ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮಡದಿಯನ್ನು ಕಾಡಿಗಟ್ಟಿದ್ದ ರಾಮನನ್ನು ಈಗ ರಾವಣವಧೆಯದು ಬ್ರಹ್ಮಹತ್ಯೆಯೆನಿಸಿ ಕಾಡಲಾರಂಭಿಸಿತ್ತು. ರಾವಣನೆಂಬ ಮಹಾಬ್ರಾಹ್ಮಣನನ್ನು ಕೊಂದ ದುರಿತ ತನ್ನದಾಯಿತಲ್ಲಾ! ಎಂದು ಚಿಂತಿಸತೊಡಗಿದ ಶ್ರೀರಾಮ. ಪರಿಹಾರವನ್ನು ಕೇಳಿದ್ದು ವಸಿಷ್ಠರಲ್ಲಿ. ಅವರು ಸೂಚಿಸಿದ್ದು ಅಶ್ವಮೇಧ ಯಾಗವನ್ನು. ಆದರೆ ಯಾಗ ನಡೆಯುವ ಸಮಯದಲ್ಲಿ ಪತ್ನಿ ಸೀತೆ ರಾಮನೊಡನೆಯೇ ಇರಬೇಕಿತ್ತು. ಚಿನ್ನದಿಂದ ನಿರ್ಮಿಸಲಾದ ಸೀತೆಯ ವಿಗ್ರಹವನ್ನಿಟ್ಟುಕೊಂಡು ಯಜ್ಞ ನಡೆಸುವೆನೆಂದ ಶ್ರೀರಾಮ. ಮುನಿಗಳ ಒಪ್ಪಿಗೆ ದೊರಕಿತು.
ದೀಕ್ಷಾಬದ್ಧನಾದ ದಶರಥಸುತ. ಪೂಜೆ ನಡೆಯಿತು ಕುದುರೆಯದ್ದು, ಕೌಸಲ್ಯಾತನಯನಿಂದ. ಶ್ರೀರಾಮ ಶ್ರೇಷ್ಠತೆಯನ್ನು ಸಾರಿಹೇಳುವ ಬರಹವಿದ್ದ ಪತ್ರಿಕೆಯನ್ನು ಅಶ್ವದ ಹಣೆಗೆ ಅಳವಡಿಸಲಾಯಿತು. ಮೂರು ಅಕ್ಷೆÆÃಹಿಣಿ ಸೇನೆ ಹೊರಟಿತು ಯಜ್ಞಾಶ್ವ ರಕ್ಷಣೆಗೆ. ಆ ಸೇನೆಯ ಮುಂದಾಳತ್ವವದು ಶತ್ರುಘ್ನನಿಗೆ. ದಿಕ್ಕುದಿಕ್ಕಿಗೆ ಚಲಿಸಿತು ಕುದುರೆ. ಹಲವು ಅರಸರು ಮಣಿದರು ಅಯೋಧ್ಯಾಪತಿಯ ಹೆಸರನ್ನು ಕೇಳಿ.
ಚಲಿಸುತ್ತಾ ಬಂದ ಕುದುರೆ ಈಗ ಸೇರಿದ್ದು ವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಸೇರಿದ್ದ ಉಪವನವನ್ನು. ಅಲ್ಲಿದ್ದ ಹಸಿಹಸಿರು ಹುಲ್ಲನ್ನು ಹೊಟ್ಟೆಗಿಳಿಸಿಕೊಳ್ಳುವ ಹುರುಪಿತ್ತು ಆ ಅಶ್ವಕ್ಕೆ. ಆ ಉಪವನದ ಕಾವಲಿಗಿದ್ದವನು ಲವ. ಬಿಲ್ಲನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದ ಆತ ಕುದುರೆಯನ್ನು ಕಂಡ. ವಾಲ್ಮೀಕಿ ಋಷಿಗಳೇ ಆ ಉಪವನದ ಕಾವಲು ಕಾಯುವ ಹೊಣೆಯನ್ನು ಅವನಿಗೆ ವಹಿಸಿ ವರುಣನ ಭೇಟಿಗಾಗಿ ಹೋಗಿದ್ದರು. ಈ ಕುದುರೆ ಉಪವನವನ್ನು ಹಾಳುಗೆಡಹಿದರೆ ವಾಲ್ಮೀಕಿ ಮುನಿಗಳು ಬೈದಾರು ತನ್ನನ್ನು ಎಂದುಕೊAಡ ಲವ.
ಕುದುರೆಯ ಬಳಿಬಂದ. ಅದರ ಹಣೆಯಲ್ಲಿದ್ದ ಲೇಖವನ್ನು ಓದಿದ. ಅದರಲ್ಲಿದ್ದ ಪರಾಕ್ರಮವನ್ನು ಕೆರಳಿಸುವ ಅಕ್ಷರಗಳು ಲವನ ಸಾಹಸ ಪ್ರವೃತ್ತಿಯನ್ನು ಪ್ರಚೋದಿಸಿತು. ಇದನ್ನು ಕಟ್ಟಿಹಾಕದಿದ್ದರೆ ತನ್ನ ಈ ತೋಳುಗಳು ಇರುವುದಾದರೂ ಏಕೆ ಎಂದು ತೋರಿತು ಅವನಿಗೆ. ತನ್ನ ಹೆಗಲ ಮೇಲಿನ ಶಾಲನ್ನು ತೆಗೆದ ಲವ ಅದರಿಂದಲೇ ಕಟ್ಟಿಹಾಕಿದ ಕುದುರೆಯನ್ನು, ಬಳಿಯಲ್ಲಿದ್ದ ಬಾಳೆಯ ಗಿಡಕ್ಕೆ.
