ಲಹರಿ
ಪ್ರಜ್ಞಾ ಮತ್ತಿಹಳ್ಳಿ
ಭರ‍್ರೋ…. ಎಂದು ಬೀಸುತ್ತಿದೆ ಗಾಳಿ. ಅನಾದಿ ಸೇಡೊಂದು ಹೂಂಕರಿಸಿ ಬಂದಂತೆ ಉರುಳಿ ಬೀಳುತ್ತಿವೆ ಹಳೆ ಮರದ ಗೆಲ್ಲುಗಳು. ನಡುಹಗಲೆ ಕತ್ತಲಾಗಿದೆ ಕರೆಂಟಿಲ್ಲದ ಒಳಮನೆಯಲ್ಲಿ. ತೌರಿಗೆ ಹೋದ ಹೊಸ ಸೊಸೆಯ ಕೋಣೆಯಲ್ಲಿ ಕಪಾಟಿನೊಳಖಾನೆಯಲ್ಲಿ ಮಡಿಸಿಟ್ಟ ರೇಷ್ಮೆ ಸೀರೆ ಅಸಹನೆಯಿಂದ ಮೈ ಕೊಡವಿ ಕೇಳುತ್ತಿದೆ ಎಂದು ಬರುತ್ತಾಳೆ? ಒಮ್ಮಲೆ ರಪರಪ ರಾಚಲಾರಂಭಿಸುತ್ತದೆ ಮಳೆ ಎಲ್ಲವನ್ನೂ ನೆನಪಿಸುವಂತೆ ಮತ್ತೆ ಎಲ್ಲವನ್ನೂ ಮರೆಸುವಂತೆ. ಕನ್ನಡಿಗಂಟಿಸಿದ ಬಿಂದಿಯೊಂದು ಗೋಡೆಯ ಕ್ಯಾಲಂಡರಿನತ್ತ ನೋಡಿ ಸಣ್ಣಗೆ ಕಣ್ಣು ಅರಳಿಸುತ್ತದೆ. ಸೋಮವಾರವೇ ಅಮಾವಾಸ್ಯೆ. ಅಂದರೆ ಇನ್ನು ತಡವಿಲ್ಲ. ಅಪ್ಪ ಕೊಡಿಸಿದ ಹೊಸ ಸೀರೆಯುಟ್ಟು ಅಮ್ಮ ನೀರೆರೆದು ಬೆಳೆಸಿದ ಜಾಜಿ ದಂಡೆ ಮುಡಿದು ಬಂದು ಬಿಡುತ್ತಾಳೆ. ಆಷಾಡ ತಿಂಗಳಿಡೀ ಈ ಕೋಣೆಯಲ್ಲಿ ಹೆಪ್ಪುಗಟ್ಟಿದ ವಿರಹದುರಿಯ ಅಸಹನೆಯೊಂದು ಹೇಳ ಹೆಸರಿಲ್ಲದೆ ಓಡಿ ಹೋಗುತ್ತದೆ. ಹೊಸ ಸೊಸೆಯೆದುರು ತನ್ನ ಕ್ರಮ ಪದ್ಧತಿಗಳ್ಯಾವುವೂ ಕಡಿಮೆಯಿಲ್ಲವೆಂದು ನಿರೂಪಿಸಲಿಕ್ಕೆ ಹಳೆಯ ರೂಢಿಗಳನ್ನೆಲ್ಲ ನೆನಪು ಮಾಡಿಕೊಂಡು ಪ್ರತಿ ಮಂಗಳವಾರವೂ ಗೌರಿಪೂಜೆ, ಶುಕ್ರವಾರ ಲಕ್ಷ್ಮಿಪೂಜೆ ಅಂತೆಲ್ಲ ಮಾಡಿಸಬೇಕೆಂದು ಹಂಬಲಿಸುತ್ತ ಸರಭರ ಓಡಾಡುತ್ತಿದ್ದಾಳೆ ಅತ್ತೆ. ಇಷ್ಟು ದಿವಸ ಮಂಡಿ ನೋವು ಅಂತ ನರಳುತ್ತಿದ್ದವಳಲ್ಲೆ ಆವಾಹಿಸಲ್ಪಟ್ಟ ಹೊಸ ಉಮೇದು ನೋಡಿ ಖುಷಿಯಾದ ಮಾವ ಅವಳ ಟ್ರಂಕಿನ ಅಡಿಯಿಂದ ಹೊರ ಬರುವ ಒಂದೊಂದೇ ರೇಶ್ಮೆ ಸೀರೆಗಳ ನೋಡುತ್ತ ತನ್ನ ಆಷಾಢದ ವಿರಹ ನೆನಪಿಸಿಕೊಳ್ಳುತ್ತಿದ್ದಾನೆ.
