ವೃದ್ಧಾಶ್ರಮಗಳ ಸುತ್ತ

ಚಿಂತನೆ

ಅರುಣ ರಾವ್

ನನ್ನ  ಶಾಲಾ ದಿನಗಳಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಈ ನಾಲ್ಕು ಆಶ್ರಮಗಳನ್ನು ಕೇಳಿದ್ದ ನನಗೆ, ವೃದ್ಧಾಶ್ರಮ ಎಂಬ  ಹೊಸ ಆಶ್ರಮ ನವ  ಪ್ರಪಂಚವೊಂದನ್ನು ಪರಿಚಯಿಸಿತು. ನನ್ನ ಚಿಕ್ಕಂದಿನಲ್ಲಿ ವೃದ್ಧಾಶ್ರಮ ಎನ್ನುವ ಪದವನ್ನು ನಾನೆಂದೂ  ಕೇಳಿಯೇ  ಇರಲಿಲ್ಲ. ಆಗೆಲ್ಲಾ  ಒಂದು ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಮಕ್ಕಳು ಬಹಳ ಆನಂದದಿಂದ ಸಮರಸದಿಂದ ಕೂಡಿ ಬಾಳುವೆ ನಡೆಸುತ್ತಿದ್ದರು. ಇವರೆಲ್ಲರೂ ಇದ್ದಾಗ ಮಾತ್ರ ನಮ್ಮದೊಂದು ಸಂಸಾರವಾಗುತ್ತದೆ ಎಂದು ಎಲ್ಲರೂ ಬಲವಾಗಿ ನಂಬಿದ್ದರು. ವಯಸ್ಸಾದ  ತಂದೆ ತಾಯಿಗಳು ನಮಗೊಂದು ಹೊರೆ ಎಂದು ಮಕ್ಕಳು ಎಂದೂ ಭಾವಿಸುತ್ತಿರಲ್ಲಿಲ್ಲ‌.   ತಮ್ಮ ತಂದೆ ತಾಯಂದಿರು ಅಜ್ಜ -ಅಜ್ಜಿಯರನ್ನು ನೋಡಿಕೊಳ್ಳುವುದನ್ನು ನೋಡುತ್ತಲೇ ಬೆಳೆದ ಮಕ್ಕಳು, ತಮ್ಮ ತಂದೆ ತಾಯಿಗೆ ವಯಸ್ಸಾದಾಗ ತಾವು ನೋಡಿಕೊಳ್ಳಬೇಕೆಂಬ ಸಹಜ ಭಾವನೆಯಿಂದಲೇ ಬೆಳೆದು ದೊಡ್ಡವರಾಗುತ್ತಿದ್ದರು.  ಅವರನ್ನು ನೋಡಿಕೊಳ್ಳುವುದು  ಮಕ್ಕಳ ಆದ್ಯ ಕರ್ತವ್ಯವಾಗಿ, ಬಲವಂತ ಮತ್ತು ದಾಕ್ಷಿಣ್ಯ ರಹಿತವಾಗಿ ಸರಾಗವಾಗಿ ಸಾಗಿ ಹೋಗುತ್ತಿತ್ತು. ಭಾರತೀಯ   ಸಮಾಜದ ಒಟ್ಟಾರೆ ಚಿತ್ರಣ ಇದೇ ಆಗಿರುವಾಗ ಎಲ್ಲರೂ ಈ ವ್ಯವಸ್ಥೆಯನ್ನು ಯಥಾವಿಧಿ ಒಪ್ಪಿಕೊಂಡು, ಅದರಂತೆ ತಮ್ಮ ಮನಸ್ಥಿತಿಯನ್ನು ರೂಢಿಸಿಕೊಳ್ಳುತ್ತಿದ್ದರು. 

ನಮ್ಮ ಪುರಾಣಗಳಲ್ಲಿ ಕಂಡು ಬರುವ ‘ಶ್ರವಣನ ಪಿತೃಭಕ್ತಿ’ ಕತೆಯೂ ಸಹ   ಇದನ್ನೇ ಒತ್ತಿಹೇಳುತ್ತದೆ.  ಶ್ರವಣಕುಮಾರನು ಕುರುಡರಾದ ತನ್ನ ತಂದೆ ತಾಯಿಯರ ಮನೋಭಿಲಾಷೆಯನ್ನು  ನೆರವೇರಿಸುವ ಸಲುವಾಗಿ,  ವಯಸ್ಸಾದ ಅವರನ್ನು  ಡೋಲಿಯಲ್ಲಿ ಕುಳ್ಳರಿಸಿಕೊಂಡು ಪುಣ್ಯಕ್ಷೇತ್ರಗಳಿಗೆ ಹೊತ್ತೊಯ್ದು ತೀರ್ಥಯಾತ್ರೆ ಮಾಡಿಸಿದ್ದು.  ನಂತರ ದಶರಥನ ಶಬ್ದವೇಧಿ ಬಾಣಕ್ಕೆ ಗುರಿಯಾಗಿ, ಸಾವಿನ ಅಂಚಿನಲ್ಲದ್ದಾಗಲೂ ಸಹ‌ ಅವನಿಗೆ ತನ್ನ ತಂದೆ-,ತಾಯಿಯರದೇ ಚಿಂತೆ. ಹಾಗಾಗಿ  ನಮ್ಮ ಇಂದಿನ ಯುವ ಜನಾಂಗ ಈ ಕತೆಯನ್ನು  ಮತ್ತೊಮ್ಮೆ ಕೇಳಬೇಕಿದೆ, ಮನವರಿಕೆ ಮಾಡಿಕೊಳ್ಳಬೇಕಿದೆ. ಏಕೆಂದರೆ  ಶ್ರವಣ ಕುಮಾರನು  ಸರ್ವಕಾಲಕ್ಕೂ, ಸರ್ವರಿಗೂ ಆದರ್ಶಪ್ರಾಯನಾಗಿದ್ದಾನೆ. ಉದಾಹರಣೆಗೆ ಸ್ವತ: ರಾಷ್ಟ್ರಪಿತ  ಮಹಾತ್ಮ ಗಾಂಧೀಜಿಯವರೇ ಈ ಕಥೆಯನ್ನು ಓದಿ, ಶ್ರವಣನಿಂದ ಪ್ರಭಾವಿತರಾಗಿ, ಕಾಯಿಲೆ ಪೀಡಿತರಾದ  ತಮ್ಮ ತಂದೆಯ ಸೇವೆಯನ್ನು  ಅವರ ಕೊನೆ ಉಸಿರಿರುವವರೆಗೂ ಮಾಡಿದರು..

ಆದರೆ  ಇಂದು ಎಲ್ಲವೂ ತಿರುಗು ಮರುಗಾಗಿದೆ. ಮಕ್ಕಳಿಗೆ ತಮ್ಮ ತಂದೆ ತಾಯಿ ತಮ್ಮ ಜೊತೆಯಲ್ಲಿದ್ದರೆ ಸರಿ‌ಬೀಳದು.  ಇದಕ್ಕೆ ಹಲವಾರು ಕಾರಣಗಳಿರಬಹುದು. ಅಜ್ಜ, ಅಜ್ಜಿಯರ  ಮುದ್ದಿನಿಂದಾಗಿ ತಮ್ಮ ಮಕ್ಕಳು ಹಾಳಾಗುತ್ತಿದ್ದಾರೆಂದೋ, ಸಂಜೆಯಾದರೆ ಧಾರಾವಾಹಿಗಳನ್ನು ನೋಡುವುದರಿಂದ ತಮ್ಮ ಮಕ್ಕಳು ಓದುತ್ತಿಲ್ಲವೆಂದೋ, ಅವರಿಂದಾಗಿ‌ ಮನೆಯಲ್ಲಿ ಪದೇಪದೇ ಜಗಳಗಳಾಗುತ್ತಿವೆಯೆಂದೋ  ಹೀಗೆ ಹತ್ತು ಹಲವು ಕಾರಣಗಳನ್ನು ನೀಡಿ,  ಮೊಮ್ಮಕ್ಕಳು ಅಜ್ಜಿ ಅಥವಾ ತಾತ ತಮ್ಮ  ಜೊತೆಯಲ್ಲಿ, ತಮ್ಮ ಮನೆಯಲ್ಲಿಯೇ  ಇರಬೇಕೆಂದು ಹಠ ಮಾಡಿ, ಅತ್ತು ಕರೆದು ಗೋಳಾಡಿದರೂ, ಮಕ್ಕಳ  ಮಾತನ್ನು‌ ಕೇಳದೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು, ತಮ್ಮ ಜೊತೆಯಲ್ಲಿಟ್ಟುಕೊಳ್ಳದೆ ಬೇರೆ ಮನೆ ಮಾಡಿ ಇಡುವುದು  ವಿಪರ್ಯಾಸವೇ ಸರಿ. ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳೊಂದಿಗೆ, ಮೊಮ್ಮಕ್ಕಳನ್ನು ಆಡಿಸುತ್ತಾ, ಕಾಲ ಕಳೆಯುವ ಕನಸನ್ನು ಹೊತ್ತ ವೃದ್ಧ ಜೀವಗಳು ವೃದ್ಧಾಶ್ರಮಕ್ಕೆ ಹೋಗಲು,   ತಾವೇ ಪ್ರತ್ಯೇಕವಾಗಿರಲು ಅದೆಷ್ಟು ನೊಂದುಕೊಂಡೀತೋ?

