ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ

ಪ್ರಜ್ಞಾ ಮತ್ತಿಹಳ್ಳಿ

           ತನ್ನೆಲ್ಲ ಎಲೆಗಳನ್ನುದುರಿಸಿಕೊಂಡು ಒಣಗಿ ನಿಟಾರನೆ ನಿಂತುಕೊಂಡ ಬಿದಿರು ಗಳದಂತಹ ಎಲುಬುಗಳಿಗೆ   ಚರ್ಮ ಸುತ್ತಿ ಇಟ್ಟ ಹಾಗೆ ಭಾಸವಾಗುವ ಅವಳ ಕುತ್ತಿಗೆಯ ನರಗಳು ಹಸಿರು ಕಾಡು ಬಳ್ಳಿಗಳಂತೆ ಉಬ್ಬುಬ್ಬಿ ಗಂಟಲು ಹರಿದು ಹೊರಬಂದು ಬಿಡುತ್ತವೋ ಎಂಬಂತೆ ಕಾಣುತ್ತಿದ್ದವು. ಹಕ್ಕಿಯೊಂದು ಮೊಟ್ಟೆಯಿಡಲು ಮರದ ಕಾಂಡದಲ್ಲಿ ಹುಡುಕಿಕೊಂಡ ಡೊಗರಿನ ಹಾಗೆ ಎಲುಬುಗಳ ನಡುವೆ ಖಾಲಿ ಜಾಗ ಎದ್ದು ಕಾಣುತ್ತಿತ್ತು.  ಬದುಕಿನ ನಲವತ್ತು ವರ್ಷ ಜೊತೆಗಿದ್ದ ಅಸ್ತಮಾ ಅವಳ ಉಸಿರಾಟದ ರೀತಿಯನ್ನೇ ಬೇರೆ ಮಾಡಿಬಿಟ್ಟಿತ್ತು.  ಸಾದಾ ಉಸಿರು ಎಂದರೂ ಅದಕ್ಕೊಂದು ಸುಂಯ್ ಸುಂಯ್ ಸಪ್ಪಳ ಇರುತ್ತಿತ್ತು. ಹಳೆಯ ಹಾರ್ಮೊನಿಯಂ ಜೋರುಜೋರಾಗಿ ತಿದಿಯೊತ್ತಿದರೆ ಬುಸುಗುಟ್ಟುವ ಹಾಗೆ  ಆ ನಲವತ್ತು ವರ್ಷವೂ ಪ್ರತಿ ಸೆಕೆಂಡೂ ಅವಳು ತನ್ನ ಉಸಿರನ್ನು ಪ್ರಯತ್ನಪೂರ್ವಕವಾಗೇ ತೆಗೆದುಕೊಳ್ಳಬೇಕಿತ್ತು. ಮತ್ತು ಆ ಪ್ರತಿ ಸಲದ ಉಸಿರು ಎಳೆಯುವ ಸದ್ದನ್ನೂ ಅವಳ ಕಿವಿಗಳು ಕೇಳಿಸಿಕೊಂಡಿದ್ದವು. ಅವಳನ್ನು ಮೊದಲ ಬಾರಿಗೆ ನೋಡಿದವರು ಥಟ್ಟನೆ ಈ ವಿಲಕ್ಷಣ ಉಸಿರಾಟದ ಸಪ್ಪಳ ಗಮನಿಸಿ ಅನಾರೋಗ್ಯದ ಕುರಿತು ಕೇಳದೇ ಇರಲು ಸಾಧ್ಯವಾಗದಿರುವಷ್ಟರ ಮಟ್ಟಿಗೆ ಆ ಸದ್ದು ತನ್ನ ಇರುವಿಕೆಯನ್ನು ತೋರುತ್ತಿತ್ತು. ಅವಳು ನಾಕು ಮೆಟ್ಟಿಲು ಹತ್ತಿದಾಗಲಂತೂ ಅವಳ ನಾಕಡಿಯ ಪುಟ್ಟ ದೇಹದ ಪ್ರತಿ ಕಣ ಕಣವೂ ಉಸಿರಿಗಾಗಿ ಹಪಹಪಿಸುತ್ತಿರುವಂತೆ ಅನ್ನಿಸಿದರೆ ಆಳಕ್ಕಿಳಿದ ಕಣ್ಣುಗಳು ನೀರಿಂದ ಹೊರತೆಗೆದ ಮೀನುಗಳಂತೆ ಚಡಪಡಿಸುತ್ತಿದ್ದವು.  ಅವಳ ಪುಪ್ಪುಸದಲ್ಲಿ ಸದಾ ತುಂಬಿರುತ್ತಿದ್ದ ಕಫ ಖಾಲಿಯಾಗದ ಅಕ್ಷಯ ಭಂಡಾರದಂತೆ ಕೂತಿದ್ದು ಧಾವಂತದ ಘಳಿಗೆಗಳಲ್ಲಿ ಕೆಮ್ಮಿನ ಕೊನೆಯಲ್ಲಿ ಹೊರಬರುತ್ತಿತ್ತು. ನಿರಂತರ ಸ್ಟೆರಾಯ್ಡಿನ ಸೇವನೆಯ ಅಡ್ಡ ಪರಿಣಾಮವಾಗಿ ಸೊಟ್ಟ ಸೊಟ್ಟಗೆ ಬಗ್ಗಿ ಹೋದ ಬೆರಳುಗಳು ಅವಳು ಬದುಕಿಡೀ ಉಳಿಸಿಕೊಳ್ಳಲು ಹೆಣಗುತ್ತಿದ್ದ ಬಾಂಧವ್ಯಗಳ ಬೇರಂತೆ ನೇತಾಡುತ್ತಿದ್ದವು. ಅದೇ ಬೆರಳಿಂದಲೇ ದೊಡ್ಡ ದೊಡ್ಡ ತಪ್ಪಲೆಗಳ ಹೊತ್ತು ಓಡಿದಂತೆ ದಾಪುಗಾಲಿಕ್ಕುತ್ತ ಬುಸುಬುಸು ಉಸಿರೆಳೆದುಕೊಳ್ಳುತ್ತಲೇ ಕೂಡೊಲೆಗೆ ಬೆಂಕಿ ಹಾಕುತ್ತ ಸೊಟ್ಟ ಬೆರಳಿಂದಲೇ ಕಡುಬಿನ ಕೊಟ್ಟೆ ಕಟ್ಟಿ ಮೊಮ್ಮಕ್ಕಳು ಮರಿಮಕ್ಕಳಾದಿಯಾಗಿ ಹಿಂಡುಗಟ್ಟಲೆ ಜನರನ್ನು ಅನಾಮತ್ತಾಗಿ ಎಪ್ಪತ್ತು ವರ್ಷ ಸಾಕಿಬಿಟ್ಟಳು ಸೀರೆಯುಟ್ಟುಕೊಂಡು ಬಂದ ಇಣಚಿಯಂತಿದ್ದ ನಮ್ಮಜ್ಜಿ. 