ಇನ್ನೇನು ಪಾದವೂರಲಿದೆ ಶ್ರಾವಣ. ಜ್ಯೇಷ್ಠ, ಆಷಾಢಗಳಲ್ಲಿ ಬಿಡುವಿಲ್ಲದೆ ಸುರಿದ ಮಳೆ ಶ್ರಾವಣದಲ್ಲಿ ತನ್ನ ಧಾರಾಗತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತದೆ. ಒಂದುಕ್ಷಣ ಹನಿಯುದುರಿಸುವ ಮೋಡಗಳು ಮುಂದೋಡಿದ ಕೂಡಲೆ ಎಳೆ ಬಿಸಿಲು ಬೆನ್ನಟ್ಟಿ ಬರುತ್ತದೆ. ಅದಕ್ಕಾಗಿಯೇ ಬೇಂದ್ರೆಯವರು ಹೇಳಿದ್ದು
“ಅಳಲು ನಗಲು ತಡವೆ ಇಲ್ಲ,
ಇದುವೆ ನಿನಗೆ ಆಟವೆಲ್ಲ
ಬಾರೋ ದಿವ್ಯ ಚಾರಣಾ
ತುಂಟ ಹುಡುಗ ಶ್ರಾವಣಾ”
ಹಾಗೆ ಹೇಳದೇ ಕೇಳದೇ ರಜಾ ಹಾಕಿ ಹೋದ ಸೂರ್ಯ ಮತ್ತೆ ಆಗೀಗ ಕಾಣಿಸಿಕೊಳ್ಳತೊಡಗಿದ್ದೇ ಗಿಡಗಳ ಚೈತನ್ಯ ಪರಿಧಿ ಹಿಗ್ಗತೊಡಗುತ್ತದೆ.ಹೆಂಚಿನ ಮೇಲೆ ಜರ‍್ರೆನ್ನುವ ಮಳೆಯ ಅನಾಹತ ನಾದ ಕೇಳಿ ಕೇಳಿ ಸಾಕಾದ ಕಂಬಗಳು ಬಾಗಿಲಾಚೆಗಿನ ಪಾಗಾರದತ್ತ ನೋಟ ಹರಿಸುತ್ತಿವೆ. ಕೆಂಪು ಕಲ್ಲಿನ ಅದರ ಮೈ ತುಂಬ ಹಚ್ಚ ಹಸಿರಿನ ಪಾಚಿಯ ಅಂಗಿ ಬೆಳೆಯುತ್ತಿದೆ. ಬಿರುಬಿಸಿಲ ತಾಪಕ್ಕೆ ನೆಲದೊಳಗೆ ಗೆಡ್ಡೆರೂಪದಲ್ಲಿ ತಲೆ ಮರೆಸಿಕೊಂಡಿದ್ದ ಭೂಚಕ್ರ ಕೆಂಪನೆಯ ಬೆಂಕಿ ಚೆಂಡಾಗಿ ಅರಳಲು ಮೊಗ್ಗೊಡೆದು ತಯಾರಾಗಿದೆ. ಸರಸರನೆ ಚಿಗಿತುಕೊಂಡ ಡೇರೆ ಹಿಳ್ಳೆ, ಶ್ಯಾವಂತಿಗೆಗಳು ಹೊಸ ಸೊಸೆಯಷ್ಟೇ ಚೆಂದಗೆ ಸಿಂಗರಿಸಿಕೊಂಡು ನಗುತ್ತಿವೆ. ಅಂಗಳದ ತುಂಬ ಹೆಸರೇ ಗೊತ್ತಿಲ್ಲದ ಕಳೆಗಿಡಗಳು ಪುಟುಪುಟು ಎದ್ದು ನಿಂತುಬಿಟ್ಟಿವೆ. ಯಾರೂ ನೆಡದಿದ್ದರೂ ಎಲ್ಲಿಯದೊ ನೆಲದ ಬೀಜಗಳು ಗಾಳಿ ಸವಾರಿ ಮಾಡಿಕೊಂಡು ಇಷ್ಟು ದೂರ ಬಂದು ಈ ಮಣ್ಣ ಮೈಯಲ್ಲಿ ಮುಖ ಒತ್ತಿ ಕಾಯುವುದೆಂದರೆ, ಆಮೇಲೆ ಯಾವಾಗಲೊ ಬೀಳುವ ಮಳೆಹನಿಯ ಕರೆಗೆ ಓಗೊಟ್ಟು ಚಿಗಿತು ಕುಡಿಯೊಡೆಯುವುದೆಂದರೆ ಅದೆಂತಹ ಪ್ರೀತಿಯ ಋಣಾನುಬಂಧ ಇರಬಹುದು! ಅದಿನ್ನೆಂತಹ ಜೀವದುನ್ಮಾದ ಛಲವಿರಬಹುದು! ಎಲ್ಲಿ ನೋಡಿದರಲ್ಲಿ ಹಸುರಿನ ಹೊಸ ಗಾನ ವಿತಾನ. ಬೇಂದ್ರೆಯವರು ಉದ್ಘರಿಸಿದಂತೆ