  ಇಂದು ಇದು ಕೇವಲ  ಬಡವ ಹಾಗೂ ಮಧ್ಯಮ ತರಗತಿಯವರ ಸಮಸ್ಯೆಯಷ್ಟೇ ಅಲ್ಲದೆ, ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳ ಭವ್ಯ ಭವಿಷ್ಯದ ಬಗೆಗೆ ಕನಸು ಹೊತ್ತ ಪೋಷಕರು ಅವರಿಗಾಗಿ ಹಗಲಿರುಳು ಶ್ರಮಿಸಿ ಕಷ್ಟ ಪಡುತ್ತಾರೆ.  ಓದಿದ ಮಕ್ಕಳು  ಉದ್ಯೊಗಗಳನ್ನು ಅರಸುತ್ತಾ, ವಿದೇಶಕ್ಕೆ ಹೋಗುತ್ತಾರೆ. ನಂತರ ಅಲ್ಲಿಯೇ ಶಾಶ್ವತವಾಗಿ  ನೆಲೆನಿಂತು,  ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಪೋಷಕರಿಗೆ ಕಳುಹಿಸಿ ಕೊಡುವುದರಲ್ಲಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಆದರೆ  ಈ ಹಣ ಯಾವತ್ತಿಗೂ ಇವರನ್ನು ಪ್ರೀತಿಯಿಂದ ಮಾತನಾಡಿಸಲು ಸಾಧ್ಯವೇ?   ಇವರು ಅನಾರೋಗ್ಯ ಪೀಡಿತರಾದಾಗ  ಸೇವೆ ಮಾಡಲು ಸಾಧ್ಯವೇ? ಅವರು ಕಾಯಿಲೆ ಬಿದ್ದಾಗ ಅಕ್ಕರೆಯಿಂದ ಆರೈಕೆ ಮಾಡಲು ಸಾಧ್ಯವೇ?  ವಯಸ್ಸಾದಂತೆ ಮುದಿ ಜೀವಗಳು ಇತರರೊಂದಿಗೆ  ಮಾತುಕತೆಗಾಗಿ ಹಂಬಲಿಸುತ್ತಿರುತ್ತದೆ.ಆದರೆ ಮಕ್ಕಳಿಗಾಗಲೀ, ಮೊಮ್ನಕ್ಕಳಿಗಾಗಲೀ ಇವರೊಡನೆ ಮಾತನಾಡಲು‌ ಪುರುಸೊತ್ತೆಲ್ಲಿಯದು?  ಈಗ‌ಂತೂ ಮಗುವನ್ನು‌ ಯಾವ ಶಾಲೆಗೆ ಸೇರಿಸಿದಿರಿ ಎನ್ನುವಷ್ಟು ಸಹಜವಾಗಿ, ‘ ನಿಮ್ಮ ತಂದೇನ ಯಾವ ವೃದ್ಧಾಶ್ರಮಕ್ಕೆ ಸೇರಿಸಿದ್ರಿ? ಎಂದು ಕೇಳಲಾಗುತ್ತಿದೆ.ಪಟ್ಟಣ ಪ್ರದೇಶಗಳಿಗೆ ಹೋಲಿಸಿಕೊಂಡರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಸ್ಥಿತಿ ವಿಭಿನ್ನವಾಗಿದೆ.  ವಯಸ್ಸಾದ ತಂದೆ ತಾಯಂದಿರು ಹಳ್ಳಿ ಗಳಲ್ಲಿ ವಾಸಿಸುತ್ತಿದ್ದರೆ, ಅವರ ಮಕ್ಕಳು ಕೆಲಸದ ಕಾರಣದಿಂದಲೋ ಮತ್ತೊಂದೋ ಆಗಿ ನಗರಗಳಲ್ಲಿ ನೆಲೆಸಿರುತ್ತಾರೆ.  ವರ್ಷದಲ್ಲಿ ಯಾವಾಗಲೋ ಒಮ್ಮೊಮ್ಮೆ ರಜಾ ದೊರೆತಾಗ ಊರಿಗೆ ಹೋದರೆ ಹೋದರು; ಇಲ್ಲದಿದ್ದರೆ ಇಲ್ಲ. 