 

             ಅಸ್ತಮಾ ಕಾಟಕ್ಕೆ ಅವಳಿಗೆ ರಾತ್ರಿ ಗಡದ್ದು ನಿದ್ದೆ ಅಂತ ಬರುತ್ತಲೇ ಇರಲಿಲ್ಲ. ಒಂದು ರೀತಿಯ ಮಂಪರಿನಲ್ಲೇ ಇರುತ್ತಿದ್ದಳು. ಯಾವುದಾದರೂ ಸಣ್ಣ ಸಪ್ಪಳವಾದರೂ ಎದ್ದು ಬಿಡುತ್ತಿದ್ದಳು. ಅವಳ ಮಂಚದ ಪಕ್ಕದಲ್ಲಿ ಕಿಡಕಿಯ ಮೇಲೆ ಯಾವಾಗಲು ಒಂದು ಬ್ಯಾಟರಿ, ಅಮ್ರತಾಂಜನದ ಡಬ್ಬಿ, ಬಾಯೊಳಗೆ ಸ್ಪ್ರೇ ಮಾಡಿಕೊಳ್ಳುವ ಅಸ್ತಮಾದ ಔಷಧಿ ಇರುತ್ತಿದ್ದವು. ಹಾಗೆ ನಿದ್ದೆಯಲ್ಲದ ಎಚ್ಚರವಲ್ಲದ ಮಂಪರಿನಲ್ಲಿ ತೆರೆದಿಟ್ಟ ಕಿಡಕಿಯಾಚೆಗಿನ ನಿಶಾ ಜಗತ್ತಿನ ಶಬ್ದಗಳನ್ನು ಆಲಿಸುತ್ತ ತನ್ನ ಉಸಿರಿಗೆ ತಾನೇ ಕಾವಲೆಂಬಂತೆ ಅಷ್ಟೆಲ್ಲ ವರ್ಷ ಬದುಕಿದರೂ ಒಂದೇ ದಿನಕ್ಕೂ ರೋಗ ಕೊಟ್ಟ ವಿಧಿಯನ್ನಾಗಲೀ, ಗುಣ ಮಾಡದ ಔಷಧಿಯನ್ನಾಗಲೀ, ತನ್ನ ಸ್ಥಿತಿಯ ಸಂಕಟವನ್ನಾಗಲೀ ಬೈದಿದ್ದು ಇಲ್ಲವೇ ಇಲ್ಲ. ಇದು ಹೀಗೇ ಇರಬೇಕು ಮತ್ತು ಇದು ಹೀಗಿದ್ದರೇ ಸರಿ ಎನ್ನುವಷ್ಟು ಒಗ್ಗಿಕೊಂಡು ಅದರಲ್ಲೇ ಮನಸ್ವೀ ಕೆಲಸ, ತಿರುಗಾಟ, ಕಾರ್ಯ-ಕಟ್ಟಲೆ ಓಡಾಡಿದ್ದೆಂದರೆ ಅದಕ್ಕೆ ಅವಳ ನಾಕಡಿ ದೇಹದ ಪ್ರತಿ ಅಣುಅಣುವಿನಲ್ಲಿ ತುಂಬಿದ್ದ ಜೀವಶೃದ್ಧೆ ಮತ್ತು ಏಳು ಜನ್ಮಕ್ಕಾಗುವಷ್ಟಿದ್ದ ಆತ್ಮವಿಶ್ವಾಸ ಕಾರಣ.

             ಆ ಕಾಲಕ್ಕೆ ಮನೆಪಾಠ ಮಾಡಿಸಿಕೊಂಡು ಎಲ್ ಎಸ್ ಓದಿದ್ದಳು. ಆದ್ದರಿಂದ ಕನ್ನಡದ ಜೊತೆಗೆ ಇಂಗ್ಲೀಷ್ ಹಿಂದಿಗಳೂ ಬರುತ್ತಿದ್ದವು. ತೀರಾ ಸಣ್ಣ ವಯಸ್ಸಿಗೆ ಮದುವೆಯಾಗಿ ಬಂದು ಏಳು ಜನ ಮೈದುನ, ನಾಲ್ವರು ನಾದಿನಿಯರ ಸಂಸಾರ ಸೇರಿಕೊಂಡು ಅತ್ತೆ ಮಾವನ ಮನೋಭಿಲಾಷೆ ತಿಳಿದು ವ್ಯವಹರಿಸುತ್ತ ನಾಲ್ಕು ಮಕ್ಕಳ ತಾಯಾಗಿ ಆಮೇಲೆ ಗಂಡ ಪ್ರತ್ಯೇಕ ಜಮೀನು ಮಾಡಲು ಹೊರಟಾಗ ಅಲ್ಲಿಯ ಅಟ್ರಾಕಣಿ ಬಿಡಾರಕ್ಕೆ ಸ್ಥಳಾಂತರಗೊಂಡು ಒಂದಿದ್ದರೆ ಒಂದಿಲ್ಲದ ಸಂಸಾರ ನಡೆಸುತ್ತ ಬದುಕು ಕಳೆದಳು. ತೋಚಿದ್ದನ್ನು ಆ ಕ್ಷಣಕ್ಕೆ ಮಾಡಿಬಿಡುವ ಅಜ್ಜ ಪರಿಣಾಮಗಳನ್ನು ಆದಮೇಲೆ ಅನುಭವಿಸುವ ಜಾಯಮಾನದವ. ಯೋಜನೆ, ಸಮಾಲೋಚನೆ, ಯಾರನ್ನಾದರೂ ಹೇಳಿ ಕೇಳುವ ಪ್ರವೃತ್ತಿ ಇಲ್ಲವೇ ಇಲ್ಲ. ಅವನ ಎಲ್ಲಾ ಯಡವಟ್ಟುತನಗಳ ಪರಿಣಾಮ ಉಣ್ಣುವಾಗ ಮಾತ್ರ ಅಜ್ಜಿಗೆ ಪಾಲು. ಮಾಡುವಾಗ ಅವಳೇನಾದರೂ ಸಲಹೆ ಸೂಚನೆ ಕೊಟ್ಟರೆ ಹೀನಾಯದ ಮೂದಲಿಕೆ ಕಟ್ಟಿಟ್ಟ ಬುತ್ತಿ. ಆರಡಿ ಎತ್ತರದ ದೊಡ್ಡ ಗಂಟಲಿನ ಪ್ರಚಂಡ ಧೈರ್ಯದ ಆಸಾಮಿ. ಹಾಗೊಮ್ಮೆ ಎಂದಾದರೂ ಜೋಗದ ತಡಸಲಿಗೆ ಬಂಡೆಯಿಂದ ಧುಮುಕಲು ಭಯವಾದರೆ ತನ್ನ ಧೈರ್ಯ ಕಡ ಕೊಡುವಂತಿದ್ದ.  ಇವಳು ಅವನೆದುರಿಗೆ ಬಿರುಮಳೆಯಲ್ಲಿ ತೊಯ್ದ ಗುಬ್ಬಚ್ಚಿ. ಹಾಗಂತ ಅವಳು ಅನ್ನಿಸಿದ್ದನ್ನು ಆಡದೇ ಬಿಟ್ಟವಳೇ ಅಲ್ಲ. ಅವನೆಷ್ಟೇ ಬೈದು ಕೂಗಿದರೂ ತನ್ನ ಅನಿಸಿಕೆಯನ್ನು ಹೇಳಿಯೇ ಸಿದ್ದ. ಅವನ ಕಿವಿಯೋ ಯಾವುದೋ ಅವಘಡದಲ್ಲಿ ಕೆಪ್ಪಾಗಿತ್ತು. ಇವಳು ಅವನ ಮತ್ತೊಂದು ಕಿವಿಯ ಹತ್ತಿರ ಕೂಗಿಕೂಗಿ ಹೇಳಬೇಕು. ಅವನು ಮೊದಲು ಆಂ ಆಂ ಎಂದು ಆಮೇಲೆ ಕೇಳಿದ ನಂತರ ಅವಳಿಗೆ ಯದ್ವಾ ತದ್ವಾ ಬಯ್ಯಬೇಕು. ನಾವೆಲ್ಲ ಮೊಮ್ಮಕ್ಕಳು ದೊಡ್ಡವರಾದಮೇಲೂ ಹೀಗೇ. ಪಾಪ ನಮ್ಮೆದುರಿಗೆ ಅವಳಿಗೆ ಪ್ರಚಂಡ ಅವಮಾನ ಆಗುತ್ತಿತ್ತು. ಹೆಂಡತಿಯ ಮಾತನ್ನು  ಎಂದೆಂದೂ ಕೇಳತಕ್ಕದ್ದಲ್ಲ ಅಂತ ಅದ್ಯಾವ ಪುರುಷೋತ್ತಮ ದೇವರು ಅವನಿಗೆ ಪ್ರಮಾಣ ಮಾಡಿಸಿ ಕಳಿಸಿದ್ದನೋ ಕಡೆತನಕ ಹಾಗೇ ಇದ್ದ. ತನ್ನ ನಿರ್ಧಾರವನ್ನು ಖಡಕ್ಕಾಗಿ ಹೇಳಿ ಮಾತ್ರ ರೂಢಿಯಿರುವ, ಯಾರ ಮಾತನ್ನು ಕೇಳಿ ಗೊತ್ತಿಲ್ಲದವರಿಗೆ ತಾವು ಕೆಪ್ಪರಾಗಿದ್ದೂ ಗೊತ್ತಾಗುವ ಸಂಭವ ಕಡಿಮೆ. ಯಾಕೆಂದರೆ ಅವರು ಕಿವಿಯನ್ನು ಬಹಳ ಕಡಿಮೆ ಮತ್ತು ಗಂಟಲನ್ನು ಬಹಳ ಜಾಸ್ತಿ ಉಪಯೋಗಿಸುತ್ತಿರುತ್ತಾರೆ.

