ಎದೆಯ ಬೆಂಕಿ

ಕವಿತೆ

ವೀಣಾ ನಿರಂಜನ

ನನ್ನ ಎದೆಯೊಳಗೆ ಬೆಂಕಿಯಿದೆ
ಈ ಬೆಂಕಿಯೇ
ನನ್ನ ಸುಡದಂತೆ ಎಚ್ಚರದಿಂದ
ದಾಟಬೇಕಿದೆ ಹೊರಗೆ
ನಿರೂಪಾಯಳಾದ ನನಗೆ
ನಿರುಪದ್ರವಿ ಕವಿತೆಯೇ
ಉತ್ತರ ಹೇಳಬೇಕು
ಅಕ್ಷರಗಳು ಬೇಯದಂತೆ
ಶಬ್ದಗಳು ಬೂದಿಯಾಗದಂತೆ
ಈ ಬೆಂಕಿಯಿಂದಲೇ
ಬೆಳಕ ಹೊತ್ತಿಸ ಬೇಕಿದೆ

ಕತ್ತಲು ಮಗ್ಗುಲು ಬದಲಾಯಿಸಿ
ನಾಳೆ –
ಬೆಳಗಾಗುವುದು ಮತ್ತೆ
ಸುಡುವ ಸೂರ್ಯ ಹೊತ್ತು ತರುತ್ತಾನೆ
ಬೆಳಕಿನ ಪುಂಜ ಎಂದಿನಂತೆ

ಎದೆಯ ಬೆಂಕಿಗೆ ನೆರಳಿಲ್ಲ ಎಂದಾದರೆ
ಕವಿತೆ –
ನೀನೇಕೆ ಮರವಾಗಿ ನಿಲ್ಲ ಬಾರದು
ಸುಡುವಾಗ್ನಿ ತಣ್ಣಗಾದೀತು
ನಿನ್ನ ತಂಗಾಳಿಯ ಸ್ಪರ್ಶದಿಂದ
ಗಾಳಿ, ಬೆಳಕು ಮತ್ತು ಕವಿತೆ
ಈ ಬೆಂಕಿಯೆದುರು
ಎದೆ ಸೆಟೆಸಿ ನಿಲ್ಲುವುದಾದರೆ
ಪುಟಗೊಂಡ ಆತ್ಮ ಪರಿಶುದ್ಧವಾಗುತ್ತದೆ
ಮತ್ತು
ಸತ್ಯವಾಗಿಯೂ ಅಲ್ಲಿ ಹೊಸತೊಂದು
ಕವಿತೆ ಬದುಕನ್ನು ಚುಂಬಿಸುತ್ತದೆ
ಬದುಕಿಗಾಗಿ ಹಂಬಲಿಸುತ್ತದೆ.

                   
**********************

Leave a Reply

Back To Top