸರ್ ದಯವಿಟ್ಟು ಬಾಗಿಲು ತೆಗೆಯಿರಿ”… ಎಂದು ಜೋರಾಗಿ ಬಾಗಿಲನ್ನು ಬಡಿದಳು. ಆಗತಾನೆ ರಾತ್ರಿಯ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲೆಂದು ಕುಳಿತಿದ್ದ ರೈಟರ್ ಬಾಗಿಲು ಜೋರಾಗಿ ಬಡಿಯುವ ಸದ್ದಿಗೆ ಬೇಗನೆ ಬಂದು ಬಾಗಿಲು ತೆರೆದರು. ನೋಡಿದರೆ ಸುಮತಿಯ ಇಬ್ಬರು ಮಕ್ಕಳೂ ಏದುಸಿರು ಬಿಡುತ್ತಾ ನಿಂತಿದ್ದರು. ಬಹಳ ಹೆದರಿದಂತೆ ಕಂಡರು. “ಏನಾಯ್ತು ಮಕ್ಕಳೇ?…. ಯಾಕೆ ಹೀಗೆ ಹೆದರುತ್ತಾ ನಿಂತಿರುವಿರಿ?… ಎಂದು ರೈಟರ್ ಕೇಳಿದಾಗ ಹೇಳಲು ಬಾಯಿ ತೆರೆದಳಾದರೂ ಅವಳಿಂದ ಮಾತು ಬರಲಿಲ್ಲ ಬಾಯಿ ಒಣಗಿ ಹೋಗಿತ್ತು. ಅದನ್ನರಿತ ರೈಟರ್ ತನ್ನ ಪತ್ನಿಯನ್ನು ಕೂಗಿ ಸ್ವಲ್ಪ ನೀರು ತೆಗೆದುಕೊಂಡು ಬಾ ಎಂದು ಹೇಳಿದರು. ಒಂದು ಗುಟುಕು ನೀರು ಕುಡಿದ ಹುಡುಗಿ ನಡುಗುತ್ತಲೇ ಎಲ್ಲಾ ವಿವರವನ್ನು ತಿಳಿಸಿದಳು. ತಂಗಿಯು ಹೆದರಿ ಗಾಬರಿಯಿಂದ ನಿಂತಿದ್ದಳು ಜೊತೆಗೆ ಅವಳಿಗೆ ಕಾಲು ಕೂಡ ತುಂಬಾ ನೋಯುತ್ತಿತ್ತು. ಸುಮತಿಯ ಮಗಳ ಮಾತನ್ನು ಆಲಿಸಿದ ರೈಟರ್ ಒಳಗೆ ಹೋಗಿ ಟಾರ್ಚ್ ತಂದು…”ನಡೆಯಿರಿ ಮಕ್ಕಳೇ ನಾನು ನಿಮ್ಮ ಜೊತೆ ಬರುತ್ತೇನೆ…. ನೋಡೋಣ ನೆಲಗೀಟಿನ ಬಳಿ ಯಾರಿದ್ದರೆ ನೋಡೋಣ?….. ಎಂದು ಹೇಳುತ್ತಾ ಮಕ್ಕಳ ಜೊತೆ ಅವರು ಅಲ್ಲಿಯವರೆಗೆ ಹೋದರು. ಅಲ್ಲಿ ಯಾರೂ ಇರಲಿಲ್ಲ. ಬಹುಶಃ ತಮ್ಮಿಂದ ಬಿಡಿಸಿಕೊಂಡು ಓಡಿದ ಮಕ್ಕಳು ಯಾರನ್ನಾದರೂ ಕರೆದುಕೊಂಡು ಬರಬಹುದು ಎನ್ನುವ ಅರಿವಿದ್ದುದರಿಂದ ಅವರಿಬ್ಬರೂ ಅದಾಗಲೇ ಅಲ್ಲಿಂದ ಹೊರಟಿದ್ದರು. ಮಕ್ಕಳ ಪುಸ್ತಕ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಎಲ್ಲಾದರೂ ತೋಟದೊಳಗೆ ಅಡಗಿ ಕುಳಿತಿರಬಹುದು ಎನ್ನುವ ಗುಮಾನಿಯಿಂದ ರೈಟರ್ ಒಂದಷ್ಟು ದೂರದವರೆಗೂ ಟಾರ್ಚ್ ಲೈಟ್ ಹಾಕಿ ಹುಡುಕಿದರು. ಅಲ್ಲಿ ಯಾರೂ ಇರಲಿಲ್ಲ. ಮಕ್ಕಳಿಗೆ ಧೈರ್ಯ ಹೇಳುತ್ತಾ ಜೊತೆಗೆ ಕರೆದುಕೊಂಡು ಮನೆಯ ಕಡೆಗೆ ಹೊರಟರು. ರೈಟರ್ ಮನೆಯ ಒಂದು ತಿರುವಿನ ನಂತರವೇ ಸುಮತಿ ವಾಸಿಸುತ್ತಿದ್ದ ಮನೆ ಇದ್ದಿದ್ದು. ಹಾಗಾಗಿ ಮಕ್ಕಳು ರೈಟರ್ ರವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟರು. ಅಕ್ಕ ತಂಗಿಯರಿಬ್ಬರೂ ಆತಂಕದಲ್ಲಿದ್ದರು. ಯಾವುದೋ ಒಂದು ದುರ್ಘಟನೆಯಿಂದ ಕೂದಲೆಳೆಯಲ್ಲಿ ಪಾರಾದ ಸಮಾಧಾನವೂ ಇತ್ತು. ಮಕ್ಕಳು ಇಷ್ಟೊತ್ತಾದರೂ ಮನೆಗೆ ಬರದ ಕಾರಣ ಸುಮತಿ ಮನೆಯಿಂದ ಆಚೆ ಬಂದು ನಲ್ಲಿಯ ಕಟ್ಟೆಯ ಬಳಿ ನಿಂತು ದಾರಿಯೆಡೆಗೆ ನೋಡುತ್ತಿದ್ದಳು. ಎರಡು ನೆರಳು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಅಕ್ಕ-ತಂಗಿಯರಿಬ್ಬರು ದಾರಿಯಲ್ಲಿ ನಡೆದು ಬರುವಾಗ ನಗುತ್ತಾ, ತಮಾಷೆ ಮಾಡುತ್ತಾ ಬರುವವರು, ಇಂದು ಮೌನವಾಗಿ ನಡೆದು ಬರುತ್ತಿದ್ದರು. ಅವರ ಮೌನವನ್ನು ನೋಡಿ ಸುಮತಿ ತಾನು ಒಂದೆರಡು ಹೆಜ್ಜೆ ಮುಂದೆ ನಡೆದಳು. ಕತ್ತಲಿನಲ್ಲೂ ಅಮ್ಮನ ಆಕೃತಿ ಮಕ್ಕಳಿಗೆ ಗೋಚರಿಸಿತು. ಇಬ್ಬರೂ ಓಡೋಡಿ ಬಂದು ಅಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡರು. ಮಕ್ಕಳ ಈ ಚರ್ಯೆ ಸುಮತಿಗೆ ಹೊಸದೆನಿಸಿತು. ಅವ್ಯಕ್ತ ಭಯವೊಂದು ಮನವನ್ನು ಕಾಡಿ ಗಾಬರಿಯಾದಳು….”