           ಆರಂಭದ ದಿನಗಳಲ್ಲಿ ಬ್ರಿಸ್ಟಾಲ್ ಸಿಗರೇಟು ಸೇದುತ್ತಿದ್ದ ಅಜ್ಜ ಸಾಕಷ್ಟು ಖಾರ ಕೂಡ ತಿನ್ನುತ್ತಿದ್ದ. ಆಮೇಲೆ ಅಸಿಡಿಟಿ ಹೆಚ್ಚಾಗಿ ಕರುಳು ಹುಣ್ಣು ಆದಮೇಲೆ ಎಲ್ಲಾ ಬಿಟ್ಟ. ಮಲ್ಲಾಡಿಹಳ್ಳಿಗೆ ಹೋಗಿ ಯೋಗಾಸನ ಕಲಿತು ಬಂದ. ಒಂದು ದಿನವೂ ತಪ್ಪಿಸಲೇ ಇಲ್ಲ. ಅಜ್ಜಿ ತನ್ನ ಅಸ್ತಮಾಕ್ಕಾಗಿಯೂ ಔಷಧ ಪಡೆದು ಪ್ರಾಣಾಯಾಮ, ಯೋಗಾಸನ ಕಲಿತಳು. ಹೋದಹೋದಲ್ಲಿ ಹೆಂಗಸರಿಗೆಲ್ಲ ಕರೆಕರೆದು ಕಲಿಸುತ್ತಿದ್ದಳು. ಮಗಳ ಮನೆ, ಮೊಮ್ಮಗಳ ಮನೆ ಅಕ್ಕಪಕ್ಕದ ಹೆಂಗಸರೆಲ್ಲ ಅವಳ ಶಿಷ್ಯರೇ. ಅಜ್ಜ ಪ್ರತಿ ರಾತ್ರಿ ಏಳುವರೆಯೊಳಗೆ ಊಟ(ಒಣ ರೊಟ್ಟಿ, ಕಾಯಿಸುಳಿ, ಬಿಸಿ ಅನ್ನ-ಹಾಲು)ಮುಗಿಸಿ ಮಲಗಿ ಬಿಡುತ್ತಿದ್ದ. ಒಂಬತ್ತೆಂದರೆ ಅವನಿಗೆ ಮಧ್ಯರಾತ್ರಿ. ಬೆಳಿಗ್ಗೆ ನಾಕೂವರೆಗೆ ಎದ್ದು ದಡ ದಡ ಬಾಗಿಲು ಹಾಕಿ ತೆಗೆದು ಯೋಗಾಸನ ಮಾಡುತ್ತಿದ್ದ. ಓಂ ಎಂದು ಧ್ಯಾನ ಶುರು ಮಾಡಿದನೆಂದರೆ ಜೋಗದ ಕಾಡಿನ ಪ್ರಾಣಿಗಳಿಗೆಲ್ಲ ಅಲಾರಾಂ ಕೂಗಿದಂತಾಗುತ್ತಿತ್ತು. ಅಜ್ಜಿ ಎದ್ದು ಕೆಂಪಕ್ಕಿ ಗಂಜಿ ತಿಂಡಿ ಚಾ ಅಂತೆಲ್ಲ ತಯಾರಿ ಮಾಡಬೇಕು. ಬೆಳಿಗ್ಗೆ ಏಳೆಂದರೆ ಎಲ್ಲಾ ರೆಡಿ. ನಸುಕಿನ ಆರು ಗಂಟೆಗೆ ಅಜ್ಜನ ರೆಡಿಯೊ ಶುರುವಾಗುತ್ತಿತ್ತು. ದಟ್ಟ ಕಾಡಿನ ಕಣಿವೆಯೊಳಗೆ ಅದು ಹೇಗೆ ರೆಡಿಯೊ ತರಂಗಗಳು ಬರಲು ಸಾಧ್ಯ? ಗೊರಗೊರ ಸಪ್ಪಳದ ನಡುನಡುವೆ ಚಿಂತನ. ರೈತರಿಗೆ ಸಲಹೆ, ಪ್ರದೇಶ ಸಮಾಚಾರ ಇಷ್ಟನ್ನು ಕೇಳಿ ಅಜ್ಜ ತಿಂಡಿಗೆ ಬರುತ್ತಿದ್ದ. ಸಂಜೆ ಏಳಕ್ಕೆ ಮತ್ತೆ ರೇಡಿಯೊ ಗೊರಗೊರ. ಕೃಷಿರಂಗದಲ್ಲಿ ಬಂದಲಿ ಎತ್ತ ಕಾಳಿಂಗ ಎತ್ತ ಮಾಲಿಂಗ ಅಂತೆನೋ ಅದರ ಟೈಟಲ್ ಹಾಡು ಬರುತ್ತಿತ್ತು. ಯುವವಾಣಿಯ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿರುತ್ತಿತ್ತು. ಆದರೆ ಅದು ಅಜ್ಜನ ಊಟದ ಹೊತ್ತು ಪಟ್ಟನೆ ರೆಡಿಯೊ ಆರುತ್ತಿತ್ತು. ಬೀಟೆಯ ಹಳೆ ಕುರ್ಚಿ ಹಿಂದಕ್ಕೆ ಸರಿದ ಸಪ್ಪಳ. ಆ ಕೋಣೆಯ ಲೈಟು ಆರಿಸಿ ಡಬಾರನೆ ಅಜ್ಜ ಬಾಗಿಲು ಹಾಕುತ್ತಿದ್ದ. ತಕ್ಷಣ  ಒಳಗಿನ ಹೆಣ್ಣು ಮಕ್ಕಳಿಗೆ ಸಿಗ್ನಲ್. ಒರೆದಿಟ್ಟ ರೊಟ್ಟಿ ಕಾವಲಿಗೆ ಹಾಕಿ ತಾಟು ರೆಡಿ ಮಾಡಿ ಅಂತ. ಇಬ್ಬಿಬ್ಬರು ಸೊಸೆಯರಿದ್ದರೂ ಅಜ್ಜ ಬದುಕಿದ್ದ ಅಷ್ಟೂ ದಿನ ಅವನ ಕಿರಿಕಿರಿಯ ಸೇವೆಗೆ ಅಜ್ಜಿ ತಾನೇ ಹೋಗುತ್ತಿದ್ದಳು. ಅವಳು ಮಗಳ ಮನೆಗೆ ಹೋದಾಗ ಅಜ್ಜ ಸಾಕಿದ ಬೆಕ್ಕಿನ ಹಾಗಿರುತ್ತಿದ್ದ. ಸೊಸೆಯರಿಗೆ ಚೂರೂ ಕಿರಿಕಿರಿ ಮಾಡುತ್ತಿರಲಿಲ್ಲ. ಅದಕ್ಕೆ ದೊಡ್ಡ ಸೊಸೆ ಅವನ ಕಾಟ ಹೆಚ್ಚಾದಾಗ ಅತ್ತೆಗೆ ನೀವು ಮಗಳ ಮನೆಗೆ ಹೋಗಿದ್ದು ಬನ್ನಿ ಎಂದು ಸಲಹೆ ಕೊಡುತ್ತಿದ್ದಳು. ಅಜ್ಜಿ ಅಜ್ಜನಿಗೂ ಉಳಿದ ಜಗತ್ತಿಗೂ ಮಧ್ಯದ ಸ್ಟೆಬಿಲೈಸರ ಇದ್ದ ಹಾಗಿದ್ದಳು. ಅವನ ಕೋಪ ತಾಪ ತಿಕ್ಕಲುಗಳನ್ನೆಲ್ಲ ತಾನೇ ಪಡೆದು ತಡೆದು ಬಿಡುತ್ತಿದ್ದಳು. ಉಳಿದವರು ಸುರಕ್ಷಿತರಾಗುತ್ತಿದ್ದರು. ಹಾಗಂತ ಗಂಡ ಹೇಗಿದ್ದರೂ ಏನು ಮಾಡಿದರೂ ಸರಿ ಎನ್ನುವ ಸತಿ ಶಿರೋಮಣಿ ಖಂಡಿತ ಆಗಿರಲಿಲ್ಲ. ಅವನ ಲೋಪದೋಷಗಳ ಸಂಪೂರ್ಣ ಅರಿವಿತ್ತು. ಯಾರ ಜೊತೆಗಾದರೂ ಅಜ್ಜ ಜಗಳಾಡಿದರೆ ಅಥವಾ ಅಕ್ಸಿಡೆಂಟ ಮಾಡಿಕೊಂಡು ಬಂದರೆ ಇವನದೇ ತಪ್ಪಿರುತ್ತದೆಯೆಂದು ಅಂದಾಜು ಮಾಡಿ ಹೇಳುತ್ತಿದ್ದಳು. ಎಂಭತ್ತರ ಇಳಿ ವಯಸ್ಸಿನಲ್ಲೂ ತಲೆಗೆ ರುಮಾಲು ಸುತ್ತಿಕೊಂಡು ಯಮವೇಗದಲ್ಲಿ ಬೈಕು ಹತ್ತಿ ಹೊಂಟು ಬಿಡುತ್ತಿದ್ದ. ಡುಗುಡುಗು ಶಬ್ದ ಕೇಳಿ ಕಿಡಕಿಯಲ್ಲಿಣುಕಿ ಬೈಕು ಹೋದ ದಿಕ್ಕು ನೊಡಿ ಅವನೆಲ್ಲಿಗೆ ಹೋಗಿರಬಹುದು ಅಂತ ಅಂದಾಜು ಮಾಡಬೇಕಿತ್ತೇ ಹೊರತು ಹೇಳಿಕೇಳಿ ಹೋಗುವ ಕ್ರಮ ಇರಲೇ ಇಲ್ಲ. ಆಸುಪಾಸಿನ ಜನ ಅವನ ಬೈಕಿಗೆ ದಾರಿ ಕೊಟ್ಟು ತಾವಾಗೇ ಸರಿಯುತ್ತಿದ್ದರು. ಗೌರವದಿಂದಲ್ಲ ಪ್ರಾಣದಾಸೆಗೆ. ಸಣ್ಣಪುಟ್ಟ ಕೋಳಿ ದನ ತಾಗುವುದು ಎಲ್ಲಾದರೂ ಡಿಕ್ಕಿಯಾಗುವುದು ಮಾಮೂಲೇ ಆಗಿತ್ತು. ಯಾರೂ ಅವನ ಹಿಂದೆ ಕೂರಬಾರದೆಂದು ಹೆಂಗಸರು ಮಕ್ಕಳಿಗೆ ತಾಕೀತು ಮಾಡಲಾಗಿತ್ತು. (ಈ ರೀತಿಯ ಆತ್ಮರಕ್ಷಣೆಯ ಕ್ರಮಗಳ ವಕ್ತಾರ ಅವನ ಅಳಿಯನಾಗಿದ್ದ)