ತಮ್ಮ ಇಡೀ ಜೀವಮಾನ ಅದರಲ್ಲೂ ಯೌವ್ವನದ ಬಹು ಪಾಲು ಕುಟುಂಬದ, ಮಕ್ಕಳ ಏಳಿಗೆಗಾಗಿ ದುಡಿದು ಹಣ್ಣಾದ ಜೀವಗಳು ವೃದ್ಧಾಶ್ರಮದ ಬಾಗಿಲ ಬಳಿ ಕುಳಿತು ತಮ್ಮ ಮಕ್ಕಳು ಎಂದಿಗೆ ಬರುತ್ತಾರೋ?  ಎಂದು ಎದಿರು ನೋಡುವ ದೃಶ್ಯವಂತೂ ಕರುಳಿರಿಯುವಂತಹುದು.   ಹಾಗಿದ್ದರೂ  ವೃದ್ಧಾಶ್ರಮಗಳಲ್ಲಿನ ವಾಸ್ತವ್ಯ ಅಷ್ಟೇನೂ ಕಷ್ಟಕರವಾದುದಲ್ಲ. ಏಕೆಂದರೆ ಅಲ್ಲಿ ಅವರಿಗೆ ಅವರದೇ ವಯೋಮಾನದವರ ಜೊತೆ ಬೆರೆಯುವ, ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಅವಕಾಶ ಇಲ್ಲದಿಲ್ಲ. ಕಾಲಕಾಲಕ್ಕೆ ಊಟ, ನಿದ್ದೆ, ವಿಶ್ರಾಂತಿ, ಔಷಧ ಎಲ್ಲವೂ ದೊರಕುತ್ತದೆ. ಅದರೂ ಈ ಸೌಕರ್ಯಗಳು ಸ್ವಂತ ಮಕ್ಕಳ ಜೊತೆ ಇರುವ ನೆಮ್ಮದಿಯನ್ನು  ಸುಖ-ಸಂತೋಷವನ್ನು  ಎಂದಿಗೂ ಕೊಡಲಾಗದು. ” ದೋಸೆ ಮಗುಚಿ  ಹಾಕಿದಂತೆ”ಎನ್ನುವ ಗಾದೆ ಮಾತಿನಂತೆ   ಅಜ್ಜ,ಅಜ್ಜಿಯರನ್ನು ವೃದ್ಧಾಶ್ರಮದಲ್ಲಿಯೇ ನೋಡಿ ಅಭ್ಯಾಸವಿರುವ ಇವರ ಮಕ್ಕಳು  ತಮ್ಮ ತಂದೆ-ತಾಯಿಯರಿಗೆ ವಯಸ್ಸಾದ ಕಾಲಕ್ಕೆ ಅವರನ್ನೂ ಸಹ ವೃದ್ಧಾಶ್ರಮಕ್ಮೆ ಕಳುಹಿಸುವುದು ನೂರಕ್ಕೆ ನೂರರಷ್ಟು ನಿಜ.  ಏಕೆಂದರೆ ಮಕ್ಕಳು ನಾವು ಹೇಳಿಕೊಟ್ಟು ಕಲಿಯುವುದಕ್ಕಿಂತ ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ ಅಲ್ಲವೇ?

********************

Leave a Reply

Back To Top