“ಬೇಲಿಗೂ ಹೂ ಅರಳಿದೆ
ನೆಲಕೆ ಹರೆಯವು ಮರಳಿದೆ
ಭೂಮಿ ತಾಯ್ ಒಡಮುರಿದು ಎದ್ದಳೋ
ಶ್ರಾವಣದ ಸಿರಿ ಬರಲಿದೆ
ಮಣ್ಣಹುಡಿಯ ಕಣಕಣವೂ ಕಣ್ಣಾಗಿ ಪಡೆದು ಬಣ್ಣಗಳ ಜಾತ್ರೆ ಶುರುವಾಗುತ್ತದೆ. ಅಂಗಳದ ತುಂಬ ಮಲ್ಲಿಗೆ, ಅಬ್ಬಲ್ಲಿಗೆ, ಗೆಂಟಿಗೆ, ದಾಸಾಳ, ಶ್ಯಾವಂತಿಗೆ, ಗುಲಾಬಿ, ಶಂಖಪುಷ್ಪ ಒಂದೇ ಎರಡೇ ನೂರಾರು ಹೂಗಳ ಸಂತೆ ನೆರೆಯಲಿದೆ. ಈ ಸೊಬಗು ನೋಡಲು ಮುಗಿಲಂಚಿನಲ್ಲಿ ಮೋಡ ಬಾಗಿ ನಿಲ್ಲುತ್ತದೆ. ಯಾವ ಹೂವಿನಂಗಡಿಗೆ ನುಗ್ಗಬೇಕೊ ತಿಳಿಯದ ಗೊಂದಲದಲ್ಲಿ ಪಾತರಗಿತ್ತಿಗಳು ಗಲಿಬಿಲಿಯಿಂದ ಕುಪ್ಪಳಿಸಬೇಕಾಗುತ್ತದೆ. ಮಸುಕು ಹರಿದು ಪಕ್ಕ ತೆರೆದು ಮುಕ್ತಿ ಪಡೆಯುವ ಚಿಟ್ಟೆಗಳು ಅಪ್ಸರೆಯರೇ ಅಂಗಳಕ್ಕಿಳಿದ ಭಾಸ ಮೂಡಿಸುತ್ತವೆ.
ಮನೆ ಬಿಟ್ಟು ಹೊರಗೆ ಬರಲಾರದಂತೆ ಸುರಿದ ಮಳೆಯೊಮ್ಮೆ ಬಿಡುವು ಕೊಟ್ಟರೆ ಬಾಗಿಲಾಚೆಗೆ ಗೇಟು ದಾಟಿ ಬಯಲಿಗಿಳಿಯಬಹುದು. ಹಿಂಡು ಮೋಡಗಳು ದಂಡೆತ್ತಿ ಹೊರಟಂತೆ ಓಡುವುದ ನೋಡಬಹುದು. ತುಂಬಿ ಹರಿವ ಕೆರೆಯ ಕೆನ್ನೆ ಮೇಲೆ ಮುತ್ತಿಡುವ ತುಟಿಯಂತೆ ಕೂತ ಕೆನ್ನೈದಿಲೆಗೆ ಕೈ ಬೀಸಬಹುದು. ಅರೆರೆ ಇದೇನಾಶ್ಚರ್ಯ ಕೊಳವು ನೀಲಿ ಮುಗಿಲಂತೆ ಕಾಣುತ್ತಿದೆ, ಮುಗಿಲು ನೀರಕೊಳದಂತೆ ಕಾಣುತ್ತಿದೆ. ಬೇಂದ್ರೆ ಕವನದ ಸಾಲು ಹೇಳುವಂತೆ
ಕೃಷ್ಣವರ್ಣದ ವಾಸುದೇವ ಬೀರಿದ ಬೆಳಕು
ಘನ ನೀಲ ಗಗನದಲಿ ಸೋಸಿ ಬಂದಂತೆ
ನೀಲ ಘನ ವೃಷ್ಟಿಯನ್ನುಂಡಾ ವಸುಂಧರೆಯು
ಹಸಿರಿನಲಿ ಕಾಮನನೆ ಹಡೆದು ತಂದಂತೆ.