              ಕಾಡಿನ ನಡುವೆ ಪೇಟೆಯ ಸವಲತ್ತುಗಳಿಂದ ದೂರವಾಗಿ ಬದುಕುತ್ತಿದ್ದ ಕಾರಣಕ್ಕೋ ಅಥವಾ ಯಾವುದಕ್ಕೂ ಕಾಯದ ಜೀ ಎನ್ನದ ಸ್ವಭಾವಕ್ಕೋ ಅಜ್ಜ ಸ್ವಾವಲಂಬಿಯಾಗಿದ್ದ. ಹಳೆ ಟಯರಿನಿಂದ ಚಪ್ಪಲಿ ಮಾಡಿಕೊಳ್ಳುತ್ತಿದ್ದ. ಹರಿದ ಕಂಬಳಿ ಕತ್ತರಿಸಿ, ಹೊಲಿದು ಕೋಟು ಟೊಪ್ಪಿ ಮಾಡಿಕೊಳ್ಳುತ್ತಿದ್ದ. ಬೈಕು, ಪಂಪುಸೆಟ್ಟು, ಟ್ರಾನ್ಸಫರ‍್ಮರು ಎಲ್ಲದರ ರಿಪೇರಿ ಅತಿ ಚೆನ್ನಾಗಿ ಮಾಡುತ್ತಿದ್ದ. ಅವನ ಗಂಡು ಮಕ್ಕಳು ಈ ಎಲ್ಲಾ ವಿದ್ಯೆಗಳಲ್ಲಿ ಪಾರಂಗತರೇ. ಆದರೆ ಎಲ್ಲರಿಂದಲೂ ಸಾಮೂಹಿಕ ನಿಂದನೆಗೆ ಗುರಿಯಾದ ಅಜ್ಜನ ವಿದ್ಯೆಯೆಂದರೆ ಮೊಮ್ಮಕ್ಕಳ ಕೂದಲು ಕತ್ತರಿಸುವ ಹಜಾಮತಿ. ಅವನಿಗೆ ಗಂಡು ಹುಡುಗರು ಉದ್ದ ಕೂದಲು ಬಿಟ್ಟುಕೊಂಡು ತಿರುಗಿದರೆ ಕಂಡಾಪಟ್ಟೆ ಸಿಟ್ಟು ಬರುತ್ತಿತ್ತು. ಬಾರಾ ಎಂದು ಕರೆದು ಕೂರಿಸಿಕೊಂಡು ಕೈಗೆ ಸಿಕ್ಕಿದ ಕತ್ತರಿಯಿಂದ ನಿರ್ದಯವಾಗಿ ಕತ್ತರಿಸುತ್ತಿದ್ದ. ಕತ್ತರಿಯ ಮೊಂಡುತನ, ಅಜ್ಜನ ನೇತ್ರಗಳ ಮಂದತನ ಎರಡೂ ಕೂಡಿ ಭಯಂಕರವಾದ ಆಕಾರದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಅಲ್ಲಲ್ಲಿ ವಿರಳ ಭೂಮಿಯಾಗಿ ಮೊಮ್ಮಕ್ಕಳ ತಲೆ ತಯಾರಾಗುತ್ತಿತ್ತು. ಅಜ್ಜನ ಗಂಟಲಿಗೆ ಹೆದರುವ ಆ ಹುಡುಗರು ಉಕ್ಕಿ ಬರುವ ಅಳುವನ್ನು ಭಯಕ್ಕೆ ವರ್ಗಾಯಿಸಿ ನಡುಗುತ್ತ ಕೂರುತ್ತಿದ್ದರು. ಮತ್ತೆ ಅವರನ್ನು ಪಾರು ಮಾಡಲು ಅಜ್ಜಿಯೇ ಓಡಿ ಬರಬೇಕಿತ್ತು. ಕಡೆಗೆ ಅವಳೇ ಮೊಮ್ಮಕ್ಕಳಿಗೆ ಎಂದೆಂದೂ ಅಜ್ಜ ಹಜಾಮತಿಗೆ ಕರೆದರೆ ಹೋಗಬಾರದೆಂದು ತಾಕೀತು ಮಾಡಬೇಕಾಯಿತು. ಕಡೆಗಾಲದಲ್ಲಿ ಅಜ್ಜನಿಗೆ ಕ್ಯಾನ್ಸರ್ ಆದಾಗ ಅವನ ತಿಕ್ಕಲು ನಿರ್ಧಾರಗಳನ್ನು ಸಹಿಸಿಕೊಂಡು ಕ್ಯಾನ್ಸರ್ ಆಸ್ಪತ್ರೆ ರೇಡಿಯೇಷನ್ ಅಂತೆಲ್ಲಾ ಅಲೆಯುವಾಗ ಅವಳಿಗೆ ತನ್ನ ರೋಗದ ಬಗ್ಗೆ ಮರೆತೇ ಹೋಗಿತ್ತು. ಮುರುಟಿದ ಬೆರಳುಗಳ ಕಾಲನ್ನು ಅಡ್ಡಡ್ಡ ಹಾಕುತ್ತ ಏದುಸಿರು ಬಿಡುತ್ತ ಆಸ್ಪತ್ರೆಯ ಮೆಟ್ಟಿಲನ್ನು ಗೊಣಗದೇ ಹತ್ತಿಳಿದಳು.

               ಅನಾಮತ್ತಾಗಿ ಅರವತ್ತು ವರ್ಷ ಸಂಸಾರ ಮಾಡಿದ ಅಜ್ಜನ ಜೊತೆಗೆ ಅವನೆಲ್ಲ ಗುಣಸ್ವಭಾವಗಳೊಂದಿಗೆ ಏಗುವುದೇ ಬದುಕಾಗಿಬಿಟ್ಟವಳಿಗೆ ಅವನ ಇಲ್ಲದಿರುವಿಕೆಯಿಂದ ಉಂಟಾದ ಶೂನ್ಯ ತುಂಬಿಕೊಳ್ಳುವುದು ಕಷ್ಟವಾಗಿರಬೇಕು. ಅಜ್ಜನ ಸೇವೆ ಅವಳ ದಿನಚರಿಯ ಎಷ್ಟು ದೊಡ್ಡ ಭಾಗವಾಗಿತ್ತೆಂದು ಗೊತ್ತಾಗುವಾಗ ಅದರ ಖಾಲಿತನ ಭರಿಸುವುದು ಸಮಸ್ಯೆಯಾಗಿಬಿಟ್ಟಿತು. ನಿಧಾನಕ್ಕೆ ಅಸ್ತಮಾ ನೆನಪಾಯಿತು. ದುಡಿಯಲಿಕ್ಕೇನು ಉಳಿದಿಲ್ಲವೆಂಬಂತೆ ಅಶಕ್ತತೆ ಆವರಿಸಿತು. ಸ್ಟೆರಾಯ್ಡಿನ ಧಾಳಿಗೆ ಶರಣಾದ ಎಲುಬುಗಳು ನೋಯಲು ಆರಂಭಿಸಿದವು. ಎಲ್ಲಕ್ಕಿಂತ ಹೆಚ್ಚಾಗಿ ಮರೆವಿನ ರೋಗ ಅಲ್ಜೆಮರ್ ಬಂದುಬಿಟ್ಟಿತು. ಮೊದಮೊದಲು ಘಟನೆ. ಹೆಸರು, ಮಾತಾಡಿದ್ದು ಮರೆಯಲಾರಂಭಿಸಿದ್ದು ನಿಧಾನಕ್ಕೆ ಹೊತ್ತು-ಊರು-ಇರುವು ಎಲ್ಲಾ ಕಲಸು ಮೇಲೋಗರವಾಗತೊಡಗಿತು. ಅವಳ ನಿಶ್ಶಕ್ತಿ ಹೆಚ್ಚಿಗೆ ಓಡಾಡಕೊಡದೇ ಮಲಗಿಸಿತ್ತು. ಆದರೆ ಅಲ್ಜೆಮೆರ ಮಲಗಕೊಡದೆ ಅಸಂಬದ್ದ ನೆನಪು ಬರಿಸಿ ಎಬ್ಬಿಸುತ್ತಿತ್ತು. ನಡುರಾತ್ರಿ ಎದ್ದು ತೂರಾಡುತ್ತಲೇ ಹೋಗಿ ಅನ್ನಕ್ಕಿಡುತ್ತಿದ್ದಳು. ಸೊಸೆ ಎದ್ದು ಬಂದು ಯಾಕೆ ಎಂದರೆ ಮದ್ಯಾನ್ಹ ಎಲ್ಲರೂ ಊಟಕ್ಕೆ ಬರುವ ಹೊತ್ತು ಇನ್ನೂ ಅನ್ನ ಆಗಿಲ್ಲ ಏನು ಗತಿ ಎಂದು ಬೈಯುತ್ತಿದ್ದಳು. ರಾತ್ರಿಯ ಯಾವುದೋ ಜಾವ ಎದ್ದು ಚಪ್ಪಲಿ ಮೆಟ್ಟಿಕೊಂಡು ಹೊರಡುತ್ತಿದ್ದಳು. ಮಗ ಸೊಸೆಗೆ ಅವಳನ್ನು ಅಪಾಯಗಳಿಂದ ಕಾಯುವುದೆ ದೊಡ್ಡ ಕೆಲಸವಾಗಿತ್ತು. ಪ್ರತಿ ಹತ್ತು ನಿಮಿಷಕ್ಕೆ ಮಗ-ಮೊಮ್ಮಕ್ಕಳನ್ನು ಕರೆಯುವುದು ಯಾಕೆ ಇನ್ನೂ ಊಟ ಮಾಡಿಲ್ಲ ಎಂದು ಗದರುವುದು ನಡೆದಿತ್ತು. ಬದುಕಿಡೀ ಅಡಿಗೆ ಮಾಡಿ, ಬಡಿಸಿ, ಊಟ ಹಾಕಿ ಹೀಗೆ ಮಳ್ಳು ಹಿಡಿದಿರಬೇಕೆಂದುಕೊಡೆವು. ಕೊನೆಕೊನೆಗೆ ತಾನು ಇರುವುದು ತನ್ನ ಮನೆಯಲ್ಲ ತವರುಮನೆ. ತನ್ನನ್ನು ಮನೆಗೆ ಕರೆದೊಯ್ಯಿರಿ ಎಂದು ಹಠ ಹಿಡಿದಳು. ಯಾರು ಏನು ಹೇಳಿದರೂ ಕೇಳಲಿಲ್ಲ. ಮಗನನ್ನು ಕರೆದು ಹೀಗೆ ಬೇರೆಯವರ ಮನೆಯಲ್ಲಿ ಬಿಡಲು ನಾಚಿಕೆಯಾಗುವುದಿಲ್ಲವೇ ಎಂದು ಚೆನ್ನಾಗಿ ಬೈದಳು. ಅವಳಿಗೆ ಸಮಾಧಾನವಾಗಲೆಂದು ಅವಳ ಬ್ಯಾಗು ತೆಗೆದುಕೊಂಡು ಕಾರಿನಲ್ಲಿ ಕೂಡಿಸಿಕೊಂಡು ಜೋಗದ ತನಕ ಹೋಗಿ ತೋರಿಸಿ ಮನೆಗೆ ಕರೆತಂದರು. ಹತ್ತು ನಿಮಿಷ ಖುಷಿ ಪಟ್ಟಳು. ಅಂತೂ ಮನೆಗೆ ಬಂದೆ. ಎಷ್ಟು ದಿನವಾಗಿತ್ತು ಅಂತೆಲ್ಲ ಹೇಳಿ ಕಷಾಯ ಕುಡಿದು ಹತ್ತೇ ನಿಮಿಷ. ಮತ್ತೆ ಶುರು ಮಾಡಿಬಿಟ್ಟಳು. ಸೊಸೆಯನ್ನು ಅಮ್ಮಾ ಎಂದು ಕರೆಯಲಾರಂಬಿಸಿದ್ದಳು. ತನ್ನನ್ನು ಮನೆಗೆ ಕಳಿಸಿ ಎನ್ನುವುದೊಂದೇ ಗಲಾಟೆ.

             ಕಡೆಕಡೆಗೆ ಪೂರಾ ಮಕ್ಕಳ ಹಾಗೆ ಆಗಿದ್ದಳು. ಮಲಗಿದಲ್ಲೇ ಇರುವುದಾಗಿತ್ತು. ಮಾತು ತೀರಾ ಕಡಿಮೆಯಾಗಿತ್ತು.  ನಾವು ಕೂಗಿ ಕೂಗಿ ಹೇಳಿದ್ದಕ್ಕೆ ಪ್ರತಿಕ್ರಿಯಿಸುತ್ತಿದ್ದಳು. ನಮಗೆ ಮೊಮ್ಮಕ್ಕಳಿಗಂತೂ ಅವಳನ್ನು ಹೀಗೆ ಈ ಸ್ಥಿತಿಯಲ್ಲಿ ನೋಡಲು ಬಹಳ ಸಂಕಟವಾಗುತ್ತಿತ್ತು. ನನಗೆ ಎರಡೂ ಬಾಣಂತನ ಮಾಡಿದ್ದು ಅವಳೇ. ಊಟ-ಉಣಿಸು-ಲೇಹ್ಯ-ಕಷಾಯ ಅಂತೆಲ್ಲಾ ಇಡೀ ದಿನ ನನಗೆ- ಶಿಶುವಿಗೆ ಆರೈಕೆ ಮಾಡುತ್ತಲೇ ಇರುತ್ತಿದ್ದಳು. ಎರಡು ಸಲವೂ ನನ್ನ ಹೆರಿಗೆ ರಜೆ ಮುಗಿದು ಕೆಲಸಕ್ಕೆ ಹಾಜರಾಗುವಾಗ ನನ್ನ ಜೊತೆ ಬಂದು ಉಳಿದು ಮಕ್ಕಳನ್ನು ನೋಡಿಕೊಂಡು ಆಸರೆಯಾಗಿದ್ದಳು. ನಮ್ಮ ಇಡೀ ಕುಟುಂಬಕ್ಕೆ ಕಾಹಿಲೆ ಕಸಾಲೆ ಮದುವೆ ಸೀಮಂತ ಎಲ್ಲಕ್ಕೂ ಅವಳೇ ದಿಕ್ಕು. ಆ ಮನೆತನ ಅವಳನ್ನು ಆರೇಳು ದಶಕವೇ ಊದುಬತ್ತಿಯಂತೆ ಸದ್ದಿಲ್ಲದೇ ಗಂಧವಾಗಿ ಘಮವಾಗಿ ಉರಿಸಿತ್ತು. ಈಗ ಶಿಶುವಿನಂತೆ ಮಲಗಿದರೆ ನೋಡಲು ಹೇಗೇಗೋ ಆಗುತ್ತಿತ್ತು. ಅವಳ ಹೆಣ್ಣುಮಕ್ಕಳು ಸೊಸೆಯರು ಸೇರಿ ಅವಳನ್ನು ಸ್ವಚ್ಚ ಮಾಡಲು, ಅವಳ ವಿಸರ್ಜನೆಗಳನ್ನು ತೊಳೆದು ಅವಳನ್ನು ವಾಸನಾರಹಿತವಾಗಿಡಲು ಒದ್ದಾಡುವುದನ್ನು ಕಂಡು ಸೀದಾ ದೇವರೆದುರು ಮೊಳಕಾಲೂರಿ ಬೇಡಿಕೊಂಡೆ. ಅವಳಿಗೊಂದು ಘನವಂತ ಸಾವು ಕೊಡು! ನಾನು ಹುಟ್ಟುವಾಗ ಅವಳ ಮಗಳು ಹೆರಿಗೆ ನೋವು ತಿನ್ನುವಾಗ ಅದೇ ದೇವರ ಮುಂದೆ ನನ್ನ ಸುರಕ್ಷಿತ ಹುಟ್ಟಿಗಾಗಿ ಅವಳು ಮೊಣಕಾಲೂರಿದ್ದಳಂತೆ. ಅವಳು ನನ್ನ ಹುಟ್ಟಿಗಾಗಿ ಬೇಡಿಕೊಂಡಳು. ನಾನು ಅವಳ ಸಾವಿಗಾಗಿ ಬೇಡಿಕೊಂಡೆ. ಅದೆಷ್ಟು ಸರಿಯೋ ತಪ್ಪೋ ತಿಳಿಯಲಿಲ್ಲ. ನಾನು ಮಾತ್ರ ತುಂಬಾ ದೀನವಾಗಿ, ಆಳವಾಗಿ ಬೇಡಿಕೊಂಡೆ.