ಅವನ ಜೊತೆಗಿದ್ದವರು ಕೆಲವು ಬ್ರಾಹ್ಮಣ ಹುಡುಗರು. ಹೆದರಿದರು. ಬೇರೆಯವರ ಕುದುರೆಯನ್ನು ಕಟ್ಟುವುದು ಸರಿಯಲ್ಲ ಎಂದರು. ಆದರೆ ಲವನಲ್ಲಿದ್ದ ಕ್ಷಾತ್ರಭಾವವದು ಅಳುಕಲಿಲ್ಲ; ಮಣಿಯಲಿಲ್ಲ.
ಕುದುರೆಯ ಕಾವಲಿಗಿದ್ದ ಸೈನಿಕರು ಅದೇ ಸಮಯದಲ್ಲಿ ಬಂದರು ಅಲ್ಲಿಗೆ. ಬಾಳೆಯ ಗಿಡಕ್ಕೆ ಕಟ್ಟಿದ್ದ ಕುದುರೆಯನ್ನು ಕಂಡರು. ಎದುರು ಕಂಡ ಬ್ರಾಹ್ಮಣ ಬಾಲಕರನ್ನು ದಿಟ್ಟಿಸಿ “ಕುದುರೆಯನ್ನು ಕಟ್ಟಿದವರಾರು?” ಎಂದು ಕೇಳಿದರು. ಬಾಲಕರ ಕೈಗಳು ಚಾಚಿದ್ದು ಲವನ ಕಡೆಗೆ. ಕಿರಿದು ಪ್ರಾಯದ ಹುಡುಗ ಅರಿವಿರದೆ ತುರಗವನ್ನು ಕಟ್ಟಿಹಾಕಿದ್ದಾನೆ ಎಂದು ತೋರಿತು ಅವರಿಗೆ. ಬಿಟ್ಟುಬಿಡು ಎಂದರು ಅಸಡ್ಡೆಯಿಂದ.
“ಕುದುರೆಯನ್ನು ಬಿಡುವುದಿಲ್ಲ. ಬಿಡಿಸುವುದಕ್ಕೆ ಹೋದವರ ಕರಗಳನ್ನು ಕತ್ತರಿಸದೆ ಇರಲಾರೆ” ಎಂಬ ಶೌರ್ಯದ ನುಡಿ ಹೊಮ್ಮಿತು ಲವನಿಂದ. ಸೈನಿಕರಿಗೆ ಹಠ ಮೂಡಿತು. ತಮ್ಮಂತಹ ಪರಾಕ್ರಮಿಗಳಿಗೆ ಪುಟ್ಟ ಪೋರನ ಸವಾಲೇ! ಎಂದು ತೋರಿತು. ಕುದುರೆಯನ್ನು ಬಿಡಿಸಲು ಮುಂದಾದರು. ಆ ಕ್ಷಣವೇ ಬಾಣ ಪ್ರಯೋಗಿಸಿದ ಲವ ಅವರ ಕೈಗಳನ್ನು ಕತ್ತರಿಸಿಹಾಕಿದ. ಮುನ್ನುಗ್ಗಿಬಂದ ಸೇನೆಯ ಮೇಲೆ ಬಾಣಗಳ ಮಳೆಯನ್ನೇ ಹರಿಸಿದ. ಸೈನಿಕರು ಬಿಟ್ಟ ಬಾಣಗಳನ್ನೆಲ್ಲವನ್ನೂ ಕತ್ತರಿಸಿ, ಸಂಖ್ಯೆಗಳನ್ನೆಣಿಸದೆಯೇ ಸೈನಿಕರ ಶಿರಗಳನ್ನು ಕತ್ತರಿಸುತ್ತಲೇ ಹೋದ ಲವ.
ರಾಮಸುತನ ಈ ಬಗೆಯ ದಿಟ್ಟಹೋರಾಟ ಕಾಣಿಸಿದ್ದು ಕುದುರೆಯ ರಕ್ಷಣೆಗೆಂದು ಬಂದಿದ್ದ ರಾಮಸೋದರ ಶತ್ರುಘ್ನನಿಗೆ. ಚತುರಂಗ ಬಲವನ್ನು ಕೂಡಿಕೊಂಡು ಲವನನ್ನು ಎದುರಿಸುವುದಕ್ಕೆ ಹೋದ ಆತ. ಶತ್ರುಘ್ನ ಆರ್ಭಟಿಸುತ್ತಾ ಬರುತ್ತಿರುವುದನ್ನು ಕಂಡ ಲವ ಶಿವನ ಮಂತ್ರವನ್ನು ಸ್ಮರಿಸಿದ.