ಹಸಿರುಡುಗೆಯುಟ್ಟು ಹೂ ಮುಡಿದುಕೊಳ್ಳುವ ಶ್ರಾವಣದಲ್ಲಿ ಸಾಲುಸಾಲು ಹಬ್ಬಗಳು. ಪ್ರತಿ ದಿನವೂ ಒಂದೊಂದು ವೃತ, ಸಡಗರ. ನಾಗಪ್ಪನಿಗೆ ತನಿ ಎರೆಯುವ ಚೌತಿ, ಅರಳು-ಎಳ್ಳು-ಶೆಂಗಾ-ಸೇವಿನುಂಡೆಗಳ ಪಂಚಮಿ. ಎತ್ತೆತ್ತರದ ಮರದ ಗೆಲ್ಲುಗಳಲಿ ಜೀಕುವ ಜೋಕಾಲಿ. ಹೊಸ ಜನಿವಾರ ಧರಿಸುವ ನೂಲು ಹುಣ್ಣಿಮೆ, ಅಣ್ಣ-ತಮ್ಮಂದಿರ ಪ್ರೀತಿ-ವಾತ್ಸಲ್ಯಗಳ ನವೀಕರಣಕ್ಕೆ ರಕ್ಷಾ ಬಂಧನ. ಎರಡನೆ ಶುಕ್ರವಾರದ ವರಮಹಾಲಕ್ಷ್ಮಿ ಕೃಷ್ಣ ಪಕ್ಷದ ಅಷ್ಟಮಿಯಂದು ಗೋಕುಲಾಷ್ಟಮಿ. ಮತ್ತೆ ಹತ್ತು ದಿನ ಕಳೆಯುತ್ತಿದ್ದಂತೆ ಭಾದ್ರಪದದ ಸ್ವರ್ಣಗೌರಿ ವೃತ. ಮರುದಿನ ಬರುತ್ತಾನೆ ಗಣೇಶ. ಐದು ದಿನದ ಪೆಂಡಾಲುಗಳು, ಬೀದಿಗಳಲ್ಲಿ ಮೆರವಣಿಗೆ ಎಳೆಯಷ್ಟಮಿ, ಅನಂತನ ಚತುರ್ದಶಿ, ಪಿತೃಪಕ್ಷದ ಶ್ರಾದ್ಧಗಳು, ಮಹಾಲಯ ಅಮಾವಾಸ್ಯೆ.
ಓಹ್ ಇನ್ನು ಅಡಿಗೆ ಮನೆಗೆ ಬಿಡುವೇ ಇಲ್ಲ. ಸಣ್ಣಗೆ ಬೆಂಕಿಯುರಿ ಮಾಡಿಕೊಂಡು ಒಂದೊAದೇ ಕಾಳುಗಳನ್ನು ಹುರಿದುಕೊಳ್ಳಬೇಕು. ಆಚೀಚೆ ಮನೆಯವರಿಗೆ ಘಂ ಎಂಬ ವಾಸನೆ ತಲುಪಿ ಯಾವ ಉಂಡೆಗಳ ತಯಾರಿ ನಡೆದಿದೆ ಎಂಬ ಸುದ್ದಿ ತಲುಪಿಯೇ ಬಿಡುತ್ತದೆ. ಹೆಸರು, ಕಡಲೆ, ಪುಟಾಣಿಗಳೆಲ್ಲ ಹುರಿದು ಕೆಂಪಾಗಿ ಡಬ್ಬಿಯಲ್ಲಿ ಕೂತು ಗಿರಣಿಗೆ ಹೋಗುತ್ತವೆ. ಪಂಚಮಿ ಇದಿರಿರುವಾಗ ಎಷ್ಟೇ ಮಳೆಯಿದ್ದರೂ ಕರೆಂಟಿದ್ದಷ್ಟೂ ಹೊತ್ತು ಗಿರಣಿ ತೆರೆದುಕೊಂಡು ಕೂಡುತ್ತಾನೆ ಆತ. ಹಿಟ್ಟು ಬೀಸಿಕೊಂಡು ಬಂದೊಡನೆ ಶುರುವಾಗುತ್ತದೆ ಬಿಡುವಿಲ್ಲದ ಕೆಲಸ. ಕರದಂಟಿನುಂಡೆ, ಸೇವಿನುಂಡೆ, ಲಡ್ಡಕಿಯುಂಡೆ, ತಂಬಿಟ್ಟು, ರವೆಲಾಡು, ಬೇಸನ್ ಲಾಡು ಪ್ರತಿ ಮನೆಯಲ್ಲೂ ಕಡೇ ಪಕ್ಷ ಐದು ಬಗೆ ಉಂಡೆಗಳನ್ನು ಮನೆಯ ಹೆಣ್ಣು ಮಕ್ಕಳಿಗೆ ಉಡಿ ತುಂಬಬೇಕು. ಆಚೀಚೆಯವರು ತಾಟಿನಲ್ಲಿ ಬಗೆಬಗೆಯ ಉಂಡಿಗಳನ್ನಿಟ್ಟು ಕೊಟ್ಟಾಗ ತಿರುಗಿ ನಮ್ಮ ಮನೆಯ ಉಂಡಿಗಳನ್ನು ತುಂಬಿ ಕೊಡಬೇಕಲ್ಲ! ಸಿಹಿಯ ಜೊತೆಗೆ ಖಾರದ ತಿನಿಸಿರದಿದ್ದರೆ ನಡೆಯುತ್ತದೆಯೆ? ಚಕ್ಕುಲಿ, ಕೋಡಬಳಿ, ಖಾರದವಲಕ್ಕಿ, ಶಂಕರಪಾಳಿ ಇಷ್ಟಾದರೂ ಆಗಲೇಬೇಕಲ್ಲ! ಹಬ್ಬಕ್ಕೆ ಮಗಳು ತವರಿಗೆ ಬರಲೇಬೇಕು. ಉಡಿ ತುಂಬಲಿಕ್ಕೆ ಹೊಸ ಸೀರೆ ತರಬೇಕು. ಒಂದು ಕೊಳ್ಳಲು ಹೋದಾಗಲೇ ನಾಕು ಚೆಂದ ಕಾಣುತ್ತವೆ. ಯಾವುದು ಕೊಳ್ಳುವುದು ಯಾವುದು ಬಿಡುವುದು ಗೊಂದಲವುಂಟಾಗಿ ಎರಡಾದರೂ ಕೊಳ್ಳೋಣ ಎನಿಸಿಬಿಡುತ್ತದೆ. ಮಗಳಿಗೆ ಕೊಡುವಾಗ ತನಗೂ ಒಂದು ಇದ್ದರೆ ಹೇಗೆ ಅಂತ ಪ್ರಶ್ನೆ ಹುಟ್ಟುತ್ತದೆ. ಈ ಮಾದರಿಯದು ತನ್ನ ಬಳಿ ಇಲ್ಲವಲ್ಲ ಅಂತ ಸಮಜಾಯಶಿ ಸಿಗುತ್ತದೆ. ಅದು ನಾರಿಗೂ ಸೀರೆಗೂ ಇರುವ ಜನ್ಮ ಜನ್ಮದ ಅನುಬಂಧ! ಕೊಂಡಷ್ಟೂ ತೀರದ ವ್ಯಾಮೋಹ. ಅದಕ್ಕಾಗಿಯೇ ಜಡಿಮಳೆಯಲ್ಲೂ ಗಿಜಿಗಿಜಿ ವ್ಯಾಪಾರ ನಡೆಸಿವೆ ಸೀರೆಯಂಗಡಿಗಳು. ಪೇಟೆ ಬೀದಿ ಹೊಕ್ಕ ಮೇಲೆ ಕೇಳಬೇಕೆ. ಗಿಳಿಹಸಿರು ಬಣ್ಣದಲ್ಲಿ ಚೆಂದಗೆ ನಗುತ್ತಿರುವ ಪೇರಲ ಕಾಯಿಗಳು, ಕೆಂಪಗೆ ಹಲ್ಲುಕಿಸಿದು ಕೂತಿರುವ ದಾಳಿಂಬೆಗಳು, ದಪ್ಪಗೆ ಮುಖ ಊದಿಸಿಕೊಂಡು ಬಡಿವಾರದಲ್ಲಿ ಎತ್ತರದ ಹಲಗೆ ಹತ್ತಿರುವ ಸೇಬುಗಳು. ಹಣ್ಣು ನೈವೇದ್ಯಕ್ಕಿಡದಿದ್ದರೆ ಅದೆಂಥಹ ಹಬ್ಬವಾದೀತು. ಹೂವಿನ ರಾಶಿ ಹಾಕಿಕೊಂಡು ಕೂತವಳ ಎದುರಿಗೆ ಬಂದಾಗಲೇ ಹೌಹಾರುವಂತಹ ಸ್ಥಿತಿ ಬರುವುದು. ಅಬ್ಬಾ ಮಲ್ಲಿಗೆ ಮಾರೊಂದಕ್ಕೆ ಎಷ್ಟು ಹೇಳುತ್ತಿದ್ದಾಳೆ! ಕೇಳಿದರೆ ಎಲ್ಲೂ ಮಾಲೇ ಇಲ್ಲ ಅಮ್ಮಾ ನನಗೆ ಬುಟ್ಟಿಗೆ ಇಷ್ಟು ಬಿದ್ದಿದೆ ಅಂತ ಇಷ್ಟುದ್ದ ಕತೆ ಹೇಳುತ್ತಾಳೆ. ಅದ್ಯಾಕೆ ಮಹಾಲಕ್ಷ್ಮಿಗೂ ರೇಟೇರಿಸಿಕೊಳ್ಳುವ ಹೂಮಾಲೆಗೂ ಸಂಬಂಧ ಹೀಗೆ ಕುದುರಿಕೊಂಡಿದೆಯೊ ಗೊತ್ತಿಲ್ಲ. ಪೂಜೆಗೆ ಬರುವ ಮುತ್ತೈದೆಯರಿಗೆ ಅರಿಶಿಣ ಕುಂಕುಮದ ಜೊತೆ ಎಲೆ-ಅಡಿಕೆ ಇಟ್ಟು ಹೂಮಾಲೆಯ ತುಂಡು ಕೊಡಲೇಬೇಕಲ್ಲ. ಅಂತೂ ಚೌಕಾಶಿ ಮಾಡಿ ಗೊಣಗೊಣ ಎಂದು ಅಲವತ್ತುಕೊಳ್ಳುತ್ತಲೇ ಖರೀದಿಸಬೇಕು. ಉಡಿ ತುಂಬುವ ವಸ್ತುಗಳೆಲ್ಲ ಒಂದೇ ಅಂಗಡಿಯಲ್ಲಿ ಸಿಕ್ಕಿಬಿಡುವುದರಿಂದ ತಾಪತ್ರಯವಿಲ್ಲ. ಖಣದ ಬಟ್ಟೆ, ಹಣಿಗೆ, ಬಳೆಗಳು, ಕರಿಮಣಿ, ಕೊಳ್ ನೂಲು(ಕೆಂಪುದಾರ) ಜೊತೆಗೆ ಪಿಳಿಪಿಳಿ ಕನ್ನು ಮಿಟುಕಿಸುತ್ತ ಇಣುಕಿ ನೋಡುತ್ತಿದೆ ಪುಟಾಣಿ ಕನ್ನಡಿ. ಯಾರೂ ಹೊಲಿಸಿಕೊಳ್ಳಲು ಸಾಧ್ಯವಿಲ್ಲದ ರವಿಕೆ ಬಟ್ಟೆಗಳನ್ನು ಕೊಡುವ ಬದಲಿಗೆ ಈಗೀಗ ಪುಟ್ಟ ಸ್ಟೀಲು ತಟ್ಟೆಗಳನ್ನು, ಡಬ್ಬಿಗಳನ್ನು ಅಥವಾ ಪರ್ಸುಗಳನ್ನು ಕೊಡುತ್ತಿದ್ದಾರೆ. ಆಚೀಚೆ ಮನೆಯವರನ್ನೇನೋ ಹೋಗಿ ಕರೆಯಬಹುದು ಆದರೆ ಉಳಿದ ಗೆಳತಿಯರನ್ನು ಕರೆಯಲಿಕ್ಕೆ ಫೋನೇ ಗತಿ. ಮೊದಲ ಮಂಗಳವಾರ ಬಂದವರನ್ನು ಇನ್ನುಳಿದ ವಾರಗಳಂದು ನೀವೇ ಬಂದುಬಿಡಿ ಮತ್ತೆ ಫೋನು ಮಾಡಲಿಕ್ಕೆ ನನಗೆ ಸಮಯ ಸಿಕ್ಕುವುದಿಲ್ಲ ಎಂದು ಪುಸಿ ಹೊಡೆದಿಟ್ಟುಕೊಂಡರೆ ಸಾಕು. ಅಯ್ಯೊ ಅರಿಶಿಣ ಕುಂಕುಮಕ್ಕೆ ಇಲ್ಲವೆನ್ನಲಿಕ್ಕೆ ಸಾಧ್ಯವಿದೆಯೆ ಎಂದು ಬರಲೊಪ್ಪುತ್ತಾರೆ. ನಸುಕಿಗೇ ಎದ್ದು ಮನೆಯೆದುರು ದೊಡ್ಡ ದೊಡ್ಡ ರಂಗೋಲಿ ಹಾಕಿ ಬಾಗಿಲಿಗೆ ತೋರಣ ಕಟ್ಟಿ ಹೋಳಿಗೆ ಅಂಬೋಡೆ ಕೋಸಂಬರಿ ಪಾಯಸಗಳ ಅಡುಗೆ ಮಾಡಿ ಆಮೇಲೆ ದೇವರ ಎದುರಿಗೆ ಕಲಶವಿರಿಸಿ ತೆಂಗಿನಕಾಯಿಗೆ ದೇವಿಯ ಮುಖವಾಡವಿಟ್ಟು ಹೊಸ ಸೀರೆಯುಡಿಸಿ, ಬಗೆಬಗೆಯ ಆಭರಣ ತೊಡಿಸಿ ಅಲಂಕರಿಸಿ ಪೂಜೆ ಮುಗಿಸುವಷ್ಟರಲ್ಲಿ ಮೂರೋ-ನಾಕೋ ಗಂಟೆಯಾಗಿಬಿಡುತ್ತದೆ. ಬೆಳಗಿಂದ ಉಪವಾಸವಿದ್ದದ್ದಕ್ಕೆ ಊಟವೂ ಸೇರುವುದಿಲ್ಲ. ಅಷ್ಟರಲ್ಲಿ ನೆನಪಾಗುತ್ತದೆ ಒಹೋ ಮುತ್ತೈದೆಯರು ಅರಿಶಿಣ-ಕುಂಕುಮಕ್ಕೆ ಬರುವ ಸಮಯವಾಯಿತು. ಈಗ ಮಾತ್ರ ಅವಸರ ಮಾಡುವಂತಿಲ್ಲ. ಸಾಧ್ಯವಾದಷ್ಟು ಚೆನ್ನಾಗಿ ಅಲಂಕರಿಸಿಕೊಳ್ಳಬೇಕು. ಏಕೆಂದರೆ ಹದ್ದಿನ ಕಣ್ಣಿನಿಂದ ಉಟ್ಟ ಸೀರೆಯ ಬಣ್ಣ-ಬುಟ್ಟಾ-ಸೆರಗು ನೋಡುತ್ತ ತೊಟ್ಟ ಆಭರಣದ ತೂಕವನ್ನು ಅಳೆದು ಬಿಡುತ್ತಾರೆ. ಪರಸ್ಪರರ ಮೇಲೆ ನೋಟದ ಸರ್ಚ ಲೈಟ್ ಓಡಾಡಿದ ಕೂಡಲೇ ಪ್ರಶ್ನೆಗಳ ಬಾಣದ ಮಳೆ ಶುರುವಾಗುತ್ತವೆ. ಎಲ್ಲಿ ತಗೊಂಡ್ರಿ, ಎಷ್ಟು ಕೊಟ್ರಿ, ಎಷ್ಟು ಡಿಸ್ಕೌಂಟು ಬಿಟ್ರು ಅಂತ. ಉಡುಪು-ತೊಡಪುಗಳನ್ನೆಲ್ಲ ಅಳೆದಾದ ನಂತರ ಸರ್ಚಲೈಟ್ ನಾರಿಮಣಿಯರ ದೇಹದಾಕಾರವನ್ನು ಅಳೆಯಲು ಶುರು ಮಾಡುತ್ತದೆ. ತೆಳ್ಗೆ ಕಾಣ್ತಿದೀರಲ್ಲ ಏನು ಮಾಡಿದ್ರಿ? ಯಾಕೊ ಸ್ವಲ್ಪ ದಪ್ಪಗಾಗೀದೀರಲ್ಲ ವಾಕಿಂಗ್ ಬಿಟ್ಟಿದೀರಾ? ಕಣ್ಣ ಕೆಳಗೆ ಕಪ್ಪು ಕಾಣ್ತಿದೆಯಲ್ಲ ಹುಶಾರಿಲ್ವಾ? ಹೀಗೆ ಉಭಯ ಕುಶಲೋಪರಿ ಸಾಂಪ್ರತ ನಡೆಸುತ್ತ ಲಕಲಕ ಹೊಳೆಯುವ ಲಲನೆಯರ ಹಿಂಡು ತನ್ನ ಕಡೆಗೆ ನೋಡುವುದೇ ಇಲ್ಲವಲ್ಲ ಎಂದು ಪೆಚ್ಚಾಗುವ ಮಹಾಲಕ್ಷಿಗೆ ಪಿಸುಧ್ವನಿಯಲ್ಲಿ ಸಾಂತ್ವನ ಹೇಳುತ್ತಿದೆ ಅವಳ ಕೊರಳ ಕಾಸಿನ ಸರ- ಇದೂ ಒಂಥರ ಲೌಕಿಕದ ಸಹಸ್ರನಾಮಾವಳಿ ಕಣಮ್ಮ ದೇವಿ. ಪ್ರತಿ ವಾರ ಗಿಲಿಗಿಲಿ ಎನ್ನುವ ಲಕ್ಷ್ಮಿಯನ್ನು ನೋಡುತ್ತ ತನ್ನ ಸೀರೆಯ ಪದರ ಬಿಡಿಸಿ ಕೊಡವಿ ತಯಾರಾಗುತ್ತಿದ್ದಾಳೆ ಸ್ವರ್ಣಗೌರಿ. ಅಮ್ಮಾ ನಾನೊಂದಿನ ತಡವಾಗಿ ಯಾಕೆ ಬರಬೇಕು ನಿನ್ನ ಜೊತೆಗೆ ಬಂದು ಬಿಡಲಾ? ಎನ್ನುವುದು ಗಣಪನ ಪ್ರಶ್ನೆ. ಏಯ್ ಒಂದು ದಿವಸವಾದರೂ ಗಂಡ-ಮಕ್ಕಳ ಕಾಟವಿಲ್ಲದೇ ಹಾಯಾಗಿ ಹೋಗಿ ಬರ್ತೀನಿ ನೀನು ನಿಮ್ಮಪ್ಪನ ಜೊತೆಗಿರು ಎಂದು ಸಿಡುಕುತ್ತಿದ್ದಾಳೆ ಶ್ರೀಗೌರಿ. ಆಹಾ ಇನ್ನೂ ಏನೆಲ್ಲ ನಡೆಯಲಿದೆ ನೋಡೋಣ ಬನ್ನಿ ಎಂದು ಓಡೋಡಿ ಬಂದ ಮೋಡಗಳು ಢಿಕ್ಕಿಯಾಟ ನಡೆಸಿವೆ.
ಅರೆರೆ ಇದೆಲ್ಲ ಪ್ರತಿ ವರ್ಷದ ಕತೆಯಾಯಿತು. ಈ ವರ್ಷ ಹಾಗಿಲ್ಲವಲ್ಲ. ಯಾರನ್ನೂ ಕರೆಯುವಂತಿಲ್ಲ. ಬಂದವರನ್ನು ಕಳಿಸುವಂತಿಲ್ಲ. ಅರಿಶಿನ ಹಚ್ಚುವ ಜಾಗದಲ್ಲಿ ಕೂತಿದೆ ಮಾಸ್ಕ್. ಮಂಗಳಗೌರಿ ಭೂಮಿಗೆ ಬರಬೇಕೆಂದರೂ ಮಾಸ್ಕ್ ಕಡ್ಡಾಯ. ಸ್ಯಾನಿಟೈಸರ್ ಬೊಗಸೆಗಳಿಗೆ ಮಹಾಲಕ್ಷ್ಮಿ ಕೃಪೆ ಮಾಡುತ್ತಾಳೆಯೆ?
********
ಪ್ರಜ್ಞಾ…ಎಷ್ಟು ಲವಲವಿಕೆ ಇದೆ ಬರಹದಲ್ಲಿ…
ಹರಿಶಿನ ಹಚ್ವುವಲ್ಲಿ ಮಾಸ್ಕ ….ಕೊನೆಯಸಾಲುಗಳು ವಾಸ್ತವದ ಕನ್ನಡಿ ಮೇಡಂ ನಿಮ್ಮ ಬರಹ ಎಂದಿನಂತೆ ಓದುಗರ ಮನದಾಳ ಮುಟ್ಟುತ್ತದೆ
ಸುಂದರವಾದ ನುಡಿಚಿತ್ರ. ಚೆಂದನೆಯ ಭಾಷೆ.