           ಹುಟ್ಟಿಗೂ ಸಾವಿಗೂ ನಮ್ಮ ಬಳಿ ಇರುವುದು ಅದೊಂದು ಪ್ರಾರ್ಥನೆ ಮಾತ್ರ ಅಲ್ಲವಾ. ಇವತ್ತು ಅಜ್ಜಿಯ ಪುಣ್ಯತಿಥಿ. ಪುಣ್ಯ ಬಿಟ್ಟರೆ ಬೇರೆ ಏನೂ ಇಲ್ಲದ ಅವಳ ಬದುಕಿನ ಕ್ಷಣಗಳನ್ನು ಸ್ಮರಿಸುವುದೇ ನಮಗಿರುವ ದಾರಿ ಮತ್ತು ಖುಷಿ.

**************************

4 thoughts on “ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ

  1. ತುಂಬಾ ಚೆನ್ನಾಗಿದೆ ಮೇಡಂ…
    ಪ್ರತೀ ಸಾಲಿನಲ್ಲೂ ಹೊಸತನ, ಚಂದದ ನಿರೂಪಣೆ.. ಒಮ್ಮೆ ಹೊಸಲೋಕಕ್ಕೆ ಹೋಗಿ ಬಂದ ಹಾಗೆ ಅನಿಸಿತು…

  2. ಕಣ್ಣು ತುಂಬಿ ಬಂತು ಪ್ರಜ್ಞಾ..ಎಂಥ ಅಜ್ಜಿಯೇ ಅವಳು.‌

  3. ಪ್ರಜ್ಞಾ ನಿನ್ನ ಬರವಣಿಗೆ ತುಂಬಾ ಚೆನ್ನಾಗಿತ್ತು ಮತ್ತು ಅಂದಿನ ಹಲವಾರು ಜನರ ಜೀವನ ಶೈಲಿಯನ್ನು ನೆನಪಿಸಿದೆ ಮತ್ತು ಕಣ್ಣೀರು ಬಂತು. ಅಜ್ಜಿಯ ತಾಳ್ಮೆ, ಕರ್ತವ್ಯ ಪ್ರಜ್ಞೆ ಮತ್ತು ಕುಟುಂಬದವರ ಮೇಲಿನ ಪ್ರೀತಿ ಕಲಿಯಬಹುದಾದ ಗುಣ. ಅಂದಿನ ಸಾಧಾರಣ ಎಲ್ಲ ಮಹಿಳೆಯರಲ್ಲೂ ಈ ಗುಣಗಳು ಕಾಣಸಿಗುವ ಅದ್ಭುತ. ಬಸ್ತಿಬೈಲ್ ದೊಡ್ಡಮ್ಮನಿಗೊಂದು ನನ್ನ ನಮನ.

Leave a Reply

Back To Top