ಏನಾಯ್ತು ಮಕ್ಕಳೇ, ಏಕೆ ಇಂದು ಇಷ್ಟು ಮೌನವಾಗಿದ್ದೀರಿ?!!.. ಎಂದು ಕೇಳಿದಾಗ ಎರಡನೇ ಮಗಳು ಸಣ್ಣಗೆ ಬಿಕ್ಕುತ್ತಿರುವುದು ಸುಮತಿಯ ಅರಿವಿಗೆ ಬಂತು. ಅವಳ ಬಿಕ್ಕುವಿಕೆ ಕೇಳಿ ಸುಮತಿಯ ಹೃದಯ ಸಣ್ಣಗೆ ನಡುಗಿತು. ಮೂರನೇ ಮಗಳು….,”ಅಮ್ಮಾ ಕಾಲು ನೋಯುತ್ತಿದೆ…. ನಡಿ ಬೇಗ ಮನೆಗೆ ಹೋಗೋಣ…. ಅಲ್ಲಿ ಹೋಗಿ ಮಾತನಾಡೋಣ”…. ಎಂದಳು. ಮಕ್ಕಳು ದಾರಿಯಲ್ಲಿ ಬಿದ್ದಿರಬಹುದು. ಹೆಚ್ಚು ಪೆಟ್ಟಾಗಿರಬಹುದು. ಹಾಗಾಗಿ ಎರಡನೇ ಮಗಳು ಬಿಕ್ಕುತ್ತಿರಬಹುದು. ಎಂದು ತಿಳಿದ ಸುಮತಿ….. “ಬನ್ನಿ ಮಕ್ಕಳೇ, ಅಡುಗೆ ಮಾಡಿದ್ದೇನೆ ಬಿಸಿಯಾದ ಊಟವನ್ನು ತಿನ್ನುವಿರಂತೆ”….ಎಂದು ಮೂರನೇ ಮಗಳ ಕೈ ಹಿಡಿದು ನಿಧಾನವಾಗಿ ಮೆಟ್ಟಲುಗಳನ್ನು ಇಳಿದಳು. ಎರಡನೇ ಮಗಳು ಬಿಕ್ಕುತ್ತಲೇ ಅವರಿಬ್ಬರನ್ನು ಹಿಂಬಾಲಿಸಿದಳು.
ರುಕ್ಮಿಣಿ ನಾಯರ್ ಅವರ ಧಾರಾವಾಹಿಯ104 ನೆ ಕಂತು
ಎಷ್ಟೋ ಬಾರಿ ಕೋಳಿ ಮರಿಗಳನ್ನು ಹಿಡಿಯಲು ಹೋಗಿ ಹೇಂಟೆ ಕೋಳಿ ಅವಳನ್ನು ಅಟ್ಟಾಡಿಸಿ ಓಡಿಸಿ ಕುಕ್ಕಿದ್ದೂ ಇದೆ. ಆದರೆ ಅವಳು ಇವೆಲ್ಲಕ್ಕೂ ಹೆದರುತ್ತಿರಲಿಲ್ಲ.
ರುಕ್ಮಿಣಿನಾಯರ್ ಅವರ ಧಾರಾವಾಹಿಯ ನೂರಾಮೂರನೇ ಕಂತು “ಮಕ್ಕಳೊಂದಿಗೆ ಕಳೆದ ಸಂತಸದ ದಿನಗಳು”
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್ಧಾರಾವಾಹಿ ಸಂಗಾತಿ=102
ಸುಮತಿ ಹೆಚ್ಚಾಗಿ ಬಿಳಿಯ ಸೀರೆಯನ್ನೇ ಉಡುತ್ತಿದ್ದುದರಿಂದ ಬಿಳಿಯ ಬಣ್ಣದಲ್ಲಿ ಪುಟ್ಟ ಕಪ್ಪು ಹೂಗಳಿರುವ ಸೀರೆಯನ್ನು ಮಕ್ಕಳಿಬ್ಬರೂ ಅಮ್ಮನಿಗಾಗಿ ಆರಿಸಿದರು.
ಧಾರಾವಾಹಿ “ಒಬ್ಬ ಅಮ್ಮನ ಕಥೆ” ಯ
101ನೇಕಂತು
ತಾವು ತಂದಿದ್ದ ಎರಡು ಆಲೆಹಣ್ಣುಗಳನ್ನು ಸುಮತಿಗೆ ಕೊಟ್ಟರು. ಬಹಳ ಹಸಿವು ಎನಿಸಿದ್ದರಿಂದ ಮಕ್ಕಳು ನೀಡಿದ ಹಣ್ಣನ್ನು ಸ್ವೀಕರಿಸಿ, ಸರಗಿನಿಂದ ಒರೆಸಿ ಗಬ-ಗಬನೆ ತಿಂದಳು.