“ನೀನಿನ್ನೂ ಶಿಶು. ಸಾಯದಿರು ನನ್ನ ಕೈಯ್ಯಲ್ಲಿ. ಕುದುರೆಯನ್ನು ಬಿಟ್ಟು ಹೋಗು” ಎಂಬ ರಾಮಸೋದರನ ಅಬ್ಬರದ ನುಡಿ ಅಳುಕಿಸದಾಯಿತು ಸೀತಾಸುತನನ್ನು. ಶತ್ರುಘ್ನ ಶರವನ್ನು ಕ್ಷಿಪ್ರವಾಗಿ ತುಂಡರಿಸಿ ಗೆಲುವಿನ ನಗು ಬೀರಿದ ಲವ.
ಕೆರಳಿದ ಶತ್ರುಘ್ನ. ಮೂರು ಬಾಣಗಳನ್ನು ಒಂದೇ ಬಾರಿಗೆ ಪ್ರಯೋಗಿಸಿದ. “ನನ್ನ ಪಾಲಿಗೆ ಪರಿಮಳದ ಕುಸುಮ ಬಾಣಗಳಿವು” ಎಂದು ನಗುತ್ತಾ ಬಾಣತ್ರಯಗಳನ್ನು ತುಂಡರಿಸಿದ ಲವನೆಂಬ ತರಳ.
‘ಇವನು ಪೋರನಲ್ಲ; ಬಾಣಗಳ ಪ್ರಾಣ ತೆಗೆಯುವ ಅಸಹಾಯ ಶೂರ’ ಎನ್ನುವುದು ಮನದಟ್ಟಾಯಿತು ಶತ್ರುಘ್ನನಿಗೆ. ಅಮೋಘವಾದ ಬಾಣವನ್ನೇ ಪ್ರಯೋಗಿಸಿದ. ಶಿವನ ಹಣೆಗಣ್ಣಿಂದ ಹೊರಬರುವ ಉರಿಯ ತೆರದಲ್ಲಿ ಭೀಕರವಾಗಿತ್ತು ಆ ಬಾಣ. ಮಂದಸ್ಮಿತ ಮೊಗದಿಂದಲೇ ಆ ಬಾಣವನ್ನು ಅರ್ಧರ್ಧವಾಗಿಸಿದ ರಾಮತನಯ. ಈಗಲೂ ಗೆಲುವು ತನ್ನದೇ ಎಂದುಕೊAಡು ಬೀಗಿದ. ಆದರೆ ಅದರಲ್ಲಿ ಒಂದರ್ಧ ನೆಲವನ್ನು ಸೇರಿಕೊಂಡಿದ್ದರೆ, ಇನ್ನೊಂದರ್ಧ ಮೇಲ್ಮುಖವಾಗಿ ಚಲಿಸಿ ಲವನ ಎದೆಗೆ ಆಘಾತವನ್ನು ಉಂಟುಮಾಡಿತು. ಪ್ರಜ್ಞಾಶೂನ್ಯನಾದ.
ನೆಲದ ಮೇಲೆ ಬಿದ್ದಿದ್ದ ಲವನ ಮುಖವದು ಶ್ರೀರಾಮನ ನೆನಪನ್ನು ಮೂಡಿಸಿತು ಶತ್ರುಘ್ನನಿಗೆ. ಮೋಹಭಾವದಿಂದ ಅವನ ಪ್ರಜ್ಞಾಶೂನ್ಯ ದೇಹವನ್ನು ತನ್ನ ರಥದ ಮೇಲಿರಿಸಿಕೊಂಡ. ಕುದುರೆಯನ್ನು ಬಿಡಿಸಿ, ಸೈನ್ಯದ ಜೊತೆಗೆ ನಗರದತ್ತ ಮುಖಮಾಡಿ ಪಯಣಿಸಿದ.
ಲವನ ಜೊತೆಗಿದ್ದ ಬ್ರಾಹ್ಮಣ ಹುಡುಗರು ವಿಚಾರವನ್ನು ಬಂದು ಅರುಹಿದರು ಸೀತೆಗೆ. ಮಗನಿಗೆದುರಾದ ಸ್ಥಿತಿಯನ್ನು ನೆನೆದು ಅತೀವ ದುಃಖಕ್ಕೊಳಗಾದಳು ಅವನಿಸುತೆ. ಏನಾಗಿಹೋಯಿತೋ ತನ್ನ ಮಗನಿಗೆ! ರಥದಲ್ಲಿ ಕೊಂಡೊಯ್ದವ ಅವನಿಗೆ ಅದಾವ ನೋವನ್ನಿತ್ತನೋ! ಎಂದೆಲ್ಲಾ ಭಾವಿಸಿ ರೋಧಿಸಿದಳು ಸೀತೆ. ಆಗಲೇ ಕುಶ ಅಲ್ಲಿಗೆ ಬಂದ.
***     

About The Author

Leave a Reply

You cannot copy content of this page

Scroll to Top